ಸಾಮಾನ್ಯವಾಗಿ ಜನರು ಮೊದಲು ಜಾನುವಾರು ಖರೀದಿಸಿ ನಂತರ ಅದಕ್ಕೆ ಬೇಕಾದ ಮೇವಿನ ಕುರಿತು ಯೋಚಿಸತೊಡಗುತ್ತಾರೆ. ಆದರೆ ಜಸ್ವಿಂದರ್ ಕೌರ್ ಮತ್ತು ಅವರ ಪತಿ ಜಗಸೀರ್ ಸಿಂಗ್ ಇದಕ್ಕೆ ಅಪವಾದ. ಅವರು ಮೊದಲು ಮೇವಿನ ಕುರಿತು ಯೋಚಿಸಿದರು.
ಅವರು ತಾವು ಖರೀದಿಸಲಿರುವ ಎಮ್ಮೆಗಾಗಿ ಮೇವು ಸಂಗ್ರಹಿಸಡಲೆಂದು ಒಂದು ಕುಪ್ ನಿರ್ಮಿಸುತ್ತಿದ್ದಾರೆ. ಈ ಬಾರಿ ಟೂರಿ (ಒಣ ಮೇವಾಗಿ ಬಳಸುವ ಗೋಧಿ ಹುಲ್ಲು) ಬೆಲೆ ಶೇಕಡಾ 75ರಷ್ಟು ಕುಸಿದಿದೆ ಎನ್ನುವ ಸುದ್ದಿ ಅವರನ್ನು ಈ ಕಾರ್ಯಕ್ಕೆ ಮುಂದಾಗುವಂತೆ ಮಾಡಿದೆ. 2024ರಲ್ಲಿ 800-1,000 ರೂಪಾಯಿಗೆ ಮಾರಾಟವಾಗುತ್ತಿದ್ದ ಟೂರಿ ಈ ಹಂಗಾಮಿನಲ್ಲಿ 200-250 ರೂಪಾಯಿಗೆ ಮಾರಾಟವಾಗುತ್ತಿದೆ.
ಹೀಗಾಗಿ ಈ ದಂಪತಿ ಸಂಗ್ರೂರ್ ಜಿಲ್ಲೆಯ ಚಾಂಗ್ಲಿವಾಲಾ ಗ್ರಾಮದಲ್ಲಿರುವ ಎಮ್ಮೆಯನ್ನು ತಮ್ಮ ಮನೆಗೆ ತರುವ ಮೊದಲೇ ಅದಕ್ಕೆ ಬೇಕಾಗುವ ಮೇವನ್ನು ಖರೀದಿಸಲು ತೀರ್ಮಾನಿಸಿದರು.
ಅವರ 27 ವರ್ಷದ ಮಗ ಉದಯೋನ್ಮುಖ ಕಬ್ಬಡ್ಡಿ ಆಟಗಾರನಾಗಿದ್ದು, ಅವರಿಗೆ ಹೆಚ್ಚು ಪೋಷಕಾಂಶ ಬೇಕು ಎನ್ನುವ ಕಾರಣಕ್ಕಾಗಿ ಈ ಎಮ್ಮೆಯನ್ನು ಕೊಳ್ಳುವ ನಿರ್ಧಾರ ಮಾಡಲಾಗಿದೆ. ಒಂದು ಲೋಟ ಎಮ್ಮೆ ಹಾಲು ಕುಡಿದರೆ ಮಗನ ತಾಖತ್ತು ಹೆಚ್ಚುತ್ತದೆ ಎನ್ನುವುದು ಪೋಷಕರ ಯೋಚನೆ. "ಹಾಲು ಒಳ್ಳೆಯ ಆಹಾರ, ಅದರಲ್ಲೂ ಊರಿನಲ್ಲಿ ಕಬ್ಬಡ್ಡಿ ಆಡುವ ನಮ್ಮ ಮಗನಿಗೆ" ಎಂದು 50 ವರ್ಷದ ಜಸ್ವಿಂದರ್ ಹೇಳುತ್ತಾರೆ. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ, ಒಬ್ಬರು ಮದುವೆಯಾಗಿ ದೂರ ವಾಸಿಸುತ್ತಿದ್ದಾರೆ ಮತ್ತು ಇನ್ನೊಬ್ಬರು ಗಗನ್ (25). ಇವರು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಕೆಲ ವರ್ಷಗಳ ಹಿಂದೆ ತಾಯಿ ಅನಾರೋಗ್ಯಕ್ಕೆ ಒಳಗಾದ ಕಾರಣ ಅವರು ಪ್ರಸ್ತುತ ಮನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾ ರೆ.
ಕುಟುಂಬವು ಕುಪ್ಪ ಮಾಡಿಸುವುದೆಂದು ತೀರ್ಮಾನಿಸಿದ ನಂತರ, ಜಗಸೀರ್ ಅವರ ತಾಯಿಯ ಸೋದರ ಸಂಬಂಧಿಯಾದ ಗುರ್ಮೇಲ್ ಸಿಂಗ್ ಎನ್ನುವವರನ್ನು ಸಂಪರ್ಕಿಸಲು ತೀರ್ಮಾನಿಸಿತು. 60 ವರ್ಷದ ಈ ಹಿರಿಯ ಕುಶಲಕರ್ಮಿ, ಕಳೆದ 40 ವರ್ಷಗಳಲ್ಲಿ ಅಂದಾಜು 2,000 ಕ್ಕೂ ಹೆಚ್ಚು ಕುಪ್ಪಗಳನ್ನು ನಿರ್ಮಿಸಿರುವುದಾಗಿ ಹೇಳುತ್ತಾರೆ. "ನಾವು ಗೋಧಿ ಕೊಯ್ಲು ಮಾಡಿದ ನಂತರದ ತಿಂಗಳುಗಳಲ್ಲಿ ಪ್ರತಿದಿನ ಕನಿಷ್ಠ ಎರಡಾದರೂ ಕುಪ್ಪಗಳನ್ನು ಮಾಡುತ್ತಿದ್ದೆವು" ಎಂದು ಗುರ್ಮೈಲ್ ಹೇಳುತ್ತಾರೆ.
ಈ 'ಕುಪ್ಪ್' ಎನ್ನುವುದು ಹುಲ್ಲಿನ ಸಂಗ್ರಹಕ್ಕಾಗಿ ನಿರ್ಮಿಸಲಾಗು ಗುಮ್ಮಟಾಕಾರದ, ಕಡಿಮೆ-ವೆಚ್ಚದ ತಾತ್ಕಾಲಿಕ ರಚನೆ. ಒಂದು ಕಾಲದಲ್ಲಿ ಪಂಜಾಬಿನ ಗ್ರಾಮೀಣ ಪರಿಸರದ ಅವಿಭಾಜ್ಯ ಅಂಗವಾಗಿದ್ದ ಇದನ್ನು ಈಗ ಹುಡುಕುವುದು ಕಷ್ಟ. ದೆಹಲಿಯಿಂದ ಪಂಜಾಬಿನ ಚಾಂಗ್ಲಿವಾಲಾಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾನು, ಬೆರಳೆಣಿಕೆಯಷ್ಟು ಕುಪ್ಪಗಳನ್ನು ಮಾತ್ರವೇ ಕಂಡೆ.



















