ಕಜ್ಲೈಂಯಾ ಹಬ್ಬದ ತಯಾರಿ ಹಬ್ಬಕ್ಕೆ ಒಂಬತ್ತು ದಿನಗಳಿರುವಾಗಲೇ ಆರಂಭಗೊಳ್ಳುತ್ತದೆ. ಅಂದು ಬುಂದೇಲಖಂಡ್ ಮತ್ತು ಬಘೇಲಖಂಡ್ ಪ್ರದೇಶಗಳ ಜನರು ಮಣ್ಣಿನ ಮಡೆಕೆಯಲ್ಲಿ ಗೋಧಿ ಕಾಳುಗಳನ್ನು ಮೊಲಕೆ ಕಟ್ಟಲು ಇಡುತ್ತಾರೆ. ಹೀಗೆ ಮಡಕೆಯಲ್ಲಿಟ್ಟ ಗೋಧಿಯನ್ನು ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ. ಈ ಗೋಧಿ ಮೊಳಕೆ ಬಂದ ನಂತರ ಅದನ್ನು ಪೂಜಿಸಲಾಗುತ್ತದೆ. ಈ ಮೊಳಕೆ ಕಾಳುಗಳನ್ನು ಖುಜ್ಲು ಎಂದು ಕರೆಯಲಾಗುತ್ತದೆ. ಈ ಖುಜ್ಲುವನ್ನು ಹೆಂಗಸರು ಬುಟ್ಟಿಯಲ್ಲಿ ತುಂಬಿಸಿ ತಲೆಯ ಮೇಲೆ ಹೊತ್ತುಕೊಂಡು, ದಾರಿಯುದ್ದಕ್ಕೂ ಹಾಡುತ್ತಾ ದೇವಸ್ಥಾನಕ್ಕೆ ಹೋಗುತ್ತಾರೆ.
“ಕಜ್ಲೈಂಯಾ ಹಬ್ಬವನ್ನು ನಾವು ಬಹಳ ಸಂಭ್ರಮದಿಂದ ಆಚರಿಸುತ್ತೇವೆ” ಎನ್ನುತ್ತಾರೆ ಮಮತಾ. ಇವರು ಹಾಡು ಹಾಡುವುದರ ಜೊತೆಗೆ ಢೋಲ್ಕಿ (ಡೋಲು) ಕೂಡಾ ಬಾರಿಸುತ್ತಾರೆ. ಈ ಮಹಿಳೆಯರು ಹಾಡು ಮತ್ತು ಸಂಗೀತದೊಂದಿಗೆ ಶಾಡೋಲ್ ಜಿಲ್ಲೆಯ ಪಚ್ಗಾಂವ್ ಎನ್ನುವಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಾರೆ.
ಈ ಹಬ್ಬವನ್ನು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಹರಡಿರುವ ಈ ಪ್ರದೇಶಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಸ್ಥಳೀಯರು ಇದನ್ನು ಪರಸ್ಪರನ್ನು ಒಗ್ಗೂಡಿಸುವ ಹಬ್ಬವನ್ನಾಗಿ ನೋಡುತ್ತಾರೆ. ಇದು ಒಬ್ಬರೊನ್ನಬ್ಬರು ಕ್ಷಮಿಸು ಮುನ್ನಡೆಯುವ ಹಬ್ಬ. ಒಬ್ಬರಿಂದ ಖುಜ್ಲುವನ್ನು ಸ್ವೀಕರಿಸುವುದೆಂದರೆ ನಾವು ಅವರನ್ನು ಮನ್ನಿಸಿ ನಮ್ಮವರನ್ನಾಗಿಸಿಕೊಂಡಂತೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಬ್ರಾಹ್ಮಣರು ಮತ್ತು ರಜಪೂತರಂತಹ ಮೇಲ್ಜಾತಿ ಸಮುದಾಯಗಳು ಧ್ವಾಜ ಮೆರವಣಿಗೆಯನ್ನು ಆಯೋಜಿಸುತ್ತವೆ ಮತ್ತು ತಮ್ಮ ಮನೆಗಳಲ್ಲಿ ಪೂಜಾ ಆಚರಣೆಗಳನ್ನು ನಡೆಸುತ್ತವೆ. ಆದಿವಾಸಿ ಗೊಂಡ್ ಮತ್ತು ಬೈಗಾ ಬುಡಕಟ್ಟು ಸಮುದಾಯಗಳು ಜಾನಪದ ಹಾಡುಗಳು ಮತ್ತು ನೃತ್ಯಗಳೊಂದಿಗೆ ಈ ಹಬ್ಬವನ್ನು ಆಚರಿಸುತ್ತವೆ.
“ಮೊದಲು ಇಲ್ಲಿ ಜಾತ್ರೆಯಂತಹ ವಾತಾವರಣ ಇರುತ್ತಿತ್ತು. ಹಬ್ಬದಲ್ಲಿ ಭಾಗವಹಿಸಲು ಜನರು ದೂರ ದೂರದ ಊರುಗಳಿಂದ ಬಂದು ಸೇರುತ್ತಿದ್ದರು. ಇಡೀ ವಾತಾವರಣ ಭಜನೆ-ಕೀರ್ತನೆಗಳಿಂದ ತುಂಬಿರುತ್ತಿತ್ತು. ಊರಿಗೆ ಊರೇ ಸಂಭ್ರಮದಲ್ಲಿ ಮುಳುಗಿರುತ್ತಿತ್ತು” ಎನ್ನುತ್ತಾರೆ ದೇವಾಲಯವನ್ನು ನೋಡಿಕೊಳ್ಳುವ ರಾಮಸ್ವರೂಪ್ ವಿಶ್ವಕರ್ಮ.


