“ಕೆಹರ್ ಬರ್ಪಾ ಥಾ. ಬಹುತ್ ಲಾಶ್ ಜಲಾಯಾ ಥಾ. ಗಿನ್ತಿ ಕೆ ಬಾಹರ್ ಹೋ ಗಯಾ ಥಾ [ಸರ್ವನಾಶ ಅದು, ಬರೀ ಗಜಿಬಿಜಿ. ಲೆಕ್ಕವಿಲ್ಲದಷ್ಟು ಹೆಣಗಳನ್ನು ಸುಟ್ಟಿದ್ದೆವು,]” ಎಂದು ಟೈಮ್ ಪಾಸ್ ಎಂಬ ವಿಚಿತ್ರ ಹೆಸರಿನ ವ್ಯಕ್ತಿ ನೆನಪಿಸಿಕೊಂಡರು.
ಕೋವಿಡ್-19 ಗಂಗಾ ನದಿಯ ದಡದಲ್ಲಿರುವ ಪಾಟ್ನಾದ ಅತ್ಯಂತ ಹಳೆಯ ಚಿತಾಗಾರ ಬಾನ್ಸ್ ಘಾಟ್ನಲ್ಲಿ ತನ್ನ ಮರಣಮೃದಂಗ ಬಾರಿಸಿ ಐದು ವರ್ಷಗಳು ಕಳೆದಿವೆ. 21 ವರ್ಷ ಪ್ರಾಯದ ಟೈಮ್ ಪಾಸ್ ಮತ್ತೆ ಯಾರಿಗೂ ಬೇಡವಾಗಿ ತಮ್ಮ ಹಳೆಯ ಬದುಕಿಗೆ ಮರಳಿದ್ದರು. ಮಹಾಮಾರಿಯ ಸಮಯದಲ್ಲಿ ಮಾತ್ರ ಅವರು ಕೆಲಕಾಲ ಎಲ್ಲರಿಗೂ ಬೇಕಾಗಿದ್ದರು. ಈಗ ಸಿಟಿಯಲ್ಲಿ ಅವರನ್ನು ಯಾರೂ ಗುರುತಿಸುತ್ತಿಲ್ಲ, ಕೆಲಸವಿಲ್ಲದೆ ದಿವಾಳಿಯಾಗಿ ಬೀದಿ ಬೀದಿ ಅಲೆದಾಡುತ್ತಿದ್ದಾರೆ.
ಸರಿಯಾದ ಉದ್ಯೋಗವಿಲ್ಲದೆ, ಆದಾಯವಿಲ್ಲದೆ ಅಲೆದಾಡುತ್ತಿರುವ ಇವರು, ಈಗ ತನ್ನ ಹೆಸರಿಗೆ ತಕ್ಕಂತೆ — “ಟೈಮ್ ಪಾಸ್” (ಕಾಲಹರಣ) ಮಾಡಿ ಬದುಕುತ್ತಿದ್ದಾರೆ.
ಈ ಹೆಸರು ಅವರಿಗೆ ಈಗಿನ ದುಸ್ಥಿತಿಯಿಂದಾಗಿ ಬಂದಿದ್ದಲ್ಲ. ಅದಕ್ಕೆ ಕಾರಣ ಅವರ ಮಾವ ಜುಗ್ನು ರಾಮ್. ಟೈಮ್ ಪಾಸ್ ಅವರು ಹುಟ್ಟಿದ ಸಮಯದಲ್ಲಿ ಜುಗ್ನು ರಾಮ್ ಆಗಷ್ಟೇ ಬಿಡುಗಡೆಯಾಗಿದ್ದ ಸನ್ನಿ ಡಿಯೋಲ್ ಅವರ ಒಂದು ಸಿನಿಮಾ ನೋಡಿ ಮನೆಗೆ ಬಂದಿದ್ದರು. ಆಗ ಮನೆಯಲ್ಲಿದ್ದ ಹೆಂಗಸರು ಅವರನ್ನು ನೋಡಿ, ಅಬ್ಬೆಪಾರಿಯಂತೆ ಸುಮ್ಮನೆ ಕಾಲ ಕಳೆಯುತ್ತಿದ್ದಾನೆ (ಟೈಮ್ ಪಾಸ್ ಮಾಡುತ್ತಿದ್ದಾನೆ) ಎಂದು ತಮಾಷೆ ಮಾಡಿದರು. ಕೊನೆಗೆ ತಮಗೆ ಮಾಡಿದ ಆ ವಿಡಂಬನೆಯನ್ನೇ ಜುಗ್ನು ರಾಮ್ ನವಜಾತ ಮಗುವಿಗೆ ಹೆಸರಾಗಿ ಇಟ್ಟರು.
“ಮೆಟ್ರೋದಲ್ಲಿ ಕಕ್ಕುಸು ತೊಳೆಯುವುದು, ಚರಂಡಿ ಕ್ಲೀನ್ ಮಾಡುವುದು, ಸತ್ತು ಕೊಳೆತು ಬಿದ್ದಿರುವ ಹಂದಿಗಳನ್ನು ಎತ್ತುವುದು, ಅನಾಥ ಶವಗಳ ಅಂತ್ಯಸಂಸ್ಕಾರ ಮಾಡುವುದು, ಕಸ ಎತ್ತುವುದು, ಹೀಗೆ ಈಗ ನಾನು ಸಿಕ್ಕ ಸಿಕ್ಕ ಕೆಲಸವೆಲ್ಲಾ ಮಾಡುತ್ತೇನೆ,” ಎಂದು ಟೈಮ್ ಪಾಸ್ ಹೇಳಿದರು.
ಕೊಳೆತು ಬಿದ್ದಿರುವ ಅನಾಥ ಹೆಣಗಳನ್ನು ತೆರವು ಮಾಡಬೇಕಾದಾಗೆಲ್ಲಾ ನಗರಕ್ಕೆ ಟೈಮ್ ಪಾಸ್ ಅವರಂತವರ ನೆನಪಾಗುತ್ತದೆ. ಎಲ್ಲೋ ಬಿದ್ದಿರುವ ಹೆಣದ ದುರ್ವಾಸನೆ ಗಾಳಿಯ ಮೂಲಕ ಸಿಟಿಯ ತುಂಬಾ ಹಬ್ಬಿದಾಗ ಟೈಮ್ ಪಾಸ್ ಅವರನ್ನು ಕರೆಸಲಾಗುತ್ತದೆ. ರೈಲ್ವೆ ಹಳಿಗಳ ಮೇಲೆ ಛಿದ್ರಗೊಂಡ ಶವ ಬಿದ್ದಿದ್ದರೆ ಟೈಮ್ ಪಾಸ್ ಅವರನ್ನು ಕರೆಯುತ್ತಾರೆ. ಸಿಟಿಯ ಯಾವುದೋ ಮೂಲೆಯಲ್ಲಿ ಅನಾಥ ಶವ ಬಿದ್ದಿದ್ದರೆ, ಅವರನ್ನು ಕರೆದುಕೊಂಡು ಹೋಗಲು ಪೊಲೀಸ್ ಜೀಪ್ ಬರುತ್ತದೆ, ಅವರು ಮರಣೋತ್ತರ ಪರೀಕ್ಷೆ ಕೊಠಡಿಯ ಹೊರಗೆ ಕಾಯುತ್ತಿರುತ್ತಾರೆ.
ಆ ಕೆಲಸಗಳನ್ನು ಅವರು ಚೆನ್ನಾಗಿ ಮಾಡುತ್ತಾರೆ ಎಂಬ ಕಾರಣಕ್ಕೆ ಅವರನ್ನು ಕರೆಸುತ್ತಿಲ್ಲ. ಬದಲಾಗಿ, ಅವರು ಡೋಮ್ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಕರೆಸಿ ಆ ಕೆಲಸಗಳನ್ನು ಮಾಡಿಸುತ್ತಾರೆ. ಡೋಮ್ಗಳು ಮಹಾದಲಿತರು, ಇವರದ್ದು ಬಿಹಾರದ ಅತ್ಯಂತ ಹಿಂದುಳಿದ ಸಾಮಾಜಿಕ ಸಮುದಾಯಗಳಲ್ಲಿ ಒಂದು. 2023ರ ಇತ್ತೀಚಿನ ಜಾತಿ ಸಮೀಕ್ಷೆಯ ಪ್ರಕಾರ, ಅವರ ಜನಸಂಖ್ಯೆ 2,63,512 ಆಗಿದ್ದು, ಬಿಹಾರದ ಒಟ್ಟು 13.1 ಕೋಟಿ ಜನಸಂಖ್ಯೆಯಲ್ಲಿ ಅವರು ಕೇವಲ ಶೇಕಡಾ 0.20 ರಷ್ಟಿದ್ದಾರೆ.
ಹಿಂದೂ ಧರ್ಮದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಅತ್ಯಂತ ಕೆಳಗೆ ತಳ್ಳಲ್ಪಟ್ಟವರು ಡೋಮ್ ಜನರು. ಹೆಣ ಎತ್ತುವುದು, ಸಪಾಯಿ ಕೆಲಸ ಮೊದಲಾದ ಪ್ರಬಲ ಜಾತಿಗಳು ಇವರ ಮೇಲೆ ಹೇರಿದ ವೃತ್ತಿಯಲ್ಲೇ ಇಂದಿಗೂ ನರಳುತ್ತಿದ್ದಾರೆ.

















