“ಇಲ್ಲಿ ವಾಸನೆ ಬರುತ್ತೆ, ಗಲೀಜು ಮಾಡ್ತೀರಿ, ಎಲ್ಲಿ ನೋಡಿದ್ರೂ ಕಸ ಇರುತ್ತೆ ಎಂದು ಅವರು ಹೇಳುತ್ತಾರೆ” ಸಾಲುಗಟ್ಟಿ ನಿಂತಿರುವ ಮೀನು ಪೆಟ್ಟಿಗೆಗಳು ಮತ್ತು ಮಾರಾಟಗಾರರನ್ನು ತೋರಿಸುತ್ತಾ ಎನ್ ಗೀತಾ ಹೇಳುತ್ತಾರೆ. “ಆದರೆ ಏನು ಮಾಡುವುದು? ಈ ಕಸ, ಈ ವಾಸನೆಯಲ್ಲೇ ನಮ್ಮ ಬದುಕಿದೆ. ನಮ್ಮ ಸಂಪಾದನೆ ಇದರಿಂದ ನಡೆಯಬೇಕು. ಇದನ್ನೆಲ್ಲ ಬಿಟ್ಟು ಎಲ್ಲಿಗೆ ಹೋಗುವುದು?” ಎಂದು ಎಂದು 42 ವರ್ಷದ ಈ ಮಹಿಳೆ ಕೇಳುತ್ತಾರೆ.
ನಾವು ನೊಚ್ಚಿಕುಪ್ಪಂ ಪ್ರದೇಶದಲ್ಲಿನ ತಾತ್ಕಾಲಿಕ ಮೀನು ಮಾರುಕಟ್ಟೆಯ ಬಳಿ ಇದ್ದೆವು. ಇದು ಮರೀನಾ ಬೀಚ್ ಉದ್ದಕ್ಕೂ ಸುಮಾರು 2.5 ಕಿ.ಮೀ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ ಮೀನು ಮಾರಾಟಗಾರ ಮಹಿಳೆ ʼಅವರುʼ ಎಂದು ಹೇಳುತ್ತಿರುವುದು ನಗರದ ಸೌಂದರ್ಯೀಕರಣದ ಹೆಸರಿನಲ್ಲಿ ಮಾರಾಟಗಾರರು ಇಲ್ಲಿಂದ ಹೋಗುವುದನ್ನು ನೋಡಲು ಬಯಸುವ ಗಣ್ಯ ಶಾಸಕರು ಮತ್ತು ಸರ್ಕಾರಿ ಅಧಿಕಾರಿಗಳು. ಗೀತಾ ಅವರಂತಹ ಮೀನುಗಾರರ ಪಾಲಿಗೆ ನೊಚ್ಚಿಕುಪ್ಪಂ ಎನ್ನುವುದು ಅವರ ಊರು. ಸುನಾಮಿ ಮತ್ತು ಚಂಡಮಾರುತಗಳ ನಡುವೆಯೂ ಅವರು ಇಲ್ಲಿ ಬಾಳಿ ಬದುಕಿದ್ದಾರೆ.
ಮಾರುಕಟ್ಟೆಯ ಗಜಿಬಿಜಿ ಆರಂಭವಾಗುವ ಮೊದಲೇ ಗೀತಾ ತನ್ನ ಅಂಗಡಿಯನ್ನು ಸಜ್ಜುಗೊಳಿಸುವಲ್ಲಿ ನಿರತರಾಗಿದ್ದರು. ಮೊದಲಿಗೆ ಕೆಲವು ಕ್ರೇಟುಗಳನ್ನು ಕವುಚಿ ಇಟ್ಟು ಅದರ ಮೇಲೆ ಹಲಗೆಯೊಂದನ್ನಿಟ್ಟು ಆ ಹಲಗೆಯ ಮೇಲೆ ನೀರು ಚಿಮುಕಿಸುತ್ತಾರೆ. ಅದರ ಮೇಲೆ ಇನ್ನೊಂದು ಪ್ಲಾಸ್ಟಿಕ್ ಬೋರ್ಡ್ ಇರಿಸುತ್ತಾರೆ. ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಾಡುವ ಅವರು, ಎರಡು ದಶಕಗಳ ಹಿಂದೆ ಮದುವೆಯಾದಾಗಿನಿಂದ ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಆದರೆ ಸುಮಾರು ಒಂದು ವರ್ಷದ ಹಿಂದೆ, ಏಪ್ರಿಲ್ 11, 2023 ರಂದು, ಅವರಿಗೆ ಮತ್ತು ಇಲ್ಲಿನ ಲೂಪ್ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವ ಇತರ ಮುನ್ನೂರು ಮೀನು ಮಾರಾಟಗಾರರಿಗೆ ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ಈ ಸ್ಥಳವನ್ನು ತೆರವುಗೊಳಿಸುವಂತೆ ಸೂಚಿಸಿ ನೋಟಿಸ್ ನೀಡಿದೆ. ಒಂದು ವಾರದೊಳಗೆ ರಸ್ತೆಯನ್ನು ತೆರವುಗೊಳಿಸುವಂತೆ ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿತ್ತು.
"ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಸರಿಯಾದ ಕಾನೂನು ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಲೂಪ್ ರಸ್ತೆಯಲ್ಲಿನ ಪ್ರತಿಯೊಂದು ಅತಿಕ್ರಮಣವನ್ನು (ಮೀನು ಮಾರಾಟಗಾರರು, ಅಂಗಡಿಗಳು, ನಿಲ್ಲಿಸಿರುವ ವಾಹನಗಳು) ತೆರವುಗೊಳಿಸಬೇಕು. ಇಡೀ ರಸ್ತೆ ಭಾಗ ಮತ್ತು ಪಾದಚಾರಿ ಮಾರ್ಗವನ್ನು ಅತಿಕ್ರಮಣದಿಂದ ಮುಕ್ತವಾಗಿಸಿ ಮುಕ್ತ ಸಂಚಾರ ಮತ್ತು ಪಾದಚಾರಿಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಪೊಲೀಸರು ಪಾಲಿಕೆಗೆ ಸಹಾಯ ಮಾಡಬೇಕು" ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.






















