"ಅಯ್ಯೋ ಒಂದೇ ಬರ್ಗರ್ ಉಳಿದಿತ್ತು ಮೇಡಂ, ಅದನ್ನ ಅವರು ತಗೊಂಡ್ರ, ಸಾರಿ ಮೇಡಂ" ಎಂದು ಜಂತರ್ ಮಂತರ್ ಧರಣಿ ಸತ್ಯಾಗ್ರಹದ ಸ್ಥಳದ ಹೊರಗೆ ಸಿಕ್ಕ ರಾಹುಲ್ ಸಣ್ಣ ದನಿಯಲ್ಲಿ ಹೇಳಿದರು. ಸಂಜೆ 6.30ರ ಸುಮಾರಿಗೆ ನನಗೆ ಸಿಕ್ಕಿದ್ದ ಅವರು ಕೆಂಪು ಬಣ್ಣದ ಜೊಮ್ಯಾಟೋ ಬ್ಯಾಗನ್ನು ಬೆನ್ನಿಗೆ ಕಟ್ಟಿಕೊಂಡಿದ್ದರು. ಮತ್ತದು ಪೂರ್ತಿಯಾಗಿ ಖಾಲಿಯಾಗಿತ್ತು. "ಬೆಂಗಳೂರಿನ ಯಾರೋ ಒಬ್ಬರು ʼಕೇಳಿದ ಯಾರಿಗಾದರೂ ಕೊಡಿʼ ಎಂದು 30 ಬರ್ಗರ್ ಪ್ಯಾಕೇಟುಗಳನ್ನು ಕಳುಹಿಸಿದ್ದರು" ಎಂದು ರಾಹುಲ್ ಮಾಹಿತಿ ನೀಡಿದರು.
ಬಿಹಾರದ ದರ್ಭಾಂಗ ಜಿಲ್ಲೆಯವರಾದ ರಾಹುಲ್ ಯಾದವ್ ಹಗಲಿನಲ್ಲಿ ಕಾಲೇಜು ವಿದ್ಯಾರ್ಥಿಗೆ ಓದಿನಲ್ಲಿ ತೊಡಗಿಕೊಳ್ಳುತ್ತಾರೆ. ಮತ್ತು ಸಂಜೆ ಆರರಿಂದ ಬೆಳಗಿನಜಾವದ ಆರು ಗಂಟೆಯ ತನಕ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾರೆ. ಸತ್ಯಾಗ್ರಹದಲ್ಲಿ ಅವರು ನೇರವಾಗಿ ಭಾಗವಹಿಸದಿದ್ದರೂ ಒಂದು ರೀತಿಯಲ್ಲಿ ಅವರು ಅದರ ಭಾಗವಾಗಿದ್ದರು. ಅವರು ತಲುಪಿಸುತ್ತಿದ್ದ ಆರ್ಡರುಗಳಲ್ಲಿ ಬೇರೆ ಬೇರೆ ನಗರದ ಅನಾಮಿಕ ಜನರು ಹಣ ಕೊಟ್ಟು ಕಳುಹಿಸಿದ ಆಹಾರವೂ ಇರುತ್ತಿತ್ತು. ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರಿಗೆ ಕಳುಹಿಸದ ಈ ಪಾರ್ಸೆಲ್ಲನ್ನು ಹಸಿದ ಸತ್ಯಾಗ್ರಹಿಗಳಲ್ಲಿ ಯಾರೂ ಬೇಕಿದ್ದರೂ ಪಡೆಯಬಹುದಿತ್ತು.
ಜಂತರ್ ಮಂತರ್ ಬಳಿ ವಿದ್ಯಾರ್ಥಿ ಪ್ರತಿಭಟನೆ ನಡೆದ ಅಷ್ಟೂ ದಿನ ಲಾಠಿ ಚಾರ್ಜ್ ಮತ್ತು ಸಾಮೂಹಿಕ ಬಂಧನಗಳು ನಡೆಯುತ್ತಿದ್ದವು. ಇದೆಲ್ಲದರ ನಡುವೆಯೂ ಹಲವೆಡೆಯಿಂದ ಆಹಾರದ ಪೊಟ್ಟಣಗಳು ಹರಿದುಬರುತ್ತಲೇ ಇದ್ದವು. ವಿವಿಧ ಆನ್ಲೈನ್ ವೇದಿಕೆಯ ʼಸರ್ವೀಸ್ ಡೆಲಿವರಿ ಪಾರ್ಟ್ನರ್ಗಳುʼ (ಗಿಗ್ ಕಾರ್ಮಿಕರು) ಬರ್ಗರ್, ಸ್ಯಾಂಡ್ವಿಚ್, ಪಾರ್ಲೆ-ಜಿ ಬಿಸ್ಕತ್ ಪ್ಯಾಕೇಟುಗಳು ಹಾಗೂ ಇತರ ಆಹಾರ ಪದಾರ್ಥಗಳನ್ನು ನಿರಂತರ ತಲುಪಿಸುತ್ತಿದ್ದರು. ಇದರ ಜೊತೆಗೆ ದೆಹಲಿಯ ಮನೆಗಳಿಂದಲೂ ಅಡುಗೆ ಮಾಡಿ ಕಳುಹಿಸಲಾಗುತ್ತಿತ್ತು. ಇವೆಲ್ಲಕ್ಕಿಂತ ಮುಖ್ಯವಾಗಿ, ದಶಕಗಳಿಂದ ಸಾರ್ವಜನಿಕರಿಗೆ ತೆರೆದಿರುವ ಹತ್ತಿರದ ಗುರುದ್ವಾರದ ಲಂಗರ್ನಿಂದ (ಸ್ವಯಂಸೇವಕರು ತಯಾರಿಸಿ ಬಡಿಸುವ ಉಚಿತ ಊಟ) ಆಹಾರ ತಲುಪುತ್ತಿತ್ತು.








