ವೀಡಿಯೊಗಳು, ಸಾಕ್ಷ್ಯಚಿತ್ರಗಳು, ಕಿರು ತುಣುಕುಗಳು ಮತ್ತು ಗ್ರಾಮೀಣ ಭಾರತದ ಜನರ ಕುರಿತಾದ ಚಲನಚಿತ್ರಗಳು - ಪರಿಯ ಚಲನಚಿತ್ರ ವಿಭಾಗಕ್ಕೆ 2023 ಅತ್ಯಂತ ಪ್ರತಿಫಲದಾಯಕ ವರ್ಷವಾಗಿತ್ತು.
ಒಂದು ಆನ್ ಲೈನ್ ನಿಯತಕಾಲಿಕವಾಗಿ, ನಮ್ಮ ಸುತ್ತಲಿನ ಸುದ್ದಿ ಮತ್ತು ಘಟನೆಗಳನ್ನು ತೀಕ್ಷ್ಣವಾಗಿ ನೋಡುವ ಚಲನಚಿತ್ರಗಳನ್ನು ನಾವು ಪ್ರೋತ್ಸಾಹಿಸುತ್ತೇವೆ. ಬಿಹಾರದ ಮದ್ರಸಾ ಅಜೀಜಿಯಾ ಕುರಿತ ನಮ್ಮ ಚಲನಚಿತ್ರವು ಬಿಹಾರದ ಬಿಹಾರ್ ಶರೀಫ್ ಪಟ್ಟಣದಲ್ಲಿ ಕೋಮು ಪ್ರೇರಿತವಾಗಿ 113 ವರ್ಷ ಹಳೆಯ ಗ್ರಂಥಾಲಯವನ್ನು ಸುಟ್ಟುಹಾಕಿದ ಘಟನೆಯ ನಂತರದ ಪರಿಣಾಮಗಳನ್ನು ಪರಿಶೀಲಿಸಿತು. ಜೈಸಲ್ಮೇರ್ ಜಿಲ್ಲೆಯ ಪವಿತ್ರ ತೋಪುಗಳನ್ನು – ಓರಾಣ್ಗಳನ್ನು ನವೀಕರಿಸಬಹುದಾದ ಇಂಧನ ಉತ್ಪಾದನೆಗಾಗಿ ಸ್ವಾಧೀನಪಡಿಸಿಕೊಳ್ಳುವುದರ ಕುರಿತು ಚರ್ಚೆಯನ್ನು ಒಳಗೊಂಡಿದ್ದ ನಮ್ಮ ಚಲನಚಿತ್ರವು ಸರ್ಕಾರ ಈ ಕುರುಚಲು ಕಾಡುಗಳನ್ನು ಸೌರ ಮತ್ತು ಪವನ ಶಕ್ತಿ ಸ್ಥಾವರಗಳಿಗೆ ಹಸ್ತಾಂತರಿಸಲು 'ಬಂಜರು ಭೂಮಿ' ಎಂದು ವರ್ಗೀಕರಿಸುವುದನ್ನು ಪ್ರಶ್ನಿಸಿತು.
ಅಸ್ಸಾಂ ರಾಜ್ಯದ ಬ್ರಹ್ಮಪುತ್ರಾ ನದಿ ತಟದ ಆದಿವಾಸಿ ಎಮ್ಮೆ ಸಾಕಾಣೆದಾರರೊಬ್ಬರ ಲಿಲ್ಲಿಂಗ್ ಪ್ರೇಮಗೀತೆಯೊಂದಿಗೆ ನಾವು ಈ ವರ್ಷವನ್ನು ಪ್ರಾರಂಭಿಸಿದೆವು. ವರ್ಷವಿಡೀ ನಾವು ಪಶ್ಚಿಮ ಬಂಗಾಳ, ಛತ್ತೀಸಗಢ, ಕರ್ನಾಟಕ, ರಾಜಸ್ಥಾನ ಮತ್ತು ಇತರ ದೇಶದ ವಿವಿಧ ಭಾಗಗಳಿಂದ ಹಾಡುಗಳು ಮತ್ತು ನೃತ್ಯಗಳನ್ನು ನಮ್ಮ ಸಂಗ್ರಹದಲ್ಲಿ ಸೇರಿಸುವ ಕಾರ್ಯವನ್ನು ಮುಂದುವರೆಸಿದೆವು.
ಮತ್ತು ದಶಕಗಳ ಕಾಲದ ಅಸಾಧಾರಣ ಕೆಲಸವಾದ ಪರಿ ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟಿನ ಪ್ರಯಾಣದ ಇತಿಹಾಸವನ್ನು ತಿಳಿಸುವ ಚಲನಚಿತ್ರದೊಂದಿಗೆ ನಾವು ಈ ವರ್ಷವನ್ನು ಕೊನೆಗೊಳಿಸಿದೆವು.
ಈ ವರ್ಷ ನಾವು ವರ್ತ್ ಎನ್ನುವ ಶೀರ್ಷಿಕೆಯ ಪ್ರಮುಖ ಚಲನಚಿತ್ರವೊಂದನ್ನು ಸೇರಿಸಿದ್ದೇವೆ, ಅದು ಪುಣೆಯ ಮಹಿಳಾ ತ್ಯಾಜ್ಯ ಸಂಗ್ರಾಹಕರ ದನಿಯನ್ನು ತೆರೆಯ ಮೇಲೆ ತಂದಿದೆ, ಅವರು "ಕಸವನ್ನು ಉತ್ಪಾದಿಸುವವರು ನೀವಾಗಿರುವಾಗ, ನಾವು 'ಕಚ್ರೇವಾಲಿʼ ['ಕಸದ ಮಹಿಳೆಯರು') ಹೇಗಾಗುತ್ತೇವೆ?" ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಮತ್ತು ಬದಲಾಗುತ್ತಿರುವ ಹವಾಮಾನ ಮಾದರಿಯಿಂದ ಉಂಟಾಗುತ್ತಿರುವ ಪರಿಣಾಮಗಳ ಕುರಿತಾದ ನಮ್ಮ ಚಲನಚಿತ್ರಗಳ ಪಟ್ಟಿಗೆ ಈ ಬಾರಿ ಅಲ್ಫೋನ್ಸೋ ಮಾವಿನ ಕುರಿತಾದ ಚಿತ್ರವೊಂದನ್ನು ಸೇರಿಸಿದ್ದೇವೆ. ಈ ಬೆಳೆಗಾರರು ಹವಮಾನ ವೈಪರೀತ್ಯದ ಸಂತ್ರಸ್ತರಾಗಿದ್ದಾರೆ.
ಈ ವರ್ಷವಿಡೀ, ನಾವು ಸಮುದಾಯಗಳ ಕುರಿತಾದ ನಮ್ಮ ಚಲನಚಿತ್ರಗಳ ಸಂಗ್ರಹಕ್ಕೆ ಹಲವು ಚಿತ್ರಗಳನ್ನು ಸೇರಿಸಿದ್ದೇವೆ: ಮೇಡಪುರಂನಲ್ಲಿ ಮಾದಿಗ ಸಮುದಾಯದ ಜನರು ಯುಗಾದಿ ಆಚರಣೆಯ ಕುರಿತಾದ ಈ ಚಿತ್ರವು ಹೊಸ ದಲಿತ ಸಂಪ್ರದಾಯದ ಧ್ವನಿ ಮತ್ತು ಬಣ್ಣವನ್ನು ಜೀವಂತಗೊಳಿಸಿತು. ಮಲಬಾರ್ ಪ್ರದೇಶದ ವಿವಿಧ ಜಾತಿಗಳು ಮತ್ತು ಸಮುದಾಯಗಳನ್ನು ಒಳಗೊಂಡ ತೋಳ್ಪಾವಕೂತ್ತು ಹೋರಾಟದ ಕಲೆಯ ಕುರಿತಾದ ಈ ದೀರ್ಘ ಚಲನಚಿತ್ರವು ನೆರಳು ಬೊಂಬೆಯಾಟವನ್ನು ಬಳಸಿಕೊಂಡು ಬಹು ಸಾಂಸ್ಕೃತಿಕ ಕಥೆಗಳನ್ನು ಹೇಳುತ್ತದೆ. ಮತ್ತು ನೆರೆಯ ರಾಜ್ಯವಾದ ಕರ್ನಾಟಕದ ಈ ಚಿತ್ರದಲ್ಲಿ, ತುಳುನಾಡಿನ ಭೂತಾರಾಧನೆಯ ನಿರ್ಣಾಯಕ ಭಾಗವಾಗಿರುವ ನಾದಸ್ವರ ವಾದಕರ ಜೀವನವನ್ನು ಸಮೃದ್ಧವಾಗಿ ವಿವರಿಸಲಾಗಿದೆ. ಈಗ ಬಹುತೇಕ ಕಣ್ಮರೆಯಾಗಿರುವ ಲೋಹದ ಆಕೃತಿಗಳನ್ನು ತಯಾರಿಸಲು ಬಳಸುವ ಮೇಣದ ಕಾಸ್ಟಿಂಗ್ ತಂತ್ರದ ಕುರಿತು – ಡೋಕ್ರಾ - ಪಶ್ಚಿಮ ಬಂಗಾಳದಲ್ಲಿ ಚಿತ್ರವೊಂದನ್ನು ತಯಾರಿಸಲಾಗಿದೆ.
ಈ ಚಿತ್ರಗಳನ್ನು ನೋಡಿ!











