ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಹೊಲಗಳಲ್ಲಿನ ಮೆಣಸಿನಕಾಯಿಯ ಕೊಯ್ಲು, ಗಡಿ ರಾಜ್ಯಗಳಾದ ಛತ್ತೀಸ್ಗಢ್ ಮತ್ತು ಒಡಿಶಾಗಳ ಅನೇಕ ಯುವ ಕಾರ್ಮಿಕರನ್ನು ಆಕರ್ಷಿಸುತ್ತದೆ. ಅವರು ಇಲ್ಲಿಗೆ ಕೂಲಿಗೆ ಬದಲಾಗಿ, ಇಡೀ ವರ್ಷಕ್ಕೆಂದು ಮೆಣಸಿನಕಾಯಿಗಳನ್ನು ಮನೆಗೆ ಒಯ್ಯುವ ಕಾರಣಕ್ಕಾಗಿ ಬರುತ್ತಾರೆ. ಖಾರದಿಂದ ಕೂಡಿದ ಮೆಣಸಿನಕಾಯಿಗಳನ್ನು ಶೇಖರಿಸುವ ಈ ಖಯಾಲಿಯು ಎಷ್ಟರಮಟ್ಟಿಗಿದೆಯೆಂದರೆ, ಮೆಣಸಿನಕಾಯಿಗಳನ್ನು ಕಟಾವುಮಾಡುವ ಕಾರ್ಮಿಕರ ಬೃಹತ್ ಪಡೆಯನ್ನು ಸೇರಲು ಕೆಲವು ಹುಡುಗ ಹುಡುಗಿಯರು ಬಹುಶಃ ಶಾಲೆಯನ್ನು ಸಹ ತಪ್ಪಿಸಿಕೊಳ್ಳುತ್ತಾರೆ. ದೈನಿಕ ಖಾದ್ಯವೆನಿಸಿದ ಇದನ್ನು ಸಂಗ್ರಹಿಸಿ ಮನೆಗೆ ತರುಲು ಅವರಿಗೆ ವರ್ಷದಲ್ಲಿ ದೊರೆಯುವುದು ಇದೊಂದೇ ಅವಕಾಶ.
ಇದನ್ನು ಮಕ್ಕಳು ವಯಸ್ಕರಿಗಿಂತ ಬಹಳ ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ. ಅವರಿಗಿದು ದೈನಂದಿನ ಖಾದ್ಯ. ಆದರೆ ಮುಂಚೂಣಿಯಲ್ಲಿರುವವರು ಅವರೇ. ಇಲ್ಲಿನ ಕಾರ್ಮಿಕರಲ್ಲಿ ಕನಿಷ್ಠ ಅರ್ಧದಷ್ಟು ಮಕ್ಕಳೇ ಕಾಣಸಿಗುತ್ತಾರೆ. ಅವರು ಇಡೀ ವರ್ಷದ ಪೂರೈಕೆಯನ್ನು ಸಂಗ್ರಹಿಸುತ್ತಾರೆ. ಮುಂದಿನ ಕೊಯ್ಲಿನವರೆಗೆ ಉಳಿಯುವಂತೆ ಅಮೂಲ್ಯವೆನಿಸಿದ ಈ ಮೆಣಸಿನಕಾಯಿಗಳ “ಸಂಪಾದನೆಯನ್ನು” ಅವರು ನಿಭಾಯಿಸುತ್ತಾರೆ. 120 ರೂ.ಗಳ ದಿನಗೂಲಿಯನ್ನು ಇವರು ಹಣದ ಬದಲಿಗೆ ಅಷ್ಟೇ ಮೌಲ್ಯದ ಮೆಣಸಿನಕಾಯಿಯ ರೂಪದಲ್ಲಿ ಪಡೆಯಲು ಬಯಸುತ್ತಾರೆ. ನಿರ್ವಹಿಸಿದ ಕೆಲಸವನ್ನು ಅವಲಂಬಿಸಿ, ಕೆಲವು ಪರಿವಾರಗಳಿಗೆ ಒಟ್ಟಾರೆಯಾಗಿ ಅರ್ಧ ಅಥವಾ ಒಂದು ಕ್ವಿಂಟಲ್ನಷ್ಟು ಮೆಣಸಿನಕಾಯಿಗಳು ದೊರೆಯಬಹುದು. ಒಂದು ಕೆ.ಜಿ.ಗೆ ಸುಮಾರು 100 ರೂ.ಗಳಂತೆ ಒಂದು ಕ್ವಿಂಟಲ್ಗೆ 10,000 ರೂ.ಗಳಾಗುತ್ತದೆ.
ಈ ಗಳಿಕೆಯು ಸಮೃದ್ಧವಷ್ಟೇ ಅಲ್ಲದೆ, ಪರಿವಾರಗಳಿಗೆ ಮಿತವ್ಯಯಕಾರಿಯೂ ಹೌದು. ಒಂದು ಪರಿವಾರವು ವರ್ಷಕ್ಕೆ 12-20 ಕಿಲೋ ಮೆಣಸಿಕಾಯಿಗಳನ್ನು ಬಳಸಬಹುದು. ಉಳಿದುದನ್ನು ಮಾರುಕಟ್ಟೆಯಲ್ಲಿ ಮಾರಾಟಮಾಡಿ ಹೆಚ್ಚುವರಿ ಆದಾಯವನ್ನು ಗಳಿಸಬಹುದು. ಮನೆಯಲ್ಲಿ ವರ್ಷಪೂರ್ತಿ ಉತ್ತಮ ಗುಣಮಟ್ಟದ ತಾಜಾ ಮೆಣಸಿನಕಾಯಿಗಳ ಸಂಗ್ರಹವಿರುತ್ತದೆ.
ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಗುಟುಮುಡ ಹಳ್ಳಿಯ ಉಮಾಶಂಕರ್ ಪೊಡಿಯಮಿ ಹೀಗೆನ್ನುತ್ತಾರೆ: “ನಮ್ಮ ಹಳ್ಳಿಯ 20 ಜನರಿದ್ದು, ಇಲ್ಲಿ ನಾವು ಮೂರು ವಾರಗಳವರೆಗೆ ನೆಲೆಸುತ್ತೇವೆ. ಗುಂಪಿನ ಪ್ರತಿಯೊಬ್ಬರೂ, ಹಣದ ಬದಲಿಗೆ ಮೆಣಸಿನಕಾಯಿಗಾಗಿ ಕೆಲಸಮಾಡಲು ಬಯಸುತ್ತಾರೆ.”





