"ನಮ್ಮ ಮಕ್ಕಳು ಅರಣ್ಯ ಇಲಾಖೆಯ ಈ ತೇಗದ ತೋಪುಗಳೆಲ್ಲದರ ಜೊತೆಗೆ, ಅವನ್ನೇ ನೋಡುತ್ತಾ ಬೆಳೆಯುತ್ತಾರೆಂಬ ಆತಂಕವಿದೆ. ಕಾಡುಗಳು, ಮರಗಳು, ಸಸ್ಯಗಳು ಮತ್ತು ಪ್ರಾಣಿಗಳ ಬಗ್ಗೆ ನಮಗಿರುವ ಜ್ಞಾನವೆಲ್ಲವೂ ಅವರ ಪಾಲಿಗೆ ಇಲ್ಲವಾಗುತ್ತದೆ" ಎನ್ನುತ್ತಾರೆ ಮಧ್ಯ ಪ್ರದೇಶದ ಉಮರ್ವಾಡಾ ಗ್ರಾಮದ ಲೈಚಿಬಾಯಿ ಉಯಿಕೆ.
1864ರಲ್ಲಿ ಬ್ರಿಟಿಷ್ ವಸಾಹತುಶಾಹಿ ಸರ್ಕಾರದಿಂದ ರಚಿಸಲ್ಪಟ್ಟ ಭಾರತದ ಅರಣ್ಯ ಇಲಾಖೆಯು ದೇಶದ ಏಕೈಕ ಅತಿ ದೊಡ್ಡ ಭೂಮಾಲೀಕನಾಗಿ ಉಳಿದಿದೆ. ಸಂರಕ್ಷಣೆ ಮತ್ತು ವಾಣಿಜ್ಯದ (ಮರದ ಮಾರಾಟದಂತಹ) ಹೆಸರಿನಲ್ಲಿ ಅದು ಚಲಾಯಿಸುವ ಕಾನೂನುಗಳು ಶತಮಾನಕ್ಕೂ ಹೆಚ್ಚಿನ ಕಾಲದಿಂದ ಕಾಡುಗಳು ಮತ್ತು ಭೂಮಿಗಳಿಗೆ ಬೇಲಿಯನ್ನು ಹಾಕಿವೆ, ಆದಿವಾಸಿಗಳು ಮತ್ತು ಅರಣ್ಯದಲ್ಲಿ ವಾಸಿಸುವವರನ್ನು ಅಪರಾಧಿಗಳೆಂದು ಪರಿಗಣಿಸಿ, ಅವರನ್ನು ತಮ್ಮ ಪಾರಂಪರಿಕ ಭೂಮಿಯಿಂದ ಗುಳೆಯೆಬ್ಬಿಸಲು ಈ ಕಾನೂನುಗಳನ್ನು ಬಳಸಲಾಗಿದೆ.
ಈ "ಐತಿಹಾಸಿಕ ಅನ್ಯಾಯ"ವನ್ನು ಪರಿಹರಿಸಲು 2006ರ ಅರಣ್ಯ ಹಕ್ಕುಗಳ ಕಾಯ್ದೆಯಂತಹ ಸುಧಾರಣಾ ಕಾನೂನುಗಳನ್ನು ತರಲಾಯಿತು, ಅರಣ್ಯವಾಸಿ ಸಮುದಾಯಗಳಿಗೆ (ಸುಮಾರು 150 ದಶಲಕ್ಷಕ್ಕೂ ಹೆಚ್ಚು ಭಾರತೀಯರು) ಹಿಡುವಳಿ ಹಕ್ಕುಗಳನ್ನು ಮತ್ತು ಅವರ ಕಾಡುಗಳನ್ನು ನಿರ್ವಹಿಸುವ ಮತ್ತು ಸಂರಕ್ಷಿಸುವ ಅಧಿಕಾರವನ್ನು ನೀಡಲಾಯಿತು. ಆದರೆ ಅಂತಹ ಒದಗಣೆಗಳು ಕಾರ್ಯಾನ್ವಯಗೊಂಡಿರುವುದಿಲ್ಲ.










