ಸಿದ್ಧು ಗಾವಡೆ ಶಾಲೆಗೆ ಸೇರಲು ತೀರ್ಮಾನಿಸಿದ ದಿನ, ಅವರ ಪೋಷಕರು 50 ಕುರಿಗಳನ್ನು ಕೊಟ್ಟು ಅವುಗಳನ್ನು ಮೇಯಿಸಲು ಹೇಳಿದರು. ಅವರ ಕುಟುಂಬದ ಇತರರಂತೆ, ಅವರ ಸ್ನೇಹಿತರಂತೆ ಅವರೂ ಪರಂಪರಾಗತ ವೃತ್ತಿಯಾದ ಕುರಿ ಪಾಲನೆಯನ್ನು ಮುಂದುವರೆಸಬೇಕೆನ್ನುವುದು ಅವರ ಕುಟುಂಬದ ನಿರೀಕ್ಷೆಯಾಗಿತ್ತು. ಬಹಳ ಬೇಗನೆ ಈ ವೃತ್ತಿಯಲ್ಲಿ ತೊಡಗಿಕೊಂಡ ಅವರು ಮತ್ತೆ ಶಾಲೆಯ ಮೆಟ್ಟಿಲು ಹತ್ತುವ ಕುರಿತು ಯೋಚಿಸಲಿಲ್ಲ.

ಗಾವಡೆ ಧನಗರ್‌ ಸಮುದಾಯಕ್ಕೆ ಸೇರಿದವರು. ಆಡು ಮತ್ತು ಕುರಿ ಸಾಕಣೆಯಲ್ಲಿ ತೊಡಗಿಕೊಂಡಿರುವ ಈ ಸಮುದಾಯವನ್ನು ಮಹಾರಾಷ್ಟ್ರದಲ್ಲಿ ಅಲೆಮಾರಿ ಬುಡಕಟ್ಟು ಎಂದು ಪಟ್ಟಿ ಮಾಡಲಾಗಿದೆ. ಇವರು ಆರು ತಿಂಗಳು ಅಥವಾ ಕೆಲವೊಮ್ಮೆ ಅದಕ್ಕೂ ಹೆಚ್ಚು ಸಮಯ ಮನೆಯಿಂದ ದೂರವಿದ್ದು ಪಶುಪಾಲನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.

ಅವರು ಒಮ್ಮೆ ತಮ್ಮ ಊರಿನಿಂದ ಸುಮಾರು ನೂರು ಕಿಲೋಮೀಟರ್‌ ದೂರದಲ್ಲಿರುವ ಊರಾದ ಉತ್ತರ ಕರ್ನಾಟಕದ ಕಾರದಗದಲ್ಲಿ ಕುರಿ ಮೇಯಿಸುತ್ತಿದ್ದರು. ಅಲ್ಲಿ ಅವರೊಂದಿಗಿದ್ದ ಇನ್ನೊಬ್ಬ ಕುರಿ ಸಾಕಣೆದಾರ ದಾರವನ್ನು ಬಳಸಿ ವೃತ್ತಾಕಾರದಲ್ಲಿ ಏನನ್ನೋ ನೇಯುತ್ತಿರುವುದನ್ನು ಕಂಡರು. “ನನಗೆ ಅದು ಬಹಳ ಆಸಕ್ತಿಕರವಾಗಿ ಕಂಡಿತು” ಎಂದು ಅವರು ತಾನು ಬಹಳ ಕೌಶಲ ಬೇಡುವ ಜಾಳಿ (ವೃತ್ತಾಕಾರದ ಚೀಲ) ನೇಯ್ಗೆಯನ್ನು ಹೇಗೆ ಕಲಿತೆ ಎನ್ನುವುದನ್ನು ವಿವರಿಸುತ್ತಾ ಹೇಳಿದರು. ಅವರು ಅದರ ನೇಯ್ಗೆ ಮುಂದುವರೆಸಿದಂತೆ ಅದು ಕಂದು ಬಣ್ಣಕ್ಕೆ ತಿರುಗುತ್ತಿತ್ತು. ಈ ಹಿರಿಯ ಪಶುಪಾಲಕ ಧನಗರ್‌ ಸಮುದಾಯಕ್ಕೆ ಸೇರಿದವರು.

ಅಂದಿನ ಭೇಟಿಯಲ್ಲಿ ಕಂಡ ಆ ದೃಶ್ಯ ಈ ಹುಡುಗನ ಮುಂದಿನ 74 ವರ್ಷಗಳ ಸುದೀರ್ಘ ನೇಯ್ಗೆಯ ಪ್ರಯಾಣಕ್ಕೆ ನಾಂದಿಯಾಯಿತು.

ಜಾಳಿ ಎನ್ನುವುದು ವೃತ್ತಾಕಾರದ ಚೀಲವಾಗಿದ್ದು, ಇದನ್ನು ಹತ್ತಿಯಿಂದ ನೇಯಲಾಗುತ್ತದೆ ಮತ್ತು ಬಗಲು ಚೀಲವಾಗಿ ಬಳಸಲಾಗುತ್ತದೆ. “ಪ್ರತಿಯೊಬ್ಬ ಧನಗರ್‌ ಕೂಡಾ ತನ್ನ [ಕುರಿ ಮೇಯಿಸುವ] ಪ್ರಯಾಣದಲ್ಲಿ ಈ ಚೀಲವನ್ನು ಜೊತೆಗಿಟ್ಟುಕೊಂಡಿರುತ್ತಾನೆ” ಎನ್ನುತ್ತಾರೆ ಸಿದ್ಧು ಗಾವಡೆ. “ಈ ಚೀಲದಲ್ಲಿ ಹತ್ತು ಭಕ್ರಿಗಳನ್ನು [ರೊಟ್ಟಿ] ಮತ್ತು ಒಂದು ಜೊತೆ ಬಟ್ಟೆಯನ್ನು ಇಟ್ಟುಕೊಳ್ಳಬಹುದು. ಬಹಳಷ್ಟು ಧನಗರರು ಎಲೆ, ಅಡಿಕೆ ಮತು ಚುನಾ (ಸುಣ್ಣ) ಕೂಡಾ ಇಟ್ಟುಕೊ‍ಳ್ಳುತ್ತಾರೆ.”

ಈ ಚೀಲವನ್ನು ತಯಾರಿಸಲು ಬೇಕಾದ ಕೈಚಳಕವನ್ನು ವಿವರಿಸುವುದಾದರೆ, ಬಹುತೇಕ ಈ ಚೀಲಗಳೆಲ್ಲವೂ ಒಂದೇ ಅಳತೆಯಲ್ಲಿರುತ್ತವೆ, ಆದರೆ ಪಶುಪಾಲಕರು ಇದನ್ನು ನೇಯುವಾಗ ಯಾವುದೇ ಅಳತೆಗೋಲುಗಳನ್ನು ಬಳಸುವುದಿಲ್ಲ. “ಇಂದು ಒಂದು ಹಸ್ತ ಮತ್ತು ನಾಲ್ಕು ಬೆರಳುಗಳಷ್ಟು ಎತ್ತರವಿರಬೇಕು” ಎನ್ನುತ್ತಾರೆ ಸಿದ್ಧು ಗಾವಡೆ. ಅವರು ತಯಾರಿಸುವ ಪ್ರತಿಯೊಂದು ಜಾಳಿಯೂ 10 ವರ್ಷಗಳ ಕಾಲ ಬಾಳಿಕೆ ಬರುತ್ತದೆ. “ಈ ಚೀಲ ಮಳೆಯಲ್ಲಿ ನೆನೆಯಬಾರದು, ಹಾಗೆಯೇ ಇಲಿಗಳಿಗೆ ಇವುಗಳನ್ನು ಕತ್ತರಿಸುವುದೆಂದರೆ ಬಹಳ ಇಷ್ಟ. ಈ ವಿಷಯದಲ್ಲಿ ಚೀಲ ಬಳಸುವವರು ಬಹಳ ಎಚ್ಚರಿಕೆಯಿಂದ ಇರಬೇಕು.”

Siddu Gavade, a Dhangar shepherd, learnt to weave jalis by watching another, older Dhangar. These days Siddu spends time farming; he quit the ancestral occupation of rearing sheep and goats a while ago
PHOTO • Sanket Jain
Siddu Gavade, a Dhangar shepherd, learnt to weave jalis by watching another, older Dhangar. These days Siddu spends time farming; he quit the ancestral occupation of rearing sheep and goats a while ago
PHOTO • Sanket Jain

ಈ ಧನಗರ್‌ ಪಶುಪಾಲಕ ಇನ್ನೋರ್ವ ಹಿರಿಯ ಧನಗರ್‌ ಜಾಲಿ ನೇಯುವುದನ್ನು ನೋಡಿ ಅದರ ನೇಯ್ಗೆಯನ್ನು ಕಲಿತರು. ಪ್ರಸ್ತುತ ಸಿದ್ಧು ಗಾವಡೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ; ಅವರು ಕೆಲವು ದಿನಗಳ ಕೆಳಗೆ ತಮ್ಮ ಪರಂಪರೆ ವೃತ್ತಿಯಾದ ಕುರಿ ಸಾಕಣಿಕೆಯನ್ನು ಕೈಬಿಟ್ಟಿದ್ದಾರೆ

Siddu shows how he measures the jali using his palm and four fingers (left); he doesn't need a measure to get the dimensions right. A bag (right) that has been chewed by rodents
PHOTO • Sanket Jain
Siddu shows how he measures the jali using his palm and four fingers (left); he doesn't need a measure to get the dimensions right. A bag (right) that has been chewed by rodents
PHOTO • Sanket Jain

ತನ್ನ ಬೆರಳು ಮತ್ತು ಹಸ್ತವನ್ನು ಬಳಸಿ ಜಾಳಿ ಅಳತೆ ತೆಗೆಯುವುದನ್ನು ತೋರಿಸುತ್ತಿರುವ ಸಿದ್ಧು ಗಾವಡೆ (ಎಡ); ಅವರಿಗೆ ಸರಿಯಾದ ಅಳತೆಗೆ ನೇಯಲು ಯಾವುದೇ ಅಳತೆಗೋಲು ಬೇಕಿಲ್ಲ. ಇಲಿಗಳ ಕಡಿತಕ್ಕೆ ಒಳಗಾಗಿರುವ ಚೀಲ (ಬಲ)

ಪ್ರಸ್ತುತ ಕಾರದಗದಲ್ಲಿ ಹತ್ತಿಯ ದಾರ ಬಳಸಿ ಜಾಳಿ ತಯಾರಿಸಬಲ್ಲ ಏಕೈಕ ಬೇಸಾಯಗಾರನೆಂದರೆ ಅದು ಸಿದ್ಧು ಗಾವಡೆ. “ಕನ್ನಡದಲ್ಲಿ ಇದನ್ನು ಜಾಳಗಿ ಎಂದು ಕರೆಯಲಾಗುತ್ತದೆ” ಎನ್ನುತ್ತಾರವರು. ಕಾರದಗ ಎನ್ನುವ ಊರು ಮಹಾರಾಷ್ಟ್ರ – ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿದೆ. ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿಗೆ ಸೇರಿದೆ. ಈ ಊರಿನಲ್ಲಿ ಸುಮಾರು 9,000 ಜನರಿದ್ದು, ಕನ್ನಡ ಮತ್ತು ಮರಾಠಿ ಮಾತನಾಡುತ್ತಾರೆ.

ಸಿದ್ಧು ಗಾವಡೆಯವರು ತಮ್ಮ ಬಾಲ್ಯದಲ್ಲಿ ಸುತ್ತಿಗಾಗಿ (ಹತ್ತಿಯ ದಾರ) ಲಾರಿ ಬರುವುದನ್ನು ಕಾಯುತ್ತಿದ್ದರು. “ಜೋರಾಗಿ ಬೀಸುವ ಗಾಳಿಯಿಂದಾಗಿ [ಓಡುತ್ತಿರುವ} ಲಾರಿಯಿಂದ ದಾರದ ಉಂಡೆ ಬೀಳುತ್ತಿದ್ದವು. ನಾನು ಅವುಗಳನ್ನು ಹೆಕ್ಕಿಕೊಳ್ಳುತ್ತಿದ್ದೆ” ಎಂದು ಅವರು ವಿವರಿಸುತ್ತಾರೆ. “ಗಂಟುಗಳನ್ನು ತಯಾರಿಸುವುದಕ್ಕಾಗಿ ಅವರು ದಾರದೊಡನೆ ಆಡುತ್ತಿದ್ದರು. “ಇದನ್ನು ನನಗೆ ಯಾರೂ ಕಲಿಸಿಲ್ಲ. ನಾನಿದನ್ನು ಮ್ಹಾತಾರ [ಹಿರಿಯ] ಧನಗರ್‌ ನೋಡಿ ಕಲಿತೆ.”

ಮೊದಲ ವರ್ಷ ಸಿದ್ಧು ಗಾವಡೆಯವರು ಕೇವಲ ವೃತ್ತಾಕಾರವನ್ನು ತಯಾರಿಸುವುದು ಮತ್ತು ದಾರವನ್ನು ಗಂಟು ಹಾಕುವುದನ್ನು ಮಾತ್ರ ಕಲಿತರು. “ಕೊನೆಗೆ ನನ್ನ ಕುರಿಗಳು ಮತ್ತು ನಾಯಿಯೊಡನೆ ಸಾವಿರಾರು ಮೈಲಿ ನಡೆದ ನಂತರ ಈ ಸಂಕೀರ್ಣ ನೇಯ್ಗೆಯನ್ನು ಕಲಿತೆ” ಎನ್ನುತ್ತಾರವರು. “ಇದರಲ್ಲಿ ಮುಖ್ಯ ಕೌಶಲವೆಂದರೆ ವೃತ್ತಾಕಾರದಲ್ಲಿ ಕುಣಿಕೆ ತಯಾರಿಸುವುದು ಹಾಗೂ ಅದೇ ಆಕಾರವನ್ನು ಪೂರ್ತಿ ಜಾಳಿ ತಯಾರಾಗುವ ತನಕ ಉಳಿಸಿಕೊಳ್ಳುವುದು” ಎನ್ನುತ್ತಾರೆ ತನ್ನ ನೇಯ್ಗೆಗೆ ಹೆಣಿಗೆ ಸೂಜಿಯನ್ನೂ ಬಳಸದ ಕುಶಲಕರ್ಮಿ.

ತೆಳುವಾದ ದಾರ ಬಳಸಿ ಸರಿಯಾದ ಗಂಟನ್ನು ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ ಮೊದಲಿಗೆ ಸಿದ್ಧು ಗಾವಡೆಯವರು ದಾರವನ್ನು ದಪ್ಪ ಮಾಡಿಕೊ‍ಳ್ಳುತ್ತಾರೆ. ಇದಕ್ಕಾಗಿ ಅವರು ದೊಡ್ಡ ದಾರದ ಉಂಡೆಯಿಂದ 20 ಅಡಿ ಉದ್ದದ ದಾರವನ್ನು ತೆಗೆದುಕೊಳ್ಳುತ್ತಾರೆ. ಇದನ್ನು ಅವರು ಚುರುಕಾಗಿ ಮರಾಠಿಯಲ್ಲಿ ಟಕಳಿ ಅಥವಾ ಭಿಂಗ್ರಿ ಎಂದು ಕರೆಯಲ್ಪಡುವ ಮರದ ಉಪಕರಣಕ್ಕೆ ಕಟ್ಟುತ್ತಾರೆ. ತಕ್ಲಿ ಎನ್ನುವುದು ಮರದ ಉಕರಣವಾಗಿದ್ದು, ಇರಡೂ ಬದಿಗಳಲ್ಲಿ ಅಣಬೆ ರೀತಿಯ ತಿರುವುಗಳನ್ನು ಹೊಂದಿರುತ್ತದೆ.

ನಂತರ ಅವರು 50 ವರ್ಷಗಳಷ್ಟು ಹಳೆಯ ಬಬೂಲ್‌ (ಜಾಲಿ) ಮರದ ಟಕಳಿಯನ್ನು ತಮ್ಮ ಬಲಗಾಲಿನಡಿ ಇಟ್ಟುಕೊಂಡು ಅದಕ್ಕೆ ಚುರುಕಾಗಿ ದಾರವನ್ನು ಸುತ್ತುತ್ತಾರೆ. ಮತ್ತೆ ಒಂದು ಕ್ಷಣವೂ ತಮ್ಮ ಚಲನೆಯನ್ನು ನಿಲ್ಲಿಸದೆ, ತಕಲಿಯನ್ನು ತಮ್ಮ ಎಡಗೈ ಬಳಸಿ ಎತ್ತಿ ಹಿಡಿದು ಅದರಿಂದ ದಾರದ ಎಳೆಯನ್ನು ಎಳೆಯತೊಡಗುತ್ತಾರೆ. “ಇದು ದಾರದ ಎಳೆಯನ್ನು ದಪ್ಪವಾಗಿಸುವ ಸಾಂಪ್ರದಾಯಿಕ ವಿಧಾನ” ಎಂದು ಅವರು ಹೇಳಿದರು. ಅವರಿಗೆ 20 ಅಡಿ ತೆಳು ದಾರವನ್ನು ಸುತ್ತಲು ಅವರಿಗೆ ಎರಡು ಗಂಟೆ ಸಮಯ ಬೇಕಾಗುತ್ತದೆ.

ದಪ್ಪದ ದಾರ ದುಬಾರಿಯಾಗಿರುವ ಕಾರಣ ಸಿದ್ಧು ಗಾವಡೆ ಈ ಹಳೆಯ ಪದ್ಧತಿಗೆ ಇನ್ನೂ ಅಂಟಿಕೊಂಡಿದ್ದಾರೆ. “ತೀನ್‌ ಪದರ್‌ ಚಾ ಕರವಾ ಲಾಗ್ತೆ [ಅರವನ್ನು ಮೂರು ಮೂರು ಪದರ ಮಾಡಬೇಕು]” ಆದರೆ ಕಾಲು ಮತ್ತು ಟಕಳಿ ನಡುವಿನ ಘರ್ಷಣೆಯಿಂದ ಅವರ ಕಾಲಿನಲ್ಲಿ ಉಜ್ಜುಗಾಯ ಮತ್ತು ಊರಿಯೂತ ಉಂಟಾಗುತ್ತದೆ, “ಮಗ್‌ ಕಾಯಿ, ದೋಣ್ ದಿವಸ್‌ ಆರಾಮ್‌ ಕರಾಯ್ಚಾ [ಏನಾಗುತ್ತೆ? ಎರಡು ದಿನ ಆರಾಮ ಮಾಡಿದ್ರೆ ಮುಗೀತು]” ಎಂದು ನಗುತ್ತಾ ಹೇಳುತ್ತಾರವರು.

Siddu uses cotton thread to make the jali . He wraps around 20 feet of thread around the wooden takli , which he rotates against his leg to effectively roll and thicken the thread. The repeated friction is abrasive and inflames the skin
PHOTO • Sanket Jain
Siddu uses cotton thread to make the jali . He wraps around 20 feet of thread around the wooden takli , which he rotates against his leg to effectively roll and thicken the thread. The repeated friction is abrasive and inflames the skin
PHOTO • Sanket Jain

ಸಿದ್ಧು ಗಾವಡೆ ಜಾಳಿ ತಯಾರಿಸಲು ಹತ್ತಿ ದಾರವನ್ನು ಬಳಸುತ್ತಾರೆ. ದಾರವನ್ನು ದಪ್ಪ ಮಾಡಲು ಅವರು ಟಕಳಿ ಬಳಸಿ ಕಾಲಿನಿಂದ ತಿರುಗಿಸುತ್ತಾರೆ. ಈ ಪುನಾರವರ್ತಿತ ತಿರುಗಿಸುವಿಕೆಯು ಅವರ ಕಾಲಿನಲ್ಲಿ ಉಜ್ಜುಗಾಯಗಳು ಮತ್ತು ಉರಿಯೂತವನ್ನು ಉಂಟುಮಾಡುತ್ತವೆ

There is a particular way to hold the takli and Siddu has mastered it over the years: 'In case it's not held properly, the thread doesn't become thick'
PHOTO • Sanket Jain

ಟಕಳಿ ಹಿಡಿದುಕೊ‍ಳ್ಳುವುದಕ್ಕೇ ಅದರದ್ದೇ ಆದ ಶೈಲಿಯಿದೆ, ಸಿದ್ಧು ಗಾವಡೆ ತಮ್ಮ ಹಲವು ವರ್ಷಗಳ ಅನುಭವದಿಂದ ಅದನ್ನು ಪಳಗಿಸಿಕೊಂಡಿದ್ದಾರೆ. ʼಒಂದು ವೇಳೆ ಅದನ್ನು ಸರಿಯಾಗಿ ಹಿಡಿದುಕೊಳ್ಳದಿದ್ದರೆ ದಾರ ದಪ್ಪಗಾಗುಗುವುದಿಲ್ಲ

ಈಗೀಗ ಟಕಳಿ ಸಿಗುವುದು ಕಷ್ಟ ಎನ್ನುತ್ತಾರೆ ಸಿದ್ಧು ಗಾವಡೆ. “ಈಗಿನ ಯುವ ಬಡಗಿಗಳಿಗೆ ಅದನ್ನು ಹೇಗೆ ತಯಾರಿಸಬೇಕೆನ್ನುವುದು ತಿಳಿದಿಲ್ಲ.” ಇದನ್ನು ಅವರು 1970ರಲ್ಲಿ ಹಳ್ಳಿಯ ಬಡ ಬಡಗಿಯೊಬ್ಬರಿಂದ ಈ ಟಕಳಿಯನ್ನು 50 ರೂಪಾಯಿ ಕೊಟ್ಟು ಖರೀದಿಸಿದ್ದರು. ಆಗ ಒಂದು ಕೇಜಿ ಒಳ್ಳೆಯ ಅಕ್ಕಿಗೆ ಕೇವಲ ಒಂದು ರೂಪಾಯಿಯಷ್ಟು ಬೆಲೆಯಿತ್ತು.

ಅವರು ಒಂದು ಜಾಳಿ ತಯಾರಿಸಲು ಎರಡು ಕೇಜಿಯಷ್ಟು ದಾರ ಖರೀದಿಸುತ್ತಾರೆ. ಈ ಅಳತೆಯು ದಾರದ ದಪ್ಪ ಮತ್ತು ಸಾಂದ್ರತೆಯನ್ನು ಅವಲಂಬಿಸಿರುತ್ತದೆ. ಕೆಲವು ವರ್ಷಗಳ ಹಿಂದಿನವರೆಗೂ ಅವರು ದಾರವನ್ನು ತಮ್ಮ ಊರಿನಿಂದ ಏಳು ಕಿ.ಮೀ. ದೂರದಲ್ಲಿರುವ‌ ಮಹಾರಾಷ್ಟ್ರದ ರೆಂಡಾಲ್ ಎನ್ನುವ ಊರಿನಿಂದ ಖರೀದಿಸುತ್ತಿದ್ದರು. “ಈಗ ನಮ್ಮ ಊರಿನಲ್ಲೇ ಸಿದ್ಧವಿರುವ ದಾರ ದೊರೆಯುತ್ತದೆ. ದಾರದ ಗುಣಮಟ್ಟವನ್ನು ಅವಲಂಬಿಸಿ 80 -100 ರೂಪಾಯಿಗಳ ತನಕ ದಾರದ ಬೆಲೆಯಿರುತ್ತದೆ.” ಎನ್ನುವ ಅವರು, 90ರ ದಶಕದ ಕೊನೆಯವರೆಗೂ ಇದೇ ದಾರ ಕೇಜಿಗೆ 20 ರೂಪಾಯಿಗಳಿಗೆಲ್ಲ ದೊರಕುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ. ಆಗ ಅವರು ಸುಮಾರು ಎರಡು ಕೇಜಿ ದಾರ ಖರೀದಿಸುತ್ತಿದ್ದರು.

ಜಾಳಿ ನೇಯ್ಗೆಯ ಕಲೆಯು ಸಾಂಪ್ರದಾಯಿಕವಾಗಿ ಗಂಡಸರ ಕೈಯಲ್ಲೇ ಇದೆಯಾದರೂ, ಒಂದು ಕಾಲದಲ್ಲಿ ಅವರ ದಿವಂಗತ ಪತ್ನಿ ಮಾಯವ್ವ ದಾರವನ್ನು ದಪ್ಪ ಮಾಡಿಕೊಡುತ್ತಿದ್ದರು ಎನ್ನುತ್ತಾರೆ ಸಿದ್ಧು ಗಾವಡೆ. “ಅವಳು ಅದ್ಭುತ ಕುಶಲಕರ್ಮಿಯಾಗಿದ್ದಳು” ಎಂದು ತನ್ನ ಪತ್ನಿಯನ್ನು ನೆನಪಿಸಿಕೊಳ್ಳುತ್ತಾರೆ. ಮಾಯವ್ವ 2016ರಲ್ಲಿ ಕಿಡ್ನಿ ವೈಫಲ್ಯದಿಂದ ತೀರಿಕೊಂಡರು. “ಅವಳಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ನಾವು ಅವಳ ಆಸ್ತಮಾ ಕಾಯಿಲೆಗೆಂದು ಔಷಧ ಮಾಡಿದ್ದೆವು. ಆದರೆ ಅದರ ಅಡ್ಡ ಪರಿಣಾಮಗಳಿಂದಾಗಿ ಅವಳ ಕಿಡ್ನಿ ವಿಫಲಗೊಂಡವು” ಎಂದು ಅವರು ಹೇಳಿದರು.

ತನ್ನ ಪತ್ನಿಯಂತಹ ಕುರಿ ಉಣ್ಣೆ ತೆಗೆಯುವುದು ಮತ್ತು ಉಣ್ಣೆಯಿಂದ ನೂಲು ತೆಗಯುವುದರಲ್ಲಿ ನಿಪುಣರಾಗಿದ್ದರು ಎನ್ನುತ್ತಾರೆ ಸಿದ್ಧು ಗಾವಡೆ. ಧನಗರ್‌ ಸಮುದಾಯದವರು ನಂತರ ಈ ನೂಲನ್ನು ಕಾಲು ಬಳಸಿ ನಡೆಸುವ ಪಿಟ್‌ ಲೂಮ್‌ ಬಳಸಿ ಘೊಂಗಡಿ (ಕಂಬಳಿ) ತಯಾರಿಸುವ ಸಂಗರ್‌ ಸಮುದಾಯದವರಿಗೆ ಕೊಡುತ್ತಿದ್ದರು.

ಅಗತ್ಯ ಮತ್ತು ಕೈಯಲ್ಲಿರುವ ಸಮಯವನ್ನು ಅವಲಂಬಿಸಿ ಸಿದ್ಧು ಗಾವಡೆ ನೂಲನ್ನು ದಪ್ಪಗೊಳಿಸುತ್ತಾರೆ. ಇದರ ನಂತರ ಈ ಪ್ರಕ್ರಿಯೆಯಲ್ಲಿ ಅತ್ಯಂತ ಸಂಕೀರ್ಣವಾದ ಕೈ ಹೆಣಿಗೆಗೆ ತೊಡಗುತ್ತಾರೆ. ಈ ಹಂತದಲ್ಲಿ ಜಾರುಗಂಟು ಮತ್ತು ಕುಣಿಕೆ ಬಳಸಿ ಜಾಳಿ ಹೆಣಿಗೆ ಆರಂಭಿಸುತ್ತಾರೆ. ಒಂದು ಚೀಲಕ್ಕೆ ಅವರು 25 ನೂಲು ಕುಣಿಕೆಗಳನ್ನು ತಯಾರಿಸಿ, ಸಮಾನ ದೂರದಲ್ಲಿ ಇರಿಸುತ್ತಾರೆ.

PHOTO • Sanket Jain
Right: Every knot Siddu makes is equal in size. Even a slight error means the jali won't look as good.
PHOTO • Sanket Jain

ಎಡ: ಬಬುಲ್‌ (ಜಾಲಿ) ಮರದಿಂದ ಮಾಡಿದ ಟಕಳಿ 50 ವರ್ಷಗಳ ಕೆಳಗೆ 50 ಕೇಜಿ ಅಕ್ಕಿಯಷ್ಟು ಬೆಲೆ ಬಾಳುತ್ತಿತ್ತು. ಆದರೆ ಇಂದು ಅದನ್ನು ತಯಾರಿಸಬಲ್ಲ ಬಡಗಿಗಳು ಉಳಿದಿಲ್ಲ. ಬಲ: ಸಿದ್ಧು ಗಾವಡೆಯವರು ತಯಾರಿಸುವ ಪ್ರತಿ ಗಂಟೂ ಸಮಾನ ಅಳತೆಯಲ್ಲಿರುತ್ತವೆ. ಇದರಲ್ಲಿ ಸಣ್ಣ ತಪ್ಪಾದರೂ ಜಾಳಿ ಅಂದಗೆಡುತ್ತದೆ

“ಇದರಲ್ಲಿ ಕಷ್ಟದ ಕೆಲಸವೆಂದರೆ ಆರಂಭದಲ್ಲಿ ವೃತ್ತಾಕಾರದ ಕುಣಿಕೆಗಳನ್ನು ತಯಾರಿಸುವುದು.” ಎನ್ನುವ ಅವರು ಊರಿನ 2 - 3 ಧನಗರ್‌ ಜನರಿಗೆ ಜಾಳಿ ತಯಾರಿಸುವುದು ಗೊತ್ತು ಎನ್ನುತ್ತಾರೆ. “ಆದರೆ ಅವರೂ ಈ ತಳದಲ್ಲಿನ ವೃತ್ತಾಕಾರದ ರಚನೆಯನ್ನು ತಯಾರಿಸುವಲ್ಲಿ ಒದ್ದಾಡುತ್ತಾರೆ. ಹಾಗಾಗಿ ಅವರು ಈಗ ಅದನ್ನು ತಯಾರಿಸುವುದನ್ನೇ ನಿಲ್ಲಿಸಿದ್ದಾರೆ.”

ಸಿದ್ಧು ಗಾವಡೆಯವರಿಗೆ ಈ ವೃತ್ತಾಕಾರದ ರಚನೆಯನ್ನು ತಯಾರಿಸಲು 14 ಗಂಟೆಗಳಷ್ಟು ಸಮಯ ಬೇಕಾಗುತ್ತದೆ. “ಇದರಲ್ಲಿ ಸಣ್ಣ ತಪ್ಪಾದರೂ ಎಲ್ಲ ಮೊದಲಿನಿಂದ ಆರಂಭಿಸಬೇಕಾಗುತ್ತದೆ.” ಒಂದು ಜಾಳಿ ತಯಾರಿಸಲು ದಿನಕ್ಕೆ ಮೂರು ಗಂಟೆಗಳ ಕಾಲ ಕೆಲಸ ಮಾಡಿದರೆ 20 ದಿನಗಳು ಬೇಕಾಗುತ್ತವೆ. ಅವರು 300 ಅಡಿಯಷ್ಟು ಉದ್ದದ ಹಗ್ಗವನ್ನು 60 ಗಂಟೆಗಳ ಕಾಲ ಎಲ್ಲಾ ಗಂಟುಗಳೂ ಸಮಾನ ಅಳತೆಯಲ್ಲಿರುವಂತೆ ನೇಯುತ್ತಾರೆ. ಸಿದ್ಧು ಗಾವಡೆ ಈಗ ಬೇಸಾಯದಲ್ಲೇ ಹೆಚ್ಚಿನ ಸಮಯ ಕಳೆಯುವುದರಿಂದಾಗಿ ಜಾಳಿಗೆ ಹೆಚ್ಚಿನ ಸಮಯ ನೀಡುವುದಿಲ್ಲ. ಕಳೆದ ಏಳು ದಶಕಗಳಲ್ಲಿ ಅವರು ತನ್ನ ಧನಗರ್‌ ಸಹಜೀವಿಗಳಿಗಾಗಿ 100 ಜಾಳಿಗಳನ್ನು ತಯಾರಿಸಿದ್ದಾರೆ. ಎಂದರೆ ಈ ಕಲೆಯನ್ನು ಕರಗತ ಮಾಡಿಕೊಳ್ಳುವುದಕ್ಕಾಗಿ ಅವರು 6,000 ಗಂಟೆಗಳಿಗೂ ಹೆಚ್ಚು ಸಮಯವನ್ನು ಮೀಸಲಿಟ್ಟಿದ್ದಾರೆ.

ಸಿದ್ಧು ಗಾವಡೆಯವರನ್ನು ಊರಿನ ಜನರು ಪ್ರೀತಿಯಿಂದ ಪಟ್ಕಾರ್‌ ಮ್ಹಾತಾರ (ರುಮಾಲು ಕಟ್ಟಿಕೊಂಡಿರುವ ಹಿರಿಯ) – ಅವರು ದಿನವೂ ಪಗಡಿ ತೊಡುತ್ತಾರೆ.

ಅವರು ತನ್ನ ಇಳಿ ವಯಸ್ಸಿನ ಹೊರತಾಗಿಯೂ ಕಳೆದ ಒಂಭತ್ತು ವರ್ಷಗಳಿಂದ 350 ಕಿಲೋಮೀಟರ್‌ ದೂರದಲ್ಲಿರುವ ವಿಠೋಬಾ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾರೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಡರಾಪುರ ಪಟ್ಟಣದಲ್ಲಿರುವ ಈ ದೇವಸ್ಥಾನವು ವಾರಿ ಎನ್ನುವ ಕಾಲ್ನಡಿಗೆ ಯಾತ್ರೆಗೆ ಪ್ರಖ್ಯಾತಿಯನ್ನು ಹೊಂದಿದೆ. ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ಜನರು ಆಷಾಢ (ಜೂನ್/ಜುಲೈ) ಹಾಗೂ ಕಾರ್ತಿಕ (ದೀಪಾವಳಿ ನಂತರ ಅಕ್ಟೋಬರ್‌ - ನವೆಂಬರ್‌ ನಡುವೆ) ಗುಂಪಾಗಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಾರೆ. ದಾರಿಯುದ್ದಕ್ಕೂ ಅವರು ತುಕಾರಾಮ್‌, ದ್ಯಾನೇಶ್ವರ್‌, ಮತ್ತು ನಾಮದೇವ್‌ ರಚಿತ ಅಭಂಗ್‌ ಎನ್ನುವ ಭಕ್ತಿ ರಚನೆಗಳನ್ನು ಹಾಡುತ್ತಾ ಸಾಗುತ್ತಾರೆ.

“ನಾನು ಗಾಡಿಯಲ್ಲಿ ಹೋಗೋದಿಲ್ಲ. ವಿಠ್ಠೋಬಾ ಆಹೇ ಮಾಝ್ಯಸೊಬಾತ್.‌ ಕಹಿಹೀ ಹೋತ್‌ ನಹೀ [ನನ್ನ ಜೊತೆ ವಿಠ್ಠೋಬಾನಿದ್ದಾನೆ ಹೀಗಾಗಿ ನನಗೆ ಏನೂ ಆಗಲ್ಲ]” ಎನ್ನುತ್ತಾರವರು. ಅವರಿಗೆ ಪಂಡರಾಪುದಲ್ಲಿನ ವಿಠ್ಠಲ-ರುಕ್ಮಿಣಿ ದೇವಸ್ಥಾನ ತಲುಪಲು 12 ದಿನಗಳು ಬೇಕಾದವು. ಅವರು ವಿಶ್ರಾಂತಿಗಾಗಿ ಅಲ್ಲಲ್ಲಿ ನಿಂತಾಗ ನೂಲಿನ ಕುಣಿಕೆಗಳನ್ನು ತಯಾರಿಸುತ್ತಿದ್ದರು.

ಸಿದ್ಧು ಗಾವಡೆಯವರ ತಂದೆ ದಿವಂಗತ ಬಾಲು ಕೂಡಾ ಜಾಳಿ ತಯಾರಿಸುತ್ತಿದ್ದರು. ಈಗ ಜಾಳಿ ತಯಾರಿಸುವವರು ಕಡಿಮೆಯಾಗಿರುವ ಕಾರಣ ಧನಗರರು ಬಟ್ಟೆಯ ಚೀಲಗಳನ್ನು ಖರೀದಿಸತೊಡಗಿದ್ದಾರೆ. “ಇದಕ್ಕೆ ಬೇಕಾಗುವ ಸಂಪನ್ಮೂಲಗಳು ಮತ್ತು ಸಮಯವನ್ನು ಗಮನಿಸಿದರೆ ಈ ಕಲೆಯನ್ನು ಮುಂದುವರೆಸುವುದು ದುಬಾರಿಯೆನ್ನಿಸುತ್ತದೆ,” ಎನ್ನುತ್ತಾರೆ ಸಿದ್ಧು ಗಾವಡೆ. ಅವರು ಜಾಳಿ ತಯಾರಿಕೆಗೆ ಬೇಕಾಗುವ ನೂಲಿಗೆ 200 ರೂಪಾಯಿ ಖರ್ಚು ಮಾಡಿದರೆ, ಒಂದು ಜಾಳಿ 250 -300 ರೂಪಾಯಿಗಳಿಗೆ ಮಾರಾಟವಾಗುತ್ತದೆ. “ಕಹೀಹಿ ಉಪ್ಯೋಗ್‌ ನಹೀ [ಏನೂ ಪ್ರಯೋಜನ ಇಲ್ಲ]” ಎಂದು ಅವರು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.

'The most difficult part is starting and making the loops in a circular form,' says Siddu. Making these loops requires a lot of patience and focus
PHOTO • Sanket Jain
'The most difficult part is starting and making the loops in a circular form,' says Siddu. Making these loops requires a lot of patience and focus
PHOTO • Sanket Jain

ʼಇದರಲ್ಲಿ ಕಷ್ಟದ ಕೆಲಸವೆಂದರೆ ಆರಂಭಿಕ ಹಂತದ ವೃತ್ತಾಕಾರದ ರಚನೆಯನ್ನು ರಚಿಸುವುದುʼ ಎನ್ನುತ್ತಾರೆ ಸಿದ್ಧು ಗಾವಡೆ. ಈ ಕುಣಿಕೆಗಳನ್ನು ತಯಾರಿಸಲು ಸಾಕಷ್ಟು ತಾಳ್ಮೆ ಮತ್ತು ಗಮನ ಬೇಕಾಗುತ್ತದೆ

Left: After spending over seven decades mastering the art, Siddu is renowned for making symmetrical jalis and ensuring every loop and knot is of the same size.
PHOTO • Sanket Jain
Right: He shows the beginning stages of making a jali and the final object.
PHOTO • Sanket Jain

ಎಡ: ತಮ್ಮ ಏಳು ದಶಕಗಳ ಅನುಭವದಿಂದಾಗಿ ಸಿದ್ಧು ಗಾವಡೆ ಸಮರೂಪಿ ಜಾಳಿ ತಯಾರಿಕೆಯಲ್ಲಿ ದೊಡ್ಡ ಹೆಸರನ್ನು ಸಂಪಾದಿಸಿದ್ದಾರೆ. ಬಲ: ಅವರು ಜಾಳಿ ತಯಾರಿಕೆಯ ಮೊದಲ ಹಂತ ಹಾಗೂ ಅಂತಿಮ ಉತ್ಪನ್ನವನ್ನು ತೋರಿಸುತ್ತಿದ್ದಾರೆ

ಅವರಿಗೆ ಮೂರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳಿದ್ದಾರೆ. ಮಲ್ಲಪ್ಪ 50 ಆಸುಪಾಸು, ಕಲ್ಲಪ್ಪ 35ರ ಆಸುಪಾಸು, ಮತ್ತು 45 ವರ್ಷದ ಬಾಲು ಕೃಷಿ ಮಾಡುವುದರ ಜೊತೆಗೆ 50 ಕುರಿಗಳೊಡನೆ ದೂರದ ಪ್ರದೇಶಗಳಿಗೆ ವಲಸೆಯೂ ಹೋಗುತ್ತಾರೆ. ಅವರ ಮಗಳಾದ ಶಾನಾ (30) ಗೃಹಿಣಿ.

ಅವರ ಗಂಡು ಮಕ್ಕಳಲ್ಲಿ ಯಾರೂ ಈ ಕೌಶಲವನ್ನು ಕಲಿತಿಲ್ಲ. “ಶೀಕಿ ಭೀ ನಹೀ, ತ್ಯಾನಾ ಜಮಾತ್‌ ಪಣ್‌ ನಹಿ, ಆಣಿ ತ್ಯಾನಿ ದೊಸ್ಕ ಪಣ್‌ ಘತ್ಲ ನಹೀ[ ಅವರು ಕಲಿಯಲೇ ಇಲ್ಲ, ಅವರು ಆ ಬಗ್ಗೆ ಪ್ರಯತ್ನ ಕೂಡಾ ಮಾಡಿಲ್ಲ, ಅದರ ಬಗ್ಗೆ ತಲೆ ಕೆಡಿಸಿಕೊಂಡೂ ಇಲ್ಲ]” ಎಂದು ಅವರು ಒಂದೇ ಉಸಿರಿನಲ್ಲಿ ಹೇಳುತ್ತಾರೆ. ಜನರು ಅವರ ಕೆಲಸವನ್ನು ಎಚ್ಚರಿಕೆಯಿಂದ ಗಮನಿಸುತ್ತಾರೆ, ಆದರೆ ಅವರ್ಯಾರೂ ಈ ಕೆಲಸ ಕಲಿಯಲು ಬಂದಿಲ್ಲ ಎನ್ನುತ್ತಾರವರು.

ಕುಣಿಕೆ ತಯಾರಿಸುವುದು ಸುಲಭ ಆದರೆ ಅದು ಬಹಳಷ್ಟು ಸವಾಲುಗಳನ್ನು ಹೊಂದಿದೆ, ಇದು ಕೆಲವೊಮ್ಮೆ ಸಿದ್ಧು ಗಾವಡೆಯವರನ್ನು ದೈಹಿಕವಾಗಿ ದಣಿಯುವಂತೆ ಮಾಡುತ್ತದೆ. “ಹಾತಾಲ ಮುಂಗ್ಯಾ ಯೆತಾತ್‌ [ಸೂಜಿ ಚುಚ್ಚಿದ ಅನುಭವವಾಗುತ್ತದೆ]” ಎಂದು ಅವರು ಹೇಳುತ್ತಾರೆ. ಜೊತೆಗೆ ಈ ಕೆಲಸದಿಂದ ಅವರಿಗೆ ಬೆನ್ನು ನೋವು ಮತ್ತು ಕಣ್ಣಿಗೆ ಆಯಾಸವೂ ಉಂಟಾಗುತ್ತದೆ. ಕೆಲವು ವರ್ಷಗಳ ಕೆಳಗೆ ಅವರ ಎರಡೂ ಕಣ್ಣುಗಳಿಗೆ ಕ್ಯಾಟರಾಕ್ಟ್‌ ಸರ್ಜ ಮಾಡಿಸಲಾಗಿದೆ. ಈಗ ಅವರು ಕನ್ನಡಕ ಬಳಸುತ್ತಾರೆ. ಇದು ಅವರ ಕೆಲಸದಲ್ಲಿನ ವೇಗವನ್ನು ಕಡಿಮೆಗೊಳಿಸಿದ್ದು, ಈ ಕಲೆಯನ್ನು ಜೀವಂತವಾಗಿರಿಸುವ ಅವರ ದೃಢ ನಿರ್ಧಾರವನ್ನು ಪರೀಕ್ಷೆಗೊಡ್ಡುತ್ತಿದೆ.

ಜನವರಿ 2022ರಲ್ಲಿ, ಗ್ರಾಸ್‌ ಎಂಡ್‌ ಫೋರೇಜ್‌ ಸೈನ್ಸ್‌ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಭಾರತದಲ್ಲಿ ಮೇವಿನ ಕೊರತೆಯಿರುವುದನ್ನು ಹೇಳುತ್ತದೆ. ಹಸಿರು ಮೇವಿನ ಜೊತೆ ಜೊತೆಗೆ ಧಾನ್ಯಗಳ ಫಸಲಿನ ಒಣ ಮೇವುಗಳು ಕೂಡ ಸಿಗುತ್ತಿಲ್ಲ ಎಂದು ಅದು ಹೇಳಿದೆ. ಇದು ಭಾರತದಲ್ಲಿ ದೊಡ್ಡ ಮೇವಿನ ಕೊರತೆಗೆ ಕಾರಣವಾಗಿದೆ.

ಮೇವಿನ ಕೊರತೆಯು ಊರಿನ ಧನಗರರು ಆಡು ಮತ್ತು ಕುರಿ ಸಾಕಣೆಯನ್ನು ಬಿಟ್ಟಿರುವುದಕ್ಕೆ ಇರುವ ಕಾರಣಗಳಲ್ಲಿ ಒಂದಾಗಿದೆ. “ಕಳೆದ 5-7 ವರ್ಷಗಳಲ್ಲಿ ನಾವು ಹಲವು ಕುರಿ ಮತ್ತು ಆಡುಗಳ ಸಾವನ್ನು ವರದಿ ಮಾಡಿದ್ದೇವೆ. ಇದು ರೈತರು ಬಳಸುವ ವಿಪರೀತ ವಿಷವುಳ್ಳ ಕಳೆನಾಶಕ ಹಾಗೂ ಕೀಟನಾಶಕಗಳಿಂದ ಸಂಭವಿಸಿದ್ದು” ಎನ್ನುತ್ತಾರವರು. ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ಪ್ರಕಾರ ಕರ್ನಾಟಕದ ರೈತರು 2022-23ರಲ್ಲಿ 1,669 ಮೆಟ್ರಿಕ್‌ ಟನ್‌ ರಾಸಾಯನಿಕ ಕೀಟನಾಶಕಗಳನ್ನು ಬಳಸಿದ್ದಾರೆ. ಇದು 2018-19ರಲ್ಲಿ 1,524 ಮೆಟ್ರಿಕ್‌ ಟನ್ನುಗಳಷ್ಟಿತ್ತು.

Left: Siddu's wife, the late Mayavva, had mastered the skill of shearing sheep and making woolen threads.
PHOTO • Sanket Jain
Right: Siddu spends time with his grandson in their house in Karadaga village, Belagavi.
PHOTO • Sanket Jain

ಸಿದ್ಧು ಗಾವಡೆಯವರ ದಿವಂಗತ ಪತ್ನಿ ಮಾಯವ್ವ, ಇವರು ಕುರಿ ಉಣ್ಣೆ ತೆಗೆಯುವುದು ಮತ್ತು ಉಣ್ಣೆಯ ನೂಲು ತೆಗೆಯುವುದರಲ್ಲಿ ನಿಪುಣರಾಗಿದ್ದರು. ಬಲ: ಸಿದ್ಧು ಗಾವಡೆ ಕಾರದಗದಲ್ಲಿನ ತಮ್ಮ ಮನೆಯಲ್ಲಿ ಮೊಮ್ಮಗನೊಡನೆ ಆಡುತ್ತಾ ಸಮಯ ಕಳೆಯುತ್ತಾರೆ

The shepherd proudly shows us the jali which took him about 60 hours to make.
PHOTO • Sanket Jain

60 ಗಂಟೆಗಳನ್ನು ವ್ಯಯಿಸಿ ತಾನು ತಯಾರಿಸಿದ ಜಾಳಿಯನ್ನು ತೋರಿಸುತ್ತಿರುವ ಹಿರಿಯ ಪಶುಪಾಲಕ

ಅಲ್ಲದೆ ಕುರಿ ಮೇಯಿಸುವಿಕೆಯ ಖರ್ಚು ಕೂಡಾ ಹೆಚ್ಚಾಗಿದೆ ಎನ್ನುತ್ತಾರವರು. ಇದರ ಜೊತೆಗೆ ಔಷಧಿ ಖರ್ಚುಗಳೂ ಅಡಗಿವೆ. “ಪ್ರತಿ ವರ್ಷ ಒಬ್ಬ ಒಬ್ಬ ಕುರಿಗಾಹಿ ತನ್ನ ಜಾನುವಾರುಗಳಿಗೆ ಔಷಧಿಗೆಂದು ಕನಿಷ್ಟ 20,000 ರೂಪಾಯಿಗಳಷ್ಟು ಖರ್ಚು ಮಾಡುತ್ತಾನೆ. ಆಡು ಮತ್ತು ಕುರಿಗಳು ಈಗೀಗ ಪದೇ ಪದೇ ಕಾಯಿಲೆ ಬೀಳುತ್ತಿರುತ್ತವೆ.”

ಪ್ರತಿ ಕುರಿಗೆ ವರ್ಷಕ್ಕೆ ಆರು ಇಂಜೆಕ್ಷನ್‌ ಕೊಡಲೇಬೇಕು ಎನ್ನುತ್ತಾರವರು. “ಆ ಕುರಿ ಬದುಕಿ ಉಳಿದರಷ್ಟೇ ನಮಗೆ ಏನಾದರೂ ಹಣ ಕೈಗೆ ಬರಲು ಸಾಧ್ಯ.” ಅಲ್ಲದೆ ಈ ಭಾಗದ ರೈತರು ಈಗ ಒಂದಿಂಚೂ ಜಾಗ ಬಿಡದೆ ಕಬ್ಬಿನ ಬೆಳೆ ಬೆಳೆಯುತ್ತಿದ್ದಾರೆ. 2021-22ರ ಸಾಲಿನಲ್ಲಿ ಭಾರತವು 500 ಮಿಲಿಯನ್‌ ಮೆಟ್ರಿಕ್‌ ಟನ್‌ ಕಬ್ಬು ಬೆಳೆದಿದ್ದು, ವಿಶ್ವದ ಅತಿದೊಡ್ಡ ಕಬ್ಬು ಬೆಳೆಗಾರ ಹಾಗೂ ಗ್ರಾಹಕನಾಗಿ ಹೊರಹೊಮ್ಮಿದೆ.

ಸಿದ್ಧು ಗಾವಡೆಯವರು ತನ್ನ ಬಳಿಯಿದ್ದ 50 ಚಿಲ್ಲರೆ ಆಡು, ಕುರಿಗಳನ್ನು ತಮ್ಮ ಮಕ್ಕಳಿಗೆ ಹಂಚಿ ಎರಡು ದಶಕಗಳ ಹಿಂದೆ ಕುರಿ ಸಾಕಣೆಯನ್ನು ನಿಲ್ಲಿಸಿದರು. ಮುಂಗಾರು ಮಳೆ ತಡವಾಗಿದ್ದರಿಂದಾಗಿ ಅದು ಬೆಳೆ ಚಕ್ರದ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳುತ್ತಾರೆ. “ಈ ವರ್ಷ, ಜೂನ್‌ ತಿಂಗಳಿನಿಂದ ಜುಲೈ ತಿಂಗಳ ಮಧ್ಯದ ತನಕ ನನ್ನ ಹೊಲ ನೀರಿನ ಕೊರತೆಯಿಂದಾಗಿ ಖಾಲಿಯಿತ್ತು. ನಂತರ ನಮ್ಮ ನೆರೆಯವರು ಸಹಾಯ ಮಾಡಿದ ಕಾರಣ ನೆಲಗಡಲೆ ಬೆಳೆದೆ.

ಹೆಚ್ಚುತ್ತಿರುವ ಬಿಸಿಗಾಳಿ ಮತ್ತು ಮಳೆ ಕೊರತೆಯಿಂದಾಗಿ ಕೃಷಿ ಮಾಡುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ. “ಮೊದಲೆಲ್ಲ ಪೋಷಕರು ತಮ್ಮ ಮಕ್ಕಳಿಗೆ ಆಡು-ಕುರಿಗಳನ್ನು [ಆಸ್ತಿಯಾಗಿ] ನೀಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಉಚಿತವಾಗಿ ಕೊಟ್ಟರೂ ಅವು ಯಾರಿಗೂ ಬೇಡವಾಗಿವೆ.”

ಈ ವರದಿಯು ಸಂಕೇತ್ ಜೈನ್ ಅವರ ಗ್ರಾಮೀಣ ಕುಶಲಕರ್ಮಿಗಳ ಕುರಿತ ಸರಣಿಯ ಒಂದು ಭಾಗವಾಗಿದೆ ಮತ್ತು ಮೃಣಾಲಿನಿ ಮುಖರ್ಜಿ ಫೌಂಡೇಶನ್ ಇದನ್ನು ಬೆಂಬಲಿಸುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Sanket Jain

Sanket Jain is a journalist based in Kolhapur, Maharashtra. He is a 2022 PARI Senior Fellow and a 2019 PARI Fellow.

Other stories by Sanket Jain
Editor : PARI Team
Photo Editor : Binaifer Bharucha

Binaifer Bharucha is a freelance photographer based in Mumbai, and Photo Editor at the People's Archive of Rural India.

Other stories by Binaifer Bharucha
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru