ಆರು ವರ್ಷಗಳ ಹಿಂದೆ ತುಂಬುಕುಟುಂಬದ ಜಮೀನು ಸದಸ್ಯರಲ್ಲಿ ಪಾಲಾಗಿಹೋದ ನಂತರ ಖಾಮಸ್ವಾಡಿ ಹಳ್ಳಿಯಲ್ಲಿರುವ ನಾಲ್ಕು ಎಕರೆ ಜಮೀನಿನ ಒಡೆತನವನ್ನು ಸಂದೀಪ್ ಶೆಲ್ಕೆ ವಹಿಸಿಕೊಂಡಿದ್ದ. ಈ ಖಾಮಸ್ವಾಡಿ ಎಂಬ ಹಳ್ಳಿಯು ಮರಾಠಾವಾಡದ ಒಸ್ಮಾನಾಬಾದ್ ಜಿಲ್ಲೆಯಲ್ಲಿದೆ. ಆಗ ಆತನಿಗೆ ಹತ್ತೊಂಭತ್ತಷ್ಟೇ ತುಂಬಿತ್ತು. ``ನನ್ನ ಹಿರಿಯ ಮಗನಾದ ಮಹೇಶನಿಗೆ ಅಂಗವೈಕಲ್ಯದಿಂದಾಗಿ ಎರಡೂ ಕಾಲುಗಳು ಸ್ವಾಧೀನದಲ್ಲಿಲ್ಲ. ಕುಟುಂಬದ ಜಮೀನು ಇನ್ನೂ ಬಟವಾಡೆಯಾಗದಿದ್ದ ಆ ದಿನಗಳಲ್ಲಿ ಸಂದೀಪನ ಸಂಬಂಧಿಯಾಗಿದ್ದಾತನೇ ಜಮೀನಿನ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ. ನನ್ನ ಗಂಡ ಕೃಷಿ ಕಾರ್ಮಿಕನಾಗಿ ದುಡಿಯುವವನು. ಲೋಕಜ್ಞಾನವೆಂಬುದು ಆತನಿಗೆ ಅಷ್ಟಕ್ಕಷ್ಟೇ. ಹೀಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಗೋಜಿಗೆಲ್ಲಾ ಆತ ಹೋಗುವುದೇ ಇಲ್ಲ'', ಎನ್ನುತ್ತಿದ್ದಾರೆ ಸಂದೀಪನ ತಾಯಿ ನಂದೂಬಾಯಿ. ಹೀಗೆ ಹೇಳುವಾಗಲೆಲ್ಲಾ ಆಕೆಯ ಕಣ್ಣಾಲಿಗಳು ತುಂಬಿಬರುತ್ತಿವೆ. 

ಹೇಳಿಕೊಳ್ಳುವಂಥಾ ಲಾಭವಿಲ್ಲದಿದ್ದರೂ ಶೆಲ್ಕೆ ಕುಟುಂಬವು ಕಳೆದ ಕೆಲವು ವರ್ಷಗಳಿಂದ ಜೋಳ, ಗೋಧಿ ಮತ್ತು ಸೋಯಾಬೀನ್ ಗಳನ್ನು ತನ್ನ ಜಮೀನಿನಲ್ಲಿ ಬೆಳೆಯುತ್ತಾ ಬಂದಿದೆ. ಆದರೆ ಈ ಬಾರಿಯ ಬಿತ್ತನೆಯ ಋತುವಿನಲ್ಲಿ, ಅಂದರೆ ಎಪ್ರಿಲ್ 2017 ರಲ್ಲಿ ಸಂದೀಪ ಕಬ್ಬು ಬೆಳೆಯುವ ಹೊಸ ಸಾಹಸಕ್ಕೆ ಕೈಹಾಕಿದ್ದ. ``ಸಾಲವನ್ನು ತೀರಿಸುವ ನಿಟ್ಟಿನಲ್ಲಿ ನಗದುಬೆಳೆಯೊಂದನ್ನು ಬೆಳೆಯುವುದು ನಮ್ಮ ಮುಂದಿದ್ದ ಆಯ್ಕೆಗಳಲ್ಲಿ ಒಂದಾಗಿತ್ತು'', ಮಂದ ಬೆಳಕಿರುವ ಟಿನ್ ಛಾವಣಿಯ ಮನೆಯಲ್ಲಿ ಕುಳಿತಿರುವ ನಂದೂಬಾಯಿ ಹೇಳುತ್ತಿದ್ದಾರೆ. 

2012 ರಲ್ಲಿ, ಅಂದರೆ ಸಂದೀಪನು ಜಮೀನಿನ ಉಸ್ತುವಾರಿಯನ್ನು ವಹಿಸಿಕೊಂಡ ಎರಡು ವರ್ಷಗಳಲ್ಲೇ ಮರಾಠಾವಾಡ ಪ್ರದೇಶವು ಸತತ ನಾಲ್ಕು ವರ್ಷಗಳ ಕಾಲದ ಸುದೀರ್ಘ ಹವಾಮಾನ ವೈಪರೀತ್ಯಕ್ಕೆ ತುತ್ತಾಗಿ ತತ್ತರಿಸಿಹೋಗಿತ್ತು. ಭಯಂಕರ ಬಿರುಗಾಳಿಗಳು, ಋತುವಿನ ಲೆಕ್ಕಾಚಾರಗಳಿಲ್ಲದೆ ಎಂದೆಂದಿಗೋ ಆಗುತ್ತಿದ್ದ ವರ್ಷಧಾರೆ, ಭೀಕರ ಕ್ಷಾಮಗಳು ಮರಾಠಾವಾಡವನ್ನು ಕಂಗೆಡಿಸಿದ್ದವು. ಸಹಜವಾಗಿಯೇ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗಿ ರೈತರು ಭಾರೀ ನಷ್ಟಗಳನ್ನು ಅನುಭವಿಸಬೇಕಾಯಿತು. ಶೆಲ್ಕೆ ಕುಟುಂಬವೂ ಕೂಡ ಸ್ಥಳೀಯ ಬ್ಯಾಂಕಿನಿಂದ ಪಡೆದ ಮೂರೂವರೆ ಲಕ್ಷಗಳ ಸಾಲ ಮತ್ತು ಖಾಸಗಿ ವ್ಯಕ್ತಿಯೊಬ್ಬನಿಂದ ಮಾಡಿದ ಒಂದು ಲಕ್ಷದ ಸಾಲದಿಂದ ಸಂಕಷ್ಟದ ಸುಳಿಯಲ್ಲಿ ಬಿದ್ದಿತ್ತು. 

ಇವೆಲ್ಲಾ ನಷ್ಟಗಳ ಹೊರತಾಗಿಯೂ ಸಂದೀಪ್ ಶೆಲ್ಕೆ ಸೋಲೊಪ್ಪುವ ಜಾಯಮಾನದವನಾಗಿರಲಿಲ್ಲ. ಇಂಥಾ ಸ್ಥಿತಿಯಲ್ಲೂ ಸಂದೀಪ ತನ್ನ ಹಿರಿಯಕ್ಕ ಸಂಧ್ಯಾಳ ವಿವಾಹವನ್ನು ಸಾಂಗವಾಗಿ ನೆರವೇರಿಸಿದ್ದ. ``ಅವನು ನಿಜಕ್ಕೂ ಒಬ್ಬ ವಿಧೇಯ ಮತ್ತು ಜವಾಬ್ದಾರಿಯುತ ಹುಡುಗನಾಗಿದ್ದ. ಅಮ್ಮನಿಗೆ ಅಡುಗೆಮನೆಯಲ್ಲಿ ಸಹಾಯ ಮಾಡುವುದರಿಂದ ಹಿಡಿದು ತಮ್ಮಂದಿರ ಆರೈಕೆಯವರೆಗೂ ನಮ್ಮ ಮನೆಯಲ್ಲಿ ಅವನ ಪಾತ್ರವಿತ್ತು'', ಎಂದು ಆಪ್ತವಾಗಿ ನೆನಪಿಸಿಕೊಳ್ಳುತ್ತಾರೆ ಸಂಧ್ಯಾ. 

PHOTO • Parth M.N.

``ಬಾಕಿಯಿದ್ದ ಸಾಲಗಳನ್ನು ಶೀಘ್ರವಾಗಿ ತೀರಿಸಲು ನಗದುಬೆಳೆಯು ನಮ್ಮ ಮುಂದಿನ ಆಯ್ಕೆಗಳಲ್ಲೊಂದಾಗಿತ್ತು'', ಎನ್ನುತ್ತಾರೆ ಮಗನ ಅನಿರೀಕ್ಷಿತ ಸಾವನ್ನು ಅರಗಿಸಿಕೊಳ್ಳಲಾರದೆ ದುಃಖಿತರಾಗಿರುವ ನಂದೂಬಾಯಿ. 

ಸರಕಾರದಿಂದ ಕನಿಷ್ಠ ಬೆಂಬಲ ಬೆಲೆಯನ್ನು ಪಡೆದುಕೊಳ್ಳದ ಸಾಂಪ್ರದಾಯಿಕ ಆಹಾರ ಬೆಳೆಗಳನ್ನು ನಂಬಿಕೊಂಡರೆ ಬಾಕಿಯಿರುವ ಸಾಲಗಳನ್ನು ತೀರಿಸಲು ಸಾಧ್ಯವಿಲ್ಲವೆಂಬ ಆತಂಕವು ಸಂದೀಪನಿಗಿತ್ತು. ಸಾಮಾನ್ಯವಾಗಿ ಇಂಥಾ ಬೆಳೆಗಳ ದರಗಳು ಮಾರುಕಟ್ಟೆಗಳಲ್ಲಿ ತೀವ್ರ ಏರಿಳಿತಕ್ಕೊಳಗಾಗುವುದರಿಂದ ಬರುವ ಲಾಭನಷ್ಟಗಳ ಪ್ರಮಾಣದಲ್ಲೂ ವ್ಯತ್ಯಾಸಗಳಾಗುವುದು ಸಹಜ. ಇತ್ತ ಸರಕಾರವು ಕಬ್ಬಿನ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಒದಗಿಸುವುದರಿಂದ ತಕ್ಕಮಟ್ಟಿನ ಬೆಳೆಯು ನಸೀಬಾದರೂ ನಿರೀಕ್ಷಿತ ಲಾಭವನ್ನು ಪಡೆದುಕೊಳ್ಳಬಹುದು ಎಂಬುದು ಸಂದೀಪನ ಲೆಕ್ಕಾಚಾರವಾಗಿತ್ತು. ಆದರೆ ಕಬ್ಬನ್ನು ಬೆಳೆಯುವುದೆಂದರೆ ತಮಾಷೆಯ ಮಾತಲ್ಲ. ಈ ಬೆಳೆಯಲ್ಲಿರುವ ಅಪಾಯಗಳೂ ಕೂಡ ಹೆಚ್ಚು. ಮೇಲಾಗಿ ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬೇಡುವಂತಹ ಮತ್ತು ಇತರ ಬೆಳೆಗಳಿಗೆ ಹೋಲಿಸಿದರೆ ಹೆಚ್ಚಿನ ಬಂಡವಾಳದ ಅವಶ್ಯಕತೆಯಿರುವ ಬೆಳೆಗಳಲ್ಲೊಂದು. ``ನಾವುಗಳು ಆಗಲೇ ಕಷ್ಟದ ಸ್ಥಿತಿಯಲ್ಲಿದ್ದೆವು. ಹೀಗಾಗಿ ಏನಾದರೊಂದು ಮಾರ್ಗವನ್ನು ಕಂಡುಕೊಳ್ಳಲೇಬೇಕಿತ್ತು'', ಎನ್ನುತ್ತಾರೆ ನಂದೂಬಾಯಿ. 

ಅಂತೂ ಎಲ್ಲಾ ಸಮಸ್ಯೆಗಳಿಗೆ ಪರಿಹಾರೋಪಾಯವೊಂದನ್ನು ಕಂಡುಕೊಳ್ಳುವತ್ತ ಹೆಜ್ಜೆಹಾಕಿದ್ದ ಸಂದೀಪ್ ಶೆಲ್ಕೆ ಸ್ಥಳೀಯ ವ್ಯಕ್ತಿಯೊಬ್ಬನಿಂದ ಒಂದು ಲಕ್ಷ ಸಾಲವನ್ನು ಪಡೆದು ಕೊಳವೆಬಾವಿಯನ್ನು ತೋಡಿಸಿದ್ದ. ಅದೃಷ್ಟವಶಾತ್ ಈ ಕೊಳವೆಬಾವಿಯಲ್ಲಿ ನೀರು ದಕ್ಕಿತ್ತು. ಇತ್ತ ನೆಡಲು ಕಬ್ಬುಗಳನ್ನೂ ಕೂಡ ಸ್ಥಳೀಯರೊಬ್ಬರಿಂದ ಸಾಲ ಮಾಡಿ ಖರೀದಿಸಿ ತಂದ ಸಂದೀಪ ಜಮೀನಿನ ಮೂಲೆಯಲ್ಲಿದ್ದ ನಿಂಬೆಮರದಡಿಯಲ್ಲಿ ಅವುಗಳನ್ನು ರಾಶಿಹಾಕಿದ್ದ. ಈ ಹಂತಗಳ ನಂತರ ಮಳೆಗಾಗಿ ಕಾಯುವುದು ತಕ್ಷಣದ ಅಗತ್ಯವಾಗಿತ್ತು. ತಕ್ಕಮಟ್ಟಿನ ಮಳೆಯು ಸುರಿದದ್ದೇ ಆದಲ್ಲಿ ರಸಗೊಬ್ಬರಗಳನ್ನು ಮತ್ತು ಕೀಟನಾಶಕಗಳನ್ನು ಖರೀದಿಸಿ ಆದಷ್ಟು ಬೇಗ ಕಬ್ಬಿನ ಕೃಷಿಯನ್ನು ಶುರುಮಾಡುವ ಉಮೇದಿನಲ್ಲಿದ್ದ ಸಂದೀಪ.

PHOTO • Parth M.N.

ಸಾಲ ಮಾಡಿರುವ ತಪ್ಪಿಗೆ ಒಸ್ಮಾನಾಬಾದ್ ಜಿಲ್ಲೆಯ ಖಾಮಸ್ವಾಡಿ ಪ್ರದೇಶದಲ್ಲಿರುವ ಶೆಲ್ಕೆ ಕುಟುಂಬವು ತೆತ್ತ ಬೆಲೆಯಾದರೂ ಎಂಥದ್ದು? ಇಷ್ಟಾದರೂ ಸಂದೀಪನ ತಂದೆಯಾದ ಬಲಭೀಮ್ ಇನ್ನೂ ಅನಿಶ್ಚಿತತೆಯ ಗೊಂದಲಗಳಲ್ಲಿ ಕಳೆದುಹೋಗಿದ್ದಾನೆ.  

ಆದರೆ ಇವೆಲ್ಲಾ ಬೆಳವಣಿಗೆಗಳ ಜೊತೆಜೊತೆಗೆ ಕಾಲಚಕ್ರವೂ ಕೂಡ ಉರುಳುತ್ತಿತ್ತು. ಜಮೆಯಾಗುತ್ತಿದ್ದ ಸಾಲದ ಮೊತ್ತವು ದಿನೇದಿನೇ ಹೆಚ್ಚಾಗತೊಡಗಿತ್ತು. ಬ್ಯಾಂಕ್ ಸಾಲಗಳ ಹೊರತಾಗಿ ಹಿಂದೆ ತೆಗೆದುಕೊಂಡಿದ್ದ ಮತ್ತು ಇತ್ತೀಚೆಗೆ ತೆಗೆದುಕೊಂಡ ಖಾಸಗಿ ಸಾಲಗಳನ್ನು ಸೇರಿಸಿ ಒಟ್ಟು ಮೂರು ಲಕ್ಷಗಳಷ್ಟು ಸಾಲವು ಬೆಳೆದುನಿಂತಿತ್ತು. ``ಬಿತ್ತನೆಯನ್ನು ಮಾಡಿ ಕೈಸುಟ್ಟುಕೊಂಡ ಬೆಳೆಗಳು ನಮ್ಮನ್ನು ಸಂಪೂರ್ಣವಾಗಿ ಕುಸಿದುಹೋಗುವಂತೆ ಮಾಡಬಲ್ಲವು. ಬಹುಷಃ ದಿನಗಳು ಕಳೆದಂತೆ ಸಂದೀಪನ ಮೇಲಿದ್ದ ಒತ್ತಡವು ಮಿತಿಮೀರಿ ಆತನನ್ನು ಕಂಗೆಡಿಸತೊಡಗಿತ್ತು'', ಎನ್ನುತ್ತಾರೆ ಸಂದೀಪನ ತಂದೆಯಾಗಿರುವ ಐವತ್ತೆರಡರ ಪ್ರಾಯದ ಬಲಭೀಮ್. 

ಜೂನ್ ಎಂಟರ ಕರಾಳ ದಿನದಂದು ಮಾತ್ರ ಅನಾಹುತವೇ ನಡೆದುಹೋಗಿತ್ತು. ಅದ್ಯಾವ ನಿಂಬೆಮರದಡಿ ನೆಡಲು ತಂದಿದ್ದ ಕಬ್ಬುಗಳನ್ನು ತುಂಬಿದ ಗೋಣಿಚೀಲಗಳನ್ನು ಸಂದೀಪ ರಾಶಿ ಹಾಕಿಟ್ಟಿದ್ದನೋ ಅದೇ ನಿಂಬೆಮರಕ್ಕೆ ಆತ ನೇಣುಹಾಕಿಕೊಂಡಿದ್ದ. ``ಮುಂಜಾನೆಯ ಸುಮಾರು ಎಂಟರ ಹೊತ್ತಿಗೆ ನೆರೆಕರೆಯವರೊಬ್ಬರು ಮರದಲ್ಲಿ ದೇಹವೊಂದು ನೇತಾಡುತ್ತಿರುವುದನ್ನು ಕಂಡರಂತೆ. ವಿಷಯ ತಿಳಿದು ಕಂಗಾಲಾದ ನಾವು ಕೂಡಲೇ ಹೋಗಿ ಏನಾಯಿತೆಂದು ನೋಡಿದರೆ ಸಂದೀಪನ ಮೃತದೇಹವು ಮರದಲ್ಲಿ ನೇತಾಡುತ್ತಿತ್ತು. ಆ ದೃಶ್ಯವನ್ನು ನೋಡುತ್ತಲೇ ನಾನು ಮರಗಟ್ಟಿಹೋದಂತಾದೆ'', ಎಂದು ಆ ಮರದಡಿಯ ನೆರಳಿನಲ್ಲಿ ನಿಂತು ಮರಳಿ ಬರಲಾರದ ಜಾಗಕ್ಕೆ ಹೊರಟುಹೋದ ಮಗನನ್ನು ನೆನಪಿಸಿಕೊಳ್ಳುತ್ತಿದ್ದಾರೆ ಬಲಭೀಮ್.   

PHOTO • Parth M.N.

ಸಂದೀಪ್ ಶೆಲ್ಕೆ ನೇಣುಹಾಕಿಕೊಂಡ ಮರದ ಆಸುಪಾಸಿನಲ್ಲಿ ಅಡ್ಡಾಡುತ್ತಿರುವ ಬಲಭೀಮ ಶಿಲ್ಕೆ ಮತ್ತು ಇತರ ರೈತರು 

ಈ ವರ್ಷದ ಮೊದಲ ಐದು ತಿಂಗಳುಗಳಲ್ಲಿ ಒಸ್ಮಾನಾಬಾದ್ ಜಿಲ್ಲೆಯ ಒಟ್ಟು ಐವತ್ತೈದು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಜಿಲ್ಲಾಧಿಕಾರಿಯವರ ಕಚೇರಿಯ ದಾಖಲೆಯೊಂದು ಹೇಳುತ್ತಿದೆ. ಅಂದರೆ ಪ್ರತೀ ಮೂರು ದಿನಗಳಿಗೊಮ್ಮೆ ಒಂದು ಆತ್ಮಹತ್ಯೆಯು ಸಂಭವಿಸಿದೆ ಎಂದಾಯಿತು. 2016 ರ ಮಳೆಗಾಲದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಬರಗಾಲದ ತೀವ್ರತೆಯು ಕೊಂಚ ಕಮ್ಮಿಯಾದ ಹೊರತಾಗಿಯೂ ಈ ಸಂಖ್ಯೆಯಲ್ಲಿ ಹೇಳಿಕೊಳ್ಳುವಂತಹ ಇಳಿಕೆಯೇನೂ ಆಗಲಿಲ್ಲ. ತಕ್ಕಮಟ್ಟಿನ ಮಳೆಯ ಹೊರತಾಗಿಯೂ ಮರಾಠಾವಾಡದ ರೈತರ ಆತ್ಮಹತ್ಯೆಗಳು ಕಮ್ಮಿಯಾಗದ ಹಿಂದಿನ ಪ್ರಮುಖ ಕಾರಣವೆಂದರೆ ಮುಂದಿನ ಬಿತ್ತನೆಗಾಗಿ ಸಾಲವನ್ನು ಹೊಂದಿಸಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. 

ರೈತರಾದರೂ ಸಾಲಕ್ಕಾಗಿ ಯಾರತ್ತ ತಮ್ಮ ಕೈಚಾಚಬಲ್ಲರು? ಬ್ಯಾಂಕುಗಳು ಸಾಲವನ್ನು ನೀಡುವ ರೀತಿಯೇ ಬೇರೆ. ಬ್ಯಾಂಕಿಂಗ್ ಕ್ಷೇತ್ರವು ಅದೆಷ್ಟು ಪ್ರಾದೇಶಿಕ ಅಸಮತೋಲನದಿಂದ ಕೂಡಿದೆ ಎಂಬುದರ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕಿನ ದಾಖಲೆಗಳು ಯಶಸ್ವಿಯಾಗಿ ಬೆಳಕನ್ನು ಚೆಲ್ಲುತ್ತವೆ. ಉದಾಹರಣೆಗೆ ಎಂಟು ಜಿಲ್ಲೆಗಳನ್ನು ಹೊಂದಿರುವ ಮರಾಠಾವಾಡದ ಒಟ್ಟು ಜನಸಂಖ್ಯೆ 18 ಮಿಲಿಯನ್. ಇದು ಪುಣೆಯ 9 ಮಿಲಿಯನ್ ಜನಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು. ಆದರೆ ಮಾರ್ಚ್ 2016 ರವರೆಗೆ ಬ್ಯಾಂಕುಗಳಿಂದ (ರಾಷ್ಟ್ರೀಕೃತ ಮತ್ತು ಖಾಸಗಿ) ಮರಾಠಾವಾಡಾಗೆ ನೀಡಲಾದ ಸಾಲದ ಮೊತ್ತವು (ರೂ. 45795 ಕೋಟಿ) ಪುಣೆಗೆ ನೀಡಲಾದ ಸಾಲದ ಮೊತ್ತದ (ರೂ. 140,643 ಕೋಟಿ) ಮೂರನೇ ಒಂದು ಭಾಗಕ್ಕಿಂತಲೂ ಕಮ್ಮಿ. ಆರ್ಥಿಕತೆಯ ನೆಲೆಯಲ್ಲಿ ಅಷ್ಟೇನೂ ಲಾಭದಾಯಕವಲ್ಲದ ಪ್ರದೇಶಗಳ ಬಗ್ಗೆ ಬ್ಯಾಂಕುಗಳಿಗೆ ಅದೆಷ್ಟರ ಮಟ್ಟಿನ ಅಸಡ್ಡೆಯ ಭಾವನೆಯಿದೆ ಎಂಬುದಕ್ಕೆ ಇದಕ್ಕೊಂದು ಸ್ಪಷ್ಟ ನಿದರ್ಶನ. ಕೃಷಿ ಸಂಬಂಧಿ ಉದ್ಯಮಗಳು ಇಂತಹ ಭಾಗಗಳಲ್ಲೇಕೆ ತಲೆಯೆತ್ತುತ್ತಿಲ್ಲ ಎಂಬುದಕ್ಕೂ ಇಲ್ಲಿ ಸ್ಪಷ್ಟ ಉತ್ತರವಿದೆ. 

ಆಲ್ ಇಂಡಿಯಾ ಎಂಪ್ಲಾಯೀಸ್ ಬ್ಯಾಂಕ್ ಅಸೋಸಿಯೇಷನ್ನಿನ ಜಂಟಿ ಕಾರ್ಯದರ್ಶಿಯಾಗಿರುವ ದೇವಿದಾಸ್ ತುಲಜಾಪೂರ್ಕರ್ ರವರು ಹೇಳುವ ಪ್ರಕಾರ ಮಹಾರಾಷ್ಟ್ರದ ತೊಂಭತ್ತು ಪ್ರತಿಶತ ಬ್ಯಾಂಕ್ ವಹಿವಾಟುಗಳು ನಡೆಯುವ ಪ್ರದೇಶಗಳೆಂದರೆ ಥಾಣೆ, ಮುಂಬೈ ಮತ್ತು ಪುಣೆ. ``ಆರ್ಥಿಕ ಸಮತೋಲನವನ್ನು ಕಾಯ್ದುಕೊಳ್ಳಲು ಅಭಿವೃದ್ಧಿ ಹೊಂದಿದ ಪ್ರದೇಶಗಳಿಂದ ಹಿಂದುಳಿದ ಪ್ರದೇಶಗಳ ಕಡೆಗೆ ಸಂಪನ್ಮೂಲಗಳು ಹರಿದುಬರಬೇಕಿತ್ತು. ಆದರೆ ನಾವು ಈ ಕಂದಕವನ್ನು ಮತ್ತಷ್ಟು ದೊಡ್ಡದಾಗಿಸುತ್ತಿದ್ದೇವೆ'', ಎನ್ನುತ್ತಿದ್ದಾರೆ ದೇವಿದಾಸ್. 

ಇವೆಲ್ಲವೂ ಕಮ್ಮಿಯೆಂಬಂತೆ ಬ್ಯಾಂಕುಗಳು ರೈತರ ಕೃಷಿ ಸಾಲಗಳನ್ನು ಇತರ ಸಾಲಗಳೊಂದಿಗೆ ಜೋಡಿಸುತ್ತಾ ರೈತರ ಸಾಲಗಳನ್ನು ಮತ್ತಷ್ಟು ದೊಡ್ಡದಾಗಿಸುತ್ತಿವೆ. ಉದಾಹರಣೆಗೆ ಕೃಷಿ ಸಾಲಕ್ಕಿರುವ (ಕೃಷಿ ಸಂಬಂಧಿ ಚಟುವಟಿಕೆಗಳಾದ ಬೀಜಗಳ ಖರೀದಿ, ರಸಗೊಬ್ಬರಗಳ ಖರೀದಿ ಇತ್ಯಾದಿಗಳಿಗಾಗಿ) ಬಡ್ಡಿದರದ ಪ್ರಮಾಣ 7%. ಇದರಲ್ಲಿ 4% ಭಾಗವನ್ನು ರಾಜ್ಯ ಸರಕಾರವು ಸಂದಾಯ ಮಾಡುತ್ತದೆ. ಆದರೆ ಅವಧಿಯ ಸಾಲಗಳು (ಟ್ರಾಕ್ಟರ್ ಅಥವಾ ಇತರ ಯಂತ್ರೋಪಕರಣಗಳ ಖರೀದಿಗಾಗಿ ಮಾಡಲಾಗುವ ಬಂಡವಾಳ ಹೂಡಿಕೆಯ ಸಾಲಗಳು) ಬಡ್ಡಿದರದ ಎರಡರಷ್ಟನ್ನು ಬೇಡುತ್ತಿವೆ. ಈಗ ಇವೆರಡನ್ನೂ ಜೋಡಿಸಿ ಸಾಲಗಳ ಪುನರ್ರಚನೆಯನ್ನು ಮಾಡುತ್ತಿರುವ ಬ್ಯಾಂಕುಗಳು ರೈತರಿಗೆ ತಲೆನೋವಾಗಿ ಕಾಡುತ್ತಿವೆ. ಇವೆಲ್ಲದರ ನೇರ ಪರಿಣಾಮವೆಂದರೆ ರೈತನು ತೀರಿಸಬೇಕಾದ ಸಾಲದ ಮೊತ್ತವು ಮತ್ತಷ್ಟು ಹೆಚ್ಚಾಗಿ ಆತನಿಗೆ ಹೊಸ ಸಾಲಗಳು ಸಿಗದಂತಾಗಿಬಿಟ್ಟಿವೆ. 

ಸಾಲಗಳ ಪುನರ್ರಚನೆಯನ್ನು ಮಾಡುವ ಗೋಜಿಗೆ ಹೋಗಬೇಡಿ ಎಂಬ ಸಲಹೆಯನ್ನು ನಾನು ಬಹಳಷ್ಟು ರೈತರಿಗೆ ನೀಡುತ್ತಿದ್ದೆ ಎನ್ನುತ್ತಾರೆ ಬ್ಯಾಂಕ್ ಆಫ್ ಮಹಾರಾಷ್ಟ್ರದ ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರು. ``ಆದರೆ ಎಲ್ಲಾ ಬ್ಯಾಂಕುಗಳು ಸಾಲಗಳ ಪುನರ್ರಚನೆಯನ್ನು ಮಾಡುವುದಿಲ್ಲ ಎನ್ನುವುದೂ ಕೂಡ ಸತ್ಯ. ಅಷ್ಟಕ್ಕೂ ಆಗುವುದೇನೆಂದರೆ ಮನೆಗಳಿಗೆ ಬ್ಯಾಂಕ್ ಅಧಿಕಾರಿಗಳ ದಾಳಿಯನ್ನು ತಪ್ಪಿಸಲು ಇದನ್ನು ಮಾಡಲೇಬೇಕೆಂದು ಹಲವು ಬಾರಿ ರೈತರಿಗೆ ಅರೆಬೆಂದ ಮಾಹಿತಿಗಳು ಸಿಗುತ್ತವೆ. ಹೀಗಾಗಿ ಕಂಗಾಲಾಗುವ ರೈತರು ಸಾಲದ ಪುನರ್ರಚನೆಯನ್ನು ಮಾಡುವುದುಂಟು'', ಎನ್ನುತ್ತಾರೆ ಔರಂಗಾಬಾದಿನ ನಿವಾಸಿಯಾದ ಈ ನಿವೃತ್ತ ಅಧಿಕಾರಿ.  

ಈ ಎಲ್ಲಾ ಬೆಳವಣಿಗೆಗಳಿಂದಾಗಿ ರೈತರು ಈಗಾಗಲೇ ತಮ್ಮ ಖಾತೆಗಳಿರುವ ಜಿಲ್ಲಾ ಸಹಕಾರಿ ಬ್ಯಾಂಕುಗಳ ಕದವನ್ನೇ ಮತ್ತೆ ತಟ್ಟುತ್ತಾರೆ. ಆದರೆ ಪ್ರಭಾವಿ ಡಿಫಾಲ್ಟರ್ ಗಳನ್ನು ಸಂಭಾಳಿಸಲಾಗದೆ ಒದ್ದಾಡುತ್ತಿರುವ ಆರು ಬ್ಯಾಂಕುಗಳು ಮರಾಠಾವಾಡಾದ ಆರು ಜಿಲ್ಲೆಗಳಲ್ಲಿವೆ. ಲಾತೂರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿರುವ ಸಹಕಾರಿ ಬ್ಯಾಂಕುಗಳದ್ದೂ ಕೂಡ ಇದೇ ಕತೆ. ಹೀಗಾಗಿ ಬ್ಯಾಂಕುಗಳಿಂದ ಸಾಲವನ್ನು ಪಡೆದುಕೊಳ್ಳಲಾಗದ ಸಂದೀಪನಂತಹ ಕೃಷಿಕನೊಬ್ಬ ಕೇಳಿದ ಕೂಡಲೇ ಕಾಸು ಬಿಚ್ಚುವ ಖಾಸಗಿ ವ್ಯಕ್ತಿಗಳ ಬಳಿ ಹೋಗಿ ಹೆಚ್ಚಿನ ಬಡ್ಡಿದರದಲ್ಲಿ ಸಾಲವನ್ನು ಪಡೆದುಕೊಳ್ಳುತ್ತಾನೆ. ಮೂರರಿಂದ ಐದು ಪ್ರತಿಶತ ಮಾಸಿಕ ಬಡ್ಡಿಯಾದರೆ ನಲವತ್ತರಿಂದ ಅರವತ್ತು ಪ್ರತಿಶತದಷ್ಟಿನ ವಾರ್ಷಿಕ ಬಡ್ಡಿಯು ಇಂಥಾ ಮೂಲಗಳಿಂದ ರೈತರಿಗೆ ಸಾಲವಾಗಿ ಸಿಗುತ್ತದೆ. ಇವುಗಳು ದೊಡ್ಡ ಮೊತ್ತದ ಸಾಲಗಳಲ್ಲದಿದ್ದರೂ ಬಡ್ಡಿಯನ್ನು ಸೇರಿಸಿ ಲೆಕ್ಕ ಹಿಡಿದರೆ ಅಸಲಿನ ಮೊತ್ತಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಾಲದ ಕುಣಿಕೆಯು ಮತ್ತಷ್ಟು ಬಿಗಿಯಾಗಿಬಿಟ್ಟಿರುತ್ತದೆ. 

ಬೀದ್ ಜಿಲ್ಲೆಯ ಅಂಜನ್ವತಿ ಪ್ರದೇಶದ ನಿವಾಸಿಯಾದ ಅರವತ್ತೈದರ ಪ್ರಾಯದ ಭಗವಾನ್ ಯೇಡೆ ಮತ್ತು ಆತನ ಪತ್ನಿಯಾದ ಸಾಖರ್ ಬಾಯಿ ಕೂಡ ಸದ್ಯ ಖಾಸಗಿ ವ್ಯಕ್ತಿಯೊಬ್ಬನಿಂದ ಸಾಲವನ್ನು ಪಡೆದುಕೊಳ್ಳಲು ಅಣಿಯಾಗುತ್ತಿದ್ದಾರೆ. ``ಸದ್ಯ ಹೈದರಾಬಾದ್ ಬ್ಯಾಂಕಿನಲ್ಲಿ ಮೂರು ಲಕ್ಷದ ಸಾಲವಿದ್ದರೆ ಖಾಸಗಿ ಸಾಲವು ಸುಮಾರು ಒಂದೂವರೆ ಲಕ್ಷದಷ್ಟಿದೆ. ನನ್ನಿಬ್ಬರು ಗಂಡುಮಕ್ಕಳ ವಿದ್ಯಾಭ್ಯಾಸದ ಖರ್ಚಿಗೂ ದುಡ್ಡಿನ ಅವಶ್ಯಕತೆಯಿದೆ. ಪುಣೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ಇಬ್ಬರೂ ಈಗ ಉದ್ಯೋಗದ ತಲಾಶೆಯಲ್ಲಿದ್ದಾರೆ'', ಎನ್ನುತ್ತಿದ್ದಾರೆ ಭಗವಾನ್ ಯೇಡೆ.

PHOTO • Parth M.N.

ಬೀದ್ ಜಿಲ್ಲೆಯ ಅಂಜನ್ವತಿ ಹಳ್ಳಿಯ ನಿವಾಸಿಗಳಾದ ಭಗವಾನ್ ಯೇಡೆ ಮತ್ತು ಆತನ ಪತ್ನಿಯಾದ ಸಾಖರ್ ಬಾಯಿ ಕೂಡ ಇತರ ಕೃಷಿಕರಂತೆ ಸಾಲದ ಸುಳಿಯಲ್ಲಿದ್ದಾರೆ. ``ಇಂಥಾ ಅನಿಶ್ಚಿತತೆಯ ಜೀವನವನ್ನು ನನ್ನ ಮಕ್ಕಳಿಬ್ಬರು ಯಾಕಾಗಿ ನಡೆಸಬೇಕು?'', ಎಂದು ಕೇಳುತ್ತಿದ್ದಾರೆ ಭಗವಾನ್ ಯೇಡೆ. 

ತನ್ನ ಐದೆಕರೆಯ ಜಮೀನಿನಲ್ಲಿ ಬಿತ್ತನೆಗಾಗಿ ಅಣಿಯಾಗಿರುವ ಯೇಡೆ ಮೂವತ್ತು ಸಾವಿರ ರೂಪಾಯಿಗಳನ್ನು ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಖರೀದಿಗಾಗಿ ವ್ಯಯಿಸಿದ್ದಾನೆ. ಉಳುವ ಮತ್ತು ಕೂಲಿಗಳ ಖರ್ಚುಗಳನ್ನು ಪ್ರತ್ಯೇಕವಾಗಿ ಹಿಡಿಯಬೇಕು. ತನ್ನ ಕುಟುಂಬದಲ್ಲಿ ಕೃಷಿಕ ವೃತ್ತಿಯಲ್ಲಿ ತೊಡಗಿರುವ ಕೊನೆಯ ಪೀಳಿಗೆಯ ರೈತ ತಾನು ಎನ್ನುವ ನಿರೀಕ್ಷೆ ಆತನದ್ದು. ``ಇಷ್ಟು ಅನಿಶ್ಚಿತತೆಯುಳ್ಳ ಜೀವನವನ್ನು ನನ್ನ ಮಕ್ಕಳು ಯಾಕಾದರೂ ಮಾಡಬೇಕು? ಸಾಲವು ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ನಮ್ಮ ವ್ಯವಸ್ಥೆಯಂತೂ ರೈತನಿಗೆ ಪರರ ಹಂಗಿನಲ್ಲಿ ಬದುಕುವಂತಹ ದಯನೀಯ ಪರಿಸ್ಥಿತಿಗಳನ್ನು ಸೃಷ್ಟಿಸಿದೆ'', ಎಂದು ಹತಾಶೆಯಿಂದ ಹೇಳುತ್ತಿದ್ದಾರೆ ಯೇಡೆ. 

ದಿನಗಳೆದಂತೆ ತೀವ್ರವಾಗುತ್ತಿದ್ದ ವಿರೋಧಗಳಿಗೆ ಕೊನೆಗೂ ತಲೆಬಾಗಿದ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನಾವಿಸ್ ರವರು 2009 ರ ನಂತರ ತೆಗೆದುಕೊಳ್ಳಲಾದ ರೈತರ ಸಾಲಗಳಿಗೆ ಸಾಲಮನ್ನಾ ಘೋಷಿಸಿದ್ದರು. ಈ ಮೂಲಕವಾಗಿ ಹೊಸ ಕೃಷಿ ಸಾಲಗಳಿಗಾಗಿ ರೈತರು ಬ್ಯಾಂಕುಗಳನ್ನು ಸಂಪರ್ಕಿಸಬಹುದೆಂಬ ಸಂದೇಶವನ್ನು ರಾಜ್ಯ ಸರಕಾರವು ರೈತರಿಗೆ ತಲುಪಿಸಿತ್ತು.

ಬೀದ್ ಜಿಲ್ಲೆಯ ಅಂಜನ್ವತಿ ಹಳ್ಳಿಯ ನಿವಾಸಿಯಾದ ಅಶೋಕ್ ಸಾಲ ಪಡೆಯಲು ಪಡಬೇಕಾದ ಪರಿಪಾಟಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.  

ಆದರೆ ಇದು ಹೇಳಿಕೊಳ್ಳುವಷ್ಟು ಸುಲಭವೇನಲ್ಲ ಎನ್ನುತ್ತಾರೆ ಯೇಡೆಯವರ ಸಂಬಂಧಿಯಾದ ನಲವತ್ತರ ಪ್ರಾಯದ ಅಶೋಕ್. ``ಈ ಸೌಲಭ್ಯವನ್ನು ಬಳಸಿಕೊಳ್ಳಬೇಕಾದರೆ ನಮ್ಮ ಯಾವುದೇ ಸಾಲಗಳು ಬಾಕಿ ಉಳಿದಿಲ್ಲವೆಂಬ ನೋ ಆಬ್ಜಕ್ಷನ್ ಸರ್ಟಿಫಿಕೇಟ್ (ಎನ್.ಒ.ಸಿ.) ಗಳನ್ನು ನಾವು ಆಸುಪಾಸಿನ ಎಲ್ಲಾ ವಹಿವಾಟು ಕೇಂದ್ರಗಳಿಂದಲೂ ಪಡೆದುಕೊಂಡು ಬರಬೇಕು. ಈ ಪ್ರಮಾಣಪತ್ರಕ್ಕಾಗಿ ಅಲೆದಾಡುವುದಲ್ಲದೆ ಇದನ್ನು ಪಡೆಯಲು ಸಂಬಂಧಿ ಅಧಿಕಾರಿಗಳಿಗೆ ಲಂಚವನ್ನೂ ಕೊಡಬೇಕು. ಕನಿಷ್ಠ ಪಕ್ಷ ಆರೇಳು ಕೇಂದ್ರಗಳಿಂದಾದರೂ ನಾವು ಈ ಪ್ರಮಾಣಪತ್ರವನ್ನು ತರಬೇಕಾಗುತ್ತದೆ. ಎಷ್ಟು ಅಂತ ಲಂಚ ಕೊಡೋದು? ಯಾರ್ಯಾರಿಗೆ ಅಂತ ಲಂಚ ಕೊಡೋದು? ಇನ್ನು ಈ ಗಡಿಬಿಡಿಗಳ ಮಧ್ಯದಲ್ಲಿ ಬಿತ್ತನೆಯ ತಯಾರಿಗಳನ್ನು ಮಾಡದಿದ್ದರೆ ಇಡೀ ಋತುವೇ ವ್ಯರ್ಥವಾದಂತಾಗುತ್ತದೆ'', ಎಂದು ನೈಜಪರಿಸ್ಥಿತಿಯನ್ನು ಮನದಟ್ಟಾಗುವಂತೆ ವಿವರಿಸುತ್ತಾರೆ ಅಶೋಕ್. 

ಹೀಗಾಗಿಯೇ ಕೆಲವೇ ದಿನಗಳ ಹಿಂದೆ ನೇಣಿನ ಕುಣಿಕೆಗೆ ಬಲಿಯಾದ ಮಗನ ನೆನಪು ಇನ್ನೂ ಹಸಿರಾಗಿರುವಂತೆಯೇ ಬಲಭೀಮ್ ಕೆಲಸಕ್ಕೆಂದು ಜಮೀನಿನತ್ತ ಹೊರಡುತ್ತಾನೆ. ಸಂದೀಪನ ಯೋಜನೆಯ ಪ್ರಕಾರವೇ ಆರಂಭದ ಒಂದೆರಡು ಮಳೆಗಳು ಸುರಿದ ನಂತರ ಆತ ಕಬ್ಬನ್ನು ನೆಟ್ಟಿದ್ದಾನೆ. ಈ ಬಾರಿಯ ಮಳೆಗಾಲವಾದರೂ ಚೆನ್ನಾಗಿರಲಿ ಎಂಬ ನಿರೀಕ್ಷೆ ಆತನದ್ದು. ಆದರೆ ಸಂದೀಪ್ ಶೆಲ್ಕೆಯನ್ನು ಆವರಿಸಿದ್ದ ಗೊಂದಲ ಮತ್ತು ಅನಿಶ್ಚಿತತೆಯ ಭಾವಗಳು ಆತನಲ್ಲೂ ದಟ್ಟವಾಗಿ ಕಾಣುತ್ತಿವೆ. 

Translation:  Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Other stories by Parth M.N.