“ಮುಸ್ಕೇನಿ ಗಿಡದ ಕೋಮಲ ಹಸಿರು ಎಲೆಗಳು ಮಳೆಯಾದ ನಂತರ ಸಿಹಿಯಾಗಿರುತ್ತವೆ. ಬೇಸಗೆಯಲ್ಲಿ ಬಿಸಿಲಿಗೆ ಸುಟ್ಟಂತಾಗಿ ಗಟ್ಟಿಯಾಗಿರುತ್ತವೆ” ಎನ್ನುತ್ತಾರೆ ಕೌಶಲ್ಯಾ. ಅವರು ತಮ್ಮ ಎರಡು ಕೋಣೆಗಳ ಪಕ್ಕಾ ಮನೆಯ ವರಾಂಡದ ಬಳಿಯ ತೆರೆದ ಪ್ರದೇಶದಲ್ಲಿ ಅಡುಗೆಮನೆಯಲ್ಲಿ ನಮ್ಮೊಂದಿಗೆ ಮಾತನಾಡುತ್ತಿದ್ದರು. ನಮ್ಮೊಂದಿಗೆ ಮಾತನಾಡುತ್ತಲೇ ಪ್ರೆಷರ್ ಕುಕ್ಕರ್ ಒಂದಕ್ಕೆ ತೊಳೆದ ಬೇಳೆ (ಅರಹರ್ ದಾಲ್) ಹಾಕಿ, ಅದರೊಂದಿಗೆ ಒಂದಷ್ಟು ಮುಸ್ಕೇನಿ ಸೊಪ್ಪು,ಕೆಲವು ಹಸಿಮೆಣಸು, ಅರಶಿನ ಪುಡಿ ಮತ್ತುಉಪ್ಪು ಹಾಕಿ ಬೇಯಲು ಇಟ್ಟರು.
“ಮುಸ್ಕೇನಿ ಭಾಜಿ [ಸೊಪ್ಪು] ಅರ್ಹರ್ [ತೊಗರಿ ಬೇಳೆ] ಮತ್ತು ಚನಾ ದಾಲ್ [ಕಡಲೆ ಬೇಳೆ] ಜೊತೆಗೆ ಚೆನ್ನಾಗಿ ಹೊಂದುತ್ತದೆ” ಎಂದು ಕೌಶಲ್ಯಾ ಮಾತು ಮುಂದುವರೆಸುತ್ತಾರೆ, ಅವರು ಛತ್ತೀಸ್ಗಢದ ಕಾಡುಗಳಲ್ಲಿ ಬೆಳೆಯುವ ಮುಸ್ಕೇನಿ ಸೊಪ್ಪಿನ ಅಡುಗೆ ವಿಧಾನಗಳನ್ನು ನಮ್ಮೊಂದಿಗೆ ಸಂಭ್ರಮದಿಂದ ಹಂಚಿಕೊಳ್ಳುತ್ತಿದ್ದರು. ಈ ಸೊಪ್ಪನ್ನು ಸಾಮಾನ್ಯವಾಗಿ ಬೇಳೆಯೊಂದಿಗೆ ಬೆರೆಸಲಾಗುತ್ತದೆ. ಕುಕ್ಕರ್ ಮೂರು ಅಥವಾ ನಾಲ್ಕು ಸೀಟಿ ಕೂಗುವುದನ್ನು ಕಾಯುತ್ತಾ, ಅವರು ಬೇಳೆಗೆ ಒಗ್ಗರಣೆಗಾಗಿ ಇಡೀ ಬೆಳ್ಳುಳ್ಳಿ ತುಂಡುಗಳು, ಟೊಮಾಟೊ, ಈರುಳ್ಳಿ ಮತ್ತು ಕೆಲವು ಒಣಗಿದ ಒಣ ಮೆಣಸಿನಕಾಯಿಗಳನ್ನು ಸಿದ್ಧಪಡಿಸಿಕೊಂಡರು. ತರಕಾರಿ ಹೆಚ್ಚಲು ಅವರು ಈಳಿಗೆ ಮಣೆ (ಪಾನಿಕಿ) ಬಳಸುತ್ತಾರೆ.













