ಅಲ್ಲಿ ಸಾವಿರಾರು ಅಲೆಮಾರಿ ಪಶುಪಾಲಕರು ಸೇರಿದ್ದಾರೆ. ಮತ್ತು ಇನ್ನಷ್ಟು ಜನರು ಬರುವವರಿದ್ದಾರೆ. ಅವರು ಧನಗರ್ ಮತ್ತು ಕುರುಬ ಸಮುದಾಯಗಳಿಗೆ ಸೇರಿದವರು. ಅವರ ಆ ವರ್ಷದ ವಲಸೆಯ ಮಾರ್ಗ ಯಾವುದಾಗಿದ್ದರೂ, ಅಕ್ಟೋಬರ್ - ನವೆಂಬರ್ ತಿಂಗಳ ಹೊತ್ತಿಗೆ ಇಲ್ಲಿಗೆ ಬಂದು ಸೇರುತ್ತಾರೆ. ಇದಕ್ಕಾಗಿ ಅವರು ಹಳದಿ ಮೋಡವನ್ನು ಅನುಸರಿಸುತ್ತಾರೆ.
ಹಟ್ಕನಂಗ್ಲೆ ತಾಲ್ಲೂಕಿನಲ್ಲಿರುವ ಈ ಗ್ರಾಮದಲ್ಲಿ ಅವರ ದೇವರಾದ ವಿಠ್ಠಲ ಬೀರದೇವ ಮಹಾರಜ ದೇವಸ್ಥಾನವಿದೆ. ಈ ಸಮಯದಲ್ಲಿ ದೇವರ ಜನ್ಮದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಇಲ್ಲಿಗೆ ಭಕ್ತರ ಪ್ರವಾಹವೇ ಹರಿದುಬರುತ್ತದೆ. ಆದರೆ ಈ ಪ್ರವಾಹದಲ್ಲಿ ಹರಿಯುವುದು ಭಕ್ತಿ ರಸ. ಜನರು ವಿಠ್ಠಲನ ಭಕ್ತಿಯ ಮಳೆಯಲ್ಲಿ ಮಿಂದೇಳುತ್ತಾರೆ.
ವಿಠ್ಠಲ ಬೀರದೇವನನ್ನು ನಂಬುವ ಕುರುಬರು ಮತ್ತು ಇತರ ಅನೇಕ ಸಮುದಾಯಗಳು, ಧನಗರ್ ಹಾಗೂ ಅದರ ಉಪ ಜಾತಿಗಳು ದೇಶದೆಲ್ಲೆಡೆಯಿಂದ ಬಂದು ಇಲ್ಲಿ ಸೇರುತ್ತಾರೆ. ಈ ಜನರು ವಿಠ್ಠಲ ಬೀರದೇವನು ತಮ್ಮ ಜಾನುವಾರು ಮತ್ತು ಬೆಳೆಗಳನ್ನು ರಕ್ಷಿಸುತ್ತಾನೆ ಎನ್ನುವುದು ಈ ಜನರ ನಂಬಿಕೆ. “ವಿಠ್ಠಲ ಬೀರದೇವನಿಗೆ ನಮ್ಮ ಬದುಕಿನಲ್ಲಿ ಮಹತ್ವವಾದ ಸ್ಥಾನವಿದೆ. ಅವನು ನಮ್ಮ ರಕ್ಷಕ, ಆತ್ಮರಕ್ಷಕ, ಮತ್ತು ನಮ್ಮ ಮಾರ್ಗದರ್ಶಕ. ಅವನು ಅಚಲ ನಂಬಿಕೆ, ಭರವಸೆ ಮತ್ತು ಭಕ್ತಿಯ ಸಂಕೇತ” ಎಂದು ಯಾತ್ರಿಕರೊಬ್ಬರು ಹೇಳಿದರು.





























