“ವೈರಸ್‌ ಹರಡುವಿಕೆಯನ್ನು ತಡೆಗಟ್ಟುವುದು ಸಾಧ್ಯವಿದೆ… ಕೈಗಳನ್ನು ನಿಯಮಿತವಾಗಿ ಸಾಬೂನಿನಿಂದ ತೊಳೆದು, ರೋಗಿಗಳಿಂದ ಒಂದು ಮೀಟರ್‌ ಅಂತರವನ್ನು ಕಾಯ್ದುಕೊಳ್ಳಬೇಕು”, ಎನ್ನುತ್ತಿದ್ದ ದೂರವಾಣಿಯ ೩೦ ಸೆಕೆಂಡಿನ ಧ್ವನಿಮುದ್ರಿತ ಕಾಲರ್‌ ಟ್ಯೂನ್‌ಗೆ ಯಾವುದೇ ಉತ್ತರವಿರಲಿಲ್ಲ.

ಎರಡನೇ ಬಾರಿಯ ನನ್ನ ದೂರವಾಣಿ ಕರೆಯನ್ನು ಸ್ವೀಕರಿಸಿದಾಗ, ಬಾಳಾಸಾಹೇಬ್‌ ಖೇಡ್ಕರ್‌, ಕಾಲರ್‌ ಟ್ಯೂನ್‌ ನ ಸಲಹೆಗೆ ವಿರುದ್ಧವಾಗಿ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದರು. ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಬ್ಬಿನ ಹೊಲದಲ್ಲಿ ಅವರು ಕಬ್ಬನ್ನು ಕತ್ತರಿಸುತ್ತಿದ್ದರು. “ಇಲ್ಲಿ ಎಲ್ಲರೂ ಕೊರೊನ ವೈರಸ್‌ನಿಂದಾಗಿ ಭಯಭೀತರಾಗಿದ್ದಾರೆ, ಒಂದು ದಿನ ಮಹಿಳೆಯೊಬ್ಬಳು ಜೋರಾಗಿ ಅಳುತ್ತಿದ್ದುದನ್ನು ನೋಡಿದೆ. ತನಗೂ ಈ ವ್ಯಾಧಿ ಹರಡಬಹುದಲ್ಲದೆ, ತನ್ನ ಮಗುವೂ ಇದರ ಸೋಂಕಿಗೀಡಾಗಬಹುದೆಂದು ಆಕೆ ಚಿಂತಿತಳಾಗಿದ್ದಳು”, ಎಂದರವರು.

ಮಹಾರಾಷ್ಟ್ರದಲ್ಲಿ ಕೆಲಸವನ್ನು ಮುಂದುವರಿಸಿರುವ ಅನೇಕ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾದ, ಜಿ. ಡಿ. ಬಾಪು ಲಾಡ್‌ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ೩೯ರ ವಯಸ್ಸಿನ ಖೇಡ್ಕರ್‌ ಕೂಲಿಗಾರರಾಗಿ ನಿಯುಕ್ತಗೊಂಡಿದ್ದಾರೆ. ಸಕ್ಕರೆಯು ‘ಅಗತ್ಯ ವಸ್ತುಗಳ’ ಪಟ್ಟಿಯಲ್ಲಿರುವ ಕಾರಣ, ವೈರಸ್‌ನ ಹತೋಟಿಗಾಗಿ ಮಾರ್ಚ್‌ ೨೪ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಕಟಿಸಿದ ರಾಷ್ಟ್ರಾದ್ಯಂತದ ಲಾಕ್‌ಡೌನ್‌ನಿಂದ ಅದನ್ನು ಹೊರತುಪಡಿಸಲಾಗಿದೆ. ಇದಕ್ಕೆ ಒಂದು ದಿನದ ಮೊದಲು, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ರಾಜ್ಯದ ಗಡಿಗಳನ್ನು ಮುಚ್ಚಿ, ಅಂತರ್‌-ರಾಜ್ಯ ಪ್ರಯಾಣವನ್ನು ನಿಷೇಧಿಸಿದ್ದರು.

ರಾಜ್ಯದಲ್ಲಿನ ಒಟ್ಟು ೧೩೫ ಸಕ್ಕರೆ ಕಾರ್ಖಾನೆಗಳಲ್ಲಿ, ೭೨ ಕಾರ್ಖಾನೆಗಳು ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ೬೩ ಕಾರ್ಖಾನೆಗಳು ಖಾಸಗಿ ಮಾಲೀಕತ್ವವನ್ನು ಹೊಂದಿವೆ. “ಇವುಗಳಲ್ಲಿನ ೫೬ ಕಾರ್ಖಾನೆಗಳು ಮಾರ್ಚ್‌ ೨೩ರಂದು ಮುಚ್ಚಲ್ಪಟ್ಟು, ೭೯ ಕಾರ್ಖಾನೆಗಳಿನ್ನೂ ಕಾರ್ಯಶೀಲವಾಗಿವೆ” ಎಂಬುದಾಗಿ ರಾಜ್ಯದ ಸಹಕಾರಿ ಸಚಿವರಾದ ಬಾಳಾಸಾಹೇಬ್‌ ಪಾಟೀಲ್‌, ದೂರವಾಣಿಯಲ್ಲಿ ನನಗೆ ತಿಳಿಸಿದರು. “ಜಮೀನುಗಳಲ್ಲಿನ್ನೂ ಆ ಕಾರ್ಖಾನೆಗಳಿಗೆ ಬರುವ ಕಬ್ಬಿನ ಜಲ್ಲೆಗಳನ್ನು ತುಂಡರಿಸಲಾಗುತ್ತಿದೆ. ಮಾರ್ಚ್‌ ಕೊನೆಯ ಹೊತ್ತಿಗೆ ಅವುಗಳಲ್ಲಿನ ಕೆಲವು ಕಾರ್ಖಾನೆಗಳು ರಸಹಿಂಡುವ ಪ್ರಕ್ರಿಯೆಯನ್ನು ನಿಲ್ಲಿಸುತ್ತಿದ್ದು, ಮತ್ತೆ ಕೆಲವು ಏಪ್ರಿಲ್‌ ಕೊನೆಯವರೆಗೂ ಅದನ್ನು ಮುಂದುವರಿಸುತ್ತವೆ.”

ಪ್ರತಿಯೊಂದು ಸಕ್ಕರೆ ಕಾರ್ಖಾನೆಯೂ ತನ್ನ ವ್ಯಾಪ್ತಿಯಲ್ಲಿ, ನಿರ್ದಿಷ್ಟ ಎಕರೆಗಳಷ್ಟು ಕಬ್ಬಿನ ಹೊಲಗಳನ್ನು ಹೊಂದಿದೆ. ಕಾರ್ಖಾನೆಗಳು ಬಾಡಿಗೆಗೆ ನೇಮಿಸಿಕೊಂಡ ಕೂಲಿಗಾರರು ಕಬ್ಬಿನ ಜಲ್ಲೆಗಳನ್ನು ಆ ಜಮೀನುಗಳಲ್ಲಿ ತುಂಡರಿಸಿ, ರಸಹಿಂಡುವ ಪ್ರಕ್ರಿಯೆಗಾಗಿ ಅವನ್ನು ಕಾರ್ಖಾನೆಗಳಿಗೆ ತರತಕ್ಕದ್ದು. ಗುತ್ತಿಗೆದಾರರ ಮೂಲಕ ಕಾರ್ಖಾನೆಯು ಕೂಲಿಗಾರರನ್ನು ಬಾಡಿಗೆಗೆ ಪಡೆಯುತ್ತದೆ.

ಕೂಲಿಗಾರರಿಗೆ ಮುಂಗಡವಾಗಿ ಹಣವನ್ನು ಪಾವತಿಸಿ, ಅವರನ್ನು ಈ ಕೆಲಸಕ್ಕೆಂದು ಕಾಯ್ದಿರಿಸಲಾಗುತ್ತದೆ. “ಋತುವಿನ ಕೊನೆಗೆ ಮುಂಗಡ ಹಣಕ್ಕೆ ತಕ್ಕಷ್ಟು ಕಬ್ಬಿನ ಜಲ್ಲೆಗಳನ್ನು ಕೂಲಿಗಾರರು ಕತ್ತರಿಸಿದ್ದಾರೆಂಬುದನ್ನು ನಾವು ಖಾತರಿಪಡಿಸಿಕೊಳ್ಳಬೇಕು”, ಎಂಬುದಾಗಿ ಬಾರಾಮತಿ ಬಳಿಯಲ್ಲಿನ ಛತ್ರಪತಿ ಸಕ್ಕರೆ ಕಾರ್ಖಾನೆಯಲ್ಲಿ ಗುತ್ತಿಗೆದಾರರಾಗಿರುವ ಹನುವಂತ್‌ ಮುಂಧೆ ತಿಳಿಸುತ್ತಾರೆ.

File photos of labourers from Maharashtra's Beed district chopping cane in the fields and loading trucks to transport it to factories for crushing. Cane is still being chopped across western Maharashtra because sugar is listed as an 'essential commodity'
PHOTO • Parth M.N.
PHOTO • Parth M.N.

ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಕೂಲಿಗಾರರು ಹೊಲಗಳಲ್ಲಿನ ಕಬ್ಬಿನ ಜಲ್ಲೆಗಳನ್ನು ಕತ್ತರಿಸಿ, ರಸವನ್ನು ಹಿಂಡಲಿಕ್ಕಾಗಿ ಕಾರ್ಖಾನೆಗಳಿಗೆ ರವಾನಿಸಲು ಅವನ್ನು ಟ್ರಕ್ಕುಗಳಿಗೆ ತುಂಬುತ್ತಿರುವ ಕಡತದಲ್ಲಿನ ಛಾಯಾಚಿತ್ರಗಳು. ಸಕ್ಕರೆಯನ್ನು ‘ಅಗತ್ಯ ವಸ್ತು’ಗಳೆಂಬುದಾಗಿ ಪಟ್ಟಿಮಾಡಲಾಗಿರುವ ಕಾರಣ, ಪಶ್ಚಿಮ ಮಹಾರಾಷ್ಟ್ರದಾದ್ಯಂತ ಕಬ್ಬಿನ ಜಲ್ಲೆಗಳನ್ನು ಈಗಲೂ ಕತ್ತರಿಸಲಾಗುತ್ತಿದೆ.

ಖೇಡ್ಕರ್‌ ಅವರು ಕೆಲಸವನ್ನು ನಿರ್ವಹಿಸುತ್ತಿರುವ ಸಾಂಗ್ಲಿಯಲ್ಲಿನ ಸಕ್ಕರೆ ಕಾರ್ಖಾನೆಯು ಮಾರ್ಚ್‌ ೧೮ರಂದು ಗುತ್ತಿಗೆದಾರರನ್ನುದ್ದೇಶಿಸಿ ಹೊರಡಿಸಿದ ಬೆದರಿಕೆಯ ರೂಪದಲ್ಲಿದ್ದ ಪ್ರಕಟಣೆಯಲ್ಲಿ, ಕಬ್ಬಿನ ಋತುವು ಇನ್ನೇನು ಕೊನೆಗೊಳ್ಳಲಿದ್ದು, ಋತುಮಾನದ ಕೊನೆಯವರೆಗೂ ಕೂಲಿಗಾರರು ಕಡ್ಡಾಯವಾಗಿ ಕಬ್ಬನ್ನು ಕತ್ತರಿಸತಕ್ಕದ್ದು. “ಇಲ್ಲದಿದ್ದಲ್ಲಿ ಅವರಿಗೆ ಕಮಿಷನ್‌ ದೊರೆಯುವುದಿಲ್ಲ ಹಾಗೂ ಮನೆಗೆ ವಾಪಸ್ಸು ತೆರಳಲು ಭತ್ಯೆಯನ್ನೂ ನೀಡಲಾಗುವುದಿಲ್ಲವೆಂದು”, ತಿಳಿಸಲಾಗಿತ್ತು.

ಹೀಗಾಗಿ, ಗುತ್ತಿಗೆದಾರರು, ಕೂಲಿಗಾರರು ತಮ್ಮ ಕೆಲಸವನ್ನು ಮುಂದುವರಿಸುವಂತೆ ಒತ್ತಾಯಿಸಬೇಕಾಯಿತು. ತಾನೂ ಒಬ್ಬ ರೈತನಾಗಿದ್ದು, ಕಾರ್ಖಾನೆಯ ಕಮಿಷನ್‌ ಅನ್ನು ಕಳೆದುಕೊಳ್ಳಲಿಚ್ಛಿಸುವುದಿಲ್ಲ ಎಂಬುದಾಗಿ ತಿಳಿಸಿದ ಮುಂಧೆ, “ಅವರೆಲ್ಲರೂ ವಾಪಸ್ಸು ತೆರಳಲು ಬಯಸುತ್ತಿದ್ದಾರೆ. ಆದರೆ ದುರದೃಷ್ಟವಶಾತ್‌ ಅದು ಅವರ ಕೈಯಲಿಲ್ಲ”, ಎಂದರು.

ಮಾರ್ಚ್‌ ೨೭ರಂದು ನಾವು ದೂರವಾಣಿಯಲ್ಲಿ ಮಾತನಾಡಿದಾಗ ಅವರು ಕೂಲಿಗಾರರೊಂದಿಗೆ ಕುಳಿತಿದ್ದರು. ಅವರಲ್ಲಿ ಯಾರಿಗಾದರೂ ದೂರವಾಣಿಯಲ್ಲಿ ಸಂಭಾಷಿಸಲು ಸಾಧ್ಯವೇ ಎಂದು ನಾನು ಅವರನ್ನು ಕೇಳಿದೆ. ಮಾತನಾಡಲು ಸಮ್ಮತಿಸಿದ ಬೀಡ್‌ನಲ್ಲಿನ ಪಹಾಡಿ ಪಾರ್‌ಗಾಂವ್‌ ಹಳ್ಳಿಯ ೩೫ರ ವಯಸ್ಸಿನ ಮಾರುತಿ ಮಸ್ಕೆ, “ಈ ವೈರಸ್‌ ಎಂದರೇನು ಎಂಬ ಬಗ್ಗೆ ನಮಗೆ ಯಾರೂ ಖಚಿತವಾಗಿ ತಿಳಿಸುತ್ತಿಲ್ಲವಾದ್ದರಿಂದ ನಾವು ಭಯಭೀತರಾಗಿದ್ದೇವೆ. ವಾಟ್ಸ್ಯಾಪ್‌ ಸಂದೇಶಗಳು ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ. ನಮಗೆ ಮನೆಗೆ ವಾಪಸ್ಸು ತೆರಳಿದರೆ ಸಾಕೆನಿಸಿದೆ”, ಎಂದರು.

ಮಾರ್ಚ್‌ ೨೬ರಂದು ಮಹಾರಾಷ್ಟ್ರದ ಮುಖ್ಯಮಂತ್ರಿಯವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವಾಗ, ಪ್ರಯಾಣವು ವೈರಸ್‌ ನ ಹರಡುವಿಕೆಯನ್ನು ಹೆಚ್ಚಿಸುವ ಕಾರಣ; ಕೂಲಿಗಾರರು ತಾವು ಇರುವ ಜಾಗದಲ್ಲೇ ಉಳಿಯಬೇಕು. “ಕೆಲಸಗಾರರ ಮುತುವರ್ಜಿಯನ್ನು ನಾವು ವಹಿಸುತ್ತೇವೆ. ಅದು ನಮ್ಮ ಜವಾಬ್ದಾರಿ ಹಾಗೂ ನಮ್ಮ ಸಂಸ್ಕೃತಿಯೂ ಹೌದು”, ಎಂಬುದಾಗಿ ತಿಳಿಸಿದರು.

ಕಬ್ಬನ್ನು ನಿರ್ವಹಿಸುವ ಕೂಲಿಗಾರರು ತಾವಿರುವ ಜಾಗದಲ್ಲೇ ಉಳಿದಲ್ಲಿ, ರಾಜ್ಯವು ಅವರ ಮುತುವರ್ಜಿಯ ನಿಟ್ಟಿನಲ್ಲಿ ಬೃಹತ್‌ ಪ್ರಮಾಣದ ಸಿದ್ಧತೆಗಳನ್ನು ರೂಪಿಸಬೇಕಾಗುತ್ತದೆ. ಕೂಲಿಗಾರರ ಸಂಪಾದನೆಯು ಅತ್ಯಂತ ಕನಿಷ್ಟ ಮಟ್ಟದಲ್ಲಿದ್ದು, ಅವರು ಹೆಚ್ಚು ದಿನ ಕಾಯುವ ಸ್ಥಿತಿಯಲ್ಲಿಲ್ಲ.

ಇವರಲ್ಲಿನ ಹಲವರು ತಮ್ಮ ಹಳ್ಳಿಗಳಲ್ಲಿ ಬೇಸಾಯಗಾರರಾಗಿದ್ದಾರೆ. ಇವರ ಒಡೆತನದಲ್ಲಿರುವ ಭೂಮಿಯ ಪ್ರಮಾಣ ಅತ್ಯಂತ ಕಡಿಮೆಯಿದ್ದು, ಕುಟುಂಬ ನಿರ್ವಹಣೆಗೆ ಅದು ಏನೇನೂ ಸಾಲದು. ಹವಾಮಾನದಲ್ಲಿನ ಬದಲಾವಣೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೀಜಗಳು ಹಾಗೂ ಗೊಬ್ಬರದಂತಹ ಕೃಷಿ ಸಂಬಂಧಿತ ವಸ್ತುಗಳ ಬೆಲೆಯು ಗಗನಕ್ಕೇರುತ್ತಿದ್ದು, ಕೃಷಿಯಿಂದ ದೊರೆಯುವ ಲಾಭವು ಕ್ಷೀಣಿಸುತ್ತಿದೆ. ಬೀಡ್‌ ಮತ್ತು ಅಹ್ಮದ್‌ ನಗರ್‌ ಸರಹದ್ದಿನ ಮುಂಗುಸ್‌ವಾಡೆ ಹಳ್ಳಿಯಲ್ಲಿ ಖೇಡ್ಕರ್‌ ೩ ಎಕರೆ ಭೂಮಿಯನ್ನು ಹೊಂದಿದ್ದು, ಅದರಲ್ಲಿ ಅವರು ಬಾಜ್ರಾವನ್ನು ಪ್ರಮುಖವಾಗಿ ಬೆಳೆಯುತ್ತಾರೆ. “ನಾವು ಅದನ್ನು ಮಾರಲಾರೆವು. ಬೆಳೆಯು ನಮ್ಮ ಕುಟುಂಬದ ಬಳಕೆಗಷ್ಟೇ ಸಾಲುವಷ್ಟಿದೆ. ನಮ್ಮ ಆದಾಯವು ಈ ಕೂಲಿಯನ್ನೇ ಸಂಪೂರ್ಣವಾಗಿ ಅವಲಂಬಿಸಿದೆ”, ಎನ್ನುತ್ತಾರೆ ಖೇಡ್ಕರ್‌.

Lakhs of workers from the agrarian Marathwada region migrate to the sugar factories of western Maharashtra and Karnataka when the season begins in November every year. They cook and eat meals while on the road
PHOTO • Parth M.N.
Lakhs of workers from the agrarian Marathwada region migrate to the sugar factories of western Maharashtra and Karnataka when the season begins in November every year. They cook and eat meals while on the road
PHOTO • Parth M.N.

ಮರಾಠವಾಡ ಪ್ರದೇಶದಿಂದ ಕೃಷಿಕ ಸಮುದಾಯದ ಲಕ್ಷಾಂತರ ಕೆಲಸಗಾರರು ಪ್ರತಿ ವರ್ಷವೂ ನವೆಂಬರ್‌ ತಿಂಗಳಿನಲ್ಲಿ ಕಬ್ಬಿನ ಋತುವು ಪ್ರಾರಂಭವಾಗುತ್ತಿದ್ದಂತೆಯೇ, ಪಶ್ಚಿಮ ಮಹಾರಾಷ್ಟ್ರ ಹಾಗೂ ಕರ್ನಾಟಕಗಳಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ವಲಸೆ ಬರುತ್ತಾರೆ. ಬೀದಿಗಳಲ್ಲಿಯೇ ಇವರು ಅಡಿಗೆ ಮಾಡಿಕೊಂಡು ಊಟಮಾಡುತ್ತಾರೆ (ಕಡತದಲ್ಲಿನ ಛಾಯಾಚಿತ್ರ)

ಈತನಂತೆಯೇ, ಪ್ರತಿ ವರ್ಷವೂ, ಮರಾಠವಾಡ ಪ್ರದೇಶದ ಕೃಷಿಕ ವಲಯದಿಂದ ಲಕ್ಷಾಂತರ ಕೆಲಸಗಾರರು ಪ್ರತಿ ವರ್ಷವೂ ನವೆಂಬರ್‌ ತಿಂಗಳಿನಲ್ಲಿ ಕಬ್ಬಿನ ಋತುವು ಪ್ರಾರಂಭವಾಗುತ್ತಿದ್ದಂತೆಯೇ, ಪಶ್ಚಿಮ ಮಹಾರಾಷ್ಟ್ರ ಹಾಗೂ ಕರ್ನಾಟಕಗಳಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ವಲಸೆ ಬರುತ್ತಾರೆ. ಅಲ್ಲಿಯೇ ನೆಲೆಸುವ ಅವರು, ಆರು ತಿಂಗಳ ಅವಧಿಯಲ್ಲಿ, ದಿನಂಪ್ರತಿ ೧೪ ಗಂಟೆಗಳ ಕಾಲ ಕಬ್ಬನ್ನು ಕತ್ತರಿಸುತ್ತಾರೆ.

ಬಾಳಾಸಾಹೇಬ್‌ ಮತ್ತು ೩೬ರ ವಯಸ್ಸಿನ ಆತನ ಪತ್ನಿ ಪಾರ್ವತಿಯು ೧೫ ವರ್ಷಗಳಿಂದಲೂ ವಲಸೆ ಬರುತ್ತಿದ್ದಾರೆ. ಲಾಕ್‌ಡೌನ್‌ ಕಾರಣದಿಂದಾಗಿ ದೇಶಾದ್ಯಂತ ಬಹುತೇಕರು ಸುರಕ್ಷಿತವಾಗಿ ತಮ್ಮ ಮನೆಗಳಲ್ಲಿಯೇ ಉಳಿದುಕೊಂಡಿರುವಾಗ, ಇವರಿಬ್ಬರೂ ಬಯಲುಗಳಲ್ಲಿ ನೂರಾರು ಇತರೆ ಕೂಲಿಗಾರರೊಂದಿಗೆ ನಿರಂತರವಾಗಿ ಕಬ್ಬನ್ನು ಕತ್ತರಿಸುವಲ್ಲಿ ನಿರತರಾಗಿದ್ದಾರೆ. “ನಾವು ಹತಾಶರಾಗಿದ್ದೇವೆ. ಈ ಕೆಲಸವನ್ನು ನಾವು ನಿರ್ವಹಿಸಲೇಬೇಕು”, ಎನ್ನುತ್ತಾರೆ ಬಾಳಾಸಾಹೇಬ್‌.

ರಾಜ್ಯದಲ್ಲಿನ ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜ್ಯದ ಪ್ರಭಾವಿ ರಾಜಕಾರಣಿಗಳ ಪರೋಕ್ಷ ಅಥವ ಅಪರೋಕ್ಷ ಒಡೆತನದಲ್ಲಿದ್ದು ಅಪಾರ ಲಾಭವನ್ನು ಒದಗಿಸುತ್ತಿವೆ. ಆದರೆ ಕೂಲಿಗಾರರು, ತಾವು ಕತ್ತರಿಸುವ ಪ್ರತಿ ಟನ್‌ ಕಬ್ಬಿಗೆ ಕೇವಲ ೨೨೮ ರೂ.ಗಳನ್ನು ಮಾತ್ರವೇ ಪಡೆಯುತ್ತಿದ್ದಾರೆ. ಬಾಳಾಸಾಹೇಬ್‌ ಮತ್ತು ಪಾರ್ವತಿ ಇಬ್ಬರೂ ಸೇರಿ, ದಿನಂಪ್ರತಿ ೧೪ ಗಂಟೆಗಳ ಕಾಲ ದುಡಿದು, ೨-೩ ಟನ್‌ ಕಬ್ಬನ್ನು ಕತ್ತರಿಸುತ್ತಾರೆ. “ಆರು ತಿಂಗಳ ಕೊನೆಗೆ ನಮ್ಮಿಬ್ಬರಿಂದ ಒಂದು ಲಕ್ಷ ಕೂಲಿ ದೊರೆಯುತ್ತದೆ. ಸಾಮಾನ್ಯವಾಗಿ ನಾವು ಯಾವುದರ ಬಗ್ಗೆಯೂ ದೂರುವುದಿಲ್ಲ. ಆದರೆ ಈ ವರ್ಷ ಹೆಚ್ಚಿನ ಅಪಾಯವು ಎದುರಾದಂತೆ ತೋರುತ್ತದೆ”, ಎನ್ನುತ್ತಾರೆ ಬಾಳಾಸಾಹೇಬ್‌.

ಕೂಲಿಗಾರರು ವಲಸೆ ಬಂದಾಗ, ಕಬ್ಬಿನ ಹೊಲಗಳಲ್ಲಿ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಇವು ೫ ಅಡಿ ಎತ್ತರವಿದ್ದು ಒಣ ಹುಲ್ಲಿನಿಂದ ನಿರ್ಮಿಸಲ್ಪಟ್ಟಿರುತ್ತವೆ. ಕೆಲವು ಗುಡಿಸಲುಗಳಿಗೆ ಪ್ಲಾಸ್ಟಿಕ್‌ ಅನ್ನು ಹೊದಿಸಿದ್ದು, ಇಬ್ಬರು ಮಲಗುವಷ್ಟು ಮಾತ್ರವೇ ಸ್ಥಳಾವಕಾಶವಿರುತ್ತದೆ. ತೆರೆದ ಜಾಗದಲ್ಲಿ ಅಡಿಗೆ ಮಾಡಿಕೊಳ್ಳುವ ಕೂಲಿಕಾರರು ಬಯಲನ್ನೇ ಶೌಚಾಲಯವನ್ನಾಗಿ ಬಳಸುತ್ತಾರೆ.

“ನಾವು ಬದುಕುತ್ತಿರುವ ಪರಿಸ್ಥಿತಿಯ ಛಾಯಾಚಿತ್ರಗಳನ್ನು ಕಳುಹಿಸಿದಲ್ಲಿ ನೀವು ಸ್ತಂಭೀಭೂತರಾಗುತ್ತೀರಿ. ಸಾಮಾಜಿಕ ದೂರವನ್ನು ಕಾಯ್ದುಕೊಳ್ಳುವುದು ನಮಗೆ ನಿಲುಕದ ವಿಲಾಸಿ ಜೀವನವೇ ಸರಿ”, ಎನ್ನುತ್ತಾರೆ ಬಾಳಾಸಾಹೇಬ್‌.

“ಗುಡಿಸಲುಗಳನ್ನು ಪರಸ್ಪರ ಹತ್ತಿರದಲ್ಲಿರುವಂತೆ ನಿರ್ಮಿಸಲಾಗಿದೆ. ಜೋಪಡಿಗಳಲ್ಲಾಗಲಿ, ಹೊಲಗಳಲ್ಲಾಗಲಿ ಇತರೆ ಕೆಲಸಗಾರರಿಂದ ಒಂದು ಮೀಟರ್‌ ಅಂತರವನ್ನು ಕಾಯ್ದುಕೊಳ್ಳುವುದು ಅಸಾಧ್ಯ. ಪ್ರತಿ ಸಂಜೆ ನಾವು ನೀರನ್ನು ತುಂಬಬೇಕು. ೨೫ ಹೆಂಗಸರು ಒಂದೇ ನಲ್ಲಿಯಿಂದ ನೀರನ್ನು ಹಿಡಿಯುತ್ತಾರೆ. ಆ ಸೀಮಿತ ನೀರನ್ನೇ ಸ್ವಚ್ಛತಾ ಕಾರ್ಯಗಳಿಗೆ, ಅಡಿಗೆಗೆ ಮತ್ತು ಕುಡಿಯಲು ಬಳಸಬೇಕು”, ಎಂದರು ಪಾರ್ವತಿ.

ಅತ್ಯಂತ ಕೆಟ್ಟ ಪರಿಸ್ಥಿತಿಯಿದ್ದಾಗ್ಯೂ ನಾವೇನೂ ಮಾಡುವಂತಿಲ್ಲ. “ಸಕ್ಕರೆ ಕಾರ್ಖಾನೆಯ ಮಾಲೀಕರು ಹೆಚ್ಚು ಪ್ರಭಾವಶಾಲಿಗಳು. ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ, ನಾವ್ಯಾರೂ ಅವರ ವಿರುದ್ಧ ಮಾತನಾಡುವ ಧೈರ್ಯವನ್ನು ತೋರಲಾರೆವು”, ಎನ್ನುತ್ತಾರೆ ಖೇಡ್ಕರ್‌.

The migrant workers install temporary shacks on the fields, where they will spend six months at a stretch. They cook food in the open and use the fields as toilets. Social distancing is a luxury we cannot afford', says Balasaheb Khedkar
PHOTO • Parth M.N.
The migrant workers install temporary shacks on the fields, where they will spend six months at a stretch. They cook food in the open and use the fields as toilets. Social distancing is a luxury we cannot afford', says Balasaheb Khedkar
PHOTO • Parth M.N.

ವಲಸೆ ಕಾರ್ಮಿಕರು ಜಮೀನುಗಳಲ್ಲಿ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿ, ಆರು ತಿಂಗಳವರೆಗೂ ಅಲ್ಲಿ ನೆಲೆಸುತ್ತಾರೆ. ಬಯಲಿನಲ್ಲಿ ಅಡಿಗೆ ಮಾಡಿಕೊಳ್ಳುವ ಅವರು, ಜಮೀನುಗಳನ್ನು ಶೌಚಾಲಯಗಳಾಗಿ ಬಳಸುತ್ತಾರೆ. ‘ಸಾಮಾಜಿಕ ಅಂತರವು ನಮಗೆ ವಿಲಾಸಿ ಜೀವನವೇ ಸರಿ. ನಮಗೆ ಅದು ನಿಲುಕದು’ ಎನ್ನುತ್ತಾರೆ ಬಾಳಾಸಾಹೇಬ್‌ ಖೇಡ್ಕರ್‌ (ಕಡತದಲ್ಲಿನ ಛಾಯಾಚಿತ್ರ)

ಕಬ್ಬಿನ ಕೆಲಸಗಳನ್ನು ನಿರ್ವಹಿಸುವ ವಲಸೆ ಕಾರ್ಮಿಕರ ಕುಟುಂಬಗಳ ಸಮಸ್ಯೆಗಳ ಬಗ್ಗೆ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬೀಡ್‌ನ ನಿವಾಸಿಯಾದ ದೀಪಕ್‌ ನಗರ್‌ಗೋಜೆ, ಪ್ರತಿಯೊಂದು ಸಕ್ಕರೆ ಕಾರ್ಖಾನೆಯೂ ೮ ಸಾವಿರ ಕೆಲಸಗಾರರನ್ನು ನೇಮಿಸಿಕೊಳ್ಳುತ್ತದೆ ಎಂದು ತಿಳಿಸಿದರು. ಇಂದು ೭೯ ಸಕ್ಕರೆ ಕಾರ್ಖಾನೆಗಳು ಕೆಲಸವನ್ನು ನಿರ್ವಹಿಸುತ್ತಿವೆಯೆಂದರೆ, ೬ ಲಕ್ಷ ಕೆಲಸಗಾರರಿಗೆ ಸಾಮಾಜಿಕ ದೂರವನ್ನಾಗಲಿ, ಸಾಕಷ್ಟು ನೈರ್ಮಲ್ಯವನ್ನಾಗಲಿ ಪಾಲಿಸಲು ಶಕ್ಯವಾಗುತ್ತಿಲ್ಲವೆಂದೇ ಅರ್ಥ. “ಇದು ಕೆಲಸಗಾರರೆಡೆಗಿನ ಅಮಾನವೀಯತೆಯಲ್ಲದೆ ಬೇರೇನೂ ಅಲ್ಲ. ಸಕ್ಕರೆ ಕಾರ್ಖಾನೆಗಳು ತಕ್ಷಣವೇ ಅವರನ್ನು ಆ ಕೆಲಸದಿಂದ ಮುಕ್ತಗೊಳಿಸಬೇಕಲ್ಲದೆ, ಅವರ ಕೂಲಿಯನ್ನು ಕಡಿತಗೊಳಿಸಬಾರದು”, ಎನ್ನುತ್ತಾರೆ ಆತ.

ಸಾಕಷ್ಟು ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ; ಅಗತ್ಯವಿರುವಷ್ಟು ನೀರನ್ನು ಮತ್ತು ಕೈಗಳ ಸ್ವಚ್ಛತೆಗಾಗಿ ಸ್ಯಾನಿಟೈಜ಼ರ್‌ಗಳನ್ನು ಒದಗಿಸುವ ಜೊತೆಗೆ, ಕಾರ್ಖಾನೆಗಳು ಕೆಲಸಗಾರರ ವಸತಿ ಹಾಗೂ ಊಟಕ್ಕೆ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂಬ ಅಂಶಗಳನ್ನು ಈ ನಿರ್ದೇಶನದಲ್ಲಿ ತಿಳಿಸಲಾಗಿದ್ದು, ಕೆಲಸಗಾರರು ಸಾಮಾಜಿಕ ದೂರವನ್ನು ಕಾಯ್ದುಕೊಳ್ಳುವುದನ್ನು ಅವು ಖಚಿತಪಡಿಸಿಕೊಳ್ಳಬೇಕೆಂದು ಸಹ ನಿರ್ದೇಶನದಲ್ಲಿ ಸೂಚಿಸಲಾಗಿದೆ.

ಉಪಲೇಖ (postscript): ಕಾರ್ಖಾನೆಗಳು ಈ ಯಾವುದೇ ಸೌಕರ್ಯಗಳನ್ನು ಒದಗಿಸದ ಕಾರಣ, ೨೩ ಕಾರ್ಖಾನೆಗಳಲ್ಲಿನ ಕೂಲಿಗಾರರು ಮಾರ್ಚ್‌ ೨9ರ ಭಾನುವಾರದಂದು, ಕೆಲಸವನ್ನು ನಿಲ್ಲಿಸಿದರು.

ತನ್ನ ಕಾರ್ಖಾನೆಯಲ್ಲಿನ ಸ್ಥಳೀಯ ಕಬ್ಬಿನ ಕೆಲಸಗಾರರು ಕೆಲಸವನ್ನು ಮುಂದುವರಿಸಿದ್ದಾರೆಂದು ಬಾಳಾಸಾಹೇಬ್‌ ಖೇಡ್ಕರ್‌ ತಿಳಿಸಿದರಾದರೂ. ಆತ ಹಾಗೂ ಆತನ ಪತ್ನಿಯಂತಹ ವಲಸೆ ಕಾರ್ಮಿಕರು ಎರಡು ದಿನಗಳ ಹಿಂದೆ ಕೆಲಸವನ್ನು ನಿಲ್ಲಿಸಿದ್ದಾರೆ. “ನಮ್ಮಲ್ಲಿ ಕೊರೊನ ವೈರಸ್‌ ಇದೆಯೆಂಬ ಭೀತಿಯಿಂದ, ಸ್ಥಳೀಯ ಪಡಿತರ ಅಂಗಡಿಗಳು ನಮ್ಮಿಂದ ದೂರವಿರಲು ಬಯಸುತ್ತವೆ, ಇದು ಮತ್ತಷ್ಟು ಕಷ್ಟಕ್ಕಿಟ್ಟುಕೊಂಡಿದೆ. ಖಾಲಿ ಹೊಟ್ಟೆಯಲ್ಲಿ ನಾವು ಈ ಕೆಲಸವನ್ನು ನಿರ್ವಹಿಸಲಾರೆವು. ಕಾರ್ಖಾನೆಯು ನಮಗೆ ಮಾಸ್ಕ್‌ ಅಥವ ಸ್ಯಾನಿಟೈಜ಼ರ್‌ ಅನ್ನು ಒದಗಿಸಿರುವುದಿಲ್ಲ. ಕೊನೆಯ ಪಕ್ಷ ನಮ್ಮ ಊಟದ ವ್ಯವಸ್ಥೆಯನ್ನಾದರು ಅವು ಮಾಡಬೇಕಿತ್ತು”, ಎನ್ನುತ್ತಾರೆ ಆತ.

ಅನುವಾದ: ಶೈಲಜ ಜಿ. ಪಿ.

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.