ಆಯಿಷಾ ಮೊಹಮ್ಮದ್ ಕೇರಂ ಆಟವನ್ನು ಆಡಲು ಆರಂಭಿಸಿದ್ದು ತನ್ನ ಏಳನೇ ವಯಸ್ಸಿನಲ್ಲಿ. ಆಗ ಆಯಿಷಾಳ ತಂದೆ ಸಂತೋಷ್ ಹಯಲಿಂಗೆ ಮೊದಲಬಾರಿ ತನ್ನ ಮಗಳಿಗಾಗಿ ಕೇರಂ ಬೋರ್ಡ್ ಒಂದನ್ನು ತೆಗೆದುಕೊಂಡು ಬಂದಿದ್ದರು. ಥಾನೆ ಜಿಲ್ಲೆಯಲ್ಲಿರುವ ಉಲ್ಲಾಸನಗರದ ತನ್ನ ಮನೆಯಲ್ಲೇ ಕೇರಂ ಅಭ್ಯಾಸ ಮಾಡುತ್ತಾ ಬೆಳೆದಿದ್ದಳು ಆಯಿಷಾ. ಸ್ಥಳೀಯ ಕೇರಂ ಕ್ಲಬ್ಬುಗಳಲ್ಲಿ ಗಂಡಸರಷ್ಟೇ ಕೇರಂ ಆಟವನ್ನು ಆಡುತ್ತಿದ್ದ ಪರಿಣಾಮವಾಗಿ ಆಯಿಷಾ ತನ್ನ ಮನೆಯಲ್ಲೇ ಕುಳಿತು ಆಟವನ್ನು ಕಲಿಯಬೇಕಿತ್ತು.

ಆಯಿಷಾ ಎಂಟರ ವಯಸ್ಸಿಗೆ ಬಂದಾಗ ತನ್ನ ಜೀವನದ ಮೊದಲ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಳು. ಅದೂ ಕೂಡ ತನಗಿಂತ ಹಿರಿಯ ಆಟಗಾರ್ತಿಯೊಬ್ಬಳನ್ನು ಎದುರಾಳಿಯಾಗಿಟ್ಟುಕೊಂಡು. ಅಂದು ಆಯಿಷಾ ಸೋತಿದ್ದು ನಿಜ. ಆದರೆ ಆಕೆಯ ಅದ್ಭುತ ಪಯಣವು ಶುರುವಾಗಿದ್ದೂ ಕೂಡ ಅಲ್ಲಿಂದಲೇ ಎನ್ನುವುದನ್ನು ಹೇಳಲೇಬೇಕು. ಇದಾದ ನಂತರ ಕಾಲಾನುಕ್ರಮದಲ್ಲಿ ಹೋದಲ್ಲೆಲ್ಲಾ ಪ್ರಶಸ್ತಿಗಳನ್ನು ಬಾಚುತ್ತಲೇ ಮುನ್ನಡೆದಿದ್ದಳು ಆಯಿಷಾ. ಇವೆಲ್ಲದಕ್ಕೂ ಮುಕುಟವಿಟ್ಟಂತೆ ಮಹಾರಾಷ್ಟ್ರದ ಅತ್ಯುನ್ನತ ಕ್ರೀಡಾ ಪುರಸ್ಕಾರವಾದ ಶಿವ್ ಛತ್ರಪತಿ ಸ್ಪೋಟ್ರ್ಸ್ ಅವಾರ್ಡ್ ಕೂಡ 2003-04 ನೇ ಸಾಲಿನಲ್ಲಿ ಆಯಿಷಾಳಿಗೆ ಒಲಿದುಬಂದಿತ್ತು.

ಮುಂದೆ ಕೇರಂ ಟೂರ್ನಮೆಂಟ್ ಒಂದರಲ್ಲಿ ಭೇಟಿಯಾಗುವ ಮೊಹಮ್ಮದ್ ಸಾಜಿದ್ (ಕೇರಂ ಚಾಂಪಿಯನ್) ಮತ್ತು ಆಯಿಷಾ ಇಬ್ಬರ ಕುಟುಂಬದ ಕಡೆಯಿಂದ ಪ್ರತಿರೋಧಗಳಿದ್ದರೂ ವಿವಾಹವಾಗುತ್ತಾರೆ. ಸದ್ಯ ಆಯಿಷಾ ತನ್ನ ಪತಿ, ತಂದೆ ಮತ್ತು ಮಗನೊಂದಿಗೆ ಜಲಗಾಂವ್ ನಲ್ಲಿ ನೆಲೆಸಿದ್ದಾಳೆ. ಇನ್ನು ಜೈನ್ ಇರಿಗೇಷನ್ ಸಿಸ್ಟಮ್ಸ್ ನಲ್ಲಿ ಉದ್ಯೋಗಿಯಾಗಿರುವ ಆಯಿಷಾ ಶಾಲೆಯೊಂದರಲ್ಲಿ ಮಕ್ಕಳಿಗೆ ಕೇರಂ ತರಬೇತುದಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


ಭವಿಷ್ಯದ ಚಾಂಪಿಯನ್ನುಗಳ ಸೃಷ್ಟಿಯಲ್ಲಿ: ಮಹಾರಾಷ್ಟ್ರದ ಜಲಗಾಂವ್ ನಲ್ಲಿರುವ ಶಾಲೆಯೊಂದರಲ್ಲಿ ಕೇರಂ ಕೋಚ್ ಆಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಆಯಿಷಾ


ಸರಿಯಾದ ಸ್ಟ್ರೈಕ್ ನತ್ತ ಚಿತ್ತ: ಪತಿ ಸಾಜಿದ್ ಮತ್ತು ಮಗನಾದ ಹಂಝಾರೊಂದಿಗೆ ಆಯಿಷಾ

ಕ್ರೀಡೆಯು ಎಲ್ಲಾ ಮೇಲುಕೀಳುಗಳಿಗಿಂತಲೂ ಮಿಗಿಲಾದದ್ದು ಎಂಬುದನ್ನು ದೃಢವಾಗಿ ನಂಬಿರುವವರು ಆಯಿಷಾ. ``ಕ್ರೀಡೆಯು ಎಲ್ಲರಿಗೂ ಸೇರಿದ್ದು ಮತ್ತು ಇದು ಎಲ್ಲರನ್ನೂ ಒಗ್ಗೂಡಿಸುವ ಒಂದು ಶಕ್ತಿಯೂ ಹೌದು. ಯಾರೊಬ್ಬರೂ ಕ್ರೀಡೆಯೊಂದನ್ನು ಏಕಾಂಗಿಯಾಗಿ ಸೃಷ್ಟಿಸಿದವರಲ್ಲ. ಹೀಗಾಗಿ ಯಾರು ಬೇಕಿದ್ದರೂ ಅದನ್ನು ಆಡಬಹುದು. ಜನರು ಬಡವರಲ್ಲಿ ತೀರಾ ಬಡವರಾಗಿರಲಿ ಅಥವಾ ಶ್ರೀಮಂತರಲ್ಲಿ ಅದೆಷ್ಟೋ ಶ್ರೀಮಂತರಾಗಿರಲಿ - ಯಾರೂ ಕೂಡ ಕ್ರೀಡೆಯನ್ನು ತಮ್ಮದಾಗಿಸಿಕೊಳ್ಳಬಹುದು'', ಎನ್ನುತ್ತಾರೆ ಆಯಿಷಾ. 

ಕ್ರೇಜಿ ಫ್ರಾಗ್ ಮೀಡಿಯಾ ಫೀಚರ್ಸ್ ಈ ಅನುವಾದದ ರೂವಾರಿ. ಪ್ರಸ್ತುತ ರಿಪಬ್ಲಿಕ್ ಆಫ್ ಅಂಗೋಲಾದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು ಮತ್ತು ಅಂಕಣಕಾರರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು prasad13[email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು. This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

Shreya Katyayini

ಪರಿಯ ತಂಡದಲ್ಲಿ ವೀಡಿಯೋ ಸಂಯೋಜಕರಾಗಿರುವ ಶ್ರೇಯಾ ಕಾತ್ಯಾಯಿನಿಯವರು ಛಾಯಾಚಿತ್ರಗ್ರಾಹಕರು ಮತ್ತು ಚಿತ್ರನಿರ್ದೇಶಕರೂ ಹೌದು. ಇವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಮುಂಬೈನಲ್ಲಿ ಮೀಡಿಯಾ ಆಂಡ್ ಕಲ್ಚರಲ್ ಸ್ಟಡೀಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ (2016 ರ ಮೊದಲ ಭಾಗದಲ್ಲಿ).

Other stories by Shreya Katyayini