ನಾಗಾಲ್ಯಾಂಡ್ ಗಡಿಗೆ ಹೊಂದಿಕೊಂಡಿರುವ ಅಸ್ಸಾಂನ ಜೋರಹಾಟ್ ಜಿಲ್ಲೆಯಲ್ಲಿ ಪೋಹುಕೋಟಿಯಾ ಶ್ಯಾಮ್ ಎನ್ನುವ ಹೆಸರಿನ ತಾಯ್ ತುರುಂಗ್ ಜನರು ವಾಸವಿರುವ ಪುಟ್ಟ ಹಳ್ಳಿಯಿದೆ. ಈ ಊರನ್ನು ಅಧಿಕೃತ ದಾಖಲೆಗಳಲ್ಲಿ ಟಿಪೋಮಿಯಾ ಹಬಿ ಗಾಂವ್ ಎಂದು ಗುರುತಿಸಲಾಗಿದೆ. ಹಳೆಯ ಅಂಕುಡೊಂಕಾದ ಮಣ್ಣಿನ ರಸ್ತೆಗಳು, ಹಚ್ಚ ಹಸಿರಿನ ಸಸ್ಯಸಂಪತ್ತು, ಪುಟ್ಟ ತೋಟಗಳು ಹಾಗೂ ಬಿದಿರಿನ ಹಳೆಯ ಬೇಲಿಗಳಿಂದ ಆವೃತವಾಗಿರುವ ಸಾಂಪ್ರದಾಯಿಕ 'ಸಾಂಗ್ ಘರ್'ಗಳು (ಎತ್ತರದ ಕಂಬಗಳ ಮೇಲೆ ನಿರ್ಮಿಸಿದ ಮನೆಗಳು) ಈ ಊರಿನ ಪ್ರಾಕೃತಿಕ ಸೌಂದರ್ಯವನ್ನು ಹೆಚ್ಚಿಸಿವೆ. ಇದೇ ಊರಿನಲ್ಲಿ 77 ವರ್ಷದ ಹಿರಿಯ ರೈತ ಅನಂತ ತುರುಂಗ್ ವಾಸಿಸುತ್ತಿದ್ದಾರೆ. ಇವರ ಮಾತೃಭಾಷೆ ತಾಯ್ ತುರುಂಗ್. ಅವರೀಗ ಇದೇ ಭಾಷೆಯ ಪದಗಳ ಕಣಜವನ್ನು ಕಟ್ಟುವ ಪ್ರಯತ್ನದಲ್ಲಿದ್ದಾರೆ.
" ಭಾಷೆಯೆನ್ನುವುದು ನೀರಿದ್ದಂತೆ, ಹರಿಯುವ ನದಿಯಂತಹದ್ದು - ಅದು ಸದಾ ಒಂದೇ ರೀತಿಯಲ್ಲಿರಲು ಸಾಧ್ಯವಿಲ್ಲ. ಹಾಗೆಂದು ಅದು ಇದ್ದಕ್ಕಿದ್ದಂತೆ ಬದಲಾಗಿ ಸಾಯಬಾರದು" ಎನ್ನುವುದು ಅವರ ಅಭಿಪ್ರಾಯ. ಇದೇ ನಂಬಿಕೆಯೊಂದಿಗೆ ಮುನ್ನಡೆದ ಈ ಸಣ್ಣ ಹಿಡುವಳಿದಾರ ರೈತ ತಮ್ಮ ಮಾತೃಭಾಷೆಯನ್ನು ಸಂರಕ್ಷಿಸುವ ಸಲುವಾಗಿ ತನ್ನ ಬದುಕಿನ ಐದಕ್ಕೂ ಹೆಚ್ಚು ದಶಕಗಳನ್ನು ಮೀಸಲಿಟ್ಟಿದ್ದಾರೆ. ತನ್ನ ತುರುಂಗ್ ಬುಡಕಟ್ಟಿನ ಬೇರುಗಳನ್ನು ಸಂಶೋಧಿಸುವುದು, ಪದಗಳನ್ನು ಸಂಗ್ರಹಿಸುವುದು, ಅವುಗಳ ವ್ಯುತ್ಪತ್ತಿ ಮತ್ತು ವ್ಯಾಕರಣವನ್ನು ಅರ್ಥಮಾಡಿಕೊಳ್ಳುವುದು ಹಾಗೂ ಸಾಲು ಸಾಲು ವಲಸೆಗಳು ಮತ್ತು ಸಾಂಸ್ಕೃತಿಕ ಸಮ್ಮಿಲನಗಳು ಭಾಷೆಯ ಬದಲಾಗುತ್ತಿರುವ ರೂಪ ಹಾಗೂ ಬಳಕೆಯ ಮೇಲೆ ಬೀರಿರುವ ಪ್ರಭಾವವನ್ನು ಆಳವಾಗಿ ಅಧ್ಯಯನ ಮಾಡುವುದು; ಮತ್ತು ಇವೆಲ್ಲದರ ಕುರಿತು ಪುಸ್ತಕಗಳು, ನಿಯತಕಾಲಿಕೆಗಳು ಹಾಗೂ ಪತ್ರಿಕೆಗಳಲ್ಲಿ ಬರೆಯುವುದು – ಇವೇ ಅವರ ಐದು ದಶಕಗಳ ಸಾಧನೆಯಾಗಿದೆ.
ಅನಂತ ತುರುಂಗ್ ಅವರ ಬಳಿ ಕೇವಲ 5 ಬಿಘಾ (1.6 ಎಕರೆ) ಭೂಮಿಯಿದ್ದು, ಅದರಿಂದ ಬರುವ ಅಲ್ಪ ಆದಾಯದಲ್ಲೇ ಅವರು ಈ ಕೆಲಸಗಳಿಗೆ ಆಗುವ ಖರ್ಚನ್ನು ಭರಿಸುತ್ತಿದ್ದಾರೆ. ಒಂದು ಖಾಸಗಿ ಅನುದಾನರಹಿತ ಶಾಲೆಯಲ್ಲಿ ಅನಧಿಕೃತ ಶಿಕ್ಷಕರಾಗಿ ಮತ್ತು ಆಡಳಿತಾಧಿಕಾರಿಯಾಗಿ ಅವರು ಸಲ್ಲಿಸಿದ 40 ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಸೇವೆಗೆ ಒಂದು ರೂಪಾಯಿ ಕೂಡಾ ಸಂಬಳ ಸಿಕ್ಕಿಲ್ಲ. ಕೊನೆಗೂ ಸರ್ಕಾರದ ಅನುದಾನ ಮಂಜೂರಾಗಿ, ಅವರು ಗುಮಾಸ್ತರ ಸಂಬಳ ಪಡೆಯಲು ಕಾನೂನುಬದ್ಧವಾಗಿ ಅರ್ಹರಾಗುವ ವೇಳೆಗೆ, ತುರುಂಗ್ ನಿವೃತ್ತಿ ಹೊಂದಲು ಮೂರು ತಿಂಗಳಷ್ಟೇ ಬಾಕಿ ಉಳಿದಿತ್ತು. ಆದರೆ ಇಂತಹ ಆರ್ಥಿಕ ಅಡಚಣೆಗಳಿಗೆ ಅವರ ಭಾಷೆ ಉಳಿಸುವ ಉತ್ಸಾಹವನ್ನು ಕುಂದುಗೊಳಿಸಲು ಸಾಧ್ಯವಾಗಲಿಲ್ಲ.










