ದೇವತೆಗಳೆಲ್ಲಾ ಒಂದೆಡೆ ಸಭೆ ಸೇರುತ್ತಾರೆ. ಒಂದೆರಡಲ್ಲ, ಅದಕ್ಕೂ ಹೆಚ್ಚು.
ಬಸ್ತಾರ್ ಪ್ರದೇಶದ ದೇವತೆಗಳೆಲ್ಲಾ ವರ್ಷಕ್ಕೊಮ್ಮೆ ಜಿಲ್ಲೆಯ ಪ್ರಧಾನ ಕಚೇರಿ ಇರುವ ನಾರಾಯಣಪುರದ ಮಾವ್ಲಿಮೇಳದಲ್ಲಿ ಬೇಟಿಯಾಗುತ್ತಾರೆ. ಸುಗ್ಗಿ ತಿಂಗಳ ನಂತರ ನಡೆಯುವ ಮಡಾಯಿ (ದೇವತೆಗಳ ಬೇಟಿ) ಎಂಬ ಈ ವಾರ್ಷಿಕ ಜಾತ್ರೆಗೆ 700 ವರ್ಷಗಳಿಗಿಂತಲೂ ಹಳೆಯ ಇತಿಹಾಸವಿದೆ.
ಛತ್ತಿಸ್ಘರ್ನ ಬಸ್ತಾರ್ ಪ್ರದೇಶದ ಮತ್ತು ಸುತ್ತಮುತ್ತಲಿನ ದೇವತೆಗಳನ್ನು ಆದಿವಾಸಿ ಕುಟುಂಬಗಳು ಮತ್ತು ಸಮುದಾಯಗಳು ಇಲ್ಲಿಗೆ ಹೊತ್ತು ತರುತ್ತಾರೆ. ಅಭೂಜ್ಮಾಡ್ನಿಂದ (ಅಭೂಜ್ಮಾರ್ ಎಂದೂ ಕರೆಯುತ್ತಾರೆ), ಕಾಂಕೇರ್ನಂತಹ ದೂರ ದೂರದ ಊರುಗಳಿಂದಲೂ ಜನರು ತಮ್ಮ ದೇವರನ್ನು ಕರೆದುಕೊಂಡು ಇಲ್ಲಿಗೆ ಬರುತ್ತಾರೆ. ವಾದ್ಯ ಸಂಗೀತಕ್ಕೆ ಕುಣಿಯುತ್ತಾ ಸಂಭ್ರಮದಿಂದ ಜನರು ಮರೆವಣಿಗೆಯಲ್ಲಿ ಇಲ್ಲಿಗೆ ಬರುತ್ತಾರೆ.
ಜನರು ತಮ್ಮ ಕುಲದೇವರನ್ನು ಮಡಾಯಿಗೆ ಕರೆತರುತ್ತಾರೆ. ಈ ಆದಿವಾಸಿ ಜನರು ತಮ್ಮ ಪೂರ್ವಜರನ್ನು ದೇವತೆಗಳು ಎಂದು ನಂಬುತ್ತಾರೆ. ಹೀಗೆ ಮಾವ್ಲಿಮೇಳಕ್ಕೆ ಬರುವ ಒಂದು ಕುಟುಂಬದ ದೇವರು ಇನ್ನೊಂದು ಕುಟುಂಬದ ದೇವರನ್ನು ಬೇಟಿ ಮಾಡುತ್ತದೆ. ಸಾಮಾನ್ಯ ಮನುಷ್ಯರಂತೆ ವರ್ತಿಸುವ ಈ ಆದಿವಾಸಿ ದೇವತೆಗಳು ತಮ್ಮ ಸಂಬಂಧಿಕರನ್ನು ಈ ಜಾತ್ರೆಯಲ್ಲಿ ಬೇಟಿ ಮಾಡಿ, ಅಪ್ಪಿಕೊಂಡು ಸಂಭ್ರಮಿಸುತ್ತವೆ.
“ಒಂದು ವಾರ ಈ ಮೇಳ ನಡೆಯುತ್ತದೆ,” ಎಂದು ನಾರಾಯಣಪುರದ ನಿವಾಸಿ, ಹಿರಿಯರಾದ ಬಿಸ್ವನಾಥ ದೇವಾಂಗನ್ ಹೇಳುತ್ತಾರೆ. ಇವರು ಆದಿವಾಸಿ ಸಮುದಾಯದಕ್ಕೆ ಸೇರಿದವರಲ್ಲ. ಬುಡಕಟ್ಟು ಸಮುದಾಯಗಳಿಗೆ ಸೇರದ ಅನೇಕರು ಈ ಜಾತ್ರೆಗೆ ಸಾಕ್ಷಿಯಾಗುತ್ತಾರೆ.
ಮಾವ್ಲಿ ಮಾತೆಯ [ಮಾತೃದೇವತೆ] ಮೇಳದೊಂದಿಗೆ ಜಾತ್ರೆ ಅರಂಭವಾಗುತ್ತದೆ, ನಂತರ ಸುತ್ತಮುತ್ತಲಿನ ಇತರ ದೇವತೆಗಳು ಇಲ್ಲಿಗೆ ಬರುತ್ತವೆ. ಇದನ್ನೂ ಓದಿ: ಗಂಗ್ರೇಲ್: ಗುಳೆಹೋದ ದೇವತೆಯ ನರ್ತನ
ನಾನು ಫೆಬ್ರವರಿ ತಿಂಗಳ ಒಂದು ದಿನ ಬೆಳಗ್ಗೆ ಈ ಜಾತ್ರೆಗೆ ಬಂದಿದ್ದೆ. ಮಾರುಕಟ್ಟೆಯ ಬಳಿ ಇರುವ ನಾರಾಯಣಪುರದ ಮೈದಾನಗಳಲ್ಲಿ ಜನರು ಬೇಗ ಬೇಗನೇ ಬಂದು ಸೇರುತ್ತಿದ್ದರು. ಸಾವಿರಾರು ಜನರು ಬಸ್ಸು, ಟ್ಯಾಕ್ಸಿಗಳಲ್ಲಿ ಬರುತ್ತಿದ್ದರು. ಅನೇಕರು ಒಂದು ದಿನದ ಹಿಂದೇಯೇ ತಮ್ಮ ಊರುಗಳನ್ನು ಬಿಟ್ಟು ನಡೆದುಕೊಂಡು ಇಲ್ಲಿಗೆ ಬಂದಿದ್ದರು. ತುಂಬಾ ಜನ ಬರಿಗಾಲಿನಲ್ಲಿ ನಡೆದುಕೊಂಡು ಬಂದಿದ್ದರು.
























