ಗುಮ್ಲಾ ಜಿಲ್ಲೆಯ ಟೆಟ್ರಾ ಗ್ರಾಮ ಪಂಚಾಯತ್ನ ಸರಪಂಚ್ ತೆರೇಸಾ ಲಾಕ್ರಾ ಅವರಿಗೆ ಸ್ಥಳೀಯ ‘ಫಲಾನುಭವಿ ಸಮಿತಿ’ಯ ಸದಸ್ಯ ಬಿಹಾರಿ ಲಾಕ್ರಾ ಏನನ್ನೋ ತಂದು ಕೈಯಲ್ಲಿಡುತ್ತಾ, "ತಗೊಳ್ಳಿ, ನಿಮ್ಮ ಉಡುಗೊರೆ" ಎಂದ. ಆ ಕ್ಷಣ ಆಕೆಯ ಕೈಯಲ್ಲಿ ಅವನು 5,000 ರೂಪಾಯಿಗಳನ್ನಿಟ್ಟಿದ್ದ. ಆದರೆ ತೆರೇಸಾರಿಗೆ ಉಡುಗೊರೆ ಎನ್ನುವುದು 5,000 ರೂಪಾಯಿ ನಗದು ಎನ್ನುವುದು ತಿಳಿದಿರಲಿಲ್ಲ. ಹಾಗೆಯೇ ಆ ಹಣವೂ ಆಕೆಯ ಕೈಗೆ ಸಿಗಲಿಲ್ಲ. ಏಕೆಂದರೆ, ಆ ಕ್ಷಣದಲ್ಲಿಯೇ ರಾಂಚಿಯ ಭ್ರಷ್ಟಾಚಾರ ನಿಗ್ರಹ ದಳದ (ACB) ತಂಡವೊಂದು ಸರಪಂಚರನ್ನು ಹಿಡಿದುಹಾಕಿ ಭ್ರಷ್ಟಾಚಾರ ತಡೆ ಕಾಯಿದೆ, 1988ರ ಅಡಿಯಲ್ಲಿ ಲಂಚ ಪಡೆದ ಆರೋಪದಡಿ ಅವರನ್ನು ಬಂಧಿಸಿತು.
ಓರಾನ್ ಬುಡಕಟ್ಟಿಗೆ ಸೇರಿದ ಆದಿವಾಸಿಯಾದ 48 ವರ್ಷದ ತೆರೇಸಾ ಅವರನ್ನು ಈ ಕ್ರಮವು ಜರ್ಜರಿತಗೊಳಿಸಿತು. ಮತ್ತು ಅವರ ಪಂಚಾಯತ್ ಇರುವ ಜಾರ್ಖಂಡ್ನ ಬಸಿಯಾ ಬ್ಲಾಕ್ನ 80,000 ಕ್ಕೂ ಹೆಚ್ಚು ಜನರನ್ನು ಆಘಾತಗೊಳಿಸಿತು. ಎಸಿಬಿ ತಂಡವೊಂದು ರಾಂಚಿಯಿಂದ ಸುಮಾರು 100 ಕಿಲೋಮೀಟರ್ ದೂರದ ಈ ಸ್ಥಳಕ್ಕೆ ಬಂದಿದ್ದು - ಎಸ್ಯುವಿಯಲ್ಲಿ ನನಗೆ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು - ಇದು ಯಾರಿಗೂ ವಿಚಿತ್ರವೆನ್ನಿಸಲಿಲ್ಲ. ಈ ಕುರಿತು ಮಾತನಾಡಿದವರೆಂದರೆ ಆಕೆಯನ್ನು ಕೋರ್ಟಿನ ನ್ಯಾಯಾಧೀಶರು ಮಾತ್ರವೇ. ಅವರು ಈ ಕುರಿತು ಸ್ಪಷ್ಟವಾಗಿ ಪ್ರತಿಕ್ರಿಯಿಸಿದ್ದರು. ಎಸಿಬಿ ತಂಡವು ಈ ಊರಿಗೆ ಬಂದು ಹೋಗಲು ಸುಮಾರು ಐದು ಗಂಟೆಗಳ ಸಮಯ ತೆಗೆದುಕೊಂಡಿದೆ. ಇದರ ಖರ್ಚು ಲಂಚದ ಮೊತ್ತದ ಅರ್ಧಕ್ಕಿಂತಲೂ ಹೆಚ್ಚು. ಇತರ ಖರ್ಚುಗಳ ವಿಷಯ ಬಿಡಿ.
ತೆರೇಸಾ ಅವರನ್ನು ಸಹ ಗ್ರಾಮ ಪಂಚಾಯತ್ ಸದಸ್ಯರು ಸ್ಥಳಕ್ಕೆ - ಬಸಿಯಾ ಬ್ಲಾಕ್ ಪಂಚಾಯತ್ ಕಚೇರಿಗೆ – ಯಾಕೆ ಕರೆದೊಯ್ದಿದ್ದರು ಎಂಬ ಕುತೂಹಲವೂ ಇರಲಿಲ್ಲ. ಅವರೇ ತರುವಾಯ ಆಕೆಯ ವಿರುದ್ಧ ಸಾಕ್ಷಿಗಳಾಗಿ ಸಾಕ್ಷ್ಯ ನೀಡಿದ ವ್ಯಕ್ತಿಗಳಾಗಿದ್ದರು. ತೆರೇಸ್ಸಾ ಅವರನ್ನು ಬಂಧಿಸಿದ ತಂಡವು ಅಲ್ಲೇ ಬ್ಲಾಕ್ ಪಂಚಾಯತ್ ಕಚೇರಿಯ ಎದುರಿಗೆ ಕೆಲವೇ ಮೀಟರ್ ದೂರದಲ್ಲಿದ್ದ ಪೋಲೀಸ್ ಠಾಣೆಗೆ ಕರೆದೊಯ್ಯಲಿಲ್ಲ, "ಅವರು ನನ್ನನ್ನು 10-15 ಕಿಲೋಮೀಟರ್ ದೂರದಲ್ಲಿರುವ ಕಮ್ದಾರಾ ಬ್ಲಾಕ್ನಲ್ಲಿರುವ ಪೊಲೀಸ್ ಠಾಣೆಗೆ ಕರೆದೊಯ್ದರು."
ಇದು ನಡೆದಿದ್ದು 2017ರ ಜೂನ್ ಸುಮಾರಿಗೆ.
12 ತರಗತಿ ಓದಿರುವ ಅವರು ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾ, “ಬಾಸಿಯಾ ಪೊಲೀಸ್ ಠಾಣೆಯಲ್ಲಿ ಎಲ್ಲರಿಗೂ ನನ್ನ ಪರಿಚಯವಿತ್ತು. ನಾನು ಅಪರಾಧಿಯಲ್ಲವೆನ್ನುವುದು ಅವರೆಲ್ಲರಿಗೂ ತಿಳಿದಿತ್ತು” ನಂತರ ಅವರ ಪ್ರಕರಣವು ರಾಂಚಿಯ ವಿಶೇಷ ನ್ಯಾಯಾಲಯದ ಮುಂದೆ ಬಂದಿತು






