ರಾಮಪ್ರಸಾದ್ ಮತ್ತು ಅವನ ಗೆಳೆಯರು ಸಣ್ಣ ಏಡಿಗಳನ್ನು (ಸ್ಕಿಲ್ಲಾ ಸೆರಾಟಾ) ಹಿಡಿದು ಒಂದು ಪ್ಲಾಸ್ಟಿಕ್ ಬಾಟಲಿ ಹಾಕಿಟ್ಟಿದ್ದರು. ನೋಡಲು ಅವು ಸಣ್ಣ ಗಾತ್ರದಲ್ಲಿದ್ದವು. ಅಂಗೈಯಲ್ಲಿ ಹಿಡಿದುಕೊಂಡರೆ ಒಂದು ಬಾರಿಗೆ ಐದಾರು ಏಡಿಗಳನ್ನು ಹಿಡಿದುಕೊಳ್ಳಬಹುದು ಹಾಗಿದ್ದವು. ಈಗ ಈ ಗೆಳೆಯರು ಆ ಏಡಿಗಳನ್ನು ಉಪ್ಪು ಮತ್ತು ಖಾರದ ಪುಡಿ ಹಾಕಿ ಕುಟ್ಟಿ ತಿನ್ನಲು ಉತ್ಸುಕರಾಗಿದ್ದರು.
ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯ ಬಂಜಾರ ಸಮುದಾಯದ ಮಾಲಕವಾರಿಪಲ್ಲಿ ತಾಂಡಾದ ಈ ಹುಡುಗರು ಅದೇ ಊರಿನ ದಟ್ಟ ಮರಗಳ ನೆರಳಿನಡಿ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯುತ್ತಿದ್ದರು. ಅವರ ಬಳಿಯಿದ್ದ ಕೆಸರು ಏಡಿಯನ್ನು, ʼಹಸಿರು ಏಡಿʼ ಮತ್ತು ʼಮ್ಯಾಂಗ್ರೋವ್ ಏಡಿʼ ಎಂದೂ ಕರೆಯಲಾಗುತ್ತದೆ. ಮತ್ತು ಇವು ಭಾರತದ ಪೂರ್ವ ಕರಾವಳಿ ಭಾಗದಲ್ಲಿ ಕಂಡುಬರುತ್ತವೆ.
ಸದಾ ಶಾಂತವಾಗಿರುವ ಅಮದಗೂರು ಮಂಡಲವೆನ್ನುವುದು ಕಣಿವೆ ಪ್ರದೇಶ. ಇಲ್ಲಿ ಭತ್ತದ ಗದ್ದೆಗಳು, ಟೊಮ್ಯಾಟೊ ಮತ್ತು ಮೆಣಸಿನ ಗಿಡಗಳ ಹೊಲಗಳನ್ನು ನೀವು ಕಾಣಬಹುದು. ಊರಿನ ಸುತ್ತ ಅಷ್ಟೇನೂ ಎತ್ತರವಲ್ಲದ ಬೆಟ್ಟಗಳಿವೆ. ಈ ಊರು ನೋಡಲು ಸೊಂಪಾಗಿದ್ದರೂ ಇಲ್ಲಿ ನೀರು ಸಿಗಬೇಕೆಂದರೆ 800 ರಿಂದ 1,200 ಅಡಿಗಳಷ್ಟು ಆಳದವರೆಗೆ ಕೊಳವೆಬಾವಿಗಳನ್ನು ಕೊರೆಯಬೇಕಾಗುತ್ತದೆ ಎಂದು ಊರಿನ ಜನರು ಹೇಳುತ್ತಾರೆ. ಆದರೂ ಊರಿನಲ್ಲಿ ಬೇಸಾಯ ನೀರಾವರಿಯನ್ನು ದಿನಕ್ಕೆ ಎಂಟು ಗಂಟೆಳ ತನಕ ಸೀಮಿತಗೊಳಿಸಲಾಗಿದೆ.






