1984ನೇ ಇಸವಿಯಲ್ಲಿ (ಇದೇ ವರ್ಷ ಫ್ರಂಟ್ ಲೈನ್ ಪತ್ರಿಕೆ ಹುಟ್ಟಿದ್ದು) ನಾನು ರೈತರ ಮನೆಗೆ ಭೇಟಿ ನೀಡುತ್ತಿದ್ದ ಸಂದರ್ಭಗಳಲ್ಲಿ ನನ್ನನ್ನು ಮೊದಲು ಭೇಟಿಯಾಗುತ್ತಿದ್ದದ್ದು ಒಂದು ಲೋಟ ತಾಜಾ ಹಾಲು. ಪಶ್ಚಿಮ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ, ಹೊರಡುವಾಗಲೂ ನಿಮಗೆ ಒಂದು ಲೋಟ ಹಾಲನ್ನು ನೀಡಲಾಗುತ್ತದೆ. ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಕೆಲವೊಮ್ಮೆ ಬೆಳ್ಳಿ ಲೋಟದಲ್ಲಿ ಹಾಲು ನೀಡಲಾಗುತ್ತಿತ್ತು – ಅತಿಥಿಗೆ ಗೌರವ ನೀಡುವ ಸಲುವಾಗಿ ಮತ್ತು ರೈತ ತನ್ನ ಪ್ರತಿಷ್ಠೆಯನ್ನು ತೋರಿಸಲು.
ತಮಿಳುನಾಡಿನ ಕೃಷಿ ಕುಟುಂಬಗಳಲ್ಲಿ, ನಿಮಗೆ ಹಿತ್ತಾಳೆ ಲೋಟದಲ್ಲಿ ಹಾಲು ಕೊಡಲಾಗುತ್ತದೆ. ಕೆಲವೊಮ್ಮೆ ಆ ಹಿತ್ತಾಳೆ ಲೋಟದಲ್ಲಿ ಅದ್ಭುತವೆನ್ನಿಸುವ ಕಾಫಿ ಇರುವ ಸಾಧ್ಯತೆಯೂ ಇರುತ್ತದೆ. 1990ರ ಹೊತ್ತಿಗೆ ಹಲವು ರಾಜ್ಯಗಳಲ್ಲಿ ಬೆಳ್ಳಿ ಲೋಟದ ಜಾಗಕ್ಕೆ ಸ್ಟೇನ್ಲೆಸ್ ಸ್ಟೀಲ್ ಲೋಟಗಳು ಬಂದು ಕುಳಿತಿದ್ದವು. 1991ರ ನಂತರ ರೈತರು ಹಾಲನ್ನೇನೋ ಕೊಡುತ್ತಿದ್ದರು, ಆದರೆ ಈಗ ಅದನ್ನು ಒಡೆದ ಕಪ್ಪುಗಳಲ್ಲಿ ಕೊಡತೊಡಗಿದರು. 1990ರ ದಶಕ ಮಧ್ಯಭಾಗಕ್ಕೆ ಬರುವಾಗ ನನಗೆ ಗಾಜಿನ ಲೋಟಗಳಲ್ಲಿ ಹಾಲು ಸಿಗುತ್ತಿತ್ತು.
2000 ಇಸವಿ ಸುಮಾರಿಗೆ ಹಾಲಿನ ಜಾಗವನ್ನು ಚಹಾ ಆಕ್ರಮಿಸಿತ್ತು. ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ 2003-04ರ ವೇಳೆಗೆ ಹಾಲು ಹಾಕದ ಕಪ್ಪು ಚಹ ಕೊಡಲಾಗುತ್ತಿತ್ತು. ಪ್ರೀತಿ ಮತ್ತು ಗೌರವದ ಪರಂಪರೆಯಂತಿದ್ದ ಚಹಾದಲ್ಲಿನ ಸಕ್ಕರೆಯ ಪ್ರಮಾಣವೂ ಕುಗ್ಗುತ್ತಲೇ ಇತ್ತು.ಆ ದಶಕದ ಮಧ್ಯಭಾಗದಲ್ಲಿ ಗಾಜಿನ ಲೋಟವೂ ಕಣ್ಮರೆಯಾಯಿತು. ಅದರ ಜಾಗಕ್ಕೆ ರೈಲು ಮತ್ತು ಬಸ್ಸು ನಿಲ್ದಾಣಗಳಲ್ಲಿನ ಅಂಗಡಿಗಳಲ್ಲಿ ನೀಡಲಾಗುವ ತೆಳುವಾದ ಸಣ್ಣ ಪ್ಲಾಸ್ಟಿಕ್ ಲೋಟ ಬಂತು. ಅದರಲ್ಲಿ ಕಪ್ಪು ಚಹಾ ಕೊಡುತ್ತಿದ್ದರು.
20218ರಲ್ಲಿ ನಾನು ನಾನು ಸ್ವಾತಂತ್ರ್ಯ ಹೋರಾಟಗಾರ ಗಣಪತಿ ಬಾಳ್ ಯಾದವ್ ಅವರನ್ನು ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ಅವರ ಮನೆಯಲ್ಲಿ ಭೇಟಿಯಾದೆ. ಕೆಲವು ಗಂಟೆಗಳ ಕಾಲ ನಡೆದ ಸಂದರ್ಶನದ ನಂತರ, ಅವರು ನನಗೆ ಒಂದು ಲೋಟ ಹಾಲನ್ನು ಕೊಟ್ಟರು. ಅದು ಅಲ್ಯೂಮಿನಿಯಂ ಲೋಟದಲ್ಲಿತ್ತು.

















