"ಅಪ್ಪ ಯಾವಾಗಲೂ ಸಮುದ್ರದಲ್ಲಿ ಇಳಿದು ಕೆಲಸ ಮಾಡೋರಿಗೆ ಸಾವಿನ ಭಯ ಇರೋದಿಲ್ಲ ಅಂತಿದ್ರು. ಆದ್ರೆ ಈಗ ಅದು ಸುಳ್ಳು ಅನ್ನಿಸ್ತಿದೆ [ಅಬ್ಬಾ ಝೂಠ್ ಬೋಲ್ತೇ ಥೇ ಕಿ, ಜೇ ದರಿಯಾ ಮಾ ರೇಹ್ತಾ ಹೊಯ್ ಎಮ್ನೆ ಮೌತ್ ನೋ ಡರ್ ನಾ ಹೊಯ್]. ನಾನು 17 ವರ್ಷದವನಿರುವಾಗ ಹಡಗು ನಡೆಸಲೆಂದು ಕಡಲಿಗೆ ಇಳಿಯುವ ಸಂದರ್ಭದಲ್ಲಿ ಹೀಗೆ ಹೇಳಿದ್ದರು" ಎನ್ನುತ್ತಾ 43 ವರ್ಷದ ನಝೀರ್ ಜುನಾಸ್ ಭಾಯಾ ತಮ್ಮ ಕೈಗಳನ್ನು ನೋಡಿಕೊಳ್ಳತೊಡಗಿದರು. ಒಮಾನ್ ಕೊಲ್ಲಿಯಲ್ಲಿ ಇತ್ತೀಚೆಗೆ ಮುಳುಗಿದ ಎಮ್ಎಸ್ವಿ ಅಲ್ ಫೈಜ್ ನೂರ್ ಇಸುಲೈಮಾನಿ ಹಡಗನ್ನು ಅದೇ ಕೈಗಳು ಆರು ತಿಂಗಳ ಕಾಲ ನಡೆಸಿದ್ದವು. ಕ್ಯಾಪ್ಟನ್ ಆದೇಶದಂತೆ ತಾನು ಮುನ್ನಡೆಸುತ್ತಿದ್ದ ಹಡಗಿಗೆ ಕ್ಷಿಪಣಿ ಬಡಿದ ಕ್ಷಣವನ್ನು ನೆನಪಿಸಿಕೊಂಡು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು.
"ಅಬ್ಬಾ ಝೂಠ್ ಬೋಲ್ತೇ ಥೇ [ಅಪ್ಪ ಸುಳ್ಳು ಹೇಳ್ತಿದ್ರು]" ಎಂದು ಅವರು ಮತ್ತೊಮ್ಮೆ ಹೇಳಿದರು. "ಮೇಂ ತೋ ಲಾಂಚ್ ಮೇ ಪಾನಿ ದೇಖ್ ಕರ್ ಹೈಬತ್ ಖಾ ಗಯಾ ಥಾ [ಲಾಂಚಿನ ಒಳಗೆ ನೀರು ನುಗ್ಗುವುದನ್ನು ನೋಡಿ ನನಗೆ ಜೀವ ಬಾಯಿಗೆ ಬಂದಿತ್ತು]. ಅಂದು 2026ರ ಮೇ ತಿಂಗಳ 8ನೇ ತಾರೀಖಿನ ನಡುರಾತ್ರಿ 12 ಗಂಟೆ ದಾಟಿತ್ತು. ಕ್ಷಿಪಣಿಯೊಂದು ನಮ್ಮನ್ನು ಸಾಯಿಸಲೆಂದೇ ನಮ್ಮೆಡೆಗೆ ಬಂದಂತಿತ್ತು. ಇರಾನ್ ಹಾರ್ಮುಜ್ ಸಂಧಿಗೆ ಸಂಬಂಧಿಸಿದಂತೆ ನಮ್ಮ ಮೇಲೆ ಯಾವುದೇ ನಿರ್ಬಂಧವನ್ನು ಹೇರಿರಲಿಲ್ಲ. ಹೀಗಾಗಿ ಅವರು ಈ ಕ್ಷಿಪಣಿಯನ್ನು ನಮ್ಮತ್ತ ಗುರಿ ಮಾಡಿರುವ ಸಾಧ್ಯತೆಯಿಲ್ಲ. ಮೊದಲಿಗೆ ದೊಡ್ಡ ಸದ್ದು ಕೇಳಿತು, ಮತ್ತೆ ಕಣ್ಣುಮುಚ್ಚಿ ತೆರೆಯುವುದರ ಒಳಗೆ ಬೆಂಕಿ ಹೊತ್ತಿಕೊಂಡಿತ್ತು." ಸಾಮಾನ್ಯವಾಗಿ ತನ್ನ ಜನರೊಂದಿಗೆ ಕಚ್ಛಿ ಸಿಂಧಿ ಭಾಷೆ ಮಾತನಾಡುವ ನಝೀರ್ ಅಂದು ನಮ್ಮೊಂದಿಗೆ ಗುಜರಾತಿ ಬೆರೆತ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಒಂದಷ್ಟು ಹೊತ್ತು ಮಾತನಾಡಿದ ಅವರು ಮತ್ತೆ ಮೌನದ ಚಿಪ್ಪಿನೊಳಗೆ ಸೇರಿಕೊಂಡರು. ನಾವು ಗುಜರಾತ್ ರಾಜ್ಯದ ದ್ವಾರಕಾ ಜಿಲ್ಲೆಯ ಬಂದರು ನಗರವಾದ ಸಲಾಯದಲ್ಲಿರುವ ಒಂದು ಅಂತಸ್ತಿನ ಅವರ ಮನೆಯಲ್ಲಿ ಕುಳಿತು ಮಾತನಾಡುತ್ತಿದ್ದೆವು.
























