ವಿಕಾಸ್ ಕುಮಾರ್ ಕೋವಿಡ್ -19 ಸಾಂಕ್ರಾಮಿಕ ಪಿಡುಗಿನ ಕಾರಣದಿಂದಾಗಿ ಸೈನ್ಯಕ್ಕೆ ಸೇರುವ ಸಲುವಾಗಿ ಪಡೆಯುತ್ತಿದ್ದ ದೈಹಿಕ ಸಾಮರ್ಥ್ಯ ತರಬೇತಿಯನ್ನು ನಿಲ್ಲಿಸಬೇಕಾಯಿತು. 2022ರ ಆರಂಭದಲ್ಲಿ ಅವರು ತನ್ನದೇ ರೀತಿಯಲ್ಲಿ ಮತ್ತೆ ತರಬೇತಿಯನ್ನು ಆರಂಭಿಸಿದರು. ಇದರ ಭಾಗವಾಗಿ ಅವರು ಆರ್ರಾಹ್ ವಿಮಾನ ನಿಲ್ದಾಣದ ಮೈದಾನದಲ್ಲಿರುವ 40 ಮೀಟರ್ ಟ್ರ್ಯಾಕಿನಲ್ಲಿ 4ರಿಂದ 5 ಸುತ್ತು ಓಡುವುದನ್ನು ಸಹ ಮಾಡುತ್ತಿದ್ದರು. ಇದು ಒಟ್ಟು 1.6 ಕಿಲೋಮೀಟರ್ ದೂರ. "ನಾನು ಆ ದೂರವನ್ನು ಸುಮಾರು 5 ನಿಮಿಷ 20 ಸೆಕೆಂಡುಗಳಿಂದ 5 ನಿಮಿಷ 25 ಸೆಕೆಂಡುಗಳಲ್ಲಿ ಮುಗಿಸುತ್ತೇನೆ" ಎಂದು ಅವರು ಹೇಳುತ್ತಾರೆ.
ನಂತರ ಅವರು ದಿನಕ್ಕೆ 5-6 ಬಾರಿ ತಮ್ಮ ಓಟವನ್ನು ಪುನರಾವರ್ತಿಸುತ್ತಿದ್ದರು. ಹೀಗೆ ಓಡುವಾಗ ಸಮಯದ ಮೇಲೆ ಕಣ್ಣಿಟ್ಟಿರುತ್ತಿದ್ದರು. ಇದರ ಜೊತೆಗೆ ಅವರು ವೇಗವಾಗಿ ಒಂದೇ ಬಾರಿಗೆ 8-10 ಕ್ವಿಕ್ ಪುಲ್ ಮಾಡುತ್ತಿದ್ದರು. ಇದಲ್ಲದೆ ಸ್ಕ್ವಾಟ್, ಪುಶ್ - ಅಪ್ ರೀತಿಯ ಹಲವು ವ್ಯಾಯಾಮಗಳನ್ನು ಸಹ ಮಾಡುತ್ತಿದ್ದರು. “ನಾನು ಸೈನ್ಯದ ಫಿಸಿಕಲ್ ಫಿಟ್ನೆಸ್ ಟೆಸ್ಟಿನಲ್ಲಿ ಭಾಗವಹಿಸಿದ್ದರೆ [ಸೇನಾ ನೇಮಕಾತಿ] ನನ್ನ ಎದೆಯ ಮೇಲೆ ʼಎಕ್ಸಲೆಂಟ್ʼ ಎನ್ನುವ ಗುರುತು ಬಿದ್ದಿರುತ್ತಿತ್ತು” ಎಂದು ಅವರು ಹೇಳುತ್ತಾರೆ. ಅಭ್ಯರ್ಥಿಯೊಬ್ಬ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಓಟದ ಗುರಿಯನ್ನು ತಲುಪಿದರೆ ಸೇನಾ ಅಧಿಕಾರಿಗಳು ಆ ಪದವನ್ನು ಅವರ ಎದೆಯ ಮೇಲೆ ಮುದ್ರೆ ಒತ್ತುತ್ತಾರೆ.
ವಿಕಾಸ್ ನೇಮಕಾತಿ ದೈಹಿಕ ಪರೀಕ್ಷೆಯಲ್ಲಿ ಸಾಧನೆ ತೋರಲು ಸಿದ್ಧರಾಗಿದ್ದರು.
ಆದರೆ 2022ರ ಜೂನ್ ತಿಂಗಳು ಎನ್ನುವುದು ಅನೇಕ ಯುವಕರ ಪಾಲಿಗೆ ಕೊವಿಡ್ - 19 ಗಿಂತಲೂ ಹಾನಿಕಾರಕವಾಗಿತ್ತು. ಆ ತಿಂಗಳಿನಲ್ಲಿ ನಡೆದ ವಿದ್ಯಮಾನವು ಸಾಂಕ್ರಾಮಿಕ ಪಿಡುಗಿನ ರೀತಿಯದ್ದಲ್ಲವಾದರೂ, ಅದರ ಪರಿಣಾಮ ಅದಕ್ಕಿಂತಲೂ ತೀವ್ರವಾಗಿತ್ತು.
ಅದನ್ನು ಅಗ್ನಿಪಥ್ ಎಂದು ಕರೆಯಲಾಗಿತ್ತು. ವಿಕಾಸ್ ಈ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದರೆ ಅವರ ಎದೆಯ ಮೇಲೆ ʼಎಕ್ಸಲೆಂಟ್ʼ ಎನ್ನುವ ಮುದ್ರೆಯನ್ನು ಒತ್ತಲಾಗುವುದಿಲ್ಲ, ಬದಲಿಗೆ ಅವರ ಯೂನಿಫಾರ್ಮ್ ಮತ್ತು ಇತರ ವಸ್ತುಗಳ ಮೇಲೆ ʼಅಗ್ನಿವೀರ್ʼ ಎನ್ನುವ ಮುದ್ರೆಯನ್ನು ಒತ್ತಲಾಗುತ್ತದೆ.
















