ಯಾರಿಗೂ ಅವನ ಹೆಸರೇ ಗೊತ್ತಿರಲಿಲ್ಲ. ಅವನು ಆ ಮೊಹಲ್ಲಾದ ಒಬ್ಬ ಹುಚ್ಚು ಮುದುಕನಾಗಿದ್ದನಷ್ಟೇ. ಅವನು ಹಗಲೆಲ್ಲಾ ನಗುತ್ತಾ, ರಾತ್ರಿಯಿಡೀ ಅಳುತ್ತಾ, ಸಿಂಧಿ ಅಥವಾ ಉರ್ದುವಿನಲ್ಲಿ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಿದ್ದರಿಂದ ಜನ ಅವನನ್ನು ಹುಚ್ಚ ಎಂದು ಕರೆಯುತ್ತಿದ್ದರು. ಆದರೂ, ಅವನು ಆಡುವ ಮಾತುಗಳು ಬಹುತೇಕ ಅರ್ಥವಿಲ್ಲದ ಬಡಬಡಿಕೆಯಾಗಿರುತ್ತಿತ್ತು. ಆದರೆ ಅವನು ಗಾಲಿಬ್ನ ಸಾಲುಗಳನ್ನು ಹೇಳುವಾಗ ಮಾತ್ರ ಹಾಗನ್ನಿಸುತ್ತಿರಲಿಲ್ಲ:
ಕೋಯಿ ವೀರಾನಿ ಸಿ ವೀರಾನಿ ಹೈ
ದಶ್ಟ್ ಕೋ ದೇಖ್ ಕೆ ಘರ್ ಯಾದ್ ಆಯಾ
(ಈ ಮರುಭೂಮಿಯಲ್ಲಿ ಇದೆಂತಹ ಬಿಕೋ ಎನ್ನುವ ಮೌನ, ಈ ಹಾಳುಬಿದ್ದ ಜಾಗವನ್ನು ನೋಡುವಾಗ ನನ್ನ ಮನೆಯ ನೆನಪಾಗುತ್ತಿದೆ.)
ಅವರು ಹಾಡುವುದನ್ನು ಕೇಳುವಾಗ, ಒಂದು ಕ್ಷಣದ ಮಟ್ಟಿಗೆ ವಿವೇಕ ಮತ್ತು ಹುಚ್ಚುತನದ ನಡುವಿನ ಅಂತರ ಕಿರಿದಾದಂತೆ ಕಾಣುತ್ತಿತ್ತು.
ದಶಕಗಳಿಂದ ಅವನ ಮನೆಯಾಗಿದ್ದ ಆ ಜಾಗ, ಈಗ ಮೊಹಲ್ಲಾದ ದೂರದ ಮೂಲೆಯಲ್ಲಿದೆ. ಅದು ನಿರ್ಜನವಾದ, ಶಿಥಿಲಗೊಂಡ ಮನೆಯೊಂದರ ಎತ್ತರದ ಜಗುಲಿಯಾಗಿದ್ದು, ಅಲ್ಲಿ ಅವನು ಎರಡು ಬೀದಿ ನಾಯಿಗಳೊಂದಿಗೆ ಕಾವಲು ಕಾಯುತ್ತಿದ್ದನು.
ಅವನು ಯಾವಾಗ ಇಲ್ಲಿಗೆ ಬಂದು ಇದನ್ನು ತನ್ನ ಮನೆಯನ್ನಾಗಿ ಮಾಡಿಕೊಂಡನೆನ್ನುವುದು ಯಾರಿಗೂ ತಿಳಿದಿರಲಿಲ್ಲ. ಅವನ ವಯಸ್ಸು ಎಷ್ಟೆನ್ನುವುದು ಸಹ ಯಾರಿಗೂ ಗೊತ್ತಿರಲಿಲ್ಲ. ಆದರೆ, ಭಾರತದ ಮುದುಡಿದ ನಕ್ಷೆಯಂತಿದ್ದ ಅವನ ಸುಕ್ಕುಗಟ್ಟಿದ ಮುಖದ ಮೇಲೆ, ಮುಪ್ಪು ಎದ್ದು ಕಾಣುತ್ತಿತ್ತು.
ಅವನ ಬಗ್ಗೆ ಹತ್ತು ಹಲವು ಕಥೆಗಳಿದ್ದವು. ಕೆಲವರು ಆತ ದೇಶ ವಿಭಜನೆಯ ಸಮಯದಲ್ಲಿ ತನ್ನ ಕುಟುಂಬದಿಂದ ಬೇರ್ಪಟ್ಟ ಎಂದು ಹೇಳಿದರೆ, ಇನ್ನು ಕೆಲವರು ಆ ನಂತರ ನಡೆದ ಗಲಭೆಗಳಲ್ಲಿ ಆತನ ಕುಟುಂಬದ ಹತ್ಯೆಯಾಯಿತು ಎಂದು ಹೇಳುತ್ತಿದ್ದರು. ಮತ್ತೆ ಕೆಲವರು, ಆತ ಹಿಂದೊಮ್ಮೆ ಉದ್ಯಮಿಯಾಗಿದ್ದನೆಂದೂ, ಆತನ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ದೇಶದಿಂದ ಗಡಿಪಾರು ಮಾಡಿದ ನಂತರ ಆತ ತನ್ನ ಸಂಪತ್ತು ಮತ್ತು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡನೆಂದೂ ಹೇಳುತ್ತಿದ್ದರು. ಆತನ ಗಡ್ಡ ಮತ್ತು ತಲೆಗೆ ಸುತ್ತಿಕೊಂಡಿದ್ದ ಕೊಳಕು ಹಸಿರು ಬಟ್ಟೆಯನ್ನು ನೋಡಿ ಆತ ಮುಸ್ಲಿಮನಾಗಿರಬಹುದು ಎಂದು ಕೆಲವರು ಅಂದುಕೊಳ್ಳುತ್ತಿದ್ದರು. ಅಥವಾ, ಪ್ರತಿದಿನ ಸಂಜೆ ತನ್ನ ಹರಿದ ಹಾಸಿಗೆಯ ಪಕ್ಕದ ಚಿಕ್ಕ ಗೂಡಿನಲ್ಲಿ ದೀಪ ಹಚ್ಚಿ, ಪ್ರಾರ್ಥನೆಯಂತೆ ಏನನ್ನೋ ಗೊಣಗುತ್ತಿದ್ದ ಆತ ಹಿಂದೂ ಇರಬಹುದು ಎಂದು ಇನ್ನೂ ಕೆಲವರು ಭಾವಿಸಿದ್ದರು. ವಿಷಯ ಏನೇ ಇರಲಿ, ಜನರು ಅವನ ಮೇಲೆ ಕರುಣೆ ತೋರುತ್ತಿದ್ದರು ಮತ್ತು ಮಿಕ್ಕಿದ ಆಹಾರವನ್ನು ನೀಡುತ್ತಿದ್ದರು. ಆಹಾರ ಅಥವಾ ದಿನಸಿ ಸಿಗುವುದೇ ಕಷ್ಟವಿದ್ದ ಸಮಯದಲ್ಲೂ, ಜನರು ತಮ್ಮ ಬಳಿ ಇದ್ದದರಲ್ಲೇ ಸ್ವಲ್ಪ ಭಾಗವನ್ನು ಅವನಿಗೆ ಕೊಡುತ್ತಿದ್ದರು.
ಆದರೆ ಕಳೆದ ಕೆಲವು ದಿನಗಳಿಂದ ಆತ ಒಂದು ತುತ್ತು ಅನ್ನವನ್ನೂ ತಿಂದಿರಲಿಲ್ಲ. ಮೊದಲಿನಂತೆ ಬೀದಿಗಳಲ್ಲಿ ಓಡಾಡುವುದನ್ನೂ ನಿಲ್ಲಿಸಿದ್ದನು. ಅವನನ್ನು ಅಲ್ಲಿಯೇ ಸರಪಳಿಯಲ್ಲಿ ಕಟ್ಟಿಹಾಕಿದಂತೆ ಕಾಣುತ್ತಿತ್ತು. ಆತ ದೀಪವನ್ನೂ ಹಚ್ಚಲಿಲ್ಲ, ಗಾಲಿಬನನ್ನೂ ನೆನಪಿಸಿಕೊಳ್ಳಲಿಲ್ಲ. ಯಾರನ್ನೂ ತನ್ನ ಹತ್ತಿರ ಬರಲು ಬಿಡದೆ, ಆ ಮೂಲೆಯಲ್ಲಿ ಮತ್ತಷ್ಟು ಮುದುರಿಕೊಂಡಿದ್ದನು. ಆತ ಸಾಯುವವರೆಗೂ ಯಾರೂ ಹತ್ತಿರ ಹೋಗಲಾಗಲಿಲ್ಲ. ತಾನು ಮುಳ್ಳುತಂತಿಯನ್ನು ನುಂಗಿದ್ದು, ಅದು ತನ್ನ ಗಂಟಲಲ್ಲಿ ಸಿಲುಕಿಕೊಂಡಿದೆ ಎಂದು ಆತ ದೂರುತ್ತಿದ್ದದ್ದನ್ನು ಕೇಳಿಸಿಕೊಂಡಿರುವುದಾಗಿ ಕೆಲವರು ಹೇಳಿದರು. ಅದು ಕೋವಿಡ್ ಇರಬೇಕೆಂದು ಇನ್ನೊಬ್ಬರು ಹೇಳಿದರು.


