“ಹೇಯ್! ಅಲ್ಲೇನು ಮಾಡುತ್ತಿದ್ದೀರಿ?” ಎಂದು ಕೇಳಿದ ಅವರ ದನಿ ಕಠೋರವಾಗಿದ್ದರೂ ಅದರಲ್ಲಿ ಕುತೂಹಲವೂ ಬೆರೆತಿತ್ತು ಎನ್ನುವುದನ್ನು ಅವರ ನೋಟ ಹೇಳುತ್ತಿತ್ತು.
ಆಗ ನನಗೆ ಅರಿವಾಯಿತು. ನಾನು ಹೋಗಿದ್ದು ಸಾಮಾನ್ಯವಾಗಿ ಜನರು ಹೋಗುವ ಸ್ಥಳವಾಗಿರಲಿಲ್ಲವೆಂದು.
ಅನಿರುದ್ಧ ಸಿಂಗ್ ಪಾಟರ್ ದಡದಿಂದ ನದಿಯ ಕಡೆಗೆ ಜಿಗಿದರು, ಅಲ್ಲಿ ಇದ್ದಕ್ಕಿದ್ದಂತೆ ನಿಂತು, ತಿರುಗಿ, ನೋಡುತ್ತಾ, ನನ್ನನ್ನು ಎಚ್ಚರಿಸಿದರು: "ಆ ಸ್ಥಳದಲ್ಲಿ ಹೆಣಗಳನ್ನು ಸುಡುತ್ತಾರೆ. ನಿನ್ನೆ ಕೂಡಾ ಒಂದು ಹೆಣವನ್ನು ಸುಟ್ಟಿದ್ದಾರೆ. ಬನ್ನಿ ಅಲ್ಲಿ ನಿಲ್ಲಬಾರದು. ನನ್ನ ಜೊತೆ ಬನ್ನಿ!"
ಅವರು ಹೇಳಿದ್ದೂ ಸರಿಯಿತ್ತು. ತಮ್ಮ ಜೀವವನ್ನೇ ತೆತ್ತು ಸತ್ತವರು ಗಳಿಸಿಕೊಂಡ ಏಕಾಂತವನ್ನು ನಾವು ಭಂಗಗೊಳಿಸಬಾರದು.
ಎರಡು ಮೀಟರ್ ಎತ್ತರದ ನದಿಯ ದಡದಿಂದ ಇಳಿದು, ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಕಂಗ್ಸಾಬತಿ ನದಿಯ ಮೊಣಕಾಲು ಆಳದ ನೀರಿನಲ್ಲಿ ಅವರು ಜಾಣ್ಮೆಯಿಂದ ಸಾಗುತ್ತಿರುವುದನ್ನು ಗಮನಿಸಿದೆ. ಅವರೊಂದಿಗೆ ವೇಗವನ್ನು ಕಾಯ್ದುಕೊಳ್ಳಲು ಕೈಲಾದಷ್ಟು ಪ್ರಯತ್ನಿಸಿ, ದಡದ ಉದ್ದಕ್ಕೂ ವೇಗವಾಗಿ ನಡೆದೆ.
ಅವರ ವಯಸ್ಸನ್ನು ಸುಳ್ಳಾಗಿಸುವಂತಿದ್ದ ಅವರ್ ಚುರುಕುತನ, ಕೌಶಲ ವಿಸ್ಮಯಕಾರಿಯಾಗಿತ್ತು. 50ರ ಆಸುಪಾಸಿನ ಆ ವ್ಯಕ್ತಿಯನ್ನು, "ಕಾಕಾ [ಅಂಕಲ್], ನೀವು ನದಿಯಲ್ಲಿ ಏನು ಮಾಡುತ್ತಿದ್ದೀರಿ?" ಎಂದು ಕೇಳದೆ ಇರಲು ನನಗೆ ಸಾಧ್ಯವಾಗಲಿಲ್ಲ.
ಅನಿರುದ್ಧ ಸೊಂಟದ ಚೀಲವಾಗಿ ಬಳಸಿದ ಬಿಳಿ ಬಟ್ಟೆಯನ್ನು ಬಿಚ್ಚಿರು, ಅದರಲ್ಲಿ ತಾನು ಹಿಡಿದಿದ್ದ ಒಂದಷ್ಟು ಸೀಗಡಿಗಳಲ್ಲಿ ಒಂದನು ನಾಜೂಕಾಗಿ ಹಿಡಿದೆತ್ತಿ ತೋರಿಸುತ್ತಾ, ಮತ್ತು ಮಗುವಿನಂತಹ ಉತ್ಸಾಹದಿಂದ ಹೇಳಿದರು, "ಚಿಂಗ್ರಿ [ಸೀಗಡಿ] ಯನ್ನು ನೋಡಿ. ಇದು ಇಂದು ನಮ್ಮ [ಅವರ ಕುಟುಂಬದ] ಊಟವಾಗಲಿದೆ. ಶುಕ್ನೊ ಲೋಂಕಾ ಮತ್ತು ರೋಸನ್ ಜೊತೆ ಹುರಿದ ಈ ಸೀಗಡಿಗಳು ಗೊರೋಮ್-ಭಟ್ ಜೊತೆ ಅತ್ಯುತ್ತಮ ರುಚಿಯನ್ನು ಹೊಂದಿರುತ್ತವೆ." ಸೀಗಡಿ, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯೊಂದಿಗೆ ಬೇಯಿಸಿ ಬಿಸಿ ಅನ್ನದೊಂದಿಗೆ ಬೆರೆಸಿ ತಿಂದರೆ ರುಚಿಕರವಾಗಿರುತ್ತದೆ.






