“ನಿನ್ನ ಮಗಳು ಬೆಳೆದು ನಿಂತಿದ್ದಾಳೆ, ಸುಲವಾ ಹಾಕಲು ಅವಳ ಕಿವಿಗಳನ್ನು ತೂತು ಮಾಡಿಸುವ ಯೋಚನೆ ಇಲ್ವಾ?” ಎಂದು ಹಿರಿಯ ಮಹಿಳೆಯೊಬ್ಬರು ಮಗಳ ಜೊತೆಗಿರುವ ತಾಯಿಯನ್ನು ಕೇಳುತ್ತಾರೆ. ಆಮೇಲೆ ಮಗಳ ಕಡೆಗೆ ತಿರುಗಿ, “ಬೆನ್, ಹವೆ ತರಾ ಲಗನ್ ಮಾಟೆ ಪನ್ ಅವೆಷೆ. ಸಸರಾ ಪಕ್ಷ್ವಲೇಯ್ ಸಗೈಮಾ ಕರೆಲಿ ಬೋಲಿನಿ ಮೊದತ್ ಪೂರಿ ತಾಯ್ ಗೈ ಚೇ. [ತಂಗಿ, ನಿನ್ನ ಮದುವೆ ಆದಷ್ಟು ಬೇಗ ಆಗಬೇಕು. ನಿಶ್ಚಿತಾರ್ಥದ ದಿನ ಅವರು ಕೊಟ್ಟಿದ್ದ ಗಡುವು ಮುಗಿತಾ ಬಂತು,]” ಎಂದು ಹೇಳುತ್ತಾರೆ. ಮದುವೆಯಲ್ಲಿ ಸುಲುವಾ ಧರಿಸಲು ಮುಂಚೆಯೇ ಹೆಣ್ಣುಮಕ್ಕಳ ಕಿವಿ ಚುಚ್ಚಿಸುವಂತೆ ಅವರ ತಾಯಂದಿರಿಗೆ ಎಚ್ಚರಿಸುವ ಹಿರಿಯ ಮಹಿಳೆಯರ ಇಂತಹ ಮಾತುಗಳನ್ನು ನನ್ನ ಸಮುದಾಯವಾದ ಭೋಪ ರಬಾರಿಯಲ್ಲಿ ಪದೇ ಪದೇ ನೀವು ಕೇಳಬಹುದು.
ನನ್ನ ಸೋದರಿ ನಾತಿ ಬೆನ್ ಮೋರಿಗೆ 17 ವರ್ಷವಿದ್ದಾಗ ಅವಳ ಕಿವಿ ಚುಚ್ಚಿಸಿದ್ದು ನನಗೆ ಈಗಲೂ ನೆನಪಿದೆ. ಈಗ ಅವಳಿಗೆ 24 ವರ್ಷ ಪ್ರಾಯ. ಅವತ್ತಿನಿಂದ ಒಂದು ಸೆಂಟಿಮೀಟರ್ಗಿಂತ ಹೆಚ್ಚು ದಪ್ಪ ಇರುವ ದೊಡ್ಡ ಚಿನ್ನದ ಓಲೆ ಸುಲವಾಗಳನ್ನು ಅವಳು ಧರಿಸುತ್ತಾ ಬಂದಿದ್ದಾಳೆ. ಮದುವೆಯಾಗುತ್ತಿರುವ ಹುಡುಗಿಯರಿಗೆ ಅವರ ನಿಶ್ಚಿತಾರ್ಥದ ದಿನ ಗಂಡಿನ ಕಡೆಯವರು ಸುಮಾರು ಎರಡು ತೊಲೆ (22.32 ಗ್ರಾಂ) ತೂಕದ ಈ ಜೋಡಿ ಕಿವಿಯೋಲೆಗಳನ್ನು ಕೊಡುತ್ತಾರೆ. ಈ ಓಲೆಗಳಿಗೆ ಸುಮಾರು ಎರಡು ಲಕ್ಷ ರುಪಾಯಿಗಳಾಗುತ್ತದೆ.
ಸುಲವಾ ನಮ್ಮ ಆಸ್ತಿ, ತುಂಬಾ ಅಗತ್ಯದ ಸಮಯದಲ್ಲಿ ಅದು ನಮ್ಮ ಕೈ ಹಿಡಿಯುತ್ತದೆ. ಅನೇಕ ಮನೆಗಳಲ್ಲಿ ಸಾಲ ಮಾಡಿ ಈ ಓಲೆಗಳನ್ನು ಮಾಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಇವುಗಳ ಬೆಲೆ ದುಬಾರಿಯಾಗಿ, ನಮ್ಮಂತ ಜನರಿಗೆ ಕಷ್ಟವಾಗಿದೆ. ನಾವು ಪಶುಪಾಲಕರು. ನಮ್ಮ ಊರಲ್ಲಿ ನಮ್ಮ ಸಮುದಾಯದ ಸುಮಾರು 3,000 ಜನರಿದ್ದಾರೆ. ಅವರಲ್ಲಿ ಶೇಕಡಾ 60 ರಷ್ಟು ಜನರು ಕೂಲಿ ಕೆಲಸ ಮಾಡುತ್ತಾರೆ, ಉಳಿದಂತೆ ಶೇಕಡಾ 40 ರಷ್ಟು ಜನರು ಜಾನುವಾರುಗಳನ್ನು ಸಾಕುತ್ತಾರೆ.





