ಉಪವಾಸ ಸತ್ಯಾಗ್ರಹಗಳು, 165 ದಿನಗಳ ಕಾಲ ನಡೆದ ಮೆರವಣಿಗೆಗಳು, ರಸ್ತೆ ತಡೆಗಳು, ಶಾಸಕರಿಗೆ ಸಲ್ಲಿಸಿದ ಮನವಿ ಪತ್ರಗಳು, ಅಣುಕು ಶವ ಪ್ರದರ್ಶನಗಳು, ದೇಹವನ್ನು ಕೊಳಚೆಯಲ್ಲಿ ಮುಳುಗಿಸಿಕೊಳ್ಳುವುದು...
ಹೀಗೆ ಚೆನ್ನೈನ ಪೌರಕಾರ್ಮಿಕರು ತಮ್ಮ ಬೇಡಿಕೆಗಳನ್ನು ಸರ್ಕಾರದ ಕಿವಿಗೆ ತಲುಪಿಸಲು ತುಂಬಾ ಸುದೀರ್ಘವಾಗಿ ಮತ್ತು ಅಷ್ಟೊಂದು ತೀವ್ರವಾಗಿ ಹೋರಾಟ ನಡೆಸಿದರು. ಇದು ಕೇವಲ ಒಂದು ಪ್ರತಿಭಟನೆಯಾಗಿರಲಿಲ್ಲ, ಇದು ನಗರದ ಅತ್ಯಂತ ತುಳಿತಕ್ಕೊಳಗಾದ ಜನರು ತಮ್ಮ ಮೇಲಾದ ದಬ್ಬಾಳಿಕೆಯನ್ನು ಸಹಿಸಿ ಮೌನವಾಗಿ ಅಳಿದುಹೋಗಲು ಸುತಾರಂ ಒಪ್ಪದೇ ನಡೆಸಿದ ಒಂದು ಐತಿಹಾಸಿಕ ಹೋರಾಟವಾಗಿತ್ತು.
ಡಿಸೆಂಬರ್ 2025ರಲ್ಲಿ ಹಿರಿಯ ಪೌರಕಾರ್ಮಿಕರಾದ ಎಂ. ಮಹಾಲಕ್ಷ್ಮಿಯವರು ಮಾತನಾಡುತ್ತಾ, ಸರ್ಕಾರದ ಸ್ಪಂದನೆಯ ಕೊರತೆಯನ್ನು 'ಆಳವಾಗಿ ಬೇರೂರಿರುವ ಜಾತಿ ತಾರತಮ್ಯದ ರೂಪ' ಎಂದು ಬಣ್ಣಿಸಿದರು. "ನಾವು 130 ದಿನಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸುತ್ತಿದ್ದರೂ, ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ದೇವಸ್ಥಾನದ ಕೆಲಸಗಾರರಿಗೆ ಪ್ರತಿಭಟನೆಯಿಲ್ಲದೆಯೇ ಖಾಯಂ ಉದ್ಯೋಗ ನೀಡಲಾಯಿತು. ನರ್ಸ್ಗಳ ಬೇಡಿಕೆಗಳನ್ನು ಒಂದು ವಾರದಲ್ಲೇ ಈಡೇರಿಸಲಾಯಿತು. ಆದರೆ ದಲಿತ ಪೌರಕಾರ್ಮಿಕರು ಅದೇ ಗೌರವವನ್ನು ಕೇಳಿದಾಗ ಮಾತ್ರ ಸರ್ಕಾರ ಮೌನ ತಾಳುತ್ತದೆ."





















