ಭಟ್ವಡ್ಗಾಂವ್ ಹಳ್ಳಿಯ ಗದ್ದೆಯೊಂದರ ಅಂಚಿನಲ್ಲಿರುವ ಕೊಳಕಾದ ರಸ್ತೆಯುದ್ದಕ್ಕೂ ಹೆಜ್ಜೆಹಾಕುತ್ತಿದ್ದ ನಾವು ಕೊನೆಗೂ ಸಿಮೆಂಟಿನ ಮಾಡು ಮತ್ತು ನೇರಳೆ ಗೋಡೆಯನ್ನು ಹೊಂದಿರುವ ಚಿಕ್ಕ ಮನೆಯೊಂದಕ್ಕೆ ಬಂದು ತಲುಪಿದ್ದೆವು. ಮನೆಯೊಂದಕ್ಕೆ ಸಾಮಾನ್ಯವಾಗಿ ಇಡಲಾಗದ ಹೆಸರನ್ನು ಹೊತ್ತುಕೊಂಡಿದ್ದ ಆ ಮನೆಯ ಗೋಡೆಯ ಮೇಲೆ ನೇರಳೆ ಬಣ್ಣದಲ್ಲಿ ಮರಾಠಿಯಲ್ಲಿ 'ಟಿಣ್ಗಿ' ಎಂದು ಬರೆದಿತ್ತು. 'ಕಿಡಿ' ಎಂಬ ಅರ್ಥವಿರುವ ಈ ಪದವು 8-10 ಕವಿತೆಗಳ ಗುಂಪಿಗೆ ಇಡಲಾಗಿರುವ ಹೆಸರೂ ಹೌದು. ''ಇನ್ನೂ ಇವೆ. ನನ್ನ ತಂದೆಯ ಕವಿತೆಗಳನ್ನು ಬರೆದಿಡಲಾಗಿಲ್ಲ. ಆದರೆ ಅವೆಲ್ಲವೂ ನನ್ನ ನೆನಪಿನಲ್ಲಿ ಭದ್ರವಾಗಿವೆ'', ಎನ್ನುತ್ತಿದ್ದಾರೆ ಪ್ರದೀಪ್ ಸಾಲ್ವೆ.

ಸುಮಾರು 300 ಹಾಡುಗಳನ್ನು ಬರೆದು ತನ್ನ ಹಿಂದೆ ಒಂದು ಸಾಹಿತ್ಯ ಪರಂಪರೆಯನ್ನೇ ಬಿಟ್ಟುಹೋದ ತಮ್ಮ ತಂದೆಯವರಾದ ''ಶಹೀರ್'' (ಕವಿ) ಆತ್ಮಾರಾಮ್ ಸಾಲ್ವೆಯವರ ಬಗ್ಗೆ ಪ್ರದೀಪ್ ಸಾಲ್ವೆ ಮಾತಾಡುತ್ತಿದ್ದಾರೆ. ''ಅವುಗಳು ಹುಂಡಾ ಬಂದಿ (ವರದಕ್ಷಿಣೆ), ಮದ್ಯಪಾನ ಮತ್ತು ನಶೆಯ ದುವ್ರ್ಯಸನಗಳ ವಿರುದ್ಧ ಬರೆದ ಕವಿತೆಗಳಾಗಿದ್ದವು'', ಎನ್ನುವ ಪ್ರದೀಪ್ ಇವುಗಳಲ್ಲದೆ ಡಾ. ಬಾಬಾಸಾಹೇಬ್ ಅಂಬೇಡ್ಕರ್, ದಲಿತರು, ಮಹಿಳೆಯರು, ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಕ್ರಾಂತಿಗಳ ಬಗ್ಗೆಯೂ ಸಾಲ್ವೆಯವರು ಕವಿತೆಗಳನ್ನು ಬರೆದಿದ್ದರು ಎಂದರು. 'ಟಿಣ್ಗಿ'ಯ (ಸದ್ಯ ಅವರ ಸಹೋದರನಾದ ದೀಪಕ್ ರವರ ನಿವಾಸ) ಪಕ್ಕದಲ್ಲೇ ಇರುವ ತಮ್ಮ ನಿವಾಸವಾದ `ರಾಜರತ್ನ'ದಲ್ಲಿ ಕುಳಿತಿರುವ ಪ್ರದೀಪ್ ವರದಕ್ಷಿಣೆಯನ್ನು ವಿರೋಧಿಸಿ ಬರೆಯಲಾಗಿದ್ದ ಕವಿತೆಯ ಸಾಲೊಂದನ್ನು ಉದ್ಧರಿಸಿ ಹೇಳುತ್ತಿದ್ದಾರೆ.

''हुंड्याची पद्धत सोडा, समतेशी नाते जोडा''

''ವರದಕ್ಷಿಣೆಯ ಪದ್ಧತಿಯನ್ನು ಬಿಟ್ಟು ಸಮಾನತೆಯೊಂದಿಗೆ ಬೆರೆಯೋಣ''

ಮಹಾರಾಷ್ಟ್ರದ ಬೀದ್ ಜಿಲ್ಲೆಯ ಮಜಲ್ಗಾಂವ್ ತಾಲೂಕಿನಲ್ಲಿರುವ ಕೆಲ ಮಹಿಳೆಯರನ್ನು ಭೇಟಿಯಾಗಲು ಅಂದು ನಾವು ಅಲ್ಲಿದ್ದೆವು. 21 ವರ್ಷಗಳ ಹಿಂದೆ ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ಗಾಗಿ ಇಲ್ಲಿಯ ಮಹಿಳೆಯರು ಹಾಡಿದ್ದ ಒವಿಗಳನ್ನು ಧ್ವನಿಮುದ್ರಿಸಿಕೊಳ್ಳಲಾಗಿತ್ತು. ಸದ್ಯ `ಪರಿ'ಯಲ್ಲಿ ಇವುಗಳು ಸರಣಿಯಾಗಿ ಮೂಡಿಬರುತ್ತಿವೆ.


ಪ್ರದೀಪ್ ಸಾಲ್ವೆ (ಬಲ), ಪತ್ನಿ ಜ್ಯೋತಿ ಮತ್ತು ಮಗ ರಾಜರತ್ನ; ಇವರ ಹಿಂದೆ ನಿಂತಿರುವವರು ಪ್ರದೀಪ್ ರ ಅತ್ತೆಯಾದ ಲಲಿತಾಬಾಯಿ ಖಲ್ಗೆ. ಎಡಭಾಗದಲ್ಲಿ ನಾದಿನಿಯಾದ ಆಶಾ ತನ್ನ ಮಗನಾದ ಅಮಿತೋದನ್ ನೊಂದಿಗಿದ್ದಾರೆ

ನಾವು ಅಂದು ಪ್ರದೀಪ್ ಸಾಲ್ವೆಯವರ ತಾಯಿಯವರಾದ ಕಮಲ್ ಸಾಲ್ವೆಯವರನ್ನು ಭೇಟಿಯಾಗುವ ನಿರೀಕ್ಷೆಯಲ್ಲಿದ್ದೆವು. ಕಮಲ್ ಸಾಲ್ವೆ ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ನಲ್ಲಿ ಭಾಗವಹಿಸಿದ ಹಲವು ಗಾಯಕರಲ್ಲೊಬ್ಬರೂ ಹೌದು. ಆಕೆ ತಮ್ಮ ಸಂಬಂಧಿಗಳನ್ನು ಭೇಟಿಯಾಗಲು ಪಕ್ಕದ ಹಳ್ಳಿಗೆ ಹೋಗಿದ್ದರಿಂದಾಗಿ ನಾವು ಕುಟುಂಬದ ಇತರ ಸದಸ್ಯರೊಂದಿಗೆ ಮಾತಿಗಿಳಿದೆವು. ಕಮಲ್-ತಾಯಿ ಕವಿಯಾದ ಆತ್ಮಾರಾಮ್ ಸಾಲ್ವೆಯವರ ಧರ್ಮಪತ್ನಿ.

ಅಕ್ಟೋಬರ್ 14, 1956 ರಂದು ಹುಟ್ಟಿದ ಆತ್ಮಾರಾಮ್ ಸಾಲ್ವೆ ಔರಂಗಾಬಾದಿನ ಮಿಲಿಂದ್ ಮಹಾವಿದ್ಯಾಲಯದಲ್ಲಿ ಓದಿದವರು. ಸಾಲ್ವೆಯವರ ತಂದೆ ಎರಡು ಬಾವಿಗಳನ್ನು ಹೊಂದಿದ್ದ 25 ಎಕರೆ ಕೃಷಿಭೂಮಿಯ ಒಡೆಯರಾಗಿದ್ದರೂ ಕೂಡ ಮಗನಿಗೆ ಕೃಷಿಯಲ್ಲಿ ಆಸಕ್ತಿ ಹುಟ್ಟಲಿಲ್ಲ. ಬದಲಾಗಿ ಕವಿತೆಗಳು ಸಾಲ್ವೆಯವರ ಕೈಹಿಡಿದಿದ್ದವು. ''ಕ್ಷಣಾರ್ಧದಲ್ಲಿ ಕವಿತೆಗಳನ್ನು ರಚಿಸಿ ಅವರು ವಾಚಿಸಬಲ್ಲವರಾಗಿದ್ದರು'', ಎನ್ನುತ್ತಾರೆ ಪ್ರದೀಪ್. ಅವರ ಬಹಳಷ್ಟು ಕವಿತೆಗಳು ದಬ್ಬಾಳಿಕೆಯ ವಿರುದ್ಧ ಸಾಮಾಜಿಕ ಕ್ರಾಂತಿಯನ್ನುಂಟುಮಾಡಲು ದನಿಯೆತ್ತಿದಂಥವುಗಳು.

ಆತ್ಮಾರಾಮ್ ಸಾಲ್ವೆಯವರ ಸಾಹಿತ್ಯವು ಅವರ ಜೀವಿತಾವಧಿಯಲ್ಲಿ ಅಷ್ಟಾಗಿ ಗುರುತಿಸಿಕೊಳ್ಳಲಿಲ್ಲವೆಂಬುದು ಸತ್ಯವಾದರೂ ಅವರ ಕವಿತೆಗಳು ಮತ್ತು ಹಾಡುಗಳು ಮಹಾರಾಷ್ಟ್ರದ ಹಲವು ಹಳ್ಳಿ ಮತ್ತು ನಗರಗಳಾದ್ಯಂತ ವಿವಿಧ ರೂಪಗಳಲ್ಲಿ ಪ್ರದರ್ಶನಗೊಂಡವು ಎನ್ನುವುದೂ ಅಷ್ಟೇ ಸತ್ಯ. ಆಂದೋಲನ (ರಾಜಕೀಯ ಚಳುವಳಿ) ಗಳಲ್ಲಿ ಭಾಗವಹಿಸಿದ ಮತ್ತು ರಾಜಕೀಯ ವಿಡಂಬನೆಗಳನ್ನು ತಮ್ಮ ಕವಿತೆಗಳಲ್ಲಿ ತಂದ ಕಾರಣಕ್ಕಾಗಿ ನೂರಕ್ಕೂ ಹೆಚ್ಚು ಪ್ರಕರಣಗಳು ಅವರ ವಿರುದ್ಧ ದಾಖಲಾಗಿದ್ದವು.

''ಅವರು ಪ್ರತೀ ಬಾರಿ ಬಂಧನಕ್ಕೊಳಗಾದಾಗಲೂ ನಮ್ಮ ತಾತ ತಮ್ಮ ಜಮೀನಿನ ಸ್ವಲ್ಪ ಸ್ವಲ್ಪವೇ ಭಾಗಗಳನ್ನು ಮಾರಿ ಕಾನೂನು ಸಂಬಂಧಿ ಖರ್ಚುಗಳನ್ನು ನಿಭಾಯಿಸುತ್ತಿದ್ದರು'', ಎಂದು ನೆನಪಿಸಿಕೊಳ್ಳುತ್ತಾರೆ ಪ್ರದೀಪ್. ಪೋಲೀಸರು ಸಾಲ್ವೆಯವರನ್ನು ಮಜಲ್ಗಾಂವ್ ತಾಲೂಕದಿಂದ ಒಮ್ಮೆ ಮತ್ತು ಬೀದ್ ಜಿಲ್ಲೆಯಿಂದ ಎರಡು ಬಾರಿ ಗಡೀಪಾರು ಮಾಡಿಸಿದ್ದರಂತೆ. ಇವೆಲ್ಲಾ ಕಾರಣಗಳಿಂದಾಗಿ ಸಾಲ್ವೆ ಕುಟುಂಬದ ಹಿಡಿತದಲ್ಲಿದ್ದ ಜಮೀನಿನ ಒಡೆತನವೂ ಕ್ರಮೇಣ ಕ್ಷೀಣಿಸತೊಡಗಿತ್ತು.

ರಾಜ್ಯ ಸರಕಾರದ ನೀರಾವರಿ ಇಲಾಖೆಯಲ್ಲಿ ಗುಮಾಸ್ತರಾಗಿದ್ದವರೂ, ಆತ್ಮಾರಾಮ್ ಸಾಲ್ವೆಯವರ ಗೆಳೆಯರೂ ಆದ ಮಜಲ್ಗಾಂವ್ ನ ನಿವಾಸಿ ಪಾಂಡುರಂಗ ಜಾಧವ್ ಸಾಲ್ವೆಯವರು ತಮ್ಮ ತಾರುಣ್ಯದ ದಿನಗಳಲ್ಲಿ ಮುನ್ನಡೆಸುತ್ತಿದ್ದ ಹಲವು ಮೋರ್ಚಾಗಳಲ್ಲಿ ಅವರೊಂದಿಗೆ ಭಾಗಿಯಾದವರು. ''ಮರಾಠಾವಾಡಾ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ದಲಿತರ ವಿರುದ್ಧ ಏನೇ ದೌರ್ಜನ್ಯಗಳಾದರೂ ಆತ್ಮಾರಾಮ್ ಮೋರ್ಚಾಗಳನ್ನು ಸಂಘಟಿಸಿ ಪ್ರತಿಭಟನೆಯ ಹಾಡುಗಳನ್ನು ಹಾಡುತ್ತಿದ್ದರು. ಅವರು ನಿಜಕ್ಕೂ 'ಲೋಕ್ ಶಹೀರ್' (ಜನಸಾಮಾನ್ಯರ ಕವಿ) ಆಗಿದ್ದರು'', ಎನ್ನುತ್ತಾರೆ ಜಾಧವ್.

ಆತ್ಮಾರಾಮ್ ಸಾಲ್ವೆಯವರು 1972 ರಲ್ಲಿ ಸ್ಥಾಪನೆಯಾದ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಯಾದ 'ದಲಿತ್ ಪ್ಯಾಂಥರ್ಸ್' ನ ಸದಸ್ಯರಾಗಿದ್ದವರು. ಸಾಲ್ವೆಯವರೊಂದಿಗೆ ಕವಿಗಳಾದ ನಾಮ್ದಿಯೋ ಭಸಲ್ ಹಾಗೂ ಜೆ. ವಿ. ಪವಾರ್ ರಂಥವರೂ ಕೂಡ ಈ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಇನ್ನು `ದಲಿತ್ ಪ್ಯಾಂಥರ್ಸ್' ನ ಮೂಲ ಸದಸ್ಯರಲ್ಲೊಬ್ಬರಾದ ಮತ್ತು ಪ್ರಸ್ತುತ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಬಣವೊಂದರ ಸದಸ್ಯರಾಗಿರುವ 70 ರ ಪ್ರಾಯದ ರಾಜಾ ಧಲೆಯವರೂ ಕೂಡ ಸಾಲ್ವೆಯವರನ್ನು ಬಲ್ಲವರಾಗಿದ್ದರು. ''ಒಳ್ಳೆಯ ಕವಿಯಾಗಿದ್ದ ಅವರು ದಲಿತ್ ಪ್ಯಾಂಥರ್ಸ್ ಜೊತೆ ಹಲವು ವರ್ಷಗಳ ಕಾಲ ತೊಡಗಿಸಿಕೊಂಡಿದ್ದವರು. ಮರಾಠಾವಾಡಾದಲ್ಲಿ ನಡೆಯುತ್ತಿದ್ದ ಸಮಾಲೋಚನೆಗಳಲ್ಲಿ ಅವರು ಪಾಲ್ಗೊಳ್ಳುತ್ತಿದ್ದುದಲ್ಲದೆ ಕಾರ್ಯಕ್ರಮಗಳಲ್ಲಿ ತಮ್ಮ ಕವಿತೆಗಳನ್ನೂ ಹಾಡುತ್ತಿದ್ದರು'', ಎನ್ನುತ್ತಾರೆ ಮುಂಬೈ ನಿವಾಸಿಯಾಗಿರುವ ರಾಜಾ ಧಲೆ.

ಜನವರಿ 19, 1991 ರಂದು ತಮ್ಮ 35 ನೇ ವಯಸ್ಸಿನಲ್ಲಿ ಶಹೀರ್ ಆತ್ಮಾರಾಮ್ ಸಾಲ್ವೆಯವರು ಇಹಲೋಕವನ್ನು ತ್ಯಜಿಸಿದ್ದರು. ಆಗ ಪ್ರದೀಪ್ ಸಾಲ್ವೆಗೆ 12 ರ ಪ್ರಾಯ. ಕಳೆದೆರಡು ದಶಕಗಳಿಂದ ಪ್ರತೀ ವರ್ಷವೂ ಜನವರಿ 19 ರಂದು ಸಾಲ್ವೆ ಕುಟುಂಬವು ಅವರನ್ನು ಅರ್ಥಪೂರ್ಣವಾಗಿ ನೆನೆಸಿಕೊಳ್ಳುವುದಲ್ಲದೆ ಅವರ ಕವಿತೆಗಳನ್ನು ಜೊತೆಯಾಗಿ ಹಾಡಿಕೊಳ್ಳುತ್ತಾರೆ.


ಭಟ್ವಡ್ಗಾಂವ್ ಹಳ್ಳಿಯಲ್ಲಿರುವ ಪ್ರದೀಪ್ ಸಾಲ್ವೆಯ ನಿವಾಸದಲ್ಲಿ ಹೂಮಾಲೆಯೊಂದಿಗೆ ಅಲಂಕೃತಗೊಂಡಿರುವ ಶಹೀರ್ ಆತ್ಮಾರಾಮ್ ಸಾಲ್ವೆಯವರ ಚಿತ್ರ

ಔರಂಗಾಬಾದಿನ ಮರಾಠಾವಾಡಾ ವಿಶ್ವವಿದ್ಯಾಲಯವನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾಲಯವೆಂದು ಮರುನಾಮಕರಣ ಮಾಡಲು ಆಗ್ರಹಿಸಿ ನಡೆದ ಸುದೀರ್ಘ ಹೋರಾಟದಲ್ಲಿ ಮಡಿದವರ ಕುಟುಂಬದ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮವೊಂದನ್ನು ಜನವರಿ 2014 ರಲ್ಲಿ ಮಜಲ್ಗಾಂವ್ ತಾಲೂಕಾದ ಜನರು ಹಮ್ಮಿಕೊಂಡಿದ್ದರು. ಈ ಸಮಾರಂಭದಲ್ಲಿ ಸಾಲ್ವೆ ಕುಟುಂಬದ ಸದಸ್ಯರು ಆತ್ಮಾರಾಮ್ ಸಾಲ್ವೆಯವರ ಕವಿತೆಗಳನ್ನು ವಾಚಿಸಿದರಲ್ಲದೆ ಕಮಲ್ ತಾಯಿಯವರನ್ನು ಆಕೆಯ ಪತಿಯ ನೆನಪಿನಲ್ಲಿ ಅಂದು ಸನ್ಮಾನಿಸಲಾಯಿತು. ಆ ವರ್ಷದಿಂದ ನೆಲದ ಕವಿಯನ್ನು ನೆನಪಿಸಿಕೊಳ್ಳುವ ವರ್ಷಂಪ್ರತಿ ಆಚರಣೆಯನ್ನೂ ಕೂಡ ಅಲ್ಲಿಯ ಸ್ಥಳೀಯರು ಹಮ್ಮಿಕೊಳ್ಳಲಾರಂಭಿಸಿದ್ದರು.
ಅಂದಹಾಗೆ ಈವರೆಗೆ ಸರಕಾರವು ಶಹೀರ್ ಆತ್ಮಾರಾಮ್ ಸಾಲ್ವೆಯವರನ್ನು ಸನ್ಮಾನಿಸುವುದಾಗಲೀ ಗುರುತಿಸುವುದನ್ನಾಗಲೀ ಮಾಡಿದ್ದಿಲ್ಲ


ತಮ್ಮ ನೆಲದ ಕವಿಯಾದ ಆತ್ಮಾರಾಮ್ ಸಾಲ್ವೆಯವರ ನೆನಪಿನಲ್ಲಿ ಅವರ ಧರ್ಮಪತ್ನಿ ಕಮಲ್ ಸಾಲ್ವೆಯವರಿಗೆ ಭಟ್ವಡ್ಗಾಂವ್ ನಿವಾಸಿಗಳಿಂದ ನೀಡಲಾದ ಈ ಗೌರವಫಲಕವು ಕುಟುಂಬದ ಇತರ ಚಿತ್ರಗಳೊಂದಿಗೆ ಪ್ರದೀಪ್ ರ ಮನೆಯಲ್ಲಿ ಕಂಗೊಳಿಸುತ್ತಿದೆ.

ಪ್ರಸ್ತುತ 38 ರ ಪ್ರಾಯದ ಪ್ರದೀಪ್ ಸಾಲ್ವೆಯವರು 8 ನೇ ತರಗತಿಯವರೆಗೆ ವಿಧ್ಯಾಭ್ಯಾಸವನ್ನು ಮಾಡಿ ನಂತರ ನನ್ನ ಒಡಹುಟ್ಟಿದವರ ವಿದ್ಯಾಭ್ಯಾಸಕ್ಕಾಗಿ ಮತ್ತು ಕುಟುಂಬವನ್ನು ಪೋಷಿಸುವುದಕ್ಕಾಗಿ ದುಡಿಮೆಗಿಳಿದವರು. ಮಜಲ್ಗಾಂವ್ ಪ್ರದೇಶದಲ್ಲಿ ಕೃಷಿಕಾರ್ಮಿಕನಾಗಿ ಮತ್ತು ಇಲ್ಲಿನ ಮೊಂಧಾ ಮಾರುಕಟ್ಟೆಯಲ್ಲಿ ಸಾಮಾನುಗಳನ್ನು ತಲೆಯ ಮೇಲೆ ಹೊತ್ತು ಸಾಗಿಸುವ ಕಾರ್ಮಿಕನಾಗಿ ಇವರು ದುಡಿದಿದ್ದಾರೆ. ಐದು ವರ್ಷಗಳ ಹಿಂದೆ ಸಾಲ್ವೆ ಕುಟುಂಬವು ಭಟ್ವಡ್ಗಾಂವ್ ಪ್ರದೇಶದಲ್ಲಿ ಮೂರು ಎಕರೆ ಜಮೀನನ್ನು ಖರೀದಿಸಿತು. ಸದ್ಯ ಈ ಜಮೀನಿನಲ್ಲಿ ಬೇಳೆ (ಬಾಜ್ರಾ ಮತ್ತು ಜೊವಾರ್) ಗಳನ್ನು ತಮ್ಮ ಕುಟುಂಬಕ್ಕೆ ಆಹಾರವಾಗಿ ಬಳಸಿಕೊಳ್ಳಲು ಇವರು ಬೆಳೆಯುತ್ತಾರೆ. ಬೆಳೆದ ಹತ್ತಿ ಮತ್ತು ಸೊಯಾಬೀನ್ ಗಳನ್ನು ಮಾರಾಟಕ್ಕೆಂದು ಮೀಸಲಿಡಲಾಗುತ್ತದೆ. ಪ್ರದೀಪ್ ಸಾಲ್ವೆಯವರ ಇಬ್ಬರು ಹೆಣ್ಣುಮಕ್ಕಳು 10 ನೇ ತರಗತಿಯವರೆಗೆ ಬಂದಿದ್ದರೆ, ಇಬ್ಬರು ಗಂಡುಮಕ್ಕಳು 7 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇನ್ನು ನಾಲ್ಕು ಮಕ್ಕಳ ತಾಯಿಯಾಗಿರುವ ಜ್ಯೋತಿ ಸಾಲ್ವೆ ಅಡುಗೆಯವರಾಗಿ ಮತ್ತು ಬೀದ್ ಜಿಲ್ಲೆಯಲ್ಲಿ ಅಂಗನವಾಡಿ ಕೆಲಸಗಾರರಾಗಿ ದುಡಿಯುತ್ತಿದ್ದಾರೆ.
ತನಗೆ ನೆನಪಿರುವ ತಂದೆಯವರ ಎಲ್ಲಾ ಹಾಡುಗಳನ್ನು ಪ್ರದೀಪ್ ಸಾಲ್ವೆಯವರು ಬರೆದಿಡಲು ಆರಂಭಿಸಿದ್ದಾರಂತೆ. 'ಟಿಣ್ಗಿ' ಸಂಗ್ರಹದಿಂದ ಆರಿಸಲಾದ ಹಾಡೊಂದನ್ನು ಅವರು ನಮ್ಮೆದುರು ಹಾಡಿದರು


''ಅನ್ಯಾಯದ ಹೃದಯವನ್ನು ಸುಟ್ಟು ಹೆಸರಿಟ್ಟುಬಿಡಿ...'', ಪ್ರದೀಪ್ ಸಾಲ್ವೆ ತಮ್ಮ ತಂದೆಯವರ ಕ್ರಾಂತಿಯ ಹಾಡುಗಳಲ್ಲೊಂದನ್ನು ಹಾಡುತ್ತಿದ್ದಾರೆ

ಮರಾಠಿ ಲಿಪಿಯಲ್ಲಿರುವ ಹಾಡಿನೊಂದಿಗೆ ಇಂಗ್ಲಿಷ್ ಮತ್ತು ಕನ್ನಡಕ್ಕೆ ಅನುವಾದಿಸಿರುವ ಹಾಡು ಇಲ್ಲಿದೆ:

ठिणगी

क्रांतीच्या ठिणग्या झडूद्या, तोफ डागा रे रणी
आग बदल्याची भडकुद्या, चीड येऊ द्या मनी

बाळ हा गर्भातला, काळ पुढचा पाहुनी
गाढण्या अवलाद मनुची चालला रे धाऊनी .... तो धाऊनी
अन्यायाच्या काळजाला ही बासुद्या डागणी ..... ही डागणी

क्रांतीच्या ठिणग्या ....
आग बदल्याची.....

वाघिणीचे दूध तुम्ही, पिऊन असे का थंड रे
घोट नरडीचा तुम्ही घ्या उठा पुकारून बंड रे .... हे बंड रे
मर्द असताना तुम्ही का, थंङ बसता या क्षणी.... तुम्ही या क्षणी
आग बदल्याची.....

आज सारे एक मुखाने, क्रांतीचा गरजू गजर
साळवे त्या दुबळ्यांचा शत्रूवर ठेवीन नजर
का भीता तुम्ही तो असता, पाठीशी तुमच्या भीमधनी.... तो  भीमधनी
आग बदल्याची.....

क्रांतीच्या ठिणग्या झडूद्या, तोफ डागा रे रणी
आग बदल्याची भडकुद्या, चीड येऊ द्या मनी

Spark

Let sparks of revolution spread, bring the cannon to the battlefield
Let the fire of revenge blaze, let anger rise in the mind

The baby in the womb sees the future [of oppression]
And he runs to bury the child of Manu… he runs
Burn and brand  the heart of injustice… this brand

Let sparks of revolution spread, bring the cannon to the battlefield
Let the fire of revenge blaze,  let anger rise in the mind
After drinking the milk of a tigress, why are you so cold
Strike at the throat, rise and revolt, you men….. revolt, you men
Why do you sit unperturbed, despite being men, at this moment… at this moment

Let the fire of revenge blaze …
Let us all in one voice, call for revolution today
Salve will keep his eye on the enemy of the weak
Why should you be afraid when a Bhimdhani* supports you … this Bhimdhani

Let the fire of revenge blaze…

Let sparks of revolution spread, bring the cannon to the battlefield
Let the fire of revenge blaze, let anger rise in the mind

''ಕಿಡಿ''

ಕ್ರಾಂತಿಯ ಕಿಡಿಯು ಹಬ್ಬಲಿ, ರಣರಂಗಕ್ಕೆ ತೋಪುಗಳು ಬರಲಿ

ಸೇಡಿನ ಕಿಚ್ಚು ಹೊತ್ತಿ ಉರಿಯಲಿ, ರೋಷವು ಮನದಲ್ಲಿ ಏಳಲಿ

ಗರ್ಭದೊಳಗಿರುವ ಕೂಸು ಭವಿಷ್ಯವನ್ನು ನೋಡುತ್ತಿದೆ (ದಬ್ಬಾಳಿಕೆಯ ಭವಿಷ್ಯ)

ಮನುವಿನ ಸಂತಾನವನ್ನು ಹೂಳಲು ಅದು ಓಡುತ್ತಿದೆ... ಓಡುತ್ತಲೇ ಇದೆ

ಅನ್ಯಾಯದ ಹೃದಯವನ್ನು ಸುಟ್ಟು ಹೆಸರಿಟ್ಟುಬಿಡಿ...ಹೀಗೆಂದು

ಹಣೆಪಟ್ಟಿಯಿಟ್ಟುಬಿಡಿ

ಕ್ರಾಂತಿಯ ಕಿಡಿಯು ಹಬ್ಬಲಿ, ರಣರಂಗಕ್ಕೆ ತೋಪುಗಳು ಬರಲಿ

ಸೇಡಿನ ಕಿಚ್ಚು ಹೊತ್ತಿ ಉರಿಯಲಿ, ರೋಷವು ಮನದಲ್ಲಿ ಏಳಲಿ

ಹುಲಿಯ ಹಾಲನ್ನು ಕುಡಿದ ನಂತರವೂ ನಿನ್ನೊಳಗೆ ಕುದಿಯೇಕೆ ಕಾಣುತ್ತಿಲ್ಲ?

ದನಿಯೆತ್ತಿ, ಎದ್ದೇಳಿ, ದಂಗೆಯೆಬ್ಬಿಸಿ ಓ ಗಂಡಸರೇ... ದಂಗೆಯೇಳಿ ಓ ಗಂಡಸರೇ

ಗಂಡಸರಾಗಿಯೂ ವಿಚಲಿತರಾಗದೆ ಕುಳಿತಿರುವುದೇಕೆ ಈ ಹೊತ್ತಿನಲ್ಲಿ?

ಈ ಹೊತ್ತಿನಲ್ಲಿ...

ಸೇಡಿನ ಕಿಚ್ಚು ಹೊತ್ತಿ ಉರಿಯಲಿ

ಒಕ್ಕೊರಲಿನಿಂದ ಇಂದು ಕ್ರಾಂತಿಯ ಕರೆಯನ್ನು ನೀಡೋಣ

ದುರ್ಬಲರ ವೈರಿಯ ಮೇಲೆ ಸಾಲ್ವೆ ಕಣ್ಣಿಡಲಿದ್ದಾನೆ

ಭಯವಾದರೂ ಏಕೆ ನಿಮಗೆ ಈ ಭೀಮಧನಿ * ಯ ಬೆಂಬಲವೇ ನಿಮಗಿರುವಾಗ? ಈ ಭೀಮಧನಿಯಿರುವಾಗ...

ಸೇಡಿನ ಕಿಚ್ಚು ಹೊತ್ತಿ ಉರಿಯಲಿ

ಕ್ರಾಂತಿಯ ಕಿಡಿಯು ಹಬ್ಬಲಿ, ರಣರಂಗಕ್ಕೆ ತೋಪುಗಳು ಬರಲಿ

ಸೇಡಿನ ಕಿಚ್ಚು ಹೊತ್ತಿ ಉರಿಯಲಿ, ರೋಷವು ಮನದಲ್ಲಿ ಏಳಲಿ

* ಭೀಮಧನಿ: ಭೀಮರಾವ್ ಅಂಬೇಡ್ಕರರ ಮೌಲ್ಯಗಳನ್ನೇ

ಸಂಪತ್ತನ್ನಾಗಿಸಿಕೊಂಡವನು

Namita Waikar is a writer, translator and Managing Editor at the People's Archive of Rural India. She is the author of the novel 'The Long March', published in 2018.

Other stories by Namita Waikar
Translator : Prasad Naik

Currently working as a Senior Engineer at Gurugram (Haryana), Prasad Naik has served in Uige of Republic of Angola (Africa) for a drinking water supply project. Prasad Naik is a freelance writer and columnist. He can be contacted at [email protected]. This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

Other stories by Prasad Naik