ಒಂದು ಲೀಟರ್ ಕತ್ತೆ ಹಾಲಿಗೆ ಏಳು ಸಾವಿರ ರೂಪಾಯಿ? ಯಾವುದಕ್ಕಾದ್ರೂ ಏಳು ಸಾವಿರ ರೂಪಾಯಿ ಒಂದು ಲೀಟರ್ಗೆ ಸಿಗಬಹುದೆ? ವಿಚಿತ್ರ ಎನ್ನಿಸಬಹುದು, ಆದರೆ ಅದು ನಿಜ ಎಂದು ಸೆಪ್ಟೆಂಬರ್ 2020ರ ಕೆಲವು ಪತ್ರಿಕೆಗಳ ಹೆಡ್ಲೈನ್ಗಳು ಹೇಳಿದ್ದವು. ಹೌದು ಒಂದು ಲೀಟರ್ ಹಲಾರಿ ಕತ್ತೆ ಹಾಲಿಗೆ ಗುಜರಾತ್ನ ಸೌರಾಷ್ಟ್ರದಲ್ಲಿ ಆ ಬೆಲೆ ಬಂದಿತ್ತು. ಆದರೆ ಅದು ನಿಜವೆಂದು ಕಂಡು ಬಂದಿದ್ದು ಒಂದು ಘಟನೆಯಲ್ಲಿ ಮಾತ್ರ. ಆದರೆ ಗುಜರಾತ್ನ ಹಲಾರಿ ಪಾಲನಾ ಸಮುದಾಯದ ಜನರ ಬಳಿ ಈ ಬೆಲೆಯ ಕುರಿತು ಕೇಳಿದರೆ ನಿಮ್ಮ ಪೆದ್ದುತನ ನೋಡಿ ನಕ್ಕುಬಿಡುತ್ತಾರೆ.
ಈ ತಳಿಯ ಕತ್ತೆಗಳ ಹಾಲಿನಲ್ಲಿ ಔಷಧೀಯ ಗುಣಗಳಿವೆಯೆಂದು ಹೇಳಲಾಗುತ್ತದೆ. ಮತ್ತು ಇದಕ್ಕೆ ದೊರೆತಿರುವ ಗರಿಷ್ಟ ಬೆಲೆಯೆಂದರೆ ಒಂದು ಲೀಟರಿಗೆ ಗರಿಷ್ಟ ರೂಪಾಯಿ 125 ರೂಪಾಯಿಗಳು. ಅದೂ ಕೂಡ ಸೀಮಿತ ಅಳತೆಯಲ್ಲಿ ಸಂಶೋಧನಾ ಸಂಸ್ಥೆಯೊಂದು ತನ್ನ ಸಂಶೋಧನಾ ಉದ್ದೇಶಗಳಿಗಾಗಿ ಖರೀದಿಸುತ್ತಿರುವುದು.
ಕೊನೆಗೆನಾನು ಸುದ್ದಿ ಪತ್ರಿಕೆಯ ಹೆಡ್ಲೈನ್ ಹಿಂಬಾಲಿಸಿ ಸೌರಾಷ್ಟ್ರಕ್ಕೆ ಬಂದು ಅಲ್ಲಿನ ರಾಜ್ಕೋಟ್ ಜಿಲ್ಲೆಯ ಬಂಜರು ಹತ್ತಿ ಹೊಲಗಳಲ್ಲಿ ನಾನು ಖೋಲಭಾಯ್ ಜುಜುಭಾಯ್ ಭರ್ವಾಡ್ ಅವರನ್ನು ಭೇಟಿಯಾದೆ. ತನ್ನ 60ರ ದಶಕದಲ್ಲಿರುವ ಒಬ್ಬ ಪಶುಪಾಲಕರಾದ ಇವರು ದೇವಭೂಮಿ ದ್ವಾರಕಾ ಜಿಲ್ಲೆಯ ಭನ್ವಾದ್ ಬ್ಲಾಕ್ನ ಜಂಪಾರ್ ಗ್ರಾಮದಲ್ಲಿ ತನ್ನ ಕುಟುಂಬದೊಂದಿಗೆ ತನ್ನ ವಾರ್ಷಿಕ ವಲಸೆ ಮಾರ್ಗದಲ್ಲಿದ್ದರು. ಅವರು ಆಡು ಮತ್ತು ಕುರಿಗಳ ಹಿಂಡಿನ ಜೊತೆ ಐದು ಹಲಾರಿ ಕತ್ತೆಗಳನ್ನು ಸಹ ಸಾಕುತ್ತಿದ್ದರು.
“ರೇಬರಿಮತ್ತು ಭರ್ವಾದ್ ಸಮುದಾಯಗಳು ಮಾತ್ರ ಹಲಾರಿ ಕತ್ತೆಗಳನ್ನು ಸಾಕುತ್ತಾರೆ” ಎಂದು ಖೋಲಭಾಯಿ ಹೇಳಿದರು. ಮತ್ತು ಅವರಲ್ಲಿಯೂ ಕೆಲವೇ ಕುಟುಂಬಗಳು ಮಾತ್ರ “ಈ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿವೆ, ಇವು ನೋಡಲು ಸುಂದರವಾಗಿರುತ್ತವೆಯಾದರೂ ನಮ್ಮ ಜೀವನೋಪಾಯಕ್ಕೆ ಸೂಕ್ತವಾದವುಗಳಲ್ಲ. ಅವುಗಳಿಂದ ಯಾವುದೇ ಆದಾಯ ದೊರೆಯುವುದಿಲ್ಲ.” ಖೋಲಭಾಯಿ ಮತ್ತು ಅವರ ನಾಲ್ಕು ಸಹೋದರರು ಸೇರಿ 45 ಕತ್ತೆಗಳನ್ನು ಸಾಕುತ್ತಿದ್ದಾರೆ.
ಅಲೆಮಾರಿಪಶುಪಾಲಕರ ಆದಾಯವನ್ನು ಲೆಕ್ಕ ಹಾಕಲು ಹೊರಟರೆ ಗೊಂದಲವಾಗುತ್ತದೆ. ಅವರ ಆದಾಯದಲ್ಲಿ ನಿರ್ದಿಷ್ಟತೆಯಾಗಲೀ, ಸ್ಥಿರತೆಯಾಗಲೀ ಇರುವುದಿಲ್ಲ. ಹಾಗೆಯೇ ಇತರರಂತೆ ಅವರಿಗೆ ತಿಂಗಳ ವಿದ್ಯುತ್ ಬಿಲ್, ಗ್ಯಾಸ್ ಬಿಲ್ ಇತ್ಯಾದಿಯೂ ಇರುವುದಿಲ್ಲ. ಆದರೆ ಇದನ್ನು ಜನರಲೈಸ್ ಮಾಡುವಂತಿಲ್ಲ ಎನ್ನುತ್ತವೆ ಭುಜ್ನಲ್ಲಿರುವ ಸಹಜೀವನ ಎನ್ಜಿಓನ ಅಲೆಮಾರಿಪಶುಪಾಲಕರ ಸಂಶೋಧಕರು ನೀಡುವ ಅಂಕಿಅಂಶಗಳು. ಅವರಲ್ಲಿ ಐದು ಜನರ ಕುಟುಂಬಕ್ಕೆ ವಾರ್ಷಿಕ 3 – 5 ಲಕ್ಷಗಳ ಆದಾಯವಿರುತ್ತದೆ (ಹಿಂಡಿನ ಗಾತ್ರವನ್ನು ಅವಲಂಬಿಸಿ). ಮತ್ತು ನಿವ್ವಳ ಆದಾಯ (ಖರ್ಚು ಕಳೆದು) 1 – 3 ಲಕ್ಷದ ತನಕ ಇರುತ್ತದೆ. ಈ ಆದಾಯವು ಕುರಿಯ ಉಣ್ಣೆ ಹಾಗೂ ಕುರಿ ಮತ್ತು ಮೇಕೆ ಹಾಲಿನಿಂದ ದೊರೆಯುವುದು.
ಹಾಗೆ ನೋಡಿದರೆ ಕತ್ತೆಗಳಿಂದ ಅವರಿಗೆ ಸಣ್ಣ ಮಟ್ಟದಲ್ಲಿ ಅಥವಾ ಆದಾಯ ಇಲ್ಲವೇ ಇಲ್ಲ ಎನ್ನಬಹುದು. ವರ್ಷದಿಂದ ವರ್ಷಕ್ಕೆ ಆದಾಯ ಕಡಿಮೆಯಾಗುತ್ತ ಬರುತ್ತಿರುವುದರಿಂದ ಅವರಿಗೆ ಕತ್ತೆಗಳ ಹಿಂಡನ್ನು ಇರಿಸಿಕೊಳ್ಳುವುದು ಕಷ್ಟವಾಗುತ್ತಿದೆ.



















