''ಸೂರ್ಯಚಂದ್ರರು ಇರುವವರೆಗೂ ಈ ಒಂದು ಕೆಲಸವು ಮುಂದುವರಿಯಲಿದೆ'', ಮುಂಬೈಯ ಉತ್ತರಕ್ಕಿರುವ ಕೆಲ ಶತಮಾನಗಳ ಇತಿಹಾಸವನ್ನು ಹೊಂದಿರುವ ವಸಾಯಿ ಕೋಟೆಯಲ್ಲಿ ಕಲ್ಲನ್ನು ಕೆತ್ತುತ್ತಾ ಹೇಳುತ್ತಿದ್ದಾರೆ ತುಕಾರಾಮ್ ಪವಾರ್. ''ಬಹಳಷ್ಟು ಜನ ಸಾಯುತ್ತಾರೆ. ಹಲವರು ಬದುಕುಳಿಯುತ್ತಾರೆ. ಇದರಲ್ಲಿ ಪ್ರಮಾಣೀಕರಿಸುವಂಥದ್ದೇನೂ ಇಲ್ಲ. ಮಾಡುವ ಕೆಲಸವನ್ನು ಎಂದಿಗೂ ಅಳೆಯಲು ಹೋಗಬಾರದು. ಸುಮ್ಮನೆ ಕೆಲಸವನ್ನು ಮಾಡುತ್ತಲೇ ಇರಬೇಕು'', ಎನ್ನುತ್ತಿದ್ದಾರೆ ತುಕಾರಾಮ್.

ಪಾಲಗಢ ಜಿಲ್ಲೆಯಲ್ಲಿರುವ 16 ನೇ ಶತಮಾನದ ಬಸೇಂ (ಅಥವಾ ವಸಾಯಿ) ಕೋಟೆಯ ನವೀಕರಣಕ್ಕಾಗಿ ದುಡಿಯುತ್ತಿರುವ ಕಲ್ಲಿನ ಕೆಲಸ ಮಾಡುವ ಹಲವರಲ್ಲಿ ತುಕಾರಾಮ್ ಕೂಡ ಒಬ್ಬ. ಸುತ್ತಲೂ ತರಹೇವಾರಿ ಆಕಾರದ ದೊಡ್ಡ ಕಲ್ಲುಗಳಿದ್ದು, ಉಳಿಸುತ್ತಿಗೆಯಿಂದ ಬಡಿಯುತ್ತಾ ಅದಕ್ಕೊಂದು ರೂಪವನ್ನು ನೀಡುವ ಯತ್ನದಲ್ಲಿರುವ ಈತ ಕೋಟೆಯ ಮುಂದಿರುವ ತೆರೆದ ಪ್ರಾಂಗಣದ ನೆಲದಲ್ಲಿ ಕಾಲುಗಳನ್ನು ಅಡ್ಡಹಾಕಿ ಕುಳಿತಿದ್ದಾನೆ.

PHOTO • Samyukta Shastri

''ಮಾಡುವ ಕೆಲಸವನ್ನು ಅಳೆಯಲು ಹೋಗಬಾರದು. ಕೆಲಸ ಮಾಡುತ್ತಲೇ ಇರಬೇಕು'', ಎನ್ನುತ್ತಿದ್ದಾನೆ ವಸಾಯಿ ಕೋಟೆಯಲ್ಲಿ ಕಲ್ಲಿನ ಕೆಲಸ ಮಾಡುತ್ತಿರುವ ತುಕಾರಾಮ ಪವಾರ್.

ಸಡಿಲವಾದ ಕಲ್ಲುಗಳನ್ನು 'ಡ್ರೆಸ್ಸಿಂಗ್' ಸಮೇತವಾಗಿ ಬೇಕಿರುವ ಆಕಾರಕ್ಕೆ ಕೆತ್ತುತ್ತಾ, ಸುಣ್ಣದ ಗಾರೆಯೊಂದಿಗೆ ಗೋಡೆಯನ್ನು ಮತ್ತೆ ನಿರ್ಮಿಸುತ್ತಾ ಬೇಲ್ ಕಿಲಾದ ಗೋಡೆಗಳನ್ನು ಸದೃಢಗೊಳಿಸುತ್ತಿದ್ದಾರೆ ತುಕಾರಾಮ್ ಮತ್ತು ಇತರ ಕೆಲಸಗಾರರು. ಕೋಟೆಯ ಈ ಭಾಗವನ್ನು ಗುಜರಾತಿನ ಸುಲ್ತಾನ್ ಬಹಾದೂರ್ ಷಾ ರ ಕಾಲದಲ್ಲಿ ನಿರ್ಮಿಸಲಾಗಿತ್ತು (ನಂತರ ಪೋರ್ಚುಗೀಸರು ಇದನ್ನು ಇಗರ್ಜಿಯನ್ನಾಗಿಸಿಕೊಂಡಿದ್ದರು).
109 ಎಕರೆ ವಿಸ್ತೀರ್ಣದ ವಸಾಯಿ ಕೋಟೆಯಲ್ಲಿ ನಡೆಯುತ್ತಿರುವುದು ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ (ಎ.ಎಸ್.ಐ) ದ ಪುನರ್‍ನಿರ್ಮಾಣ ಯೋಜನೆಯ ಒಂದು ಭಾಗವಷ್ಟೇ. ಇದು 2012 ರಲ್ಲಿ ಆರಂಭವಾಗಿತ್ತು. ಇಲ್ಲಿ ಕೆಲಸ ಮಾಡುತ್ತಿರುವ ಸುಮಾರು 15 ಜನರು ಮಹಾರಾಷ್ಟ್ರದ ಅಹಮದನಗರ್ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಬಂದಿರುವವರು.

PHOTO • Samyukta Shastri

ಕಲ್ಲನ್ನು ಒಡೆಯುವ, ಕೆತ್ತುವ ಮತ್ತು 'ಡ್ರೆಸ್ಸಿಂಗ್' ಕೆಲಸಗಳು: ಕೋಟೆಯ ಗೋಡೆಯ ಬಳಿಯ ತೆರೆದ ಪ್ರಾಂಗಣದಲ್ಲಿ ನಡೆಯುತ್ತಿರುವ ಕೆಲಸ

ಬರಗಾಲವು ಇವರಲ್ಲಿ ಬಹಳಷ್ಟು ಮಂದಿಯನ್ನು ವಸಾಯಿಯವರೆಗೆ ಕರೆತಂದಿದೆ.
''ಒಳ್ಳೆಯ ಮಳೆ ಮತ್ತು ಸಮರ್ಪಕವಾದ ನೀರಾವರಿ ವ್ಯವಸ್ಥೆಯಿಲ್ಲದಿದ್ದಲ್ಲಿ ವ್ಯವಸಾಯ ಮಾಡಿ ಗಳಿಸುವುದಾದರೂ ಏನು?'', ಐವತ್ತರ ಪ್ರಾಯದ ಪವಾರ್ ಹೇಳುತ್ತಿದ್ದಾರೆ. ಜಮಖೇಡ್ ಹಳ್ಳಿಯಲ್ಲಿ ಇವರಿಗೆ ಎರಡೆಕರೆ ಜಮೀನಿದೆಯಂತೆ. ವರ್ಷದ ಆರು ತಿಂಗಳುಗಳ ಕಾಲ ಈತ ಇಂತಹ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡರೆ ಊರಿನಲ್ಲಿರುವ ಈತನ ಪತ್ನಿ ಮತ್ತು ಮಗ ಹೇಗೋ ಪರವಾಗಿಲ್ಲ ಎಂಬಂತೆ ನಡೆಯುತ್ತಿರುವ ಕೃಷಿಯನ್ನು ಸಂಭಾಳಿಸುತ್ತಿದ್ದಾರೆ.
ಕಬ್ಬಿನ ಬೆಳೆಗಳು ಅಹಮದನಗರದಲ್ಲಿ ಉಳಿದಿದ್ದ ಒಂದಿಷ್ಟು ನೀರನ್ನೂ ಹೀರಿಕೊಂಡಾದ ನಂತರ ಒಳ್ಳೆಯ ಮಳೆಗಾಲದ ಹೊರತಾಗಿಯೂ ಈ ಪ್ರದೇಶಗಳು ಬರಗಾಲಪೀಡಿತ ಪ್ರದೇಶಗಳಂತಾಗಿವೆ. ಹಳ್ಳಿಯಲ್ಲಿ ತುಕಾರಾಮ್ ನಂತಹ ಹಲವು ಕಲ್ಲಿನ ಕೆಲಸಗಾರರನ್ನು ಕೆಲಸಕ್ಕಿಟ್ಟುಕೊಳ್ಳುವ ಸ್ಥಳೀಯ ಗುತ್ತಿಗೆದಾರರು ಎ.ಎಸ್.ಐ ನೋಡಿಕೊಳ್ಳುತ್ತಿರುವ ತರಹೇವಾರಿ ಯೋಜನೆಗಳ ಸಂಬಂಧ ಇವರುಗಳನ್ನು ವಿವಿಧ ಐತಿಹಾಸಿಕ ಜಾಗಗಳಿಗೆ ಕಳಿಸುತ್ತಿದ್ದಾರೆ. ಅಂದಹಾಗೆ ಇವರಲ್ಲಿ ಬಹಳಷ್ಟು ಮಂದಿ ಅನಿವಾರ್ಯವಾಗಿ ತಮ್ಮ ಜಮೀನುಗಳನ್ನು ಬಿಟ್ಟುಬರಬೇಕಾಗಿ ಬಂದ ರೈತರು. ಮಹಾರಾಷ್ಟ್ರದ ಎಲಿಫೆಂಟಾ ಗುಹೆಗಳು ಮತ್ತು ಉತ್ತರಪ್ರದೇಶದ ಝಾನ್ಸಿ ಕೋಟೆಗಳನ್ನೊಳಗೊಂಡಂತೆ ಎ.ಎಸ್.ಐ ಯ ಹಲವು ಯೋಜನೆಗಳಲ್ಲಿ ಪವಾರ್ ಕಾರ್ಯನಿರ್ವಹಿಸಿದ್ದಾರೆ.
ವಸಾಯಿ ಕೋಟೆಯಲ್ಲಿ ಕಲ್ಲಿನ ಕೆಲಸ ಮಾಡುತ್ತಿರುವ ಈ ಕಾರ್ಮಿಕರು 600 ರೂಪಾಯಿಗಳ ದಿನಕೂಲಿಯನ್ನು ಪಡೆಯುತ್ತಿದ್ದರೆ, ತಿಂಗಳಿಗೆ ಸುಮಾರು 15,000 ರೂ. ಗಳಷ್ಟನ್ನು ಸಂಪಾದಿಸುತ್ತಾರೆ. ಇದರಲ್ಲಿ ಬಹುತೇಕ ಅರ್ಧದಷ್ಟು ಮೊತ್ತವು ಆಹಾರ ಮತ್ತು ಔಷಧಿಗಳಂತಹ ವೈಯಕ್ತಿಕ ಖರ್ಚುಗಳಲ್ಲೇ ಕಳೆದುಹೋಗುತ್ತದೆ. ಉಳಿದ ಹಣವನ್ನು ಇವರು ತಮ್ಮ ಕುಟುಂಬಗಳಿಗೆ ಕಳಿಸುತ್ತಾರೆ.
ಈ ದಿನಕೂಲಿಗಾಗಿ ಇವರುಗಳು ಒಂದು ತಾಸಿನ ಮಧ್ಯಾಹ್ನದ ಊಟದ ಬಿಡುವನ್ನು ಸೇರಿದಂತೆ ಎಂಟು ತಾಸುಗಳ ಕಾಲ ಬೆನ್ನು ಮುರಿಯುವಂತೆ ದುಡಿಯಬೇಕು. ಬಿಸಿಲಿನ ಝಳದಲ್ಲಿ ಕಲ್ಲಿಗೆ ಸುತ್ತಿಗೆಯೇಟು ನೀಡುವ ಇವರುಗಳ ಕೈಕಾಲುಗಳು ಕಲ್ಲಿನ ಧೂಳಿನೊಂದಿಗೆ ಇರುವ ಸತತ ಸಂಪರ್ಕದಿಂದಾಗಿ ಬಿರುಕು ಬಿಡುತ್ತಿವೆ. ''ಕಲ್ಲುಗಳನ್ನು ಒಡೆಯುವುದೆಂದರೆ ಸುಲಭವಾದ ಕೆಲಸವಲ್ಲ. ಕಲ್ಲು ಬಿಸಿಯಾಗಿರುತ್ತದೆ. ನೆಲವೂ ಬಿಸಿಯಾಗಿರುತ್ತದೆ. ಇತ್ತ ಸೂರ್ಯ ನಿಗಿನಿಗಿ ಉರಿಯುತ್ತಿರುತ್ತಾನೆ'', ಎನ್ನುತ್ತಾರೆ ಲಕ್ಷ್ಮಣ್ ಶೇಟಿಬಾ ದುಕ್ರೆ


PHOTO • Samyukta Shastri

ಬಿಸಿಲ ಧಗೆಯಲ್ಲಿ ಕಲ್ಲಿನ ಕೆಲಸವನ್ನು ಮಾಡುತ್ತಿರಲು ಕೊಂಚ ನೆರಳನ್ನು ನೀಡಿ ಸಮಾಧಾನವನ್ನು ತರುವುದು ಈ ತಾತ್ಕಾಲಿಕ ಆಸರೆಗಳು. ಬಲ: ನೀರು ಕುಡಿಯಲು ಚಿಕ್ಕ ಬಿಡುವೊಂದನ್ನು ತೆಗೆದುಕೊಂಡಿರುವ ಜಮಖೇಡದ ಕಾರ್ಮಿಕ

ಕೋಟೆಯ ಮೂಲೆಯೊಂದರಲ್ಲಿ, ತೆಂಗಿನ ಒಣಗಿದ ಸೋಗೆಗಳಿಂದ ಮಾಡಿರುವ ತಾತ್ಕಾಲಿಕ ನೆರಳಿನ ವ್ಯವಸ್ಥೆಯ ಅಡಿಯಲ್ಲಿ ಕುಳಿತು ಕೆಲಸ ಮಾಡುತ್ತಿರುವ ದುಕ್ರೆ ಜಮಖೇಡ್ ತಂಡದಿಂದ ಕೊಂಚ ದೂರದಲ್ಲಿದ್ದಾನೆ. ಈತನ ಸಹೋದರಿಯ ಮಗನಾದ ದಗ್ಡು ಗೋವಿಂದ ದುಕ್ರೆ ಕೂಡ ಜೊತೆಗಿದ್ದಾನೆ. ಇವರು ಕಲ್ಲಿನ ಕೆಲಸ ಮಾಡುವವರ ಮತ್ತು ನುರಿತ ಶಿಲ್ಪಿಗಳಾದ ವಾಡರ್ ಸಮುದಾಯಕ್ಕೆ ಸೇರಿದವರು. ಅಹಮದನಗರ್ ಜಿಲ್ಲೆಯ ಭಿಂಗಾರ್ ತಾಲೂಕಾ ದ ವಾಡರ್ ವಾಡಿ ಜಿಲ್ಲೆಯಿಂದ ವಸಾಯಿಯವರೆಗೆ ಇವರುಗಳು ಬಂದಿದ್ದಾರೆ. ಇಬ್ಬರೂ ಆಗಾಗ ಒಂದು ಸೈಟಿನಿಂದ ಮತ್ತೊಂದಕ್ಕೆ ಹೋಗುತ್ತಿದ್ದರೂ ವಸಾಯಿ ಕೋಟೆಯ ಕೆಲಸಕ್ಕಾಗಿಯೇ ನೇಮಿಸಲ್ಪಟ್ಟವರು ಇವರು.
''ಇತ್ತೀಚೆಗೆ ಈ ಬಗೆಯ ಕೆಲಸಗಳಿಗಾಗಿ ಕಾರ್ಮಿಕರನ್ನು ಹುಡುಕುವುದು ಕಷ್ಟ ಎಂಬಂತಾಗಿದೆ'', ಎನ್ನುತ್ತಿದ್ದಾರೆ ಎ.ಎಸ್.ಐ ಯ ವಸಾಯಿ ಕೋಟೆಯ ನವೀಕರಣ ಯೋಜನೆಯ ಸಂರಕ್ಷಣಾ ಸಹಾಯಕರಾಗಿರುವ ಕೈಲಾಸ್ ಶಿಂಧೆ. ''ವಡಾರ್ ಸಮುದಾಯದ ಕಾರ್ಮಿಕರಷ್ಟೇ ಈ ವೃತ್ತಿಯಲ್ಲಿ ನೈಪುಣ್ಯವನ್ನು ಹೊಂದಿರುವವರು. ಬಹುಷಃ ಈ ಕೋಟೆಗಳನ್ನು ನಿರ್ಮಿಸಿದವರೂ ಕೂಡ ವಡಾರರೇ ಆಗಿರಬಹುದೇನೋ. ಈಗ ನವೀಕರಣವನ್ನೂ ಕೂಡ ಇವರೇ ಮಾಡುತ್ತಿದ್ದಾರೆ'', ಎಂಬ ಆಭಿಪ್ರಾಯ ಶಿಂಧೆಯವರದ್ದು.

PHOTO • Samyukta Shastri

ಕೆಲಸ ಮಾಡುತ್ತಿರುವ ಲಕ್ಷ್ಮಣ ದುಕ್ರೆ ಮತ್ತು ಆತನ ಸಂಬಂಧಿ ದಗ್ಡು ದುಕ್ರೆ: ''ನನ್ನ ತಂದೆಗೆ ಈ ವಡಾರ್ ಜೀವನವನ್ನು ನೀಡಿದವರು ಯಾರು?'', ಎಂಬ ಪ್ರಶ್ನೆ ಆತನದ್ದು

ವಸಾಯಿಯಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಕಲ್ಲಿನ ಕೆಲಸಗಾರರು ವಡಾರ್ ಸಮುದಾಯದವರೇ. ಶೈಕ್ಷಣಿಕ ದಾಖಲೆಗಳು ಹೇಳುವ ಪ್ರಕಾರ ಮೊದಲು ಒಡಿಶಾದಿಂದ ಆಂಧ್ರಪ್ರದೇಶ ಮತ್ತು ಇತರ ರಾಜ್ಯಗಳಿಗೆ ವಲಸೆ ಹೋದ ವಡಾರರು ಕೊನೆಗೆ ಮಹಾರಾಷ್ಟ್ರಕ್ಕೆ ಬರುತ್ತಾರೆ (ಸಮುದಾಯಕ್ಕಿರುವ `ವಡಾರ್' ಹೆಸರು ಒಡ್ರ ಡೇಸ ಅಥವಾ ಒರಿಸ್ಸಾದಿಂದ ಬಂದಿರಲೂಬಹುದು ಎಂಬ ಮಾತಿದೆ). ''ಹಲವು ವರ್ಷಗಳ ಹಿಂದೆ ನಮ್ಮ ಜನರು ಇಲ್ಲಿಗೆ (ಮಹಾರಾಷ್ಟ್ರಕ್ಕೆ) ಬಂದಿದ್ದರಂತೆ. ನಾವು ಹುಟ್ಟಿ ಬೆಳೆದಿದ್ದೆಲ್ಲಾ ಇಲ್ಲೇ. ನಾವು ಇಲ್ಲಿಯವರೇ'', ಅನ್ನುತ್ತಿದ್ದಾರೆ ಸಾಹೇಬರಾವ್ ನಾಗು ಮಸ್ಕೆ. 60 ರ ಪ್ರಾಯದ ಮಸ್ಕೆ ಕೋಟೆಯಲ್ಲಿ ಕಲ್ಲಿನ ಕೆಲಸ ಮಾಡುತ್ತಿರುವ ಹಿರಿಯ ಕಾರ್ಮಿಕರಲ್ಲೊಬ್ಬರು.

PHOTO • Samyukta Shastri

60 ರ ಪ್ರಾಯದ ಸಾಹೇಬರಾವ್ ಮಸ್ಕೆ ವಸಾಯಿ ಕೋಟೆಯಲ್ಲಿ ಕಲ್ಲಿನ ಕೆಲಸ ಮಾಡುತ್ತಿರುವ ಹಿರಿಯ ಕಾರ್ಮಿಕರಲ್ಲೊಬ್ಬರು

ಸುಮಾರು 40 ರ ಪ್ರಾಯದ ದಗ್ಡು ತನ್ನ ಕುಟುಂಬವು ಹೊಂದಿದ್ದ ಜಮೀನನ್ನು ಮತ್ತು ಅದನ್ನು ಹಲವು ವರ್ಷಗಳ ಹಿಂದೆ ತೊರೆದು ಬಂದ ದಿನಗಳನ್ನು ನೆನಪಿಸಿಕೊಳ್ಳುತ್ತಾನೆ. ಪ್ರಸ್ತುತ ಹೊಟ್ಟೆಪಾಡಿಗಾಗಿ ಇವನ ಮತ್ತು ಈತನ ಸಂಬಂಧಿಯ ಕೆಲಸವು ಇದೊಂದೇ. ಲಕ್ಷ್ಮಣ ಮತ್ತು ದಗ್ಡುವಿನ ಪತ್ನಿಯರೂ ಕೂಡ ಅಹಮದನಗರದ ಬಳಿಯಿರುವ ಅವರ ಹಳ್ಳಿಯಲ್ಲಿ ಕಲ್ಲಿನ ಕೆಲಸವನ್ನೇ ಮಾಡುತ್ತಿದ್ದಾರೆ. ಕಲ್ಲುಗಳನ್ನು ಒಡೆದು ಟಾರ್ ರಸ್ತೆಗಳ ನಿರ್ಮಾಣದಲ್ಲಿ ಬಳಕೆಯಾಗುವ ಸಣ್ಣಕಲ್ಲುಗಳನ್ನು ಇವರು ಸಿದ್ಧಪಡಿಸುತ್ತಾರಂತೆ.

ವಸಾಯಿಯ ಇತರರಂತೆ ದುಕ್ರೆ ಕುಟುಂಬದ ಸದಸ್ಯರೂ ಕೂಡ ಗುತ್ತಿಗೆದಾರರ ಆಣತಿಯಂತೆ ವಿವಿಧ ಭಾಗಗಳಿಗೆ ಸಾಗುತ್ತಾರೆ. ''ಅವರು ಎಲ್ಲೆಲ್ಲಾ ಕೆಲಸವು ಇದೆಯೆಂದು ಹೇಳುತ್ತಾರೋ ಅಲ್ಲಿಗೆ ನಾವು (ನಮ್ಮ ಸ್ವಂತ ಖರ್ಚಿನಲ್ಲಿ) ಹೋಗುತ್ತೇವೆ'', ಎನ್ನುತ್ತಿದ್ದಾನೆ ಲಕ್ಷ್ಮಣ. ''ಬೆಣ್ಣೆ-ಪಾವ್ ನ ಮೇಲೆ ಅವಲಂಬಿತರಾಗಿ ಕೆಲಸಕ್ಕಾಗಿ ಕಾಯುತ್ತಾ ಅಲ್ಲಿ ಕೆಲವು ದಿನಗಳ ಮಟ್ಟಿಗೆ ಇರುತ್ತೇವೆ. ಕೆಲಸವು ಸಿಕ್ಕಿತು ಅಂದರೆ ಸರಿ. ಇಲ್ಲವಾದರೆ ಒಂದು ರೀತಿಯಲ್ಲಿ ಇದು ನಮ್ಮ ಕಪಾಳಕ್ಕೊಂದು ಬಿಗಿದಂತೆಯೇ. ನಂತರ ಯಥಾಪ್ರಕಾರ (ವಾಡರ್ ವಾಡಿಗೆ) ಮರಳುತ್ತೇವೆ'', ಎಂದು ಆತ ಮುಂದುವರಿಸುತ್ತಾನೆ.

ತಾನು ವಾಡರ್ ಆಗಿರುವ ಬಗ್ಗೆ ಲಕ್ಷ್ಮಣನಿಗೆ ಮಿಶ್ರಭಾವಗಳಿವೆ. ಅದ್ಭುತ ವಿನ್ಯಾಸಗಳನ್ನೊಳಗೊಂಡ ಶಿಲ್ಪಗಳನ್ನು, ಸ್ಮಾರಕಗಳನ್ನು ಒಂದು ಕಾಲದಲ್ಲಿ ರಚಿಸಿದ ತನ್ನ ಪೂರ್ವಜರ ಬಗ್ಗೆ ಅಚ್ಚರಿ, ಗೌರವ ಎರಡೂ ಆತನಿಗಿದೆ. ಅವರು 'ದೇವರ ಮನುಷ್ಯ'ರಾಗಿದ್ದರು ಎಂದು ಅವನು ಹೇಳಿಕೊಳ್ಳುವುದೂ ಇದೆ. ಆದರೆ ತನ್ನ ಸಮುದಾಯಕ್ಕಂಟಿಕೊಂಡ ಬಡತನದ ಬಗ್ಗೆ ಆತನಿಗೆ ತೀವ್ರವಾದ ಹತಾಶೆಯೂ ಇದೆ. ''ವಡಾರ್ ಜೀವನವನ್ನು ನನ್ನ ತಂದೆಗೆ ನೀಡಿದವರು ಯಾರು? ಈ ವೃತ್ತಿಗಾಗಿಯೇ ಹುಟ್ಟಿಕೊಂಡವರಂತೆ ವೃತ್ತಿಯನ್ನು ಕಲಿಸಿದ್ದು ಯಾರು? ಆತ ಒಂದಿಷ್ಟು ಓದಿ ನೌಕರಿಯನ್ನೇನಾದರೂ ಪಡೆದುಕೊಂಡಿದ್ದರೆ ಬಹಳಷ್ಟು ಸಂಗತಿಗಳು ಬದಲಾಗುತ್ತಿದ್ದವು...'', ಎನ್ನುತ್ತಿದ್ದಾನೆ ಆತ.

ಈಗ 66 ರ ಹೊಸ್ತಿಲಲ್ಲಿರುವ ಲಕ್ಷ್ಮಣ ತನ್ನ ಪೂರ್ವಜರೂ ಕೂಡ ಈ ವೃತ್ತಿಯಲ್ಲಿ ತೊಡಗಿದ್ದರಿಂದಾಗಿ ತನ್ನ ತಂದೆ ಮತ್ತು ತಾತನಿಂದ ಬರೋಬ್ಬರಿ 50 ವರ್ಷಗಳ ಹಿಂದೆ ವೃತ್ತಿಯನ್ನು ಕಲಿತವನು. ''ಮನೆಯ ಬಾಲಕನೊಬ್ಬನು 10-11 ರ ಪ್ರಾಯಕ್ಕೆ ಬಂದೊಡನೆಯೇ ಆತನ ಕೈಗೆ ಸುತ್ತಿಗೆಯೊಂದನ್ನು ಕೊಟ್ಟು ಅದನ್ನು ಬಳಸುವ ವಿಧಾನವನ್ನು ಕಲಿಸಲಾಗುತ್ತದೆ. ಈ ಮಧ್ಯೆ ಅವನು ತನ್ನ ಬೆರಳುಗಳನ್ನು ಮುರಿದುಕೊಂಡರೂ ಅಚ್ಚರಿಯಿಲ್ಲ. ಇದಾದ ಕೆಲವೇ ತಿಂಗಳುಗಳಲ್ಲಿ ಆತ ವೃತ್ತಿಯನ್ನು ಕಲಿತು ವಯಸ್ಕರಂತೆ ದುಡಿದು ಸಂಪಾದಿಸಲು ಹೊರಡುತ್ತಾನೆ'', ಎಂದು ವಿವರಿಸುತ್ತಿದ್ದಾನೆ ಲಕ್ಷ್ಮಣ.


PHOTO • Samyukta Shastri

ಈ ವೃತ್ತಿಯಲ್ಲಿರುವ ಉಪಕರಣಗಳು. ದಿನವಿಡೀ ಮಾಡುವ ಕೆತ್ತುವ ಕೆಲಸದಿಂದಾಗಿ ಎದ್ದೇಳುವ ಕಲ್ಲಿನ ಧೂಳು

ಆದರೆ ಈಗಿನ ಬಹುತೇಕ ಯುವಕರಿಗೆ ಈ ವೃತ್ತಿಯ ಬಗ್ಗೆ ಒಲವಿದ್ದಂತಿಲ್ಲ. ಬೇರೆಲ್ಲೂ ಉದ್ಯೋಗವು ಸಿಕ್ಕದಿದ್ದಾಗ ಬೆರಳೆಣಿಕೆಯ ಕೆಲ ಯುವಕರು ವಸಾಯಿ ಕೋಟೆಗೆ ಬಂದು ದುಡಿಯುತ್ತಾರಂತೆ. ಪವಾರ್ ನ ಹಿರಿ ಮಗ ಎಂಜಿನಿಯರ್ ಆಗಿದ್ದು ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ''ನನ್ನ ಮಕ್ಕಳು ಕಲ್ಲಿನ ಕೆಲಸವನ್ನು ಮಾಡುವುದಿಲ್ಲ. ಈ ವೃತ್ತಿಯಲ್ಲಿದ್ದುಕೊಂಡೇ ನನ್ನ ಮಕ್ಕಳನ್ನು ಶಾಲೆಗೆ ಕಳಿಸಿ ಓದಿಸಲು ನಾನು ಹೇಗೋ ಯಶಸ್ವಿಯಾದೆ'', ಎನ್ನುತ್ತಾರೆ ಆತ.

ಕಲ್ಲಿನ ಕೆಲಸಗಳನ್ನು ಮಾಡುವ ಹಲವಾರು ಜನರ ಮಕ್ಕಳು ತಮ್ಮ ಕುಟುಂಬದ ಸಾಂಪ್ರದಾಯಿಕ ವೃತ್ತಿಯನ್ನು ತೊರೆದು ದೂರ ಸರಿಯುತ್ತಿದ್ದರೆ, ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ, ಕಳೆದ ಹಲವು ದಶಕಗಳಿಂದ ಕಲ್ಲಿನೊಂದಿಗೆ ಕಾಠಿಣ್ಯದ ಜೀವನವನ್ನು ಸಾಗಿಸುತ್ತಿರುವ ವೃದ್ಧರಿಗೆ ಅಪಾರ ದೈಹಿಕ ಶ್ರಮವನ್ನು ಬೇಡುವ ತಮ್ಮ ಕಷ್ಟದ ವೃತ್ತಿಯ ಬಗ್ಗೆ ಹತಾಶೆಯಿದೆ. ''ಏನೂ ಬದಲಾಗುವುದಿಲ್ಲ. ಸ್ಮಶಾನದಲ್ಲಿ ನಮಗಾಗಿ ಇನ್ನೂ ಕಟ್ಟಿಗೆಗಳಿವೆ. ಬದಲಾವಣೆಯು ಬರಬೇಕಿದ್ದ ದಿನಗಳು ಯಾವತ್ತೋ ಕಳೆದುಹೋದವು'', ಎಂಬ ಹತಾಶೆ ಲಕ್ಷ್ಮಣನದ್ದು


PHOTO • Samyukta Shastri

ಚಿಕ್ಕ ಬಿಡುವೊಂದನ್ನು ತೆಗೆದುಕೊಳ್ಳುತ್ತಿರುವ ಲಕ್ಷ್ಮಣ ದುಕ್ರೆ. ''ಬದಲಾಗಲು ಇನ್ನೇನೂ ಉಳಿದಿಲ್ಲ'', ಎನ್ನುತ್ತಿದ್ದಾನೆ ಆತ.

ಸೈಟ್ ಪಕ್ಕದಲ್ಲೇ ಹಾಕಿಕೊಂಡಿರುವ ತಾತ್ಕಾಲಿಕ ವ್ಯವಸ್ಥೆಯೊಂದರಲ್ಲಿ ಬೀಡುಬಿಟ್ಟಿರುವ ಲಕ್ಷ್ಮಣನಿಗೆ ದಿನವಿಡೀ ಮಾಡಿದ ಕೆಲಸದಿಂದಾಗಿ ಮೈಕೈ ನೋವಾಗಿ ಪ್ರಾಣ ಹಿಂಡುತ್ತಿದ್ದರೆ, ನಿದ್ದೆಗಾಗಿ ಆತ ಮದ್ಯದ ಮೊರೆಹೋಗುತ್ತಾನೆ. ''ನಮ್ಮ ಭುಜಗಳು ನೋಯುತ್ತವೆ. ಸೊಂಟ ನೋಯುತ್ತದೆ. ಮೊಣಗಂಟುಗಳೂ ಕೂಡ... ಸಿಕ್ಕಾಪಟ್ಟೆ ನೋವಿದ್ದರೆ ಮದ್ದುಗಳನ್ನು ನುಂಗುತ್ತೇವೆ. ನೋವು ತಡೆಯಲಾಗದಿದ್ದರೆ ವೈದ್ಯರ ಬಳಿ ಹೋಗುತ್ತೇವೆ. ಇಲ್ಲಾಂದ್ರೆ ಹಾಫ್-ಕ್ವಾರ್ಟರ್ ಗಂಟಲಿಗೆ ಇಳಿಸಿಕೊಳ್ಳುತ್ತೇವೆ...'', ಎನ್ನುತ್ತಿದ್ದಾನೆ ಆತ.

ಪವಾರ್ ಕೂಡ ಇದನ್ನೇ ಮಾಡುತ್ತಾನೆ. ''ಸಂಜೆ ಮರಳಿದ ನಂತರ ದೇಹವಿಡೀ ನೋವಿನಿಂದ ತುಂಬಿಹೋಗುತ್ತದೆ. ಹೀಗಿರುವಾಗ ಹಾಫ್-ಕ್ವಾರ್ಟರ್ ಮುಗಿಸಿ ಅಲ್ಲೇ ಮಲಗಿಬಿಡುತ್ತೇವೆ'', ಎನ್ನುತ್ತಾನೆ ಪವಾರ್. ಮುಂದಿನ ದಿನವು ಮತ್ತೆ ಎಂದಿನಂತೆ ಉಳಿ-ಸುತ್ತಿಗೆ, ಧೂಳು-ಧಗೆಗಳೊಂದಿಗೆ ಇವರನ್ನು ಅಪ್ಪಿಕೊಳ್ಳಲು ತಯಾರಾಗಿ ನಿಂತಿರುತ್ತದೆ.


Samyukta Shastri

Samyukta Shastri is an independent journalist, designer and entrepreneur. She is a trustee of the CounterMediaTrust that runs PARI, and was Content Coordinator at PARI till June 2019.

Other stories by Samyukta Shastri
Translator : Prasad Naik

Currently working as a Senior Engineer at Gurugram (Haryana), Prasad Naik has served in Uige of Republic of Angola (Africa) for a drinking water supply project. Prasad Naik is a freelance writer and columnist. He can be contacted at [email protected]. This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

Other stories by Prasad Naik