45 ವರ್ಷದ ಅಪ್ಪಾಸಾಹೇಬ್ ಕೋಥುಳೆಗೆ ತನ್ನೆರಡು ಎತ್ತುಗಳನ್ನು ಮಾರುವ ಇಚ್ಛೆ ಇದೆ.  ಇದು ಅವನಿಂದ ಸಾಧ್ಯವಾಗುತ್ತಿಲ್ಲ. 28 ರ ಕಲೀಮ್ ಕುರೇಶಿಗೆ ಎತ್ತುಗಳನ್ನು ಕೊಂಡುಕೊಳ್ಳುವ ಬಯಕೆ ಇದೆ. ಆದರೆ ಅದೂ ಅವನಿಂದ ಸಾಧ್ಯವಿಲ್ಲ.    

ಕೋಥುಳೆ, ಕಳೆದ ಒಂದು ತಿಂಗಳಿಂದ ಬೇರೆ ಬೇರೆ ಸಂತೆಗಳಿಗೆ ಅಲೆದಾಡುತ್ತಲೇ ಇದ್ದಾನೆ. ಮರಾಠಾವಾಡದ ಔರಂಗಾಬಾದ್ ನಗರದಿಂದ ಸುಮಾರು 40 ಕಿಲೋಮೀಟರು ದೂರದಲ್ಲಿರುವ ತನ್ನ ಹಳ್ಳಿಯಾದ ದೇವಗಾಂವ್ ನ ಆಸುಪಾಸಿನಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆಗೆ ಆತ ಹೋಗಿದ್ದಾನೆ. ಇವತ್ತು ಅದುಲ್ ಸಂತೆಗೆ ಕೂಡ ಬಂದಿದ್ದಾನೆ. ಇಲ್ಲಿ ಪ್ರತಿ ಮಂಗಳವಾರ ಸಂತೆ ನಡೆಯುತ್ತದೆ. ತನ್ನ ತಲೆಗೆ ರುಮಾಲನ್ನು ಕಟ್ಟಿಕೊಂಡು ಸಂತೆಯಲ್ಲಿ ನಿಂತಿರುವ ಈತ, “ನನ್ನ ಮಗನ ಮದುವೆ ಗೊತ್ತಾಗಿದೆ. ಅದಕ್ಕೆ ಹಣ ಬೇಕು. ಜೋಡಿ ಎತ್ತುಗಳಿಗೆ ಯಾರೊಬ್ಬರೂ 10,000 ರೂಪಾಯಿಗಳಿಗಿಂತ ಹೆಚ್ಚು ಕೊಡುತ್ತಿಲ್ಲ. ಇವುಗಳಿಗೆ ಕನಿಷ್ಠ 15,000 ರೂಪಾಯಿಗಳನ್ನಾದರೂ ಕೊಡಬೇಕು”, ಎಂದು ಹೇಳುತ್ತಾನೆ.   

ಈ ಕಡೆ, ಔರಂಗಾಬಾದಿನ ಶಿಲ್ಲಾಖಾನಾ ಪ್ರದೇಶದಲ್ಲಿ ಕಲೀಮ್ ಕುರೇಶಿ ತನ್ನ ಮಾಂಸದ ಅಂಗಡಿ ಮುಂದೆ ಸುಮ್ಮನೆ ಕುಳಿತಿದ್ದಾನೆ. ನಿಧಾನವಾಗಿ ಸಾಯುತ್ತಿರುವ ತನ್ನ ವ್ಯಾಪಾರವನ್ನು ಹೇಗೆ ಮತ್ತೆ ಹಳಿಗೆ ತರಬೇಕು ಎಂದು ಚಿಂತಿಸುತ್ತಿದ್ದಾನೆ ಈತ. “ದಿನಕ್ಕೆ ಏನಿಲ್ಲವೆಂದರೂ ಸುಮಾರು 20,000 ರೂಪಾಯಿಗಳ ವ್ಯಾಪಾರ ಆಗ್ತಾ ಇತ್ತು (ಅಂದರೆ ತಿಂಗಳಿಗೆ 70-80 ಸಾವಿರ ರೂಪಾಯಿ ಗಳಿಕೆ). ಆದರೆ ಕಳೆದೆರಡು ವರ್ಷಗಳಿಂದ ಅದರ ಕಾಲು ಭಾಗ ಸಹಿತ ವ್ಯಾಪಾರ ಆಗ್ತಾ ಇಲ್ಲ”, ಎನ್ನುವುದು ಅವನ ವ್ಯಥೆ. 

PHOTO • Parth M.N.

 ``ಈ ಎತ್ತುಗಳನ್ನು ಬೇರೆ ಬೇರೆ ಸಂತೆಗಳಿಗೆ ತೆಗೆದುಕೊಂಡು ಹೋಗಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ’’, ಎನ್ನುತ್ತಿರುವ ದೇವಗಾಂವ್ ಪ್ರದೇಶದ ರೈತ ಅಪ್ಪಾಸಾಹೇಬ್ ಕೋಥುಳೆ. ಇಲ್ಲಿಯ ಬೇರೆ ರೈತರೂ ಕೂಡ ತಮ್ಮ ಶಕ್ತ್ಯಾನುಸಾರಕ್ಕಿಂತಲೂ ಹೆಚ್ಚಿನ ಹಣವನ್ನು ಈ ನಿಟ್ಟಿನಲ್ಲಿ ಖರ್ಚು ಮಾಡುತ್ತಿದ್ದಾರೆ.

ಇಲ್ಲಿ ಗೋಮಾಂಸ ನಿಷೇಧವು ಜಾರಿಗೆ ಬಂದು ಎರಡು ವರ್ಷಕ್ಕಿಂತ ಸ್ವಲ್ಪ ಹೆಚ್ಚಿನ ಅವಧಿಯು ಕಳೆದಿದೆ. 2014 ರ ಮಹಾರಾಷ್ಟ್ರದ ಚುನಾವಣೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನಾವೀಸ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರುವ ಮೊದಲೇ ಹಳೆಯ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ (ಎನ್. ಸಿ. ಪಿ) ಆಡಳಿತಗಳಲ್ಲಿ ವ್ಯವಸಾಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಾಕಷ್ಟಿದ್ದವು. ಏರುತ್ತಿರುವ ಬೆಲೆಗಳು, ಧಾನ್ಯಕ್ಕೆ ಸಿಗುವ ಬೆಲೆಯಲ್ಲಿನ ಏರಿಳಿತ, ನೀರಿನ ಅವ್ಯವಸ್ಥೆ ಮತ್ತಿತರ ಸಮಸ್ಯೆಗಳೆಲ್ಲ ಒಟ್ಟುಗೂಡಿ ಸಾವಿರಾರು ರೈತರನ್ನು ಆತ್ಮಹತ್ಯೆ ಮಾಡಿಕೊಳ್ಳುವತ್ತ ನೂಕಿವೆ. ಇನ್ನು ಮಾರ್ಚ್ 2015 ರಲ್ಲಿ ಗೋಮಾಂಸ ನಿಷೇಧವನ್ನು ಹಸುಗಳಿಂದ ಎತ್ತು ಮತ್ತು ಗೂಳಿಗಳಿಗೂ ಅನ್ವಯವಾಗುವಂತೆ ಮಾಡಿದ ದೇವೇಂದ್ರ ಫಡ್ನಾವಿಸ್ ರೈತರ ಸಂಕಷ್ಟಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. 

ಗ್ರಾಮೀಣ ಪ್ರದೇಶದ ಅರ್ಥವ್ಯವಸ್ಥೆಯಲ್ಲಿ ಹೈನುಗಾರಿಕೆಯ ಪಾತ್ರವು ಬಲು ಮುಖ್ಯವಾದದ್ದು. ಹೀಗಾಗಿ ಇದರ ಮೇಲೆ ಅವಲಂಬಿತವಾಗಿದ್ದ ವ್ಯಾಪಾರಗಳ ಮೇಲೆ ಈ ನಿಷೇಧವು ನೇರವಾದ ಪರಿಣಾಮವನ್ನು ಬೀರಿರುವುದು ಸತ್ಯ. ದಶಕಗಳಿಂದ ಪ್ರಾಣಿಗಳನ್ನು ವಿಮೆಯ ರೂಪದಲ್ಲಿ ಬಳಸುತ್ತಿದ್ದ ರೈತಾಪಿ ವರ್ಗದವರ ಮೇಲೂ ಇದು ಪರಿಣಾಮ ಬೀರಿದೆ. ಮದುವೆ, ಮುಂಜಿ, ಔಷಧ, ಸಾಗುವಳಿ... ಹೀಗೆ ತುರ್ತಾಗಿ ದೊಡ್ಡ ಮೊತ್ತದ ಹಣದ ಅವಶ್ಯಕತೆ ಇದ್ದಾಗಲೆಲ್ಲ ಇವುಗಳನ್ನು ಮಾರಿ ಹಣ ಹೊಂದಿಸಿಕೊಳ್ಳುತ್ತಿದ್ದ ರೈತಾಪಿ ವರ್ಗವಿದು.    

ಐದೆಕರೆ ಸಾಗುವಳಿ ಭೂಮಿಯನ್ನು ಹೊಂದಿರುವ ಕೋಥುಳೆ ಅದರಲ್ಲಿ ಹತ್ತಿ ಮತ್ತು ಗೋಧಿಯನ್ನು ಬೆಳೆಯುತ್ತಿದ್ದಾರೆ. ಈ ನಿಷೇಧ ಆತನ ಲೆಕ್ಕಾಚಾರವನ್ನೆಲ್ಲ ತಲೆಕೆಳಗಾಗಿಸಿದೆ. “ಈ ಎತ್ತುಗಳು ಕೇವಲ ನಾಲ್ಕು ವರ್ಷ ಹಳೆಯವು. ಮೊದಲಾಗಿದ್ದರೆ ಇದಕ್ಕೆ 25,000 ರೂಪಾಯಿ ಆರಾಮಾಗಿ ಸಿಕ್ಕಿರೋದು. ಹತ್ತು ವರ್ಷಗಳವರೆಗೆ  ಸಾಗುವಳಿಗಾಗಿ ಇವುಗಳನ್ನು ಬಳಸಬಹುದು”, ಎನ್ನುತ್ತಾರೆ ಕೋಥುಳೆ.  

ಜಾನುವಾರುಗಳ ಖರೀದಿದಾರರಿಗಾಗಿ ಹುಡುಕುತ್ತಾ ಹತಾಶರಾದ ಮರಾಠಾವಾಡದ ಜನ 

ಬೆಲೆಗಳು ತುಂಬಾ ಇಳಿದಿದ್ದರೂ ಹಸುಗಳನ್ನು ಕೊಳ್ಳಲು ಮಾತ್ರ ಸದ್ಯ ಯಾರೂ ತಯಾರಿಲ್ಲ. ಅವುಗಳನ್ನು ಕೊಂಡರೆ ಅದರ ಮಾಂಸ ಮಾರುವುದು ತುಂಬಾ ಕಷ್ಟವೆಂದು ಅವರಿಗೆ ತಿಳಿದಿದೆ. “ಈ ಜಾನುವಾರುಗಳನ್ನು ನನ್ನ ಊರಿನಿಂದ ಬೇರೆ ಬೇರೆ ಸಂತೆಗಳಿಗೆ ಕೊಂಡೊಯ್ಯಲು ನಾನು ಸಾವಿರಾರು ರೂಪಾಯಿಗಳನ್ನು ವ್ಯಯಿಸಿದ್ದೇನೆ. ಅದುಲ್ ನನ್ನ ಊರಿನಿಂದ ನಾಲ್ಕು ಕಿಲೋಮೀಟರುಗಳ ದೂರದಲ್ಲಿದೆ. ಹೀಗಾಗಿ ಇಲ್ಲಿಗೆ ಜಾನುವಾರುಗಳ ಜೊತೆ ನಡೆದುಕೊಂಡೇ ಬಂದುಬಿಟ್ಟೆ. ಬೇರೆ ಸಂತೆಗಳೆಲ್ಲ ಸುಮಾರು 25 ಕಿಲೋಮೀಟರುಗಳ ಅಂತರದಲ್ಲಿದೆ. ಅಲ್ಲಿಗೆ ಹೋಗಲು ನಾನು ಬಂಡಿಯನ್ನು ಬಾಡಿಗೆಗೆ ಪಡೆಯಲೇಬೇಕು. ಮೊದಲೇ ಸಿಕ್ಕಾಪಟ್ಟೆ ಸಾಲ ತಲೆ ಮೇಲಿದೆ. ಹೇಗಾದರೂ ಮಾಡಿ, ಇವುಗಳನ್ನು ನಾನು ಮಾರಲೇ ಬೇಕು”, ಅಂತನ್ನುತ್ತಾನೆ ಕೋಥುಳೆ.    

ಕೊಳ್ಳುವ ಗಿರಾಕಿಗಳ ಮೇಲೊಂದು ಕಣ್ಣಿಟ್ಟೇ ನಮ್ಮ ಜೊತೆಯಲ್ಲಿ ಮಾತನಾಡುತ್ತಾ ನಡೆದುಕೊಂಡು ಬರುತ್ತಿದ್ದಾನೆ ಕೋಥುಳೆ. ಅಂದಹಾಗೆ ಈಗ ಮಧ್ಯಾಹ್ನದ ಒಂದು ಗಂಟೆ. ನೆತ್ತಿ ಇನ್ನಿಲ್ಲದಂತೆ ಸುಡುತ್ತಿದೆ. ಆತ ಇಲ್ಲಿಗೆ ಬಂದಿದ್ದು ಬೆಳಿಗ್ಗೆ ಒಂಬತ್ತಕ್ಕೆ. “ಬಂದಾಗಿನಿಂದ ನಾನು ಒಂದು ಹನಿ ನೀರು ಸಹ ಕುಡಿದಿಲ್ಲ ಸ್ವಾಮಿ. ನೀರಿಗಾಗಿ ನಾನೇನಾದರೂ ಇವುಗಳನ್ನು ಬಿಟ್ಟು ಒಂದೈದು ನಿಮಿಷ ಹೋದರೆ, ಅದೇ ಸಮಯದಲ್ಲಿ ಯಾರಾದರೂ ಗಿರಾಕಿ ಬಂದು ಹೋದರೆ ಏನು ಮಾಡಲಿ?”, ಎನ್ನುವ ಅವನಲ್ಲಿ ಸಿಗುವ ಒಂದಿಬ್ಬರು ಗಿರಾಕಿಗಳನ್ನೂ ಕಳೆದುಕೊಳ್ಳುವ ಆತಂಕವಿದೆ. 

ಹಾಗೆಂದು ಸಂತೆಯಲ್ಲಿ ಒದ್ದಾಡುತ್ತಿರುವುದು ಇವನೊಬ್ಬನೇ ಇಲ್ಲ. ಮಾರುಕಟ್ಟೆಯು ಜಾನುವಾರು ಮತ್ತು ರೈತರಿಂದ ತುಂಬಿಹೋಗಿದೆ. 45 ಡಿಗ್ರಿಯ ಬಿರುಬಿಸಿಲಿನಲ್ಲಿ ನಿಂತಿರುವ ರೈತರು ಹಸುಗಳನ್ನು ಮಾರಲು ತಮಗೆ ತಿಳಿದ ಎಲ್ಲಾ ವಿದ್ಯೆಯನ್ನು ಉಪಯೋಗಿಸುತ್ತಿದ್ದಾರೆ. ಅದುಲ್ ನಿಂದ 15 ಕಿಲೋಮೀಟರುಗಳ ದೂರದಲ್ಲಿರುವ ವಾಕುಲ್ನಿ ಗ್ರಾಮದ ಜನಾರ್ಧನ ಗೀತೆ (65), ತನ್ನ ಹಸುಗಳ ಅಂದವನ್ನು ಹೆಚ್ಚಿಸಲು ಅವುಗಳ ಕೊಂಬುಗಳನ್ನು ಚೂಪು ಮಾಡಿಸಿಕೊಂಡು ಬಂದಿದ್ದಾನೆ. ಭಂಡಾಸ್ ಜಾಧವ್ ನ ಬಳಿ ಈ ಕೊಂಬುಗಳನ್ನು ಚೂಪಾಗಿಸುವ ಯಂತ್ರವೊಂದಿದೆ. ಇದಕ್ಕಾಗಿ ಪ್ರತಿ ಪ್ರಾಣಿಗೆ ಈತ 200 ರೂಪಾಯಿಯ ದರವನ್ನು ನಿಗದಿಪಡಿಸಿದ್ದಾನೆ. ಗೀತೆಯ ಮಾತುಗಳಲ್ಲೇ ಹೇಳುವುದಾದರೆ, “ನಾನು ಇವುಗಳನ್ನು 65,000 ರೂಪಾಯಿಗಳಿಗೆ ಕೊಂಡಿದ್ದೆ.  ಇವುಗಳಿಗೀಗ 40,000 ರೂಪಾಯಿ ಸಿಕ್ಕರೂ ನಾನು ಕೊಟ್ಟುಬಿಡಲು ಸಿದ್ಧ”, ಎನ್ನುತ್ತಿದ್ದಾನೆ ಈತ.        

ಕೋಥುಳೆಯ ಪ್ರಕಾರ ನೀರಿನ ತೀವ್ರ ಅಭಾವ ಮತ್ತು ಏರುತ್ತಲೇ ಇರುವ ಮೇವಿನ ದರದಿಂದ ಹೈನುಗಳನ್ನು ಸಾಕುವುದು ದುಸ್ತರವಾಗುತ್ತಿದೆ. ಮೇಲಾಗಿ ಆಕಳುಗಳನ್ನು ಸಾಕಲು ಗೋಶಾಲೆಯಂತಹ ವ್ಯವಸ್ಥೆಗಳೂ ಇಲ್ಲದಂತಾಗಿದೆ. ಫಡ್ನಾವೀಸ್ ನಿಷೇಧವನ್ನು  ಜಾರಿಗೆ ತಂದಾಗ ಆಕಳುಗಳನ್ನು ನೋಡಿಕೊಳ್ಳಲು ಗೋಶಾಲೆಯಂತಿನ ವ್ಯವಸ್ಥೆಗಳನ್ನು ಮಾಡುತ್ತೇವೆ. ಇದರಿಂದಾಗಿ ಸಾಗುವಳಿ ಸಂಬಂಧಿ ಕೆಲಸಗಳಿಗಾಗಿ ಬಳಸಲು ಯೋಗ್ಯವಲ್ಲದ ಆಕಳುಗಳ ಖರ್ಚನ್ನು ರೈತರು ಸಂಭಾಳಿಸುವ ಬದಲು ಜಾನುವಾರುಗಳನ್ನು ಇಲ್ಲಿ ನೀಡಬಹುದು ಎಂದು ಹೇಳಿದ್ದರು.  ಆದರೆ ಹಾಗಾಗಲೇ ಇಲ್ಲ. ಇದರಿಂದ ರೈತರ ಕಷ್ಟಗಳು ಅಕ್ಷರಶಃ ದುಪ್ಪಟ್ಟಾಗಿಬಿಟ್ಟಿವೆ. ಅತ್ತ ಜಾನುವಾರುಗಳನ್ನು ಮಾರಲು ಆಗುತ್ತಿಲ್ಲ. ಇತ್ತ ಉಳುಮೆಗೆ ಯೋಗ್ಯವಲ್ಲದ ವಯಸ್ಸಾದ ಹಸುಗಳನ್ನು ಸಾಕುವ ಖರ್ಚನ್ನು ರೈತರಿಗೆ ನೀಗಿಸಲೂ ಆಗುತ್ತಿಲ್ಲ ಎಂಬಂತಾಗಿದೆ.    

“ಜಾನುವಾರುಗಳಿಗೆ ನೀರು ಮತ್ತು ಮೇವಿಗಾಗಿ ವಾರಕ್ಕೆ ಏನಿಲ್ಲವೆಂದರೂ 1000 ರೂಪಾಯಿಗಳ ಖರ್ಚಿದೆ. ನಮ್ಮ ಮಕ್ಕಳಿಗೆ ಗಂಜಿ ದಕ್ಕಿಸಲೇ ನಮ್ಮಿಂದ ಆಗುತ್ತಿಲ್ಲ, ಇನ್ನು ಹಸುಗಳನ್ನು ಹೇಗೆ ಸಾಕೋದು?”, ಎಂದು ಕೇಳುತ್ತಿದ್ದಾನೆ ಕೋಥುಳೆ. 

ಈ ಗೋಮಾಂಸ ನಿಷೇಧವು ಗ್ರಾಮೀಣ ಪ್ರದೇಶಗಳಲ್ಲಿರುವ ಎಷ್ಟೋ ಜನರಿಗೆ ದೊಡ್ಡ  ಪೆಟ್ಟನ್ನೇ ನೀಡಿದೆ. ಚರ್ಮ ಹದ ಮಾಡುವ ದಲಿತರು, ಜಾನುವಾರುಗಳನ್ನು ಸಾಗಿಸುವವರು, ಮಾಂಸ ಮಾರುವವರು, ಮೂಳೆಯಿಂದ ಔಷಧಿ ತಯಾರಿಸುವವರು… ಹೀಗೆ ಎಲ್ಲರೂ ಈ ನಡೆಯಿಂದ ಹೊಡೆತವನ್ನು ತಿಂದವರೇ ಆಗಿದ್ದಾರೆ. 

ಈ ನಿಷೇಧದಿಂದಾಗಿ ಆದಾಯವು ಪಾತಾಳ ಕಂಡಿದೆ ಅಂತನ್ನುತ್ತಾನೆ ಮಾಂಸದಂಗಡಿ ಇಟ್ಟುಕೊಂಡ ಕಲೀಮ್ ಕುರೇಶಿ ಮತ್ತು ಹಮಾಲ ಅನೀಸ್ ಕುರೇಶಿ. 

ನಿಷೇಧಕ್ಕೂ ಮೊದಲು ಮಹಾರಾಷ್ಟ್ರದಲ್ಲಿ ಪ್ರತಿವರ್ಷ ಸುಮಾರು 3,00,000 ಎತ್ತುಗಳನ್ನು ಕಡಿಯಲಾಗುತ್ತಿತ್ತು. ಈಗ ಈ ಮಾಂಸದ ಅಂಗಡಿಗಳು ಸ್ತಬ್ಧವಾಗಿವೆ. ಈ ಸಮುದಾಯದ ಜನರ ಆರ್ಥಿಕ ಸ್ಥಿತಿಯು ಹದಗೆಟ್ಟಿದೆ. ಸುಮಾರು 10,000 ದಷ್ಟು ಕುರೇಶಿಗಳಿರುವ  (ಪ್ರಾಣಿಗಳನ್ನು ಕಡಿಯುವ ಮತ್ತು ಮಾಂಸವನ್ನು ಮಾರಾಟ ಮಾಡುವ ವ್ಯಾಪಾರದಲ್ಲಿ ತೊಡಗಿರುವ ಸಮುದಾಯ) ಶಿಲ್ಲಾಖಾನಾದಲ್ಲಿ ಇದರ ಬಿಸಿ ತುಸು ಜೋರಾಗಿ ಮುಟ್ಟಿದೆ.  ಇದರಿಂದಾಗಿ ಕಲೀಮ್ ನಿಗೆ ತನ್ನ ಅಂಗಡಿಯಲ್ಲಿದ್ದ ಆಳುಗಳನ್ನು ಕೆಲಸದಿಂದ ತೆಗೆದು ಹಾಕುವ ಸ್ಥಿತಿ ಬೇರೆ ಬಂದಿತ್ತು. “ನನಗೂ ಸಂಸಾರ ಇದೆ ಸ್ವಾಮಿ, ಬೇರೆ ಏನು ಮಾಡಲು ಸಾಧ್ಯವಿತ್ತು ನನಗೆ?”, ಉಂಟಾದ ಪರಿಸ್ಥಿತಿಯಿಂದ ಅಸಹಾಯಕನಾದ ಕಲೀಮ್ ರ ಪ್ರಶ್ನೆಯಿದು.     

41 ರ ಪ್ರಾಯದ ಅನೀಸ್ ಕುರೇಷಿಯದ್ದೂ ಇದೇ ಕಥೆ. “ನಾನು ದಿನಕ್ಕೆ 500 ರೂಪಾಯಿಯಾದ್ರೂ ದುಡೀತಿದ್ದೆ. ಈಗ ಅದು-ಇದು ಅಂತ ಕೈಗೆ ಸಿಕ್ಕ ಕೆಲಸ ಮಾಡುತ್ತಿರುತ್ತೇನೆ. ಕೆಲವು ದಿನಗಳಲ್ಲಂತೂ ನನಗೆ ಕೆಲಸವೇ ಇರುವುದಿಲ್ಲ’’, ಎಂದು ಹತಾಶೆಯಿಂದ ನುಡಿಯುತ್ತಿದ್ದಾನೆ ಆತ.       

ನಿಷೇಧಕ್ಕೂ ಮೊದಲೇ ವ್ಯವಸಾಯಕ್ಕೆ ಸಂಬಂಧಿಸಿದ ಬೇರೆ ಬೇರೆ ಕಾರಣಗಳಿಂದ ವ್ಯಾಪಾರಕ್ಕೆ ಹೊಡೆತ ಬಿದ್ದಿತ್ತು. ಗ್ರಾಮೀಣ ಪ್ರದೇಶಗಳ ಜನರು ದೊಡ್ಡ ಸಂಖ್ಯೆಯಲ್ಲಿ ಹಳ್ಳಿಯಿಂದ ನಗರಗಳತ್ತ ಉದ್ಯೋಗಗಳನ್ನು ಹುಡುಕಿಕೊಂಡು ಹೋಗಲು ಶುರು ಮಾಡಿದ್ದರು. ಇದರಿಂದಾಗಿ ಬೀಫ್ ತಿನ್ನುವವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಆಯಿತು ಎಂದು ಕಲೀಮ್ ಹೇಳುತ್ತಾನೆ. ಈಗ ಅವನ ಬಳಿ ಉಳಿದಿರುವ ಆಸ್ತಿಯೆಂದರೆ ತನ್ನ ಮುತ್ತಜ್ಜನ ಕಾಲದಿಂದಲೂ ಇರುವ ಒಂದು ಅಂಗಡಿ ಮಾತ್ರ. ಆತ ಹೇಳುವಂತೆ, “ನಮ್ಮ ಜನ ಹೆಚ್ಚು ಓದಿದವರಲ್ಲ (ಹೀಗಾಗಿ ಏಕಾಏಕಿ ಬೇರೆ ಉದ್ಯೋಗಗಳನ್ನು ಅವಲಂಬಿಸುವುದು ಕಷ್ಟ) ನಾವೀಗ ಎಮ್ಮೆ ಮಾಂಸ ಮಾರುತ್ತೇವೆ. ಆದರೆ ಜನ ಅದನ್ನು ಅಷ್ಟಾಗಿ ಇಷ್ಟಪಡಲ್ಲ; ಅಲ್ಲದೆ ಬೇರೆ ಅಂಗಡಿಗಳ ಸ್ಪರ್ಧೆಯೂ ಸಾಕಷ್ಟಿದೆ.”      

ಕುರೇಶಿ ಮತ್ತು ಇತರ ಸಮುದಾಯಗಳ ದಲಿತರನ್ನೂ ಒಳಗೊಂಡಂತೆ ಇವರೆಲ್ಲರ ಆಹಾರದ ಪ್ರಮುಖ ಭಾಗವೆಂದರೆ ಹಸುವಿನ ಮಾಂಸ. ಇದು ಕಡಿಮೆ ಬೆಲೆಗೆ ಪ್ರೊಟೀನ್ ಪೂರೈಸುವ ಮೂಲವೂ ಹೌದು. “ಇದರ ಬದಲು ಚಿಕನ್ ಅಥವಾ ಮಟನ್ ತಿನ್ನುವುದೆಂದರೆ ಮೂರು ಪಟ್ಟು ಖರ್ಚು ಹೆಚ್ಚಾದಂತೆಯೇ ಸರಿ”, ಇದು ಕಲೀಮ್ ನ ಅಭಿಪ್ರಾಯ.   

PHOTO • Parth M.N.

(ಬಲ) ತನ್ನ ದಯ್ಯಗಾಂವ್ ಹಳ್ಳಿಗೆ ಮರಳುವ ಮೊದಲು ಏಳರಲ್ಲಿ ಉಳಿದಿರುವ ಕೊನೆಯ ಎತ್ತನ್ನು ಮಾರುವ ನಿರೀಕ್ಷೆಯಲ್ಲಿ ನಿಂತಿರುವ ಧ್ಯಾನದೇವ್ ಗೋರೆ.  

ಇತ್ತ ಅದುಲ್ ನ ಸಂತೆಯಲ್ಲಿ ಗೀತೆಯ (ತನ್ನ ಹಸುವಿನ ಕೊಂಬುಗಳನ್ನು ಚೂಪು ಮಾಡಿಸಿದ್ದ) ಹಸುಗಳನ್ನು ಕೊಳ್ಳಲು ಗ್ರಾಹಕನೊಬ್ಬ ಒಪ್ಪಿಕೊಂಡಿದ್ದಾನೆ. ಹಸುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾದ ಕೆಲವೇ ರೈತರ ಸಾಲಿಗೆ ಸೇರಿದ ಗೀತೆಯ ಮುಖದ ಮೇಲೊಂದು ಈಗ ಕಿರುನಗೆಯು ಮೂಡಿದೆ. ಅದನ್ನು ನೋಡಿ ಸಹಜವಾಗಿಯೇ ಗೋರೆಗೆ ಹೊಟ್ಟೆಕಿಚ್ಚಾಗಿದೆ.   

ಏಳರಲ್ಲಿ ಆರು ಎತ್ತುಗಳನ್ನು ವರ್ಷದ ಹಿಂದೆಯೇ ಮಾರಿದ್ದ ಗೋರೆ, ಉಳಿದಿರುವ ಕೊನೆಯ ಎತ್ತನ್ನು ಮಾರಲು ಅದುಲ್ ನವರೆಗೆ ಏಳು ಕಿಲೋಮೀಟರು ದೂರವನ್ನು ನಡೆದುಕೊಂಡು ಬಂದಿದ್ದಾನೆ. ಕಳೆದ ಐದು ವರ್ಷಗಳಲ್ಲಿ ಅವನ ಆರು ಲಕ್ಷದ ಸಾಲವು ಬೃಹದಾಕಾರವಾಗಿ  ಬೆಳೆದು ನಿಂತಿದೆ. ಸದ್ಯದಲ್ಲೇ ಬರಲಿರುವ ಋತುವಿನ ಉಳುಮೆಗೆ ಹಣ ಹೊಂದಿಸಲು ಅವನಲ್ಲಿ ಉಳಿದಿರುವ ಏಕೈಕ ಆಶಾಕಿರಣ ಈ ಎತ್ತು. “ಪ್ರಕೃತಿ ನಮಗೆ ಸಹಕಾರ ನೀಡಲ್ಲ. ಸರಕಾರವೂ ಸಹಕಾರ ನೀಡುತ್ತಿಲ್ಲ. ಶ್ರೀಮಂತರು ಯಾರೂ ನೇಣು ಹಾಕಿಕೊಳ್ಳಲ್ಲ ಸ್ವಾಮಿ. ನನ್ನಂತಹ ಸಾಲದ ಹೊರೆ ಹೊತ್ತ ರೈತರು ಮಾತ್ರ ಸಾಯುತ್ತಾರೆ. ಇದು ನಮ್ಮ ದಿನನಿತ್ಯದ ಗೋಳು. ತನ್ನ ಮಗ ರೈತ ಆಗಲಿ ಅಂತ ಬಯಸುವ ಒಬ್ಬ ರೈತನನ್ನೂ ನಾನು ಇದುವರೆಗೆ ನೋಡಿಲ್ಲ”,  ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ ಗೋರೆ.  

60 ರ ಪ್ರಾಯದಲ್ಲಿ ಊರಿಂದೂರಿಗೆ, ಒಂದು ಸಂತೆಯಿಂದ ಇನ್ನೊಂದು ಸಂತೆಗೆ, ತನ್ನ ಜಾನುವಾರನ್ನು ತೆಗೆದುಕೊಂಡು ಅಲೆಯುತ್ತಿದ್ದಾರೆ ಗೋರೆ. ಬಾಡಿಗೆ ಗಾಡಿಯಲ್ಲಿ ತೆಗೆದುಕೊಂಡು ಹೋಗೋಣವೆಂದರೆ ಅವನ ಬಳಿ ಹಣವಿಲ್ಲ. “ಇವತ್ತು ಇದನ್ನು ಮಾರಲಾಗದಿದ್ದರೆ ಗುರುವಾರ ನಾನು ಇನ್ನೊಂದು ಸಂತೆಗೆ ಹೋಗುತ್ತೇನೆ.” ಅನ್ನುತ್ತಾನೆ ಆತ.   

“ಎಷ್ಟು ದೂರ ಇದೆ ಅದು?”, ನಾನು ಕೇಳುತ್ತೇನೆ.

“ಮೂವತ್ತು ಕಿಲೋಮೀಟರು”, ಎಂಬ ಉತ್ತರ ಬರುತ್ತದೆ. 

Translation:  Santosh Tarmraparni

PHOTO • Parth M.N.

ವಾದ: 'ಕ್ರೇಜಿ ಫ್ರಾಗ್ ಮೀಡಿಯಾ ಫೀಚರ್ಸ್' ಈ ಅನುವಾದದ ರೂವಾರಿ. ಧಾರವಾಡದಲ್ಲಿ ನೆಲೆಸಿರುವ ಸಂತೋಷ್ ತಾಮ್ರಪರ್ಣಿ ವೃತ್ತಿಯಿಂದ ಎಂಜಿನಿಯರ್. ಆದರೂ ಒಲವು ಬರಹಗಳತ್ತ. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಬರೆದಿರುವ ಹಾಸ್ಯ ಲೇಖನಗಳು ಜನಪ್ರಿಯ. This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Other stories by Parth M.N.