ಕೆಲವೊಮ್ಮೆ ಕೇಳಿಬರುವ ಪಕ್ಷಿಗಳ ಕೂಗುಗಳನ್ನು ಬಿಟ್ಟರೆ, ಅಲ್ಲಿ ಕೇಳಿಬರುತ್ತಿದ್ದ ಏಕೈಕ ಹಿನ್ನೆಲೆ ಶಬ್ದವೆಂದರೆ, ಮಹಿಳೆಯರು ನೀರು ತುಂಬಿದ ಗದ್ದೆಯಲ್ಲಿ ಕೆಸರಿನ ನಡುವೆ ನಡೆಯುತ್ತಾ ಚಿಗುರು ಹಸಿರಿನ ಭತ್ತದ ಸಸಿಯನ್ನು ನೆಡುವ ಸದ್ದು. ಆಗ ಇದ್ದಕ್ಕಿದ್ದಂತೆ, ಐದು ಮಹಿಳೆಯರು ಸಹಜವೆನ್ನುವಂತೆ ಬಿಹು ಗೀತೆಯೊಂದನ್ನು ಹಾಡತೊಡಗಿದರು.
ಅದು ಅಸ್ಸಾಮಿ ಪಂಚಾಂಗದ ಪ್ರಕಾರ ಆಹಾರ್ ಎಂದು ಕರೆಯಲ್ಪಡುವ, ಜುಲೈ ತಿಂಗಳ ಒಂದು ದಿನ. ಸ್ಥಳೀಯವಾಗಿ ನೊಭುಹಿ ಎಂದು ಕರೆಯಲ್ಪಡುವ ಈ ದಿನವು ಇಲ್ಲಿ ಭತ್ತದ ನಾಟಿಯ ಆರಂಭವನ್ನು ಸೂಚಿಸುತ್ತದೆ. ಇದು ಭತ್ತದ ಸಸಿಗಳ ಆಗಮನವನ್ನು ಸೂಚಿಸುತ್ತದೆ. ಹೀರಾ ಸೈಕಿಯಾ ಅವರ ಗದ್ದೆಯ ಮೇಲೆ ಉರಿಯುತ್ತಿದ್ದ ಸೂರ್ಯನು ಚರ್ಮವನ್ನು ಸುಡುತ್ತಿದ್ದ. ಆದರೆ ಗಾಳಿಯಲ್ಲಿ ಒಂದಷ್ಟು ಆರ್ದ್ರತೆಯಿತ್ತು. ಮತ್ತು ಗದ್ದೆಯಲ್ಲಿದ್ದ ಮಹಿಳೆಯರು ಮಾಡುತ್ತಿದ್ದ ಕೆಲಸ ಬಹಳ ಶ್ರಮವನ್ನು ಬೇಡವಂತಹದ್ದಾಗಿತ್ತು. 52 ವರ್ಷದ ಹೀರಾ ಸೈಕಿಯಾ ಈ ಹಂಗಾಮಿನ ತನ್ನ ಮೊದಲ ದಿನದ ಗದ್ದೆ ನಾಟಿಗೆ ಸಹಾಯ ಮಾಡಲೆಂದು ನಾಲ್ವರು ಗೆಳತಿಯರನ್ನು ಒಟ್ಟುಗೂಡಿಸಿದ್ದರು. 50 ವರ್ಷದ ಗುನಿತಾ ಸೈಕಿಯಾ ತನ್ನ ಊರಿನಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. 55 ವರ್ಷದ ಅರುಣಾ ಬೋರಾ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಕೆಲಸ ಮಾಡುತ್ತಾರೆ. 35 ವರ್ಷದ ಬೃಷ್ಟಿಪರ್ಣಾ ಸೋನೋವಾಲ್ ಈ ಹಿಂದೆ ಪಂಚಾಯತ್ ಸದಸ್ಯರಾಗಿದ್ದವರು, ಮತ್ತು 35 ವರ್ಷದ ನೋಮಿ ಸೈಕಿಯಾ ಗೃಹಿಣಿ ಮತ್ತು ಕೃಷಿಕ ಮಹಿಳೆ. ಇವರೆಲ್ಲರೂ ಸೇರಿ ತಮ್ಮ ಕುಟುಂಬ ಪೋಷಣೆಯಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುವ ತಮ್ಮ ತುಂಡು ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಕೆಲಸದಲ್ಲಿ ತೊಡಗಿದ್ದರು. ಹೀರಾ ಮುಂದೆ ಸರದಿಯಂತೆ ತಮ್ಮ ಗೆಳತಿಯರ ಗದ್ದೆಗಳಿಗೆ ನಾಟಿ ಮಾಡಲು ಹೋಗಲಿದ್ದಾರೆ.






