ಉತ್ತರ ಮುಂಬೈಯ ದ್ವೀಪವಾದ ಮಢ್ ನಲ್ಲಿರುವ ಒಂದು ಗಾಂವ್ ಥನ್ (ಬಸ್ತಿ) ಈ ಡೋಂಗರ್ ಪಾಡಾ. ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕೋಲಿ ಸಮುದಾಯದ 40-50 ಕುಟುಂಬಗಳು ಇಲ್ಲಿವೆ. ಇವರೆಲ್ಲರೂ ಸಾಮೂಹಿಕವಾಗಿ ಒಂದು ಖಾಲಾ (ಮೀನುಗಳನ್ನು ಒಣಗಿಸಲೆಂದೇ ಮೀಸಲಾದ ಸಮತಟ್ಟಾದ ಜಾಗ) ವನ್ನು ನಿರ್ವಹಿಸುತ್ತಾರೆ. ಮಢ್ ನಲ್ಲಿ ಇಂತಹ ಹಲವಾರು ಮೈದಾನಗಳಿವೆ.

ಪ್ರತೀ ಕೋಲಿ ಕುಟುಂಬವೂ ಕೂಡ 5-10 ಕಾರ್ಮಿಕರನ್ನು ಕೆಲಸಕ್ಕಿಟ್ಟುಕೊಂಡಿದೆ. ಅವರಲ್ಲಿ ಬಹುತೇಕ ಕಾರ್ಮಿಕರು ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಇತರ ಕೆಲವು ರಾಜ್ಯಗಳಿಂದ ಬಂದವರು. ಪ್ರತೀವರ್ಷವೂ ಸಪ್ಟೆಂಬರ್ ನಿಂದ ಜೂನ್ ತಿಂಗಳ ಮಧ್ಯೆ ಹಲವಾರು ವಲಸಿಗರು ಮುಂಬೈಗೆ ಬರುತ್ತಾರೆ. ಕೋಲಿ ಕುಟುಂಬಗಳೊಂದಿಗೆ ಗುತ್ತಿಗೆಯಲ್ಲಿ ಕೆಲಸ ಮಾಡುವ ಈ ಕಾರ್ಮಿಕರು ಎಂಟು ತಿಂಗಳ ಅವಧಿಯಲ್ಲಿ ಸುಮಾರು 65-75,000 ರೂಪಾಯಿಗಳಷ್ಟನ್ನು ಸಂಪಾದಿಸುತ್ತಾರೆ. 

ಸಾಮಾನ್ಯವಾಗಿ ಹೀಗೆ ವಲಸೆ ಬಂದ ಪುರುಷರು ಕೋಲಿ ಕುಟುಂಬದಿಂದ ನೀಡಲಾಗುವ ಒಂದೇ ಕೋಣೆಯಲ್ಲಿ 4-5 ಜನ ಜೊತೆಯಾಗಿ ವಾಸಿಸುತ್ತಾರೆ. ಇನ್ನು ಮಹಿಳಾ ಕಾರ್ಮಿಕರ ಬಗ್ಗೆ ಹೇಳುವುದಾದರೆ ಬಹಳಷ್ಟು ಮಂದಿ ಮಹಿಳೆಯರು ಆಂಧ್ರಪ್ರದೇಶ ಮೂಲದವರಾಗಿದ್ದು ತಮ್ಮ ಮಕ್ಕಳ ಸಮೇತವಾಗಿ ಇಡೀ ಕುಟುಂಬದೊಂದಿಗೆ ಬಂದಿರುತ್ತಾರೆ. ಮಾಲೀಕರಿಂದ ತಮ್ಮದೇ ಜಮೀನಿನಲ್ಲಿ ಇವರಿಗೆ ಉಳಿದುಕೊಳ್ಳಲು ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಲಾಗಿದ್ದು ಸುಮಾರು 700 ರೂಪಾಯಿಗಳ ಮಾಸಿಕ ಬಾಡಿಗೆಯನ್ನು ಇವರಿಂದ ಪಡೆದುಕೊಳ್ಳಲಾಗುತ್ತದೆ
PHOTO • Shreya Katyayini

ರಂಗಮ್ಮ (ಬಲಕ್ಕೆ; ತನ್ನ ಮೊದಲ ನಾಮಧೇಯದಿಂದಷ್ಟೇ ಕರೆಸಿಕೊಳ್ಳಲು ಈಕೆ ಇಷ್ಟಪಡುತ್ತಾಳೆ) ಆಂಧ್ರಪ್ರದೇಶದ ಕುರ್ನೂಲ್ ಜಿಲ್ಲೆಯ ಮಂತ್ರಿಕಿ ಹಳ್ಳಿಯ ಮೂಲದವಳು. ತೆಲುಗನ್ನು ಹೊರತುಪಡಿಸಿ ಈಕೆ ಹಿಂದಿ ಮತ್ತು ಮರಾಠಿಯನ್ನು ನಿರರ್ಗಳವಾಗಿ ಮಾತಾಡಬಲ್ಲಳು. ಕಳೆದ 20 ವರ್ಷಗಳಿಂದ ತನ್ನ ಗಂಡ ಮತ್ತು ಕುಟುಂಬದ ಇತರ ಸದಸ್ಯರೊಂದಿಗೆ ಈಕೆ ಮಢ್ ಗೆ ಬರುತ್ತಿದ್ದಾಳೆ. ಶಿಕ್ಷಕ ವೃತ್ತಿಯಲ್ಲಿರುವ ಆಕೆಯ ಮಗ ಮಾತ್ರ ಹಳ್ಳಿಯಲ್ಲಿ ಉಳಿದುಕೊಂಡಿದ್ದಾನೆ. ''ಮಳೆಯೇ ಇಲ್ಲವಾದ್ದರಿಂದ ಕೃಷಿ ಮಾಡುವುದು ಅಸಾಧ್ಯವೆಂಬಂತಾಗಿದೆ. ಹೀಗಾಗಿಯೇ ನಾವು ಕೆಲಸಕ್ಕಾಗಿ ಇಲ್ಲಿ ಬರುತ್ತೇವೆ'', ಎಂದು ಹಿಂದಿಯಲ್ಲಿ ಹೇಳುತ್ತಿದ್ದಾಳೆ ರಂಗಮ್ಮ

PHOTO • Shreya Katyayini

ಸುರೇಶ್ ರಾಜಕ್ ಉತ್ತರಪ್ರದೇಶದ ಜೌನ್ ಪುರ್ ಜಿಲ್ಲೆಯ ಧರಂಪುರ್ ಹಳ್ಳಿಯ ನಿವಾಸಿ. ಥಾಣೆ ಜಿಲ್ಲೆಯಲ್ಲಿರುವ ದೊಂಬಿವಿಲಿಯ ಪೈಂಟ್ ಫ್ಯಾಕ್ಟರಿಯೊಂದರಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿದ್ದ ಈತ ನಂತರ, ಅಂದರೆ ಕೆಲವೇ ತಿಂಗಳುಗಳ ಹಿಂದೆ ಮಢ್ ಗೆ ಬಂದಿದ್ದ. ''ನಮ್ಮ ಹಳ್ಳಿಯ ಹಲವಾರು ಜನರು ಹಲವು ವರ್ಷಗಳಿಂದ ಇಲ್ಲಿಗೆ ಬರುವವರು. ಕೆಲಸ ಮತ್ತು ಸಂಬಳ ಎರಡೂ ಕೂಡ ಇಲ್ಲಿ ವಾಸಿ'', ಎನ್ನುತ್ತಾನೆ ಸುರೇಶ್.

PHOTO • Shreya Katyayini

ಗ್ಯಾನ್ ಚಂದ್ ಮೌರ್ಯ (ಎಡ) ಕೂಡ ಧರಂಪುರ್ ಮೂಲದವನು. 2016 ರಲ್ಲಿ ಡೋಂಗರ್ ಪಾಡಾಕ್ಕೆ ಬರುವ ಮುನ್ನ ಈತ ಸೆಂಟ್ರಲ್ ಮುಂಬೈಯ ಸಾತ್ ರಾಸ್ತಾದಲ್ಲಿ ಮರದ ವರ್ಕ್ ಶಾಪ್ ಒಂದರಲ್ಲಿ ದುಡಿಯುತ್ತಿದ್ದನಂತೆ. ಹಳ್ಳಿಯ ಇತರ ಕೆಲವರೂ ಕೂಡ ಮಢ್ ಗೆ ಬಂದು ಸೇರಿಕೊಂಡಿದ್ದಾರೆ - ಸುಬೇದಾರ್ ಗೌತಮ್ (ಮಧ್ಯ) ಕಳೆದ ಐದು ವರ್ಷಗಳಿಂದ ಇಲ್ಲಿ ಬರುತ್ತಿದ್ದಾನೆ. 20 ರ ಹರೆಯದ ಧೀರಜ್ ವಿಶ್ವಕರ್ಮ (ಬಲ) ಸದ್ಯ ತನ್ನ ಓದನ್ನು ಮುಂದುವರಿಸುತ್ತಿರುವುದಲ್ಲದೆ ಪರೀಕ್ಷೆಗಳನ್ನು ಬರೆಯಲು ಕಾಲಕಾಲಕ್ಕೆ ಜೌನ್ ಪುರಕ್ಕೆ ಮರಳುತ್ತಾನೆ.

PHOTO • Shreya Katyayini

ನಕ್ವ (ಮಾಲಕರು) ಗಳು ದೊಡ್ಡ ದೋಣಿಗಳಲ್ಲಿ ಸಮುದ್ರಕ್ಕಿಳಿದು ರಾತ್ರಿಯಿಡೀ ಮೀನು ಹಿಡಿಯುತ್ತಾರೆ. ''ಮುಂಜಾನೆ 3-4 ರ ಜಾವದ ಹೊತ್ತಿಗೆ ದೋಣಿಯು ಮರಳಿದ ಸೂಚನೆಯು ನಮಗೆ ವಯರ್ ಲೆಸ್ ವಾಕಿಯಿಂದ ಸಿಗುತ್ತದೆ. ನಂತರ ನಾವು ಚಿಕ್ಕ ದೋಣಿಗಳಲ್ಲಿ ತೆರಳಿ ಇವರುಗಳು ಹಿಡಿದ ಮೀನುಗಳನ್ನು ದಡಕ್ಕೆ ತರುತ್ತೇವೆ. ಹಳ್ಳಿಗಳಿಂದ ಬಂದ ಯಾರೂ ಕೂಡ ಮೀನುಗಳನ್ನು ಹಿಡಿಯಲು ಹೀಗೆ ದೊಡ್ಡ ದೋಣಿಗಳಲ್ಲಿ ಹೋಗಲು ಬಯಸುವುದಿಲ್ಲ. ಸಮುದ್ರದ ನೀರು ನಮ್ಮ ಆರೋಗ್ಯವನ್ನು ಏರುಪೇರಾಗಿಸುತ್ತದೆ. ಇವುಗಳೇನಿದ್ದರೂ ನಕ್ವಾಗಳಿಗೇ ಸರಿ'', ಎನ್ನುತ್ತಿದ್ದಾನೆ ಸುರೇಶ್.

ಮೀನುಗಳು ದಡಕ್ಕೆ ಬಂದ ನಂತರ ರಂಗಮ್ಮಳ ವಿಂಗಡಿಸುವ ಕೆಲಸವು ಆರಂಭವಾಗುತ್ತದೆ. ತನ್ನ ಬಳಿಯಿರುವ ಬುಟ್ಟಿಯೊಂದನ್ನು ತೋರಿಸುತ್ತಾ ''ದೊಡ್ಡ ಮೀನು, ಚಿಕ್ಕ ಮೀನು, ಸಿಗಡಿ, ಕಸಗಳಿಂದ ಹಿಡಿದು ಎಲ್ಲವೂ ಕೂಡ ಈ ರಾಶಿಯಲ್ಲಿದೆ. ಈಗ ಇವುಗಳನ್ನು ನಾವು ವಿಂಗಡಿಸುತ್ತೇವೆ'', ಎನ್ನುತ್ತಿದ್ದಾಳೆ ಆಕೆ. ಮಧ್ಯಾಹ್ನದ ಕೊನೆಯ ಭಾಗವು ಬರುವಷ್ಟರಲ್ಲಿ ಜವಾಲಾ (ಮರಿ ಸಿಗಡಿ) ಗಳನ್ನು ಒಣಗಿಸಲು ಹರಡಿಸಿಟ್ಟ ನೆಲವು ಗುಲಾಬಿ ಬಣ್ಣಕ್ಕೆ ತಿರುಗಿಬಿಟ್ಟಿದೆ.  

ಖಾಲಾದಲ್ಲಿರುವ ಮಾಲಕರಲ್ಲಿ ಲತಾ ಕೋಲಿ (ಎಡ) ಮತ್ತು ರೇಶ್ಮಾ ಕೋಲಿ (ಮಧ್ಯ) ಕೂಡ ಒಬ್ಬರು. ಕೋಲಿಗಳು ತಮ್ಮ ಕಾರ್ಮಿಕರನ್ನು ‘ನೌಕರ್' (ಆಳು) ಎಂದು ಕರೆಯುತ್ತಾರೆ. ಮಂತ್ರಿಕಿ ಹಳ್ಳಿಯಿಂದ ಬಂದಿರುವ ಮರಿಯಪ್ಪ ಭಾರತಿ (ಬಲ) ಅಂಥವರಲ್ಲೊಬ್ಬಳು. ''ನಮ್ಮ ಕುಟುಂಬವು ಕೆಲಸಕ್ಕೆಂದು 10 ಜನರ ವಲಸಿಗರನ್ನು ಇಟ್ಟುಕೊಂಡಿದೆ. ನಾವು ಮತ್ತು ಅವರು ಒಂದೇ ಕೆಲಸವನ್ನು ಮಾಡುತ್ತೇವೆ'', ಎನ್ನುತ್ತಿದ್ದಾಳೆ ರೇಶ್ಮಾ. ಕೋಲಿ ಕುಟುಂಬಗಳಲ್ಲಿ ಕೆಲಸಕ್ಕೆ ನೆರವಾಗಲು ಜನರ ಸಂಖ್ಯೆಯು ಕಮ್ಮಿಯಿರುವುದರಿಂದ ಮತ್ತು ಕುಟುಂಬದ ಮಕ್ಕಳು ಇತರ ಉದ್ಯೋಗಗಳನ್ನು ಆರಿಸಿಕೊಂಡಿರುವುದರಿಂದ ವಲಸಿಗರನ್ನು ಕರೆಸಿಕೊಳ್ಳದೆ ಬೇರೆ ಆಯ್ಕೆಯಿಲ್ಲ'', ಎನ್ನುತ್ತಾಳೆ ಈಕೆ

PHOTO • Shreya Katyayini

ಮಹಿಳೆಯರು ಮತ್ತು ಕೆಲ ಪುರುಷರು ವಿವಿಧ ಬಗೆಯ ಮೀನು, ಸಿಗಡಿಗಳನ್ನು ವಿಂಗಡಿಸಿದ ನಂತರ ಇವುಗಳನ್ನು ಮಂಜುಗಡ್ಡೆಯೊಂದಿಗೆ ಪ್ಯಾಕ್ ಮಾಡಿ ಉತ್ತರ ಮುಂಬೈಯ ಮಲಾಡ್ ನ ಮೀನು ಮಾರುಕಟ್ಟೆಗೆ ಕೊಂಡೊಯ್ಯಲಾಗುತ್ತದೆ. ಕೆಲವು ಮೀನುಗಳನ್ನು ಹರಡಿಸಿಟ್ಟು ಬಿಸಿಲಿಗೆ ಒಣಗಿಸಲಾಗುತ್ತದೆ. ಅರ್ಧದಿನದ ನಂತರ ಎಲ್ಲಾ ಭಾಗಗಳೂ ಕೂಡ ಚೆನ್ನಾಗಿ ಒಣಗಲೆಂದು ಮೀನುಗಳ ಮತ್ತೊಂದು ಬದಿಯನ್ನು ತಿರುಗಿಸಿಡಲಾಗುತ್ತದೆ.

ಸದ್ಯಕ್ಕಿರುವ ತಾಜಾ ಸ್ಥಿತಿಯಲ್ಲೇ ಅಥವಾ ಒಣಗಿದ ನಂತರ ಮಾರಲಾಗುವ ಎಲ್ಲಾ ಮೀನುಗಳನ್ನು ದನೇರ್ ಗಂಡಾಲ್ ಸ್ವಚ್ಛಗೊಳಿಸುತ್ತಿದ್ದಾನೆ. ಇವನೂ ಕೂಡ ಮಂತ್ರಿಕಿ ಹಳ್ಳಿಯಿಂದ ಬಂದವನು.

‘ಬಾಂಬೇ ಡಕ್' ಎಂಬ ಹೆಸರಿನಿಂದ ಜನಪ್ರಿಯವಾಗಿರುವ ಬಾಂಬಿಲ್ ಮೀನುಗಳನ್ನು, ಎರಡು ಮೀನುಗಳ ದವಡೆಗಳು ಒಂದಕ್ಕೊಂದು ಜೊತೆಯಾಗಿ ಹಿಡಿದಿಟ್ಟುಕೊಳ್ಳುವಂತೆ ಮಾಡಿ ವಲಾಂಡ್ (ಬಿದಿರಿನ ಫ್ರೇಮ್) ಒಂದರಲ್ಲಿ ಒಣಗಿಸುತ್ತಿರುವ ಕಾರ್ಮಿಕರು. ಮೀನುಗಳ ಎರಡೂ ಬದಿಗಳು ಸಮರ್ಪಕವಾಗಿ ಸೂರ್ಯನ ಶಾಖವನ್ನು ಪಡೆಯಲು ಸಾಧ್ಯವಾಗುವಂತೆ ಇವುಗಳನ್ನು ಪೂರ್ವ ಮತ್ತು ಪಶ್ಚಿಮದ ಕಡೆಗೆ ಮುಖ ಮಾಡುವಂತೆ ಇರಿಸಿ ಒಣಗಿಸಲಾಗುತ್ತದೆ

ಕಾಗೆಗಳನ್ನು ದೂರದಿಂದಲೇ ಹೆದರಿಸಲು ಈ ವಲಾಂಡ್ ಗಳಿಗೆ ಚಿಕ್ಕ ಕಪ್ಪು ಬಣ್ಣದ ಪ್ಲಾಸ್ಟಿಕ್ ಒಂದನ್ನು ಕಟ್ಟಲಾಗಿದೆ. ಹೀಗೆ ಕಪ್ಪು ಪ್ಲಾಸ್ಟಿಕ್ ಕಟ್ಟಿದರೆ ಕಾಗೆಗಳು ಈ ಪ್ಲಾಸ್ಟಿಕ್ ಅನ್ನೇ ಕಾಗೆಯೆಂದು ಭಾವಿಸಿ ಹತ್ತಿರ ಬರುವುದಿಲ್ಲವಂತೆ. ಆದರೆ ಇವರ ಈ ತಂತ್ರವು ಯಶಸ್ವಿಯಾಗುವುದು ಕೆಲವು ಬಾರಿ ಮಾತ್ರ

ದಿನದ ವಿಂಗಡಿಸುವ ಮತ್ತು ಒಣಗಿಸುವ ಕೆಲಸಗಳು ಮುಗಿದ ನಂತರ ಬಲೆಗಳನ್ನು ಸರಿಪಡಿಸುವಂತಹ ಕೆಲ ಕೆಲಸಗಳು ಉಳಿಯುತ್ತವೆ. ಖಾಲಾಗಳಲ್ಲಿರುವ ಕೋಲಿ ಸಮುದಾಯದ ಹಿರಿಯರಲ್ಲೊಬ್ಬರೂ, ಎಲ್ಲರಿಂದ ಗೌರವಿಸಲ್ಪಡುವವರೂ ಆದ, 51 ರ ಪ್ರಾಯದ ದೊಮಿನಿಕ್ ಕೋಲಿ ಆರು ವಲಸಿಗರನ್ನು ಕೆಲಸಕ್ಕೆಂದು ಇಟ್ಟುಕೊಂಡಿದ್ದಾರಲ್ಲದೆ ಸಮುದ್ರಕ್ಕಿಳಿಯುವುದು, ಮೀನು ಹಿಡಿಯುವುದು, ಒಣಗಿಸುವುದು, ಬಲೆಗಳನ್ನು ಸರಿಪಡಿಸುವುದು... ಹೀಗೆ ಎಲ್ಲವನ್ನೂ ಸ್ವತಃ ಮಾಡುತ್ತಾರೆ. ದೊಮಿನಿಕ್ ಕೋಲಿ ಮತ್ತು ಡೋಂಗರ್ ಪಾಡಾದ ಇತರ ಕೆಲವು ಕುಟುಂಬಗಳು ಮೀನು ಹಿಡಿಯಲು ಬಳಸುವ ಬಲೆಗಳನ್ನು ಹೊಲಿಯುವ ಅಬ್ದುಲ್ ರಝಾಕ್ ಸೋಲ್ಕರ್ ನನ್ನು ತಮ್ಮ ಹರಿದ ಬಲೆಗಳನ್ನು ಸರಿಪಡಿಸಲು ಒಂದು ದಿನದ ಮಟ್ಟಿಗೆ ಕರೆಸಿದ್ದಾರೆ. ಸೋಲ್ಕರ್ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರಾಜಾಪುರ ತಾಲೂಕಿಗೆ ಸೇರಿದವನು. ''ಬಲೆಗಳನ್ನು ಹೊಲಿಯುವ ಕೆಲಸವನ್ನು ಹಿಂದೆ ನನ್ನ ತಂದೆ ಮಾಡುತ್ತಿದ್ದರು. ಈಗ ನಾನೂ ಕೂಡ ಇದನ್ನೇ ಮಾಡುತ್ತಿದ್ದೇನೆ. ನಾನು ದಿನಕೂಲಿಯ ಕಾರ್ಮಿಕ. ಇವತ್ತು ಇಲ್ಲಿದ್ದೇನೆ. ನಾಳೆ ಇನ್ನೆಲ್ಲೋ'', ಅನ್ನುತ್ತಿದ್ದಾನೆ ಸೋಲ್ಕರ್

ಒಣಗಿಸಲು ಮೀಸಲಾದ ಜಾಗಗಳಲ್ಲಿ ಈ ಎಲ್ಲಾ ಕೆಲಸಗಳು ಮುಂದುವರಿಯುತ್ತಿರುವಂತೆಯೇ ಇತರರು ತಮ್ಮದೇ ಕೆಲಸಗಳಲ್ಲಿ ವ್ಯಸ್ತರಾಗಿದ್ದಾರೆ. ಹಸಿದ ಕಾಗೆಗಳು, ನಾಯಿಗಳು ಮತ್ತು ಕೊಕ್ಕರೆಗಳು ಮೀನುಗಳ ತೀಕ್ಷ್ಣವಾಸನೆಯ ಬೆನ್ನುಹತ್ತಿ ಬಂದು ಖಾಲಾಗಳಲ್ಲಿ ದಿನವಿಡೀ ಅತ್ತಿತ್ತ ಅಡ್ಡಾಡುತ್ತಿರುತ್ತವೆ. ನೋಡನೋಡುತ್ತಿರುವಂತೆಯೇ ಒಂದೊಂದನ್ನು ಕಸಿದು ಮರೆಯಾಗುವ ನಿರೀಕ್ಷೆ ಇವುಗಳದ್ದು. 

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Shreya Katyayini

ಪರಿಯ ತಂಡದಲ್ಲಿ ವೀಡಿಯೋ ಸಂಯೋಜಕರಾಗಿರುವ ಶ್ರೇಯಾ ಕಾತ್ಯಾಯಿನಿಯವರು ಛಾಯಾಚಿತ್ರಗ್ರಾಹಕರು ಮತ್ತು ಚಿತ್ರನಿರ್ದೇಶಕರೂ ಹೌದು. ಇವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಮುಂಬೈನಲ್ಲಿ ಮೀಡಿಯಾ ಆಂಡ್ ಕಲ್ಚರಲ್ ಸ್ಟಡೀಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ (2016 ರ ಮೊದಲ ಭಾಗದಲ್ಲಿ).

Other stories by Shreya Katyayini