ನಮ್ಮಿಂದ ತಡವಾಗಿತ್ತು. ಶಿರ್‍ಗಾಂವ್‍ನ ನಮ್ಮ ಪತ್ರಕರ್ತ ಮಿತ್ರ ಸಂಪತ್ ಮೋರೆ, "ನಿಮ್ಮನ್ನು ಭೇಟಿಮಾಡಲೆಂದು ಗಣಪತಿ ಬಾಳಾ ಯಾದವ್ ಈಗಾಗಲೇ ತನ್ನ ಹಳ್ಳಿಯಿಂದ ಎರಡು ಬಾರಿ ಬಂದು ಹೋದರು" ಎಂದು ತಿಳಿಸಿದರು. "ಎರಡು ಬಾರಿಯೂ ಅವರು ತಮ್ಮ ಸ್ವಂತ ಹಳ್ಳಿಯಾದ ರಾಂಪುರಕ್ಕೆ ಹಿಂದಿರುಗಿದರು. ನೀವು ತಲುಪಿದ್ದೀರೆಂದು ತಿಳಿಸಿದ ನಂತರ ಅವರು ಮೂರನೇ ಬಾರಿಗೆ ವಾಪಸ್ಸು ಬರುತ್ತಾರೆ." ಎರಡೂ ಹಳ್ಳಿಗಳ ನಡುವಿನ ಅಂತರ 5 ಕಿ. ಮೀ. ಗಣಪತಿ ಯಾದವ್ ಸೈಕಲ್ಲಿನಲ್ಲಿಯೇ ಇಷ್ಟು ದೂರವನ್ನು ಕ್ರಮಿಸುತ್ತಾರೆ. ಮೂರು ಬಾರಿಯ ಪ್ರಯಾಣವೆಂದರೆ ಒಟ್ಟಾರೆ 30 ಕಿ. ಮೀ.ಗಳು. ಅದೂ ಬೇಸಿಗೆಯ ಮಧ್ಯಾಹ್ನದಲ್ಲಿ. ದಾರಿಯ ತುಂಬ ಕೊಳಕು ಬೇರೆ. ಕಾಲು ಶತಮಾನದಷ್ಟು ಹಳೆಯದಾದ ಸೈಕಲ್ಲಿನಲ್ಲಿ ಪ್ರಯಾಣಿಸುವ ಅವರ ವಯಸ್ಸು 97.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಡೆಗಾಂವ್ ಬ್ಲಾಕ್‍ನಲ್ಲಿನ ಶಿರ್‍ಗಾಂವ್‍ನ ಮೋರೆಯ ತಾತನ ಮನೆಯಲ್ಲಿ ನಾವು ಊಟಕ್ಕೆ ಅಣಿಯಾಗುತ್ತಿದ್ದಂತೆಯೇ, ಗಣಪತಿ ಬಾಳಾ ನಿರಾಯಾಸವಾಗಿ ಸೈಕಲ್ಲಿನಲ್ಲಿ ಬಂದಿಳಿದರು. ಬಿಸಿಲಿನಲ್ಲಿ ಇಷ್ಟು ದೂರ ಕ್ರಮಿಸುವಂತೆ ಮಾಡಿದ್ದಕ್ಕಾಗಿ ನಾನು ಕ್ಷಮೆ ಯಾಚಿಸಿದಾಗ, ಸೌಮ್ಯವಾಗಿ "ಪರವಾಗಿಲ್ಲ ಬಿಡಿ" ಎನ್ನುತ್ತಾ ಮುಗುಳ್ನಕ್ಕರು. "ಮದುವೆಯೊಂದರಲ್ಲಿ ಭಾಗವಹಿಸಲು ನಿನ್ನೆ ಮಧ್ಯಾಹ್ನ ವೀಟಾಗೆ ಹೋಗುವುದಿತ್ತು. ಅಲ್ಲಿಗೂ ಸೈಕಲ್ಲಿನಲ್ಲಿಯೇ ತೆರಳಿದೆ. ನಾನು ಯಾವಾಗಲೂ ಸೈಕಲ್ಲಿನಲ್ಲೇ ಪ್ರಯಾಣಿಸುತ್ತೇನೆ." ಎಂದರವರು. ರಾಂಪುರದಿಂದ ವೀಟಾಗೆ 40 ಕಿ. ಮೀ. ನಿನ್ನೆಯಂತೂ ತಾಪಮಾನ ಸುಮಾರು 40 ಸೆಲ್ಸಿಯಸ್‍ನಷ್ಟಿದ್ದು, ಬಿಸಿಲು ಅತ್ಯಂತ ಪ್ರಖರವಾಗಿತ್ತು.

"ಒಂದೆರಡು ವರ್ಷಗಳ ಹಿಂದೆ, ಸುಮಾರು 150 ಕಿ. ಮೀ.ಗಳನ್ನು ಕ್ರಮಿಸಿ, ಪಂಥರ್‍ಪುರಕ್ಕೆ ತೆರಳಿ ವಾಪಸ್ಸು ಬಂದಿದ್ದರು." ಎಂದ ಮೋರೆ, "ಈಗ ಇಷ್ಟೊಂದು ದೂರಕ್ಕೆ ಇವರು ತೆರಳುತ್ತಿಲ್ಲ." ಎಂದರು.

ವೀಡಿಯೋ ವೀಕ್ಷಿಸಿ: ಗಣಪತಿ ಯಾದವ್ ಕ್ರಾಂತಿಕಾರಿಯಾಗಿ ತಾನು ನಿರ್ವಹಿಸಿದ ಅಸಾಧಾರಣ ಪಾತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಅವರ ಜವಾಬ್ದಾರಿಯು ಕೊರಿಯರ್ ಪಾತ್ರವನ್ನು ನಿರ್ವಹಿಸುವುದಾಗಿತ್ತು. ಆದರೆ, 1943ರ ಜೂನ್‍ನಲ್ಲಿ ಸತಾರಾದ ಶೆನೋಲಿಯಲ್ಲಿ ಪ್ರಮುಖ ರೈಲು ದರೋಡೆಯನ್ನು ನಡೆಸಿದ ತಂಡದಲ್ಲಿ ಇವರೂ ಭಾಗಿಯಾಗಿದ್ದರು.

1920ರಲ್ಲಿ ಜನಿಸಿದ ಗಣಪತಿ ಯಾದವ್; ಮಹಾರಾಷ್ಟ್ರದ ಸತಾರಾದಲ್ಲಿ, 1943ರಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸ್ವಾತಂತ್ರ್ಯವನ್ನು ಘೋಷಿಸಿದ ತೂಫಾನ್ ಸೇನೆಯ ಪ್ರತಿ ಸರ್ಕಾರ್ ಅಥವ ತಾತ್ಕಾಲಿಕ ಭೂಗತ ಸರ್ಕಾರದಲ್ಲಿನ ಸಶಸ್ತ್ರ ದಳದ ಸ್ವಾತಂತ್ರ್ಯ ಹೋರಾಟಗಾರ. ಸುಮಾರು 600 ಅಥವ ಅದಕ್ಕೂ ಹೆಚ್ಚಿನ ಹಳ್ಳಿಗಳು ಪ್ರತಿ ಸರ್ಕಾರ ದ ನಿಯಂತ್ರಣದಲ್ಲಿದ್ದವು. ಬ್ರಿಟಿಷ್ ಅಧಿಪತ್ಯದ ವಿರುದ್ಧ ತೂಫಾನ್ ಸೇನೆಯ ಬಂಡಾಯಗಳಲ್ಲಿ ಇವರು ಭಾಗವಹಿಸಿದರು. "ನಾನು ಹೆಚ್ಚಾಗಿ ಓಲೆಕಾರನ ಕೆಲಸವನ್ನು ನಿರ್ವಹಿಸುತ್ತಿದ್ದು, ಕಾಡುಗಳಲ್ಲಿ ಅವಿತಿದ್ದ ಕ್ರಾಂತಿಕಾರಿಗಳಿಗೆ ಸಂದೇಶಗಳನ್ನು ಹಾಗೂ ಊಟವನ್ನು ಕೊಂಡೊಯ್ಯುತ್ತಿದ್ದೆ." ಎನ್ನುತ್ತಾರೆ. ಅತ್ಯಂತ ದೂರವಷ್ಟೇ ಅಲ್ಲದೆ, ಭಯಾನಕವೂ ಆಗಿದ್ದ ಅನೇಕ ದಾರಿಗಳನ್ನು ಕಾಲ್ನಡಿಗೆಯಲ್ಲೇ ಕ್ರಮಿಸುತ್ತಿದ್ದ ಇವರು, ನಂತರ ಸೈಕಲ್ಲನ್ನು ಬಳಸಲು ಪ್ರಾರಂಭಿಸಿದರು.

ಗಣಪತಿ ಯಾದವ್, ಕ್ರಿಯಾಶೀಲ ರೈತರೂ ಹೌದು. ಇತ್ತೀಚಿನ ರಾಬಿ ಋತುವಿನಲ್ಲಿ, ತನ್ನ ಅರ್ಧ ಎಕರೆ ಜಮೀನಿನಲ್ಲಿ 45 ಟನ್ ಕಬ್ಬನ್ನು ಬೆಳೆದಿದ್ದಾರೆ. ಒಂದೊಮ್ಮೆ ಇವರ ಬಳಿ ಸುಮಾರು 20 ಎಕರೆ ಭೂಮಿಯಿತ್ತಾದರೂ, ಬಹಳ ಹಿಂದೆಯೇ ಅದನ್ನು ತನ್ನ ಮಕ್ಕಳಿಗೆ ಹಂಚಿದ್ದಾರೆ. ಅವರುಗಳಿಗೆ, ಗಣಪತಿ ಯಾದವ್ ವಾಸಿಸುತ್ತಿರುವ ಜಮೀನಿನಲ್ಲಿಯೇ ಸೊಗಸಾದ ಮನೆಗಳಿವೆ. ಗಣಪತಿ ಯಾದವ್ ಅವರ ಪತ್ನಿ ವತ್ಸಲ ಅವರಿಗೆ 85ರ ವಯಸ್ಸು. ಈಗಲೂ ಅಡಿಗೆ, ಮನೆಯನ್ನು ಸ್ವಚ್ಛಗೊಳಿಸುವುದು ಮುಂತಾದ ಕೆಲಸಗಳನ್ನು ನಿಭಾಯಿಸುವ ಆಕೆ, ಕ್ರಿಯಾಶೀಲ ಗೃಹಿಣಿಯೂ ಹೌದು. ಇವರಿಬ್ಬರೂ, ಭೋಗ ಜೀವನಕ್ಕೆ ಹೊರತಾದ ಕನಿಷ್ಟ ಅಗತ್ಯ ಸೌಲಭ್ಯಗಳುಳ್ಳ ನಿವಾಸದಲ್ಲಿ ವಾಸಮಾಡಲು ಬಯಸುತ್ತಾರೆ. ನಾವು ಭೇಟಿನೀಡಿದ ಸಮಯದಲ್ಲಿ ವತ್ಸಲ, ಬೇರೊಂದು ಹಳ್ಳಿಗೆ ತೆರಳಿದ್ದರು.

ಗಣಪತಿ ಯಾದವ್ ಅವರ ವಿನಮ್ರ ವ್ಯಕ್ತಿತ್ವದಿಂದಾಗಿ, ಇವರು ಸ್ವಾತಂತ್ರ್ಯ ಹೋರಾಟಗಾರರೆಂಬ ವಿಷಯವು ಮಕ್ಕಳಿಗೆ ಬಹಳ ತಡವಾಗಿ ತಿಳಿದುಬಂತು. ಇವರ ಹಿರಿಯ ಮಗ, ನಿವೃತ್ತಿಯು ಜಮೀನಿನಲ್ಲೇ ಬೆಳೆದು ದೊಡ್ಡವರಾದರೂ, ಅಕ್ಕಸಾಲಿಗ ವೃತ್ತಿಯಲ್ಲಿ ತರಬೇತಿ ಪಡೆಯಲು, ತನ್ನ 13ನೇ ವಯಸ್ಸಿನಲ್ಲಿ ಈರೋಡ್ ಹಾಗೂ ತಮಿಳು ನಾಡಿನ ಕೊಯಮತ್ತೂರಿಗೆ ತೆರಳಿದರು. "ಸ್ವಾತಂತ್ರ್ಯ ಹೋರಾಟದಲ್ಲಿನ ಅಪ್ಪನ ಪಾತ್ರದ ಬಗ್ಗೆ ನನಗೇನೂ ತಿಳಿಯದು. ಅಪ್ಪನ ಧೈರ್ಯಶಾಲಿ ವ್ಯಕ್ತಿತ್ವದ ಬಗ್ಗೆ ನಿನಗೆ ಗೊತ್ತೇ? ಎಂದು ಜಿ. ಡಿ. ಬಾಪು ಲಾಡ್ (ಪ್ರತಿ ಸರ್ಕಾರ್‍ನ ಪ್ರಖ್ಯಾತ ನೇತಾರ) ಕೇಳಿದಾಗಷ್ಟೇ ಈ ಬಗ್ಗೆ ನನಗೆ ತಿಳಿದುಬಂತು." ಎನ್ನುತ್ತಾರವರು. ಗಣಪತಿ ಯಾದವ್ ತನ್ನ ಗುರು ಹಾಗೂ ಮಾರ್ಗದರ್ಶಿಯಾಗಿದ್ದುದಲ್ಲದೆ, ನನಗೆ "ಹೆಣ್ಣೊಂದನ್ನು ಹುಡುಕಿ, ಮದುವೆಯನ್ನು ನಿಶ್ಚಯಿಸಿದರೆಂದು" ತಿಳಿಸುವ ಬಾಪು ಲಾಡ್, "ನಂತರದಲ್ಲಿ ಶೇತ್ಕರಿ ಕಾಮ್‍ಗಾರ್ ಪಕ್ಷದಲ್ಲಿ (ಭಾರತದ ರೈತರು ಹಾಗೂ ಕಾರ್ಮಿಕರ ಪಕ್ಷ) ನಾನು ಅವರ ಅನುಯಾಯಿಯಾಗಿದ್ದೆ" ಎಂದು ನೆನಪಿಸಿಕೊಳ್ಳುತ್ತಾರೆ.

"ನಾನು 7ನೇ ತರಗತಿಯಲ್ಲಿದ್ದಾಗ, ನನ್ನ ಸ್ನೇಹಿತನ ತಂದೆಯು ಅವರ ಧೈರ್ಯಶಾಲಿ ವ್ಯಕ್ತಿತ್ವದ ಬಗ್ಗೆ ನನಗೆ ತಿಳಿಸಿದರು. ಅವರು ಯಾವುದೇ ಬ್ರಿಟಿಷ್ ಸೈನಿಕನನ್ನಾಗಲಿ, ಪೊಲೀಸನನ್ನಾಗಲಿ ಕೊಲ್ಲಲಿಲ್ಲವಾದ್ದರಿಂದ ಅದೇನು ಅಂತಹ ಮಹತ್ಕಾರ್ಯವಲ್ಲ ಎಂಬುದು ಆಗಿನ ನನ್ನ ಧೋರಣೆಯಾಗಿತ್ತು." ಎನ್ನುತ್ತಾರೆ ಅವರ ಮತ್ತೊಬ್ಬ ಮಗ ಮಹದೇವ.

Ganpati Bala Yadav and family
PHOTO • P. Sainath

ಗಣಪತಿ ಯಾದವ್, ತನ್ನ ಮೊಮ್ಮಕ್ಕಳು ಹಾಗೂ ಪರಿವಾರದ ಇತರೆ ಸದಸ್ಯರೊಂದಿಗೆ, ಆತನ ಮಗ ನಿವೃತ್ತಿ (ಹಿಂಭಾಗದಲ್ಲಿ ಎಡಕ್ಕೆ), ಚಂದ್ರಕಾಂತ್ (ಮುಂಭಾಗದಲ್ಲಿ ಎಡಕ್ಕೆ) ಮತ್ತು ಮಹದೇವ್ (ಮುಂಭಾಗದಲ್ಲಿ ಬಲಕ್ಕಿರುವ ಕನ್ನಡಕಧಾರಿ).

ಗಣಪತಿ ಬಾಳಾ ಯಾದವ್, ಓಲೆಕಾರನ ವೃತ್ತಿಯನ್ನು ನಿರ್ವಹಿಸುತ್ತಿದ್ದರಾದರೂ, ಬಾಬು ಲಾಡ್ ಮತ್ತು ತೂಫಾನ್ ಸೇನೆಯ ಸ್ಥಾಪಕ, ಕ್ಯಾಪ್ಟನ್ ಭಾವ್ ನೇತೃತ್ವದಲ್ಲಿ ನಡೆಸಲಾದ ಪ್ರಮುಖ ರೈಲು ದರೋಡೆ ಯ ತಂಡದಲ್ಲಿ ಇವರೂ ಒಂದು ಭಾಗವಾಗಿದ್ದರು.

"ರೈಲನ್ನು ಆಕ್ರಮಿಸುವ ನಾಲ್ಕು ದಿನಗಳ ಮೊದಲು, ರೈಲ್ವೆ ಹಳಿಗಳ ಮೇಲೆ ಬಂಡೆಗಳನ್ನು ಪೇರಿಸಬೇಕೆಂಬ ವಿಷಯವು ಇವರಿಗೆ ತಿಳಿದುಬಂತು."

ಆಕ್ರಮಣಕಾರರ ತಂಡಕ್ಕೆ ರೈಲಿನಲ್ಲಿ ಬ್ರಿಟಿಷರ ವೇತನಪಟ್ಟಿಯಿದ್ದಿತೆಂಬ (ಬಾಂಬೆ ಪ್ರೆಸಿಡೆನ್ಸಿ) ವಿಷಯವು ತಿಳಿದಿತ್ತೆ? ಎಂಬ ಪ್ರಶ್ನೆಗೆ, “ನಮ್ಮ ನೇತಾರರಿಗೆ ಇದು ತಿಳಿದಿತ್ತು. ರೈಲ್ವೆ ಇಲಾಖೆ ಮತ್ತು ಸರ್ಕಾರದಲ್ಲಿ ಕೆಲಸ ಮಾಡುವವರು ಈ ಬಗ್ಗೆ ಮಾಹಿತಿ ನೀಡಿದ್ದರು. ರೈಲಿನ ಮೇಲೆ ಆಕ್ರಮಣಮಾಡಿದ ಮೇಲಷ್ಟೇ ನಮಗೆ ಇದರ ಬಗ್ಗೆ ತಿಳಿಯಿತು.” ಎಂದು ಅವರು ಉತ್ತರಿಸಿದರು.

ಎಷ್ಟು ಜನ ಆಕ್ರಮಣಕಾರರಿದ್ದರು?

"ಆ ಸಮಯದಲ್ಲಿ ಅದನ್ನು ಎಣಿಸಿದವರಾರು? ನಿಮಿಷಮಾತ್ರದಲ್ಲಿ ಕಲ್ಲು ಹಾಗೂ ಬಂಡೆಗಳನ್ನು ರಾಶಿಹಾಕಿ, ಅವನ್ನು ರೈಲ್ವೆ ಹಳಿಗಳ ಮೇಲೆ ಸುರಿದೆವು. ನಂತರ, ರೈಲು ನಿಲ್ಲುತ್ತಲೇ ಅದನ್ನು ಸುತ್ತುವರಿದೆವು. ಆಗ ಅದರೊಳಗಿದ್ದ ಯಾರೂ ಅಲುಗಾಡಲಿಲ್ಲ. ಅಷ್ಟೇ ಅಲ್ಲದೆ, ರೈಲನ್ನು ಲೂಟಿಮಾಡುವಾಗ ಯಾರೂ ಪ್ರತಿರೋಧಿಸಲೂ ಇಲ್ಲ. ಬ್ರಿಟಿಷ್ ಅಧಿಪತ್ಯಕ್ಕೆ ನಷ್ಟವುಂಟುಮಾಡುವ ಉದ್ದೇಶಕ್ಕಾಗಿ ನಾವು ಹೀಗೆ ಮಾಡಿದೆವೇ ಹೊರತು, ಹಣಕ್ಕಾಗಿ ಅಲ್ಲ ಎಂಬುದನ್ನು ತಾವು ದಯವಿಟ್ಟು ಗಮನಿಸಬೇಕು."

ಇಂತಹ ಆಕ್ರಮಣಕಾರಿ ಕಾರ್ಯಾಚರಣೆಗಳಷ್ಟೇ ಅಲ್ಲದೆ, ಗಣಪತಿ ಬಾಳಾ ಯಾದವ್ ಅವರ ಓಲೆಕಾರನ ಕೆಲಸದ ನಿರ್ವಹಣೆಯೂ ಸಹ ಜಟಿಲವಾಗಿತ್ತು. "ನಮ್ಮ ನೇತಾರರಿಗೆ (ಕಾಡಿನಲ್ಲಿ ಅಡಗಿರುತ್ತಿದ್ದ) ಊಟವನ್ನು ನಾನು ತಲುಪಿಸುತ್ತಿದ್ದೆ. ರಾತ್ರಿಯ ಹೊತ್ತಿನಲ್ಲಿ ಅವರನ್ನು ಸಂಧಿಸುತ್ತಿದ್ದೆ. ಸಾಮಾನ್ಯವಾಗಿ, ನಮ್ಮ ನೇತಾರರೊಂದಿಗೆ 10ರಿಂದ 12 ಜನರಿರುತ್ತಿದ್ದರು. ಈ ಭೂಗತ ಹೋರಾಟಗಾರರನ್ನು ಕಂಡಲ್ಲಿ ಗುಂಡಿಕ್ಕುವಂತೆ ಬ್ರಿಟಿಷ್ ರಾಜ್ ಆದೇಶವನ್ನು ಹೊರಡಿಸಿತ್ತು. ನಾವು ದೀರ್ಘವಾದ, ಗುಪ್ತ ಹಾಗೂ ಬಳಸು ದಾರಿಯ ಮೂಲಕ ಅವರನ್ನು ತಲುಪುತ್ತಿದ್ದೆವು. ಇಲ್ಲದಿದ್ದಲ್ಲಿ, ನಾವು ಪೊಲೀಸರ ಗುಂಡಿಗೆ ಬಲಿಯಾಗುವ ಸಾಧ್ಯತೆಯಿತ್ತು."

Ganpati Bala Yadav on his cycle
PHOTO • P. Sainath

ಒಂದೆರಡು ವರ್ಷಗಳ ಹಿಂದೆ, 150 ಕಿ. ಮೀ.ಗಳನ್ನು ಕ್ರಮಿಸಿ, ಪಂಧಾರ್‍ಪುರ್ ತಲುಪಿ, ಅಲ್ಲಿಂದ ವಾಪಸ್ಸಾದ ಯಾದವ್, ಇಂದಿನವರೆಗೂ, ಪ್ರತಿನಿತ್ಯವೂ ಸೈಕಲ್ಲಿನಲ್ಲಿ ಹಲವಾರು ಕಿ. ಮೀ.ಗಳ ಹಾದಿಯನ್ನು ಕ್ರಮಿಸುತ್ತಾರೆ.

"ನಮ್ಮ ಹಳ್ಳಿಗಳಲ್ಲಿನ ಪೊಲೀಸ್ ಮಾಹಿತಿದಾರರನ್ನು ಸಹ ನಾವು ಶಿಕ್ಷಿಸುತ್ತೇವೆ." ಎನ್ನುತ್ತಾರೆ ಗಣಪತಿ ಯಾದವ್. ಪ್ರತಿ ಸರ್ಕಾರ್ ಅಥವ ತಾತ್ಕಾಲಿಕ ಸರ್ಕಾರ್‍ಗೆ "ಪತ್ರಿ ಸರ್ಕಾರ್" ಎಂಬುದಾಗಿ ಹೆಸರು ಬಂದ ಬಗೆಯನ್ನು ಅವರು ವಿವರಿಸಿದ್ದು ಹೀಗೆ: ಮರಾಠಿ ಭಾಷೆಯಲ್ಲಿ "ಪತ್ರಿ" ಎಂದರೆ ಮರದ ಕೋಲು ಎಂಬ ಅರ್ಥವಿದೆ. "ಯಾವುದಾದರೂ ವ್ಯಕ್ತಿ, ಪೊಲೀಸ್ ಮಾಹಿತಿದಾರನೆಂಬುದಾಗಿ ತಿಳಿದುಬಂದಲ್ಲಿ, ಆತನ ಮನೆಯನ್ನು ರಾತ್ರಿಯ ಹೊತ್ತಿನಲ್ಲಿ ಸುತ್ತುವರೆದು, ಮಾಹಿತಿದಾರ ಹಾಗೂ ಆತನ ಸಹಚರನನ್ನು ಹಳ್ಳಿಯ ಹೊರವಲಯಕ್ಕೆ ಕರೆದೊಯ್ಯುತ್ತೇವೆ."

"ಮಾಹಿತಿದಾರನ ಕಣಕಾಲುಗಳ ನಡುವೆ ಮರದ ಕೋಲನ್ನಿಟ್ಟು, ಅವನ್ನು ಕಟ್ಟಿಹಾಕುತ್ತೇವೆ. ನಂತರ ಆತನನ್ನು ತಲೆಕೆಳಗಾಗಿಸಿ, ಆತನ ಅಂಗಾಲುಗಳನ್ನು ಕೋಲಿನಿಂದ ಬಾರಿಸುತ್ತೇವೆ. ಅಂಗಾಲುಗಳ ಹೊರತಾಗಿ, ಆತನ ಶರೀರದ ಮತ್ತಾವುದೇ ಭಾಗವನ್ನು ನಾವು ಮುಟ್ಟುವುದಿಲ್ಲ. ಅನೇಕ ದಿನಗಳವರೆಗೆ ಆತನು ನಡೆದಾಡಲಾರ." ಇದು ಬಹಳ ಪರಿಣಾಮಕಾರಿಯಾದ ಅನುತ್ತೇಜಕ ಕ್ರಮ. ಹೀಗೆ, ಪತ್ರಿ ಸರ್ಕಾರ್ ಎಂಬ ಪದವು ಚಾಲ್ತಿಗೆ ಬಂದಿತು. "ಇದರ ತರುವಾಯ, ಆತನ ಸಹಚರನ ಬೆನ್ನ ಮೇಲೆ ಆತನನ್ನು ಹೇರಲಾಗುತ್ತದೆ. ಆತನು ಅವನನ್ನು ಮನೆಗೆ ಕರೆದೊಯ್ಯುತ್ತಾನೆ."

ಬೆಲವಡೆ, ನೆವಾರಿ ಮತ್ತು ತಡ್ಸರ್ ಹಳ್ಳಿಗಳಲ್ಲಿನ ಮಾಹಿತಿದಾರರಿಗೂ ನಾವು ಶಿಕ್ಷೆಯನ್ನಿತ್ತೆವು. ನಾನಾಸಾಹೇಬ್ ಎಂಬ ಮಾಹಿತಿದಾರನು ತಡ್ಸರ್ ಹಳ್ಳಿಯ ದೊಡ್ಡ ಬಂಗಲೆಯೊಂದರಲ್ಲಿ ವಾಸಿಸುತ್ತಿದ್ದ. ರಾತ್ರಿಯ ಸಮಯದಲ್ಲಿ ಅದರ ಒಳನುಗ್ಗಿದ ನಮಗೆ, ಕೇವಲ ಸ್ತ್ರೀಯರಷ್ಟೇ ಅಲ್ಲಿ ಮಲಗಿದ್ದು ಕಂಡುಬಂದಿತು. ಆದರೆ, ಮೂಲೆಯೊಂದರಲ್ಲಿ ಹೊದಿಕೆಯೊಂದರಲ್ಲಿ ತನ್ನನ್ನು ಮರೆಮಾಡಿಕೊಂಡ ಸ್ತ್ರೀಯೊಬ್ಬಳು ಗೋಚರಿಸಿದಳು. ಈಕೆ ಪ್ರತ್ಯೇಕವಾಗಿ ಏಕೆ ಮಲಗಿದ್ದಾಳೆ? ಅದು ಬೇರಾರೂ ಆಗಿರದೆ, ನಾನಾಸಾಹೇಬನೇ ಆಗಿದ್ದ. ಅದೇ ಹೊದಿಕೆಯಲ್ಲಿ ಆತನನ್ನು ನಾವು ಹೊತ್ತೊಯ್ದೆವು.

ನಾನಾ ಪಾಟೀಲ್ (ತಾತ್ಕಾಲಿಕ ಸರ್ಕಾರದ ನೇತಾರ) ಮತ್ತು ಬಾಪು ಲಾಡ್, ಗಣಪತಿ ಯಾದವ್‍ನ ನಾಯಕರಾಗಿದ್ದರು. "ಎತ್ತರಕ್ಕೆ ಕಟ್ಟುಮಸ್ತಾಗಿದ್ದ ನಾನಾ ಪಾಟೀಲ್, ಯಾವುದಕ್ಕೂ ಅಂಜದ ಧೈರ್ಯವಂತ. ಎಂತಹ ಸ್ಫೂರ್ತಿದಾಯಕ ಭಾಷಣಗಳನ್ನು ಮಾಡುತ್ತಿದ್ದ! ಸುತ್ತುಮುತ್ತಲಿನ ದೊಡ್ಡ ವ್ಯಕ್ತಿಗಳು ಆತನನ್ನು ಆಹ್ವಾನಿಸುತ್ತಿದ್ದರಾದರೂ, ಆತನು ಚಿಕ್ಕ ಮನೆಗಳಿಗಷ್ಟೇ ತೆರಳುತ್ತಿದ್ದ. ಆ ದೊಡ್ಡ ವ್ಯಕ್ತಿಗಳಲ್ಲಿ ಕೆಲವರು ಬ್ರಿಟಿಷರ ಏಜೆಂಟರಾಗಿದ್ದರು." "ಸರ್ಕಾರಕ್ಕೆ ನಾವು ಹೆದರದೆ, ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟಾಗಿ ಹೋರಾಟದಲ್ಲಿ ಭಾಗವಹಿಸಿದಲ್ಲಿ, ಬ್ರಿಟಿಷರಿಂದ ನಾವು ಬಿಡುಗಡೆ ಹೊಂದಬಹುದೆಂದು ನೇತಾರರು ನಮಗೆ ತಿಳಿಸುತ್ತಿದ್ದರು." ಗಣಪತಿ ಯಾದವ್ ಹಾಗೂ ಈ ಹಳ್ಳಿಯ ಸುಮಾರು 100ರಿಂದ 150 ಜನರು ತೂಫಾನ್ ಸೇನೆಗೆ ಸೇರಿದರು.

Ganpati Bala Yadav
PHOTO • P. Sainath
Vatsala Yadav
PHOTO • P. Sainath

ಗಣಪತಿ ಯಾದವ್ ಹಾಗೂ ಆತನ 85ರ ವಯೋಮಾನದ ಪತ್ನಿ ವತ್ಸಲ - ಕನಿಷ್ಟ ಸೌಲಭ್ಯಗಳುಳ್ಳ ಮನೆಯಲ್ಲಿ ವಾಸಿಸುವ ಇವರು, ಈಗಲೂ ಅಡಿಗೆ ಹಾಗೂ ಮನೆಯನ್ನು ಸ್ವಚ್ಛಗೊಳಿಸುವುದು ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಕ್ರಿಯಾಶೀಲ ಗೃಹಿಣಿ.

ಗಣಪತಿ ಯಾದವ್, ಮಹಾತ್ಮಾ ಗಾಂಧಿಯವರ ಬಗ್ಗೆ ಹೀಗೆನ್ನುತ್ತಾರೆ: "ಆಗ ಮಹಾತ್ಮಾ ಗಾಂಧಿಯ ಬಗ್ಗೆ ಕೇಳಿದ್ದೆನೇ ಹೊರತು, ಅವರನ್ನು ನೋಡಿರಲಿಲ್ಲ. ಕೈಗಾರಿಕೋದ್ಯಮಿ ಎಸ್. ಎಲ್ ಕಿರ್ಲೊಸ್ಕರ್ ಅವರು ಜವಹರಲಾಲ್ ನೆಹರು ಅವರನ್ನು ಈ ಪ್ರಾಂತಕ್ಕೆ ಕರೆತಂದಾಗ, ಅವರನ್ನೊಮ್ಮೆ ನೋಡಿದ್ದೆ. ಆದರೆ, ನಾವೆಲ್ಲರೂ ಭಗತ್ ಸಿಂಗ್ ಬಗೆಗಂತೂ ಕೇಳಿ ತಿಳಿದಿದ್ದೇವೆ."

ರೈತರ ಕುಟುಂಬದಲ್ಲಿ ಜನಿಸಿದ ಗಣಪತಿ ಬಾಳಾ ಯಾದವ್ ಅವರಿಗೆ ಒಬ್ಬ ಸಹೋದರಿಯಿದ್ದಳು. ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯರು ತೀರಿಹೋದ ಕಾರಣ, ಮಕ್ಕಳು ಸಂಬಂಧಿಕರೊಬ್ಬರ ಮನೆಗೆ ತೆರಳಿದರು. "ಮೊದಲ 2-4 ವರ್ಷಗಳು ಶಾಲೆಗೆ ಹೋಗುತ್ತಿದ್ದೆನಾದರೂ, ಹೊಲದಲ್ಲಿ ದುಡಿಯುವ ಸಲುವಾಗಿ ಶಾಲೆಯನ್ನು ಬಿಡಬೇಕಾಯಿತು." ಎನ್ನುತ್ತಾರವರು. ವಿವಾಹದ ನಂತರ, ತನ್ನ ತಂದೆ ತಾಯಿಯರ ಜೀರ್ಣಾವಸ್ಥೆಯಲ್ಲಿದ್ದ ಮನೆ ಹಾಗೂ ಚಿಕ್ಕ ಜಮೀನಿಗೆ ವಾಪಸ್ಸಾಗುವ ಇವರ ಪ್ರಾರಂಭದ ದಿನಗಳ ಬಗ್ಗೆ ಯಾವುದೇ ಫೋಟೋಗಳಿಲ್ಲ. ಏಕೆಂದರೆ ಅದರ ವೆಚ್ಚವನ್ನು ಭರಿಸುವುದು ಅವರಿಗೆ ಸಾಧ್ಯವಿರಲಿಲ್ಲ.

ಶ್ರಮವಹಿಸಿ ದುಡಿಯುತ್ತಿದ್ದ ಇವರು, 97ರ ಈ ಇಳಿವಯಸ್ಸಿನಲ್ಲೂ ಅದನ್ನು ಮುಂದುವರಿಸಿದ್ದಾರೆ. "ಬೆಲ್ಲವನ್ನು ತಯಾರಿಸುವುದನ್ನು ಕಲಿತ ನಾನು, ಅದನ್ನು ತಯಾರಿಸಿ, ಜಿಲ್ಲೆಯಾದ್ಯಂತ ಮಾರುತ್ತಿದ್ದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ನಾವು ಹಣವನ್ನು ವ್ಯಯಿಸಿದೆವು. ವಿದ್ಯೆಯನ್ನು ಕಲಿತ ತರುವಾಯ ಅವರು ಮುಂಬೈಗೆ ತೆರಳಿ, ದುಡಿಯಲು ಪ್ರಾರಂಭಿಸಿದರಲ್ಲದೆ, ನಮಗೆ ಹಣವನ್ನೂ ಸಹ ಕಳಿಸತೊಡಗಿದರು. ನಂತರ, ನಾನು ಬೆಲ್ಲದ ವ್ಯವಹಾರವನ್ನು ನಿಲ್ಲಿಸಿ, ಜಮೀನಿನಲ್ಲಿ ಹೆಚ್ಚಾಗಿ ತೊಡಗಿಸಿಕೊಂಡೆ. ಹೀಗಾಗಿ, ನಮ್ಮ ಜಮೀನು ಅಭಿವೃದ್ಧಿ ಹೊಂದಿತು." ಎಂಬುದಾಗಿ ಗಣಪತಿ ಯಾದವ್ ತಿಳಿಸುತ್ತಾರೆ.

ಈಗಿನ ರೈತರು ಸಾಲದ ಹೊರೆಯಲ್ಲಿ ಮುಳುಗಿರುವ ಬಗ್ಗೆ ಗಣಪತಿ ಯಾದವ್ ಅವರು ವ್ಯಾಕುಲಗೊಂಡಿದ್ದಾರೆ. "ನಮಗೆ ಸ್ವರಾಜ್ಯ ದೊರೆತಿದೆಯಾದರೂ, ಪರಿಸ್ಥಿತಿಯು ನಾವು ನಿರೀಕ್ಷಿಸಿದಂತಿಲ್ಲ. ಹಿಂದಿನ ಸರ್ಕಾರಗಳಿಗಿಂತಲೂ ಈಗಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಟ್ಟ ಸ್ಥಿತಿಯಲ್ಲಿವೆ. ಈ ಹಿಂದಿನವೂ ಕೆಟ್ಟ ಸರ್ಕಾರಗಳೇ, ಅವು ಮುಂದೇನು ಮಾಡುತ್ತವೆಂಬುದನ್ನು ಯಾರೂ ಹೇಳುವಂತಿರಲಿಲ್ಲ." ಎನ್ನುತ್ತಾರೆ.

Ganpati Bala Yadav with his cycle outside a shop
PHOTO • P. Sainath

ನಮ್ಮ ಕಾಲದಲ್ಲಿ ಸೈಕಲ್ ಎನ್ನುವುದು ಒಂದು ಹೊಸ ವಸ್ತುವಾಗಿತ್ತು ಎನ್ನುವ ಗಣಪತಿ ಯಾದವ್, ಇದರ ಆಕರ್ಷಕ ತಂತ್ರಜ್ಞಾನದ ಬಗ್ಗೆ ನಮ್ಮ ಹಳ್ಳಿಯಲ್ಲಿ ದೀರ್ಘ ಚರ್ಚೆಗಳಾಗುತ್ತಿದ್ದವು ಎನ್ನುತ್ತಾರೆ.

ತೂಫಾನ್ ಸೇನೆಯ ಬಹಳಷ್ಟು ಕೊರಿಯರ್ ಕೆಲಸಗಳನ್ನು ಕಾಲ್ನಡಿಗೆಯಲ್ಲೇ ನಿರ್ವಹಿಸುತ್ತಿದ್ದ ಗಣಪತಿ ಯಾದವ್, "ಸುಮಾರು 20-22ರ ವಯಸ್ಸಿನಲ್ಲಿ ಸೈಕಲ್ ತುಳಿಯುವುದನ್ನು ಕಲಿತರು." ನಂತರದ ಅವರ ಭೂಗತ ಕೆಲಸಗಳಿಗೆ ಇದೇ ಅವರ ಸಾರಿಗೆಯ ವಿಧಾನವಾಯಿತು. "ನಮ್ಮ ಕಾಲದಲ್ಲಿ ಸೈಕಲ್ ಎನ್ನುವುದು ಒಂದು ಹೊಸ ವಸ್ತುವಾಗಿತ್ತು ಇದರ ಆಕರ್ಷಕ ತಂತ್ರಜ್ಞಾನದ ಬಗ್ಗೆ ನಮ್ಮ ಹಳ್ಳಿಯಲ್ಲಿ ದೀರ್ಘ ಚರ್ಚೆಗಳಾಗುತ್ತಿದ್ದವು. ಎಣಿಕೆಗೆ ಸಿಗದಷ್ಟು ಬಾರಿ ಏಳುತ್ತಾ, ಬೀಳುತ್ತಾ, ಸೈಕಲ್ ತುಳಿಯುವುದನ್ನು ಸ್ವತಃ ನಾನೇ ಕಲಿತೆ." ಎನ್ನುತ್ತಾರವರು.

ಮಧ್ಯಾಹ್ನವು ಇನ್ನೇನು ಮುಗಿಯುವುದರಲ್ಲಿತ್ತು. ಮುಂಜಾನೆ 5ಕ್ಕೇ ಎದ್ದು, ದೈನಂದಿನ ಕೆಲಸಕಾರ್ಯಗಳಲ್ಲಿ ನಿರತರಾಗಿರುವ ಗಣಪತಿ ಯಾದವ್, ನಮ್ಮೊಂದಿಗೆ ಗಂಟೆಗಟ್ಟಲೆ ಮಾತುಕತೆಯಲ್ಲಿ ನಿರತರಾಗಿದ್ದರೂ, ಬಳಲಿಕೆಯ ಯಾವುದೇ ಕುರುಹುಗಳು ಅವರಲ್ಲಿ ಕಾಣಲಿಲ್ಲ. ಅವರ ಸೈಕಲ್ ಎಷ್ಟು ಹಳೆಯದೆಂದು ಕೇಳಿದಾಗಷ್ಟೇ ಅವರು ಹುಬ್ಬುಗಂಟಿಕ್ಕಿದ್ದು. "ಇದಕ್ಕೆ ಸುಮಾರು 25 ವರ್ಷಗಳಾಗಿವೆ. ಇದಕ್ಕೂ ಹಿಂದಿನದ್ದು, ಸುಮಾರು 50 ವರ್ಷಗಳಿಂದಲೂ ನನ್ನ ಬಳಿಯಿತ್ತು. ಆದರೆ ಅದನ್ನಾರೋ ಕದ್ದುಬಿಟ್ಟರು." ಎಂದು ದುಃಖಿತರಾದರು.

ನಾವು ಹೊರಡಲನುವಾಗುತ್ತಿದ್ದಂತೆಯೇ, ನನ್ನ ಕೈಗಳನ್ನು ಬಿಗಿಯಾಗಿ ಹಿಡಿದು, ಸ್ವಲ್ಪ ಕಾಯುವಂತೆ ತಿಳಿಸಿ, ಏನನ್ನೋ ತರಲು ತಮ್ಮ ಪುಟ್ಟ ಮನೆಯೊಳಹೊಕ್ಕರು. ಅಲ್ಲಿ ಚಿಕ್ಕದೊಂದು ಪಾತ್ರೆಯನ್ನು ತೆಗೆದುಕೊಂಡು, ಮಡಕೆಯೊಂದನ್ನು ತೆರೆದು ಅದರಲ್ಲಿ ಅದನ್ನು ಮುಳುಗಿಸಿದರು. ನಂತರ ಹೊರಬಂದ ಅವರು, ಒಂದು ಲೋಟ ತಾಜಾ ಹಾಲನ್ನು ನನ್ನ ಕೈಗಿತ್ತರು. ನಾನು ಅದನ್ನು ಕುಡಿಯುತ್ತಿದ್ದಂತೆಯೇ, ಮತ್ತೊಮ್ಮೆ ನನ್ನ ಕೈಗಳನ್ನು ಅಮುಕಿ ಹಿಡಿದ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ನನ್ನ ಕಣ್ಣುಗಳೂ ತೇವಗೊಂಡಿದ್ದವು. ಯಾವುದೇ ಮಾತಿನ ಅವಶ್ಯಕತೆಯಿರಲಿಲ್ಲ. ಗಣಪತಿ ಬಾಳಾ ಯಾದವ್ ಅವರ ವಿಸ್ಮಯಕರ ಜೀವನಚಕ್ರದಲ್ಲಿ ಅಲ್ಪ ಕಾಲವಾದರೂ ಸರಿಯೇ, ನಾವೂ ಸಹ ಭಾಗಿಗಳಾದದ್ದು ಸುಯೋಗವೇ ಹೌದು ಎಂಬ ಭಾವದಿಂದ ಅವರನ್ನು ಬೀಳ್ಕೊಟ್ಟೆವು.

ಸಂಪತ್ ಮೋರೆ, ಭರತ್ ಪಾಟೀಲ್, ನಮಿತ ವಯ್‍ಕರ್ ಮತ್ತು ಸಂಯುಕ್ತ ಶಾಸ್ತ್ರಿ ಅವರುಗಳ ಅಮೂಲ್ಯ ಮಾಹಿತಿಗಳಿಗಾಗಿ ಅನಂತ ಧನ್ಯವಾದಗಳು.

ಅನುವಾದ: ಶೈಲಜ ಜಿ. ಪಿ.

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.