पर्यावरणाचा रं सत्यानाश केला,
वाघदेवा, जंगल वाचवाया तू धाव रं
आपल्या घराचा रं सत्यानाश केला,
वाघदेवा, जंगल वाचवाया तू धाव रं


Mumbai Suburban, Maharashtra
|WED, MAY 14, 2025
ಆರೆ ಆದಿವಾಸಿಗಳು: ʼನಂತರ… ನಾವು ನಮ್ಮ ಈ ಭೂಮಿಯನ್ನು ಕಳೆದುಕೊಂಡೆವುʼ
ಉತ್ತರ ಮುಂಬೈನ 3,200 ಎಕರೆಗಳ ಆರೆ ಪ್ರದೇಶವು ಒಂದೊಮ್ಮೆ 27 ಆದಿವಾಸಿ ಕೊಪ್ಪಲುಗಳ ನೆಲೆಯೆನಿಸಿತ್ತು. ವರ್ಷಗಳು ಕಳೆದಂತೆ, ಹೈನು (dairy) ಸಂಸ್ಕರಣಾ ಘಟಕ ಮತ್ತು ʼಚಲನಚಿತ್ರ ನಗರಿʼಗಳನ್ನೊಳಗೊಂಡಂತೆ ಅನೇಕ ಯೋಜನೆಗಳು ಈ ಭೂಮಿಯ ಬೃಹತ್ ಭಾಗಗಳನ್ನು ಕಬಳಿಸಿವೆ. ಮುಂಬೈ ಮೆಟ್ರೊ ಸಲುವಾಗಿ ನಿರ್ಮಿಸುತ್ತಿರುವ ಕಾರ್ ಶೆಡ್, ಇತ್ತೀಚೆಗೆ ಈ ಭೂಮಿಯ ಹಕ್ಕನ್ನು ಪಡೆದಿದ್ದು, ಇದಕ್ಕಾಗಿ ಸುಮಾರು 2600 ಮರಗಳನ್ನು ಇತ್ತೀಚೆಗೆ ಕತ್ತರಿಸಲಾಯಿತಲ್ಲದೆ, ಕಾನೂನು ಹೋರಾಟವೂ ನಡೆಯಿತು. ಈ ಪ್ರಕ್ರಿಯೆಯಲ್ಲಿ, ಅನೇಕ ಆದಿವಾಸಿಗಳ ಮನೆಗಳನ್ನು ಸಹ ನೆಲಸಮಗೊಳಿಸಿ, ಅವರ ಕೃಷಿ ಭೂಮಿಗಳನ್ನು ವಶಪಡಿಸಿಕೊಂಡು, ಜೀವನೋಪಾಯವನ್ನು ನಾಶಪಡಿಸಲಾಯಿತು. ಅನೇಕರು ವಿರೋಧಿಸಿದರು, ಮೋರ್ಚಾಗಳನ್ನು ಆಯೋಜಿಸಿದರು, ಅಹವಾಲುಗಳನ್ನು ಸಲ್ಲಿಸಿದರು. ಅವರಲ್ಲೊಬ್ಬರು ಈ ಪಾಡ್ಕಾಸ್ಟ್ನಲ್ಲಿ ಹೇಳಿರುವಂತೆ, ʼಮೆಟ್ರೊಗಾಗಿ ಒಂದೇ ಒಂದು ಮೋರ್ಚಾ ಸಹ ಆಯೋಜಿಸಲ್ಪಡಲಿಲ್ಲ’
Author
Editor
Translator
ಪರಿಸರವನ್ನು ಅವರು ನಾಶಪಡಿಸಿದರು
ಓ ಹುಲಿ ದೇವರೇ, ಬಾ, ನಮ್ಮ ಕಾಡುಗಳನ್ನು ರಕ್ಷಿಸು
ನಮ್ಮ ಮನೆಗಳನ್ನು ಅವರು ಧ್ವಂಸಗೊಳಿಸಿದ್ದಾರೆ
ಓ ಹುಲಿ ದೇವರೇ, ಬಾ, ನಮ್ಮ ಕಾಡುಗಳನ್ನು ರಕ್ಷಿಸು
ಲಿಪ್ಯಂತರ
ಪ್ರಕಾಶ್ ಭೊಯಿರ್, ವಾಘ್ ದೇವನನ್ನು ತಮ್ಮ ಸಮುದಾಯ ಹಾಗೂ ಕಾಡಿನ ಇತರ ಜೀವಿಗಳನ್ನು ಭೂಮಿಯ ನಾಶದಿಂದ ತಪ್ಪಿಸುವಂತೆ ಕೇಳುತ್ತಿದ್ದಾರೆ.
ಪ್ರಕಾಶ್, ಮಲ್ಹಾರ್ ಕೊಲಿ ಆದಿವಾಸಿ ಸಮುದಾಯದವರು. ತಉತ್ತರ ಮುಂಬೈನ ಗೊರೆಗಾಂವ್ನ ಹಸಿರು ತುಂಬಿದ ಆರೆ ಮೊಹಲ್ಲಾದಲ್ಲಿ ಕೆಲ್ಟಿಪಾಡ ಎಂಬ ಕೊಪ್ಪಲಿನಲ್ಲಿ ವಾಸವಾಗಿದ್ದಾರೆ. ಇದು ಅವರ ಜನ್ಮಸ್ಥಳವಾಗಿದ್ದು, ತಮ್ಮ ಕುಟುಂಬವು ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿದೆಯೆಂದು ತಿಳಿಸಿದ. 47 ವರ್ಷದ ಪ್ರಕಾಶ್, ಬೆಸ್ಟ್ ಸ್ಟಾಫ್ ಬಸ್ಗಳಲ್ಲಿನ ನಿರ್ವಹಣಾ ಕೆಲಸಗಾರರು.
ಪ್ರಕಾಶ್ ಭೊಯಿರ್: ಅರಣ್ಯವನ್ನು ರಕ್ಷಿಸುವ ಬದಲಿಗೆ, ಅವರು ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ. ಆದ್ದರಿಂದ ನೀವು ಬಂದು, ಅದನ್ನು ರಕ್ಷಿಸಲು ನಮಗೆ ಸಹಾಯ ಮಾಡಬೇಕು.
ಸುಮಾರು 3,200 ಎಕರೆಗಳ ಆರೆ ಪ್ರದೇಶದಲ್ಲಿ 27 ಪಾಡಾಗಳಿದ್ದು, ಆದಿವಾಸಿ ಸಮುದಾಯಗಳ ಸುಮಾರು ಹತ್ತು ಸಾವಿರ ಜನರಿಗೆ ನೆಲೆಯನ್ನು ಒದಗಿಸಿದ್ದವು.
ಆದರೆ ಆರೆ, ನಿಧಾನವಾಗಿ ಕ್ಷೀಣಿಸುತ್ತಿದ್ದು, ಅನೇಕ ಯೋಜನೆಗಳಿಗೆ ದಾರಿಮಾಡಿಕೊಡುತ್ತಿದೆ. ಇದು, ಹಾಲಿನ ಮೊಹಲ್ಲ ಅಥವಾ ಹೈನು ಸಂಸ್ಕರಣಾ ಘಟಕದಿಂದ ಆರಂಭಗೊಂಡಿತು. ನಂತರದಲ್ಲಿನ ಭೂ ಕಬಳಿಕೆಗಳು ಚಲನಚಿತ್ರ ನಗರಿ (ಅಥವಾ ಚಲನಚಿತ್ರ ಚಿತ್ರೀಕರಣಗಳಿಗಾಗಿ ಕ್ಯಾಂಪಸ್), ಚಲನಚಿತ್ರ ಶಾಲೆ ಮತ್ತು ರಾಜ್ಯ ಮೀಸಲು ಪೊಲೀಸರಿಗೆ ಆವರಣಗಳನ್ನು ಒಳಗೊಂಡಿದ್ದವು.
ಹತ್ತಿರದ ನವ್ಸಾಚಾಪಾಡಾದಲ್ಲಿನ ಜನರು ದಶಕಗಳಿಂದಲೂ ಮುನಿಸಿಪಲ್ ಕಾರ್ಪೊರೇಷನ್ನಿಂದ ವಿದ್ಯುಚ್ಛಕ್ತಿ ಮತ್ತು ನೀರಿನ ಸಂಪರ್ಕಗಳನ್ನು ಪಡೆಯಲು ಮುಂಬೈ ಪಶುವೈದ್ಯಕೀಯ ಕಾಲೇಜಿನಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯಲು ಹೆಣಗುತ್ತಿದ್ದರು. ನೀರಿನ ಸಂಪರ್ಕವಿನ್ನೂ ಬಾಕಿಯಿದೆ. ನವ್ಸಾಚಾಪಾಡಾದ ನಿವಾಸಿ, ರಾಕೇಶ್ ಸಿಂಘ್ವನ್, ಈ ಸಂಘರ್ಷವನ್ನು ಕುರಿತಂತೆ ಮಾತನಾಡುತ್ತಾರೆ.
ರಾಕೇಶ್ ಸಿಂಘ್ವನ್: ವಿದ್ಯುತ್ ಮಾರ್ಗವು ನಮ್ಮ ಮನೆಯ ಬಾಗಿಲಿನ ಪಕ್ಕದಿಂದಲೇ ಹಾದುಹೋಗುತ್ತದೆ. ಅಲ್ಲಿ ಹಳೆಯದೊಂದು ಕೆಂಪು ವಿದ್ಯುತ್ (ಜಂಕ್ಷನ್) ಬಾಕ್ಸ್ ಸಹ ಇದೆ. ನೀವು ಮೇಲಕ್ಕೆ ಸಾಗುತ್ತಿದ್ದಂತೆಯೇ ಅದು ನಿಮಗೆ ಕಾಣುತ್ತದೆ. ಕ್ವಾರ್ಟರ್ಸ್ನಲ್ಲಿ ವಾಸಿಸುವ ಮೇಲಧಿಕಾರಿಗಳಿಗೆ ನಮ್ಮ ಬಾಗಿಲಿನಿಂದ ವಿದ್ಯುತ್ ಮಾರ್ಗವು ಹಾದುಹೋಗುತ್ತದೆ. ವಿದ್ಯುತ್ ಅವರಿಗಾಗಿ. ನಮಗಲ್ಲ. ಅವರಿಗೆ ನಾವಿಲ್ಲಿ ಬೇಡವಾಗಿದ್ದೇವಲ್ಲದೆ, ನಮಗೆ ವಿದ್ಯುತ್ ಪೂರೈಸಲು ಅವರು ಬಯಸುವುದಿಲ್ಲ.

Aayna

Aayna
ಈ ಯೋಜನೆಗಳಲ್ಲಿ, ಮುಂಬೈ ಮೆಟ್ರೋದ ಪ್ರಸ್ತಾವಿತ ಮೂರನೇ ಮಾರ್ಗದ ಕಾರ್ ಶೆಡ್, ಇತ್ತೀಚಿನ ಹಾಗೂ ಬಹುಶಃ ಅತ್ಯಂತ ವಿವಾದಿತ ಯೋಜನೆ. ಮುಂಬೈ ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (MMRCL) ಇದನ್ನು ನಿರ್ಮಿಸುತ್ತಿದೆ.
ಈ ಶೆಡ್, ಮೂವತ್ತು ಎಕರೆ ಅಥವಾ ಸುಮಾರು ಎಪ್ಪತ್ತೈದು ಎಕರೆಗಳ ಸ್ವಾಧೀನವನ್ನು ಪ್ರಸ್ತಾಪಿಸಿದೆ. ಇದರ ನಿರ್ಮಾಣವು, ಬಯಲು ಭೂಮಿ ಮತ್ತು ಮರಗಳಿಲ್ಲದೆ ಉಸಿರುಗಟ್ಟುತ್ತಿರುವ ನಗರದಲ್ಲಿನ ಸುಮಾರು 2600 ಮರಗಳ ಹನನವನ್ನು ಒಳಗೊಂಡಿದೆ. ಇದು ನಾಗರಿಕರ ಪ್ರತಿಭಟನೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಗಳನ್ನು ಪ್ರೇರೇಪಿಸಿದೆ.
ಈ ತಿಂಗಳು, ಶುಕ್ರವಾರ, 2019ರ ಅಕ್ಟೋಬರ್ 4ರಂದು, ಮುಂಬೈ ಉಚ್ಚ ನ್ಯಾಯಾಲಯವು ಮುನಿಸಿಪಲ್ ಕಾರ್ಪೊರೇಷನ್ನ ವೃಕ್ಷ ಪ್ರಾಧಿಕಾರದ ಮರಗಳನ್ನು ಕಡಿಯುವ ನಿರ್ಧಾರವನ್ನು ಪ್ರಶ್ನಿಸಿದ್ದ ಅಹವಾಲುಗಳನ್ನು ವಜಾಮಾಡಿತು.
ಮರಗಳ ಈ ಹನನವನ್ನು ವಿರೋಧಿಸಿದವರಲ್ಲಿ ಪಾಡಾ ಆದಿವಾಸಿಗಳೂ ಇದ್ದರು. ಆರೆಯಲ್ಲಿನ ʼಅಭಿವೃದ್ಧಿʼಯ ಆಘಾತವನ್ನು ಅನುಭವಿಸಿದ ಕೆಲ್ಟಿಪಾಡಾದ ಪ್ರಕಾಶ್ ಮತ್ತು ಪ್ರಮಿಳ ಭೋಯಿರ್, ಪ್ರಜಾಪುರ್ಪಾಡಾದ ಆಶಾ ಭೋಯೆಮತ್ತು ನವ್ಸಾಚಾಪಾಡಾದ ರಾಕೇಶ್ ಸಿಂಘ್ವನ್ ಅವರೊಂದಿಗೆ ನಾವು ಮಾತನಾಡಿದೆವು. ಮೆಟ್ರೊ ಯೋಜನೆಯು ಪ್ರಾರಂಭವಾದಾಗ ತನ್ನ ಸಮುದಾಯಕ್ಕೆ ಅದರ ಬಗ್ಗೆ ತಿಳಿದೇ ಇರಲಿಲ್ಲವೆಂದರು ಪ್ರಕಾಶ್.
ಪ್ರಕಾಶ್: ಆರಂಭದಲ್ಲಿ, ನಮಗೆ ಇಲ್ಲಿ ಮೆಟ್ರೋ ಯೋಜನೆಯೊಂದು ಬರಲಿದೆಯೆಂಬ ಅರಿವಾಗಲೇ ಇಲ್ಲ. ಇದು ನಮ್ಮ ಕೊಪ್ಪಲಿನ ಒಳಭಾಗದಿಂದ ನೇರವಾಗಿ ಪ್ರಾರಂಭವಾಗಲಿಲ್ಲ. ಅವರು ಮೂಲೆಯೊಂದರಿಂದ ಆರಂಭಿಸಿದರು. ಉದಾಹರಣೆಗೆ, ಹತ್ತೊಂಬತ್ತನೇ ಸಂಖ್ಯೆಯ ಪ್ರಜಾಪುರ್ಪಾಡಾ. ನಮ್ಮ ಪ್ರಜಾಪುರ್ವಾಡಾದಲ್ಲಿ ಆಶಾ ಭೋಯೆಮತ್ತಿತರ ಆದಿವಾಸಿಗಳು ವಾಸವಾಗಿದ್ದಾರೆ – ಇವರು ಮೊದಲಿಗೆ ಕೆಲವು ತೊಂದರೆಗಳನ್ನು ಅನುಭವಿಸಲಾರಂಭಿಸಿದರು. ಮತ್ತೊಂದು ವಿಷಯವೆಂದರೆ, ನಮ್ಮಲ್ಲಿ ಕೆಲವರು ಮಾತ್ರ ತಮ್ಮ ಭೂಮಿಯನ್ನು ಕಳೆದುಕೊಂಡರು. ಕೃಷಿ ಭೂಮಿ ಇಲ್ಲದಿದ್ದಾಗ್ಯೂ, ನಾವು ನಮ್ಮ ಕಾಡನ್ನು ಕಳೆದುಕೊಳ್ಳುತ್ತಿದ್ದೇವೆ. ನಮಗೆ ಕೃಷಿ ಭೂಮಿ ಇಲ್ಲದಿರಬಹುದು, ಕಾಡು ನಮ್ಮದು. ಇಲ್ಲಿ ಇಪ್ಪತ್ತೇಳು ಕೊಪ್ಪಲುಗಳಿದ್ದು, ಜನರಿಗೆ ಕಾಡಿನಿಂದ ಅನೇಕ ವಸ್ತುಗಳು ದೊರೆಯುತ್ತಿದ್ದು, ಅದು ಅವರಿಗೆ ಬದುಕಲು ಸಹಾಯಮಾಡುತ್ತದೆ. ಹೀಗಾಗಿ, ಮೆಟ್ರೊ ಕೆಲಸವು ಪ್ರಾರಂಭವಾದಾಗ, ಅದನ್ನು ವಿರೋಧಿಸಿದವರಲ್ಲಿ ನಾವು ಮೊದಲಿಗರು. ಇಲ್ಲಿ ಕೆಲಸವನ್ನು ಪ್ರಾರಂಭಿಸಿದರೆ, ಅನೇಕ ಮರಗಳನ್ನು ಕಡಿಯಬೇಕಾಗುತ್ತದೆ, ಅನೇಕ ಜನರು ತಮ್ಮ ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಾರೆಂಬ ಕಾರಣಕ್ಕಾಗಿ ಇಲ್ಲಿ ಕೆಲಸವನ್ನು ಆರಂಭಿಸತಕ್ಕದ್ದಲ್ಲವೆಂದು ನಾವು ಅವರಿಗೆ ಹೇಳಿದೆವು. ಆದಿವಾಸಿಗಳು ತಮ್ಮ ಮನೆಯನ್ನು ಕಳೆದುಕೊಳ್ಳುವ ಕಾರಣ, ಅದು (ಮೆಟ್ರೊ) ಇಲ್ಲಿ ಬರಬಾರದು.
ಇದು ಪ್ರಜಾಪುರ್ವಾಡಾದಿಂದ 2017ರಲ್ಲಿ ಆರಂಭವಾಯಿತು. ಮೆಟ್ರೊ ಯೋಜನೆಯಿಂದಾಗಿ ಎಪ್ಪತ್ತು ಆದಿವಾಸಿ ಕುಟುಂಬಗಳು ತಮ್ಮ ಮನೆಯನ್ನು ಕಳೆದುಕೊಂಡರೆಂದು ಸ್ಥಳೀಯರು ಅಂದಾಜಿಸುತ್ತಾರೆ. ಇಪ್ಪತ್ತೇಳರಷ್ಟಿದ್ದ ಪಾಡಾದ ಸಂಖ್ಯೆಯು ಹದಿನೈದಕ್ಕಿಳಿದಿದೆ. ಆಶಾ ಭೋಯೆ, ಅಂಗನವಾಡಿ ಕಾರ್ಯಕರ್ತೆ ಮತ್ತು ಆದಿವಾಸಿ ನಾಯಕಿ. ತನ್ನ ಮನೆಯ ಮುಂದೆ ಕುಳಿತು ಒಂದೊಮ್ಮೆ ನೆರೆಹೊರೆಯವರನ್ನು ಮತ್ತು ತನ್ನ ಹೊಲಗಳನ್ನು ನೋಡುತ್ತಿದ್ದ ಅವರೀಗ, ಮೆಟ್ರೊ ನಿರ್ಮಾಣ ಜಾಗದಲ್ಲಿನ ಮಡಿಕೆಗಳನ್ನುಳ್ಳ ಗೋಡೆಯನ್ನು ನೋಡುತ್ತಿದ್ದಾರೆ. ತಮ್ಮ ಜನರಿಂದ ಭೂಮಿಯನ್ನು ಹೇಗೆ ಕಬಳಿಸಲಾಯಿತೆಂಬ ಬಗ್ಗೆ ಅವರು ಮಾತನಾಡುತ್ತಿದ್ದಾಗ ಕೊರೆಯುತ್ತಿರುವ ಶಬ್ದವು ಕಿವಿಗಡಚಿಕ್ಕುವಂತಿತ್ತು.

Aayna
ಆಶಾ ಭೋಯೆ: ಮೊದಲಿಗೆ, ಅವರು ಸಮೀಕ್ಷೆಗಳನ್ನು ನಡೆಸಿದಾಗ, ನಮ್ಮ ಕೊಪ್ಪಲುಗಳನ್ನವರು ಪ್ರಜಾಪುರ್ವಾಡಾ ಎಂದು ದಾಖಲಿಸಬೇಕಿತ್ತು. ಆದರೆ ಅವರು ಪ್ರಜಾಪುರ್ವಾಡಾದ ಪಕ್ಕದಲ್ಲಿನ ಸರಿಪುಟ್ ನಗರ್ ಎಂದು ದಾಖಲಿಸಿ ತಪ್ಪು ಮಾಡಿದರು.
ಸರಿಪುಟ್ ನಗರವು ಪ್ರಜಾಪುರ್ಪಾಡಾದ ಪಕ್ಕದಲ್ಲೇ ಇರುವ ಕೊಳಗೇರಿ.
ಆಶಾ: ಆದಿವಾಸಿಗಳು ವಾಸಿಸುವ ಜಾಗವೇ ಪಾಡಾ (ಕೊಪ್ಪಲು). ಅದು ಪಟ್ಟಣ ಅಥವಾ ನಗರವಾಗಲು ಸಾಧ್ಯವಿಲ್ಲ. ಈ ಪ್ರದೇಶವನ್ನು ಸಮೀಕ್ಷಿಸಿದ ಅವರು, ಮೆಟ್ರೊ ಸಲುವಾಗಿ ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದು, ಪರಿಹಾರವಾಗಿ ಮತ್ತೊಂದು ಮನೆಯನ್ನು ಕೊಡುತ್ತೇವೆಂದು ತಿಳಿಸಿದರು. ಮನೆಗೆ – ಮನೆಯೆಂಬುದನ್ನು ಪ್ರಶ್ನಿಸಿದ ಆದಿವಾಸಿಗಳು, ನಮಗೆ ಇಲ್ಲಿ ಕೃಷಿ ಭೂಮಿಯೂ ಇದ್ದು, ಇಲ್ಲಿನ ಅನೇಕ ಮರಗಳ ಕಥೆಯೇನು ಎಂದು ಕೇಳಿದರು. ಆಗ ಅವರು, ಸಭೆಯಲ್ಲಿ ಈ ಸಮಸ್ಯೆಗಳನ್ನು ಚರ್ಚಿಸಿ, ನಮಗೆ ಸೇರಿದ ಎಲ್ಲದಕ್ಕೂ ಪರಿಹಾರವನ್ನು ನೀಡುತ್ತೇವೆಂದರು.
ಮೇ 2017ರಲ್ಲಿ ಅವರು ಕೆಲವು ಮನೆಗಳನ್ನು ಕೆಡವಿದರು. ಜನರಿಗೆ ಅಲ್ಲಿಂದ ತೆರಳಲು ಇಷ್ಟವಿರಲಿಲ್ಲವಾದರೂ, ಬುಲ್ಡೋಜ಼ರ್ಗಳು ಅವರಿಗೆ ಬೇರೆ ದಾರಿಯಿಲ್ಲದಂತೆ ಮಾಡಿದವು.
ಆಶಾ: ನಂತರ, ನಾವು ನಮ್ಮ ಈ ಭೂಮಿಯನ್ನು ಕಳೆದುಕೊಂಡೆವು. ಅವರು ಬಂದು ನಮ್ಮನ್ನು ಕೇಳಲೂ ಇಲ್ಲ. ಇಲ್ಲಿಗೆ ಬಂದ ಅವರು ಈ ಕಾಂಪೌಂಡ್ (ಗೋಡೆಗಳು) ಅನ್ನು ನಿಲ್ಲಿಸಿದರು. ಆಮೇಲೆ ನಾವು ಇದು ನಮ್ಮ ಜಾಗ, ಈ ಜನರು ಬಲವಂತದಿಂದ ಇದನ್ನು ವಶಪಡಿಸಿಕೊಂಡಿದ್ದಾರೆಂದು ಮೊಕದ್ದವೆ ಹೂಡಿದೆವು. ಆದರೆ ಅವರು ಸಲೀಸಾಗಿ ನಿರಾಕರಿಸಿದರು. ನಂತರದಲ್ಲಿ ತಾವು ವಶಪಡಿಸಿಕೊಂಡ ಜಾಗದಲ್ಲಿ ಯಾವ ಆದಿವಾಸಿಯೂ ನೆಲೆಸಿರುವುದಿಲ್ಲ. ಮರಗಳಿಲ್ಲ. ಅದು ಸಂಪೂರ್ಣವಾಗಿ ಕೊಳಗೇರಿಯೆಂದು ಪ್ರತಿಪಾದಿಸಿದರು. ಕೋರ್ಟಿನಲ್ಲಿ ಹೀಗೆ ಹೇಳಿದರು. ಜೊತೆಗೆ, ಇದೆಲ್ಲವೂ ಬರಿಯ ಮಾತಷ್ಟೇ (ನಮಗೆ ಅವರು ಹೇಳಿದ್ದು). ಲಿಖಿತದಲ್ಲಿ ಅವರೇನನ್ನೂ ನೀಡಿರುವುದಿಲ್ಲ. ನಮಗೆ ಅದನ್ನು ಲಿಖಿತದಲ್ಲಿ ನೀಡಬೇಕೆಂದು ಕೇಳಬೇಕೆಂಬ ಅರಿವಿರಲಿಲ್ಲ. ನಾವು ಅವರಿಂದ ಅದನ್ನು ತೆಗೆದುಕೊಳ್ಳಲಿಲ್ಲ.
ಸ್ಥಳಾಂತರಗೊಂಡವರಿಗೆ ಉದ್ಯೋಗದ ಭರವಸೆಯನ್ನೂ ನೀಡಲಾಗಿದ್ದು, ಅವರಿಗೆ ಅದೆಂದೂ ದೊರೆಯಲಿಲ್ಲ. ಬದಲಿಗೆ, ಸ್ಥಳಾಂತರಗೊಂಡ ಆದಿವಾಸಿಗಳಿಗೆ ಅನೇಕ ಬಾರಿ ಗುರುತಿನ ಚೀಟಿಯ ಪುರಾವೆಯನ್ನು ಕೇಳಲಾಯಿತು. ಅವರು ʼಯೋಜನೆಯಿಂದ ಬಾಧಿತರಾದ ವ್ಯಕ್ತಿʼ ಎಂಬ ಪ್ರಮಾಣಪತ್ರವನ್ನು ಕಲೆಕ್ಟರ್ನ ಕಛೇರಿಯಿಂದ ಪಡೆದಿರುವುದಿಲ್ಲ. ಇದರಿಂದ ಅವರು ಉದ್ಯೋಗ ಮತ್ತಿತರೆ ಸೌಲಭ್ಯಗಳಿಗೆ ಅರ್ಹತೆ ಪಡೆಯುತ್ತಿದ್ದರು ಎನ್ನುತ್ತಾರೆ ಆಶಾ.
ಆಶಾ: 7/12 ದಾಖಲೆಯು ಭೂ ದಾಖಲೆಯಾಗಿದ್ದು, ಆಸ್ತಿಯ ಮಾಲೀಕರ ಹೆಸರು, ಅದರ ಅಳತೆ ಇವೆಲ್ಲವನ್ನೂ ದಸ್ತಾವೇಜಿನಲ್ಲಿ ಬರೆಯಲಾಗಿದೆ. ಅವರು ಇದನ್ನು ಸರ್ಕಾರದ ಜಾಗವೆಂದು ಪ್ರತಿಪಾದಿಸುತ್ತಿದ್ದಾರೆ. ಇಲ್ಲಿನ ಆದಿವಾಸಿಗಳು ಹೆಚ್ಚು ವಿದ್ಯಾವಂತರಲ್ಲ. ಆದ್ದರಿಂದ, ಅವರಿಗೆ ಈ ಎಲ್ಲ ಕಾರ್ಯವಿಧಾನಗಳು ತಿಳಿದಿಲ್ಲ. ಈಗ, ಸರ್ಕಾರವು, ಇದು ನಿಮ್ಮ ಜಾಗವಾಗಿದ್ದರೆ, ನಿಮ್ಮ 7/12 ದಾಖಲೆಯನ್ನು ತೋರಿಸಿ ಎನ್ನುತ್ತಿದೆ. ಆದಿವಾಸಿಗಳೆಂಬುದನ್ನು ಸಾಬೀತುಪಡಿಸಬೇಕೆಂದು ಹೇಳುತ್ತಿದ್ದಾರೆ. ನಾವು ಆದಿವಾಸಿಗಳು. ನಮ್ಮ ಜಾತಿ ಪ್ರಮಾಣಪತ್ರವನ್ನು ತೋರಿಸಬಲ್ಲೆವು. ಆಗ ಅವರು, ʼನಿಮ್ಮ ದಿರಿಸನ್ನು ನೋಡಿ, ನೀವು ಆದಿವಾಸಿಗಳಾಗಲು ಸಾಧ್ಯವಿಲ್ಲ…ʼ ಎನ್ನಲಾರಂಭಿಸಿದರು.

Aayna

Aayna
ಪ್ರಕಾಶ್ ಸಹ ತಮ್ಮ ವ್ಯಥೆಯನ್ನು ವ್ಯಕ್ತಪಡಿಸಿದರು
ಪ್ರಕಾಶ್: ಪುರಾವೆಯನ್ನೊದಗಿಸುವುದು ಸರ್ಕಾರದ ಕೆಲಸ. ನಾವು ಪುರಾವೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ (ದಸ್ತಾವೇಜು ಮತ್ತು ದಾಖಲೆಗಳು)
ಮೆಟ್ರೊ ಕಾರ್ ಶೆಡ್ಗೆ ಅವರು ಪರ್ಯಾಯ ಸ್ಥಳಗಳನ್ನು ತೋರಿಸುತ್ತಾರೆ.
ಪ್ರಕಾಶ್: ಅವರು ಕಾರ್ ಶೆಡ್ ಅನ್ನು ನಿರ್ಮಿಸಬಹುದಾದ ಇತರೆ ಜಾಗಗಳ ಸಲಹೆಯನ್ನು ಸಹ ನಾವು ನೀಡಿದೆವು. ಆದರೆ ಯಾರೂ ನಮ್ಮ ಮಾತನ್ನು ಕೇಳಿಸಿಕೊಳ್ಳಲಿಲ್ಲ. ನಾವು ಆದಿವಾಸಿಗಳು ಮೋರ್ಚಾ ಸಹ ನಡೆಸಿದೆವು. ಅಲ್ಲಿ ಜನರು ತಮ್ಮ ಬೇಡಿಕೆಗಳನ್ನು ಮಂಡಿಸಿದರು. ಮೆಟ್ರೋಗಾಗಿ ಒತ್ತಾಯಿಸುವ ಒಂದು ಮೋರ್ಚಾ ಸಹ ಆಯೋಜಿಸಲ್ಪಡಲಿಲ್ಲ.
ಅನೇಕರು ಆದಿವಾಸಿಗಳು ಹಾಗೂ ಆರೆಗೆ ಬೆಂಬಲವನ್ನು ನೀಡಲು ಬಂದಿದ್ದಾರೆ. 2019ರ ಆಗಸ್ಟ್ 29ರಂದು ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಷನ್ನ ವೃಕ್ಷ ಪ್ರಾಧಿಕಾರವು ಮೆಟ್ರೊ ಶೆಡ್ ಸಲುವಾಗಿ ಆರೆ ಮೊಹಲ್ಲಾದಲ್ಲಿ 2600ಕ್ಕೂ ಹೆಚ್ಚು ಮರಗಳ ಹನನ ಅಥವಾ ಸ್ಥಳಾಂತರಣದ ಪ್ರಸ್ತಾವವನ್ನು ಒಪ್ಪಿದ ತರುವಾಯ ಪ್ರಸ್ತಾವದ ವಿರುದ್ಧ ನಾಗರಿಕರು ಪ್ರತಿಭಟಿಸುತ್ತಿದ್ದಾರೆ. ಆದರೆ, ಈಗಾಗಲೇ ಕಡಿದುರುಳಿಸಿದ ಮರಗಳ ಕಥೆಯೇನು? ಎನ್ನುತ್ತಾರೆ ಆಶಾ.
ಆಶಾ: ಆದರೆ, ಮೊದಲೇ ಕಡಿದುರುಳಿಸಿದ ಮರಗಳನ್ನು ಯಾರು ಎಣಿಸುತ್ತಿದ್ದಾರೆ?
ಒಂದು ಎಕರೆಗಿಂತಲೂ ಕಡಿಮೆಯಿದ್ದ ಆಶಾ ಅವರ ಭೂಮಿಯನ್ನು ಮೆಟ್ರೊ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಯಿತು. ಇವರು ತಾವು ಬೆಳೆಯುತ್ತಿದ್ದ ಋತುಮಾನದ ತರಕಾರಿ, ಹಣ್ಣುಗಳಾದ ಆಲೂಗೆಡ್ಡೆ, ಬಾಳೆಹಣ್ಣು, ನಿಂಬೆ, ಸೋರೆಕಾಯಿಗಳನ್ನು ಮಾರಿ ದಿನವೊಂದಕ್ಕೆ ಇನ್ನೂರರಿಂದ ಮುನ್ನೂರು ರೂ.ಗಳನ್ನು ಸಂಪಾದಿಸುತ್ತಿದ್ದರು. ನನ್ನ ಕುಟುಂಬವು ತನ್ನ ಭೂಮಿಗೆ ಯಾವುದೇ ಪರಿಹಾರವನ್ನು ಪಡೆದಿಲ್ಲವೆಂದು ಅವರು ತಿಳಿಸಿದರು.
ಆಶಾ: ನನ್ನ ಪತಿ ಹಾಗೂ ಮಗಳು ಮನೆಯಲ್ಲಿದ್ದರು. ನಮಗೀಗ ಕೇಳಿಸುತ್ತಿರುವಂಥದ್ದೇ ಶಬ್ದವು ಅವರಿಗೆ ಕೇಳಿಸುತ್ತಿತ್ತು. ಅದು ಮರವನ್ನು ಕತ್ತರಿಸುತ್ತಿರುವ ಯಂತ್ರ. ಅಂದು ಶುಕ್ರವಾರ, ಸಂಜೆ ನಾಲ್ಕರ ಸಮಯ. ಹತ್ತರಿಂದ ಹದಿನೈದು ಜನರು ಈ ಯಂತ್ರಗಳೊಂದಿಗೆ ಬಂದರು. ನನ್ನ ಪತಿ ಹಾಗೂ ಮಗಳು ಹೊರಗೆ ಧಾವಿಸಿ ಏನು ಮಾಡುತ್ತಿದ್ದೀರೆಂದು ಕೇಳಿದರು. ತಮಗೆ ಮರ ಕಡಿಯಲು ಅನುಮತಿಯಿದೆಯೆಂದು ಅವರು ಹೇಳಿದರು. ನಾನು ಆರೆಯಲ್ಲಿದ್ದೆನಾದರೂ, ಮನೆ ತಲುಪಲು ಹತ್ತು ನಿಮಿಷ ಹಿಡಿಯಿತು. ಆ ಸಮಯದಲ್ಲಿ ಮರಗಳ ಹನನವಾಯಿತು. ಅವರು ಮರಗಳನ್ನು ಕಡಿದರು. ಇದು ಬಹಳಷ್ಟು ಕೋಲಾಹಲಕ್ಕೆ ದಾರಿಮಾಡಿತು.
ಆಕೆಯ ಪತಿ ಕಿಸನ್ ಭೋಯೆ ಸಹ ಎರಡು ವರ್ಷಗಳ ಹಿಂದೆ ತಮ್ಮ ಚಿಕ್ಕ ಅಂಗಡಿಯನ್ನು ಕಳೆದುಕೊಂಡರು. ದಿನಕ್ಕೆ ಅವರು ಒಂದು ಸಾವಿರದಿಂದ ಮೂರು ಸಾವಿರಗಳವರೆಗೆ ಸಂಪಾದಿಸುತ್ತಿದ್ದರು. ಇವರ ಪ್ರಕರಣವು ಬಾಂಬೆ ಹೈಕೋರ್ಟಿನಲ್ಲಿ ಬಾಕಿಯಿದೆ.
ಆಶಾ: ಎರಡು ವರ್ಷಗಳ ಹಿಂದೆ, ಹೆದ್ದಾರಿಯಲ್ಲಿ ನಮ್ಮ ಅಂಗಡಿಯೊಂದಿತ್ತು. ಅವರು ಅದನ್ನು ಮುಚ್ಚಿಸಿದರು. ಆಗಿನಿಂದ ಇವರು (ನನ್ನ ಪತಿ) ಮನೆಯಲ್ಲಿದ್ದಾರೆ. ನಾವು ಬೆಳೆಯುತ್ತಿದ್ದ ತರಕಾರಿಗಳ ಮಾರಾಟ ಮತ್ತು ಅಂಗಡಿಯಲ್ಲಿನ ಸಂಪಾದನೆಯಿಂದ ನಾವು ಬದುಕನ್ನು ನಿಭಾಯಿಸುತ್ತಿದ್ದೆವು. ಅವರು ಅದನ್ನಷ್ಟೇ (ಅಂಗಡಿ) ಅಲ್ಲದೆ, ಇದನ್ನೂ (ಭೂಮಿ) ಆಪೋಶನ ತೆಗೆದುಕೊಂಡರು. ಕಂಜೂರಿನಲ್ಲಿ (ಉತ್ತರ ಮುಂಬೈನ ಕಂಜುರ್ಮಾರ್ಗ್ನಲ್ಲಿ) ಮತ್ತೊಂದು ಅಂಗಡಿಯನ್ನು ನಮಗೆ ಕೊಡುತ್ತೇವೆಂದು ಹೇಳಿದರು. ಕೊಟ್ಟರಾದರೂ, ಅದನ್ನು ನೋಡಲೆಂದು ನಾವು ಹೋದಾಗ, ಅದೆಷ್ಟು ಕೊಳಕಾಗಿದೆಯೆಂದು ನಾವು ನೋಡಿದ್ದೇವೆ. ಬಾಗಿಲು ಸಂಪೂರ್ಣವಾಗಿ ಮುರಿದಿತ್ತು. ಅದು ಹೊರ ಪ್ರದೇಶದಲ್ಲಿದ್ದು, ಪ್ರತ್ಯೇಕವಾಗಿತ್ತು. ಅಲ್ಲಿ ನಾವು ವ್ಯಾಪಾರ ನಡೆಸುವುದಾದರೂ ಹೇಗೆ? ಈಗ ಮನೆಯನ್ನು ನಿಭಾಯಿಸುವುದು ಬಹಳ ಕಷ್ಟಕರವಾಗಿದೆ. ಕೆಲವು ತರಕಾರಿಗಳನ್ನು ಮಾರಿ ನಾವು ಬದುಕುಳಿದೆವು. ಈಗ, ನಾವು ಮನೆಯನ್ನು ನಡೆಸುವುದಾದರೂ ಹೇಗೆ ಹೇಳಿ?

Aayna

Aayna
ಇಂದು, ಪ್ರಜಾಪುರ್ವಾಡಾದಲ್ಲಿನ ಒಬ್ಬ ಅಂಗನವಾಡಿ ಕಾರ್ಯಕರ್ತೆಯಾಗಿ, ಆಶಾ, ತಿಂಗಳಿಗೆ ಮೂರು ಸಾವಿರ ರೂ.ಗಳನ್ನು ಗಳಿಸುತ್ತಾರೆ.
ಆಶಾ ಸಾಕಷ್ಟನ್ನು ಅನುಭವಿಸಿದ್ದು, ಈಗ ಕಾನೂನಿನ ಹೋರಾಟದಲ್ಲಿದ್ದಾರೆ. ದೃಢ ನಿಶ್ಚಯವುಳ್ಳ ಆಕೆ, ಇದನ್ನು ನಿಲ್ಲಿಸುವುದಿಲ್ಲ.
ನೀವು ʼಅಭಿವೃದ್ಧಿʼಪಡಿಸಬೇಕಿದ್ದಲ್ಲಿ, ಅದನ್ನೇ ಮಾಡಿ. ಆದರೆ, ಆದಿವಾಸಿಗಳ ಬದುಕಿನ ಮೇಲೆ ಸವಾರಿ ಮಾಡಿ ಇದನ್ನು ಮಾಡಿದಲ್ಲಿ, ಅದು ಸರಿಯಲ್ಲ, ಅಲ್ಲವೇ? ನೀವು ಆದಿವಾಸಿಗಳ ಕೃಷಿ ಭೂಮಿಯನ್ನು ಕಸಿಯುತ್ತಿದ್ದೀರಿ, ಅವರನ್ನು ಬೆದರಿಸುತ್ತಿದ್ದೀರಿ, ಅವರನ್ನು ಮನೆಯಿಂದ ಹೊರಹಾಕುತ್ತಿದ್ದೀರಿ. ತರುವಾಯ, ಅವರ ಜಾಗದಲ್ಲಿ ನೀವು ಅಭಿವೃದ್ಧಿ ಮಾಡುತ್ತೀರಿ? ಅವರಿಗೆ ನೀವು ಮನೆಯೊಂದನ್ನು ನೀಡಿ, ಇದನ್ನು ತೆಗೆದುಕೊಳ್ಳಿ ಎನ್ನುತ್ತೀರಿ. ಆದರೆ ಕೃಷಿ ಭೂಮಿಯನ್ನು ನೀವು ಕಸಿದುಕೊಂಡರೆ ನಾವು ಅದನ್ನು ಬಿಡುವುದಾದರೂ ಹೇಗೆ? ಇದನ್ನು ನೀವು ನಮ್ಮ ಅಭಿವೃದ್ಧಿಯೆಂದು ಕರೆಯಬಹುದೇ? ಇದು ನಮಗಾಗಿಯೇ? ನಮ್ಮ ಜೀವಗಳನ್ನು ತೆಗೆದುಕೊಂಡು ನಂತರದಲ್ಲಿ ನಮಗೆ ಅಭಿವೃದ್ಧಿಯನ್ನು ತರುತ್ತಿದ್ದೇವೆಂದು ಪ್ರತಿಪಾದಿಸುತ್ತಿದ್ದೀರಿ? ನಮಗೆ ಹಳ್ಳಿಯಾಗಲಿ ಮತ್ತೊಂದು ಮನೆಯಾಗಲಿ ಇಲ್ಲ. ಇದೇ ನಮ್ಮ ಪ್ರಪಂಚ. ನಮ್ಮ ಬಳಿಯಿರುವುದೆಲ್ಲವೂ ಇಲ್ಲಿಯೇ ಇದೆ. ಇಲ್ಲಿಂದ ನಾವು ಹೋಗುವುದಾದರೂ ಎಲ್ಲಿಗೆ?
ಪ್ರಕಾಶ್, ಆಲೋಚಿಸಲು ನಮಗೆ ವಿಷಯವೊಂದನ್ನು ನೀಡಿದ್ದಾರೆ:
ಪ್ರಕಾಶ್: ಮಾನವರು ತಮ್ಮನ್ನು ತಾವು ಬುದ್ಧಿವಂತರೆಂದು ಭಾವಿಸುತ್ತಾರೆ. ನಾನಿದನ್ನು ಗಂಭೀರವಾಗಿ ಪ್ರಶ್ನಿಸುತ್ತೇನೆ. ಹಲವಾರು ಆವಿಷ್ಕಾರಗಳನ್ನು ಮಾಡಿದ್ದೇನೆಂದು ಮಾನವನು ಭಾವಿಸುತ್ತಾನೆ. ಸೇತುವೆಗಳು, ಮಾಲ್ಗಳು, ಮಹಾನಗರಗಳನ್ನು ನಿರ್ಮಿಸಿದ್ದಾನೆ. ಮಂಗಳ ಗ್ರಹವನ್ನು ತಲುಪುತ್ತಿದ್ದೇನೆಂದು ಸಹ ಅವನು ಭಾವಿಸುತ್ತಾನೆ. ಹೀಗಾಗಿ, ನಾವು ನಮ್ಮನ್ನು ಅತ್ಯಂತ ಚತುರರೆಂದು ಭಾವಿಸುತ್ತೇವೆ. ಆದರೆ ನಾವು ವಿನಾಶದೆಡೆಗೆ ಧಾವಿಸುತ್ತಿದ್ದೇವೆಂಬುದು ನನ್ನ ಆಲೋಚನೆ. ಇದು ಪ್ರಜಾಪ್ರಭುತ್ವವಾಗಿದ್ದಲ್ಲಿ, ಜನರು ಹೇಳುವುದನ್ನು ಕೇಳತಕ್ಕದ್ದು. ಇದು ನಷ್ಟ ಹಾಗೂ ವಿನಾಶವನ್ನುಂಟುಮಾಡುತ್ತದೆಂದು ಜನರು ಬೃಹತ್ ಪ್ರಮಾಣದಲ್ಲಿ ಮಾತನಾಡುತ್ತಿದ್ದಾರೆ. ಹಾಗಾದರೆ, ಅವರು ಆಲಿಸುವುದಿಲ್ಲವೇಕೆ? ಇದು ನನಗೆ ಅತ್ಯಂತ ವಿಚಿತ್ರವೆನಿಸುತ್ತದೆ.
ಅಕ್ಟೋಬರ್ 7ರ ಸೋಮವಾರದಂದು, ಭಾರತದ ಸರ್ವೋಚ್ಚ ನ್ಯಾಯಾಲಯವು ಅಕ್ಟೋಬರ್ 21ರವರೆಗೆ MMRCLನಿಂದ ಆರೆಯಲ್ಲಿ ಮರಗಳ ಹನನಕ್ಕೆ ತಡೆಹಿಡಿಯಿತು. ಅದಾಗಲೇ 2600 ಮರಗಳಲ್ಲಿ ಅನೇಕವನ್ನು ಕಡಿದುರುಳಿಸಲಾಗಿತ್ತು.
ಪ್ರಕಾಶ್ ಅವರ ಪತ್ನಿ ಪ್ರಮೀಳ ಬೋಯೆರ್, ಕೃಷಿಕರು ಹಾಗೂ ಗೃಹಿಣಿ. ಅವರನ್ನು ಎರಡು ದಿನಗಳವರೆಗೆ ಬೈಕುಲ್ಲ ಪೊಲೀಸ್ ಠಾಣೆಯಲ್ಲಿ ಬಂಧಿಸಿಡಲಾಗಿತ್ತು. ಆಕೆ, ಇತರೆ ನಾಗರಿಕರೊಂದಿಗೆ ಮರಗಳನ್ನು ಕಡಿಯುವುದನ್ನು ಪ್ರತಿಭಟಿಸುತ್ತಿದ್ದರು.
ಪ್ರಮೀಳ: ಅವರು ಮರಗಳನ್ನು ಕತ್ತರಿಸುತ್ತಿದ್ದ ಕಾರಣ, ಮರಗಳನ್ನು ರಕ್ಷಿಸಲು ನಾವು ಅಲ್ಲಿಗೆ ಹೋದೆವು. ನಾವು ಪೊಲೀಸರ ಮೇಲೆ ದಾಳಿಗೆ, ಹೋರಾಟಕ್ಕೆ ಅಲ್ಲಿಗೆ ತೆರಳಲಿಲ್ಲ. ನೀವು ವಿದ್ಯಾವಂತರು. ನಾನು ಅನಕ್ಷರಸ್ಥೆ. ಆದಾಗ್ಯೂ, ಮರಗಳನ್ನು ಕಡಿಯಬಾರದೆಂಬುದು ನನ್ನ ನಂಬಿಕೆ.
ಪಶ್ಚಲೇಖ (postscript): ಅಕ್ಟೋಬರ್ 21ರ ಸೋಮವಾರದಂದು ಸರ್ವೋಚ್ಚ ನ್ಯಾಯಾಲಯವು ಆರೆ ಮೊಹಲ್ಲಾದಲ್ಲಿ ಮೊಟ್ರೊ ಕಾರ್ ಶೆಡ್ನ ನಿರ್ಮಣಕ್ಕೆ ಯಾವುದೇ ತಡೆಯಾಜ್ಞೆ ನೀಡಿರಲಿಲ್ಲವೆಂದು ಸ್ಪಷ್ಟಪಡಿಸಿತಲ್ಲದೆ, 2019ರ ಮೇ 15ರವರೆಗೆ ಮರಗಳನ್ನು ಕಡಿಯುವುದರ ವಿರುದ್ಧ ಮಧ್ಯಂತರ ಆದೇಶವನ್ನು ಮುಂದುವರಿಸಿತು
ಕ್ರೆಡಿಟ್ಸ್ ಮತ್ತು ವಿಶೇಷ ಧನ್ಯವಾದಗಳು
ಅಡಿಶನಲ್ ವಾಯ್ಸ್ಓವರ್: ಜ಼ಹ್ರ ಲತೀಫ್, ಊರ್ಣ ರಾವುತ್
ಅನುವಾದ: ಮೇಧ ಕಾಳೆ, ಜ್ಯೋತಿ ಶಿನೋಲಿ, ಉರ್ಜ
ಸೌಂಡ್ ಲೆವೆಲಿಂಗ್/ಆಡಿಯೊ ಇನ್ಪುಟ್: ಹೊಪುನ್ ಸೈಕಿಯ, ಹಿಮಾಂಶು ಸೈಕಿಯ
ಅನುವಾದ: ಶೈಲಜಾ ಜಿ.ಪಿ
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/aarey-adivasis-then-we-lost-this-land-of-ours-kn

