ಹೆಚ್ಚು ಬೆಳಕಿಲ್ಲದ ತಣ್ಣಗಿನ ಕೋಣೆಯಲ್ಲಿ ನಾನು ಒಬ್ಬ ಸಣ್ಣ ವಯಸ್ಸಿನ ಸಪೂರ ಹುಡುಗನ ಪಕ್ಕದಲ್ಲಿ ಕುಳಿತೆ. ಆ ಕೋಣೆಯ ತುಂಬಾ ಬಟ್ಟೆಯ ನೂಲಿನ ಎಳೆಗಳಿಂದ ಬರುವ ಒಂದು ರೀತಿಯ ವಾಸನೆ ಹರಡಿತ್ತು. ಆ ಹುಡುಗ ಪೂರ್ತಿಯಾಗಿ ತನ್ನ ಕೆಲಸದೊಳಗೆ ಮುಳುಗಿ ಹೋಗಿದ್ದ. ಅವನು ಬಂಗಾರದ ಬಣ್ಣವನ್ನು ಹೊಂದಿದ್ದ ಜರಿ ದಾರದಿಂದ ಬಟ್ಟೆಯ ಮೇಲೆ ಹಾರುತ್ತಿರುವ ಹಕ್ಕಿಗಳ ಮತ್ತು ಗದ್ದೆಗಳಲ್ಲಿ ನಲಿಯುತ್ತಿರುವ ಬೆಳೆಗಳ ಅತ್ಯಂತ ಸೂಕ್ಷ್ಮವಾದ ವಿನ್ಯಾಸಗಳನ್ನು ಮೂಡಿಸುತ್ತಿದ್ದ. ಮರದ ಚೌಕಟ್ಟಿನಲ್ಲಿ ಸೀರೆಯೊಂದನ್ನು ಬಿಗಿದು ಕಟ್ಟಲಾಗಿತ್ತು, ಹುಡುಗ ಕೈಯಲ್ಲಿ ಅತ್ಯಂತ ಹರಿತವಾದ ಸಣ್ಣ ಸೂಜಿ ಹಿಡಿದು ಒಂದೊಂದಾಗಿ ಮಣಿ, ಚಮಕಿ ಹಾಗೂ ಕೆಲವು ಬೆಲೆಬಾಳುವ ಹರಳುಗಳನ್ನು ಅದಕ್ಕೆ ಪೋಣಿಸುತ್ತಿದ್ದ. ಕೆಲಸದಲ್ಲಿನ ಅವನ ತನ್ಮಯತೆ ಮತ್ತು ನೈಪುಣ್ಯ ಯಾರೂ ಒಂದು ಕ್ಷಣ ನಿಂತು ನೋಡುವಂತಿತ್ತು. ಆದರೆ ಅವರ ಉಗುರುಗಳ ಸಂಧಿಯಲ್ಲಿ ಹಿಂದಿನ ದಿನದ ಕೊಳೆ ತುಂಬಿಕೊಂಡಿತ್ತು.
ಅಬ್ಬಾಸ್ ಕೂಡ ಆ ಕೋಣೆಯಲ್ಲಿ ಬಂಧಿಯಾಗಿದ್ದ ಉಳಿದ ಮಕ್ಕಳಂತೆಯೇ ಕಾಣಿಸುತ್ತಿದ್ದ. ಅಗಲವಾದ, ಕಳೆಗುಂದಿದ ಕಣ್ಣುಗಳು ಮತ್ತು ಉದ್ದನೆಯ, ಚುರುಕಾದ ಬೆರಳುಗಳು.. ಆ ಬೆರಳುಗಳ ಕುರಿತು ಕಾರ್ಖಾನೆಯ ಮಾಲೀಕನಿಗೆ ಹೆಮ್ಮೆ, ಜರಿ ಸೀರೆಗಳ ಮೇಲೆ ಇಷ್ಟೊಂದು ಸೂಕ್ಷ್ಮವಾಗಿ ಕೆಲಸ ಮಾಡಲು ಇವನಿಗಿಂತ ಉತ್ತಮರು ಬೇರೆ ಯಾರೂ ಇರಲು ಸಾಧ್ಯವಿಲ್ಲ ಎಂದು ಎಲ್ಲರೆದುರು ಹೇಳಿಕೊಂಡು ಬೀಗುತ್ತಿದ್ದ. ಸಣ್ಣದಾಗಿ ತಲೆ ಆಡಿಸುವುದು ಮತ್ತು ಸೂಜಿಯನ್ನು ಸತತವಾಗಿ ಚಲಿಸುವುದನ್ನು ಬಿಟ್ಟರೆ ಅಬ್ಬಾಸ್ ಹತ್ತಿರ ಹೇಳಿಕೊಳ್ಳಲು ಬೇರೇನೂ ಇರಲಿಲ್ಲ. ಅವನು ಸಾಮಾನ್ಯ ಬದುಕಿನಿಂದ ಪೂರ್ತಿಯಾಗಿ ಬೇರೆಯಾದಂತಿದ್ದ. ಅವನಿಗೆ ಕಾಲದ ಅರಿವಿರಲಿಲ್ಲ, ತಾರೀಕು, ತಿಂಗಳು ಅಥವಾ ವರ್ಷದ ಜ್ಞಾನವೂ ಇರಲಿಲ್ಲ.
ಅವನ ಬಳಿ ಮೆಲ್ಲಗಿನ ದನಿಯಲ್ಲಿ ಇನ್ನಷ್ಟು ಪ್ರಶ್ನೆಗಳನ್ನು ಕೇಳಿದಾಗ, "ನಾನು ಗಾಳಿಪಟವನ್ನು ಸಹ ಹಾರಿಸುವುದಿಲ್ಲ" ಎಂದು ಪಿಸುಗುಟ್ಟಿದ. ಅವನು ತನ್ನ ಬಡ ಕುಟುಂಬದ ಏಕೈಕ ಆಧಾರವಾಗಿದ್ದ. ಅವನು ರಾತ್ರಿ ಮಲಗುವುದು ಹಗಲಿಡೀ ತಾನು ಕೆಲಸ ಮಾಡುವ ಕಾರ್ಖಾನೆಯ ಮರದ ಚೌಕಟ್ಟುಗಳ ನಡುವೆ ಅಥವಾ ಹೊರಗಿನ ಕಾಂಕ್ರೀಟ್ ಫುಟ್ಪಾತ್ ಮೇಲೆ. ಆ ಉಸಿರುಗಟ್ಟಿಸುವ ಹಾಗೂ ಗಾಳಿ ಬೆಳಕು ಆಡದ ಕಾರ್ಖಾನೆಯ ಧೂಳು ಹಿಡಿದ ಮಾಡೇ ಅಬ್ಬಾಸ್ ಪಾಲಿನ ಆಗಸವಾಗಿತ್ತು. ಅವನಿಗೆ ಒಂದು ದಿನವಾದರೂ ಆ ಕಾರ್ಖಾನೆಯಿಂದ ಹೊರಗೆ ಬರುವ ಅವಕಾಶ ಸಿಕ್ಕಿರಬಹುದು ಎನ್ನುವ ನಂಬಿಕೆ ನನಗಿಲ್ಲ.
ಆದರೆ ಆ ದಿನದಿಂದಲೂ ಅಬ್ಬಾಸ್ ನನ್ನ ನೆನಪುಗಳಲ್ಲಿ ಸೇರಿ ಹೋಗಿದ್ದಾನೆ. ಅವನು ನೆನಪಾಗದ ದಿನವಿಲ್ಲ. ಇಂದು ಈ ಸುದ್ದಿಯನ್ನು ನೋಡುತ್ತಿದ್ದಂತೆ, ಇಂತಹ ಸುದ್ದಿಗಳ ಶೀರ್ಷಿಕೆಯನ್ನೇ ಒಂದು ಹಾಡಾಗಿಸಬೇಕು ಎನ್ನಿಸಿತು. ಗಿಟಾರಿನ ಸಿ ಮೈನರ್ ಸ್ವರದಲ್ಲಿ ಈ ನೋವನ್ನು ಪೋಣಿಸಬೇಕು ಎನ್ನಿಸಿತು. ಅಬ್ಬಾಸನನ್ನು ಭೇಟಿಯಾದ ದಿನ ನಾನು ಎದೆಯೊಳಗೆ ಹೊತ್ತು ತಂದ ನೋವನ್ನು ಈ ಹಾಡು ಪೂರ್ತಿಯಾಗಿ ವ್ಯಕ್ತಪಡಿಸದು ಎನ್ನುವ ಅರಿವಿನೊಂದಿಗೇ ಇದನ್ನು ವ್ಯಕ್ತಪಡಿಸುತ್ತಿದ್ದೇನೆ.


