ಹರ್ಯಾಣದ ಗ್ರಾಮೀಣ ಭಾಗಗಳಲ್ಲಿ ಹುಕ್ಕಾ ಎನ್ನುವುದು ಅಲ್ಲಿ ಜನರನ್ನು ಪರಸ್ಪರ ಬೆಸೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. “ಹುಕ್ಕಾ ಕೇ ಸಹಾರೇ ಪಂಚಾಯತ್ ರೆಯಾ ಕರ್ತಿ [ಪಂಚಾಯತಿಗಳು ಹುಕ್ಕಾದ ಸಹಾಯದಿಂದ ನಡೆಯುತ್ತಿದ್ದವು” ಎನ್ನುತ್ತಾರೆ ರೊಹ್ತಾಸ್. ಅವರು ತಾನು ಬಾಲ್ಯದಲ್ಲಿ ನೋಡುತ್ತಿದ್ದ ದೃಶ್ಯಗಳನ್ನು ನೆನಪಿಸಿಕೊಂಡು ಈ ಮಾತನ್ನು ಹೇಳುತ್ತಿದ್ದರು.
ರೊಹ್ತಾಸ್ ಎಂದಷ್ಟೇ ಗುರುತಿಸಿಕೊಳ್ಳುವ ಅವರು “ಹುಕ್ಕಾ ಚಹಾ ಅಥವಾ ನೀರಿನಂತಲ್ಲ, ಅವು ಕುಡಿದರೆ ಖಾಲಿಯಾಗಿಬಿಡುತ್ತವೆ. ಆದರೆ ಹುಕ್ಕಾದ ಒಳಗೆ ಒಮ್ಮೆ ತಂಬಾಕು ತುಂಬಿಸಿದರೆ ಅದು ಗಂಟೆಗಳ ಕಾಲ ಬರುತ್ತದೆ. ಒಂದೇ ಹುಕ್ಕಾವನ್ನು ಹಲವು ಜನರು ಹಂಚಿಕೊಂಡು ಸೇದಬಹುದು. ಇದು ಸಮಯ ಕಳೆಯುವುದಕ್ಕೂ ಸಹಾಯ ಮಾಡುತ್ತದೆ” ಎನ್ನುತ್ತಾರೆ.
“ಈಗೆಲ್ಲ ಪ್ರತೀ ಮನೆ ಚೌಪಾಲ್ ಆಗಿದೆ [ಊರಿನ ಪಂಚಾಯತಿ ಕಟ್ಟೆ]. ಪ್ರತಿ ಮನೆಯಲ್ಲೂ ನೀವು ಹುಕ್ಕಾ ಕಾಣಬಹುದು” ಎನ್ನುತ್ತಾ ಈ 40 ವರ್ಷದ ಕುಶಲಕರ್ಮಿ ನಗುತ್ತಾರೆ. ತಮ್ಮ ವಿರಾಮದಲ್ಲಿ ಪರಿಯೊಂದಿಗೆ ಮಾತನಾಡುತ್ತಿದ್ದ ಅವರು ನಡು-ನಡುವೆ ಹುಕ್ಕಾ ಸೇದುತ್ತಿದ್ದರು. 12 ವರ್ಷಗಳ ಹಿಂದೆ ಹುಕ್ಕಾ ಸೇದುವ ಉಪಕರಣವನ್ನು ತಯಾರಿಸಲು ಆರಂಭಿಸಿದಾಗಿನಿಂದ ಅವರು ಈ ಅಭ್ಯಾಸವನ್ನೂ ರೂಢಿಸಿಕೊಂಡಿದ್ದಾರೆ.
ಹುಕ್ಕಾ ಪೈಪ್ 16ನೇ ಶತಮಾನದ ಉತ್ತರ ಭಾರತದಲ್ಲಿ ಮೊಘಲ್ ಸಾಮ್ರಾಜ್ಯದ ಸಮಯದಲ್ಲಿ ಉಗಮವಾಯಿತು ಎನ್ನಲಾಗುತ್ತದೆ. ಕೆಲವು ವಿವರಣೆಗಳ ಪ್ರಕಾರ, ಮೂರನೇ ಮೊಘಲ್ ಚಕ್ರವರ್ತಿಯಾದ ಅಕ್ಬರ್ ಇದನ್ನು ಮೊದಲಿಗೆ ಬಳಸಿದವರಲ್ಲಿ ಒಬ್ಬ. ಆದರೆ, ಇತರ ಐತಿಹಾಸಿಕ ವಿವರಣೆಗಳು ಇದರ ಉಗಮವು ಇದಕ್ಕಿಂತ ಮೊದಲೇ ಮಧ್ಯ ಮತ್ತು ಪಶ್ಚಿಮ ಏಷಿಯಾದಲ್ಲಿ ಆರಂಭವಾಗಿರಬಹುದು ಎನ್ನುತ್ತವೆ.
ಯಾವುದೇ ರೀತಿಯಲ್ಲಿ, ಇದು ಹರಿಯಾಣದ ಜನರ ದೈನಂದಿನ ಜೀವನನದಲ್ಲಿ ಹಾಸುಹೊಕ್ಕಾಗಿರುವ, ಜನಪ್ರೀತಿ ಪಡೆದಿರುವ ಪರಂಪರೆ, "ನಮ್ಮ ಸಂಸ್ಕೃತಿಯ ಒಂದು ಭಾಗ" ಎಂದು ಧರಮ್ಬೀರ್ ಹೇಳುತ್ತಾರೆ. "ಹುಕ್ಕಾ ಸೇದುತ್ತಾ ದೊಡ್ಡ ದೊಡ್ಡ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ."




















