ಉಮಾ ಪಾಟೀಲ್ ಅವರ ಎರಡು ಕೋಣೆಗಳ ಮನೆಯ ಒಂದು ಮೂಲೆಯಲ್ಲಿ ಸಣ್ಣ ಕಬ್ಬಿಣದ ಕಬೋರ್ಡ್ ಇದೆ. ಅದರೊಳಗೆ ದೊಡ್ಡ ರಿಜಿಸ್ಟರುಗಳು, ನೋಟ್ ಪುಸ್ತಕಗಳು, ಡೈರಿಗಳು ಮತ್ತು ಸಮೀಕ್ಷೆಯ ನಮೂನೆಗಳ ಫೋಟೋಕಾಪಿಗಳ ರೂಪದಲ್ಲಿ ಕೈಯಿಂದ ಬರೆದ ದಶಕದ ದಾಖಲೆಗಳು ಇವೆ. ಅವೆಲ್ಲವನ್ನೂ ದಪ್ಪ ಪಾಲಿಥಿನ್ ಚೀಲಗಳಲ್ಲಿ ಒಂದರ ಮೇಲೊಂದರಂತೆ ಜೋಡಿಸಿಡಲಾಗಿದೆ.
ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು (ಆಶಾ) ಗ್ರಾಮೀಣ ಮಹಾರಾಷ್ಟ್ರದ ಹೆಚ್ಚಿನ ಜನರ ಆರೋಗ್ಯ ಸಂಬಂಧಿ ವಿವರಗಳನ್ನು ದಾಖಲಿಸಿಟ್ಟ ಕಾಗದಗಳಗಳ ರಾಶಿ ಇವು - ಹೆರಿಗೆಯಿಂದ ಹಿಡಿದು ರೋಗನಿರೋಧಕ, ಹದಿಹರೆಯದ ಪೋಷಣೆ, ಗರ್ಭನಿರೋಧಕ, ಕ್ಷಯ ಮತ್ತು ಹೆಚ್ಚಿನವುಗಳ ದತ್ತಾಂಶದವರೆಗೆ. ಉಮಾ ಅವರು 2009ರಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಜ್ ತಾಲ್ಲೂಕಿನ ಅರಾಗ್ ಗ್ರಾಮದ ಜನರ ಈ ದಾಖಲೆಯನ್ನು ಇಟ್ಟುಕೊಂಡಿದ್ದಾರೆ. ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ತನ್ನ ಹಳ್ಳಿಗೆ ಪದೇ ಪದೇ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ಪ್ರಯತ್ನಿಸುತ್ತಿದ್ದಾರೆ.
45 ವರ್ಷದ ಉಮಾ ಅವರಂತೆ, ಗ್ರಾಮೀಣ ಮಹಾರಾಷ್ಟ್ರದ 55,000 ಆಶಾ ಕಾರ್ಯಕರ್ತರು ತಮ್ಮ ಹಳ್ಳಿಗಳಲ್ಲಿ ಮೂಲಭೂತ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ದಿನಕ್ಕೆ ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇದನ್ನು 2005ರಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿಯಲ್ಲಿ ಪ್ರಾರಂಭಿಸಲಾಯಿತು. ಒಟ್ಟು 23 ದಿನಗಳ ತರಬೇತಿಯ ನಂತರ, ಈ ಸಮುದಾಯ ಆರೋಗ್ಯ ಕಾರ್ಯಕರ್ತರನ್ನು - ಎಲ್ಲರೂ ಮಹಿಳೆಯರು - ನೇಮಕ ಮಾಡಲಾಗುತ್ತದೆ. ಗ್ರಾಮೀಣ ಆರೋಗ್ಯ ಮಿಷನ್ ಮಾನದಂಡಗಳ ಪ್ರಕಾರ, ಆದಿವಾಸಿ ಕುಗ್ರಾಮಗಳಲ್ಲಿ ಪ್ರತಿ 1,000 ಜನಸಂಖ್ಯೆಗೆ ಒಬ್ಬ ಆಶಾ (ಕನಿಷ್ಠ 10ನೇ ತರಗತಿ ಪಾಸ್) ಮತ್ತು ಆದಿವಾಸಿಯೇತರ ಹಳ್ಳಿಗಳಲ್ಲಿ ಪ್ರತಿ 1,500 ಜನಸಂಖ್ಯೆಗೆ ಓರ್ವ ಆಶಾ ಕಾರ್ಯಕರ್ತೆಯನ್ನು (ಕನಿಷ್ಠ 10ನೇ ತರಗತಿ ಪಾಸ್) ನಿಗದಿಪಡಿಸಲಾಗಿದೆ.
ಸುಮಾರು 15,600 ಜನಸಂಖ್ಯೆಯನ್ನು ಹೊಂದಿರುವ ಅರಗ್ ಗ್ರಾಮದಲ್ಲಿ, ಉಮಾ ಮತ್ತು ಇತರ 15 ಆಶಾ ಕಾರ್ಯಕರ್ತರು ಕೆಲಸಕ್ಕಾಗಿ ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಹೊರಡುತ್ತಾರೆ. ಅರಗ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹೊಂದಿದ್ದು, ಇದು ಮಿರಜ್ ತಾಲ್ಲೂಕಿನ ಬೇಡಗ್, ಲಿಂಗನೂರು, ಖತವ್, ಶಿಂಧೆವಾಡಿ ಮತ್ತು ಲಕ್ಷ್ಮಿವಾಡಿ ಗ್ರಾಮಗಳಿಗೆ ಆರೋಗ್ಯ ಸೇವೆ ಒದಗಿಸುತ್ತದೆ. ಕೇಂದ್ರದ ಅಡಿಯಲ್ಲಿ ಸುಮಾರು 47,000 ಜನಸಂಖ್ಯೆಗೆ ಒಟ್ಟು 41 ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಾರೆ.
ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯು ತನಗೆ ನಿಯೋಜಿಸಲಾದ ಪ್ರತಿ ಮನೆಗೆ ಭೇಟಿ ನೀಡುತ್ತಾರೆ ಮತ್ತು ದಿನಕ್ಕೆ ನಿರೀಕ್ಷಿತ ಐದು ಗಂಟೆಗಳಿಗಿಂತ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. "ಮನೆಗಳು ಹಳ್ಳಿಯಲ್ಲಿದ್ದರೆ, ಎರಡು ಗಂಟೆಗಳಲ್ಲಿ 10-15 ಮನೆ ಭೇಟಿಗಳನ್ನು ಮಾಡಬಹುದು. ಆದಾಗ್ಯೂ, ಕೆಲವರು ಹೊರವಲಯದಲ್ಲಿ ಅಥವಾ ಹೊಲಗಳಲ್ಲಿ ವಾಸಿಸುತ್ತಾರೆ. ನಾಲ್ಕು ಭೇಟಿಗಳು ಸಹ ಐದು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ನಾವು ಪೊದೆಗಳು, ಹೊಲಗಳು, ಮೂಲಕ ನಡೆಯಬೇಕು. ಮಳೆಗಾಲದಲ್ಲಿ, ಇಲ್ಲೆಲ್ಲಾ ಕೆಸರು ತುಂಬಿಕೊಂಡಿರುತ್ತದೆ" ಎಂದು ಉಮಾ ಹೇಳುತ್ತಾರೆ.















