ಒಂಬತ್ತು ವರ್ಷದ ಶೀಲಾಬತಿ ಮುರ್ಮು, ಚಾಚನಪುರ ಗ್ರಾಮದಲ್ಲಿ ಪ್ರತಿದಿನ ಎರಡು ಶಾಲೆಗಳಿಗೆ ಹೋಗುತ್ತಾಳೆ - ಒಂದು ಸರ್ಕಾರ ನಡೆಸುವ ಪ್ರಾಥಮಿಕ ಶಾಲೆ, ಮತ್ತು ಇನ್ನೊಂದು, ಸುಮಾರು 500 ಮೀಟರ್ ದೂರದಲ್ಲಿರುವ, ರೇಬಾ ಮುರ್ಮು ನಡೆಸುವ 'ಪರ್ಯಾಯ' ಶಾಲೆ.
ಸಂತಾಲ್ ರೈತ ಕುಟುಂಬಗಳ 3ರಿಂದ 12 ವರ್ಷ ವಯಸ್ಸಿನ ಸುಮಾರು 40 ಇತರ ಮಕ್ಕಳೊಂದಿಗೆ, ಶೀಲಾಬತಿ ಬೇಸಗೆಯಲ್ಲಿ ಬೆಳಿಗ್ಗೆ 6 ಗಂಟೆಗೆ ಮತ್ತು ಚಳಿಗಾಲದಲ್ಲಿ ಅರ್ಧ ಗಂಟೆ ತಡವಾಗಿ ರೇಬಾ ಅವರ ಶಾಲೆಗೆ ಬರುತ್ತಾಳೆ. ಹಿರಿಯ ವಿದ್ಯಾರ್ಥಿಗಳು ನೆಲವನ್ನು ಗುಡಿಸುತ್ತಾರೆ, ಪ್ರಾರ್ಥನೆಯ ರೂಪದಲ್ಲಿ ಟಾಗೋರ್ ಅವರ ಹಾಡುಗಳನ್ನು ಹಾಡುತ್ತಾರೆ - ಅದರ ಒಳಾರ್ಥ 'ಬೆಂಕಿಯೆನ್ನುವುದು ತತ್ವಶಾಶ್ತ್ರಜ್ಞನ ರೂಪಾದ ಕಲ್ಲು, ನಾನು ಅದನ್ನು ಸ್ಪರ್ಶಿಸಿ ನನ್ನನ್ನು ಶುದ್ಧೀಕರಿಸಿಕೊಳ್ಳಲು ಬಿಡಿ' ಎಂದು ಹೇಳುತ್ತದೆ - ಮತ್ತು ಅದರ ನಂತರ ಆ ದಿನದ ಪಾಠ ಪ್ರಾರಂಭಿಸುತ್ತಾರೆ. ಈ ಶಾಲೆಯ ಒಂದು ಭಾಗವು ಶಿಶುವಿಹಾರವೂ ಆಗಿದ್ದು, ಅಲ್ಲಿಗೆ ಚಿಕ್ಕ ಮಕ್ಕಳು ಆಟವಾಡಲು ಮತ್ತು ನಿದ್ರೆ ಮಾಡಲು ಬರಬಹುದು.
ರೇಬಾದೀ- ಜನರು ಅವರನ್ನು ಹೀಗೆಯೇ ಕರೆಯುತ್ತಾರೆ - ಅವರು 2010ರಲ್ಲಿ ತಮ್ಮ ಕುಟುಂಬಕ್ಕೆ ಸೇರಿದ ಮಣ್ಣಿನ ಗುಡಿಸಲಿನಲ್ಲಿ ಈ ಶಾಲೆಯನ್ನು ಆರಂಭಿಸಿದರು. 1970ರ ದಶಕದಲ್ಲಿ ರಾಜ್ಯ ಸರ್ಕಾರದ ಭೂ ಮರುಹಂಚಿಕೆ ಕಾರ್ಯಕ್ರಮದಡಿಯಲ್ಲಿ ಅವರ ಕುಟುಂಬಕ್ಕೆ ವರ್ಗಾಯಿಸಲಾಗಿದ್ದ ಸುಮಾರು ಮೂರು ಎಕರೆ ಭೂಮಿಯನ್ನು ಅವರು ಆಸ್ತಿಯಾಗಿ ಪಡೆದಿದ್ದಾರೆ. ಆದರೆ ಇಲ್ಲಿನ ಭೂಮಿ ಅಷ್ಟೊಂದು ಫಲವತ್ತಾಗಿಲ್ಲ. ಆದ್ದರಿಂದ ರೇಬಾ ತಮ್ಮ ಜಮೀನಿನ ಒಂದು ಭಾಗವನ್ನು ಕೋಲ್ಕತ್ತಾದ ರೈತ ಗುಂಪಿಗೆ ಗುತ್ತಿಗೆಗೆ ನೀಡಿ, ಆ ಹಣದಿಂದ ಶಾಲೆಯನ್ನು ಪ್ರಾರಂಭಿಸಿದರು. ಈಗ ಅವರು ಒಂದು ಸಣ್ಣ ಜಮೀನಿನಲ್ಲಿ ತರಕಾರಿ ಮತ್ತು ಹಣ್ಣುಗಳನ್ನು - ಎಲೆಕೋಸು, ಆಲೂಗಡ್ಡೆ, ಪರಂಗಿ - ಬೆಳೆದು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರುತ್ತಾರೆ.
ತಮ್ಮ ಕುಟುಂಬದ ಸಾಧಾರಣ ಆದಾಯದ ಹೊರತಾಗಿಯೂ, 53 ವರ್ಷದ ರೇಬಾ, ಸ್ವತಃ ಸಂತಾಲ್ ಬುಡಕಟ್ಟಿಗೆ ಸೇರಿದವರು. ಅವರು ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಛತ್ನಾ ನಗರದ ಕಾಲೇಜಿನಿಂದ ಬಿ.ಎ. ಪದವಿ ಪಡೆದಿದ್ದಾರೆ. ಅವರು ಪ್ರತಿದಿನ ಸೈಕಲ್ನಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ಅವರ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ - ತಮ್ಮ ಕುಟುಂಬಗಳೊಂದಿಗೆ - ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿರುವ ಇದೇ ಗ್ರಾಮದಲ್ಲಿ ಒಟ್ಟಾಗಿ ವಾಸಿಸುತ್ತಿದ್ದಾರೆ ಮತ್ತು ಅವರ ಶಾಲೆಗೆ ಸಹಾಯ ಮಾಡುತ್ತಾರೆ. ಈ ಶಾಲೆಗೆ ಅವರ ತಾಯಿಯ ಹೆಸರನ್ನು ಇಡಲಾಗಿದೆ - ಲಕ್ಷ್ಮೀ ಮುರ್ಮು ಪ್ರಾಥಮಿಕ ವಿದ್ಯಾಲಯ.
ಸುಮಾರು ನಾಲ್ಕು ವರ್ಷಗಳ ಹಿಂದೆ, ಚಾಚನಪುರದಿಂದ ಸುಮಾರು 185 ಕಿಲೋಮೀಟರ್ ದೂರದಲ್ಲಿರುವ ಕೋಲ್ಕತ್ತಾದ ಎರಡು ಸಂಸ್ಥೆಗಳು ಒಂದಷ್ಟು ಹಣವನ್ನು ದೇಣಿಗೆಯಾಗಿ ನೀಡಿದವು. ಈ ಹಣದಿಂದ ರೇಬಾದೀ ಆರು ಕಾಂಕ್ರೀಟ್ ಕಂಬಗಳು ಮತ್ತು ಸಿಮೆಂಟ್ ತಗಡಿನ ಮೇಲ್ಛಾವಣಿಯನ್ನು ಹೊಂದಿರುವ ಮೂರು ತೆರೆದ ತರಗತಿಗಳನ್ನು ನಿರ್ಮಿಸಲು ಸಹಾಯ ಮಾಡಿದರು. ಈ ಸಂಸ್ಥೆಗಳಲ್ಲಿ ಒಂದರ ಸಹಾಯದಿಂದ ನೇಮಕಗೊಂಡ ಇಬ್ಬರು ಶಿಕ್ಷಕರು, ವಿದ್ಯಾರ್ಥಿಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಅವರಿಗೆ ಗಣಿತ, ಬಂಗಾಳಿ, ಇತಿಹಾಸ, ಭೂಗೋಳ ಮತ್ತು ಇತರ ವಿಷಯಗಳನ್ನು ಕಲಿಸುತ್ತಾರೆ. ಈ ಮಧ್ಯೆ, ರೇಬಾದಿ ಮಕ್ಕಳಿಗೆ ಬೆಳಿಗ್ಗೆ ಮತ್ತು ಸಂಜೆ ಉಪಹಾರವನ್ನು ಸಿದ್ಧಪಡಿಸುತ್ತಾರೆ - ಬೆಲ್ಲದೊಂದಿಗೆ ಅನ್ನ, ಅಥವಾ ರೊಟ್ಟಿ ಮತ್ತು ಬೇಯಿಸಿದ ಬಿಳಿ ಬಟಾಣಿ - ಮೆನು ಬದಲಾಗುತ್ತಲೇ ಇರುತ್ತದೆ.
ಬೆಳಿಗ್ಗೆ 9:30ಕ್ಕೆ ಮಕ್ಕಳು ಮನೆಗೆ ಓಡಿ ಹೋಗಿ ಸರ್ಕಾರಿ ಶಾಲೆಗೆ ಹೋಗಲು ಸಿದ್ಧರಾಗುತ್ತಾರೆ. ಈ ಸರ್ಕಾರಿ ಶಾಲೆಯು ಹಿಂದೆ ಶಿಥಿಲಗೊಂಡ ಗುಡಿಸಲಿನಲ್ಲಿತ್ತು, ಆದರೆ ಈಗ ನಾಲ್ಕು ಕೊಠಡಿಗಳ ಕಾಂಕ್ರೀಟ್ ಕಟ್ಟಡದಲ್ಲಿದೆ. ಇಲ್ಲಿನ ಏಕೈಕ ಮತ್ತು ಹಿರಿಯ ಶಿಕ್ಷಕರಾದ ಅನಂತೋ ಬಾಬು ಎಲ್ಲಾ ವಿದ್ಯಾರ್ಥಿಗಳಿಗೆ ಎಲ್ಲಾ ಪಾಠಗಳನ್ನು ಕಲಿಸಲು ಹೆಣಗಾಡುತ್ತಾರೆ. ಸರ್ಕಾರಿ ಶಾಲೆಯಲ್ಲಿ ನೀಡಲಾಗುವ ಮಧ್ಯಾಹ್ನದ ಊಟ ಮತ್ತು ಉಚಿತವಾಗಿ ನೀಡುವ ಪುಸ್ತಕಗಳು ಮಕ್ಕಳಿಗೆ ಹೆಚ್ಚು ಆಕರ್ಷಕವಾಗಿವೆ.
ಈ ಮಕ್ಕಳು ಸಂಜೆ 4 ಗಂಟೆಗೆ ಮತ್ತೆ ಮುರ್ಮು ಅವರ ಶಾಲೆಗೆ ಹಿಂದಿರುಗುತ್ತಾರೆ. ಅವರು ಅಲ್ಲಿ ಕತ್ತಲಾಗುವವರೆಗೆ ಆಟವಾಡುತ್ತಾರೆ. ನಂತರ ಅವರಿಗೆ ಸಂಜೆಯ ತಿಂಡಿ ಸಿಗುತ್ತದೆ ಮತ್ತು ಅವರು ಓದಲು ಕುಳಿತುಕೊಳ್ಳುತ್ತಾರೆ. ರಾತ್ರಿ 9 ಗಂಟೆಗೆ ಅವರು ತಮ್ಮ ಮನೆ ತಲುಪುತ್ತಾರೆ.
ಶಾಲೆಯ ಜೊತೆಗೆ, ರೇಬಾ ಮುರ್ಮು ಅವರು 2008ರಲ್ಲಿ ತಮ್ಮ ಗ್ರಾಮದ ಮಹಿಳೆಯರನ್ನು ಒಗ್ಗೂಡಿಸಲು ಚಾಚನಪುರ ಆದಿವಾಸಿ ಮಹಿಳಾ ಬಿಕಾಶ್ ಸೊಸೈಟಿಯನ್ನು ಪ್ರಾರಂಭಿಸಿದರು. ಇತರ ಚಟುವಟಿಕೆಗಳೊಂದಿಗೆ, ಈ ಸೊಸೈಟಿಯು ಕೋಲ್ಕತ್ತಾದ ಮತ್ತೊಂದು ಸಂಘಟನೆಯೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡಿ, ಮಹಿಳೆಯರಿಗೆ ತಮ್ಮ ಸಣ್ಣ ಜಮೀನುಗಳಿಂದ ಉತ್ತಮ ಇಳುವರಿ ಪಡೆಯಲು ತರಬೇತಿ ನೀಡಿತು.
ರೇಬಾ, ತರಕಾರಿ ವ್ಯಾಪಾರ ಮಾಡುತ್ತಿದ್ದ ತಮ್ಮ ಚಿಕ್ಕಮ್ಮನಿಗೆ 50 ಪೈಸೆ ನಾಣ್ಯಕ್ಕೂ ಮತ್ತು ಒಂದು ರೂಪಾಯಿ ನಾಣ್ಯಕ್ಕೂ ವ್ಯತ್ಯಾಸ ಹೇಳಲು ಸಾಧ್ಯವಾಗುತ್ತಿರಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ. ಇದು ಓದು ಮತ್ತು ಬರಹದ ಮಹತ್ವವನ್ನು ಕುಟುಂಬಕ್ಕೆ ಮನವರಿಕೆ ಮಾಡಿಕೊಟ್ಟಿತು. "ನಮಗೆ [ಪರಿಶಿಷ್ಟ ಪಂಗಡಗಳಿಗೆ] ಉದ್ಯೋಗ ನೀಡಲು ಸರ್ಕಾರದ ಮೀಸಲಾತಿ ಎನ್ನುವುದು ನಮಗೆ ತಿಳಿದಿದೆ, ಆದರೆ ನಾವು ಓದದಿದ್ದರೆ ಅವರು ಯಾರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು? ಕೇವಲ ಒಂದು ತಲೆಮಾರಿಗೆ ಸರಿಯಾದ ಮಾರ್ಗದರ್ಶನ ದೊರೆತರೆ, ಉತ್ತಮ ದಿನಗಳು ತಾನಾಗಿಯೇ ಬರುತ್ತವೆ" ಎಂದು ಅವರು ಹೇಳುತ್ತಾರೆ.















