``ಅದಕ್ಕೆ ಕಾಣುವುದೇನೂ ಇಲ್ಲ. ಆದರೂ ನಿಮ್ಮನ್ನೇ ನೋಡುತ್ತಿದೆ ನೋಡಿ'', ಮದನ್ ಲಾಲ್ ಮುರ್ಮು ನನ್ನಲ್ಲಿ ಹೀಗೆ ಹೇಳುತ್ತಿದ್ದರೆ ನಾನು ಆ ಸುಂದರ, ಹೊಳೆಯುವ ಜೋಡಿ ಹಳದಿ ಕಣ್ಣುಗಳನ್ನೇ ಎವೆಯಿಕ್ಕದೆ ನೋಡುತ್ತಿದ್ದೇನೆ. ಧೂಳು ತುಂಬಿಕೊಂಡು ಇದ್ದ ಒಂದೆರಡು ಬಣ್ಣಗಳೂ ಮಬ್ಬಾಗಿರುವ ಆಸುಪಾಸಿನಲ್ಲಿ, ನನಗೆ ಕಾಣುತ್ತಿರುವ ದಟ್ಟ ಬಣ್ಣಗಳೆಂದರೆ ವೃತ್ತಾಕಾರದ ಈ ಕಣ್ಣುಗಳದ್ದೇ. ನಾನು ಅದರ ಚಿತ್ರವೊಂದನ್ನು ಸೆರೆಹಿಡಿಯಲು ಮೆಲ್ಲಗೆ ಅದರತ್ತ ಹೆಜ್ಜೆಯಿರಿಸಿದರೆ ಅದು ತಕ್ಷಣ ಎತ್ತಲೋ ಹೋಗಿಬಿಡುತ್ತಿದೆ. ನಾನೂ ಕೂಡ ಅದರತ್ತಲೇ ಚಲಿಸಿ ಹೇಗೋ ಒಂದು ಚಿತ್ರವನ್ನು ಸೆರೆಹಿಡಿಯುತ್ತೇನೆ. 

ಈ ನಡುವೆ ಮದನ್ ಲಾಲ್ ಅವುಗಳತ್ತ ಯಾವುದೋ ಶಬ್ದಗಳ ಸಂಜ್ಞೆಯನ್ನು ಮಾಡಲು ಆ ಸಂಜ್ಞೆಗಳನ್ನು ಅರ್ಥಮಾಡಿಕೊಂಡಂತೆ ಅವುಗಳು ವರ್ತಿಸುತ್ತಿವೆ. ಈತ ತಾನು ಸಾಕಿರುವ ಗೂಬೆಗಳನ್ನು ನನಗೆ ಪರಿಚಯಿಸುತ್ತಾ ``ಇವರು ಸಿಧು ಮುರ್ಮು ಮತ್ತು ಕನ್ಹು ಮುರ್ಮು. ಇಬ್ಬರೂ ಕೂಡ ಕುಟುಂಬದ ಸದಸ್ಯರು'', ಎಂದು ಹೇಳುತ್ತಾನೆ. ಹೀಗೆ ಹೇಳುವಾಗ ಆತನ ಮೊಗದಲ್ಲೊಂದು ಪರಿಶುಭ್ರವಾದ ನಗುವಿದೆ. 

PHOTO • Shreya Katyayini

ಬಿಹಾರದ ಬಂಕಾ ಜಿಲ್ಲೆಯ ಚಿಹೂಟಿಯಾ ಹಳ್ಳಿಯ ಮಾರ್ಗದಲ್ಲಿ ಕಥೆಗಳ ತಲಾಶೆಯಲ್ಲಿ ನಾನು ಹೋಗುತ್ತಿದ್ದರೆ ನೆಲದ ಮೇಲೆ ಕುಳಿದುಕೊಂಡು ಪೊರಕೆಗಳನ್ನು ತಯಾರಿಸುತ್ತಿದ್ದ ಮದನ್ ಲಾಲ್ ನನ್ನ ಕಣ್ಣಿಗೆ ಬಿದ್ದಿದ್ದ. ಸ್ವಲ್ಪ ಹೊತ್ತಿನ ಮಾತಿನ ನಂತರ ಮದನ್ ಲಾಲ್ ನನ್ನನ್ನು ಬಸ್ತಿಯ ಅಂಚಿನಲ್ಲಿದ್ದ ತನ್ನ ಮನೆಗೆ ಕರೆದುಕೊಂಡು ಹೋದರೆ ನನ್ನತ್ತಲೇ ನೋಡುತ್ತಿರುವ ಎರಡು ಮರಿ ಗೂಬೆಗಳನ್ನು ನಾನು ಕಂಡಿದ್ದೆ (ಗೂಬೆಗಳಿಗೆ ದಿನದ ವೇಳೆಯಲ್ಲಿ ಕಣ್ಣು ಕಾಣಿಸುವುದಿಲ್ಲ ಅನ್ನುವುದು ತಪ್ಪು. ರಾತ್ರಿಯ ವೇಳೆಯಲ್ಲಿ ಅವುಗಳ ದೃಷ್ಟಿ ಸಾಮಥ್ರ್ಯವು ದಿನದ ಸಮಯಕ್ಕಿಂತ ವಾಸಿ ಅಷ್ಟೇ). 

PHOTO • Shreya Katyayini

ಈ ಎರಡು ಮರಿಹಕ್ಕಿಗಳಿಗೆ ಸಿಧು-ಕನ್ಹು ಎಂದು ಹೆಸರಿಡಲಾಗಿದೆ. 1855 ರಲ್ಲಿ ಸಂತಾಲರ ಗುಂಪನ್ನು ಕಟ್ಟಿ ಬ್ರಿಟಿಷರ ವಿರುದ್ಧರ ಹೋರಾಡಿದ್ದ ಇಬ್ಬರು ಬುಡಕಟ್ಟು ನಾಯಕರ ಹೆಸರುಗಳಿವು. ಈ ಈರ್ವರೂ ಕೂಡ ಸಂತಾಲ್ ಪಂಗಡಕ್ಕೆ ಸೇರಿದ ಮುರ್ಮುಗಳು (ತಾನು ತಿಲ್ಕಾ ಮಾಂಝಿಯವರ ಜೀವನದಿಂದ ಪ್ರೇರಣೆಯನ್ನು ಪಡೆದವನು ಎಂದು ಮದನ್ ಲಾಲ್ ನನಗೆ ಹೇಳಿದ್ದ. 1857 ರಲ್ಲಿ ಮಂಗಲ್ ಪಾಂಡೆಯಂತಹ ಹೋರಾಟಗಾರರು ಸ್ವಾತಂತ್ರ್ಯ ಸಂಗ್ರಾಮವನ್ನು ಆರಂಭಿಸುವ ಹಲವು ದಶಕಗಳ ಮೊದಲೇ, ಅಂದರೆ 1784 ರಲ್ಲೇ ಬ್ರಿಟಿಷರ ವಿರುದ್ಧ ದಂಗೆಯೆದ್ದು ಹೋರಾಡಿದ್ದ ಧೀರ ಆದಿವಾಸಿ ನಾಯಕ ಮಾಂಝಿ).

PHOTO • Shreya Katyayini

ನಲವತ್ತರ ಹರೆಯದ ಮದನ್ ಲಾಲ್ ಸಂತಾಲ್ ಬುಡಕಟ್ಟಿಗೆ ಸೇರಿದವನು. ತನ್ನ ಹೆಸರಿನಲ್ಲಿ ಯಾವುದೇ ಜಮೀನನ್ನು ಹೊಂದಿಲ್ಲದ ಈತ ತನ್ನ ಪತ್ನಿಯೊಂದಿಗೆ ಹುಲ್ಲು-ಮಣ್ಣಿನಿಂದ ಮಾಡಿರುವ ಒಂದು ಕೋಣೆಯ ಗುಡಿಸಲೊಂದರಲ್ಲಿ ವಾಸಿಸುತ್ತಿದ್ದಾನೆ. ಬಿಹಾರದ ಬಂಕಾ ಜಿಲ್ಲೆಯಲ್ಲಿರುವ ಕಕ್ವಾರಾ ಟೋಲಾದ ಚಿಹೂಟಿಯ ಹಳ್ಳಿಯ ನಿವಾಸಿಯಾದ ಈತನ ಗುಡಿಸಲು ಇರುವ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು.

ಮದನ್ ಲಾಲ್ ತನ್ನ ಆಸುಪಾಸಿನಲ್ಲೇ ಸಿಗುವ ಕುಶಾ ಹುಲ್ಲುಗಳಿಂದ ಪೊರಕೆಗಳನ್ನು ತಯಾರಿಸಿ ಅಕ್ಕಪಕ್ಕದ ಹಳ್ಳಿಗಳಲ್ಲಿ ಪೊರಕೆಯೊಂದಕ್ಕೆ 40 ರೂಪಾಯಿಗಳ ದರದಲ್ಲಿ ಮಾರುತ್ತಾನೆ. ಇದಲ್ಲದೆ ಬಿತ್ತನೆ ಮತ್ತು ಕಟಾವಿನ ಸಮಯದಲ್ಲೂ ಈತ ಈ ಹಳ್ಳಿಗಳಲ್ಲಿ ಕೃಷಿ ಕಾರ್ಮಿಕನಾಗಿ ದುಡಿಯುತ್ತಾನಂತೆ. 

ಇಷ್ಟು ವಿಚಿತ್ರವಾದ ಪಕ್ಷಿಗಳು ನಿನಗೆಲ್ಲಿ ಸಿಕ್ಕವು ಎಂದು ನಾನು ಈತನಲ್ಲಿ ಕೇಳುತ್ತಿದ್ದೇನೆ. ``ಒಮ್ಮೆ ನಾನು ಕಾಡಿನಲ್ಲಿ ಸೌದೆಗಳನ್ನು ಆರಿಸುತ್ತಿದ್ದೆನಾ... ಅಲ್ಲಿ ನನಗೆ ಇವುಗಳು ಕಾಣಸಿಕ್ಕವು. ಕಾಡಿನಿಂದ ಮರಳಿ ಬರುವಾಗ ಇವುಗಳನ್ನೂ ಕೂಡ ಜೊತೆಯಲ್ಲೇ ತಂದೆ'', ಎಂದ ಮದನ್ ಲಾಲ್. 

``ಇವುಗಳನ್ನು ನಾವು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತೇವೆ. ಲಕ್ಷ್ಮೀದೇವಿಯ ವಾಹನವಾದ ಈ ಪಕ್ಷಿಗಳು ಬಹಳ ಪವಿತ್ರವೂ ಹೌದು'', ಎನ್ನುತ್ತಾರೆ ಪಕ್ಕದ ಗುಡಿಸಲಿನಲ್ಲಿ ಕುಳಿತಿದ್ದ ಮುರ್ಮುನ ನೆರೆಮನೆಯವರೊಬ್ಬರು. ಮುರ್ಮು ಕೂಡ ಹೌದೆಂಬಂತೆ ಏನೋ ಗೊಣಗುತ್ತಿದ್ದಾನೆ. ಈ ಪಕ್ಷಿಗಳು ಬಲಿತ ನಂತರ ಒಳ್ಳೆಯ ಸಂಪಾದನೆಯನ್ನು ಈತನಿಗೆ ತರಬಲ್ಲವು ಎಂಬುದಂತೂ ಸತ್ಯ. 

``ಇವರಿಬ್ಬರಿಗೂ ಈಗ ಒಂದು ತಿಂಗಳಿಗಿಂತ ಸ್ವಲ್ಪ ಹೆಚ್ಚಿನ ವಯಸ್ಸು. ಇಬ್ಬರೂ ಸುಮಾರು ತಲಾ ಒಂದು ಕಿಲೋದಷ್ಟು ತೂಕವನ್ನು ಹೊಂದಿದ್ದಾರೆ'', ಎನ್ನುತ್ತಾನೆ ಮದನ್ ಲಾಲ್. ``ಬಲಿಯುತ್ತಿರುವಂತೆ ಇವುಗಳು ಮತ್ತಷ್ಟು ಭಾರವೂ, ಗಾತ್ರದಲ್ಲಿ ದೊಡ್ಡದೂ, ನೋಡಲು ಸುಂದರವಾಗಿಯೂ ಬೆಳೆಯಲಿವೆ'', ಎಂದು ಅವುಗಳನ್ನು ಪ್ರೀತಿಯಿಂದ ನೋಡುತ್ತಾ ಹೇಳುತ್ತಿದ್ದಾನೆ ಮದನ್ ಲಾಲ್. ಈ ಹಕ್ಕಿಗಳು ಪ್ರಸ್ತುತ ಮರಿಗಳಾಗಿದ್ದರೂ ಇವುಗಳ ಜೀವಿತಾವಧಿಯು ದೊಡ್ಡದು. ಸದ್ಯ ಇವುಗಳು ಹಾರುವಷ್ಟೂ ಕೂಡ ಬಲಿತಿಲ್ಲವಾದ್ದರಿಂದ ಇವುಗಳನ್ನು ಪಂಜರದಲ್ಲಿ ಹಾಕಿಟ್ಟಿಲ್ಲ. ಆದರೆ ಇವುಗಳ ಕಾಲುಗಳು ಮಾತ್ರ ಬಲಿಷ್ಠವಾಗಿರುವಂತೆ ಕಾಣುತ್ತಿವೆ.

ವೀಡಿಯೋ: ಮುರ್ಮುಗಳನ್ನೊಮ್ಮೆ ಭೇಟಿಗೋಣ

ಇವುಗಳು ಪೂರ್ಣವಾಗಿ ಬಲಿತ ನಂತರ ತಲಾ 6-7 ಕಿಲೋಗಳಷ್ಟು ತೂಕವನ್ನು ಹೊಂದಬಲ್ಲವು ಎನ್ನುತ್ತಾನೆ ಮದನ್ ಲಾಲ್. ಈತ ಹೇಳುವುದು ನಿಜವೇ ಆಗಿದ್ದರೆ ಸಿಧು-ಕನ್ಹು ಇಬ್ಬರೂ 2-3 ಕಿಲೋಗಳಷ್ಟು ಸಾಮಾನ್ಯವಾಗಿ ಕಂಡುಬರುವ ಗೂಬೆಗಳಿಗಿಂತ ಸಾಕಷ್ಟು ದೊಡ್ಡ ಗಾತ್ರದಲ್ಲಿ ಬೆಳೆಯಲಿದ್ದಾರೆ. 

ಅಂದಹಾಗೆ ಸಿಧು-ಕನ್ಹುರಿಗೆ ಕೊಡಲಾಗುತ್ತಿರುವ ಆಹಾರ ಮಾಂಸಾಹಾರ. ``ನಾನು ಸ್ವಲ್ಪ ಅನ್ನವನ್ನೇನೋ ಕೊಡುತ್ತೇನೆ. ಆದರೆ ಅವುಗಳಿಗೆ ಕೀಟಗಳೆಂದರೆ ಇಷ್ಟ'', ಅನ್ನುತ್ತಾನೆ ಮದನ್ ಲಾಲ್. ಇನ್ನೊಂದು ತಿಂಗಳೊಳಗಾಗಿ ಇಲಿಯಂತಹ ದೊಡ್ಡ ಗಾತ್ರದ ಬೇಟೆಯನ್ನು ಇವುಗಳು ಹಿಡಿದು ತಿನ್ನಬಹುದು ಎಂಬ ಲೆಕ್ಕಾಚಾರ ಈತನದ್ದು. 

ಅಂದಹಾಗೆ ಮದನ್ ಲಾಲ್ ಗೂಬೆಗಳನ್ನು ಸಾಕುತ್ತಿರುವುದು ಹಳ್ಳಿಯಲ್ಲಿ ಹೊಸ ಸಂಗತಿಯೇನೂ ಅಲ್ಲ. ಈ ಹಿಂದೆ ಕೆಲ `ದಲ್ಲಾಳಿಗಳು' ಬಂದು ಹಕ್ಕಿಗಳಿಗಾಗಿ ಮೊತ್ತವೊಂದನ್ನು ಬೇರೆ ಈತನ ಕೈಗಿಟ್ಟುಹೋಗಿದ್ದರಂತೆ. ಈ ಬಾರಿಯೂ ದಲ್ಲಾಳಿಯೊಬ್ಬ ಬಂದು ಹಕ್ಕಿಯೊಂದಕ್ಕೆ 50-60000 ರೂಪಾಯಿಗಳಷ್ಟು ಕೊಟ್ಟು ಖರೀದಿಸಬಹುದು ಎಂಬ ನಿರೀಕ್ಷೆ ಆತನದ್ದು. ಹೀಗೆ ಮಾರಿಬಿಟ್ಟ ನಂತರ ಇವುಗಳನ್ನು ಮುಂದೇನು ಮಾಡುತ್ತಾರೆ ಎಂಬ ಬಗ್ಗೆ ಅವನಿಗೆ ಮಾಹಿತಿಯು ಇದ್ದಂತಿಲ್ಲ. ``ಇವುಗಳನ್ನು ನಿಜಕ್ಕೂ ಏನು ಮಾಡುತ್ತಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಬಹುಷಃ ಇವುಗಳ ಕಿಡ್ನಿಗಳನ್ನು ಬಳಸುತ್ತಾರೋ ಏನೋ... ಕೆಲ ವೈದ್ಯರು `ಪ್ರಯೋಗ'ಗಳನ್ನು (ಪ್ರಯೋಗಶಾಲೆಯ ವೈಜ್ಞಾನಿಕ ಪ್ರಯೋಗಗಳು) ಮಾಡಲೂ ಕೂಡ ಇವುಗಳನ್ನು ಬಳಸುತ್ತಾರಂತೆ'', ಎಂದ ಮದನ್ ಲಾಲ್. 

ಅಂತೂ ಸಿಧು-ಕನ್ಹು ಮತ್ತೊಮ್ಮೆ ಇನ್ಯಾರದ್ದೋ ಪಾಲಾಗಲಿದ್ದಾರೆ. ಈ ಬಾರಿ ಮತ್ತೊಬ್ಬ ಸ್ಥಳೀಯ ಆಗಂತುಕನ ಕೈಗಳಿಗಷ್ಟೇ.

ಲೇಖಕಿಯ ಕಿರುಪರಿಚಯ: ಪರಿಯ ತಂಡದಲ್ಲಿ ವೀಡಿಯೋ ಸಂಯೋಜಕರಾಗಿರುವ ಶ್ರೇಯಾ ಕಾತ್ಯಾಯಿನಿಯವರು ಛಾಯಾಚಿತ್ರಗ್ರಾಹಕರು ಮತ್ತು ಚಿತ್ರನಿರ್ದೇಶಕರೂ ಹೌದು. ಇವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಮುಂಬೈನಲ್ಲಿ ಮೀಡಿಯಾ ಆಂಡ್ ಕಲ್ಚರಲ್ ಸ್ಟಡೀಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ (2016 ಮೊದಲ ಭಾಗದಲ್ಲಿ).

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Shreya Katyayini

ಪರಿಯ ತಂಡದಲ್ಲಿ ವೀಡಿಯೋ ಸಂಯೋಜಕರಾಗಿರುವ ಶ್ರೇಯಾ ಕಾತ್ಯಾಯಿನಿಯವರು ಛಾಯಾಚಿತ್ರಗ್ರಾಹಕರು ಮತ್ತು ಚಿತ್ರನಿರ್ದೇಶಕರೂ ಹೌದು. ಇವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಮುಂಬೈನಲ್ಲಿ ಮೀಡಿಯಾ ಆಂಡ್ ಕಲ್ಚರಲ್ ಸ್ಟಡೀಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ (2016 ರ ಮೊದಲ ಭಾಗದಲ್ಲಿ).

Other stories by Shreya Katyayini