ಇವತ್ತು ವಿಶಾಲ ಏನು ಮಾಡುತ್ತಿದ್ದ, ಜೀವಂತವಾಗಿದ್ದರೆ? ಗಾಳಿಪಟ ಹಾರಿಸುತ್ತಿದ್ದ ಅಥವಾ ತನ್ನ ಗೆಳೆಯರ ಜೊತೆ ಆಟವಾಡುತ್ತಿದ್ದ. ಇಲ್ಲವೆಂದರೆ, ಎರಡೆಕರೆ ಹೊಲದಲ್ಲಿ ಕೆಲಸ ಮಾಡಲು ತನ್ನ ತಂದೆಗೆ ಸಹಾಯ ಮಾಡುತ್ತಿದ್ದ ಅಥವಾ ಅವನು ಆಗಾಗ ಮಾಡುತ್ತಿದ್ದಂತೆ ದಿನಗೂಲಿ ಮೇಲೆ ಯಾವುದಾದರೂ ಚಿಕ್ಕ ಪುಟ್ಟ ಕೆಲಸ ಮಾಡುತ್ತಿದ್ದ. ಅವನಿಗೆ ಅಷ್ಟಕ್ಕೂ ಬೇಕಾಗಿದ್ದದ್ದು ಏನು ಒಂದು ಜೊತೆ ಹೊಸ ಬಟ್ಟೆ ಅಷ್ಟೇ ತಾನೇ?

ಆದರೆ, ದೀಪಾವಳಿಯ ಹತ್ತು ದಿನಗಳ ನಂತರ, ಕಳೆದ ನವೆಂಬರ್ ನಲ್ಲಿ ಅವನ ತಂದೆ ಬೆಳೆಗೆ ಸಿಂಪಡಿಸಲು ತಂದಿಟ್ಟಿದ್ದ ಕ್ರಿಮಿನಾಶಕ ಕುಡಿದು ಪ್ರಾಣ ಬಿಟ್ಟಿದ್ದ ವಿಶಾಲ ಖುಲೆ. ಆಗ ಅವನಿಗೆ ಹದಿನಾರು ಸಹ ತುಂಬಿರಲಿಲ್ಲ. ಸತ್ತಾಗ ಆತ ಮುದುಡಿದ ಬಿಳಿ ಅಂಗಿ ಮತ್ತು ನೀಲಿ ಪ್ಯಾಂಟು ಧರಿಸಿದ್ದ ಅಂತ ಪೊಲೀಸ್ ರಿಪೋರ್ಟ್ ಹೇಳುತ್ತದೆ.


02-IMGP0670(Feature Image)-JH-This is the darkest period of our life.jpg

ಅಕೋಲಾದ ದಾಧಂ ಗ್ರಾಮದಲ್ಲಿ: ಎಡದಿಂದ ಬಲಕ್ಕೆ- ವಿಶ್ವನಾಥ ಖುಲೆ (ವಿಶಾಲನ ತಂದೆ), ವೈಭವ (ವಿಶಾಲನ ಅಣ್ಣ), ಶೀಲಾ (ವಿಶಾಲನ ತಾಯಿ) ಮತ್ತು ನೆರೆಮನೆಯ ಜಾನಕಿರಾಮ ಖುಲೆ (ವಿಶಾಲನ ಕಾಕಾ)

ಎರಡು ರೂಮಿನ ಮನೆಯ ಕಿಟಕಿಯ ಕೆಳಗೆ ಕೈ ತೋರಿಸಿ, “ಅವನು ಕುಸಿದದ್ದು ಇಲ್ಲಿಯೇ” ಅಂತ ಅವನಪ್ಪ ವಿಶ್ವನಾಥ ಖುಲೆ ಹೇಳುತ್ತಾನೆ. “ಅವನಮ್ಮ ಅಡುಗೆ ಮನೆಯಲ್ಲಿ ಚಪಾತಿ ಮಾಡುತ್ತಿದ್ದಳು, ನಾನು ಅಗೋ ಅಲ್ಲಿ ಕೆಲಸ ಮಾಡುತ್ತಿದ್ದೆ” ಅಂತ ಹೊರಗಡೆ ಕೈ ತೋರಿಸುತ್ತಾನೆ. “ಅವನು ಧೊಪ್ಪೆಂದು ನೆಲಕ್ಕೆ ಬಿದ್ದಾಕ್ಷಣ ಅವನಮ್ಮ ಓಡಿ ಬಂದಳು. ಅವನ ಬಾಯಿಯಲ್ಲಿ ಬಿಳಿ ನೊರೆ ಕಾಣಿಸುತ್ತಿತ್ತು. ಅವನ ಪಕ್ಕದಲ್ಲಿದ್ದ ಕ್ರಿಮಿನಾಶಕದ ಬಾಟಲಿ ಪೂರ್ತಿ ಖಾಲಿಯಾಗಿತ್ತು. ಆಸ್ಪತ್ರೆ ಮುಟ್ಟುವ ಮೊದಲೇ ಅವನು ಸತ್ತಿದ್ದ” ಅಂತೆನ್ನುತ್ತಾನೆ.


03-IMGP0674-JH-This is the darkest period of our life.jpg

ಕ್ರಿಮಿನಾಶಕ ಸೇವಿಸಿ ಅಸುನೀಗಿದ ವಿಶಾಲನ ಎರಡು ರೂಮಿನ ಮನೆಯ ಒಂದು ಭಾಗ


“ಇವು ನಮ್ಮ ಜೀವನದ ಕರಾಳ ದಿನಗಳು” ಅಂತಾ ಹೇಳುತ್ತಾನೆ.

ಮಹಾರಾಷ್ಟ್ರದ ಹತ್ತಿ ಮತ್ತು ಸೋಯಾ ಬೆಳೆಯುವ ಪ್ರಮುಖ ಪ್ರದೇಶವಾದ ವಿದರ್ಭದ ಅಕೋಲಾದಿಂದ ಸುಮಾರು 25 ಕಿಮೀ ದೂರದಲ್ಲಿ ದಾಧಂ ಗ್ರಾಮ ಇದೆ. 1500 ಜನಸಂಖ್ಯೆಯ ಈ ಊರು ಈ ಕಡೆಯ ಪ್ರದೇಶಗಳಲ್ಲಿಯೇ ಅತೀ ಬಡವ ಊರುಗಳಲ್ಲಿ ಒಂದು. ಪಶ್ಚಿಮ ವಿದರ್ಭದಲ್ಲಿರುವ ಅಕೋಲಾ, ಮಹಾರಾಷ್ಟ್ರದ ಹತ್ತಿ ಮತ್ತು ಸೋಯಾ ಬೆಳೆಯುವ ಪ್ರಮುಖ ಭಾಗಗಳಲ್ಲಿ ಒಂದು. ಈ ಪ್ರದೇಶ, ಇಲ್ಲಿನ ರೈತರ ಆತ್ಮಹತ್ಯೆಗಾಗಿ 1990 ರ ಮಧ್ಯದಿಂದಲೇ ಸುದ್ದಿಯಲ್ಲಿದೆ. ಇಲ್ಲಿಯ ಸತತವಾದ ಬರಗಾಲ ಮತ್ತು ಬೆಳೆಹಾನಿ ಇನ್ನೂ ಭೀಕರವಾಗುತ್ತಲೇ ಹೋಗುತ್ತಿವೆ.

ಮಹಾರಾಷ್ಟ್ರದ ಪೂರ್ವ ಮತ್ತು ಮಧ್ಯ ಪ್ರದೇಶದ ವಿದರ್ಭ ಮತ್ತು ಮರಾಠಾವಾಡದಲ್ಲಿನ ಅವ್ಯಾಹತವಾಗಿ ನಡೆಯುವ ರೈತರ ಆತ್ಮಹತ್ಯೆ ವರದಿಯಾಗಿ, ಸರಕಾರದ ಗಮನಕ್ಕೆ ಬಂದರೂ, ಅಲ್ಲಿನ ಇನ್ನೊಂದು ದುರಂತ ಗಮನಕ್ಕೆ ಬಾರದೇ ಹೋಗಿರುವುದು ವಿಪರ್ಯಾಸ. ಅದೆಂದರೆ, ಸಾಲದಲ್ಲಿ ಮುಳುಗಿರುವ ರೈತರ ಮಕ್ಕಳ ಆತ್ಮಹತ್ಯೆ. (ಮೊದಲೂ ಮಕ್ಕಳು ಪ್ರಾಣವನ್ನು ಕಳೆದುಕೊಂಡದ್ದು ಇದೆ ಆದರೆ, ಇತ್ತೀಚಿನ ಪತ್ರಿಕಾ ವರದಿಗಳ ಪ್ರಕಾರ ಕಳೆದೆರಡು ವರ್ಷಗಳಿಂದ ಅದು ಜಾಸ್ತಿಯಾಗಿದೆ.)

ಭಾರತದಲ್ಲಿ ಕೃಷಿಗೆ ಸಂಬಂಧಿಸಿದ ಹದಿನೆಂಟರ ಒಳಗಿನ ಮಕ್ಕಳ ಅಥವಾ ಇಪ್ಪತ್ತರ ಒಳಗಿನ ಯುವಕರ ಆತ್ಮಹತ್ಯೆಯ ನಿರ್ಧಿಷ್ಟ ಅಂಕಿಅಂಶಗಳು ಲಭ್ಯವಿಲ್ಲ. ಆದರೂ, ಮನೆ ಮನೆಗೆ ತೆರಳಿ ನಡೆಸಿದ ಮಹಾರಾಷ್ಟ್ರ ಸರಕಾರದ ಸಮೀಕ್ಷೆ, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್(TISS) ಮತ್ತು ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟಲ್ ರಿಸರ್ಚ್ ಗಳ ವರದಿಗಳು ಸಾಲ ಮತ್ತು ಬೆಳೆಹಾನಿಯ ಪರಿಣಾಮ ರೈತರ ಮಕ್ಕಳ ಮೇಲಾಗಿರುವುದನ್ನು ತಿಳಿಸುತ್ತವೆ. ಎಷ್ಟೋ ಜನ ಹದಿಹರೆಯದ ಮಕ್ಕಳು ತಂದೆಯ ಸಾಲ ತೀರಿಸಲು ಮನೆಯ ಜವಾಬ್ದಾರಿ ಹೊರುತ್ತವೆ. ಗಂಡು ಮಕ್ಕಳಲ್ಲಿ ಖಿನ್ನತೆ, ಭೂಮಿ ಉಳುವುದು, ಶಾಲೆ ಬಿಟ್ಟುಬಿಡುವುದು ಕಂಡುಬಂದರೆ, ಉಣ್ಣುವ ಬಾಯಿಯ ಸಂಖ್ಯೆ ಕಡಿಮೆ ಮಾಡಲು ಹೆಣ್ಣು ಮಕ್ಕಳನ್ನು ಬೇಗನೆ ಮದುವೆ ಮಾಡಿಕೊಡುವುದು ಕಂಡುಬರುತ್ತೆ.

ಕಳೆದ ದಶಕದಿಂದ ಇಂಥ ಎಷ್ಟೋ ಆತ್ಮಹತ್ಯೆಗಳನ್ನು ಲೇಖಕರು ದಾಖಲಿಸಿದ್ದಾರೆ, ಅದರಲ್ಲೂ ಮುಖ್ಯವಾಗಿ ಯಾರ ಮನೆಯಲ್ಲಿ ಈಗಾಗಲೇ ಆತ್ಮಹತ್ಯೆ ಆಗಿದೆಯೋ ಅದನ್ನು. ಕೆಲವು ಸಲ ತಮ್ಮ ಪಾಲಕರನ್ನು ಆತ್ಮಹತ್ಯೆಯಿಂದ ತಪ್ಪಿಸಲು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದನ್ನು ‘ಪರಹಿತ ಚಿಂತಿತ ಆತ್ಮಹತ್ಯೆ’ ಅಂತಾ ಗುರುತಿಸುತ್ತಾರೆ. ಇಂಥ ಒಂದು ಹೃದಯವಿದ್ರಾವಕ ಘಟನೆಯೊಂದರಲ್ಲಿ ಹತ್ತೊಂಬತ್ತು ವರ್ಷದ ನೀತಾ ಮಹಾರಾಷ್ಟ್ರದ ಆಸ್ರಾ ಗ್ರಾಮದಲ್ಲಿ 2005 ರಲ್ಲಿ ನೇಣು ಹಾಕಿಕೊಂಡಿದ್ದಳು.

ಅವಳು ಮರಾಠಿಯಲ್ಲಿ ಬರೆದಿಟ್ಟ ಪತ್ರದಲ್ಲಿ ಹೀಗಿತ್ತು. “ನಾನು ಸಾಯದಿದ್ದರೆ, ನನ್ನ ಅಪ್ಪ ಸಾಯುತ್ತಾನೆ. ತಿಂಗಳಿಗೆ ಒಂದು ಸಾವಿರ ರೂಪಾಯಿ ಸಹ ನಮಗೆ ಗಳಿಸಲು ಆಗುತ್ತಿಲ್ಲ. ನನಗೆ ಇಬ್ಬರು ಸಹೋದರಿಯರಿದ್ದಾರೆ. ಸರಿಯಾಗಿ ತಿನ್ನುವುದೇ ದುಸ್ತರವಾಗಿರುವಾಗ ನಮ್ಮ ಪಾಲಕರಿಗೆ ನಮ್ಮ ಮದುವೆಯ ಹೊರೆಯನ್ನು ಹೊರಲು ಸಾಧ್ಯವಿಲ್ಲ. ಅದಕ್ಕಾಗಿ ನಾನು ಪ್ರಾಣ ಬಿಡುತ್ತಿದ್ದೇನೆ. ನನ್ನ ಸಾವಿಗೆ ನಾನೇ ಹೊಣೆ, ಬೇರೆ ಯಾರೂ ಅಲ್ಲ.” ತಮ್ಮ ಪಾಲಕರ ಒತ್ತಡವನ್ನು ಒಂಚೂರು ಕಡಿಮೆ ಮಾಡುವುದಕ್ಕೆ ಆತ್ಮಹತ್ಯೆಯೊಂದೇ ದಾರಿ ಅಂತ ಅವಳಿಗೆ ಅನಿಸಿದ್ದಿರಬೇಕು.

ಅಭಾವ ಮತ್ತು ಹೋರಾಟ

ಮುಂದಿನ ಮಳೆಗಾಲಕ್ಕಿನ್ನೂ ಕೆಲವು ತಿಂಗಳು ಬಾಕಿ ಇದೆ. ಆದರೆ, ವಿಶಾಲನ ಸಾವು ಮಾತ್ರ ದಾಧಂ ಗ್ರಾಮದಲ್ಲಿ ಇನ್ನೂ ಹಸಿರಾಗಿಯೇ ಇದೆ. ಆಗಲೇ, ನೀರಿನ ಅಭಾವ ಇಲ್ಲಿನ ಹಳ್ಳಿಗರನ್ನು ಪರೀಕ್ಷೆ ಮಾಡೋಕೆ ಶುರು ಮಾಡಿದೆ. ಸುತ್ತ ಮುತ್ತಲಿನ ಪ್ರದೇಶ ಎಲ್ಲ ಬತ್ತಿ ಬರಡಾಗಿದೆ. ಸ್ಥಳೀಯ ದಿನಪತ್ರಿಕೆಗಳ ಪ್ರಕಾರ ಇಲ್ಲಿನ ಅಂತರ್ಜಲ ಮಟ್ಟವೂ ಕುಸಿದಿದೆ. ದಿನ ಬಿಟ್ಟು ದಿನ ಬರುವ ನೀರಿನ ಟ್ಯಾಂಕರ್ ಗೆ ಜನ ಕಾಯಬೇಕು ಇಲ್ಲಾ ಎಷ್ಟೋ ಕಿಲೋಮೀಟರ್ ದೂರ ನಡೆದು ಕುಡಿಯುವ ನೀರನ್ನು ತರಬೇಕು. ಇದಿಷ್ಟು ಸಾಕಾಗಲ್ಲ ಅನ್ನುವಂತೆ ಇಲ್ಲಿನ ಜನರಿಗೆ ಮಾಡಲು ಕೆಲಸವೂ ಇಲ್ಲ.

“ಕಳೆದ ಮೂರು ವರ್ಷಗಳಿಂದಿರುವ ಬರಗಾಲದಲ್ಲಿನ ಈ ವರ್ಷ ತುಂಬಾ ಭೀಕರ. ಮುಂಬರುವ ಬೇಸಿಗೆಗೆ ನಾವು ಈಗಲೆ (ಸೆಪ್ಟೆಂಬರ್ ನಲ್ಲಿ) ತಯಾರಿ ಶುರು ಮಾಡಿದ್ದೇವೆ” ಅಂತಾ ಅಕೋಲಾದ ಜಿಲ್ಲಾಧಿಕಾರಿಯಾದ ಜಿ ಶ್ರೀಕಾಂತ ಅವರು ಕಳೆದ ವರ್ಷವೇ ಹೇಳಿದ್ದರು. “ಇದು ತುಂಬಾ ಭೀಕರವಾದ ವರ್ಷ” ಅಂತ ಅವರು ಹೇಳುತ್ತಾರೆ.

ಮಹಾರಾಷ್ಟ್ರದ ಬಹುತೇಕ ಜಿಲ್ಲೆಗಳಂತೆ ಅಕೋಲಾದಲ್ಲೂ ವಾರ್ಷಿಕ ಸರಾಸರಿ ಮಳೆಯ ಪ್ರಮಾಣದ 60 ಪ್ರತಿಶತ ಮಳೆಯಾಗಿದೆ. ಅಂದರೆ 692 ಮಿಮೀ ಆಗಬೇಕಾದ್ದು ಸುಮಾರು 500 ಮಿಮೀ ಆಗಿದೆ. ಅದೇನೋ ಸರಿ. ಆದರೆ, ಇದರಲ್ಲಿ ಸಮಾರು 400 ಮಿಮೀ ಮಳೆ ಆಗಿದ್ದು ಎರಡೇ ದಿನದಲ್ಲಿ (ಆಗಸ್ಟ್ 4 ಮತ್ತು 5 ರಂದು). ಹೀಗಾಗಿ ನೀರಿನ ಪ್ರವಾಹ ಆಗಿ, ಭೂಮಿಯಲ್ಲಿ ನೀರು ಇಂಗದೆ, ಹರಿದು ಹೋಗಿದೆ. ಆಗಸ್ಟ್ 5 ರ ನಂತರ ಮುಂದಿನ 41 ದಿನಗಳ ತನಕ ಒಂದೇ ಒಂದು ತೊಟ್ಟು ಮಳೆನೀರು ಬಿದ್ದಿಲ್ಲ. “ಹತ್ತಿ, ಸೋಯಾ ಮತ್ತು ತೊಗರಿ ಸೇರಿದಂತೆ ಎಲ್ಲಾ ಬೆಳೆಗಳು ನಾಶವಾಗಿವೆ.” ಅಂತವರು ಹೇಳುತ್ತಾರೆ.

ಈ ತರಹ ಬಿಟ್ಟು ಬಿಡದೆ ಸುರಿಯುವ ಮಳೆ ಮತ್ತು ಎರಡು ಮಳೆಗಳ ಮಧ್ಯೆ ತುಂಬಾ ದಿನಗಳ ಅಂತರ ಇವು ಬದಲಾಗುತ್ತಿರುವ ಮಳೆಗಾಲದ ಸ್ವರೂಪದ ಲಕ್ಷಣಗಳು ಅಂತಾ ಭಾರತೀಯ ಹವಾಮಾನ ಇಲಾಖೆ ಮತ್ತು ಪುಣೆಯಲ್ಲಿನ ಭಾರತೀಯ ಉಷ್ಣವಲಯದ ಪವನಶಾಸ್ತ್ರ ಸಂಸ್ಥೆ ಮತ್ತು ಇತರ ಸಂಶೋಧನಾ ಸಂಸ್ಥೆಗಳ ಅಧ್ಯಯನಗಳು ಹೇಳುತ್ತವೆ.

ಮಾರಲು ಕಾಳಿಲ್ಲದೇ, ದೈನಂದಿನ ಮನೆ ಖರ್ಚು ಸಾಗಿಸಲು ಖುಲೆ ಕುಟುಂಬ ಬಡ್ಡಿಗೆ ಸಾಲ ಮಾಡಿದೆ. ಬ್ಯಾಂಕ್ ದಾಖಲೆಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಇನ್ನೂ ಚುಕ್ತಾ ಆಗದ 50,000 ರೂಪಾಯಿ ಸಾಲವೂ ಕುಟುಂಬದ ಮೇಲಿದೆ.

ಆಂಧ್ ಅನ್ನೋ ಬುಡಕಟ್ಟಿಗೆ ಸೇರುವ ಖುಲೆ ಕುಟುಂಬ ದಿನದ ತುತ್ತಿಗೆ ಸರಿಹೋಗುವಷ್ಟು ಮಾತ್ರ ಗಳಿಸಬಲ್ಲ ಬಡ ರೈತ ಕುಟುಂಬ. ಹೊತ್ತು ಹೊತ್ತಿನ ಗಂಜಿಗೂ ಈ ಕುಟುಂಬ ಕಷ್ಟಪಡುತ್ತಿದೆ. ಮೊದಲೇ ಕಷ್ಟದಲ್ಲಿದ್ದ ಈ ಕುಟುಂಬದ ಪರಿಸ್ಥಿತಿ ವಿಶಾಲನ ಸಾವಿನಿಂದ ಇನ್ನಷ್ಟು ಅಪಾಯಕ್ಕೆ ಸಿಲುಕಿದೆ. ನೆರೆಮನೆಯ ಜಾನಕಿನಾಥ ಖುಲೆ (ನಾಯಿಬ್ ತಹಶೀಲ್ದಾರ್, ಕಿರಿ ಕಂದಾಯ ಅಧಿಕಾರಿ, ಇವರು ಇತ್ತೀಚೆಗೆ ನಿವೃತ್ತರಾಗಿದ್ದಾರೆ) ಹೇಳುವಂತೆ ವಿಶಾಲನ ತಾಯಿ ಜಾಸ್ತಿ ಮಾತಾಡುವುದಿಲ್ಲ. ಹತ್ತನೇ ತರಗತಿಗೆ ಓದನ್ನು ಬಿಟ್ಟ ಹದಿನೆಂಟು ವರ್ಷದ ಅವನ ಅಣ್ಣ (ವೈಭವ) ಅದು ಇದು ಅಂತಾ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾನೆ. ಅವನ ಮದುವೆಯಾದ ಅಕ್ಕಂದಿರು ಸರತಿಯಂತೆ ತಮ್ಮ ಅಮ್ಮನ ಜೊತೆಯಿರಲು ಬರುತ್ತಾರೆ.


04-IMGP0671-JH-This is the darkest period of our life.jpg

ವಿಶಾಲ ವಿಷ ಸೇವಿಸಿ ಧೊಪ್ಪೆಂದು ಬಿದ್ದಾಗ ಅಡುಗೆಮನೆಯಿಂದ ಓಡಿ ಬಂದ ಶೀಲಾಗೆ ಕಂಡಿದ್ದು ನೆಲದ ಮೇಲೆ ಹೊರಳಾಡುತ್ತಿದ್ದ ಮಗ


ಅತಿಯಾದ ಬಡತನದೊಂದಿಗೆ ಬೆಳೆಯುತ್ತಿರುವ ಹತಾಶೆ, ಅಸಹಾಯಕತೆಯ ಪರಾಕಾಷ್ಠೆಯೇ ವಿಶಾಲನ ಆತ್ಮಹತ್ಯೆ ಅಂತ ಊರ ಹಿರಿಯರಾದ ಜಾನಕಿನಾಥ ಖುಲೆ ಹೇಳುತ್ತಾರೆ. ಅವನನ್ನು ವಿಶಾಲ ಕಾಕಾ ಅಂತೆನ್ನುತ್ತಿದ್ದ.

“ಆತ ನನ್ನ ಜೊತೆ ಈ ಗ್ರಾಮದ ಬಡತನ, ಅವನ ಮತ್ತವನ ಸಹಪಾಠಿಗಳ ನಡುವಿನ ಅಂತರದ ಬಗ್ಗೆ ಮಾತನಾಡುತ್ತಿದ್ದ” ಅಂತ ಹೇಳುವ ಜಾನಕಿನಾಥ, ಅವನ ಪಾಲಕರ ಕಷ್ಟಕ್ಕೆ ಕೊನೆಯೇ ಇಲ್ಲ ಅನ್ನುವುದು  ಅವನ ಅಭಿಪ್ರಾಯವಾಗಿತ್ತು ಅಂತಾ ಅನ್ನುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ದೀಪಾವಳಿಯ ರಜಾ ಸಮಯದಲ್ಲಿ ವಿಶಾಲ ಮತ್ತು ವೈಭವ ಇಬ್ಬರೂ ತಮ್ಮ ತಂದೆ ಜೊತೆ ಹೊಲದಲ್ಲಿ ಕೆಲಸ ಮಾಡಿದ್ದರು. ಮಳೆಗಾಲದ ಬೆಳೆ, ಅದರಲ್ಲೂ ಮುಖ್ಯವಾಗಿ ಸೋಯಾ, ವಿಫಲವಾದ ಕಾರಣ ಬೇಳೆ ಕಾಳುಗಳನ್ನು ಹೊಲದಲ್ಲಿ ಹಾಕಿದರು. ಮಳೆಯ ಕೊರತೆಯ ಪ್ರಭಾವ ಅದರ ಮೇಲಾಯಿತು. ಒಳ್ಳೆ ಬೆಲೆ ಏನೋ ಬಂತು ಆದರೆ ಇಳುವರಿ ಕಡಿಮೆಯಿದ್ದ ಕಾರಣ ಯಾವ ಪ್ರಯೋಜನ ಆಗಲಿಲ್ಲ.  ಸರಕಾರದ ಉಚಿತ ಬೀಜ ಹಂಚುವ ಯೋಜನೆಯಿಂದ ಹೆಸರು ಕಾಳು ಬಿತ್ತಿದರು. ಆದರೆ, ಮಳೆ ಅಭಾವದಿಂದ ನೀರಿರದ ಕಾರಣ ಅದೂ ಎನೂ ಫಲ ಕೊಡಲಿಲ್ಲ.

ಹೊಲದಲ್ಲಿ ಕೆಲಸ ಏನೂ ಇಲ್ಲ ಅಂದಾಗ, ಶಾಲೆಯ ರಜಾ ಸಮಯದಲ್ಲಿ ತಮ್ಮ ಗೆಳೆಯರೊಂದಿಗೆ ಸಮೀಪದ ಅಕೊಲಾಕ್ಕೆ ದಿನಗೂಲಿ ಕೆಲಸ ಹುಡುಕಿಕೊಂಡು ಅಣ್ಣ ತಮ್ಮ ಇಬ್ಬರೂ ಹೋದರು. ಅಲ್ಲಿಯೂ ಹೇಳಿಕೊಳ್ಳುವಂಥ ಯಾವುದೇ ಕೆಲಸ ಸಿಗದಿದ್ದರಿಂದ ಖಾಲಿ ಕೈಯಲ್ಲಿ ಮನೆಗೆ ಹಿಂದಿರುಗಿದರು. ವಿಶಾಲನಿಗೆ ತನಗೊಂದು ಜೊತೆ ಹೊಸ ಬಟ್ಟೆ ಸಹ ತೆಗೆದುಕೊಳ್ಳೋಕೆ ಆಗ್ತಾ ಇಲ್ಲ ಅನ್ನೋ ಬೇಸರ ಒಂದು ಕಡೆ ಆದರೆ, ಇನ್ನೊಂದು ಕಡೆ ತನ್ನ ತಂದೆಗೆ ಸಹಾಯ ಮಾಡಲು ಆಗುತ್ತಿಲ್ಲ ಅನ್ನೋ ವೇದನೆ ಕಾಡುತ್ತಿತ್ತು ಅಂತಾ ಖುಲೆ ಕಾಕಾ ಹೇಳುತ್ತಾರೆ.

ಈ ರೀತಿಯ ಆತ್ಮಹತ್ಯೆ ವಿಶಾಲನಿಗೆ ಮಾತ್ರ ಸೀಮಿತವಾಗಿಲ್ಲ. ಕಳೆದ ಅಕ್ಟೋಬರ್ ನಲ್ಲಿ ಲಾತೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ವಾತಿ ಪಿತಳೆಗೆ ಕೇವಲ ಹದಿನೇಳು ವರ್ಷ ವಯಸ್ಸು. ಆಗವಳು ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದಳು.

ಮರಾಠಿಯಲ್ಲಿ ಬರೆದಿಟ್ಟಿದ್ದ ಪತ್ರದಲ್ಲಿ ತನ್ನ ಆತ್ಮಹತ್ಯೆಗೆ ಕಾರಣವನ್ನು ತಿಳಿಸಿದ್ದಾಳೆ. ಅವಳಿಂದ ತನ್ನ ತಂದೆಯ ದುರವಸ್ಥೆ ನೋಡಲು ಆಗುತ್ತಿರಲಿಲ್ಲವಂತೆ. ತನ್ನ ತಂದೆಯ ಮೇಲೆ ಹೊರೆಯಾಗಲು ಅವಳಿಗೆ ಇಷ್ಟವಿರಲಿಲ್ಲ. ತನಗೆ ಮದುವೆ ವಯಸ್ಸು ಸಮೀಪಿಸುತ್ತಿದೆ ಅನ್ನುವ ಅರಿವಿದ್ದ ಅವಳಿಗೆ ತನ್ನ ತಂದೆ ತನ್ನ ಮದುವೆಗೆ ಹೆಚ್ಚಿನ ಖರ್ಚು ಮಾಡುವುದು ಬೇಕಾಗಿರಲಿಲ್ಲ. ತನ್ನ ತಂದೆಗೆ ಸಾಲ ಕೊಟ್ಟ ಬ್ಯಾಂಕ್ ಮತ್ತು ಇತರರಲ್ಲಿ ತನ್ನ ತಂದೆಯನ್ನು ಪೀಡಿಸಬೇಡಿ ಅಂತಾ ತಾನು ಬರೆದಿಟ್ಟ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾಳೆ.  ತನ್ನ ಅಕ್ಕನ ಮದುವೆ ಮಾಡಿದ ನಂತರ ಖಂಡಿತವಾಗಿಯೂ ಅವಳಪ್ಪ ಸಾಲ ತೀರಿಸುತ್ತಾನೆ ಅಂತಾ ಅದರಲ್ಲಿ ಹೇಳಿದ್ದಾಳೆ.

ಸ್ವಾತಿ, ಬಸ್ ಪಾಸು ನವೀಕರಿಸಲು ಹಣ ಇಲ್ಲದ ಕಾರಣ ತನ್ನ ಕಾಲೇಜ್ ಗೆ ಹೋಗುವುದನ್ನು ನಿಲ್ಲಿಸಿದ್ದಳಂತೆ. ಅವಳ ತಾಯಿ ಹೇಗೋ ಬಸ್ ಪಾಸ್ ಗೆ ಬೇಕಾದ 260 ರೂಪಾಯಿಯನ್ನು ನೆರೆಯವರಿಂದ ಹೊಂದಿಸಿದಳಾದರೂ, ಮುಖ್ಯವಾದ ತರಗತಿಗಳನ್ನು ತಪ್ಪಿಸಿಕೊಂಡಿದ್ದರಿಂದ ಸ್ವಾತಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಆಗಲಿಲ್ಲ.

ಸ್ಥಳೀಯ ಪತ್ರಿಕೆಗಳ ವರದಿಯ ಪ್ರಕಾರ, ತಂದೆ ಕರ್ನಾಟಕಕ್ಕೆ ಕೆಲಸ ಹುಡುಕಿಕೊಂಡು ಹೋದ ಸಂದರ್ಭದಲ್ಲಿ ಮನೆಯಲ್ಲಿದ್ದ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳಂತೆ.

ಇತ್ತ ದಾಧಂನಲ್ಲಿ ಹದಿನೆಂಟರ ಹರೆಯದ ವೈಭವ ಮಾನಸಿಕ ಒತ್ತಡದಲ್ಲಿದ್ದಾನೆ. ಮನೆಯ ಒಲೆ ಆರದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಅವನ ಮೇಲೆ ಬಿದ್ದಿದೆ. ಅವನ ತಂದೆಯ ಕೊನೆಯ ಆಶಾಕಿರಣ ಆತ. ನಿಜ ಹೇಳಬೇಕೆಂದರೆ, ಅವನ ತಂದೆಗಿರುವ ಏಕೈಕ ಆಸರೆ ಅವನೊಬ್ಬನೇ.

ಎಲ್ಲ ಫೋಟೋ: ಜೈದೀಪ ಹರ್ಡಿಕರ್

ಅನುವಾದ : 'ಕ್ರೇಜಿ ಫ್ರಾಗ್ ಮೀಡಿಯಾ ಫೀಚರ್ಸ್' ಈ ಅನುವಾದದ ರೂವಾರಿ. ಧಾರವಾಡದಲ್ಲಿ ನೆಲೆಸಿರುವ ಸಂತೋಷ್ ತಾಮ್ರಪರ್ಣಿ ವೃತ್ತಿಯಿಂದ ಎಂಜಿನಿಯರ್. ಆದರೂ ಒಲವು ಬರಹಗಳತ್ತ. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಬರೆದಿರುವ ಹಾಸ್ಯ ಲೇಖನಗಳು ಜನಪ್ರಿಯ.

ಜೈದೀಪ ಹರ್ಡಿಕರ್ ಪತ್ರಕರ್ತ, ಬರಹಗಾರ, ಸಂಶೋಧಕ, ಕ್ರಿಕೆಟ್ ಉತ್ಸಾಹಿ, ಮತ್ತು 'ಪರಿ'ಯ ಪ್ರತಿನಿಧಿ. ಇವರು ದಿ ಟೆಲಿಗ್ರಾಫ್ ನ ಮಧ್ಯ ಭಾರತ ವಿಶೇಷ ಪ್ರತಿನಿಧಿ. 'A Village Awaits Doomsday' ಕೃತಿಯ ಕರ್ತೃ. ಲೇಖಕರ ಸಂಪರ್ಕ @journohardy

(Translation: Santosh Tamraparni)

Translator:   This translation is co ordinated by Crazy Frog Media Features.  Santosh Tamraparni is from Dharawar, Karnataka. An Engineer by profession and a freelance writer, working in Mysore.

Jaideep Hardikar

Jaideep Hardikar is a Nagpur-based journalist and writer, and a PARI core team member.

Other stories by Jaideep Hardikar