ಭಗತ್ ವೃತ್ತಿ ಮಾಡುವವರಲ್ಲಿ ಹೆಚ್ಚಿನವರು ಸ್ಥಳೀಯ ಪುರುಷರು, ಅವರು ತಮ್ಮ ಸಹಾಯವನ್ನು ಕೋರುವ ಕುಟುಂಬಗಳೊಂದಿಗೆ ಉತ್ತಮ ಪರಿಚಯವನ್ನು ಹೊಂದಿರುತ್ತಾರೆ. ನಿರ್ಮಲೆಯ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದ ಕಾಲು ಜಂಗಲಿ ಕೂಡ ಕಾ ಠಾಕೂರ್ ಬುಡಕಟ್ಟಿಗೆ ಸೇರಿದವರು. ಅವರು ಕಳೆದ ಮೂರು ದಶಕಗಳಿಂದ ಸ್ಥಳೀಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. "ಈ ಆಚರಣೆಗಳು ಯಾವಾಗಲೂ ನಮ್ಮ ಬುಡಕಟ್ಟು ಸಂಸ್ಕೃತಿಯ ಮೂಲಭೂತ ಅಂಶ" ಎಂದು ಅವರು ಜಾಗರಣ್ ಸಮಯದಲ್ಲಿ ಹೇಳಿದರು. "ನಿರ್ಮಲಾರ ವಿಷಯದಲ್ಲಿ, ಈ ಜಾಗರಣದ ಮರುದಿನ ಬೆಳಿಗ್ಗೆ, ನಾವು ಹುಂಜವನ್ನು ಬಲಿ ಕೊಟ್ಟು ಅವಳು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ. ನಮಗೆ ರೋಗಿಯಸುತ್ತ ನಕಾರಾತ್ಮಕ ಶಕ್ತಿ ಕಂಡಾಗ ಮಾತ್ರಈ ಆಚರಣೆಯನ್ನು ನಡೆಸಲಾಗುತ್ತದೆ. ಆ ದುಷ್ಟಪ್ರಭಾವವನ್ನು ಹೋಗಲಾಡಿಸುವ ಮಂತ್ರಗಳು ನಮ್ಮಲ್ಲಿವೆ."
ಅದೇನೇ ಇದ್ದರೂ ಈ ಭಗತ್ ವೃತ್ತಿಯವರ ಚಿಕಿತ್ಸೆಯ ಮುಖ್ಯ ಭಾಗವೆಂದರೆ ಗಿಡಮೂಲಿಕೆಗಳು. "ಹೂವುಗಳು, ಎಲೆಗಳು, ಹುಲ್ಲು, ಮರಗಳ ತೊಗಟೆ ಮುಂತಾದ ಗಿಡಮೂಲಿಕೆಗಳನ್ನು ಸಂಗ್ರಹಿಸಲು ನಾವು ಕಾಡಿಗೆ ಹೋಗುತ್ತೇವೆ" ಎಂದು ಕಾಲೂ ಹೇಳುತ್ತಾರೆ. “ಅವುಗಳನ್ನು ಬಳಸಿ ನಾವು ಕಷಾಯ ತಯಾರಿಸುತ್ತೇವೆ ಮತ್ತು ಕೆಲವೊಮ್ಮೆ ತೊಗಟೆಯನ್ನು ಸುಟ್ಟು ಅದರ ಬೂದಿಯನ್ನು ರೋಗಿಗೆ ತಿನ್ನಿಸುತ್ತೇವೆ. ರೋಗಿಯ ಮೇಲೆ ದುಷ್ಟ ಶಕ್ತಿಗಳ ಪ್ರಭಾವ ಇದ್ದಲ್ಲಿ ಔಷಧಿ ಪ್ರಭಾವ ಬೀರುವುದಿಲ್ಲ. ಕೆಲವೊಮ್ಮೆ ಪರಿಸ್ಥಿತಿ ನಮ್ಮ ಕೈಮೀರಿ ಹೋಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ನಾವು ಅವರಿಗೆ ಆಸ್ಪತ್ರೆಗೆ ಹೋಗಲು ತಿಳಿಸುತ್ತೇವೆ.”
ಕಾಲೂ ಆರೋಗ್ಯ ಸೇವೆಗಳ ಪಾತ್ರವನ್ನು ಗೌರವಿಸುವಂತೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ವೈದ್ಯರು ಸಹ ರೋಗ ಗುಣಪಡಿಸುವಲ್ಲಿ ಈ ಸಾಂಪ್ರದಾಯಿಕ ವೈದ್ಯರ ಪಾತ್ರವನ್ನು ಅಲ್ಲಗಳೆಯುವುದಿಲ್ಲ. ಚಾಸ್ ಪ್ರದೇಶದಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ವಾಶಾಲಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪುಷ್ಪಾ ಗವಾರಿ ಹೇಳುತ್ತಾರೆ, “ನಮ್ಮ ಚಿಕಿತ್ಸೆಯಿಂದ ಅವರು ತೃಪ್ತರಾಗದಿದ್ದರೆ, ಭಗತ್ ವೈದ್ಯರ ಸಲಹೆ ಕಪಡೆಯುವಂತೆ ಹೇಳುತ್ತೇವೆ. ಭಗತ್ ವೈದ್ಯರ ಚಿಕಿತ್ಸೆಯಿಂದ ಪರಿಹಾರ ಸಿಗದೆ ಮತ್ತೆ ಆ ಜನರು ನಮ್ಮಲ್ಲಿಗೆ ಮರಳುತ್ತಾರೆ.” ಇದು ವೈದ್ಯರು ಸ್ಥಳೀಯ ಸಮುದಾಯಗಳನ್ನು ದ್ವೇಷಿಸದಿರಲು ಸಹಾಯ ಮಾಡುತ್ತದೆ ಎನ್ನುವುದು ಅವರ ಅಭಿಪ್ರಾಯ. “ಜೊತೆಗೆ ವೈದ್ಯರು ಮತ್ತು ಆರೋಗ್ಯ ಸೌಲಭ್ಯಗಳ ಮೇಲೆ ಜನರಿಗೆ ನಂಬಿಕೆ ಹುಟ್ಟುವುದೂ ಮುಖ್ಯ.”
ವಾಶಾಲಾದ 58 ವರ್ಷದಭಗತ್ ಕಾಶಿನಾಥ್ ಕದಮ್ ಹೇಳುತ್ತಾರೆ, "ಕೆಲವು ವಿವರಣೆಗೆ ಮೀರಿದ ಆರೋಗ್ಯ ಸಂಬಂಧಿ ಪರಿಸ್ಥಿತಿಗಳ ಸಂದರ್ಭಗಳಲ್ಲಿ ವೈದ್ಯರು ಕೆಲವೊಮ್ಮೆ ನಮ್ಮ ಸಹಾಯವನ್ನು ಕೋರುತ್ತಾರೆ. ಉದಾಹರಣೆಗೆ, ಕೆಲವು ತಿಂಗಳಹಿಂದೆ, ಒಬ್ಬ ಮಹಿಳೆ ಇದ್ದಕ್ಕಿದ್ದಂತೆ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಹುಚ್ಚಿಯಂತೆ ನಡೆದುಕೊಳ್ಳಲಾರಂಭಿಸಿದಳು. ನಾನು ಕೆಲವು ಮಂತ್ರಗಳನ್ನು ಓದುವುದರ ಜೊತೆಗೆ ಜೋರಾಗಿ ಕಪಾಳಕ್ಕೆ ಹೊಡೆದೆ. ಇದು ಅವಳನ್ನು ಸಹಜ ಸ್ಥಿತಿಗೆ ತರಲು ಸಹಾಯ ಮಾಡಿತು. ನಂತರ ಡಾಕ್ಟರುಗಳು ಅವಳಿಗೆ ಚಿಕಿತ್ಸೆ ನೀಡಿದರು,”