65 ವರ್ಷದ ಮುನಾವರ್‌ ಖಾನ್‌ ಪೊಲೀಸ್‌ ಸ್ಟೇಷನ್‌ ತಲುಪಿದಾಗ ಒಳಗಿನಿಂದ ಮಗನ ಹತಾಶ ಗೋಳಾಟ ಕೇಳಿಸುತ್ತಿತ್ತು. ಸುಮಾರು 15 ನಿಮಿಷಗಳ ನಂತರ ಗೋಳಾಟದ ಸದ್ದು ತಣ್ಣಗಾಯಿತು. ಇಸ್ರಾಯೇಲ್‌ ಖಾನ್‌ ಅವರ ತಂದೆ ಪೊಲೀಸರು ತನ್ನ ಮಗನಿಗೆ ಹೊಡೆಯುವುದನ್ನು ನಿಲ್ಲಿಸಿರಬಹುದೆನ್ನುವ ಭರವಸೆ ಹೊಂದಿದ್ದರು.

ಇದಕ್ಕೂ ಮುನ್ನ ಇಸ್ರಾಯೇಲ್ ಧಾರ್ಮಿಕ ಸಭೆಯೊಂದರಲ್ಲಿ ಭಾಗವಹಿಸಿದ ನಂತರ ಭೋಪಾಲ್‌ನಿಂದ ಹೊರಟಿದ್ದರು. ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಅವರು ಅಲ್ಲಿಂದ 200 ಕಿಲೋಮೀಟರ್‌ ದೂರದಲ್ಲಿರುವ ತಮ್ಮ ಊರಾದ ಗುನಾ ಎನ್ನುವಲ್ಲಿಗೆ ಮರಳುತ್ತಿದ್ದರು.

ಅವರು ಆ ಸಂಜೆ (ನವೆಂಬರ್ 21, 2022) ಗುನಾ ತಲುಪಿದರು, ಆದರೆ ಮನೆಗೆ ಬರಲಿಲ್ಲ. ರಾತ್ರಿ 8 ಗಂಟೆ ಸುಮಾರಿಗೆ ಗೋಕುಲ್ ಸಿಂಗ್ ಕಾ ಚಕ್ ಎಂಬ ಬಸ್ತಿ (ಕಾಲೋನಿ) ಯಲ್ಲಿರುವ ಅವರ ಮನೆಯಿಂದ ರಾತ್ರಿ 8 ಗಂಟೆ ಸುಮಾರಿಗೆ, ನಾಲ್ವರು ಪೊಲೀಸ್ ಅಧಿಕಾರಿಗಳು ಇಸ್ರಾಯೇಲ್ ಪ್ರಯಾಣಿಸುತ್ತಿದ್ದ ಆಟೋರಿಕ್ಷಾವನ್ನು ತಡೆದು ನಿಲ್ಲಿಸಿ ಕರೆದೊಯ್ದರು.

ಇಸ್ರಾಯೇಲ್ ಬಂಧನಕ್ಕೊಳಗಾಗುವ ಹೊತ್ತಿನಲ್ಲಿ ಅವರು ತನ್ನ ಅತ್ತೆಯೊಡನೆ ಮಾತನಾಡುತ್ತಿದ್ದರು, ಎಂದು ಅವರ ಅಕ್ಕ 32 ವರ್ಷದ ಬಾನೊ ಹೇಳುತ್ತಾರೆ. "ನಂತರ ಅವನು ಪೊಲೀಸ್ ಕಸ್ಟಡಿಯಲ್ಲಿದ್ದಾನೆ ಎಂದು ನಮಗೆ ತಿಳಿಯಿತು."

ಅಲ್ಲಿಂದ ಅವರನ್ನು ಹತ್ತಿರದ ಕುಶ್ಮುಡಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಪೊಲೀಸ್ ಅಧಿಕಾರಿಗಳು ನಿರ್ದಯವಾಗಿ ಥಳಿಸುತ್ತಿರುವಾಗಲೇ ತಂದೆ ಮುನಾವರ್‌ ಠಾಣೆಗೆ ಬಂದಿದ್ದರು.

ಸುಮಾರು 45 ನಿಮಿಷಗಳ ನಂತರ, ಮುನಾವರ್ ತನ್ನ ಮಗನ ಹತಾಶ ಕೂಗು ಮೌನವಾಗಿರುವುದು ಪೊಲೀಸರು ಹೊಡೆಯುವುದನ್ನು ನಿಲ್ಲಿಸಿದ್ದರಿಂದಾಗಿರದೆ, ಪೊಲೀಸರು ನಿರ್ದಯವಾಗಿ ಬಡಿದಿದ್ದರಿಂದ ಎನ್ನುವುದು ಅವರ ಗಮನಕ್ಕೆ ಬಂತು. ಇಸ್ರಾಯೇಲ್ ಅವರ ಮರಣೋತ್ತರ ಪರೀಕ್ಷೆಯು ಅವರು ಹೃದಯ ವೈಫಲ್ಯ ಮತ್ತು ತಲೆಗೆ ಆದ ಗಾಯದಿಂದ ಸಾವನ್ನಪ್ಪಿದ್ದಾರೆ ಎಂದು ಸೂಚಿಸಿತು.

ನಂತರ ಮಧ್ಯಪ್ರದೇಶದ ಮಾಧ್ಯಮಗಳು, ಜೂಜುಕೋರನನ್ನು ಉಳಿಸುವ ಪ್ರಯತ್ನದಲ್ಲಿ ಪೊಲೀಸರ ಮೇಲೆ ದಾಳಿಯೆಸಗಿದ ಗುಂಪಿನ ಭಾಗವಾಗಿದ್ದ 30 ವರ್ಷದ ಮುಸ್ಲಿಂ ಕಾರ್ಮಿಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿ ಮಾಡಿದ್ದವು.

ಆದರೆ ಅವರ ಕುಟುಂಬ ಈ ಮಾತನ್ನು ಒಪ್ಪುವುದಿಲ್ಲ: “ಅವನು ಮುಸ್ಲಿಂ ಆಗಿದ್ದ ಕಾರಣಕ್ಕೆ ಅವನನ್ನು ವಶಕ್ಕೆ ಪಡೆದುಕೊಂಡರು” ಎನ್ನುತ್ತಾರೆ ಇಸ್ರಾಯೇಲ್ ಅವರ ತಾಯಿ ಮುನ್ನಿ ಬಾಯಿ.

ಇಲ್ಲಿ ಇಸ್ರಾಯೇಲ್ ಪೊಲೀಸ್‌ ಕಸ್ಟಡಿಯಲ್ಲಿ ಸತ್ತಿದ್ದು ವಿವಾದವಲ್ಲ, ಅವರು ಹೇಗೆ ಸತ್ತರು ಎನ್ನುವುದು ನಿಜವಾದ ವಿವಾದ.

Munni Bai lost her son Israel when he was taken into police custody and beaten up; a few hours later he died due to the injuries. ' He was picked up because he was a Muslim', she says, sitting in their home in Guna district of Madhya Pradesh
PHOTO • Parth M.N.

ಮುನ್ನಿ ಬಾಯಿಯವರ ಮಗ ಇಸ್ರಾಯೇಲ್‌ ಪೊಲೀಸ್‌ ಕಸ್ಟಡಿಯಲ್ಲಿ ನಡೆದ ದೌರ್ಜನ್ಯದಿಂದ ತೀರಿಕೊಂಡರು. ಮಧ್ಯಪ್ರದೇಶದ ಗುನಾ ಜಿಲ್ಲೆಯ ತಮ್ಮ ಮನೆಯಲ್ಲಿ ಕುಳಿತು ನಮ್ಮೊಡನೆ ಮಾತನಾಡಿದ ಅವರು, ʼಮುಸ್ಲಿಂ ಎಂಬ ಕಾರಣಕ್ಕೆ ಅವನನ್ನು ಕರೆದೊಯ್ಯಲಾಯಿತು' ಎಂದು ಹೇಳುತ್ತಾರೆ

ಗುನಾದಿಂದ 40 ಕಿ.ಮೀ ದೂರದಲ್ಲಿರುವ ಅಶೋಕ್ ನಗರದಲ್ಲಿ ರೈಲ್ವೆ ಹಳಿಯ ಮೇಲೆ ಬಿದ್ದು ಗಾಯಗೊಂಡ ಇಸ್ರಾಯೇಲ್ ಪೊಲೀಸ್ ಠಾಣೆಗೆ ಬಂದು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಎಂದು ಗುನಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಸಾಗರ್ ತಿಳಿಸಿದ್ದಾರೆ. "ಸಂಬಂಧಪಟ್ಟ ನಾಲ್ವರು ಕಾನ್ಸ್ಟೇಬಲ್‌ಗಳನ್ನು ಪ್ರಸ್ತುತ ಅಮಾನತುಗೊಳಿಸಲಾಗಿದೆ" ಎಂದು ಅವರು ಹೇಳುತ್ತಾರೆ. "ಅವರ ವಿರುದ್ಧ ಶಿಸ್ತು ಕ್ರಮ ನಡೆಯುತ್ತಿದೆ. ಆದರೆ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ತಿಳಿದುಬಂದಿದೆ. ನಮ್ಮ ಪ್ರಾಸಿಕ್ಯೂಷನ್ ಇಲಾಖೆ ಮುಂದಿನ ಕ್ರಮಗಳನ್ನು ನಿರ್ಧರಿಸುತ್ತದೆ.”

ಕಗ್ಗೊಲೆ ನಡೆದ ರಾತ್ರಿ, ಕುಶ್ಮುಡಾ ಪೊಲೀಸರು ಮೊದಲಿಗೆ ಇಸ್ರಾಯೇಲ್‌ ಅವರನ್ನು ಕಂಟೋನ್ಮೆಂಟ್‌ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದರು. ಆದರೆ ಅಲ್ಲಿಗೆ ಹೋದ ನಂತರ ಇಸ್ರಾಯೇಲ್‌ ಅವರ ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಬಾನೊ ಹೇಳುತ್ತಾರೆ, “ಏನೋ ಸರಿಯಿಲ್ಲವೆನ್ನುವುದು ನಮ್ಮ ಅರಿವಿಗೆ ಬಂತು. ನಮ್ಮ ಅಪ್ಪ ಆಸ್ಪತ್ರೆ ತಲುಪುವ ಹೊತ್ತಿಗೆ ಇಸ್ರಾಯೇಲ್‌ ತೀರಿಕೊಂಡಿದ್ದ. ಮೈತುಂಬಾ ಗಾಯಗಳಾಗಿದ್ದವು. ಅವನನ್ನು ನಿರ್ದಯವಾಗಿ ಹೊಡೆದು ಕೊಲ್ಲಲಾಗಿತ್ತು."

ನಾವು ಮಾತುಕತೆ ನಡೆಸುತ್ತಿದ್ದರೆ ಇಸ್ರಾಯೇಲ್‌ ಅವರ ತಾಯಿ ಮುನ್ನಿ ಬಾಯಿ ಬಸ್ತಿಯಲ್ಲಿರುವ ತಮ್ಮ ಒಂದು ಕೋಣೆಯ ಮನೆಯ ಪಕ್ಕದಲ್ಲಿ ಕುಳಿತು ನಮ್ಮ ಮಾತುಗಳನ್ನು ಕೇಳುತ್ತಾ ಒತ್ತರಿಸಿ ಬರುವ ಅಳುವನ್ನು ತಡೆಯಲು ಪ್ರಯತ್ನಿಸುತ್ತಿದ್ದರು. ಸುತ್ತಲೂ ಕಾಂಪೌಂಡ್‌ ಹೊಂದಿರುವ, ಹಾಗೂ ಎರಡು ಸಾಮಾನ್ಯ ಶೌಚಾಲಯಗಳನ್ನು ಹೊಂದಿರುವ ಅವರ ಮನೆಯ ವಠಾರದಲ್ಲಿ ಮೂರರಿಂದ ನಾಲ್ಕು ಸಣ್ಣ ಕಾಂಕ್ರೀಟ್‌ ಕೋಣೆಗಳಿದ್ದವು. ಅವುಗಳಲ್ಲಿ ಒಂದು ಅವರ ಮನೆಯಾಗಿತ್ತು.

ಮುನ್ನಿ ಬಾಯಿ ಬಹಳಷ್ಟು ಪ್ರಯತ್ನಗಳ ನಂತರ ನಮ್ಮ ಮಾತುಕತೆಯಲ್ಲಿ ಭಾಗವಹಿಸಿದರು. ಪ್ರತಿ ಸಲ ಮಾತನಾಡಲು ಯತ್ನಿಸುವಾಗಲೂ ಅವರು ಅಳುತ್ತಿದ್ದರು. ಆದರೆ ಅವರಿಗೆ ಒಂದು ವಿಷಯವನ್ನು ಹೇಳುವುದಿತ್ತು. "ಇತ್ತೀಚಿನ ದಿನಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸುವುದು ಸುಲಭವಾಗಿದೆ" ಎಂದು ಅವರು ಹೇಳುತ್ತಾರೆ. "ನಾವು ಎರಡನೇ ದರ್ಜೆಯ ನಾಗರಿಕರಾಗಿ ಬದುಕುತ್ತಿದ್ದೇವೆ. ನಮ್ಮನ್ನು ಕೊಂದರೂ ನಮ್ಮ ಪರವಾಗಿ ಮಾತನಾಡುವ ಕುರಿತು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.”

ಜುಲೈ 2022ರಲ್ಲಿ, ಕೇಂದ್ರ ಗೃಹ ಸಚಿವಾಲಯವು ಲೋಕಸಭೆಗೆ ಏಪ್ರಿಲ್ 2020ರಿಂದ ಮಾರ್ಚ್ 2022ರ ನಡುವೆ ಭಾರತದಲ್ಲಿ 4,484 ಕಸ್ಟಡಿ ಸಾವುಗಳು ಸಂಭವಿಸಿವೆ ಎಂದು ತಿಳಿಸಿತು.

ಮಧ್ಯಪ್ರದೇಶದಲ್ಲಿ 364 ಕಸ್ಟಡಿ ಸಾವುಗಳು ಸಂಭವಿಸಿದ್ದು, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಮಾತ್ರವೇ ಹೆಚ್ಚಿನ ಸಾವುಗಳನ್ನು ವರದಿ ಮಾಡಿವೆ.

Bano, Israels Khan's sister says his family is struggling as their main income from his daily wage work has ended with his death
PHOTO • Parth M.N.

ಇಸ್ರಾಯೇಲ್‌ ಅವರ ಅಕ್ಕ ಬಾನೊ ಹೇಳುವಂತೆ ಇಡೀ ಕುಟುಂಬ ತಮ್ಮನ ಸಂಪಾದನೆಯ ಮೇಲೆ ಅವಲಂಬಿತವಾಗಿತ್ತು. ತಮ್ಮನ ಸಾವಿನ ನಂತರ ಕುಟುಂಬದ ಪರಿಸ್ಥಿತಿ ಡೋಲಾಯಮಾನವಾಗಿದೆ

"ಪೊಲೀಸ್ ಕಸ್ಟಡಿಯಲ್ಲಿ ಸಾಯುವವರಲ್ಲಿ ಹೆಚ್ಚಿನ ಜನರು ಅಂಚಿನಲ್ಲಿರುವ ಸಮುದಾಯಗಳು ಅಥವಾ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು" ಎಂದು ಗುನಾ ಮೂಲದ ಕಾರ್ಯಕರ್ತ ವಿಷ್ಣು ಶರ್ಮಾ ಹೇಳುತ್ತಾರೆ. "ಅವರು ಆರ್ಥಿಕವಾಗಿ ಅಬಲರು, ಅವರನ್ನು ಕೇಳುವವರೂ ಇಲ್ಲ, ಅವರೊಂದಿಗೆ ನಾವು ನಡೆದುಕೊಳ್ಳುತ್ತಿರುವ ರೀತಿ ಕ್ರೂರವಾದದ್ದು.”.

ಇಸ್ರಾಯೇಲ್‌ ದಿನಗೂಲಿ ಮೂಲಕ ದಿನವೊಂದಕ್ಕೆ 350 ರೂಪಾಯಿಗಳನ್ನು ಗಳಿಸುತ್ತಿದ್ದರು. ಕೆಲಸ ಚೆನ್ನಾಗಿ ಸಿಕ್ಕ ತಿಂಗಳುಗಳಲ್ಲಿ ಅವರು ತಿಂಗಳಿಗೆ ಸುಮಾರು 4,000-5,000 ರೂ.ಗಳನ್ನು ಗಳಿಸುತ್ತಿದ್ದರು. ಅದೇ ಆದಾಯವನ್ನು ಬಳಸಿಕೊಂಡು ಕುಟುಂಬ ಬದುಕು ನಡೆಸುತ್ತಿತ್ತು. ಮೃತ ಇಸ್ರಾಯೇಲ್‌ ಪತ್ನಿ ರೀನಾ (30), 12, 7 ಮತ್ತು 6 ವರ್ಷದ ಮೂವರು ಹೆಣ್ಣು ಮಕ್ಕಳು ಹಾಗೂ ಒಂದು ವರ್ಷದ ಮಗನನ್ನು ಅಗಲಿದ್ದಾರೆ. "ಪೊಲೀಸರು ತಮ್ಮ ಅನ್ಯಾಯದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬೇಕು. ಅವರು ಯಾವುದೇ ಕಾರಣವಿಲ್ಲದೆ ಇಡೀ ಕುಟುಂಬವನ್ನು ನಾಶಪಡಿಸಿದ್ದಾರೆ" ಎಂದು ಬಾನೊ ಹೇಳುತ್ತಾರೆ.

ಸೆಪ್ಟೆಂಬರ್ 2023ರ ಕೊನೆಯ ವಾರದಲ್ಲಿ ನಾನು ಕುಟುಂಬವನ್ನು ಭೇಟಿಯಾದಾಗ, ರೀನಾ ಮತ್ತು ಮಕ್ಕಳೊಂದಿಗೆ ಗುನಾ ನಗರದ ಹೊರವಲಯದಲ್ಲಿರುವ ತನ್ನ ಹೆತ್ತವರ ಮನೆಯಲ್ಲಿದ್ದರು. "ಅವಳು ಇಲ್ಲಿಗೆ ಮತ್ತು ಅಲ್ಲಿಗೆ ಓಡಾಡುತ್ತಲೇ ಇರುತ್ತಾಳೆ" ಎಂದು ಬಾನೊ ಹೇಳುತ್ತಾರೆ. "ಅವಳು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾಳೆ. ನಾವು ಅವಳಿಗೆ ನಮ್ಮಿಂದ ಸಾಧ್ಯವಾದಷ್ಟು ಬೆಂಬಲ ನೀಡಲು ಪ್ರಯತ್ನಿಸುತ್ತೇವೆ. ಅವಳು ತನ್ನ ಇಚ್ಛೆಯಂತೆ ಬಂದು ಹೋಗಬಹುದು. ಅಲ್ಲಿನ ಮತ್ತು ಇಲ್ಲಿನ ಎರಡೂ ಮನೆಯ ಬಾಗಿಲು ಅವಳ ಪಾಲಿಗೆ ಸದಾ ತೆರೆದಿರುತ್ತದೆ."

ರೀನಾ ಅವರ ಕುಟುಂಬವೂ ಕಷ್ಟದಲ್ಲಿ ಜೀವನ ದೂಡುತ್ತಿದೆ. ಅವರ ಕುಟುಂಬ ರೀನಾ ಅವರ ಸಹಾಯಕ್ಕೆ ಬರುವ ಸ್ಥಿತಿಯಲ್ಲಿಲ್ಲ. ತಂದೆಯ ಮರಣದ ನಂತರ ಅವರ ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. “ಶಾಲೆಯ ಸಮವಸ್ತ್ರ, ನೋಟ್‌ ಪುಸ್ತಕಗಳನ್ನು ಖರೀದಿಸುವುದು ಇನ್ನು ನಮ್ಮಿಂದ ಸಾಧ್ಯವಿಲ್ಲ” ಎನ್ನುತ್ತಾರೆ ಮಕ್ಕಳ ಅತ್ತೆ ಬಾನೊ.  "ಮಕ್ಕಳು ಖಿನ್ನತೆಯಲ್ಲಿದ್ದಾರೆ, ವಿಶೇಷವಾಗಿ 12 ವರ್ಷದ ಮೆಹೆಕ್. ಅವಳು ವಿಪರೀತ ಮಾತನಾಡುವವಳು ಆದರೆ ಈಗ ಅವಳು ಮಾತನಾಡುವುದಿಲ್ಲ."

ಭಾರತವು 1997ರಲ್ಲಿ ಚಿತ್ರಹಿಂಸೆಯ ವಿರುದ್ಧದ ವಿಶ್ವ ಸಂಸ್ಥೆಯ ಒಡಂಬಡಿಕೆಗೆ ಸಹಿ ಹಾಕಿದೆ. ಆದರೆ ದೇಶವು ಅದರ ವಿರುದ್ಧ ಕಾನೂನು ಮಾಡಲು ವಿಫಲವಾಗಿದೆ. ಏಪ್ರಿಲ್ 2010ರಲ್ಲಿ, ಆಗಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ಚಿತ್ರಹಿಂಸೆ ವಿರೋಧಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು ಆದರೆ ಅದು ಶಾಸನವಾಗಿ ಕಾರ್ಯರೂಪಕ್ಕೆ ಬರಲಿಲ್ಲ. ವಿಚಾರಣಾಧೀನ ಕೈದಿಗಳ ಕಸ್ಟಡಿ ಚಿತ್ರಹಿಂಸೆ ಭಾರತದಲ್ಲಿ ಸಾಮಾನ್ಯವಾಗಿದೆ, ಮತ್ತು ಮುಸ್ಲಿಮರು, ದಲಿತರು ಮತ್ತು ಆದಿವಾಸಿಗಳಂತಹ ಅಂಚಿನಲ್ಲಿರುವ ಸಮುದಾಯಗಳು ಅದರಿಂದ ಹೆಚ್ಚು ತೊಂದರೆಗೀಡಾಗಿವೆ.

Intaaz Bai, Israel’s grandmother in front of their home in Gokul Singh Ka Chak, a basti in Guna district
PHOTO • Parth M.N.

ಗುನಾ ಜಿಲ್ಲೆಯ ಬಸ್ತಿಯಾದ ಗೋಕುಲ್ ಸಿಂಗ್ ಕಾ ಚಕ್‌ ಎನ್ನುವಲ್ಲಿರುವ ತಮ್ಮ ಮನೆಯ ಮುಂದೆ ಇಸ್ರಾಯೇಲ್‌ ಅವರ ಅಜ್ಜಿ ಇಂತಾಜ್ ಬಾಯಿ

ಇದಕ್ಕೆ ಉದಾಹರಣೆಯೆಂಬಂತೆ ಖಾರ್ಗೋನ್ ಜಿಲ್ಲೆಯ ಖೈರ್ ಕುಂಡಿ ಗ್ರಾಮದ 35 ವರ್ಷದ ಸಣ್ಣ ಆದಿವಾಸಿ ರೈತ ಮತ್ತು ಕಾರ್ಮಿಕ ಬಿಸನ್ ಅವರ ಪ್ರಕರಣವನ್ನೇ ತೆಗೆದುಕೊಳ್ಳಿ, ಅವರನ್ನು ಆಗಸ್ಟ್ 2021ರಲ್ಲಿ ಪೊಲೀಸರು ಕರೆದೊಯ್ದು 29,000 ರೂ.ಗಳನ್ನು ಕದ್ದಿದ್ದಾರೆ ಎಂಬ ಅನುಮಾನದ ಮೇಲೆ ಕ್ರೂರವಾಗಿ ಹಿಂಸಿಸಿದರು.

ಮೂರು ದಿನಗಳ ನಂತರ, ಭಿಲ್ ಆದಿವಾಸಿ ಸಮುದಾಯಕ್ಕೆ ಸೇರಿದ ಬಿಸನ್ ಅವರನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ, ಅವರು ನೋವಿನಿಂದ ಬಳಲುತ್ತಿದ್ದರು ಮತ್ತು ದೈಹಿಕ ಬೆಂಬಲವಿಲ್ಲದೆ ನೇರವಾಗಿ ನಿಲ್ಲಲು ಸಹ ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಕರಣದ ವಿರುದ್ಧ ಹೋರಾಡುತ್ತಿರುವ ಕಾರ್ಯಕರ್ತರು ಹೇಳುತ್ತಾರೆ. ಆದರೂ, ಅವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು. ಅವರಿಗಾಗಿದ್ದ ಗಾಯಗಳನ್ನು ನೋಡಿ ಜೈಲು ಅಧಿಕಾರಿಗಳು ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು.

ನಾಲ್ಕು ಗಂಟೆಗಳ ನಂತರ, ಅವರನ್ನು ಆಸ್ಪತ್ರೆಗೆ ಸಾಗಿಸಬೇಕಾಯಿತು, ಅಲ್ಲಿ ಹೋಗುತ್ತಿದ್ದಂತೆ ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು. ಮರಣೋತ್ತರ ವರದಿಯು ವ್ಯಾಪಕವಾದ ಸೋಂಕಿತ ಗಾಯಗಳಿಂದಾಗಿ ಉಂಟಾದ ಸೆಪ್ಟಿಸೆಮಿಕ್ ಆಘಾತ ಸಾವಿಗೆ ಕಾರಣ ಎಂದು ದಾಖಲಿಸಿದೆ.

ಬಿಸನ್ ಪತ್ನಿ ಮತ್ತು ಐದು ಮಕ್ಕಳನ್ನು ಅಗಲಿದ್ದಾರೆ - ಅವರಲ್ಲಿ ಕಿರಿಯವನಿಗೆ ಏಳು ವರ್ಷ.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒ - ಜಾಗೃತಿ ಆದಿವಾಸಿ ದಲಿತ ಸಂಘಟನ್ (ಜೆಎಡಿಎಸ್) ಬಿಸನ್ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಮಧ್ಯಪ್ರದೇಶದ ಹೈಕೋರ್ಟಿನಲ್ಲಿ ಈ ಕುರಿತು ಪಿಐಎಲ್ ಸಲ್ಲಿಸಲಾಗಿದೆ.

“29,000 ರೂ.ಗಳನ್ನು ಕದ್ದ ಅನುಮಾನದ ಮೇಲೆ ಒಬ್ಬ ವ್ಯಕ್ತಿಯನ್ನು ಸಾಯುವಷ್ಟು ಹೊಡೆಯಬಹುದೆ?” ಎಂದು ಜೆಎಡಿಎಸ್ ನಾಯಕಿ ಮಾಧುರಿ ಕೃಷ್ಣಸ್ವಾಮಿ ಕೇಳುತ್ತಾರೆ. "ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಬಿಸನ್ ಅವರ ಕುಟುಂಬದ ಮೇಲೆ ಒತ್ತಡ ಹೇರಲಾಗುತ್ತಿದೆ ಆದರೆ ನಾವು ಅದರ ವಿರುದ್ಧ ಹೋರಾಡಲು ನಿರ್ಧರಿಸಿದ್ದೇವೆ. ಈ ಪ್ರಕರಣದಲ್ಲಿ ಪೊಲೀಸರು ಎನ್ಎಚ್ಆರ್‌ಸಿ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ.”

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್‌ಸಿ) ನೀಡಿರುವ ಮಾರ್ಗಸೂಚಿಗಳ ಪ್ರಕಾರ, "ಮರಣೋತ್ತರ ಪರೀಕ್ಷೆ, ವಿಡಿಯೋಗ್ರಾಫ್ ಮತ್ತು ಮ್ಯಾಜಿಸ್ಟೀರಿಯಲ್ ವಿಚಾರಣಾ ವರದಿ ಸೇರಿದಂತೆ ಎಲ್ಲಾ ವರದಿಗಳನ್ನು ಘಟನೆ ನಡೆದ ಎರಡು ತಿಂಗಳೊಳಗೆ ಕಳುಹಿಸಬೇಕು. ಕಸ್ಟಡಿ ಸಾವಿನ ಪ್ರತಿಯೊಂದು ಪ್ರಕರಣದಲ್ಲೂ, ಆಯೋಗದ ನಿರ್ದೇಶನದಂತೆ ಮ್ಯಾಜಿಸ್ಟೀರಿಯಲ್ ವಿಚಾರಣೆಯನ್ನು ಸಹ ಮಾಡಬೇಕು ಮತ್ತು ಅದನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಮತ್ತು ಎರಡು ತಿಂಗಳ ಗಡುವಿನೊಳಗೆ ಈ ವರದಿಯನ್ನು ಸಹ ಲಭ್ಯವಾಗುವಂತೆ ಮಾಡಬೇಕು.”

ಇಸ್ರಾಯೇಲ್‌ ಸತ್ತ ಸಂದರ್ಭದಲ್ಲಿ ಪೊಲೀಸರು ಮರಣೋತ್ತರ ವರದಿಯನ್ನು ಕುಟುಂಬಕ್ಕೆ ಹಸ್ತಾಂತರಿಸದೆ ಶವಸಂಸ್ಕಾರ ನಡೆಸುವಂತೆ ಅವರ ಮೇಲೆ ಒತ್ತಡ ಹೇರುತ್ತಿದ್ದರು. ಇದೆಲ್ಲ ನಡೆದು ಸುಮಾರು ಒಂದು ವರ್ಷವಾಗಿದೆ ಆದರೆ ಮ್ಯಾಜಿಸ್ಟೀರಿಯಲ್ ವಿಚಾರಣೆಯ ಫಲಿತಾಂಶದ ಬಗ್ಗೆ ಅವರ ಕುಟುಂಬಕ್ಕೆ ಇನ್ನೂ ತಿಳಿದಿಲ್ಲ.

Munni Bai says, 'the atmosphere is such that we (Muslims) are reduced to second-class citizens. We can be killed and nobody will bother to speak up'
PHOTO • Parth M.N.

'ನಾವು (ಮುಸ್ಲಿಮರು) ಎರಡನೇ ದರ್ಜೆಯ ನಾಗರಿಕರಾಗಿ ಬದುಕಬೇಕಾದ ವಾತಾವರಣವಿದೆ. ನಮ್ಮನ್ನು ಯಾರು ಬೇಕಿದ್ದರೂ ಕೊಲ್ಲಬಹುದು. ನಮ್ಮ ಕುರಿತಾಗಿ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲʼ ಎನ್ನುತ್ತಾರೆ ಮುನ್ನಿ ಬಾಯಿ

ಅವರಿಗೆ ಯಾವುದೇ ಸರ್ಕಾರಿ ಸಹಾಯವೂ ದೊರೆತಿಲ್ಲ. ಇಸ್ರಾಯೇಲ್‌ ಕುಟುಂಬವು ಜಿಲ್ಲಾಧಿಕಾರಿಯನ್ನು ನೋಡಲು ಹೋದರೆ, ಅವರು ಅಲ್ಲಿಂದ ಅಸಭ್ಯವಾಗಿ ಬಯ್ದು ಕಳುಹಿಸಿದರು ಎಂದು ಬಾನೊ ಹೇಳುತ್ತಾರೆ. “ನಮ್ಮನ್ನು ಎಲ್ಲರೂ ಮರೆತಿದ್ದಾರೆ. ನ್ಯಾಯ ಸಿಗುವ ಭರವಸೆಯನ್ನೂ ನಾವು ಕಳೆದುಕೊಂಡಿದ್ದೇವೆ.”

ಕುಟುಂಬಕ್ಕಾಗಿ ದುಡಿಯುತ್ತಿದ್ದ ಮಗ ತೀರಿಕೊಂಡ ನಂತರ ವಯಸ್ಸಾದ ಪೋಷಕರು ದಿನ ದೂಡಲು ಏನಾದರೂ ಮಾಡಬೇಕಾಯಿತು.

ಮುನ್ನಿ ಬಾಯಿ ನೆರೆಹೊರೆಯ ಎಮ್ಮೆಗಳ ಹಾಲು ಕರೆಯುವ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಅವರು ತನ್ನ ಸಣ್ಣ ಮನೆಯ ಜಗಲಿಯಲ್ಲಿ ಜಾನುವಾರುಗಳನ್ನು ತಂದು ಒಂದೊಂದಾಗಿ ಹಾಲು ಹಿಂಡುತ್ತಾರೆ. ಹಾಲು ಕರೆದ ನಂತರ ಹಾಲು ಮತ್ತು ಜಾನುವಾರನ್ನು ಅವುಗಳ ಮಾಲಿಕರಿಗೆ ಒಪ್ಪಿಸುತ್ತಾರೆ. ಈ ಕೆಲಸಕ್ಕೆ ಅವರಿಗೆ ದಿನಕ್ಕೆ 100 ರೂಪಾಯಿ ದೊರೆಯುತ್ತದೆ "ನನ್ನ ವಯಸ್ಸಿನಲ್ಲಿ ನಾನು ಮಾಡಬಹುದಾದದ್ದು ಇಷ್ಟೇ" ಎಂದು ಅವರು ಹೇಳುತ್ತಾರೆ.

ಮುನಾವರ್‌ ಅವರಿಗೆ ಈಗ ಅರವತ್ತು ವರ್ಷ. ಅವರ ಮೊಣಕಾಲು ಗಂಟು ದುರ್ಬಲಗೊಂಡಿದ್ದು ಅವರು ನೋವಿನಿಂದ ಬಳಲುತ್ತಿದ್ದಾರೆ. ಅದರ ನಡುವೆಯೇ ಅವರು ಮತ್ತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಅವರು ಕೆಲಸ ಮಾಡುವಾಗ ಏದುಸಿರು ಶುರುವಾಗುತ್ತದೆ. ಇದು ಅವರೊಡನೆ ಕೆಲಸ ಮಾಡುವವರನ್ನು ಆತಂಕಕ್ಕೆ ತಳ್ಳುತ್ತದೆ. ಅವರು ತಮ್ಮ ಬಸ್ತಿಯಿಂದ 10 ಕಿಲೋಮೀಟರಿಗಿಂತ ಹೆಚ್ಚು ದೂರ ಕೆಲಸಕ್ಕೆ ಹೋಗುವುದಿಲ್ಲ. ಒಂದು ವೇಳೆ ಕೆಲಸ ಮಾಡುತ್ತಿರುವಾಗ ಏನಾದರೂ ಹೆಚ್ಚು ಕಡಿಮೆಯಾದರೆ ಮನೆಯವರಿಗೆ ಬರಲು ಸುಲಭವಾಗುತ್ತದೆ ಎನ್ನುವ ಕಾರಣಕ್ಕೆ ಅವರು ಹಾಗೆ ಮಾಡುತ್ತಿದ್ದಾರೆ.

ಕುಟುಂಬವು ಜೀವನೋಪಾಯಕ್ಕಾಗಿ ಪರದಾಡುತ್ತಿದೆ, ಇದರಿಂದಾಗಿ ಕೇಸ್‌ ನಡೆಸುವುದು ಅವರಿಗೆ ಕಷ್ಟಕವಾಗುತ್ತಿದೆ. "ವಕೀಲರು ಹಣ ಕೇಳುತ್ತಾರೆ" ಎಂದು ಬಾನೊ ಹೇಳುತ್ತಾರೆ. “ನಮಗೆ ಹೊಟ್ಟೆಪಾಡು ನೋಡಿಕೊಳ್ಳುವುದೇ ಕಷ್ಟವಾಗುತ್ತಿದೆ, ಹೀಗಿರುವಾಗ ವಕೀಲರಿಗೆ ಕೊಡಲು ಹಣ ಎಲ್ಲಿಂದ ತರುವುದು? ಯಹಾಂ ಇನ್ಸಾಫ್‌ ಕೇ ಪೈಸೆ ಲಗ್ತೇ ಹೇ [ಇಲ್ಲಿ ನ್ಯಾಯ ಪಡೆಯುವುದಕ್ಕೂ ಹಣ ಕೊಡಬೇಕು]”

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

Parth M.N. is a 2017 PARI Fellow and an independent journalist reporting for various news websites. He loves cricket and travelling.

Other stories by Parth M.N.
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru