`ಬೌಲ್' ಪದದ ಮೂಲವಿರುವುದು ಸಂಸ್ಕøತದ `ವಟುಲ' ಪದದಲ್ಲಿ. ಹುಚ್ಚು, ಆವಾಹನೆ, ಅಸ್ತವ್ಯಸ್ತ ಇತ್ಯಾದಿ ಅರ್ಥಗಳು ಈ ಪದಕ್ಕಿವೆ. ಇನ್ನು ಬಂಗಾಲದ ನೆಲದಲ್ಲಿ ಹುಟ್ಟಿದ ಸಂಗೀತ ಪ್ರಕಾರವೊಂದಕ್ಕೂ `ಬೌಲ್' ಎಂಬ ಹೆಸರಿದೆ.

ಅಸಲಿಗೆ ಬೌಲ್ ಜನಾಂಗದವರು ಅಲೆಮಾರಿಗಳು. ಇವರ ಧರ್ಮವು ಹಿಂದೂ, ಇಸ್ಲಾಂ ಮತ್ತು ಬುದ್ಧಿಸಂನ ತತ್ವಗಳನ್ನೊಳಗೊಂಡಿದ್ದು ಇತರರೊಂದಿಗೆ ಸುಲಭವಾಗಿ ಬೆರೆಯುತ್ತಾ ಜೀವಿಸುವ ಸ್ನೇಹಜೀವಿಗಳು ಇವರು. ಅಂತೆಯೇ ಸಮಾಜದ ಸಾಂಪ್ರದಾಯಿಕ ರೂಢಿಗಳನ್ನು ಧಿಕ್ಕರಿಸಿ ಸಂಗೀತವನ್ನೇ ಈ ಜಗತ್ತನ್ನು ಒಗ್ಗೂಡಿಸುವ ಶಕ್ತಿಯೆಂದು ಬಲವಾಗಿ ನಂಬಿದವರು. ಅವರ ಹಾಡುಗಳಲ್ಲಿರುವುದು ಕೂಡ ಜೀವನದ ಇಂತಹ ಉದಾತ್ತ ತತ್ವಗಳೇ. ಹಾಗೆ ನೋಡಿದರೆ ಬೌಲ್ ಗಳನ್ನು ಇಂಥದ್ದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಿದರೆ ತಪ್ಪಾದೀತು. ಗುರುವೊಬ್ಬನ ಮಾರ್ಗದರ್ಶನದ ಮೂಲಕವಾಗಿ ಜೀವನವಿಧಾನವನ್ನು ಖುದ್ದಾಗಿ ಆರಿಸಿಕೊಂಡು, ತಮ್ಮ ಜೀವನವನ್ನು ರೂಪಿಸಿಕೊಂಡವರಿವರು.

ಬೌಲ್ ಗಳು ತಮ್ಮ ಸಂಸ್ಕøತಿಯಂತೆಯೇ ವೇಷಭೂಷಣಗಳಿಂದಲೂ ಇತರರಿಗಿಂತ ವಿಭಿನ್ನವಾಗಿ ನಿಲ್ಲುವವರು. ಬೌಲ್ ಗಂಡಸರು ಸಾಮಾನ್ಯವಾಗಿ ತಮ್ಮ ಕತ್ತರಿಸದ ಕೂದಲು ಮತ್ತು ಕೇಸರಿ ಬಣ್ಣದ ಉಡುಪಿನೊಂದಿಗೆ ಕಾಣಸಿಕ್ಕರೆ ಹೆಂಗಸರು ಕಟ್ಟದೆ ಇಳಿಬಿಟ್ಟ ಕೂದಲು ಮತ್ತು ಕೇಸರಿ ಬಣ್ಣದ ಸೀರೆಗಳನ್ನುಟ್ಟು ಕಂಗೊಳಿಸುತ್ತಾರೆ. ಇನ್ನು ರುದ್ರಾಕ್ಷ ಮಾಲೆಗಳು ಮತ್ತು ಒಂದೇ ಒಂದು ತಂತಿಯನ್ನು ಹೊಂದಿರುವ `ಇಕ್-ತಾರಾ' ಇವರಲ್ಲಿ ಎದ್ದುಕಾಣುವ ಅಂಶಗಳು. ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಹಾಡುಗಳನ್ನೇ ನಂಬಿಕೊಂಡಿರುವ ಬೌಲ್ ಜನಾಂಗದವರು ಹಾಡುತ್ತಾ ಜನರಿಂದ ಕಾಣಿಕೆಯಾಗಿ ಪಡೆದ ಮೊತ್ತದಿಂದಲೇ ಇಂದಿಗೂ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಬೌಲ್ ಹಾಡುಗಾರನ ಜನಪ್ರಿಯತೆಯ ಆಧಾರದ ಮೇಲೆ 200-1000 ರೂಪಾಯಿಗಳ ಆದಾಯವು ತಮ್ಮ ಗಾಯನ ಕಾರ್ಯಕ್ರಮವೊಂದರಲ್ಲಿ ಇವರಿಗೆ ಸಿಗುತ್ತದಂತೆ.

PHOTO • Sinchita Maaji

ಡೊಟಾರಾ ಮತ್ತು ಖಮಕ್ ಗಳು ಬೌಲ್ ಹಾಡುಗಾರರು ಉಪಯೋಗಿಸುವ ಹಲವು ವಾದ್ಯಗಳಲ್ಲಿ ಒಂದಾಗಿರುವಂಥವುಗಳು. ಜೀವನದ ಮಹತ್ತರ ತತ್ವಗಳನ್ನು ಇವರ ಹಾಡುಗಳು ಪ್ರತಿಬಿಂಬಿಸುತ್ತವೆ.

ಕೊಳಲು, ಡೋಲು, ಖಮಕ್, ಕೋರ್ಟಲ್, ಡೊಟಾರಾ, ತಬಲಾ, ಗೆಜ್ಜೆ, ಡುಪ್ಕಿ ಮತ್ತು ಎಲ್ಲದಕ್ಕಿಂತಲೂ ಮುಖ್ಯವಾದ ಇಕ್-ತಾರಾಗಳನ್ನು ನುಡಿಸಿ ಹಾಡಲಾಗುವ ಇವರ ಸಂಗೀತವು ಸಾಮಾನ್ಯವಾಗಿ ಎರಡು ವಿಚಾರಗಳ ಸುತ್ತಲೇ ಸುತ್ತುತ್ತಿರುತ್ತವೆ. ಅವುಗಳೆಂದರೆ ದೇಹೋ ಸಾಧನ (ದೇಹದ ಅಭಿವ್ಯಕ್ತಿ) ಮತ್ತು ಮೊನೋ ಸಾಧನ (ಮನದ ಅಭಿವ್ಯಕ್ತಿ).

ಬೌಲ್ ಸಂಗೀತದ ಬಗ್ಗೆ ಹೇಳುವುದಾದರೆ ಪ್ರತೀವರ್ಷವೂ ಬಂಗಾಲದಲ್ಲಿ ಎರಡು ಸಂಗೀತೋತ್ಸವಗಳನ್ನು ಆಚರಿಸಲಾಗುತ್ತದೆ: ಕೆಂದುಲಿ ಮೇಳ ಮತ್ತು ಪೌಸ್ ಮೇಳ. ಕೆಂದುಲಿ ಮೇಳವು ಜೊಯ್ ದೇವ್-ಕೆಂದುಲಿ ಹಳ್ಳಿಯಲ್ಲಿ ಜನವರಿಯ ಮಧ್ಯಭಾಗದಲ್ಲಿ ಏರ್ಪಡಿಸಿದರೆ, ಪೌಸ್ ಮೇಳವನ್ನು ಬೋಲ್ಪುರ್ ಪಟ್ಟಣದ ಶಾಂತಿನಿಕೇತನ ಪ್ರದೇಶದಲ್ಲಿ ಡಿಸೆಂಬರ್ ತಿಂಗಳ ಕೊನೆಯಲ್ಲಿ ಏರ್ಪಡಿಸಲಾಗುತ್ತದೆ. ಇವುಗಳನ್ನು ಹೊರತುಪಡಿಸಿದರೆ ಬೌಲ್ ಹಾಡುಗಾರರು ಇತರ ಚಿಕ್ಕಪುಟ್ಟ ಕಾರ್ಯಕ್ರಮಗಳಲ್ಲೂ ತಮ್ಮ ಗಾಯನಪ್ರತಿಭೆಯನ್ನು ಪ್ರದರ್ಶಿಸುವುದುಂಟು.

PHOTO • Sinchita Maaji

ಬೌಲ್ ಜೀವನವಿಧಾನಕ್ಕೆ ತನ್ನ ಪ್ರವೇಶ ಹೇಗಾಯಿತೆಂದು ಬಾಸುದೇಬ್ ತನ್ನ ಬೋಲ್ಪುರ್ ನಿವಾಸದಲ್ಲಿ ಹೇಳುತ್ತಿದ್ದಾರೆ.

ನಲವತ್ತರ ಮಧ್ಯದ ಪ್ರಾಯದ ಬಾಸುದೇಬ್ ಬೌಲ್ ಪಶ್ಚಿಮಬಂಗಾಳದ ಬೋಲ್ಪುರ್ ಪಟ್ಟಣದ ನಿವಾಸಿ. ಅವರು ಸ್ವತಃ ಗಾಯಕರಾಗಿರುವುದಲ್ಲದೆ ಹಲವು ವಿದ್ಯಾರ್ಥಿಗಳಿಗೆ ಬೌಲ್ ಸಂಗೀತಪ್ರಕಾರದ ತರಬೇತುದಾರರೂ ಆಗಿದ್ದಾರೆ. ಎಲ್ಲರನ್ನೂ ತಮ್ಮ ಮನೆಗೆ ಆತ್ಮೀಯವಾಗಿ ಸ್ವಾಗತಿಸುವ ಬಾಸುದೇಬ್ ಎಲ್ಲರನ್ನೂ ತಮ್ಮ ಮನೆಯವರಂತೆಯೇ ಕಾಣುವ ಉದಾತ್ತ ಮನೋಭಾವದವರು. ಬಾಸುದೇಬ್ ರೊಂದಿಗಿರುವ ಹಲವು ವಿದ್ಯಾರ್ಥಿಗಳು ಸಂಗೀತದೊಂದಿಗೇ ಬೌಲ್ ಜೀವನವಿಧಾನವನ್ನೂ ಕೂಡ ಅವರಿಂದ ಅನುದಿನವೂ ಕಲಿಯುತ್ತಿದ್ದಾರೆ.

ಈ ಸಾಕ್ಷ್ಯಚಿತ್ರದಲ್ಲಿ ಬಾಸುದೇಬ್ ಬೌಲ್ ಎರಡು ಹಾಡುಗಳನ್ನು ಹಾಡಿದ್ದಾರೆ. ಮೊದಲನೇ ಹಾಡು ಈ ಜೀವನದ ಅತ್ಯುನ್ನತ ಶಕ್ತಿಯಾದ ಭಗವಂತನ ತಲಾಶೆಯ ಬಗ್ಗೆ ಹೇಳುತ್ತದೆ. ಭಗವಂತ ನನ್ನೊಂದಿಗೇ ಇದ್ದಾನೆ ಆದರೆ ಅವನ ಇರುವಿಕೆಯನ್ನು ಗುರುತಿಸುವಲ್ಲಿ ನಾನು ಸೋತುಹೋಗಿದ್ದೇನೆ... ಜೀವನದುದ್ದಕ್ಕೂ ನಾನು ಭಗವಂತನನ್ನು ಅರಸುತ್ತಲೇ ಇದ್ದೇನೆ, ಅವನನ್ನು ಕಾಣುವಂತಾಗಲು ನನಗೊಂದು ದಿಕ್ಕನ್ನು ತೋರಿಸು... ಹೀಗೆ ಸಾಗುತ್ತದೆ ಈ ಹಾಡು.

ಎರಡನೇ ಹಾಡನ್ನು ಒಬ್ಬ ಗುರುವಿನ ಸುತ್ತ ಹೆಣೆಯಲಾಗಿದೆ. ಗುರುವಿಗೊಂದು ಗೌರವಾರ್ಪಣೆಯನ್ನು ಕೊಡುವಂತಹ ಹಾಡಿದು. ನಿನಗೆ ಕಲಿಸುವ ಗುರುವನ್ನು ಯಾವತ್ತೂ ನೀನು ಪೂಜಿಸು ಎಂಬ ಆಶಯವು ಈ ಹಾಡಿನಲ್ಲಿದೆ. ಯಾವ ಭೌತಿಕಸುಖವೂ ಕೂಡ ನಿನ್ನೊಂದಿಗೆ ಶಾಶ್ವತವಾಗಿ ಇರಲಾರದು, ಆದರೆ ನಿನಗೆ ಗುರುವಿನಿಂದ ಕಲಿಸಿಕೊಟ್ಟ ಜ್ಞಾನವು ಮಾತ್ರ ಜೀವನದುದ್ದಕ್ಕೂ ನಿನ್ನೊಂದಿಗಿರುತ್ತದೆ, ಹೀಗಾಗಿ ಗುರುವಿಗೆ ತನ್ನ ಕೃತಜ್ಞತಾಭಾವವನ್ನು ಅರ್ಪಿಸಲು ಮರೆಯಬೇಡ, ಕೊನೆಗೂ ನಿನ್ನ ಮನೆಯನ್ನು ಭೂಮಿಯನ್ನು ಬಿಟ್ಟು ಬರಲಿರುವೆ ನೀ, ಇಲ್ಲಿಂದ ಕೊಂಡುಹೋಗುವಂಥದ್ದೇನಿಲ್ಲ... ನೀನು ಈ ಜಗದಲ್ಲಿ ಅದೆಷ್ಟು ಅಲ್ಪನೆಂದರೆ ನಿನ್ನ ಅಸ್ತಿತ್ವದ ಉದ್ದೇಶವೂ ನಿನಗೆ ತಿಳಿದಿಲ್ಲ... ಹೀಗಾಗಿ ಗುರುವಿನ ದಾರಿದೀಪದಲ್ಲೇ ನೀನು ಮುನ್ನಡೆ... ಹೀಗೆ ಬೌಲ್ ಹಾಡು ಸಾಗುತ್ತದೆ.  

ಈ ವೀಡಿಯೋ ಮತ್ತು ವರದಿಯನ್ನು ಸಿಂಚಿತಾ ಮಾಜಿಯವರ 2015-16 ಫೆಲೋಷಿಪ್ ಗಾಗಿ ಸಿದ್ಧಪಡಿಸಲಾಗಿತ್ತು.

ಅನುವಾದ: ಪ್ರಸಾದ್ ನಾಯ್ಕ

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Sinchita Maji

ಪರಿ ತಂಡದಲ್ಲಿ ವೀಡಿಯೋ ಸಂಯೋಜಕರಾಗಿರುವ ಸಿಂಚಿತಾ ಮಾಜಿ ಫ್ರೀಲಾನ್ಸ್ ಛಾಯಾಚಿತ್ರಗ್ರಾಹಕರು ಮತ್ತು ಸಾಕ್ಷ್ಯಚಿತ್ರ ನಿರ್ದೇಶಕರು. ಕೋಲ್ಕತ್ತಾ ಮೂಲದ ಆನ್ ಶೋರ್ ಪೈಪ್ ಲೈನ್ ಎಂಜಿನಿಯರ್ ಆಗಿರುವ ಸುಮನ್ ಪರ್ಬತ್ ಪ್ರಸ್ತುತ ಮುಂಬೈ ನಿವಾಸಿ.

Other stories by Sinchita Maji