ಈ ವರದಿಯು ಪರಿಸರ ವರದಿಯ ವಿಭಾಗದಲ್ಲಿ 2019ರ ವರ್ಷದ ರಾಮನಾಥ್ಗೋ ಯೆಂಕಾ ಪ್ರಶಸ್ತಿಯನ್ನು ಗೆದ್ದ ಪರಿಯ ಹವಾಮಾನ ಬದಲಾವಣೆ ಕುರಿತ ಸರಣಿಯ ಭಾಗವಾಗಿದೆ.

ಕಾಜಲ್ ಲತ ಬಿಸ್ವಾಸ್‍ ಅವರಿಗೆ ಈಗಲೂ ಚಂಡಮಾರುತದ ಭೀಕರ ನೆನಪು ಕಾಡುತ್ತದೆ. 10 ವರ್ಷಗಳ ಹಿಂದೆ ಐಲ ಚಂಡಮಾರುತವು ಸುಂದರ್ಬನ್ ಪ್ರದೇಶವನ್ನು ಅಪ್ಪಳಿಸಿತು. ಈಗಲೂ ಆಕೆಗೆ 2009 ರಲ್ಲಿನ ಮೇ 25 ರ ನೆನಪಿದೆ.

ಮಧ್ಯಾಹ್ನವು ಇನ್ನೇನು ಸಮೀಪಿಸುವುದರಲ್ಲಿತ್ತು. "ಕಾಲಿಂದಿ ನದಿಯ ನೀರು ಹಳ್ಳಿಗೆ ನುಗ್ಗಿ, ಎಲ್ಲ ಮನೆಗಳನ್ನೂ ಆವರಿಸಿತು", ಎಂದು ತಿಳಿಸಿದ ಕಾಜಲ್ ಲತ ಆಗ ತನ್ನ ಸ್ವಂತ ಹಳ್ಳಿ, ಗೋಬಿಂದಕಟಿಯಿಂದ 7 ಕಿ.ಮೀ. ದೂರದ ಕುಮಿರ್ಮರಿ ಹಳ್ಳಿಯಲ್ಲಿನ ತನ್ನ ಸಂಬಂಧಿಕರ ಮನೆಯಲ್ಲಿದ್ದರು. "ನಾವು ಸುಮಾರು 40-50 ಜನರು ದೋಣಿಯೊಂದರ ಆಸರೆಯಲ್ಲಿ ಇಡೀ ದಿನ ಹಾಗೂ ರಾತ್ರಿಯನ್ನು ಕಳೆದೆವು. ಮರಗಳು, ದೋಣಿಗಳು, ಜಾನುವಾರುಗಳು ಹಾಗೂ ಭತ್ತವು ಕೊಚ್ಚಿ ಹೋಗುತ್ತಿದ್ದುದನ್ನು ನಾವು ನೋಡಿದೆವು. ರಾತ್ರಿಯಲ್ಲಿ ನಮಗೇನೂ ಕಾಣಿಸುತ್ತಿರಲಿಲ್ಲ. ಬೆಂಕಿಪೊಟ್ಟಣಗಳೂ ಒದ್ದೆಯಾಗಿಬಿಟ್ಟಿದ್ದವು. ಆಕಾಶದಲ್ಲಿ ಮಿಂಚು ಹೊಡೆದಾಗಷ್ಟೇ ನಮಗೆ ಏನಾದರೂ ಕಾಣಿಸುತ್ತಿತ್ತು."

ಮಧ್ಯಾಹ್ನದ ಊಟಕ್ಕೆ ಮೀನನ್ನು ಸ್ವಚ್ಛಗೊಳಿಸುತ್ತಿದ್ದ 48 ರ ರೈತ ಮಹಿಳೆಯಾದ ಕಾಜಲ್ ಲತ ಮುಂದುವರೆದು, "ಆ ರಾತ್ರಿಯನ್ನು ಮರೆಯುವಂತೆಯೇ ಇಲ್ಲ. ಕುಡಿಯುವ ಹನಿ ನೀರೂ ಲಭ್ಯವಿರಲಿಲ್ಲ. ಅದ್ಹೇಗೋ ನಾನು ಕೆಲವು ಮಳೆಯ ಹನಿಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿ, ನನ್ನ ಇಬ್ಬರು ಹೆಣ್ಣುಮಕ್ಕಳು ಹಾಗೂ ಸೋದರ ಸೊಸೆಯ ತುಟಿಗಳನ್ನು ತೇವಮಾಡುತ್ತಿದ್ದೆ. ಅವರು ಬಹಳ ಬಾಯಾರಿದ್ದರು", ಎಂದರು. ಆ ನೆನಪಿನಿಂದಾಗಿ ಆಕೆಯ ಸ್ವರವು ನಡುಗುತ್ತಿತ್ತು.

ನಂತರ ಮುಂಜಾನೆ, ಅವರು ದೋಣಿಯೊಂದನ್ನು ಬಳಸಿ ತಮ್ಮ ಹಳ್ಳಿಯನ್ನು ತಲುಪಿದರು. ಪ್ರವಾಹದ ನೀರಿನಲ್ಲಿ ನಡೆಯುತ್ತಲೇ ಅವರು ಮನೆಯನ್ನು ತಲುಪಿದರು. "ಆಗ 17 ವರ್ಷದ ನನ್ನ ಹಿರಿಯ ಮಗಳು ತನುಶ್ರೀ, ನೀರು ಹೆಚ್ಚಾಗಿದ್ದ ಜಾಗದಲ್ಲಿ ಬಹುಪಾಲು ಮುಳುಗಿಯೇ ಬಿಟ್ಟಿದ್ದಳು. ಅದೃಷ್ಟವಶಾತ್ ಆಗ ಆಕೆಯು ಸಡಿಲಗೊಂಡು ತನ್ನೆಡೆಗೆ ತೇಲಿ ಬಂದ ಚಿಕ್ಕಮ್ಮನ ಸೆರಗನ್ನು ಹಿಡಿದುಕೊಂಡಳು", ಎಂದು ತಿಳಿಸಿದ ಕಾಜಲ್ ಲತಾಳ ಕಣ್ಣುಗಳು ಭಯವನ್ನು ಸೂಸುತ್ತಿದ್ದವು.

ಮೇ 2019 ರಲ್ಲಿ, ಚಂಡಮಾರುತ ಫನಿಯೊಂದಿಗೆ ಆಕೆಯ ಭಯವು ಮರುಕಳಿಸಿತು. ಈ ಚಂಡಮಾರುತವು ತನ್ನ ಕಿರಿಯ ಮಗಳು 25 ರ ಅನುಶ್ರೀ ವಿವಾಹದಲ್ಲಿಯೇ ಕಾಕತಾಳೀಯವಾಗಿ ಅಪ್ಪಳಿಸುವುದರಲ್ಲಿತ್ತು ಎಂದು ಆಕೆ ತಿಳಿಸುತ್ತಾರೆ.

Kajal Lata Biswas cutting fresh fish
PHOTO • Urvashi Sarkar
PHOTO • Urvashi Sarkar

ಗೋಬಿಂದಕಟಿ ಹಳ್ಳಿಯ ತನ್ನ ಮನೆಯ ಹೊರಗೆ ಮೀನನ್ನು ಸ್ವಚ್ಛಗೊಳಿಸುತ್ತಿರುವ ಕಾಜಲ್ ಲತ ಬಿಸ್ವಾಸ್, ಸಮೀಪಿಸುತ್ತಿರುವ ಚಂಡಮಾರುತವನ್ನು ಕುರಿತ ತಮ್ಮ ಭೀತಿಯನ್ನು ನೆನೆಸಿಕೊಳ್ಳುತ್ತಿದ್ದಾರೆ. ಭತ್ತವನ್ನು ಈ ಗುಡಿಸಲುಗಳಲ್ಲಿ (ಬಲಕ್ಕೆ) ಶೇಖರಿಸಿಡಲಾಗಿದೆ. ಫಸಲಿಗೂ ಸಹ ಹಾನಿಯುಂಟಾಗಿದೆ

"ಮೇ 6 ಕ್ಕೆ ಮದುವೆಯು ನಿಗದಿಯಾಗಿತ್ತು. ಕೆಲವು ದಿನಗಳಿಗೆ ಮೊದಲು ಫನಿ ಚಂಡಮಾರುತದ ಬಗ್ಗೆ ಪಂಚಾಯತಿ ಹಾಗೂ ರೇಡಿಯೋದಲ್ಲಿ ಸರ್ಕಾರದಿಂದ ಮುನ್ಸೂಚನೆ ನೀಡಲಾಯಿತು. ನಮ್ಮ ಆಗಿನ ಅವಸ್ಥೆ ಮತ್ತು ಆತಂಕವನ್ನು ಊಹಿಸಿಕೊಳ್ಳಿ. ಗಾಳಿ ಮತ್ತು ಮಳೆಯು ನಮ್ಮೆಲ್ಲ ಸಿದ್ಧತೆಗಳನ್ನೂ ನಾಶಮಾಡುತ್ತದೆಂದು ನಾವು ಹೆದರಿದ್ದೆವು. ನಮಗೆ ಭಯವಾಯಿತು. ಮದುವೆಗೆ ಸ್ವಲ್ಪ ದಿನಗಳ ಮೊದಲು ಮಳೆ ಸುರಿಯಿತಾದರೂ, ಚಂಡಮಾರುತವು ನಮ್ಮ ಹಳ್ಳಿಯನ್ನು ಬಾಧಿಸಲಿಲ್ಲ", ಎಂದರು ಕಾಜಲ್ ಲತ.

ಮೇ 2 ರಂದು ಫನಿ ಚಂಡಮಾರುತವು ಆಂಧ್ರ ಪ್ರದೇಶ, ಒರಿಸ್ಸ (ಅತ್ಯಂತ ಹೆಚ್ಚು ಹಾನಿಗೊಳಗಾದ ರಾಜ್ಯ) ಮತ್ತು ಪ. ಬಂಗಾಳವನ್ನು ಅಪ್ಪಳಿಸುತ್ತದೆಂದು ಭಾರತೀಯ ಪವನಶಾಸ್ತ್ರ ಇಲಾಖೆಯು ಎಚ್ಚರಿಕೆ ನೀಡಿತ್ತು. ಈ ಹಿಂದೆ ರಜತ್ ಜುಬಿಲಿ ಹಳ್ಳಿಯಲ್ಲಿ ಉಪಾಧ್ಯಾಯರಾಗಿದ್ದ 80 ರ ಕೃಷಿಕ, ಪ್ರಫುಲ್ಲ ಮೊಂಡಲ್ ಅವರು ತಮ್ಮ ಎತ್ತರಿಸಿದ ದನಿಯಲ್ಲಿ, ಫನಿಯ ಬಗ್ಗೆ ಹೀಗೆ ಹೇಳಿದರು: "ಫನಿ ಚಂಡಮಾರುತವನ್ನು ಸುಂದರ್‍ಬನ್ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿತು. ಗಾಳಿಯ ಶಿಳ್ಳು ನಮ್ಮನ್ನು ಹಾದುಹೋಯಿತು. ಅದು ನಮ್ಮ ಹಳ್ಳಿಯನ್ನು ಅಪ್ಪಳಿಸಿದ್ದಲ್ಲಿ ನಮ್ಮ ಮನೆ, ಭೂಮಿಗಳೆಲ್ಲವನ್ನೂ ನಾವು ಕಳೆದುಕೊಳ್ಳುತ್ತಿದ್ದೆವು...

ಸುಂದರ್‍ಬನ್ನಲ್ಲಿ ಚಂಡಮಾರುತವು ಸರ್ವೇಸಾಮಾನ್ಯವೆಂಬುದು ಮೊಂಡಲ್ ಹಾಗೂ ಕಾಜಲ್ ಲತ ಅವರಿಗೆ ಚೆನ್ನಾಗಿ ತಿಳಿದಿದೆ. ಪ. ಬಂಗಾಳದ ವಿಪತ್ತು ನಿರ್ವಹಣಾ ಹಾಗೂ ನಾಗರೀಕ ರಕ್ಷಣಾ ಇಲಾಖೆಯು ದಕ್ಷಿಣ ಮತ್ತು 24 ಉತ್ತರ ಪರಗಣ ಜಿಲ್ಲೆಗಳನ್ನು ಚಂಡಮಾರುತದ ‘ಅತ್ಯಂತ ಹೆಚ್ಚು ಅಪಾಯಕಾರಿ ವಲಯಗಳೆಂದು’ ವರ್ಗೀಕರಿಸಿದೆ.

ದಕ್ಷಿಣದ 24 ಪರಗಣ ಜಿಲ್ಲೆಯ ಗೊಸಬ ಬ್ಲಾಕ್‍ನಲ್ಲಿ ಮೊಂಡಲ್ ಅವರ ಹಳ್ಳಿಯಿದ್ದು, ಕಾಜಲ್ ಲತಾ ಅವರ ಹಳ್ಳಿಯು ಉತ್ತರದ 24 ಪರಗಣ ಜಿಲ್ಲೆಗಳ ಹಿಂಗಲ್‍ಗಂಜ್ ಬ್ಲಾಕ್‍ನಲ್ಲಿದೆ. ಪ.ಬಂಗಾಳದ ಭಾರತೀಯ ಸುಂದರ್‍ಬನ್‍ನ 19 ಬ್ಲಾಕ್‍ಗಳಲ್ಲಿ ಇವೂ ಸೇರಿವೆ. ಅಂದರೆ ಉತ್ತರದ 24 ಪರಗಣಗಳಲ್ಲಿನ 6 ಬ್ಲಾಕ್‍ಗಳು ಮತ್ತು ದಕ್ಷಿಣದ 24 ಪರಗಣಗಳಲ್ಲಿನ 13 ಬ್ಲಾಕ್‍ಗಳು.

ಭಾರತ ಹಾಗೂ ಬಾಂಗ್ಲಾದೇಶದಲ್ಲಿ ಹರಡಿರುವ ಸುಂದರ್‍ಬನ್, ವಿಶಾಲವಾದ ನದೀ ಮುಖಜ ಭೂಮಿಯನ್ನು ಹೊಂದಿದೆ. ಸುಮಾರು 10,200 ಚದರ ಕಿ.ಮೀ.ಗಳ ಬಹುಶಃ ಪ್ರಪಂಚದ ಅತಿ ದೊಡ್ಡ ದಟ್ಟ ಮ್ಯಾಂಗ್ರೋವ್ ಕಾಡುಗಳು ಇಲ್ಲಿವೆ.  Building Resilience for the Sustainable Development of the Sundarbans (ಸುಂದರ್ಬನ್ ಸುಸ್ಥಿರ ಅಭಿವೃದ್ಧಿಗಾಗಿ ಸ್ಥಿತಿಸ್ಥಾಪಕತ್ವದ ನಿರ್ಮಾಪನ) ಹೆಸರಿನ 2014 ರ ವಿಶ್ವ ಬ್ಯಾಂಕ್ ವರದಿಯಲ್ಲಿ; "ಸುಂದರ್ಬನ್, ಪ್ರಪಂಚದ ಉತ್ಕೃಷ್ಟ ಪರಿಸರ ವ್ಯವಸ್ಥೆಯನ್ನು ಹೊಂದಿರುವ ಪ್ರದೇಶವೆಂಬುದಾಗಿ..." ತಿಳಿಸಲಾಗಿದೆ. "ಸಮಸ್ತ ಮ್ಯಾಂಗ್ರೋವ್ ಕಾಡಿನ ಪ್ರದೇಶವು; ರಾಯಲ್ ಬೆಂಗಾಲ್ ಟೈಗರ್ (ಹುಲಿ), estuarine (ನದೀಮುಖದ) ಮೊಸಳೆ, ಇಂಡಿಯನ್ ಪೈಥಾನ್ (ಹೆಬ್ಬಾವು), ನದಿಗಳಲ್ಲಿನ ಅನೇಕ ಜಾತಿಯ ಡಾಲ್‍ಫಿನ್‍ಗಳು ಮುಂತಾದ ಅಳಿವಿನಂಚಿನಲ್ಲಿರುವ ಪ್ರಾಣಿ ವರ್ಗಗಳನ್ನೊಳಗೊಂಡ ಅಸಾಧಾರಣ ಪರಿಸರ ವೈವಿಧ್ಯತೆಗೆ ಹೆಸರಾಗಿದೆ. ಭಾರತದಲ್ಲಿನ ಶೇ. 10 ರಷ್ಟು ಸಸ್ತನಿಗಳು ಮತ್ತು ಶೇ. 25 ರಷ್ಟು ಪಕ್ಷಿ ಸಂಕುಲಕ್ಕೆ ಇದು ನೆಲೆವೀಡಾಗಿದೆ."

ಸುಮಾರು 4,200 ಚದರ ಕಿ.ಮೀ.ಗಳ ವ್ಯಾಪ್ತಿಯ ಭಾರತೀಯ ಸುಂದರ್ಬನ್, 4.5 ಮಿಲಿಯನ್ ಜನರ ವಾಸಸ್ಥಾನವಾಗಿದೆ. ಇಲ್ಲಿನ ಕಠಿಣ ಭೂಪ್ರದೇಶ ಹಾಗೂ ಹವಾಮಾನದ ವೈಪರೀತ್ಯದಿಂದಾಗಿ ಇವರಲ್ಲಿ ಅನೇಕರು ಕನಿಷ್ಟತಮ ಆದಾಯವನ್ನು ಹೊಂದಿದ್ದು, ಜೀವನೋಪಾಯಕ್ಕಾಗಿ ಪ್ರಯಾಸಪಡುತ್ತಿದ್ದಾರೆ.

ಐಲಾದ ನಂತರ ಭಾರಿ ಚಂಡಮಾರುತವು ಇಲ್ಲಿ ಅಪ್ಪಳಿಸದಿದ್ದಾಗ್ಯೂ, ಈ ಪ್ರದೇಶವು ಅತ್ಯಂತ ಸುಲಭ ಭೇದ್ಯವಾದುದೆಂದು ಹೇಳಲಾಗಿದೆ. ಪ. ಬಂಗಾಳದ ವಿಪತ್ತು ನಿರ್ವಹಣಾ ಇಲಾಖೆಗಾಗಿ ಖರಗ್‍ಪುರದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವತಿಯಿಂದ 2006 ರಲ್ಲಿ ನೀಡಲ್ಪಟ್ಟ ವರದಿಯು; 1891 ರಿಂದ 2004 ರವರೆಗೆ ರಾಜ್ಯದಲ್ಲಿ 71 ಚಂಡಮಾರುತಸಹಿತವಾದ ಬಿರುಗಾಳಿ ಮಳೆಯು ಕಂಡುಬಂದಿದೆಯೆಂದು ತಿಳಿಸುತ್ತದೆ. ಸದರಿ ಅವಧಿಯಲ್ಲಿ, 6 ತೀವ್ರ ಸ್ವರೂಪದ ಚಂಡಮಾರುತಗಳು ಮತ್ತು 19 ಚಂಡಮಾರುತಗಳಿಂದಾಗಿ ದಕ್ಷಿಣ 24 ಪರಗಣ ಜಿಲ್ಲೆಯ ಗೊಸಬ, ಅತ್ಯಂತ ಹೆಚ್ಚು ಹಾನಿಗೀಡಾದ ಬ್ಲಾಕ್ ಎಂಬುದಾಗಿ ತಿಳಿದುಬಂದಿದೆ.

PHOTO • Urvashi Sarkar

ರಜತ್ ಜುಬಿಲಿ ಜಿಲ್ಲೆಯ 80 ರ ಪ್ರಫುಲ್ಲ ಮೊಂಡಲ್, ಅನೇಕ ಬಿರುಗಾಳಿಗಳನ್ನು ನಿಭಾಯಿಸಿದ್ದಾಗ್ಯೂ, ಅವರ ಕುಟುಂಬವು ಈಗಿನ ಹವಾಗುಣದ ಅನಿಯಮಿತ ಬದಲಾವಣೆಗಳಿಂದಾಗಿ ಹೆಣಗಾಡುವಂತಾಗಿದೆ

ಐಲಾಗೂ ಮೊದಲಿನ ಚಂಡಮಾರುತಗಳನ್ನು ಪ್ರಫುಲ್ಲ ನೆನೆಸಿಕೊಳ್ಳುತ್ತಾರೆ: "ಬಿರುಸಾದ ಹಾಗೂ ರಭಸದಿಂದ ಕೂಡಿದ 1998 ರ ಚಂಡಮಾರುತವನ್ನು ನಾನು ಮರೆಯಲಾರೆ. [ಇದು ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಬಂದ ಪ.ಬಂಗಾಳದ ‘ಅತ್ಯುಗ್ರ ಚಂಡಮಾರುತವಾಗಿದ್ದು, ಐಲಾಗಿಂತಲೂ ಹೆಚ್ಚು ತೀಕ್ಷ್ಣವೆಂಬುದಾಗಿ ಹೇಳಲಾಗಿದೆ.’] ಅದಕ್ಕೂ ಹಿಂದಿನ 1988 ರ ಚಂಡಮಾರುತವೂ ನನಗೆ ನೆನಪಿದೆ", ಎಂದು ಅವರು ತಿಳಿಸುತ್ತಾರೆ.

ಈ ಹಿಂದೆ ಇಂತಹ ಚಂಡಮಾರುತಗಳು ಸಂಭವಿಸಿದ್ದಾಗ್ಯೂ, ಚಂಡಮಾರುತದ ಅವಪಾತವು (ಸಮುದ್ರದಲ್ಲಿನ ಉಷ್ಣವಲಯ ಹವಾಮಾನದ ಕ್ಷೋಭೆಗಳು ಪ್ರತಿ ಗಂಟೆಗೆ 31-60 ಕಿ.ಮೀ. ವ್ಯಾಪ್ತಿಯಲ್ಲಿ, ಚಂಡಮಾರುತಯುತ ಬಿರುಗಾಳಿ ಮಳೆಯು 62-82 ಕಿ.ಮೀ.ಗಿಂತಲೂ ಕಡಿಮೆ ವ್ಯಾಪ್ತಿಯಲ್ಲಿ) ಕಳೆದ 10 ವರ್ಷಗಳಲ್ಲಿ, ಗಂಗೆಯ ಕೆಳಗಿನ ನದೀ ಮುಖಜ ಭೂಮಿಯಲ್ಲಿ 2.5 ರಷ್ಟು ಹೆಚ್ಚಿದೆ ಎಂಬುದಾಗಿ ಕಲ್ಕತ್ತಾದ ಸಾಗರ ವಿಜ್ಞಾನಿ, ಡಾ. ಅಭಿಜಿತ್ ಮಿತ್ರ ಅವರು, ತಮ್ಮ 2019 ರ Mangrove Forests in India: Exploring  Ecosystem Services ಎಂಬ ಕೃತಿಯಲ್ಲಿ ತಿಳಿಸಿದ್ದಾರೆ. ಚಂಡಮಾರುತಗಳು ಅಡಿಗಡಿಗೆ ಸಂಭವಿಸುತ್ತಿವೆ ಎಂಬುದನ್ನು ಇದು ಧ್ವನಿಸುತ್ತದೆ ಎಂಬುದಾಗಿಯೂ ಆತ ತಿಳಿಸುತ್ತಾರೆ.

ಸುಂದರ್ಬನ್ ಜೊತೆಗೆ, ಬಂಗಾಳ ಕೊಲ್ಲಿಯಲ್ಲಿನ ಚಂಡಮಾರುತದ ಘಟನೆಗಳೂ ಸಹ ಹೆಚ್ಚಾಗುತ್ತಿದೆಯೆಂದು ಅನೇಕ ಇತರೆ ಅಧ್ಯಯನಗಳಿಂದ ತಿಳಿದುಬರುತ್ತದೆ. ‘ಡೈವರ್ಸಿಟಿ’ ಎಂಬ ಪತ್ರಿಕೆಯಲ್ಲಿ 2015 ರಲ್ಲಿ ಪ್ರಕಟಗೊಂಡ ಅಧ್ಯಯನವೊಂದರಲ್ಲಿ; 1881 ರಿಂದ 2001 ರ ನಡುವಿನ ಈ ಹೆಚ್ಚಳವು ಶೇ. 26 ರಷ್ಟಿದೆ ಎಂಬುದಾಗಿ ಹೇಳಲಾಗಿದೆ. 1877 ರಿಂದ 2005 ರ ವರೆಗಿನ ಮೇ, ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಚಂಡಮಾರುತವನ್ನು ಕುರಿತ ಲಭ್ಯ ದತ್ತಾಂಶವನ್ನು ಬಳಸಿ, 2007 ರ ಅಧ್ಯಯನವು; ಸದರಿ ತಿಂಗಳುಗಳಲ್ಲಿ, ಕಳೆದ 129 ವರ್ಷಗಳಿಂದಲೂ ತೀಕ್ಷ್ಣ ಚಂಡಮಾರುತಯುತ ಬಿರುಗಾಳಿ ಮಳೆಯ ಆವರ್ತನವು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿರುವುದಾಗಿ ತಿಳಿಸುತ್ತದೆ.

ಸಮುದ್ರದ ಮೇಲ್ಮೈ ತಾಪಮಾನದಲ್ಲಿನ ಏರಿಕೆಗೆ ಇದು ಭಾಗಶಃ ಕಾರಣವಾಗಿದೆ. (ಜರ್ನಲ್ ಆಫ್ ಅರ್ಥ್ ಸೈನ್ಸ್ ಅಂಡ್ ಕ್ಲೈಮೇಟ್ ಛೇಂಜ್ ಎಂಬ ಪತ್ರಿಕೆಯಲ್ಲಿನ ವಿದ್ವತ್ಪ್ರಬಂಧದಲ್ಲಿನ ಟಿಪ್ಪಣಿಯಂತೆ) ಈ ತಾಪಮಾನವು 1980 ರಿಂದ 2007 ರವರೆಗೆ ಭಾರತೀಯ ಸುಂದರ್ಬನ್ ಪ್ರದೇಶದಲ್ಲಿ ಒಂದು ದಶಕದಲ್ಲಿ 0.5 ಡಿಗ್ರಿ ಸೆಲ್ಸಿಯಸ್ ಇದ್ದು, ಒಂದು ದಶಕದಲ್ಲಿನ ಜಾಗತಿಕ ತಾಪಮಾನದ ವೃದ್ಧಿಯ ದರವಾದ 0.06 ಡಿಗ್ರಿಗಳಿಗಿಂತಲೂ ಹೆಚ್ಚಾಗಿದೆ.

ಅನೇಕ ದುರಂತಮಯ ಪರಿಣಾಮಗಳು ಘಟಿಸಿವೆ. "2009 ರಲ್ಲಿ ಸುಂದರ್ಬನ್ ಪ್ರದೇಶದಲ್ಲಿ ತೀವ್ರ ಸ್ವರೂಪದ ಚಂಡಮಾರುತವು ಅಪ್ಪಳಿಸಿದೆ. ಉತ್ತರ ಬಂಗಾಳ ಕೊಲ್ಲಿಯಲ್ಲಿನ ನಂತರದ ಚಂಡಮಾರುತಗಳಿಂದಾಗಿ ಉಂಟಾದ ಪುನರಾವರ್ತಿತ ಪ್ರವಾಹ ಮತ್ತು ಅಣೆಕಟ್ಟು ನಿರ್ಮಾಣ ಪ್ರಕ್ರಿಯೆಯ ವೈಫಲ್ಯದಿಂದಾಗಿ ಈ ಪ್ರದೇಶವು ಸಂಕಷ್ಟಕ್ಕೀಡಾಗಿದೆ", ಎನ್ನುತ್ತಾರೆ ಕಲ್ಲತ್ತಾದ ಜಾಧವಪುರ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓಶಿಯಾನೊಗ್ರಫಿಕ್ ಸ್ಟಡೀಸ್‍ನ ಪ್ರೊ. ಸುಗತ ಹಝ್ರಾ.

PHOTO • Urvashi Sarkar

ಸಮುದ್ರಮಟ್ಟದ ಹೆಚ್ಚಳ ಹಾಗೂ ಸಮುದ್ರದ ಮೇಲ್ಮೈಯಲ್ಲಿನ ತಾಪಮಾನದ ಏರಿಕೆ ಮುಂತಾದ ಇತರೆ ವ್ಯತ್ಯಾಸಗಳಿಂದಾಗಿ ಸುಂದರ್ಬನ್ ಅಪಾಯಕ್ಕೀಡಾಗಿದೆ

"ಚಂಡಮಾರುತಯುತ ಬಿರುಗಾಳಿ ಮಳೆಯಿಂದ ಹಾಗೂ ಸಮುದ್ರ ಮಟ್ಟದಲ್ಲಿನ ಏರಿಕೆಯಿಂದ ರಕ್ಷಣೆ ಪಡೆಯಲು, ಸುಂದರ್ಬನ್ ಪ್ರದೇಶದಲ್ಲಿನ ಅಣೆಕಟ್ಟುಗಳು ಮಹತ್ವದ ಪಾತ್ರವಹಿಸುತ್ತವೆಂದು ವಿಶ್ವ ಬ್ಯಾಂಕ್ ವರದಿಯು ತಿಳಿಸುತ್ತದೆ. ಜನತೆ ಹಾಗೂ ಅವರ ಜಮೀನುಗಳಲ್ಲಿನ ಉತ್ಪಾದಕತೆಯು; ನದೀ ಮುಖಜ ಭೂಮಿಯ ಕುಸಿತ, ಸಮುದ್ರ ಮಟ್ಟದ ಏರಿಕೆ ಮತ್ತು ಚಂಡಮಾರುತದ ಸಾಂದ್ರತೆಯಲ್ಲಿನ ಹೆಚ್ಚಳವನ್ನೊಳಗೊಂಡ ಹವಾಮಾನದ ಬದಲಾವಣೆ

ವರ್ಲ್ಡ‍್‍ ವೈಲ್ಡ್ಲೈಫ್ ಫಂಡ್ನ ‍2011 ರ ಲೇಖನವು, 2002-2009 ರಲ್ಲಿ ಸುಂದರ್ಬನ್ ಸಾಗರ್ ಐಲ್ಯಾಂಡ್ ಅಬ್ಸರ್ವೇಟರಿಯಲ್ಲಿನ ಮಾಪನದಂತೆ, 25 ವರ್ಷಗಳಲ್ಲಿ ಸುಂದರ್ಬನ್ ನಲ್ಲಿನ ತುಲನಾತ್ಮಕ ಸಮುದ್ರ ಮಟ್ಟದ ಏರಿಕೆಯು, ವರ್ಷಂಪ್ರತಿ 12 ಮಿ.ಮೀ ಅಥವ 8 ಮಿ.ಮೀ.ನಷ್ಟಿದೆಯೆಂದು ತಿಳಿಸುತ್ತದೆ.

ತಾಪಮಾನ ಹಾಗೂ ತತ್ಸಂಬಂಧಿ ಸಮುದ್ರ ಮಟ್ಟದ ಏರಿಕೆಯೂ ಸಹ ಮ್ಯಾಂಗ್ರೋವ್‍ಗೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತಿವೆ. ಈ ಕಾಡುಗಳು ಕರಾವಳಿ ಪ್ರದೇಶಗಳನ್ನು ಚಂಡಮಾರುತ ಹಾಗೂ ಸವಕಳಿಯಿಂದ ರಕ್ಷಿಸುತ್ತಿದ್ದು, ಮೀನು ಹಾಗೂ ಇತರೆ ಜೀವಿಗಳ ಉಗಮ ಸ್ಥಾನವಾಗಿವೆ. ಇದು ಬಂಗಾಳದ ಹುಲಿಯ ವಾಸಸ್ಥಾನವೂ ಹೌದು. ಟೆಂಪೊರಲ್ ಛೇಂಜ್ ಡಿಟೆಕ್ಷನ್ (2001-2008) ಸ್ಟಡಿ ಆಫ್ ಸುಂದರ್ಬನ್ ಎಂಬ ಜಾಧವಪುರ ವಿಶ್ವವಿದ್ಯಾಲಯದ 2010 ರ ಅಧ್ಯಯನ ಲೇಖನದಲ್ಲಿ, ಸಮುದ್ರ ಮಟ್ಟದಲ್ಲಿನ ಹೆಚ್ಚಳ ಮತ್ತು ಸೈಕ್ಲೋನ್ ಪರಿಣಾಮವು ತೀವ್ರ ಸ್ವರೂಪದಲ್ಲಿದ್ದು, ಇದರಿಂದ ಕಾಡಿನ ಆವರಣವು ಕುಂಠಿತಗೊಂಡು, ಸುಂದರ್ಬನ್ ಮ್ಯಾಂಗ್ರೋವ್ ಕಾಡುಗಳ ಸ್ವಾಸ್ಥ್ಯವು ಹಾನಿಗೀಡಾಗಿದೆ ಎಂಬುದಾಗಿ ತಿಳಿಸುತ್ತದೆ.

ರಜತ್ ಜುಬಿಲಿ ಹಳ್ಳಿಯ ಅರ್ಜುನ್ ಮೊಂಡಲ್ ಎಂಬ ಬೆಸ್ತನಿಗೆ ಸುಂದರ್ಬನ್ ಪ್ರದೇಶಕ್ಕೆ ಮ್ಯಾಂಗ್ರೋವ್ನ ಮಹತ್ವದ ಬಗ್ಗೆ ಅರಿವಿದೆ. ಸುಂದರ್ಬನ್ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಎಂಬ ಸರ್ಕಾರೇತರ ಸಂಸ್ಥೆಯೊಂದಿಗೆ ಅವರು ಕೆಲಸವನ್ನು ನಿರ್ವಹಿಸುತ್ತಿದ್ದರು. "ಎಲ್ಲರೂ ಹವಾಗುಣದ ಬದಲಾವಣೆ ಬಗ್ಗೆ ಕೇಳಿದ್ದಾರೆ. ಆದರೆ ಅದು ನಮ್ಮ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತಿದೆ ಎಂಬುದರ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳಬೇಕು", ಎಂಬುದಾಗಿ ಅವರು ಮೇ ತಿಂಗಳಿನಲ್ಲಿ ನನಗೆ ತಿಳಿಸಿದ್ದರು.

2019 ರ ಜೂನ್ 29 ರಂದು ಪಿರ್ಖಲಿ ಕಾಡಿನಲ್ಲಿ, ಏಡಿ ಕಾಯಿಗಳನ್ನು ಶೋಧಿಸುತ್ತಿದ್ದಾಗ ಆತನನ್ನು ಹುಲಿಯೊಂದು ಎಳೆದೊಯ್ದಿತು. ಸುಂದರ್ಬನ್ ಪ್ರದೇಶದಲ್ಲಿ ಹಿಂದಿನಿಂದಲೂ ಮನುಷ್ಯರ ಮೇಲೆ ಹುಲಿಗಳು ದಾಳಿ ನಡೆಸುತ್ತಿವೆ. ಸಮುದ್ರ ಮಟ್ಟದ ಏರಿಕೆಯಿಂದಾದ ಕಾಡಿನ ಸವಕಳಿಯು ಮನುಷ್ಯರ ವಾಸಸ್ಥಾನವಾದ ಹಳ್ಳಿಗಳತ್ತ ಹುಲಿಗಳನ್ನು ಕರೆತರುತ್ತಿದ್ದು, ಇದರಿಂದಾಗಿ ಹುಳಿಗಳ ದಾಳಿಯ ವರದಿಗಳು ಹೆಚ್ಚುತ್ತಿವೆ.

ಚಂಡಮಾರುತಗಳಿಂದಾಗಿ ಈ ವಲಯವು ಘಾಸಿಗೊಳಗಾದ ಕಾರಣ, ನೀರಿನ ಕ್ಷಾರತೆಯ ಮಟ್ಟವೂ ಹೆಚ್ಚಾಗಿದೆ. ಗೊಸಬ ಹಳ್ಳಿಯ ಸುಂದರ್ಬನ್ ಮಧ್ಯಭಾಗದಲ್ಲಿ ವಿಶೇಷವಾಗಿ, ಕ್ಷಾರತೆಯ ಹೆಚ್ಚಳ, ಸಮುದ್ರ ಮಟ್ಟದ ಏರಿಕೆ ಮತ್ತು ನದೀ ಮುಖಜ ಭೂಮಿಗೆ ತಾಜಾ ನೀರಿನ ಹರಿವು ಕುಂಠಿತಗೊಂಡಿರುವ ಕಾರಣ, ಪರಸರ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ.

PHOTO • Urvashi Sarkar
PHOTO • Urvashi Sarkar

ಸುಂದರ್ಬನ್‍ನಲ್ಲಿನ ವಿಸ್ತೃತ ಅಣೆಕಟ್ಟುಗಳು, ಕೃಷಿ ಹಾಗೂ ಮಣ್ಣಿನ ಸವಕಳಿಯನ್ನು ತಡೆಯುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಸಮುದ್ರ ಮಟ್ಟದಲ್ಲಿನ ಹೆಚ್ಚಳದಿಂದಾಗಿ, ಇವು ಅವಿರತವಾಗಿ ಸವೆದುಹೋಗುತ್ತಿವೆ

ಡಾ. ಮಿತ್ರ ಅವರು ಸಹ-ಲೇಖಕರಾಗಿರುವ ಸಂಶೋಧನಾ ಲೇಖನವೊಂದರಲ್ಲಿ, ಅವರು; ಸುಂದರ್ಬನ್, ಅತ್ಯಂತ ಕ್ಷಾರಯುತವಾಗಿದೆಯೆಂದು ತಿಳಿಸುತ್ತಾರಲ್ಲದೆ ಸುಂದರ್ಬನ್ ಮಧ್ಯ ಭಾಗದಲ್ಲಿ, ಸಮುದ್ರ ಮಟ್ಟದ ಹೆಚ್ಚಳದಿಂದಾಗಿ ನೀರಿನ ಲವಣಾಂಶದಲ್ಲಿ ಏರಿಕೆಯಾಗಿದೆ. ಇದು ಪರಿಸರ ಬದಲಾವಣೆಗೆ ಸ್ಪಷ್ಟವಾಗಿ ಸಂಬಂಧಿಸಿದೆ ಎಂಬುದಾಗಿಯೂ ಮಾಹಿತಿ ನೀಡುತ್ತಾರೆ.

ಬಿದ್ಯಾಧರಿ ನದಿಯ ಹೂಳು ಹಿಮಾಲಯದಿಂದ ಸುಂದರ್ಬನ್‍ನ ಮಧ್ಯ ಹಾಗೂ ಪೂರ್ವ ಭಾಗಗಳಿಗೆ ತಾಜಾ ನೀರಿನ ಹರಿವನ್ನು ತಡೆಗಟ್ಟುತ್ತಿದೆ. ಭೂ ಸುಧಾರಣೆ, ಕೃಷಿ, ಊರಿನ ಕೊಳಚೆಯ ಕೆಸರು ಹಾಗೂ ಮೀನುಸಾಕಣೆಯಿಂದಾಗಿ ಉತ್ಪನ್ನಗೊಂಡ ಕಸವು ಈ ಹೂಳಿನ ಭಾಗಶಃ ಕಾರಣಗಳಾಗಿವೆ. 1975 ರಲ್ಲಿ ನಿರ್ಮಿಸಲಾದ ಫರಕ್ಕ ಅಣೆಕಟ್ಟು (ಪ. ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಗಂಗಾ ನದಿಗೆ) ಸಹ ಸುಂದರ್ಬನ್ ಮಧ್ಯ ಭಾಗದಲ್ಲಿನ ಲವಣಾಂಶದ ಹೆಚ್ಚಳಕ್ಕೆ ಕಾರಣವಾಗಿದೆ.

ರಜತ್ ಜುಬಿಲಿಯ ಮೊಂಡಲ್ ಕುಟುಂಬಕ್ಕೆ, ಲವಣಾಂಶದ ಹೆಚ್ಚಳದ ಪರಿಣಾಮದ ಬಗ್ಗೆ ಅರಿವಿದೆ. ಐಲ ಚಂಡಮಾರುತದ ನಂತರ ಮೂರು ವರ್ಷಗಳವರೆಗೂ ಮಾರಾಟಕ್ಕೆ ಅವರಿಗೆ ಅಕ್ಕಿಯು ಲಭ್ಯವಿರಲಿಲ್ಲ. ಅಕ್ಕಿಯ ಮಾರಾಟದಿಂದ ಅವರಿಗೆ ದೊರೆಯುತ್ತಿದ್ದ 10,000-12,000 ರೂ.ಗಳ ವಾರ್ಷಿಕ ಆದಾಯಕ್ಕೆ ಕುತ್ತು ಬಂದಿತು. "ಅಕ್ಕಿಯ ಕೃಷಿಯ ಹಾನಿಯಿಂದಾಗಿ, ಗಂಡಸರು ತಮಿಳುನಾಡು, ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರಗಳಿಗೆ ಕೆಲಸವನ್ನು ಅರಸಿ ಹೊರಟ ಕಾರಣ ಇಡೀ ಹಳ್ಳಿಯೇ ಖಾಲಿಯಾಯಿತು. ಅವರು ಕಾರ್ಖಾನೆಗಳಿಗೆ ಸೇರಿದರು ಅಥವ ಕಟ್ಟಡ ಕಾರ್ಮಿಕರಾಗಿ ಕೆಲಸಕ್ಕೆ ತೊಡಗಿದರು", ಎಂಬುದಾಗಿ ಪ್ರಫುಲ್ಲ ತಿಳಿಸುತ್ತಾರೆ.

ರಾಜ್ಯಾದ್ಯಂತ ಐಲ ಚಂಡಮಾರುತವು 2 ಲಕ್ಷ ಹೆಕ್ಟೇರಿಗೂ ಹೆಚ್ಚಿನ ಕೃಷಿನಿರತ ಪ್ರದೇಶ ಮತ್ತು 6 ಮಿಲಿಯನ್ ಜನರಿಗೆ ಹಾನಿಯನ್ನುಂಟುಮಾಡಿತು. 137 ಜನರು ಅಸುನೀಗಿದರಲ್ಲದೆ ಒಂದು ಮಿಲಿಯನ್ ಮನೆಗಳು ನಾಶವಾದವು. "ನಷ್ಟಕ್ಕೊಳಗಾಗದ ಜನರೇ ನಮ್ಮ ಜಿಲ್ಲೆಯಲ್ಲಿಲ್ಲ. ನನ್ನ ಮನೆ ಹಾಗೂ ಫಸಲು ನಿರ್ನಾಮವಾದವು. 14 ಮೇಕೆಗಳನ್ನು ನಾನು ಕಳೆದುಕೊಂಡೆ. ಮೂರು ವರ್ಷಗಳವರೆಗೂ ಅಕ್ಕಿಯ ಕೃಷಿ ಸಾಧ್ಯವಾಗಲಿಲ್ಲ. ಎಲ್ಲವನ್ನೂ ಬುಡಮಟ್ಟದಿಂದ ಪ್ರಾರಂಭಿಸಬೇಕಾಯಿತು. ಅವು ಬಹಳ ಕಷ್ಟದ ದಿನಗಳು. ಜೀವನೋಪಾಯಕ್ಕೆ ಮರಗೆಲಸ ಮುಂತಾದ ಇತರೆ ಕೆಲಸಗಳಲ್ಲಿ ತೊಡಗಿದೆ", ಎನ್ನುತ್ತಾರೆ ಪ್ರಫುಲ್ಲ.

ಐಲ ಚಂಡಮಾರುತವು ಲವಣಾಂಶವನ್ನು ಅಧಿಕಗೊಳಿಸಿದ ಕಾರಣ, ಕಾಜಲ್ ಲತ ಅವರು ತಮ್ಮ 23 ಬಿಘ (7.6 ಎಕರೆ) ಜಮೀನಿನಲ್ಲಿ, 6 ಬಿಘ ಜಮೀನನ್ನು ಮಾರುವುದು ಅನಿವಾರ್ಯವಾಯಿತು. "ಮಣ್ಣಿನಲ್ಲಿನ ಅಧಿಕ ಲವಣಾಂಶದ ಕಾರಣದಿಂದಾಗಿ ಹುಲ್ಲಿನ ಒಂದು ಎಸಳೂ ಬೆಳೆಯಲಿಲ್ಲ. ನಿಧಾನವಾಗಿ, ಸಾಸಿವೆ, ಎಲೆಕೋಸು, ಹೂಕೋಸು ಮತ್ತು ಸೋರೆಕಾಯಿಗಳು ಮತ್ತೆ ಬೆಳೆಯಲು ಪ್ರಾರಂಭಿಸಿವೆ. ಆದರೆ ಇದು ನಮ್ಮ ಬಳಕೆಗೆ ಸಾಲುವಷ್ಟಿದೆಯೇ ಹೊರತು ಮಾರಟಕ್ಕೆ ಸಾಕಷ್ಟಿಲ್ಲ. ಶೋಲ್, ಮಗುರ್, ರುಯಿ ಮೀನುಗಳನ್ನುಳ್ಳ  ಹೊಂಡವೊಂದಿದ್ದು; ಅವುಗಳ ಮಾರಾಟದಿಂದ ವರ್ಷಂಪ್ರತಿ 25,000-30,000 ರೂ.ಗಳನ್ನು ನಾವು ಸಂಪಾದಿಸಬಹುದಿತ್ತು. ಆದರೆ ಐಲ ಚಂಡಮಾರುತದ ನಂತರ, ನೀರು ಸಂಪೂರ್ಣವಾಗಿ ಉಪ್ಪಿನಿಂದ ಕೂಡಿದ್ದು ಅಲ್ಲಿ ಮೀನುಗಳೇ ಇಲ್ಲ."

PHOTO • Urvashi Sarkar
PHOTO • Ritayan Mukherjee

ಮ್ಯಾಂಗ್ರೋವ್‍ ಗಳು ಸುಂದರ್ಬನ್ ಪರಿಸರ ವ್ಯವಸ್ಥೆಗೆ ಮಹತ್ವವಾದವುಗಳಾಗಿದ್ದು, ಅವೂ ಸಹ ನಿಧಾನವಾಗಿ ವಿರಳಗೊಳ್ಳುತ್ತಿವೆ

ಜರ್ನಲ್ ಆಫ್ ಎಕ್ಸ್ಪೆರಿಮೆಂಟಲ್ ಬಯಾಲಜಿ ಆ್ಯಂಡ್ ಅಗ್ರಿಕಲ್ಚರಲ್ ಸೈನ್ಸಸ್‍ ನ 2016 ರ ಲೇಖನವೊಂದರಲ್ಲಿ; ಹೆಚ್ಚಿನ ಲವಣಾಂಶ ಹಾಗೂ ಕ್ಷಾರದಿಂದಾಗಿ, ಮಣ್ಣು ಅಧೋಗತಿಗಿಳಿದಿದ್ದು, ಬಹುಪಾಲು ಉತ್ತರ ಮತ್ತು ದಕ್ಷಿಣ ಪರಗಣಗಳ ಭತ್ತದ ಫಸಲು ಕ್ಷೀಣಿಸಿದೆ ಎಂಬುದಾಗಿ ತಿಳಿಸಿದೆ. ಮತ್ತೊಮ್ಮೆ ಭತ್ತವನ್ನು ಬೆಳೆಯಲು ಫಾಸ್ಫೇಟ್ ಮತ್ತು ಪೊಟ್ಯಾಶ್‍ಗಳನ್ನು ಶಿಫಾರಸ್ಸು ಮಾಡಲಾದ ಮಟ್ಟಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಬಳಸುವ ಅನಿವಾರ್ಯತೆಯ ಬಗ್ಗೆ ಸದರಿ ಪತ್ರಿಕೆಯ ಅಧ್ಯಯನವೊಂದರಲ್ಲಿ ತಿಳಿಸಲಾಗಿದೆ.

"ಐಲಾದ ನಂತರ, ರಾಸಾಯನಿಕ ಗೊಬ್ಬರದ ಬಳಕೆ ಹೆಚ್ಚಿದೆ. ಆಗ ಮಾತ್ರ ನಮಗೆ ನಿರೀಕ್ಷಿತ ಫಸಲು ದೊರೆಯುತ್ತದೆ. ಅದು ಆರೋಗ್ಯಕರವಲ್ಲದಾಗ್ಯೂ, ನಾವು ಅದನ್ನು ತಿನ್ನುವುದು ಅನಿವಾರ್ಯವಾಗಿದೆ. ನಾವು ಮಕ್ಕಳಾಗಿದ್ದಾಗ ತಿನ್ನುತ್ತಿದ್ದ ಅಕ್ಕಿಯು ನನಗೆ ನೆನಪಿದೆ. ಅದನ್ನು ಹಾಗೆಯೇ ತಿನ್ನಬಹುದಿತ್ತು. ಈಗ ತರಕಾರಿಯೊಂದಿಗೆ ತಿಂದರೂ ಎಲ್ಲೋ ಏನೋ ತಪ್ಪಾಗಿರುವಂತೆನಿಸುತ್ತದೆ", ಎನ್ನುತ್ತಾರೆ, ಪ್ರಫುಲ್ಲ ಅವರ 48 ರ ಪುತ್ರ ಪ್ರಬಿರ್ ಮೊಂಡಲ್.

ಆತನ ತಂದೆಯು 13 ಬಿಘ (4.29 ಎಕರೆ) ಜಮೀನನ್ನು ಹೊಂದಿದ್ದು, ಒಂದು ಬಿಘ ಜಮೀನಿನಲ್ಲಿ, 8-9 ಬಸ್ತ ಅಕ್ಕಿಯು ದೊರೆಯುತ್ತದೆ. ಒಂದು ಬಸ್ತ ಅಕ್ಕಿಯು 60 ಕೆ.ಜಿ.ಗೆ ಸಮ. ನಮ್ಮ ಸಂಪಾದನೆಗಿಂತಲೂ; ಬಿತ್ತನೆ, ಕೊಯ್ಲು ಹಾಗೂ ಗೊಬ್ಬರದ ವೆಚ್ಚಗಳೇ ಅಧಿಕವಾಗಿವೆ ಎನ್ನುತ್ತಾರೆ ಪ್ರಬಿರ್.

2018 ರ ಸಂಶೋಧನಾ ಲೇಖನದ ಪ್ರಕಾರ, ಐಲಾ ಚಂಡಮಾರುತದ ನಂತರ, ಭತ್ತದ ಫಸಲು ಅರ್ಧದಷ್ಟು ಕಡಿಮೆಯಾಗಿದೆ. ಅಂದರೆ, 64-80 ಕ್ವಿಂಟಲ್‍ನಿಂದ 1.6 ಹೆಕ್ಟೇರಿಗೆ 32-40 ಕ್ವಿಂಟಲ್‍ನಷ್ಟು ಕಡಿಮೆಯಾಗಿದೆ. ಭತ್ತದ ಉತ್ಪಾದನೆಯು ಐಲಾ ಚಂಡಮಾರುತಕ್ಕಿಂತಲೂ ಮೊದಲಿನ ಸ್ಥಿತಿಗೆ ಮರಳಿದೆಯಾದರೂ, ಆತನ ಕುಟುಂಬದವರು ಹಾಗು ಆತನ ಗ್ರಾಮದ ಇತರರು ಜೂನ್‍ನಿಂದ ಸೆಪ್ಟೆಂಬರ್ ತಿಂಗಳವರೆಗಿನ ಮಳೆಯನ್ನೇ ಸಂಪೂರ್ಣವಾಗಿ ಅವಲಂಬಿಸಬೇಕಿದೆ.

ಮಳೆಯು ಈಗ ವಿಶ್ವಸನೀಯವಾಗಿಲ್ಲ. ಹವಾಮಾನ ಬದಲಾವಣೆಯ ದೀ‍ರ್ಘಕಾಲೀನ ಪರಿಣಾಮದಿಂದಾಗಿ, ಸಮುದ್ರದ ಮಟ್ಟದಲ್ಲಿನ ತೀವ್ರ ಹೆಚ್ಚಳ, ಮಾನ್ಸೂನ್ ಪ್ರವೇಶದಲ್ಲಿನ ವಿಳಂಬ ಹಾಗೂ ಕೊರತೆಗಳು ಕಂಡುಬರುತ್ತಿವೆ.

ಕಲ್ಕತ್ತದಲ್ಲಿನ ಸ್ಕೂಲ್ ಆಫ್ ಓಶಿಯನೊಗ್ರಫಿಕ್ ಸ್ಟಡೀಸ್‍ನಲ್ಲಿ ಜಾರಿಯಲ್ಲಿರುವ ಸಂಶೋಧನೆಯು ಕಳೆದೆರಡು ದಶಕಗಳಿಂದ, ಉತ್ತರದ ಬಂಗಾಳ ಕೊಲ್ಲಿಯಲ್ಲಿ (ಸುಂದರ್ಬನ್ ಇರುವೆಡೆಯಲ್ಲಿ ) ಬಹಳಷ್ಟು ಬಾರಿ, ಒಂದು ದಿನಕ್ಕೆ 100 ಮಿ.ಮೀ.ಗಿಂತಲೂ ಅಧಿಕ ಮಳೆಯಾಗುತ್ತಿದೆಯೆಂಬುದಾಗಿ ತಿಳಿಸುತ್ತದೆ. ಇದೇ ವೇಳೆಗೆ, ಬಿತ್ತನೆಯ ಕಾಲದಲ್ಲಿ, ಈ ವರ್ಷದಲ್ಲಿ ಆದಂತೆ ಮಾನ್ಸೂನ್ ಕುಂಠಿತಗೊಂಡಿದೆ. ಅಂದರೆ, ಸೆಪ್ಟೆಂಬರ್ 4 ರವರೆಗಿನ ಲೆಕ್ಕಾಚಾರದಂತೆ ದಕ್ಷಿಣದ 24 ಪರಗಣಗಳಲ್ಲಿ ಸುಮಾರು 307 ಮಿ.ಮೀ. ಹಾಗೂ ಉತ್ತರದ 24 ಪರಗಣಗಳಲ್ಲಿ ಸುಮಾರು 157 ಮಿ.ಮೀ. ನಷ್ಟು ಮಳೆಯ ಕೊರತೆ ಕಂಡುಬಂದಿದೆ ಎಂಬುದಾಗಿ ಪ್ರೊ. ಹಝ್ರಾ ತಿಳಿಸುತ್ತಾರೆ.

ಕೇವಲ ಈ ವರ್ಷವಷ್ಟೇ ಅಲ್ಲದೆ, ಸುಂದರ್ಬನ್‍ನಲ್ಲಿ ಕೆಲವು ವರ್ಷಗಳಿಂದಲೂ ಮಳೆಯ ಅನಾವೃಷ್ಟಿ ಅಥವ ಅತಿವೃಷ್ಟಿಯು ಕಂಡುಬರುತ್ತಿದೆ. ದಕ್ಷಿಣ ಪರಗಣದ ಜೂನ್‍ನಿಂದ ಸೆಪ್ಟೆಂಬರ್‍ವರೆಗಿನ ಮಾನ್ಸೂನ್ ಮಳೆಯು, ಸಾಮಾನ್ಯವಾಗಿ 1552.6 ಮಿ.ಮೀ.ನಷ್ಟಿರುತ್ತದೆ. 2012-17 ರ ಮಾನ್ಸೂನ್ ದತ್ತಾಂಶದಂತೆ, ಒಟ್ಟಾರೆ ಆರು ವರ್ಷಗಳಲ್ಲಿನ ನಾಲ್ಕು ವರ್ಷಗಳ ಮಳೆಯಲ್ಲಿ ಕೊರತೆಯು ಕಂಡುಬಂದಿದೆ. 2017 ರಲ್ಲಿ (1173.3 ಮಿ.ಮೀ) ಮತ್ತು 2012 ರಲ್ಲಿ, (1130.4 ಮಿ.ಮೀ) ಮಳೆಯ ತೀವ್ರ ಕೊರತೆಯನ್ನು ಕಾಣಬಹುದಾಗಿದೆ.

PHOTO • Urvashi Sarkar

‘ಭತ್ತವು ಸಂಪೂರ್ಣವಾಗಿ ಮಳೆಯಾಧಾರಿತವಾಗಿದ್ದು, ಮಳೆಯಿಲ್ಲದಿದ್ದಲ್ಲಿ, ಅಕ್ಕಿಯು ಬೆಳೆಯುವುದಿಲ್ಲ’

ಉತ್ತರದ 24 ಪರಗಣಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ಪ್ರಕ್ರಿಯೆಯು ಸಂಭವಿಸಿದೆ: ಅಂದರೆ, ಮಳೆಯ ಅತಿವೃಷ್ಟಿಯಾಗಿದೆ. ಜೂನ್‍ನಿಂದ ಸೆಪ್ಟೆಂಬರ್ ತಿಂಗಳಲ್ಲಿನ ಇಲ್ಲಿನ ಸಾಧಾರಣ ಮಳೆಯು 1172.8 ಮಿ.ಮೀ. ನಷ್ಟಿದೆ. 2012-17 ರ ಮಾನ್ಸೂನ್ ದತ್ತಾಂಶವು, ಒಟ್ಟಾರೆ ಈ ಆರು ವರ್ಷಗಳಲ್ಲಿನ ನಾಲ್ಕು ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಮಳೆಯಾಗಿದ್ದು, 2015 ರ ಮಳೆಯ ಪ್ರಮಾಣವು, 1428 ಮಿ.ಮೀ.ನಷ್ಟಿದೆಯೆಂದು ತಿಳಿಸುತ್ತದೆ.

"ಅಕಾಲಿಕ ಮಳೆಯು ಹೆಚ್ಚು ತೊಂದರೆದಾಯಕ. ಈ ವರ್ಷದ ಫೆಬ್ರವರಿಯಲ್ಲಿ ಮಾನ್ಸೂನಿನಂತೆ ಮಳೆಯು ಹೇರಳವಾಗಿತ್ತು. ಹಿರಿಯರೂ ಸಹ, ಫೆಬ್ರವರಿಯಲ್ಲಿ ಇಷ್ಟೊಂದು ಮಳೆ ಸುರಿದಿದ್ದರ ನೆನಪೇ ನಮಗಿಲ್ಲ ಎನ್ನುತ್ತಿದ್ದರು", ಎಂದು ಕಾಜಲ್ ಲತ ತಿಳಿಸುತ್ತಾರೆ. ಆಕೆಯ ಕುಟುಂಬವು ತನ್ನ ಆದಾಯಕ್ಕಾಗಿ ಜೂನ್-ಜುಲೈನಲ್ಲಿ ಬಿತ್ತನೆಮಾಡಿ, ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಕಟಾವನ್ನು ಕೈಗೊಳ್ಳಲಾಗುವ ಭತ್ತದ ಬೆಳೆಯನ್ನೇ ಅವಲಂಬಿಸಿದೆ. "ಭತ್ತವು ಸಂಪೂರ್ಣವಾಗಿ ಮಳೆಯಾಧಾರಿತ. ಮಳೆಯಿಲ್ಲದಿದ್ದಲ್ಲಿ, ಅಕ್ಕಿಯು ಬೆಳೆಯುವುದಿಲ್ಲ."

ಕಳೆದ ನಾಲ್ಕು ಅಥವ ಐದು ವರ್ಷಗಳಿಂದಲೂ ಮಾನ್ಸೂನ್ ತಿಂಗಳುಗಳಲ್ಲದೆ, ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿಯೂ ತನ್ನ ಹಳ್ಳಿಯಲ್ಲಿ ಮಳೆಯಾಗುತ್ತಿದೆಯೆಂದು ಆಕೆ ತಿಳಿಸುತ್ತಾರೆ. ಈ ತಿಂಗಳುಗಳಲ್ಲಿ ಇಲ್ಲಿ ಸ್ವಲ್ಪ ಮಳೆಯಾಗುತ್ತದಾದರೂ ಅದರ ತೀವ್ರತೆಯಿಂದಾಗಿ ಭತ್ತದ ಕಟಾವಿಗೆ ಹಾನಿಯುಂಟಾಗುತ್ತದೆ. "ಒಂದೋ, ಮಳೆಯ ಅವಶ್ಯಕತೆಯಿರುವಾಗ ಅದರ ಅಭಾವವಿರುತ್ತದೆ ಅಥವಾ ಅಕಾಲಿಕವಾಗಿ ಮಳೆಯ ಅತಿವೃಷ್ಟಿಯಾಗುತ್ತದೆ. ಇದು ಕಟಾವಿಗೆ ಹಾನಿಯುಂಟುಮಾಡುತ್ತಿದೆ. ಪ್ರತಿ ವರ್ಷವೂ, ಈ ಬಾರಿ ಅತಿವೃಷ್ಟಿಯಾಗುವುದಿಲ್ಲವೆಂದು (ಅಕಾಲಿಕ) ಅಂದುಕೊಳ್ಳುತ್ತೇವೆ. ಆದರೆ ಮಳೆಯ ಅತಿವೃಷ್ಟಿ ಎಷ್ಟಿರುತ್ತದೆಂದರೆ, ಫಸಲು ಸಂಪೂರ್ಣವಾಗಿ ನಾಶವಾಗುತ್ತದೆ. ನಮ್ಮಲ್ಲಿ, ಆಶೆ ಮೊರೆ ಛಾಸ ಎಂಬ ಒಂದು ಮಾತಿದೆ. (ಭರವಸೆಯು ರೈತನನ್ನು ಕೊಲ್ಲುತ್ತದೆ.)"

ರಜತ್ ಜುಬಿಲಿ ಹಳ್ಳಿಯಲ್ಲಿನ ಪ್ರಬಿರ್ ಮೊಂಡಲ್ ಸಹ ಚಿಂತಿತರಾಗಿದ್ದಾರೆ. "ಜೂನ್ ಮತ್ತು ಜುಲೈನಲ್ಲಿ ನನ್ನ ಹಳ್ಳಿಯಲ್ಲಿ ಮಳೆಯಿರಲಿಲ್ಲ. ಭತ್ತದ ಪೈರು ಒಣಗಿತು. ಅದೃಷ್ಟವಶಾತ್ ಆಗಸ್ಟ್ ತಿಂಗಳಲ್ಲಿ ಮಳೆಯಾಯಿತು."

"ಆದರೆ ಅಷ್ಟು ಸಾಕೇ? ಮಳೆಯ ಅತಿವೃಷ್ಟಿಯಾಗಿ, ಬೆಳೆಯು ಮುಳುಗುವಂತಾದರೆ?", ಎನ್ನುವ ಅವರು, ಪರ್ಯಾಯ ವೈದ್ಯಶಾಸ್ತ್ರದಲ್ಲಿ ಬಿ.ಎ. ಪದವಿ ಪಡೆದಿದ್ದು, ಸ್ವಾಸ್ಥ್ಯ ಸಂಬಂಧಿ ಚಿಕಿತ್ಸಕರಾಗಿದ್ದಾರೆ. ತನ್ನ ರೋಗಿಗಳೂ ಸಹ ಧಗೆಯ ಬಗ್ಗೆ ದೂರುತ್ತಾರೆ. ಹಲವರು ಈಗ ಉಷ್ಣಾಘಾತದಿಂದ ಬಳಲುತ್ತಿದ್ದಾರೆ. ಯಾವುದೇ ಸಮಯದಲ್ಲಿ ನಮ್ಮನ್ನು ಬಾಧಿಸಬಹುದಾದ ಅದು, ಪ್ರಾಣಾಂತಿಕವೂ ಹೌದು ಎನ್ನುತ್ತಾರವರು.

ಸಮುದ್ರಮಟ್ಟದ ಏರಿಕೆಯ ತಾಪಮಾನದೊಂದಿಗೆ, ಸುಂದರ್ಬನ್ ಭೂ ತಾಪಮಾನವೂ ಹೆಚ್ಚಾಗುತ್ತಿದೆ. ಹವಾಮಾನ ಹಾಗೂ ಜಾಗತಿಕ ತಾಪವನ್ನು ಕುರಿತ ನ್ಯೂಯಾರ್ಕ್ ಟೈಮ್ಸ್ ಸಂವಾದಾತ್ಮಕ  ಪೋರ್ಟಲ್‍ನ ದತ್ತಾಂಶದಂತೆ; 1960 ರಲ್ಲಿ, ಇಲ್ಲಿ ವರ್ಷವೊಂದರ 180 ದಿನಗಳ ತಾಪಮಾನವು 32 ಡಿಗ್ರಿ ಸೆಲ್ಸಿಯಸ್‍ ಅಥವ ಅದಕ್ಕಿಂತಲೂ ಹೆಚ್ಚಾಗಿತ್ತು. 2017 ರಲ್ಲಿ ಇಂತಹ ದಿನಗಳ ಸಂಖ್ಯೆ, 188 ಕ್ಕೆ ಏರಿಕೆಯಾಗಿದೆಯೆಂದು ತಿಳಿದುಬರುತ್ತದೆ. ಶತಮಾನದ ಅಂತ್ಯದ ವೇಳೆಗೆ ಈ ದಿನಗಳ ಸಂಖ್ಯೆಯು 213 ರಿಂದ 258 ರಷ್ಟಾಗಬಹುದು.

ತಾಪಮಾನದ ಹೆಚ್ಚಳ, ಚಂಡಮಾರುತಗಳು, ಅನಿಯಮಿತ ಮಳೆ, ಲವಣತ್ವ, ನಶಿಸುತ್ತಿರುವ ಮ್ಯಾಂಗ್ರೋವ್‍ಗಳು ಇತ್ಯಾದಿ ಪ್ರಕ್ರಿಯೆಗಳಿಂದಾಗಿ, ಘಾಸಿಗೊಳಗಾಗಿರುವ ಸುಂದರ್ಬನ್ ನಿವಾಸಿಗಳು ಅನಿಶ್ಚಿತತೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹಲವಾರು ಬಿರುಗಾಳಿ, ಚಂಡಮಾರುತಗಳಿಗೆ ಸಾಕ್ಷಿಯಾದ ಪ್ರಫುಲ್ಲ ಮೊಂಡಲ್, "ಮುಂದೇನಾಗುವುದೋ ಬಲ್ಲವರಾರು?", ಎಂದು ಅಚ್ಚರಿಪಡುತ್ತಾರೆ.

ದೇಶಾದ್ಯಂತ ಪರಿಸರದಲ್ಲಿ ಬದಲಾವಣೆಗಳಾಗುತ್ತಿವೆ. ಯುಎನ್‍ಡಿಪಿ ಆಶ್ರಯದಲ್ಲಿ ಪರಿಯ ವತಿಯಿಂದ ಅವನ್ನು ವರದಿಸುವ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, ಸದರಿ ವಿಷಯವನ್ನು ಕುರಿತಂತೆ ಸಾಮಾನ್ಯ ಜನರ ಅನುಭವ ಮತ್ತು ಹೇಳಿಕೆಗಳನ್ನು ಗ್ರಹಿಸಿ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ಗಳನ್ನು ಸಂಪರ್ಕಿಸಿ: [email protected] with a cc to [email protected].

ಅನುವಾದ: ಶೈಲಜ ಜಿ. ಪಿ.

Reporter : Urvashi Sarkar

Urvashi Sarkar is an independent journalist and a 2016 PARI Fellow.

Other stories by Urvashi Sarkar
Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Series Editors : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.