ದೇವೇಶ್ವರಿಯವರ ತರಗತಿಗಳು ಮಧ್ಯಾಹ್ನ 2 ಗಂಟೆಗೆ ಮುಗಿಯುತ್ತದೆ, ಆದರೆ ಅವರ ಆ ದಿನದ ಕೆಲಸ ಅಲ್ಲಿಗೆ ಮುಗಿಯುವುದಿಲ್ಲ. ತನ್ನ ಭುಜದ ಮೇಲೆ ಚೀಲವೊಂದನ್ನು ಹಾಕಿಕೊಂಡು, ಸುಡುವ 40 ಡಿಗ್ರಿ ಬಿಸಿಲಿನಿಂದ ರಕ್ಷಣೆಗಾಗಿ ತಲೆಗೆ ಕಾಟನ್ ದುಪ್ಪಟ್ಟಾ ಹೊದ್ದುಕೊಂಡು ಶಾಲೆಯಿಂದ ಹೊರಗೆ ಹೊರಡುತ್ತಾರೆ. ಆದರೆ ಅವರು ಹೊರಟಿದ್ದು ಮನೆಗಲ್ಲ, ಸೌದೆಗೆ. "ನಾನು ಈ ಪ್ರಾಥಮಿಕ ಶಾಲೆಯ ಟೀಚರ್. ನನ್ನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗುವಂತೆ ನೋಡಿಕೊಳ್ಳುವುದು ಕೂಡಾ ನನ್ನ ಜವಾಬ್ದಾರಿ. ಹೀಗಾಗಿ ಸೌದೆ ತರಲು ಹೋಗುತ್ತಿದ್ದೇನೆ" ಎಂದು ಅವರು ವಿವರಿಸಿದರು.
48 ವರ್ಷದ ದೇವೇಶ್ವರಿ ನೇಗಿ ಅವರು ಲಕ್ನೋದ ಗ್ರಾಮೀಣ ಹೊರವಲಯದಲ್ಲಿರುವ ಮಲ್ ಬ್ಲಾಕ್ ವ್ಯಾಪ್ತಿಯ ರುದನ್ ಖೇರಾ ಪ್ರಾಥಮಿಕ ಶಾಲೆಯ ಶಿಕ್ಷಕಿ-ಪ್ರಭಾರಿ. ಇಲ್ಲಿನ ಐವರು ಸಿಬ್ಬಂದಿಗಳೂ ಮಹಿಳೆಯರೇ. ಇಬ್ಬರು ಸಹಾಯಕ ಶಿಕ್ಷಕಿಯರು ಮತ್ತು ಮೂವರು ರಸೋಯಿಯಾಂ (ಅಡುಗೆಯವರು ) – ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟವನ್ನು ತಯಾರಿಸುತ್ತಾರೆ.
ಕೇಂದ್ರದ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ, ಉತ್ತರ ಪ್ರದೇಶದಾದ್ಯಂತ 1,41,000ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಾಲೆಗಳಲ್ಲಿನ 15 ದಶಲಕ್ಷಕ್ಕೂ (1.5 ಕೋಟಿ) ಅಧಿಕ ವಿದ್ಯಾರ್ಥಿಗಳು ತಾಜಾ ಹಾಗೂ ಬೇಯಿಸಿದ ಪೌಷ್ಟಿಕಾಂಶಯುಕ್ತ ಊಟವನ್ನು ಪಡೆಯಲು ಅರ್ಹರು. ಈ ಯೋಜನೆಯಿರುವ ಹೆಚ್ಚಿನ ಶಾಲೆಗಳಿಗೆ ಎಲ್ಪಿಜಿ ಸಂಪರ್ಕವನ್ನು ಒದಗಿಸಲಾಗಿದೆ. ಆದರೆ, ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ನಡೆಸುತ್ತಿರುವ ಯುದ್ಧದಿಂದ ಉಂಟಾಗಿರುವ ಎಲ್ಪಿಜಿ ಕೊರತೆಯು ಮಕ್ಕಳ ಪಾಲಿನ ಈ ಅತ್ಯಂತ ಪ್ರಮುಖ ಯೋಜನೆಯನ್ನು ಅಸ್ತವ್ಯಸ್ತಗೊಳಿಸುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಶಾಲೆಗಳು ಇದರಿಂದ ಬಾಧಿತವಾಗಿವೆ. ಆದರೆ ಹೀಗೆ ತೊಂದರೆಗೆ ಒಳಗಾಗಿರುವ ಶಾಲೆಗಳ ಸಂಖ್ಯೆಯೆಷ್ಟು ಎನ್ನುವ ಕುರಿತು ಸರ್ಕಾರಿ ಮಟ್ಟದಲ್ಲಿ ಮೌನ ಮುಂದುವರಿದಿದೆ.
"ಸುಮಾರು ಒಂದು ತಿಂಗಳಿನಿಂದ ದೇವೇಶ್ವರಿ ಹಾಗೂ ಇತರ ನಾಲ್ವರು, ಶಾಲೆ ಮುಗಿದ ನಂತರ ಮನೆಗೆ ಹೋಗುವ ಬದಲು ಸೌದೆ ಹುಡುಕಲು ಊರಿನ ಒಂದೊಂದು ಕಡೆಗೆ ಸಾಗುತ್ತಾರೆ. "ಗ್ಯಾಸ್ ಏಜನ್ಸಿ ಮತ್ತು ಸ್ಥಳೀಯ ಕಟ್ಟಿಗೆ ಮಾರಾಟಗಾರರ ಬಳಿ ಸೌದೆ ಅಥವಾ ಗ್ಯಾಸ್ ಪಡೆಯಲು ಪ್ರಯತ್ನಿಸಿದ್ದೇವೆ. ನಮ್ಮ ಗ್ರಾಮ ಪ್ರಧಾನರಿಗೂ ಮನವಿ ಕೊಟ್ಟಿದ್ದೆವು - ಆದರೆ ಈ ಕಷ್ಟದ ಸಮಯದಲ್ಲಿ ಯಾರೂ ಸಹಾಯ ಮಾಡುವ ಪರಿಸ್ಥಿತಿಯಲ್ಲಿಲ್ಲ" ಎಂದು ನೇಗಿಯವರು ಪಾರಿಗೆ ತಿಳಿಸಿದರು.
ಒಂದು ಕಾಲದಲ್ಲಿ ಸೌದೆ ಸುಲಭವಾಗಿ ಸಿಗುತ್ತಿತ್ತು. ಆದರೆ ಈಗ ಅವೆಲ್ಲ ಲಕ್ನೋ ನಗರ ಪ್ರದೇಶದ ವ್ಯಾಪಾರಿಗಳ ಪಾಲಾಗುತ್ತಿದೆ. "ನಾವು ನಮ್ಮಲ್ಲಿದ್ದ ಅಷ್ಟೂ ಸೌದೆಯನ್ನು ರೆಸ್ಟೋರೆಂಟ್ ಮತ್ತು ಹೋಟೆಲ್ಲುಗಳಿಗೆ ಮಾರಾಟ ಮಾಡಿದ್ದೇವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡಬಾರದು ಎಂದೇನಿಲ್ಲ, ಆದರೆ ಎಲ್ಲರಿಗೂ ಕೊಡುವಷ್ಟು ನಮ್ಮ ಬಳಿ ಇಲ್ಲ" ಎಂದು ಸ್ಥಳೀಯ ಸೌದೆ ಪೂರೈಕೆದಾರ ಧರ್ಮೇಶ್ ಯಾದವ್ ಹೇಳುತ್ತಾರೆ. "ಉಳಿದಿರುವ ಒಂದಷ್ಟು ಸೌದೆ ನಮ್ಮ ದೈನಂದಿನ ಬಳಕೆಗೆ ಬೇಕು. ಸೌದೆಯಿಲ್ಲದೆ ನಮ್ಮ ಮನೆಯಲ್ಲಿ ಅಡುಗೆ ಮಾಡುವುದು ಹೇಗೆ?"
ವಿದ್ಯಾರ್ಥಿಗಳೂ ಕೂಡ ಸೌದೆ ಸಂಗ್ರಹಿಸುವ ಕೆಲಸದಲ್ಲಿ ಕೈಜೋಡಿಸುತ್ತಾರೆ. ಶಾಲೆಯ ಮೇಲ್ಛಾವಣಿಗೆ ತಾಗುವ ಮರದ ಕೊಂಬೆಗಳಿಂದ ಸಣ್ಣ ಮತ್ತು ದೊಡ್ಡ ಕಡ್ಡಿಗಳನ್ನು ಮುರಿದು ತರುತ್ತಾರೆ.










