ವಾರಕ್ಕೆ ಆರು ದಿನಗಳ ಕಾಲ ಮುಂಜಾನೆ 9 ರಿಂದ ಸಂಜೆ 4 ರವರೆಗೆ ಶಿಕ್ಷಕಿಯಾಗಿ ಬಿಡುವಿಲ್ಲದೆ ದುಡಿಯುವ ರಾಜೇಶ್ವರಿ ಸಿ. ಎನ್. ರವರಿಗೆ ಕೈತುಂಬಾ ಕೆಲಸ. 3 ರಿಂದ 6 ರ ಪ್ರಾಯದ 20 ಮಕ್ಕಳಿಗೆ ಈಕೆ ಶಿಕ್ಷಕಿ. ಈ ಮಕ್ಕಳಲ್ಲಿ ಬಹುಪಾಲು ಪುರಸಭೆಯ ಜಾಡಮಾಲಿಗಳ, ದಿನಕೂಲಿ ಕಾರ್ಮಿಕರ, ಬೀದಿಬದಿಯ ವ್ಯಾಪಾರಿಗಳ ಮತ್ತು ಕಾರ್ಖಾನೆಗಳಲ್ಲಿ ಸಹಾಯಕರಾಗಿ ದುಡಿಯುತ್ತಿರುವವರ ಮಕ್ಕಳು. ಇವರಲ್ಲಿ ಬಹಳಷ್ಟು ಕುಟುಂಬಗಳು ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದ ಇತರ ಭಾಗಗಳಿಂದ ವಲಸೆ ಬಂದವುಗಳೂ ಹೌದು.

ಮಕ್ಕಳಿಗೆ ಕಲಿಸುವುದರ ಜೊತೆಗೆ ರಾಜೇಶ್ವರಿ ಮಕ್ಕಳಿಗೂ, ತಾನು ನೆಲೆಸಿರುವ ಪ್ರದೇಶದ ಕೆಲ ಗರ್ಭಿಣಿ ಮಹಿಳೆಯರಿಗೂ, ಮೊಲೆಹಾಲೂಡಿಸುವ ತಾಯಂದಿರಿಗೂ ಕೈಯಾರೆ ಅಡುಗೆ ಮಾಡುತ್ತಾರೆ. ಅಂದರೆ ಸುಮಾರು 3-5 ಮಹಿಳೆಯರಿಗೆ. ಉಚಿತ ಊಟ ಮತ್ತು ಆರೈಕೆಯ ಆಸೆಗೆ ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ಕೆಲಸಕ್ಕೆ ಹೋಗುವ ಹೆತ್ತವರ ಹಟಮಾರಿ ಮಕ್ಕಳಿಗೂ ಆಕೆ ಕೈತುತ್ತು ತಿನ್ನಿಸುತ್ತಾರೆ, ಮಕ್ಕಳ ಮತ್ತು ತಾಯಂದಿರ ರೋಗನಿರೋಧಕ ಶಕ್ತಿಯ ಬಗ್ಗೆ ಕಾಳಜಿ ವಹಿಸುತ್ತಾರೆ. ಇನ್ನು ಇವೆಲ್ಲವನ್ನೂ ಒಂದು ಸವಿವರ ದಾಖಲೆಯಾಗಿ ಸಂಗ್ರಹಿಸಿಟ್ಟು ಸಮಯ ಸಿಕ್ಕಾಗಲೆಲ್ಲಾ ಒಬ್ಬರ ಮನೆಗಾದರೂ ಹೋಗಿ ಎಲ್ಲವೂ ಸರಿಯಿದೆಯೆಂದು ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತಾರೆ.

ಬೆಂಗಳೂರಿನ ಜನನಿಬಿಡ ಜೆ.ಸಿ. ರಸ್ತೆಯ ಆಚೆಗಿರುವ ತಾನಿರುವ ವ್ಯಾಯಾಮ ಶಾಲೆ ಕಾಲೋನಿಯ 355 ಕುಟುಂಬಗಳನ್ನು ತಲುಪಬೇಕಾದ ಸರಕಾರದ ಯೋಜನೆಗಳನ್ನು ಈಕೆ ಒಬ್ಬಳೇ ನಿಭಾಯಿಸಬಲ್ಲಳು. ಅರ್ಜಿಗಳನ್ನು ತುಂಬಿಸುವುದರಿಂದ ಹಿಡಿದು ಸರಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸುವವರೆಗೆ ಆರೋಗ್ಯ ಕಾರ್ಯಕ್ರಮಗಳು ಮತ್ತು ಸರಕಾರಿ ಯೋಜನೆಗಳನ್ನು ಹೀಗೆ ವಲಸೆ ಬಂದ ಕುಟುಂಬಗಳಿಗೆ ತಲುಪಿಸುವಲ್ಲಿ ಇವರ ಪಾತ್ರ ದೊಡ್ಡದು.

ಆದರೂ ಬಹಳಷ್ಟು ಮಂದಿ ರಾಜೇಶ್ವರಿಯವರನ್ನು ಮನೆಕೆಲಸದಾಕೆಯಂತೆ ನೋಡುತ್ತಾರಂತೆ. "ನಮ್ಮ ಕೆಲಸವೇನಿದ್ದರೂ ಅಡುಗೆ ಮತ್ತು ಸ್ವಚ್ಛ ಮಾಡುವುದಷ್ಟೇ ಎಂದು ಖಾಸಗಿ ಶಾಲೆಯ ಶಿಕ್ಷಕರು ಭಾವಿಸಿದ್ದಾರೆ. ಅವರು ಹೇಳುವ ಪ್ರಕಾರ ನನಗೆ 'ಬೋಧಿಸುವ' ಯಾವುದೇ ಅನುಭವಗಳಿಲ್ಲವಂತೆ", ಎಂದು ಸಿನಿಕರಾಗಿ ಹೇಳುತ್ತಿದ್ದಾರೆ 40 ರ ಪ್ರಾಯದ ರಾಜೇಶ್ವರಿ ಸಿ. ಎನ್.

PHOTO • Priti David
PHOTO • Vishaka George

ಹಲವು ತಿಂಗಳುಗಳಿಂದ ಬಾಕಿಯಿರುವ ಸಂಬಳದ ಸಂದಾಯಕ್ಕಾಗಿ ಬೆಂಗಳೂರಿನ ಟೌನ್ ಹಾಲ್ ಮುಂದೆ ಪ್ರತಿಭಟನೆಯಲ್ಲಿ ನಿರತರಾಗಿರುವ ಅಂಗನವಾಡಿ ಶಿಕ್ಷಕಿಯರು. ಮಕ್ಕಳಿಗೆ ಕಲಿಸುವುದನ್ನು ಹೊರತಾಗಿ ಎ.ಡಬ್ಲ್ಯೂ.ಡಬ್ಲ್ಯೂ ಗಳು ನಿರ್ವಹಿಸುತ್ತಿರುವ ಹಲವು ಜವಾಬ್ದಾರಿಗಳು ಆಯಾ ಪ್ರದೇಶದ ಕುಟುಂಬಗಳಿಗೆ ಉಪಯುಕ್ತವಾಗಿವೆ.

ಬೋಧನೆಯೇ ಇವರ ಮುಖ್ಯ ಪಾತ್ರವಾಗಿದ್ದರೂ ಸರಕಾರವೂ ಕೂಡ ರಾಜೇಶ್ವರಿಯಂಥವರನ್ನು 'ಅಂಗನವಾಡಿ ವರ್ಕರ್' (ಎ.ಡಬ್ಲ್ಯೂ.ಡಬ್ಲ್ಯೂ) ಎಂಬ ಹೆಸರಿನಿಂದ ಕರೆಯುತ್ತದೆ. ಎ.ಡಬ್ಲ್ಯೂ.ಡಬ್ಲ್ಯೂ ಗಳೊಂದಿಗೆ ತಮ್ಮ ಮೂರು ವರ್ಷಗಳನ್ನು ಕಳೆಯುವ ಮಕ್ಕಳು ಪ್ರಾಥಮಿಕ ಹಂತದ ಸಾಕ್ಷರತೆಯನ್ನು ಪಡೆಯಬೇಕಿರುವುದು ಮುಂದೆ ಪ್ರಾಥಮಿಕ ಶಾಲೆಗಳಿಗೆ ದಾಖಲಾಗಲು ಬೇಕಿರುವ ಕಡ್ಡಾಯ ಅಂಶಗಳಲ್ಲೊಂದು.

"ನನ್ನ ಮಕ್ಕಳನ್ನು ಬೇರೆ ಕಡೆ ಕಳಿಸುವಷ್ಟು ನಾನು ಸ್ಥಿತಿವಂತಳಲ್ಲ. ಮಧ್ಯಾಹ್ನದ ಊಟಕ್ಕೆ ಅವರು ತಿನ್ನಲು ಮೊಟ್ಟೆ ಮತ್ತು ಊಟವನ್ನು ಉಚಿತವಾಗಿ ನೀಡುತ್ತಾರೆ [ಅಂಗನವಾಡಿಯಲ್ಲಿ]", ಎನ್ನುತ್ತಾರೆ ವ್ಯಾಯಾಮ ಶಾಲೆ ಕಾಲೋನಿಯಲ್ಲಿ ಹೂವಿನ ಮಾಲೆಗಳನ್ನು ಮಾರುವ, 30 ರ ಪ್ರಾಯದ ಹೇಮಾವತಿ. ಈಕೆಯ ಪತಿ ಓರ್ವ ಹಣ್ಣಿನ ವ್ಯಾಪಾರಿ. "ಖಾಸಗಿ ಶಿಶುವಿಹಾರಗಳಿಗೆ ಹೋಲಿಸಿದರೆ ನಾನು ಸರಕಾರಿ ಅಂಗನವಾಡಿಗಳನ್ನು ಆರಿಸುತ್ತೇನೆ. ಇಲ್ಲಿಯ ಶಿಕ್ಷಕಿಯರು ನನ್ನ ಮಗುವನ್ನು ಹುಟ್ಟುವ ಮೊದಲಿನಿಂದಲೇ ಬಲ್ಲರು", ಎನ್ನುತ್ತಾರೆ ಇದೇ ಕಾಲೋನಿಯ ಗೃಹಿಣಿಯಾಗಿರುವ 26 ರ ಹರೆಯದ ಎಮ್. ಸುಮತಿ.

ಬೆಂಗಳೂರಿನಲ್ಲಿರುವ ಅಂಗನವಾಡಿ ಕೇಂದ್ರಗಳ ಸಂಖ್ಯೆ 3649 ಗಳಷ್ಟಾದರೆ, ಕರ್ನಾಟಕದಲ್ಲಿ ಒಟ್ಟು 65911 ಅಂಗನವಾಡಿ ಕೇಂದ್ರಗಳಿವೆ. 0-6 ರ ವಯಸ್ಸಿನ ರಾಜ್ಯದ 70 ಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು 57% (3-6 ವರ್ಷದ ಮಕ್ಕಳು) ಭಾನುವಾರವೊಂದನ್ನು ಹೊರತುಪಡಿಸಿ ನಿತ್ಯವೂ ಅಂಗನವಾಡಿಗಳಿಗೆ ಹೋಗುತ್ತಾರೆ. ಇದು ರಾಷ್ಟ್ರೀಯ ಪ್ರತಿಶತವಾದ 38.7 ಶೇಕಡಾಕ್ಕಿಂತಲೂ ಹೆಚ್ಚು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ಮಕ್ಕಳ ಸಮಗ್ರ ಅಭಿವೃದ್ಧಿ ಸೇವೆ (ಐ.ಸಿ.ಡಿ.ಎಸ್) ಕಾರ್ಯಕ್ರಮದಡಿಯಲ್ಲಿ ಭಾರತದಾದ್ಯಂತ ಅಂಗನವಾಡಿಗಳು ಕೆಲಸ ಮಾಡುತ್ತಿವೆ.

ಎ.ಡಬ್ಲ್ಯೂ.ಡಬ್ಲ್ಯೂ ಗಳೆಲ್ಲವೂ ಮಹಿಳೆಯರಾಗಿರುತ್ತಾರೆ ಮತ್ತು ಏನಿಲ್ಲವೆಂದರೂ 10 ನೇ ತರಗತಿಯವರೆಗೆ ಓದಿದವರಾಗಿರುತ್ತಾರೆ. ಮೊಟ್ಟಮೊದಲ ಬಾರಿಗೆ ಒಂದು ತಿಂಗಳ ಮಟ್ಟಿನ ಮತ್ತು ಮುಂದೆ ಪ್ರತೀ ಐದು ವರ್ಷಗಳಿಗೊಮ್ಮೆ ಒಂದು ವಾರದ ಮಟ್ಟಿನ ತರಬೇತಿಯನ್ನು ಇವರುಗಳಿಗೆ ನೀಡಲಾಗುತ್ತದೆ.

PHOTO • Vishaka George

ಅತ್ಯಲ್ಪ ಗೌರವಧನವನ್ನು ಪಡೆಯುತ್ತಿರುವ ರಾಜೇಶ್ವರಿಯವರು ಎರಡೆರಡು ಕಡೆ ಉದ್ಯೋಗ ಮಾಡುತ್ತಾ ಸಂಸಾರದ ಖರ್ಚನ್ನು ತೂಗಿಸುತ್ತಿದ್ದಾರೆ.

ಆದರೆ ಇಷ್ಟೆಲ್ಲಾ ಕೆಲಸಗಳನ್ನು ನಿಭಾಯಿಸುವ, 'ಶಿಕ್ಷಕಿ' ರಾಜೇಶ್ವರಿಯವರಿಗೆ ತಿಂಗಳಿಗೆ ಸಿಗುತ್ತಿರುವ 'ಗೌರವಧನ' ಮಾತ್ರ ಕೇವಲ ರೂ. 8150 ಗಳಷ್ಟೇ. ಮೂರು ವರ್ಷಗಳ ಹಿಂದೆ ಇದು ಕೇವಲ ರೂ. 4000 ದಷ್ಟಿತ್ತಂತೆ. ಹೀಗಾಗಿ ಆಕೆ ಅಂಗನವಾಡಿಯಿಂದ ಬಸ್ಸು ಹಿಡಿದು ಚಾಮರಾಜಪೇಟೆಯಲ್ಲಿರುವ ವೃತ್ತಿಪರ ಕೇಂದ್ರಕ್ಕೆ ತೆರಳಿ ಅಲ್ಲಿ ಶಾಲಾ ನಿರ್ವಹಣೆ ಮತ್ತು ಕಲೆಯನ್ನು ಬೋಧಿಸಿ ತಿಂಗಳಿಗೆ ರೂ. 5000 ದಷ್ಟು ಹೆಚ್ಚುವರಿಯಾಗಿ ಸಂಪಾದಿಸುತ್ತಾರೆ. ಇದರಿಂದಾಗಿ ದಿನನಿತ್ಯವೂ ಆಕೆ ಮನೆಗೆ ಹಿಂತಿರುಗುವಷ್ಟರಲ್ಲಿ ರಾತ್ರಿಯ ಹತ್ತಾಗಿರುತ್ತದೆ. "ದಿನವೇನೋ ಬಹಳ ವ್ಯಸ್ತವಾಗಿತ್ತು. ಆದರೆ ನನಗೆ ಹಣದ ಅವಶ್ಯಕತೆಯೂ ಇದೆ", ಎನ್ನುತ್ತಾರೆ ರಾಜೇಶ್ವರಿ. ಈಕೆಯ ಗಂಡ ಪ್ಯಾಕೇಜಿಂಗ್ ಘಟಕವೊಂದರಲ್ಲಿ ತಿಂಗಳಿಗೆ ರೂ. 5000 ದಷ್ಟಿನ ಸಂಬಳಕ್ಕೆ ದುಡಿಯುತ್ತಾನೆ. ಕಾಲೇಜಿಗೆ ಹೋಗುವ ಓರ್ವ ಮಗ ಮತ್ತು ಪೌಢಶಾಲೆಯಲ್ಲಿ ಕಲಿಯುತ್ತಿರುವ ಓರ್ವ ಮಗಳನ್ನು ಹೊಂದಿರುವ ಈ ಕುಟುಂಬದ ಖರ್ಚು ಪ್ರತೀ ತಿಂಗಳೂ ಇವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ.

ಈ ಕಷ್ಟಗಳು ಕಮ್ಮಿಯೆಂಬಂತೆ ಕಳೆದ ಡಿಸೆಂಬರ್ 2017 ರಿಂದ ತನಗೆ ಸಿಗಬೇಕಿದ್ದ ಅಂಗನವಾಡಿಯ ಅಲ್ಪ ಗೌರವಧನವೂ ಕೂಡ ರಾಜೇಶ್ವರಿಗೆ ಸಿಕ್ಕಿಲ್ಲವೆಂದು ಹೇಳುತ್ತಿದ್ದಾರೆ ವ್ಯಾಪಾರಿ ಒಕ್ಕೂಟ ಸಹಕಾರಿ ಕೇಂದ್ರದ (ಟಿ.ಯು.ಸಿ.ಸಿ) ಜಿ. ಎಸ್. ಶಿವಶಂಕರ್. ಉಳಿದ ಸುಮಾರು 1800 ಅಂಗನವಾಡಿ ಕಾರ್ಯಕರ್ತೆಯರದ್ದೂ ಕೂಡ ಇದೇ ಕಥೆ. ಇತ್ತ ಅಂಗನವಾಡಿ ಕಾರ್ಯಕರ್ತೆಯರ ಸಂಬಳ, ಆಹಾರ ಪೂರೈಕೆ ಮತ್ತು ಅಂಗನವಾಡಿಯ ಇತರೆ ಖರ್ಚುಗಳಿಗಾಗಿ ಬಜೆಟ್ (ಒಟ್ಟು ರೂ. 5371 ಕೋಟಿಯಷ್ಟಿದ್ದ 2018-19 ರ ಬಜೆಟ್) ನಲ್ಲಿ ನಿಧಿಯು ಬಿಡುಗಡೆಯಾಗಿಲ್ಲವೆಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯವು ಹೇಳುತ್ತಿದೆ. ಹೀಗಾಗುತ್ತಿರುವುದು ಇದೇ ಮೊದಲ ಬಾರಿಯಲ್ಲದಿದ್ದರೂ ವಿಷಯವು ಇಷ್ಟು ದೀರ್ಘಕಾಲದವರೆಗೆ ಇತ್ಯರ್ಥವಾಗದೆ ಉಳಿದಿರುವುದು ಇದೇ ಮೊದಲು.

ಸರಕಾರದಿಂದ ಬರಬೇಕಿದ್ದ ಸಂಬಳಕ್ಕಾಗಿ ತಿಂಗಳಾನುಗಟ್ಟಲೆ ಕಾದು ಬೇಸತ್ತು, ಕೊನೆಗೂ ಆಗಸ್ಟ್ 16 ರಂದು ಅಂಗನವಾಡಿ ಕಾರ್ಯಕರ್ತೆ ಸಹಾಯಕಿ ಮಹಿಳಾ ಮಂಡಳಿಯ (ಟಿ.ಯು.ಸಿ.ಸಿ ಅಧೀನದಲ್ಲಿ ಬರುವ ಅಂಗನವಾಡಿ ಕಾರ್ಮಿಕರ ಮತ್ತು ಸಹಾಯಕರ ವ್ಯಾಪಾರಿ ಒಕ್ಕೂಟ) ಸುಮಾರು 2300 ಸದಸ್ಯರು ಬೆಂಗಳೂರಿನ ಟೌನ್ ಹಾಲಿನೆದುರು ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸಿ ತಮ್ಮ ಸಂಕಷ್ಟಗಳ ಬಗ್ಗೆ ಸರಕಾರದ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿದ್ದರು. ರಾಜ್ಯದಾದ್ಯಂತ 21800 ಸದಸ್ಯರಿರುವ ಈ ಒಕ್ಕೂಟವು ರಾಜ್ಯದ ಇತರೆಡೆಗಳಲ್ಲೂ ಪ್ರತಿಭಟನೆಗಳನ್ನು ನಡೆಸಿತು. ಅಷ್ಟಕ್ಕೂ ಅವರ ಪ್ರಮುಖ ಬೇಡಿಕೆಯಿದ್ದಿದ್ದು ಹಲವು ತಿಂಗಳುಗಳಿಂದ ಸಂದಾಯವಾಗದೆ ಬಾಕಿಯುಳಿದಿದ್ದ ಸಂಬಳ ಮಾತ್ರ. ಜೊತೆಗೇ ಪಿಂಚಣಿಯನ್ನು ರೂ. 1000 ದಿಂದ ರೂ. 5000 ಕ್ಕೆ ಏರಿಸಬೇಕು, ಕೆಲಸ ಅವಧಿಯನ್ನು ಕಡಿಮೆ ಮಾಡಬೇಕು ಮತ್ತು 65 ರ ಬದಲಾಗಿ, 60 ರ ಪ್ರಾಯದಿಂದ ಪಿಂಚಣಿ ಸೌಲಭ್ಯವನ್ನು ತಾವು ಪಡೆಯುವಂತಾಗಬೇಕು ಎಂಬುದು ಇವರ ಇತರ ಹಕ್ಕೊತ್ತಾಯಗಳು. ಮುಂದಾಗುವ ಪ್ರತಿಕೂಲ ಪರಿಣಾಮಗಳ ಭಯದಿಂದಾಗಿ ಬಹಳಷ್ಟು ಮಂದಿ ಕಾರ್ಯಕರ್ತೆಯರು ಈ ವರದಿಗಾಗಿ ತಮ್ಮ ಹೆಸರನ್ನೂ ಸೇರಿದಂತೆ ತಮ್ಮ ಮಾತುಗಳು ಮತ್ತು ಛಾಯಾಚಿತ್ರಗಳನ್ನು ದಾಖಲಿಸಲೊಪ್ಪಲಿಲ್ಲ.

ಗಟ್ಟಿದನಿಯಲ್ಲಿ ಪ್ರತಿಭಟನೆಯನ್ನು ಮುನ್ನಡೆಸುತ್ತಾ ಇವರೆಲ್ಲರ ಮುಂದಾಳತ್ವವನ್ನು ವಹಿಸಿದ್ದಾರೆ 56 ರ ಪ್ರಾಯದ ಅಂಗನವಾಡಿ ಕಾರ್ಯಕರ್ತೆ ಲಿಂಗರಾಜಮ್ಮ. 30 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿರುವ ಈಕೆ ಸದ್ಯ ವೇತನ ಪರಿಷ್ಕರಣೆಯ ನಿರೀಕ್ಷೆಯಲ್ಲಿದ್ದಾರೆ. "ನಮಗೆ ಗೌರವಧನವೆಂದು ನೀಡಲಾಗುವ ಮೊತ್ತವನ್ನು ಸಂಬಳವೆಂದು ಮಾನ್ಯ ಮಾಡಬೇಕು [ಇದರಿಂದಾಗಿ ಪ್ರೊವಿಡೆಂಟ್ ಫಂಡ್ ನಂಥಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವಂತೆ]. ಮತ್ತು ನಾವು ಬೋಧಿಸುವುದರ ಹೊರತಾಗಿಯೂ ಬಹಳಷ್ಟು ಕಾರ್ಯಗಳನ್ನು ನಿರ್ವಹಿಸುವ ಕಾರಣಕ್ಕಾಗಿ ಈ ಮೊತ್ತವನ್ನು ರೂ. 20000 ರವರೆಗೂ ಏರಿಸಬೇಕು", ಎನ್ನುತ್ತಿದ್ದಾರೆ ಲಿಂಗರಾಜಮ್ಮ. ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತಿಯಾದ ತನ್ನ ಪತಿಯ ಪಿಂಚಣಿಯ ಸಹಾಯದಿಂದ ಈಕೆ ಈ ಸಂಬಳವಿಲ್ಲದ ತಿಂಗಳುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇವರ ಮಕ್ಕಳೂ ಕೂಡ ಒಳ್ಳೆಯ ವೃತ್ತಿಗಳಲ್ಲಿ ನೆಲೆಯಾದವರು. ಈಕೆಯ ಮಗಳು ಪತ್ರಕರ್ತೆಯಾಗಿದ್ದರೆ, ಮಗ ಓಂಕಾಲಜಿ ಸರ್ಜನ್ ಆಗುವತ್ತ ಅಧ್ಯಯನ ನಿರತನಾಗಿದ್ದಾನೆ.

PHOTO • Priti David
PHOTO • Vishaka George

ಎ.ಡಬ್ಲ್ಯೂ.ಡಬ್ಲ್ಯೂ ಆಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಲಿಂಗರಾಜಮ್ಮ ಈಗ ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಯ ಮುಂದಾಳತ್ವವನ್ನು ವಹಿಸಿದ್ದಾರೆ.

ಆದರೆ ಲಿಂಗರಾಜಮ್ಮನವರಿಗಿರುವಂತೆ ಎಲ್ಲಾ ಕಾರ್ಯಕರ್ತೆಯರಿಗೂ ಆದಾಯಕ್ಕೆಂದು ಬದಲಿ ಮೂಲಗಳಿಲ್ಲದಿರುವ ಕಾರಣ ಅವರು ಹೆಚ್ಚುವರಿ ಕೆಲಸಗಳನ್ನು ಮಾಡದೆ ಬೇರೆ ವಿಧಿಯಿಲ್ಲ. ಮನೆಕೆಲಸದ ಆಳಾಗಿ, ಮನೆಯಲ್ಲೇ ಸಿದ್ಧಪಡಿಸಿದ ಮಸಾಲೆ ಪದಾರ್ಥಗಳನ್ನು ಮಾರುವ, ದರ್ಜಿಯ ಅಂಗಡಿಗಳಲ್ಲಿ ಕೆಲಸ ಮಾಡುವ, ಮನೆಪಾಠ ಮಾಡುವ... ಹೀಗೆ ತರಹೇವಾರಿ ಮಾರ್ಗಗಳಲ್ಲಿ ಕಾರ್ಯಕರ್ತೆಯರು ತಮ್ಮ ಜೀವನೋಪಾಯವನ್ನು ಕಂಡುಕೊಳ್ಳುತ್ತಿದ್ದಾರೆ.

ರಾಧಿಕಾ ಕೂಡ ಇಂಥವರಲ್ಲೊಬ್ಬರು (ವಿನಂತಿಯಂತೆ ಹೆಸರನ್ನು ಬದಲಿಸಲಾಗಿದೆ). 12 x 10 ಚದರಡಿಯ ಪುಟ್ಟ ಅಂಗನವಾಡಿಯಲ್ಲಿ 15 ಪುಟಾಣಿಗಳು, ಜೋರಾಗಿ ಅಳುತ್ತಿರುವ ತನ್ನ ಪುಟ್ಟ ಮಗುವನ್ನು ಸಂಭಾಳಿಸುತ್ತಿರುವ ಓರ್ವ ಗರ್ಭಿಣಿ ಹೆಣ್ಣುಮಗಳು, ಸಾಂಬಾರು ಸಿದ್ಧಪಡಿಸುತ್ತಿರುವ ಅಡುಗೆ ಭಟ್ಟ, ಮಧ್ಯಾಹ್ನದ ಊಟಕ್ಕಾಗಿ ಇಟ್ಟ ಅಕ್ಕಿ ಮತ್ತು ಮೇಜುಗಳ ಮೇಲೆ ಪೇರಿಸಿಟ್ಟ ಅಕ್ಕಿ-ಬೇಳೆಗಳ ಚೀಲಗಳು... ಹೀಗೆ ಇವೆಲ್ಲದರ ಮಧ್ಯೆ ಈಕೆಯೂ ಇದ್ದಾಳೆ. ಪಕ್ಕಕ್ಕಿಟ್ಟಿದ್ದ ಆಟದ ಕುದುರೆ, ಪ್ಲಾಸ್ಟಿಕ್ಕಿನ ಆಟದ ಬೊಂಬೆಗಳು, ವರ್ಣಮಾಲೆ ಮತ್ತು ಸಂಖ್ಯೆಗಳ ಪೋಸ್ಟರುಗಳೂ ಇವೆ. ಇವೆಲ್ಲದರ ನಡುವೆಯೂ ರಾಧಿಕಾಳ ಪುಟ್ಟ ಮೇಜಿನಲ್ಲಿ ವಿವಿಧ ದಾಖಲಾತಿಗಳನ್ನು ಜತನದಿಂದ ಕಾಯ್ದುಕೊಳ್ಳಬೇಕಾಗಿರುವ ಹಲವು ರೆಜಿಸ್ಟರ್ ಗಳನ್ನು ಮಟ್ಟಸವಾಗಿ ಇಡಲಾಗಿದೆ.

ಮನುಷ್ಯನ ದೇಹದ ಭಾಗಗಳನ್ನು ವಿವರಿಸುವ ಪದ್ಯವೊಂದನ್ನು ಮಕ್ಕಳಿಗೆ ಹೇಳುತ್ತಿರುವ ರಾಧಿಕಾಳನ್ನು ನಾವು ಬಾಗಿಲ ಬಳಿ ನಿಂತು ನೋಡುತ್ತಿದ್ದೇವೆ. ಕೈಕಾಲುಗಳನ್ನು ಆಡಿಸುತ್ತಾ ಅದ್ಭುತವಾಗಿ ಆಕೆ ಪದ್ಯವನ್ನು ಹಾಡುತ್ತಿದ್ದರೆ ಮಕ್ಕಳು ಆಕೆಯ ಹಾವಭಾವಗಳನ್ನು ಖುಷಿಯಾಗಿ ಅನುಕರಿಸುತ್ತಿದ್ದಾರೆ. ವರ್ಷದ ಹಿಂದೆ ರಾಧಿಕಾಳ ಗಂಡ ದೀರ್ಘಕಾಲದ ಅನಾರೋಗ್ಯದ ನಂತರ ಕಿಡ್ನಿಯ ಕ್ಯಾನ್ಸರಿಗೆ ಬಲಿಯಾಗಿದ್ದ. ಆತನ ಚಿಕಿತ್ಸೆಗಾಗಿ ಸ್ನೇಹಿತರಿಂದ ಮತ್ತು ಕುಟುಂಬಸ್ಥರಿಂದ ಪಡೆದುಕೊಂಡ ರೂ. 2 ಲಕ್ಷದಷ್ಟಿನ ಸಾಲವನ್ನು ತೀರಿಸಲು ಸದ್ಯ ರಾಧಿಕಾ ಒದ್ದಾಡುತ್ತಿದ್ದಾರೆ. ನಿಯಮಿತವಾಗಿ ಬರದ ಸಂಬಳವು ಆಕೆಯ ಸಂಕಷ್ಟವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. "ಒಂದು ದಾರಿಗೆ ನಾನು ದಿನನಿತ್ಯವೂ 45 ನಿಮಿಷಗಳವರೆಗೆ ನಡೆಯುತ್ತೇನೆ [ವಾರಕ್ಕೆ ಆರು ದಿನಗಳು]. ಬಸ್ ದರವನ್ನು ನೀಡಲೂ ನನ್ನಲ್ಲಿ ಹಣವಿಲ್ಲ", ಎನ್ನುತ್ತಿದ್ದಾರೆ ರಾಧಿಕಾ. ತನ್ನ ಏರಿಯಾದಲ್ಲಿ 30 ಮಕ್ಕಳಿಗೆ ಎರಡು ತಾಸಿನ ಮನೆಪಾಠವನ್ನು ಹೇಳುವ ಮೂಲಕ ಆಕೆಗೆ ತಿಂಗಳಿಗೆ ರೂ. 3000 ರ ಸಂಪಾದನೆಯಾಗುತ್ತದೆ. ಈ ಸಂಪಾದನೆಯಲ್ಲಿ ಸಿಂಹಪಾಲು ಸಾಲವನ್ನು ತೀರಿಸಲೆಂದೇ ವ್ಯಯವಾಗುತ್ತಿದೆ.

PHOTO • Priti David
PHOTO • Priti David

ಹಸುಳೆಗಳು, ಗರ್ಭಿಣಿ ಹೆಂಗಸರು, ಅಡುಗೆಯವರು, ಆಟಿಕೆಗಳು, ಧವಸಧಾನ್ಯಗಳ ಚೀಲಗಳು... ಹೀಗೆ ಎಲ್ಲವನ್ನೂ ತನ್ನಲ್ಲಿ ಹುದುಗಿಸಿಕೊಂಡಿರುವ ನಗರದ ಬಡ ಕಾಲೋನಿಯಲ್ಲಿರುವ ಒಂದು ಅಂಗನವಾಡಿ.

ಈ ನಡುವೆ ದೇಶದ ಹಲವು ಯೋಜನೆಗಳು ಪ್ರಾಥಮಿಕ ಶಿಕ್ಷಣದ ಬಗ್ಗೆ ದೂರದೃಷ್ಟಿಯ ಮಾತಾಡುತ್ತಿವೆ. 1974 ರ ಮಕ್ಕಳ ನೀತಿಯು ಬಾಲ್ಯದ ಮೊದಲ ಹಂತದಲ್ಲಿ (0-6 ವರ್ಷಗಳು) ಆರೋಗ್ಯ ಮತ್ತು ಶಿಕ್ಷಣ ವಲಯದಲ್ಲಿ ನೀಡಬೇಕಾಗಿರುವ ಸಮಗ್ರ ಸೌಲಭ್ಯಗಳ ಬಗ್ಗೆ ಪ್ರತಿಪಾದಿಸಿತ್ತು. ಇನ್ನು ಪ್ರಾಥಮಿಕ ಶಿಕ್ಷಣವು ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದಡಿಯಲ್ಲಿ ಬರುತ್ತಿದ್ದರೆ, ಅಂಗನವಾಡಿಯನ್ನು 1975 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದಡಿಯಲ್ಲಿ ಸೃಷ್ಟಿಸಲಾಗಿತ್ತು. ಇತ್ತೀಚೆಗೆ 2013 ರಲ್ಲಿ ಬಂದಿದ್ದ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ ನೀತಿಯನ್ನೂ ಸೇರಿದಂತೆ ಪೌಷ್ಟಿಕಾಂಶ, ಶಿಕ್ಷಣ ಇತ್ಯಾದಿಗಳ ಬಗ್ಗೆ ಈವರೆಗೆ ಬಂದಿರುವ ನೀತಿಗಳು "ಅಸಮಾನತೆಯನ್ನು ತೊಡೆದು ಹಾಕಲು ಮತ್ತು ದೀರ್ಘಕಾಲದ ಸಾಮಾಜಿಕ ಮತ್ತು ಆರ್ಥಿಕ ಲಾಭಗಳನ್ನು ತರುವ ನಿಟ್ಟಿನಲ್ಲಿ ರಕ್ಷಣಾತ್ಮಕ ಮತ್ತು ಸಮರ್ಥ ಪರಿಸರದಲ್ಲಿ ಆರೈಕೆ, ಆರೋಗ್ಯ, ಪೌಷ್ಟಿಕಾಂಶ, ಆಟ ಮತ್ತು ಮೊದಲ ಹಂತದ ಕಲಿಕೆ"ಗಳ ಭರವಸೆ ನೀಡಿದ್ದವು.

ಆದರೆ ಇಂದಿಗೂ ಅನೇಕ ಅಂಗನವಾಡಿಗಳು ಪ್ರಾಥಮಿಕ ಸೌಲಭ್ಯಗಳಿಂದ ವಂಚಿತವಾಗಿವೆ. ಮಕ್ಕಳ ಬಗ್ಗೆ ಇಂಡಿಯಾ ರಾಪಿಡ್ ಸರ್ವೇ 2013-14 ರಲ್ಲಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ) ನಡೆಸಿದ ಗಣತಿಯ ಪ್ರಕಾರ ಕೇವಲ 52% ಅಂಗನವಾಡಿಗಳಲ್ಲಿ ಪ್ರತ್ಯೇಕವಾದ ಅಡುಗೆಮನೆಯಿದ್ದರೆ, ಕೇವಲ 43% ಅಂಗನವಾಡಿಗಳಲ್ಲಿ ಶೌಚಾಲಯಗಳಿರುವುದರ ಸತ್ಯವು ಕಂಡುಬಂದಿತ್ತು. "ಶೌಚಾಲಯವನ್ನು ಬಳಸಲು ಪುಟ್ಟ ಮಕ್ಕಳಿಗೆ ಮಧ್ಯಾಹ್ನದ ಊಟದ ನಂತರ ಮನೆಗೆ ಹೋಗುವವರೆಗೂ ಹಿಡಿದಿಡುವುದು ಬಹಳ ಕಷ್ಟದ ಕೆಲಸ. ಬಹಳಷ್ಟು ಕುಟುಂಬಗಳಲ್ಲಿ ತಂದೆತಾಯಿಗಳಿಬ್ಬರೂ ಕೆಲಸ ಮಾಡಲು ಇನ್ನೆಲ್ಲೋ ತೆರಳಿರುತ್ತಾರೆ. ದೊಡ್ಡವರಾಗಿ ನಾವೇ ಬಹಳ ಕಷ್ಟದಿಂದ ನಿಭಾಯಿಸುತ್ತಿದ್ದೇವೆ", ಎಂದು ಹೆಸರು ಹೇಳಲಿಚ್ಛಿಸದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೇಳುತ್ತಾರೆ.

'ಬಜೆಟ್ ಇಲ್ಲ'ದಿರುವ ಬಗೆಗಿನ ಅರ್ಥವೆಂದರೆ ಅಂಗನವಾಡಿಯೊಂದನ್ನು ನಡೆಸಲು ಬೇಕಿರುವ ಸಾಮಾನುಗಳ ಖರ್ಚಿಗೂ ಕಾಸಿಲ್ಲದಿರುವುದು. ಇಂಥಾ ಸಂದರ್ಭಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗಳಿಗೆ ಕಳಿಸಲು ಇರುವ ಬಹುಮುಖ್ಯ ಕಾರಣಗಳಲ್ಲೊಂದಾದ ಆಹಾರದ ವ್ಯವಸ್ಥೆಯನ್ನೂ ಕೂಡ ಈ ಶಿಕ್ಷಕಿಯರೇ ನೋಡಿಕೊಳ್ಳಬೇಕಾಗುತ್ತದೆ. ಮೊಟ್ಟೆ, ತರಕಾರಿ, ಅಕ್ಕಿಗಳನ್ನು ಅಂಗನವಾಡಿಗಾಗಿ ಸಾಲ ಮಾಡಿಕೊಂಡು ಖರೀದಿಸುವ ಬಗ್ಗೆಯೂ ಕೆಲ ಅಂಗನವಾಡಿ ಕಾರ್ಯಕರ್ತೆಯರು ನಮಗೆ ಹೇಳುತ್ತಾರೆ.

PHOTO • Vishaka George
PHOTO • Vishaka George

ಮಕ್ಕಳ ಊಟದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ತರಕಾರಿಗಳನ್ನು ಸ್ವತಃ ತಂದುಕೊಡಲು ಕೆಲವೊಮ್ಮೆ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಹೆತ್ತವರಲ್ಲಿ ಕೇಳಿಕೊಳ್ಳುವುದುಂಟು.

ಪರಿಸ್ಥಿತಿಯು ಹೀಗಿರುವಾಗ ಆರ್ಥಿಕವಾಗಿ ಸದೃಢರಾಗಿಲ್ಲದ ಅಂಗನವಾಡಿ ಕಾರ್ಯಕರ್ತೆಯರು ಎಲ್ಲಾ ಮಕ್ಕಳಿಗೂ ಆಹಾರವನ್ನು ನೀಡಲು ಒದ್ದಾಡುತ್ತಿದ್ದಾರೆ. "ಕೆಲವೊಮ್ಮೆ ಬದನೆಯೋ, ಮೂಲಂಗಿಯೋ, ಆಲೂಗಡ್ಡೆಯನ್ನೋ... ಹೀಗೆ ಮಕ್ಕಳ ಮಧ್ಯಾಹ್ನದ ಊಟಕ್ಕಾಗಿ ಸಾಂಬಾರು ಮಾಡಲು ಏನಾದರೊಂದು ತರಕಾರಿಯನ್ನು ಕಳಿಸಿಕೊಡುವಂತೆ ನಾನು ಪೋಷಕರಲ್ಲಿ ವಿನಂತಿಸಿಕೊಳ್ಳುತ್ತೇನೆ", ಎನ್ನುತ್ತಾರೆ ರಾಜೇಶ್ವರಿ.

ಭಾರತದ ಬಹಳಷ್ಟು ಬಡ ಕುಟುಂಬಗಳು ಇಂದಿಗೂ ಅಂಗನವಾಡಿಗಳ ಮೇಲೆ ಅವಲಂಬಿತವಾಗಿವೆ. 70 ಪ್ರತಿಶತದಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳು ತಮ್ಮ ಮಕ್ಕಳನ್ನು ಅಂಗನವಾಡಿಗಳಿಗೆ ಕಳಿಸುತ್ತವೆ.

(2011 ರ ಜನಗಣತಿಯ ಪ್ರಕಾರ) ಭಾರತದ 158.7 ಮಿಲಿಯನ್ ಮಕ್ಕಳು ಆರು ವರ್ಷದೊಳಗಿನವರಾಗಿದ್ದಾರೆ ಮತ್ತು ಹಲವಾರು ಯೋಜನೆಗಳು ಶಾಲಾಪೂರ್ವ ಶಿಕ್ಷಣ, ವಾರಕ್ಕೆರಡು ಬಾರಿಯಾದರೂ ಮೊಟ್ಟೆಯನ್ನು ಹೊಂದಿದ ಊಟ ಮತ್ತು ಪೂರಕ ಸೌಲಭ್ಯಗಳ ಭರವಸೆಯನ್ನು ನೀಡುತ್ತಿವೆ. ತಾಯಂದಿರಿಗೆ ನೀಡಬೇಕಾಗಿರುವ ಹೆರಿಗೆಯ ಪೂರ್ವದ ಮತ್ತು ನಂತರದ ಚಿಕಿತ್ಸೆಗಳು, ಹಸುಳೆಗಳಿಗೆ ಲಸಿಕೆಗಳು ಮತ್ತು ಇತರೆ ಸೌಲಭ್ಯಗಳನ್ನೂ ಕೂಡ ಇವುಗಳು ಒಳಗೊಂಡಿವೆ.

ಆದರೆ ಇವೆಲ್ಲಾ ಸಮಸ್ಯೆಗಳೊಂದಿಗೆ ಗುದ್ದಾಡುತ್ತಾ ಎಲ್ಲವನ್ನೂ ನಿಭಾಯಿಸುತ್ತಿರುವವರು ಮಾತ್ರ ಅಂಗನವಾಡಿ ಕಾರ್ಯಕರ್ತೆಯರು. ಮಕ್ಕಳ ನಿಷ್ಕಲ್ಮಶ ನಗು ಮತ್ತು ಸಮುದಾಯದಲ್ಲಿ ಸಿಗುವ ಗೌರವಗಳಷ್ಟೇ ನಮ್ಮನ್ನು ಈ ಕ್ಷೇತ್ರದಲ್ಲಿ ಉಳಿಸಿಕೊಂಡು ಬರುತ್ತಿರುವ ಶಕ್ತಿಗಳು ಎನ್ನುತ್ತಾರೆ ಇವರು. "ನಾನು ಈ ಕಡೆ ಬಂದಾಗಲೆಲ್ಲಾ ಈ ಸಂಗತಿಯು ಹೇಗೋ ಹರಡಿ, ಮಕ್ಕಳೆಲ್ಲಾ ಓಡೋಡಿ ಬಂದು 'ನಮಸ್ತೇ ಮಿಸ್' ಎನ್ನುತ್ತಾ ಸ್ವಾಗತವನ್ನು ಕೋರುತ್ತಾರೆ. ಮುಂದೆ ಇದೇ ಮಕ್ಕಳು ಅಂಗನವಾಡಿಯನ್ನು ತೊರೆದು ಪ್ರಾಥಮಿಕ ಶಾಲೆಗೆ ಹೋದ ನಂತರ ನನ್ನತ್ತ ಬೊಟ್ಟು ಮಾಡಿ 'ಅವರು ನನ್ನ ಮಿಸ್' ಎನ್ನುತ್ತಾರೆ", ಹೀಗೆ ತಮ್ಮ ವೃತ್ತಿಯ ಬಗ್ಗೆ ಖುಷಿಯಿಂದ ಹೇಳುತ್ತಿದ್ದಾರೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು.

ಅನುವಾದ: ಪ್ರಸಾದ್ ನಾಯ್ಕ್


ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Vishaka George

ರ್ಯೂಟರ್ಸ್ ನಲ್ಲಿ ಬ್ಯುಸಿನೆಸ್ ಕರೆಸ್ಪಾಂಡೆಂಟ್ ಆಗಿ ಸೇವೆ ಸಲ್ಲಿಸಿರುವ ವಿಶಾಕಾ ಜಾರ್ಜ್ ಬೆಂಗಳೂರು ಮೂಲದ ಪತ್ರಕರ್ತೆ. ಏಷ್ಯನ್ ಸ್ಕೂಲ್ ಆಫ್ ಜರ್ನಲಿಸಂನಿಂದ ಪದವಿಯನ್ನು ಪಡೆದಿರುವ ವಿಶಾಕಾರವರು ಮಹಿಳೆಯರ ಮತ್ತು ಮಕ್ಕಳ ವಿಷಯಕ್ಕೆ ಹೆಚ್ಚಿನ ಒತ್ತನ್ನು ಕೊಟ್ಟು ಗ್ರಾಮೀಣ ಭಾರತದ ವರದಿಗಾರಿಕೆಯನ್ನು ಮಾಡುವುದರಲ್ಲಿ ಆಸಕ್ತಿಯುಳ್ಳವರಾಗಿದ್ದಾರೆ.

Other stories by Vishaka George
Priti David

ಪರಿಯ ವರದಿಗಾರ್ತಿ ಹಾಗೂ ನಮ್ಮ ಶೈಕ್ಷಣಿಕ ವಿಭಾಗದ ಸಂಪಾದಕಿಯಾದ ಪ್ರೀತಿ ಡೇವಿಡ್‍, ಶಾಲೆ ಹಾಗೂ ಕಾಲೇಜುಗಳಲ್ಲಿನ ತರಗತಿ ಹಾಗೂ ಪಠ್ಯಕ್ರಮಗಳಲ್ಲಿ ಗ್ರಾಮೀಣ ವಿಷಯಗಳ ಬಗ್ಗೆ ಅರಿವನ್ನು ಮೂಡಿಸುವ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

Other stories by Priti David