“ಪ್ರತಿಯೊಬ್ಬರೂ ತಮ್ಮ ಬಾಲ್ಕನಿ ಮತ್ತು ಮಾಳಿಗೆಗಳಲ್ಲಿ ಆಹಾರವನ್ನು ಬೆಳೆದರೆ, ತಿನ್ನಲು ನಮಗೆ ಸಾಕಷ್ಟು ಆಹಾರ ಸಿಗುತ್ತದೆ.”
ನಾವು ತರಗತಿಯೊಂದರಲ್ಲಿದ್ದೇವೆ. ಗ್ರಾಮೀಣ ಭಾರತದ ಬಗ್ಗೆ ನಗರದ ವಿದ್ಯಾರ್ಥಿಗಳಲ್ಲಿ ಸಂವೇದನಾಶೀಲತೆಯನ್ನು ಮೂಡಿಸಲು ನಮ್ಮನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿಯ ಹೇಳಿಕೆಯು ಶಬ್ದರಹಿತ ಬಾಂಬ್ನಂತಿತ್ತು. ನಾವಿದನ್ನು ಹೀಗೆಯೇ ಬಿಟ್ಟರೆ, ಸರಿಪಡಿಸಲಾಗದ ಹಾನಿಯನ್ನುಂಟುಮಾಡುವ ಸಾಧ್ಯತೆಯಿದೆ – ಇದು, ಅರಿವಿಲ್ಲದಂತೆಯೇ ʼಪ್ರತಿಯೊಬ್ಬರನ್ನೂʼ ಅರ್ಹ ಯುವ ಭಾರತೀಯ ವರ್ಗದ ನಿಟ್ಟಿನಲ್ಲಿ ವ್ಯಾಖ್ಯಾನಿಸುತ್ತದೆ. ಇದಕ್ಕೆ ಬದಲಾಗಿ, ನಾವು ಅದನ್ನು ಯಾವುದಾದರೂ ಅರ್ಥಗರ್ಭಿತ ವಿಷಯದ ಬಗ್ಗೆ ಚರ್ಚೆಯ ಕಿಡಿ ಹೊತ್ತಿಸಲು ಬಳಸಬಹುದು. ಬಾಲ್ಕನಿ, ಮಾಳಿಗೆ ಅಥವಾ ಯಾವುದೇ ತೆರೆದ ಜಾಗಗಳಿಲ್ಲದ ಮನೆಗಳಿವೆಯೇ?
ಪೀಪಲ್ಸ್ ಆರ್ಘೈವ್ ಆಫ್ ರೂರಲ್ ಇಂಡಿಯಾ[PARI (ಪರಿ)]ದ ಶಿಕ್ಷಣ ಶಾಖೆಯಾದ ʼಪರಿ ಶಿಕ್ಷಣʼವು ಈ ಕ್ಷಣದ ಪರಿಸ್ಥಿತಿಯನ್ನು ಬಳಸಿಕೊಂಡು ರೂಢಿಗಳನ್ನು ತ್ಯಜಿಸಲು ಮತ್ತು ಸಂದರ್ಭಗಳನ್ನು ವಿಸ್ತೃತಗೊಳಿಸಲು ಬಯಸುತ್ತದೆ. ಪರಿಯ ಕಥಾನಕಗಳನ್ನು ಬಳಸಿಕೊಂಡು ನಾವು, ನಗರದ ಶಾಲೆಗಳಲ್ಲಿನ ವಿದ್ಯಾರ್ಥಿಗಳು ಗ್ರಾಮೀಣ ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳೊಂದಿಗೆ ತೊಡಗಿಸಿಕೊಂಡು ಅವುಗಳನ್ನು ಅನ್ವೇಷಿಸಿ, ಆ ಬಗ್ಗೆ ಅವರಲ್ಲಿ ಸಹಾನುಭೂತಿ ಮೂಡುವುದನ್ನು ಬಯಸುತ್ತೇವೆ. ಇದೇ ರೀತಿ, ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಸಮುದಾಯಗಳನ್ನು ದಾಖಲಿಸಿ, ತಮ್ಮ ಜೀವನಗಳನ್ನೊಳಗೊಂಡ ಪಠ್ಯಪುಸ್ತಕಗಳನ್ನು ರೂಪಿಸುವ ನಿಟ್ಟಿನಲ್ಲಿ ಭಾಗೀದಾರರಾಗಬೇಕೆಂಬುದು ನಮ್ಮ ಆಶಯ. ಶಿಕ್ಷಣದ ಪುನರ್ನಿರ್ಮಾಣದಿಂದ ಸಮಾಜದ ಪುನರ್ನಿರ್ಮಾಣವಾಗುತ್ತದೆ ಎಂಬುದು ಮರಿಯಾ ಮಾಂಟಿಸೋರಿ ಅವರ ಅಭಿಪ್ರಾಯವಾಗಿತ್ತು. ಇಲ್ಲಿ ವಿದ್ಯಾರ್ಥಿಗಳು ನಮ್ಮ ದೇಶದಲ್ಲಿನ ವಿವಿಧ ವಾಸ್ತವಿಕತೆಗಳನ್ನು ನೋಡುವ, ಆಲಿಸುವ ಹಾಗೂ ಕಲಿಯುವ ಅವಕಾಶವು ಲಭಿಸುತ್ತದೆ.
ನಮ್ಮ ವಿದ್ಯಾರ್ಥಿಗಳನ್ನು ʼಜಾಗತಿಕ ನಾಗರಿಕʼರನ್ನಾಗಿಸುವ ಧಾವಂತದಲ್ಲಿ ಅವರು ತಮ್ಮ ಸಮೀಪದಲ್ಲಿರುವ ಸುತ್ತಮುತ್ತಲಿನ ಪರಿಸ್ಥಿತಿಗಳಿಂದ ಮತ್ತು ದೊಡ್ಡ ನಗರಗಳ ಆಚೆಗಿನ ಭಾರತದಿಂದ ದೂರವಾಗುತ್ತಿದ್ದಾರೆ. ಅನೇಕ ಭಾರತಗಳೆಡೆಗಿನ ನಿರ್ಲಕ್ಷ್ಯ, ಪಠ್ಯಕ್ರಮದಲ್ಲಿ ಅವುಗಳ ಸ್ಥಾನದ ನಿರಾಕರಣೆಯಿಂದ ನಾವು, ಅವುಗಳಿಗೆ ಯಾವುದೇ ಮಹತ್ವವಿಲ್ಲವೆಂಬ ಸಂದೇಶವನ್ನು ನೀಡುತ್ತಿದ್ದೇವೆ. ʼಪರಿʼಯ ಸಂಸ್ಥಾಪಕ ಸಂಪಾದಕರಾದ ಪಿ. ಸಾಯಿನಾಥ್, ಹೀಗೆನ್ನುತ್ತಾರೆ: ʼತಮ್ಮದೇ ದೇಶದಲ್ಲಿ ವಿದೇಶೀಯರಾಗಿ ಬೆಳೆಯುತ್ತಿರುವ ಇಡೀ ಪೀಳಿಗೆಯೊಂದಿದೆ.ʼ










