ಕಳೆದ 30 ವರ್ಷಗಳಿಂದಲೂ ದೇವು ಭೊರೆ ಹಗ್ಗಗಳನ್ನು ತಯಾರಿಸುತ್ತಿದ್ದಾರೆ. ಎಳೆದು ಹಿಗ್ಗಿಸಬಹುದಾದ ಹತ್ತಿಯ ದಾರವನ್ನು ದುರ್ಬಲ ಎಳೆಗಳಿಂದ ಬೇರ್ಪಡಿಸಲಾಗುತ್ತದೆ. ಎಳೆಯಬಲ್ಲ ದಾರದ ರಾಶಿಯನ್ನು ಆತನ ಮನೆಯ ನೆಲದಿಂದ ಸುಮಾರು ಒಂಭತ್ತು ಅಡಿ ಎತ್ತರದ ತಾರಸಿಯಲ್ಲಿನ ಕೊಕ್ಕೆಯವರೆಗೆ ಹಿಗ್ಗಿಸಿ ಒಂದೂವರೆಯಿಂದ ಎರಡು ಕೆ.ಜಿ. ತೂಕದ ದಾರದ ಎಳೆಗಳ ಕಟ್ಟುಗಳನ್ನು ಸಿದ್ಧಪಡಿಸುತ್ತಾರೆ. ವಾರಕ್ಕೆ ಮೂರು ಬಾರಿ ಏಳು ಗಂಟೆಗಳ ಅವಧಿಯಲ್ಲಿ ಇಂತಹ 10 ಕಟ್ಟುಗಳನ್ನು ತಯಾರಿಸಲಾಗುತ್ತದೆ.

ಕುಟುಂಬದ ಉದ್ದಿಮೆಗೆ ಹತ್ತಿಯ ಪ್ರವೇಶ ತಡವಾಯಿತು. ತಲೆಮಾರುಗಳಿಂದಲೂ ಆತನ ಮನೆತನವು ಅಗವೆ (ಭೂತಾಳೆ) ಸಸ್ಯವನ್ನು ಇದಕ್ಕಾಗಿ ಬಳಸುತ್ತಿತ್ತು. ಅದನ್ನು ಮುಂದುವರೆಸಲು ಸಾಧ್ಯವಾಗದ ಕಾರಣ, ಅವರು ಹತ್ತಿಯನ್ನು ಅವಲಂಬಿಸತೊಡಗಿದರು. ನೈಲಾನ್ ಹಗ್ಗದ ಪ್ರಸರಣದಿಂದಾಗಿ ಈಗ ಈ ಉದ್ಯಮವೂ ಸೊರಗುತ್ತಿದೆ.

ದೇವು ಚಿಕ್ಕ ಹುಡುಗನಿದ್ದಾಗ, ಅವರ ತಂದೆಯು ಮಹಾರಾಷ್ಟ್ರ-ಕರ್ನಾಟಕ ಗಡಿಯ ಹಳ್ಳಿಗಳಲ್ಲಿನ ಕಾಡುಗಳಲ್ಲಿ 10 ಕಿ.ಮೀ. ನಡೆದಾಡಿ, ಮರಾಠಿಯಲ್ಲಿ ಘೇಪತ್ ಎಂತಲೂ, ಸ್ಥಳೀಯವಾಗಿ ಫಡ್ ಎಂತಲೂ ಕರೆಯುವ ಅಗವೆ ಸಸ್ಯವನ್ನು ಸಂಗ್ರಹಿಸಿ, ಅವರು 15 ಕೆ. ಜಿ.ಯಷ್ಟು ಸರಕನ್ನು ತರುತ್ತಿದ್ದರು. ಎಲೆಗಳ ಅಂಚಿನ ಮುಳ್ಳನ್ನು ತೆಗೆದು, ಒಂದು ವಾರ ನೀರಲ್ಲಿ ನೆನೆಸಿ, ಎರಡು ದಿನಗಳವರೆಗೆ ಒಣಗಿಸಲಾಗುತ್ತಿತ್ತು. ಈ ಪ್ರಕ್ರಿಯೆಯಿಂದ ಹಗ್ಗವನ್ನು ತಯಾರಿಸಲು 2 ಕೆ. ಜಿ.ಯಷ್ಟು ನಾರು ದೊರೆಯುತ್ತದೆ. ದೇವೂನ ತಾಯಿ ಮೈನಾಬಾಯಿಯೂ ಈ ಕೆಲಸದಲ್ಲಿ ತೊಡಗುತ್ತಿದ್ದರು. 10 ವರ್ಷದ ದೇವೂ ಸಹ ಕೆಲಸಕ್ಕೆ ಹಾಕುತ್ತಿದ್ದನು.

1990 ರ ಪ್ರಾರಂಭದಲ್ಲಿ ಭೊರೆ ಮತ್ತು ಇತರೆ ಮನೆಗಳವರು ಅಗವೆ ನಾರಿಗೆ ಬದಲಾಗಿ ಹತ್ತಿಯನ್ನು ಬಳಸತೊಡಗಿದರು. ಹತ್ತಿಯು ದೀರ್ಘಕಾಲ ಬಾಳಿಕೆ ಬರುತ್ತದೆ. "ಇದರೊಂದಿಗೆ, ಜನರು ಕಾಡುಗಳನ್ನು ಕಡಿದು ಹಾಕಿದರು. ಫಡ್‍ಗಿಂತಲೂ (ಇದನ್ನು ನೆನೆಸಿ, ಒಣಗಿಸುವುದು ದೀರ್ಘಕಾಲೀನ ಪ್ರಕ್ರಿಯೆ) ಇದರ ಎಳೆಗಳ ಬಳಕೆ ಸುಲಭ", ಎನ್ನುತ್ತಾರೆ ದೇವು.

ದೇವೂನ ಲೆಕ್ಕಾಚಾರದಲ್ಲಿ 1990ರ ಅಂತಿಮ ಭಾಗದವರೆಗೂ, ಆತನ ಹಳ್ಳಿಯ ಸುಮಾರು 100 ಮನೆಗಳವರು ಹಗ್ಗವನ್ನು ತಯಾರಿಸುತ್ತಿದ್ದರು. ಇವರು ಬೆಳಗಾಂ ಜಿಲ್ಲೆಯ ಚಿಕ್ಕೊಡಿ ತಾಲ್ಲೂಕಿನ ಬೊರಗಾಂವ್ ಹಳ್ಳಿಯಲ್ಲಿ ನೆಲೆಸಿದ್ದಾರೆ. ಕಡಿಮೆ ಬೆಲೆಯ ನೈಲಾನ್ ಹಗ್ಗಗಳಿಂದಾಗಿ ಸಿಗುವ ಲಾಭವು ಕಡಿಮೆಯಾಗತೊಡಗಿದಂತೆ, ಅನೇಕರು ಹತ್ತಿರದ ಹಳ್ಳಿಗಳಲ್ಲಿನ ಕೃಷಿ ಅಥವ ಪವರ್‍ಲೂಂಗಳ ಕೆಲಸಕ್ಕೆ ಅಥವ ಆಟೋ ಬಿಡಿಭಾಗಗಳ ವರ್ಕ್‍ಶಾಪ್‍ಗಳಿಗೆ ಹಾಗೂ ಇಚಲ್‍ಕರಂಜಿ ಮತ್ತು ಕಗಲ್ ಊರಿನ ಇನ್ನಿತರೆ ಕಾರ್ಖಾನೆಗಳಿಗೆ ತೆರಳಿದರು.

PHOTO • Sanket Jain

ಭೊರೆ ಮನೆತನದ ಕೇವಲ ಮೂವರು ಮಾತ್ರವೇ ಬೊರಗಾಂವ್ ಹಳ್ಳಿಯಲ್ಲಿ ಹಗ್ಗಗಳನ್ನು ತಯಾರಿಸುತ್ತಾರೆ- ದೇವು, ಆತನ ಪತ್ನಿ ನಂದುಬಾಯಿ ಮತ್ತು ಅವರ ಮಗ ಅಮಿತ್.

ಭೊರೆ ಮನೆತನದ ಕೇವಲ ಮೂವರು ಮಾತ್ರವೇ ಬೊರಗಾಂವ್ ಹಳ್ಳಿಯಲ್ಲಿ ಹಗ್ಗಗಳನ್ನು ತಯಾರಿಸುತ್ತಾರೆ- ದೇವು, ಆತನ ಪತ್ನಿ ನಂದುಬಾಯಿ ಮತ್ತು ಅವರ ಮಗ ಅಮಿತ್. ಅಮಿತ್‍ ನ ಪತ್ನಿ ಹೊಲಿಗೆಯ ಕೆಲಸವನ್ನು ನಿರ್ವಹಿಸುತ್ತಾರೆ. ಕಿರಿಯ ಮಗ 25 ರ ಭರತ್, ಕಗಲ್ ಇಂಡಸ್ಟ್ರಿಯಲ್ ಎಸ್ಟೇಟಿನಲ್ಲಿ ಕಾರ್ಮಿಕರಾಗಿದ್ದಾರೆ. ವಿವಾಹಿತ ಹೆಣ್ಣುಮಕ್ಕಳಿಬ್ಬರೂ ಗೃಹಿಣಿಯರು.

"ಶತಮಾನಗಳಿಂದಲೂ ಕೇವಲ ನಮ್ಮ ಜಾತಿಯವರಷ್ಟೇ ಹಗ್ಗಗಳನ್ನು ತಯಾರಿಸುತ್ತಿದ್ದರು. ನಮ್ಮ ಪೂರ್ವಿಕರ ಕಲೆಯನ್ನು ನಾನು ಬಳಸುತ್ತಿದ್ದೇನೆ" ಎನ್ನುತ್ತಾರೆ ಹಗ್ಗವನ್ನು ತಯಾರಿಸುವ ಈ ಕುಟುಂಬದ ನಾಲ್ಕನೇ ತಲೆಮಾರಿನವರಾದ 58 ರ ದೇವು. ಇವರು ಪರಿಶಿಷ್ಟ ಜಾತಿಯ ಮಾತಂಗ್ ಪಂಗಡದವರು. ಎರಡನೆ ತರಗತಿಯವರೆಗೂ ಇವರು ವಿದ್ಯಾಭ್ಯಾಸವನ್ನು ಪಡೆದರಾದರೂ, ಮುಂದಿನ ಶಿಕ್ಷಣವನ್ನು ಒದಗಿಸಲು ಅವರ ಹೆತ್ತವರಿಗೆ ಸಾಧ್ಯವಾಗಲಿಲ್ಲ. ಮೂರು ಗಂಟೆಗಳ ಕಾಲ ನಾಲ್ಕು ಹಸುಗಳ ಹಾಲು ಕರೆಯುವ ಕೆಲಸದಲ್ಲಿರುತ್ತಿದ್ದ ಅವರಿಗೆ ಶಾಲೆಗೆ ತೆರಳಲು ಸಮಯ ದೊರೆಯುವುದೂ ಕಷ್ಟವೇ ಆಗಿತ್ತು.

ದೇವು, ಮನೆತನದ ವೃತ್ತಿಯಲ್ಲಿ ತೊಡಗುವ ಮೊದಲು ಇಚಲ್‍ಕರಂಜಿಯಲ್ಲಿ ಮನೆಗಳ ಪೇಂಟರ್ ಕೆಲಸದಲ್ಲಿ 10 ವರ್ಷಗಳ ಕಾಲ ತೊಡಗಿದ್ದರು. ಇದರೊಂದಿಗೆ, ಮಳೆಯ ಲಭ್ಯತೆಯನ್ನು ಅವಲಂಬಿಸಿ ತಮ್ಮ ಒಂದು ಎಕರೆ ಹೊಲದಲ್ಲಿ ಅವರು ಕಡಲೆ ಬೀಜ, ಸೋಯಾಬೀನ್ ಮತ್ತು ತರಕಾರಿಗಳನ್ನು ಸಹ ಬೆಳೆಯುತ್ತಿದ್ದರು. ಆರು ವರ್ಷಗಳ ತರುವಾಯ ತಮ್ಮ 28ನೇ ವಯಸ್ಸಿನಲ್ಲಿ ತಂದೆ ಕೃಷ್ಣ ಭೊರೆ ಅವರೊಂದಿಗೆ ಹಗ್ಗವನ್ನು ತಯಾರಿಸುವ ಕೆಲಸದಲ್ಲಿ ತೊಡಗಿದರು.

ಕ್ವಿಂಟಲ್‍ಗೆ 38,000 ರೂ.ಗಳಂತೆ ಇಚಲ್‍ಕರಂಜಿಯಿಂದ (ಬೊರಗಾಂವ್‍ನಿಂದ 15 ಕಿ.ಮೀ.) ದೇವು, ಹತ್ತಿಯನ್ನು ಸಗಟಿನಲ್ಲಿ ಖರೀದಿಸುತ್ತಾರೆ. ಭೊರೆ ಕುಟುಂಬವು ಪ್ರತಿ ಎರಡು ವಾರಗಳಿಗೆ ಸುಮಾರು ಒಂದು ಕ್ವಿಂಟಲ್ (100 ಕೆ. ಜಿ.) ಹತ್ತಿಯನ್ನು ಬಳಸಿ ತಲಾ 550 ಗ್ರಾಂ ತೂಕವಿರುವ ಸುಮಾರು 12 ಅಡಿ ಉದ್ದದ 150 ಹಗ್ಗಗಳನ್ನು ತಯಾರಿಸುತ್ತದೆ. ಇದರೊಂದಿಗೆ ಚಿಕ್ಕ ಹಗ್ಗಗಳನ್ನೂ ಸಹ ತಯಾರಿಸಲಾಗುತ್ತದೆ.

ಹತ್ತಿಯ ಎಳೆಗಳನ್ನು ಮೂರು ದಿನಕ್ಕೊಮ್ಮೆ ತಯಾರಿಸುವ ದೇವು, ಇತರೆ ದಿನಗಳಲ್ಲಿ, ಆರ್. ಕೆ. ನಗರದ ತಮ್ಮ ಮನೆಯ ಹೊರಗಿನ ಮಣ್ಣಿನ ರಸ್ತೆಯಲ್ಲಿನ 120 ಅಡಿ ‘ರೋಪ್ ವಾಕ್’ ನ ಗುಂಟ ಹತ್ತಿಯ ಎಳೆಗಳನ್ನು ಎಳೆದು ಹಿಗ್ಗಿಸುತ್ತಾರೆ. ರೋಪ್ ವಾಕ್‍ನ ಒಂದು ಬದಿಗೆ ಹತ್ತಿಯ ಕಟ್ಟುಗಳನ್ನು ಬಿಗಿದ 6 ಚಿಕ್ಕ ಕೊಕ್ಕೆಗಳನ್ನೊಳಗೊಂಡ ಯಂತ್ರವನ್ನು ಅಮಿತ್ ನಿರ್ವಹಿಸುತ್ತಾರೆ. ಮತ್ತೊಂದು ಬದಿಗೆ ಹತ್ತಿಯ ಎಳೆಯ ಕಟ್ಟುಗಳನ್ನು ಸೇರಿಸಿದ ‘ಟಿ’ ಆಕಾರದ ಮೀಟುಗೋಲು ಅಥವ ಭೊರ್‍ಖಡಿಯೊಂದಿಗೆ ನಂದುಬಾಯಿ ಅವರು ಆಸೀನರಾಗಿರುತ್ತಾರೆ.

ಮತ್ತೊಂದು ಮೀಟುಗೋಲನ್ನು ತಿರುಗಿಸಿದಾಗ, ಕೊಕ್ಕೆಗಳು ತಿರುಗಿಸಲ್ಪಟ್ಟು ಹತ್ತಿಯ ಎಳೆಗಳು ತಿರುಚಲ್ಪಡುತ್ತವೆ. ದೇವು, ಹತ್ತಿಯ ಎಳೆಗಳ ಕಟ್ಟಿನ ನಡುವೆ ಮರದ ಕರ್ಲ ಅಥವ ಬಿರಡೆಯನ್ನು ಇಟ್ಟು ಅವು ಬಿಗಿಯಾಗಿ ಹಾಗೂ ಮಟ್ಟಸವಾಗಿ ತಿರುಚಿಕೊಳ್ಳುವಂತೆ ಅವುಗಳ ಉದ್ದಕ್ಕೂ ಅದನ್ನು ಚಲಿಸುತ್ತಾರೆ. ಈ ತಿರುಚುವಿಕೆಯು ಸುಮಾರು 30 ನಿಮಿಷಗಳವರೆಗೂ ಚಾಲ್ತಿಯಲ್ಲಿದ್ದು, ಮೂರು ಜನರ ಶ್ರಮವು ಇದಕ್ಕೆ ಅವಶ್ಯ. ಈ ಪ್ರಕ್ರಿಯೆಯು ಮುಗಿದ ನಂತರ ಹತ್ತಿಯ ಎಳೆಗಳನ್ನು ಒಟ್ಟಾಗಿ ತಿರುಚಿ, ಹಗ್ಗವನ್ನು ತಯಾರಿಸಬಹುದು.

PHOTO • Sanket Jain

ಜನರು ಹಗ್ಗಗಳನ್ನು ನಮ್ಮ ಬದಲು ಊರಿನ ಹಾರ್ಡ್‍ವೇರ್ ಅಂಗಡಿಗಳಿಂದ ಕೊಂಡುಕೊಳ್ಳುತ್ತಿದ್ದಾರೆ. ರಸ್ತೆಬದಿಯಲ್ಲಿ ಬಿಕರಿಯಾಗುವ ಹಗ್ಗಗಳಿಗಿಂತಲೂ ಅಂಗಡಿಗಳ ಹಗ್ಗವು ಉತ್ತಮ ಗುಣಮಟ್ಟದ್ದೆಂದು ಜನರ ನಂಬಿಕೆ.

ಕೆಲವೊಮ್ಮೆ ಬೇಡಿಕೆಗೆ ಅನುಗುಣವಾಗಿ, ಹಗ್ಗವನ್ನು ತಯಾರಿಸುವ ಮೊದಲು, ದೇವು, ಹತ್ತಿಯ ಎಳೆಗಳಿಗೆ ಬಣ್ಣ ಹಾಕುತ್ತಾರೆ. ಮಹಾರಾಷ್ಟ್ರದ ಮಿರಜ್ ಊರಿಗೆ 30 ಕಿ.ಮೀ ಗಳ ಬಸ್ಸಿನ ಪ್ರಯಾಣವನ್ನು ಕೈಗೊಂಡು, ಎರಡು ತಿಂಗಳಿಗೊಮ್ಮೆ ಬಣ್ಣದ ಪುಡಿಯನ್ನು 260 ರೂ. ಗಳಿಗೆ 250 ಗ್ರಾಂ ನಂತೆ ಖರೀದಿಸುತ್ತಾರೆ. ಬಣ್ಣವನ್ನು 5 ಲೀಟರ್ ನೀರಿಗೆ ಬೆರೆಸಿ ಅದರಲ್ಲಿ ಹತ್ತಿಯ ಎಳೆಗಳನ್ನು ಮುಳುಗಿಸಲಾಗುತ್ತದೆ. ಒದ್ದೆಯಾದ ಈ ಎಳೆಗಳು ಬಿಸಿಲಿನಲ್ಲಿ ಒಣಗಲು ಸುಮಾರು ಎರಡು ಗಂಟೆಗಳು ಅಗತ್ಯ.

ರೈತರಿಗೆಂದು ದೇವು ಅವರ ಕುಟುಂಬವು ಎರಡು ರೀತಿಯ ಹಗ್ಗಗಳನ್ನು ತಯಾರಿಸುತ್ತದೆ: ಎತ್ತಿನ ಕುತ್ತಿಗೆಗೆ ಕಟ್ಟುವ 3 ಅಡಿ ಉದ್ದದ ಕಂಡ ಹಾಗೂ ನೇಗಿಲಿಗೆ ಕಟ್ಟುವ 12 ಅಡಿ ಉದ್ದದ ಕಸ್ರ. ಕಟಾವು ಮಾಡಿದ ಬೆಳೆಗಳನ್ನು ಕಟ್ಟಲು ಹಾಗೂ ಕೆಲವು ಮನೆಗಳಲ್ಲಿ, ಶಿಶುವಿನ ತೊಟ್ಟಿಲನ್ನು ತಾರಸಿಯಿಂದ ಕಟ್ಟಲು ಕಸ್ರವನ್ನು ಬಳಸುತ್ತಾರೆ. ಭೊರೆಗಳು ಕರ್ನಾಟಕದ ಸೌಂದಲ್ಗ, ಕರಡಗ, ಅಕ್ಕೊಲ್, ಭೊಜ್ ಮತ್ತು ಗಲಟ್ಗ ಹಳ್ಳಿಗಳಲ್ಲಿನ ವಾರದ ಸಂತೆಗಳಲ್ಲಿ ಈ ಹಗ್ಗಗಳನ್ನು ಮಾರುತ್ತಾರೆ. ಬಣ್ಣ ಹಾಕಿದ ಕಸ್ರ ಜೋಡಿ ಹಗ್ಗವು 100 ರೂ.ಗಳಿಗೆ, ಬಿಳಿಯ ಹಗ್ಗವು 80 ರೂ.ಗಳಿಗೆ, ಕಂಡ ಜೋಡಿ ಹಗ್ಗವು 50 ರೂ.ಗಳಿಗೆ ಹಾಗೂ ಬಿಳಿಯ ಜೋಡಿ ಹಗ್ಗವು 30 ರೂ.ಗಳಿಗೆ ಮಾರಾಟವಾಗುತ್ತದೆ.

"ಇದರಿಂದ ನಮಗೆ ಹೆಚ್ಚಿನ ಸಂಪಾದನೆಯೇನಿಲ್ಲ", ಎನ್ನುತ್ತಾರೆ 30 ರ ಅಮಿತ್. ಸರಾಸರಿಯಂತೆ ಪ್ರತಿಯೊಬ್ಬ ಭೊರೆಯೂ ಎಂಟು ಗಂಟೆಗಳ ದುಡಿಮೆಗೆ ಪ್ರತಿದಿನವೂ 100 ರೂ.ಗಳನ್ನು ಸಂಪಾದಿಸುತ್ತಾರೆ. ಅಂದರೆ ಕುಟುಂಬದ ತಿಂಗಳ ಆದಾಯವು ಕೇವಲ 9,000 ರೂ.ಗಳಷ್ಟೇ. ದೇವು ತಿಳಿಸುವಂತೆ, "ಬೆಂದುರ್ ಮತ್ತು ಪೊಲ ಎಂಬ ವಾರ್ಷಿಕ ಹಬ್ಬಗಳಲ್ಲಿ (ಜೂನ್-ಆಗಸ್ಟ್‍ನಲ್ಲಿ ನಡೆಯುವ ಈ ಹಬ್ಬವನ್ನು ಎತ್ತುಗಳಿಗೆ ಸಮರ್ಪಿಸಲಾಗುತ್ತದೆ) ಬಣ್ಣದ ಹಗ್ಗಗಳಿಗೆ ಬೇಡಿಕೆ ಹೆಚ್ಚು". ಅಲ್ಲದೆ, ಕುಟುಂಬದ ಒಂದು ಎಕರೆ ಭೂಮಿಯಿಂದ (ನಾಲ್ಕು ಸಹೋದರರ ಜಂಟಿ ಒಡೆತನದಲ್ಲಿದೆ) ತನ್ನ ಪಾಲಿನ 10,000 ರೂ.ಗಳ ಬಾಡಿಗೆಯನ್ನು ಅವರು ಪಡೆಯುತ್ತಾರೆ. ಈಗ ಅದನ್ನು ಗೇಣಿದಾರ ರೈತನೊಬ್ಬನಿಗೆ ಗುತ್ತಿಗೆ ನೀಡಲಾಗಿದೆ.

"ನಿಮಗೀಗ ಎತ್ತುಗಳೂ (ಕೃಷಿಯಲ್ಲಿ) ಹೆಚ್ಚಾಗಿ ಕಾಣಸಿಗವು. ವ್ಯವಸಾಯವನ್ನು ಯಂತ್ರಗಳಿಂದ ನಡೆಸಲಾಗುತ್ತಿದೆ. ಇನ್ನು ಈ ಹಗ್ಗಗಳನ್ನು ಯಾರು ಕೊಳ್ಳುತ್ತಾರೆ?", ಎನ್ನುತ್ತಾರೆ ದೇವು. 50 ರ ನಂದುಬಾಯಿ, ಮೂಲತಃ ಮಹಾರಾಷ್ಟ್ರದ ಜೈಸಿಂಗ್‍ಪುರ್ ಊರಿನ ಕೃಷಿ ಕಾರ್ಮಿಕರ ಕುಟುಂಬದಿಂದ ಬಂದವರು. 15 ನೇ ವಯಸ್ಸಿನಲ್ಲಿ ವಿವಾಹವಾದಾಗಿನಿಂದಲೂ ಅವರು ಹಗ್ಗಗಳನ್ನು ತಯಾರಿಸುತ್ತಿದ್ದಾರೆ. "ಹೆಚ್ಚು ಬಾಳಿಕೆ ಬರುವ ನೈಲಾನ್ ಮತ್ತು ಪ್ಲಾಸ್ಟಿಕ್ ಹಗ್ಗಗಳಿಂದಾಗಿ, ಹತ್ತಿಯ ಹಗ್ಗಗಳಿಗೆ ಬೇಡಿಕೆ ಕುಸಿದಿದೆ. ಎರಡು ವರ್ಷಗಳ ಮಟ್ಟಿಗೂ ನಾವು ಈ ಉದ್ಯಮವನ್ನು ಮುಂದುವರೆಸಲಾರೆವು", ಎನ್ನುತ್ತಾರವರು.

ಈ ವೃತ್ತಿಯಿಂದ ಸಿಗುವ ಅಲ್ಪ ಆದಾಯದಿಂದ ನಿರುತ್ಸಾಹಗೊಂಡಿರುವ ಅಮಿತ್, "ದೊಡ್ಡ ಮಳಿಗೆದಾರರು ಕೇವಲ ಕುಳಿತಲ್ಲೇ ನಮ್ಮ ಹಗ್ಗಗಳನ್ನು ಮಾರಿ ಆದಾಯ ಗಳಿಸುತ್ತಾರೆ. ನಾವು ಶ್ರಮಪಟ್ಟರೂ ಹಣವನ್ನು ಗಳಿಸಲು ಸಾಧ್ಯವಿಲ್ಲ. ಜನರು ನಮ್ಮಿಂದ ಈ ಹಗ್ಗಗಳನ್ನು ಕೊಳ್ಳುವುದಿಲ್ಲ. ಊರುಗಳ ಕಬ್ಬಿಣದ ಸಾಮಾನುಗಳ ಅಂಗಡಿಯಿಂದ ಅವನ್ನು ಕೊಳ್ಳುತ್ತಾರೆ. ಬೀದಿ ಬದಿಗೆ ಮಾರುವ ಹಗ್ಗಗಳಿಗಿಂತಲೂ ಅಂಗಡಿಯಲ್ಲಿ ದೊರೆಯುವ ಹಗ್ಗಗಳೇ ಉತ್ತಮವೆಂಬುದು ಅವರ ನಂಬಿಕೆ", ಎನ್ನುತ್ತಾರೆ.

PHOTO • Sanket Jain

ದೇವು, ಒಂದೂವರೆಯಿಂದ ಎರಡು ಕೆ. ಜಿ. ತೂಕದ ಹತ್ತಿಯ ಎಳೆಗಳ ಕಟ್ಟುಗಳನ್ನು ತಯಾರಿಸಲು ತಮ್ಮ ಮನೆಯ ನೆಲದಿಂದ ತಾರಸಿಯಲ್ಲಿನ ಕೊಕ್ಕೆಯವರೆಗೂ ಹತ್ತಿಯ ಎಳೆಗಳನ್ನು ಎಳೆದು ಹಿಗ್ಗಿಸುತ್ತಾರೆ.

PHOTO • Sanket Jain

ದೇವು ಭೊರೆಯವರ ತಂದೆಯ ಕಾಲದಲ್ಲಿ, ಹಗ್ಗದ ತಯಾರಿಕೆಗೆ ಮರದ ಯಂತ್ರವನ್ನು ಬಳಸಲಾಗುತ್ತಿತ್ತು. ಈಗ ಅವರು ಕಬ್ಬಿಣದ 20 ಕೆ.ಜಿ ಗಿಂತಲೂ ಹೆಚ್ಚು ತೂಕದ ಕಬ್ಬಿಣದ ಯಂತ್ರವನ್ನು ಬಳಸುತ್ತಾರೆ.

PHOTO • Sanket Jain

ತಿರುಗುವ ಕೊಕ್ಕೆಗಳಿಗೆ ಬಿಗಿಯುವ ಹತ್ತಿಯ ನೂಲಿನ ಎಳೆಗಳನ್ನು ತಿರುಚಿ, ಬಿಗಿಯಾದ ಎಳೆಗಳನ್ನು ತಯಾರಿಸಿ, ನಂತರ ಅವನ್ನು ಒಟ್ಟಾಗಿ ತಿರುಚಿ, ಹಗ್ಗವನ್ನು ತಯಾರಿಸುತ್ತಾರೆ.

PHOTO • Sanket Jain

ದೇವು ಮತ್ತು ಆತನ ಕುಟುಂಬದವರು ಮನೆಯ ಹೊರಗಿನ ‘ರೋಪ್ ವಾಕ್’ ನಲ್ಲಿ ಹಗ್ಗಗಳನ್ನು ತಯಾರಿಸುತ್ತಿದ್ದಾರೆ. ಒಂದು ಬದಿಗೆ ಯಂತ್ರವಿದ್ದು, ಮತ್ತೊಂದು ಬದಿಗೆ ಭೊರ್ಖಡಿ ಅಥವ ‘ಟಿ’ ಆಕಾರದ ಮೀಟುಗೋಲಿದೆ.

PHOTO • Sanket Jain

ಮಹಾರಾಷ್ಟ್ರದ ಮಿರಜ್‍ ನಿಂದ ತಂದ ಬಣ್ಣದ ಪುಡಿಯನ್ನು ನೀರಿನೊಂದಿಗೆ ಬೆರೆಸಲಾಗುತ್ತದೆ. ನಂತರ, ದೇವು ಹಾಗೂ ಆತನ ಹಿರಿಯ ಮಗ ಅಮಿತ್, ಹತ್ತಿಯ ಎಳೆಗಳನ್ನು ಬಣ್ಣದಲ್ಲಿ ಮುಳುಗಿಸುತ್ತಾರೆ. ತರುವಾಯ 10 ನಿಮಿಷಗಳವರೆಗೆ ಎಳೆಗಳನ್ನು ನೆನೆಸಿ, ಎರಡು ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ.

PHOTO • Sanket Jain

ತಿರುಚುವ ಹಾಗೂ ಬಣ್ಣ ಹಾಕುವ ಪ್ರಕ್ರಿಯೆಯು ತೊಡಕಿನದಾಗಿದ್ದು; ದೇವು, ನಂದುಬಾಯಿ ಮತ್ತು ಅಮಿತ್ ಒಟ್ಟಾಗಿ ಅದನ್ನು ನಿರ್ವಹಿಸುತ್ತಾರೆ.

PHOTO • Sanket Jain

ರೋಪ್-ವಾಕ್‍ ನ ಒಂದು ತುದಿಗೆ ಅಮಿತ್ ನಿರ್ವಹಿಸುವ ಯಂತ್ರವಿದ್ದು, ಮತ್ತೊಂದು ಬದಿಗೆ ನಂದೂಬಾಯಿ ಇದ್ದಾರೆ.

PHOTO • Sanket Jain

ರೋಪ್-ವಾಕ್‍ ನಲ್ಲಿ ಭೊರೆಗಳು ಹಗ್ಗವನ್ನು ಎಳೆದು, ಅದಕ್ಕೆ ಬಣ್ಣ ಹಾಕುತ್ತಿದ್ದಾರೆ. ಹಲವು ಹಂತಗಳ ಈ ಪ್ರಕ್ರಿಯೆಯಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ವಿಭಿನ್ನ ಕಾರ್ಯಭಾರವಿರುತ್ತದೆ.

PHOTO • Sanket Jain

ಹತ್ತಿಯ ಎಳೆಗಳ ನಡುವೆ ದೇವು, ಮರದ ಕರ್ಲ ಅಥವ ಬಿರಡೆಯನ್ನಿಟ್ಟು, ಅವನ್ನು ಬಿಗಿಯಾಗಿ ಹಾಗೂ ಮಟ್ಟಸವಾಗಿ ತಿರುಚುತ್ತಾರೆ.

PHOTO • Sanket Jain

ಹತ್ತಿರದ ಹಳ್ಳಿಗಳ ಮಾರುಕಟ್ಟೆಗಳಲ್ಲಿ ಮಾರುವ ಹಗ್ಗಗಳನ್ನು ತಯಾರಿಸಲು, ಭೊರೆ ಕುಟುಂಬವು ಮುಂಜಾನೆ 8 ರಿಂದ ಮಧ್ಯಾಹ್ನ 3 ರವರೆಗೂ ಕೆಲಸದಲ್ಲಿ ನಿರತವಾಗಿರುತ್ತದೆ.

PHOTO • Sanket Jain

ಹಲವು ಪ್ರಕ್ರಿಯೆಗಳ ನಂತರ ಹಗ್ಗವು ಸಿದ್ಧಗೊಳ್ಳುತ್ತದೆ. ನಂತರದಲ್ಲಿ ಮಾರುಕಟ್ಟೆಗೆ ಕೊಂಡೊಯ್ಯುವ 12 ಅಡಿ ಉದ್ದದ ಹಗ್ಗವನ್ನು ಅಮಿತ್ ಹಾಗೂ ದೇವು ಮಡಿಚುತ್ತಾರೆ.

ಇದನ್ನೂ ಗಮನಿಸಿ: ಕಣ್ಮರೆಯಾಗುತ್ತಿರುವ ಭಾರತದ ವಿಶಿಷ್ಟ ಹಗ್ಗದ ಕಲೆ: ಫೋಟೋ ಆಲ್ಬಂ

ಅನುವಾದ: ಶೈಲಜ ಜಿ. ಪಿ.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Sanket Jain

ಮಹಾರಾಷ್ಟ್ರದ ಕೊಲ್ಹಾಪುರದ ನಿವಾಸಿಯಾದ ಸಂಕೇತ್ ಜೈನ್ 2019ರಲ್ಲಿ ‘ಪರಿ’ಯ ಫೆಲೋ ಆಗಿ ಕಾರ್ಯ ನಿರ್ವಹಿಸಿದ್ದಾರೆ.

Other stories by Sanket Jain