2021ರ ಡಿಸೆಂಬರ್ ತಿಂಗಳ ಒಂದು ಮುಂಜಾನೆ. ಮೈಕೊರೆಯುವ ಚಳಿ. ಮಹಾರಾಷ್ಟ್ರದ ಸೋಲಾಪುರದಲ್ಲಿ ರಸ್ತೆಯಲ್ಲಿ ಮಂಜು ಕವಿದಿತ್ತು. ಅಮರ್ ತೋರ್ಬೋಲೆಯವರು 70 ಕಿಲೋಮೀಟರ್ ದೂರದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಹೊರಟಿದ್ದರು. ಕೈಯಲ್ಲಿ ಒಂದು ಡೀಸೆಲ್ ಕ್ಯಾನ್ ಮತ್ತು ಒಂದು ಬೆಂಕಿ ಪೊಟ್ಟಣ ಇತ್ತು.
ಕಚೇರಿಯನ್ನು ತಲುಪಿದ ಅಮರ್ ತೋರ್ಬೋಲೆ ತಮ್ಮ ಬೈಕನ್ನು ನಿಲ್ಲಿಸಿದರು. ಡೀಸೆಲ್ ಕ್ಯಾನ್ನ ಮುಚ್ಚಳವನ್ನು ನಿಧಾನವಾಗಿ ತೆರೆದರು. ಪೊಲೀಸ್ ಠಾಣೆಯತ್ತ ನಡೆದುಕೊಂಡು ಹೋಗುತ್ತಲೇ ತನ್ನ ದೇಹದ ಮೇಲೆ ಡೀಸೆಲ್ ಸುರಿದುಕೊಂಡರು. ಬೆಂಕಿಕಡ್ಡಿಯನ್ನು ಗೀರಿ ಹೊತ್ತಿಸಿದರು. ತಕ್ಷಣ ನೀರು ಸುರಿದು ಬೆಂಕಿ ಆರಿಸಿದ ಸದ್ದು ಕೇಳಿತು. ಆಮೇಲೆ ಪೊಲೀಸರು ಓಡೋಡಿ ಬಂದರು.
ಈ ಘಟನೆ ನಡೆದ ಎರಡು ತಿಂಗಳುಗಳ ಹಿಂದೆ, ಸೋಲಾಪುರ ಜಿಲ್ಲೆಯ ಬಾರ್ಶಿ ಟೌನ್ನ ಸಾಲ ವಸೂಲು ಮಾಡುವ ಏಜೆಂಟ್ಗಳು 38 ವರ್ಷದ ತೋರ್ಬೋಲೆ ಹಾಗೂ ಅವರ ಕುಟುಂಬಕ್ಕೆ ಸಾಲ ತೀರಿಸುವಂತೆ ನಿರಂತರವಾಗಿ ಧಮ್ಕಿ ಹಾಕುತ್ತಿದ್ದರು. ತೆಗೆದುಕೊಂಡ ಸಾಲದ ಐದು ಪಟ್ಟು ಹೆಚ್ಚಿನ ಸಾಲದ ಹೊರೆಯನ್ನು ಅವರ ಮೇಲೆ ಹೊರಿಸಿದ್ದರು. ತಮ್ಮನ್ನು ವಂಚಿಸಿದ ವ್ಯಕ್ತಿಗಳು ಪ್ರಭಾವಿ ರಾಜಕಾರಣಿಗಳ ಸಂಪರ್ಕ ಹೊಂದಿದ್ದ ಕಾರಣ, ಈ ಪ್ರಕರಣದ ತನಿಖೆ ನಡೆಸಲು ಪೊಲೀಸರು ನಿರಾಕರಿಸಿದ್ದರು ಎಂದು ತೋರ್ಬೋಲೆ ಆರೋಪಿಸಿದರು.
ತೋರ್ಬೋಲೆ ಮರಾಠ ಸಮುದಾಯಕ್ಕೆ ಸೇರಿದವರು. ಒಂದು ವರ್ಷದ ಹಿಂದೆ, 2020ರ ಮೇ ತಿಂಗಳಲ್ಲಿ ತಮ್ಮ ತಿಂಡಿ ತಿನಿಸಿನ ವ್ಯಾಪಾರವನ್ನು ವಿಸ್ತರಿಸಲು ನಿರ್ಧರಿಸಿದರು. ತಮ್ಮ ಉಳಿತಾಯದ ದೊಡ್ಡ ಮೊತ್ತವನ್ನು ಬಳಸಿ ಒಂದು ಜಾಗವನ್ನು ಖರೀದಿಸಿದ್ದರು. ಹಿಂದಿನಿಂದಲೂ ತಮ್ಮ ಅಂಗಡಿಯಲ್ಲಿ ಪೊಹಾ ಮತ್ತು ವಡಾ ಮುಂತಾದ ತಿಂಡಿಗಳನ್ನು ಮಾರುತ್ತಿದ್ದರು. ಅದರ ಜೊತೆಗೆ ಮಸಾಲೆ ಪದಾರ್ಥಗಳನ್ನೂ ಮಾರುವುದು ಅವರ ಯೋಜನೆಯಾಗಿತ್ತು. ಅದಕ್ಕಾಗಿ ಆ ಜಾಗದಲ್ಲಿ ಒಂದು ಗೋದಾಮು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದರು.
ಗೋದಾಮು ಕಟ್ಟಲು ಹಣ ಬೇಕು. ಅದಕ್ಕಾಗಿ ತೋರ್ಬೋಲೆ 5 ಲಕ್ಷ ರುಪಾಯಿ ಸಾಲ ತೆಗೆದುಕೊಳ್ಳಲು ನಿರ್ಧರಿಸಿದರು. ಇವರು ಹಿಂದೆ ಕೆಲಸ ಮಾಡುತ್ತಿದ್ದ ಯುವರಾಜ್ ಬರಂಗುಲೆ ಎಂಬವರ ಬಿಸಿನೆಸ್ ಪಾರ್ಟ್ನರ್ ಗಣೇಶ್ ಬರಂಗುಲೆ ಅವರು ಶಿವ ಶಕ್ತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ನ ಶಾಖಾ ವ್ಯವಸ್ಥಾಪಕರಾಗಿದ್ದರು. ಅವರ ಬ್ಯಾಂಕ್ನಲ್ಲಿಯೇ ಸಾಲಕ್ಕೆ ಅರ್ಜಿ ಸಲ್ಲಿಸಿದರು.
ಮೊದಲೇ ಪರಿಚಯ ಇದ್ದರಿಂದ ಬ್ಯಾಂಕನ್ನು ಇವರು ನಂಬಿದರು. ಹಾಗಾಗಿ “ಹಿಂದಿನ ಅರ್ಜಿಯಲ್ಲಿ ಒಂದು ತಪ್ಪಾಗಿದೆ,” ಎಂದು, ದಾಖಲೆಗಳಿಗೆ ಮತ್ತೊಮ್ಮೆ ಸಹಿ ಹಾಕುವಂತೆ ಗಣೇಶ್ ಬರಂಗುಲೆ ಹೇಳಿದಾಗ ಯಾವುದೇ ಅನುಮಾನ ಇಲ್ಲದೆ ಮತ್ತೆ ಸಹಿ ಹಾಕಿದರು. ತೋರ್ಬೋಲೆ ಮತ್ತು ಅವರ ಪತ್ನಿ ಇದನ್ನು ಸಾಮಾನ್ಯ ಬ್ಯಾಂಕ್ ಪ್ರಕ್ರಿಯೆಯೆಂದು ನಂಬಿದ್ದರು.
2020ರ ಜುಲೈ ಆರಂಭದಲ್ಲಿ, ಸಾಲ ಮಂಜೂರಾಗಿದೆ ಎಂದು ಗಣೇಶ್ ಅವರು ತೋರ್ಬೋಲೆಯವರಿಗೆ ತಿಳಿಸಿದರು. ಜೊತೆಗೆ, ಸಾಲದ ಕಂತುಗಳ ಮರುಪಾವತಿಗೆ ಭದ್ರತೆಯಾಗಿ ಸಹಿ ಮಾಡಿರುವ 10 ಖಾಲಿ ಚೆಕ್ಗಳನ್ನು ಠೇವಣಿ ಇಡುವಂತೆ ಹೇಳಿದರು.
ಈ ಗಂಡ-ಹೆಂಡತಿ ಯಾವುದೇ ಮರುಪ್ರಶ್ನೆ ಕೇಳದೆ ಅವರು ಹೇಳಿದಂತೆ ಮಾಡಿದರು. “ನಮ್ಮ ನಡುವೆ ಒಳ್ಳೆಯ ಸಂಬಂಧ ಇತ್ತು. ನಮಗೆ ಅವರ ಮೇಲೆ [ಗಣೇಶ್ ಮತ್ತು ಯುವರಾಜ್ ಮೇಲೆ] ಸಂಪೂರ್ಣ ನಂಬಿಕೆ ಇತ್ತು,” ಎಂದು 34 ವರ್ಷ ಪ್ರಾಯದ ಸುಜಾತಾ ತೋರ್ಬೋಲೆ ಹೇಳಿದರು.
ಆ ನಂಬಿಕೆ ಉಳಿದದ್ದು ಕೇವಲ ಒಂದು ವರ್ಷದ ವರೆಗೆ ಮಾತ್ರ. ಬಳಿಕ ಸಾಲ ವಸೂಲು ಮಾಡುವ ಏಜೆಂಟ್ಗಳು ಅವರ ಮನೆಗೆ ನುಗ್ಗಿದರು. 25 ಲಕ್ಷ ರುಪಾಯಿಯ ಗೃಹಸಾಲದ ಕಂತುಗಳನ್ನು ತೋರ್ಬೋಲೆ ಪಾವತಿಸದಿದ್ದರೆ ಬ್ಯಾಂಕಿನವರು ಬಂದು ಆಸ್ತಿಯನ್ನು ಜಪ್ತಿ ಮಾಡುತ್ತಾರೆ ಎಂದು ಸುಜಾತಾ ಅವರಿಗೆ ಬೆದರಿಕೆ ಹಾಕಿದರು. “ನನಗೆ ಏನಾಗುತ್ತಿದೆ ಎಂಬುದೇ ಅರ್ಥವಾಗಲಿಲ್ಲ. ತುಂಬಾ ಗೊಂದಲದಲ್ಲಿದ್ದೆ,” ಎಂದು ಅವರು ಹೇಳುತ್ತಾರೆ.











