ದಶರಥ ಸಿಂಗ್ ಅವರು ಈ ವರ್ಷದ ಆರಂಭದಿಂದಲೂ ಪಡಿತರ ಚೀಟಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ರತಿ ಬಾರಿ ಉಮರಿಯಾ ಜಿಲ್ಲೆಯ ಸ್ಥಳೀಯ ಅಧಿಕಾರಿಗಳ ಕಚೇರಿಗೆ ಹೋದಾಗಲೂ ಅವರ ಅರ್ಜಿ ಇನ್ನೂ ಪಾಸ್‌ ಆಗಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ.

"ರೂ. 1,500 ನೀಡಿದರೆ ಅರ್ಜಿ ಸ್ವೀಕೃತವಾಗುತ್ತದೆಂದು ಅಲ್ಲಿ ಅವರು ಸಲಹೆ ನೀಡುತ್ತಾರೆ" ಎಂದು ದಶರಥ್ ಆರೋಪಿಸುತ್ತಾರೆ. "ಆದರೆ ನಾನು ಕೊಟ್ಟಿಲ್ಲ ..."

ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯ ಬಂದೋಗಘರ್ ತಹಸಿಲ್‌ನ ಕಟಾರಿಯಾ ಎಂಬ ಹಳ್ಳಿಯ ನಿವಾಸಿಯಾದ ದಶರಥ್ ಅವರು ತನ್ನ ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಾರೆ. ಜೊತೆಗೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಕೆಲಸಗಳಲ್ಲಿ ಕೆಲಸ ಮಾಡುವ ಮೂಲಕ ತಿಂಗಳ ಕೆಲವು ದಿನ ಸುಮಾರು 100 ರೂಪಾಯಿ ದಿನಗೂಲಿ ಪಡೆಯುತ್ತಾರೆ. ಆದರೆ ಈ ಸಂಪಾದನೆ ಅವರ ಬದುಕಿನ ಅಗತ್ಯಗಳಿಗೆ ಸಾಲದೆ ಆಗಾಗ ಸ್ಥಳೀಯ ಖಾಸಗಿ ಲೇವಾದೇವಿಗಾರರಿಂದ ಸಣ್ಣ ಸಾಲಗಳನ್ನು ಪಡೆಯುತ್ತಾರೆ. ಇತ್ತೀಚೆಗೆ ಲಾಕ್‌ಡೌನ್‌ ಸಮಯದಲ್ಲಿ ಅವರು ರೂಪಾಯಿ 1,500 ಸಾಲವಾಗಿ ಪಡೆದಿದ್ದರು.

ಬಡ ಕುಟುಂಬಗಳ ಪಾಲಿಗೆ ಪಡಿತರ ಚೀಟಿಯೆನ್ನುವುದು ಸಾಮಾನ್ಯ ಕಾಲದಲ್ಲಿಯೇ ಬಹಳ ನಿರ್ಣಾಯಕ. ಲಾಕ್‌ಡೌನ್‌ ಕಾಲದಲ್ಲಿ ಇದು ಇನ್ನಷ್ಟು ಉಪಯುಕ್ತವೆನ್ನಿಸುತ್ತದೆ. ರೇಷನ್‌ ಕಾರ್ಡ್‌ ಇಲ್ಲದ ಕಾರಣ ದಶರಥ್‌ ಕುಟುಂಬ ಮಾರುಕಟ್ಟೆಯಿಂದ ಆಹಾರ ಧಾನ್ಯ ಖರೀದಿಸಬೇಕಾದ ಅನಿವಾರ್ಯತೆಗೆ ಈಡಾಗಿದೆ. "ಕೃಷಿ ಈ ಸಮಯದಲ್ಲಿ ನಮ್ಮನ್ನು ಉಳಿಸಲು ಸಹಾಯ ಮಾಡಿದೆ" ಎಂದು ದಶರಥ್ ಅವರ ಪತ್ನಿ 25 ವರ್ಷದ ಸರಿತಾ ಸಿಂಗ್ ಹೇಳುತ್ತಾರೆ. ಕುಟುಂಬವು 2.5 ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿದ್ದು ಅಲ್ಲಿ ಅವರು ಮುಖ್ಯವಾಗಿ ಗೋಧಿ ಮತ್ತು ಮೆಕ್ಕೆಜೋಳದ ಜೊತೆಗೆ ಕೊಡೋ ಮತ್ತು ಕುಟ್ಕಿ ಕಿರುಧಾನ್ಯಗಳನ್ನು ಬೆಳೆಯುತ್ತಾರೆ.

ಈ ನಡುವೆ 40 ವರ್ಷದ ದಶರಥ್‌ ಪಡಿತರ ಚೀಟಿಯನ್ನು ಸಂಪಾದಿಸುವ ಸಲುವಾಗಿ ತನ್ನ ಅದೃಷ್ಟವನ್ನು ಪರೀಕ್ಷಿಸುತ್ತಲೇ ಇದ್ದಾರೆ. "ಈ ವರ್ಷ ಜನವರಿ 26 ರಂದು [ಕಟಾರಿಯಾದಲ್ಲಿ] ನಡೆದ ಗ್ರಾಮ ಸಭೆಯಲ್ಲಿ, ಕಾರ್ಡ್‌ ಪಡೆಯಲು ಒಂದು ಅರ್ಜಿ  ತುಂಬಿಸುವುದು ಬಾಕಿಯಿದೆ ಎಂದು ತಿಳಿಸಲಾಯಿತು" ಎಂದು ಅವರು ಹೇಳುತ್ತಾರೆ.

ಅವರ ಸರಪಂಚರು ಆ ಅರ್ಜಿಯನ್ನು ತುಂಬಿಸುವ ಸಲುವಾಗಿ ಗ್ರಾಮದಿಂದ 70 ಕಿಲೋಮೀಟರ್‌ ದೂರದಲ್ಲಿರುವ ಮನ್ಪುರ ಪಟ್ಟಣದ ಲೋಕ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ತಿಳಿಸಿದರು. ಅಲ್ಲಿಗೆ ಬಸ್‌ನಲ್ಲಿ ಒಮ್ಮೆ ಒಂದು ಕಡೆಯ ಪ್ರಯಾಣಕ್ಕೆ 30 ರೂಪಾಯಿಗಳು ಬೇಕಾಗುತ್ತದೆ. ದಶರಥ್ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಎರಡು ಬಾರಿ ಅಲ್ಲಿಗೆ ಹೋಗಿ ಬಂದರು. ಎಂದರೆ ನಾಲ್ಕು ಟಿಕೇಟುಗಳು ಮತ್ತು ನಾಲ್ಕು ಬಸ್‌ ಪ್ರಯಾಣ. ಮಾರ್ಚ್ 23 ರಂದು (ಮಧ್ಯಪ್ರದೇಶದಲ್ಲಿ) ಲಾಕ್‌ಡೌನ್ ಪ್ರಾರಂಭವಾಗುವ ಮೊದಲು, ಅವರು ತಮ್ಮ ಗ್ರಾಮದಿಂದ 30 ಕಿಲೋಮೀಟರ್ ದೂರದಲ್ಲಿರುವ ಬಂಧೋ‌ಘರ್ ಪಟ್ಟಣದ ತಹಸಿಲ್ ಮಟ್ಟದ ಕಚೇರಿಗೆ ಹೋದರು.‌ ಅಲ್ಲಿ ಅವರಿಗೆ ಒಂದು ಪ್ರತ್ಯೇಕ ಗುರುತಿನ ಚೀಟಿ ಮಾಡಿಸುವಂತೆ ಹೇಳಲಾಯಿತು. ಇದರಿಂದಾಗಿ ಅಂದೂ ಅವರು ಅರ್ಜಿಯ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಆ ಪ್ರತ್ಯೇಕ ಗುರುತು ಗುರುತಿನ ಚೀಟಿ ಪಡೆಯಲು ಮನ್ಪುರದಲ್ಲಿನ ಕೇಂದ್ರದ ಅಧಿಕಾರಿಗಳು ದಶರಥ್ ಅವರನ್ನು ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಕಾರ್ಕೆಲಿಯ ಬ್ಲಾಕ್-ಲೆವೆಲ್ ಕಚೇರಿಗೆ ಕಳಿಸಿದರು, “ನನ್ನ ಹೆಸರಿನಲ್ಲಿ ಪ್ರತ್ಯೇಕ ಗುರುತಿನ ಚೀಟಿಯ ಅಗತ್ಯವಿದೆ ಎಂದು ಅವರು ಹೇಳಿದರು. ನನ್ನ ಅಣ್ಣ-ತಮ್ಮಂದಿರು ಸೇರಿದಂತೆ ಇತರ ಕುಟುಂಬ ಸದಸ್ಯರೊಂದಿಗೆ ನನ್ನ ಕಾರ್ಡ್ ಜಂಟಿಯಾಗಿತ್ತು. ಹಾಗಾಗಿ ನಾನು ಕಾರ್ಕೆಲಿಗೆ ಹೋಗಿ ಪ್ರತ್ಯೇಕ ಗುರುತಿನ ಚೀಟಿ ಮಾಡಿಸಿಕೊಂಡೆ ”ಎಂದು 10ನೇ ತರಗತಿವರೆಗೆ ವಿದ್ಯಾಭ್ಯಾಸ ಹೊಂದಿರುವ ದಶರಥ್ ಹೇಳುತ್ತಾರೆ.

Dashrath Singh has been trying to get a family ration card since January, for himself, his wife Sarita and their daughter Narmada
PHOTO • Sampat Namdev
Dashrath Singh has been trying to get a family ration card since January, for himself, his wife Sarita and their daughter Narmada
PHOTO • Sampat Namdev

ದಶರಥ್ ಸಿಂಗ್ ಅವರು ಪತ್ನಿ ಸರಿತಾ, ಮಗಳು ನರ್ಮದಾ ಮತ್ತು ತನ್ನ ಹೆಸರಿರುವ ತನ್ನ ಕುಟುಂಬದ ಪಡಿತರ ಚೀಟಿಯನ್ನು ಪಡೆಯಲು ಕಳೆದ ಜನವರಿಯಿಂದ ಪ್ರಯತ್ನಿಸುತ್ತಿದ್ದಾರೆ.

ದಶರಥ್ ಉಲ್ಲೇಖಿಸುತ್ತಿರುವ ಯೋಜನೆಯನ್ನು ಸ್ಥಳೀಯವಾಗಿ ಸಮಗ್ರ ಗುರುತಿನ ಚೀಟಿ (ಸಮಗ್ರ ಸಾಮಾಜಿಕ ಭದ್ರತಾ ಮಿಷನ್) ಎಂದು ಕರೆಯಲಾಗುತ್ತದೆ. ಇದನ್ನು ಮಧ್ಯಪ್ರದೇಶ ಸರ್ಕಾರದ ವಿಶೇಷ ಗುರುತಿನ ಚೀಟಿ (ಯುಐಡಿ) ಎಂದೂ ಕರೆಯಬಹುದು. ಈ ಗುರುತಿನ ಚೀಟಿ ಯೋಜನೆಯನ್ನು 2012ರಲ್ಲಿ ಪ್ರಾರಂಭಿಸಲಾಯಿತು ಮತ್ತು ಈ ಯೋಜನೆಯಡಿ ಆಹಾರ ಭದ್ರತಾ ಯೋಜನೆ ಮತ್ತು ಎಂಜಿಎನ್‌ಆರ್‌ಇಜಿಎ ಸಂಬಳ, ವಿದ್ಯಾರ್ಥಿವೇತನ, ಪಿಂಚಣಿ ಮತ್ತು ಅಂತಹುದೇ ಯೋಜನೆಗಳ ಹಣವನ್ನು ನೇರವಾಗಿ ವ್ಯಕ್ತಿಯ ಅಥವಾ ಕುಟುಂಬದ ಖಾತೆಗೆ ಜಮಾ ಮಾಡುವುದು ಸರ್ಕಾರದ ಉದ್ದೇಶವಾಗಿತ್ತು. ಈ ಗುರುತಿನ ಚೀಟಿ ಯೋಜನೆಯಡಿ ಕುಟುಂಬಗಳಿಗೆ ಒಂಬತ್ತು ಅಂಕಿಗಳ ಗುರುತಿನ ಚೀಟಿ  ಮತ್ತು ವ್ಯಕ್ತಿಗಳಿಗೆ ಎಂಟು ಅಂಕೆಗಳ ಗುರುತಿನ ಚೀಟಿ ನೀಡಲಾಗುತ್ತದೆ.

ಹಾಗೆ ನೋಡಿದರೆ ಮಧ್ಯ ಪ್ರದೇಶ ಸರ್ಕಾರದ ಲೋಕ ಸೇವಾ ಖಾತರಿ ಕಾಯ್ದೆ ಪಡಿತರ ಚೀಟಿಯ ಸಲುವಾಗಿ ದಶರಥ ಅವರ ವ್ಯರ್ಥ ಓಡಾಟಗಳನ್ನು ಇಲ್ಲವಾಗಿಸಬೇಕಿತ್ತು. ಸರ್ಕಾರಿ ಸೇವೆಗಳನ್ನು ಸುಗಮಗೊಳಿಸಲು ಹಾಗೂ ಆಧಾರ್ ಕಾರ್ಡ್‌ಗಳು, ಪಿಂಚಣಿ, ಪಡಿತರ ಚೀಟಿಗಳು ಮತ್ತು ಇತರ ಸೌಲಭ್ಯಗಳಿಗಾಗಿ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುವಲ್ಲಿ ಮಧ್ಯವರ್ತಿಗಳ ಕಾಟವನ್ನು ಕಡಿಮೆ ಮಾಡಲು ಈ ಕಾಯ್ದೆಯನ್ನು (ಎಂ.ಪಿ. ಸಾರ್ವಜನಿಕ ಸೇವೆಗಳ ಖಾತರಿ ಕಾಯ್ದೆ ಎಂದೂ ಕರೆಯಲಾಗುತ್ತದೆ) 2010ರಲ್ಲಿ ಅಂಗೀಕರಿಸಲಾಯಿತು . ಈ ಯೋಜನೆಯು ಸರಕಾರಿ ಸೇವೆಗಳನ್ನು ನಿಗದಿತ ಸಮಯದೊಳಗೆ ಜನರಿಗೆ ತಲುಪಿಸುವ ಗುರಿಯನ್ನು ಹೊಂದಿತ್ತು. ಜೊತೆಗೆ‌ ಸೇವೆ ನೀಡುವುದು ತಡವಾದಲ್ಲಿ ತಂತ್ರಜ್ಞಾನ ಬಳಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುವ ಸೌಲಭ್ಯವನ್ನು ಮಧ್ಯಪ್ರದೇಶ ಇ-ಡಿಸ್ಟ್ರಿಕ್ಟ್ ಪೋರ್ಟಲ್ ಮೂಲಕ ಲಭ್ಯಗೊಳಿಸಲಾಗಿತ್ತು.

ಈ ತಂತ್ರಜ್ಞಾನಗಳಿಂದ ದಶರಥ್‌ ಅಥವಾ ಕಟಾರಿಯಾ ಗ್ರಾಮದ ರೈತರಿಗೆ ಯಾವುದೇ ರೀತಿಯಲ್ಲಿ ಸಹಾಯವಾಗಿಲ್ಲ. ಅವರು ಈಗಲೂ ಅರ್ಜಿಗಳು ಮತ್ತು ಕಚೇರಿಗಳೆಂಬ ಗೋಜಲಿನಲ್ಲಿಯೇ ಸುತ್ತುತ್ತಾ ಪರದಾಡುತ್ತಿದ್ದಾರೆ. "ನಮ್ಮ ಹಳ್ಳಿಯಲ್ಲಿ ಕೇವಲ ಒಂದು ಕಿರಾಣಿ ಅಂಗಡಿಯಿದೆ. ಅದರ ಮಾಲಿಕರು ಇಂಟರ್‌ನೆಟ್‌ ಬಳಕೆಗೆ ಶುಲ್ಕ ವಿಧಿಸುತ್ತಾರೆ. ನಾವು ಅದನ್ನು ಹೆಚ್ಚು ಅವಲಂಬಿಸುವುದಿಲ್ಲ. ನನಗೆ ಕಚೇರಿಯಲ್ಲಿ ಹೋಗಿ ಅರ್ಜಿ ಸಲ್ಲಿಸುವುದೇ ಹೆಚ್ಚು ಅನುಕೂಲಕರ" ಎಂದು ದಶರಥ್ ಹೇಳುತ್ತಾರೆ. ಇದೇ ಕಾರಣದಿಂದಾಗಿ ಅವರಿಗೆ ಮತ್ತು ಇತರರಿಗೆ ಇದು ಜಿಲ್ಲಾ ಮಟ್ಟದ ಕಚೇರಿಗಳು ಅಥವಾ ಲೋಕ ಸೇವಾ ಕೇಂದ್ರಗಳು, ಅರ್ಜಿ ಸಲ್ಲಿಸುವ ಸುಲಭದ ತಾಣಗಳಾಗಿವೆ.

ಸಮಗ್ರ ಗುರುತಿನ ಚೀಟಿ ಯೋಜನೆಯಡಿ ಮಧ್ಯಪ್ರದೇಶ ಸರ್ಕಾರವು 22 ಸಾಮಾಜಿಕ-ಆರ್ಥಿಕ ಅಂಶಗಳನ್ನು ಸೇರಿಸಿದೆ, ಉದಾ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಭೂಹೀನ ಕಾರ್ಮಿಕರು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಗೆ ಬರುವ ಕುಟುಂಬಗಳು ಇತ್ಯಾದಿ. ಆದರೆ, ಭೋಪಾಲ್ ಮೂಲದ ವಿಕಾಸ್ ಸಂವಾದ್ ಸಂಸ್ಥೆಯ ನಿರ್ದೇಶಕ ಸಚಿನ್ ಜೈನ್, ಈ ಯೋಜನೆಯು ಭ್ರಷ್ಟಾಚಾರದ ಕಾರಣದಿಂದಾಗಿ ಜಟಿಲವಾಗಿದೆ ಎಂದು ಆರೋಪಿಸಿಸುತ್ತಾರೆ. ಅವರ ಸಂಸ್ಥೆ ಆಹಾರ ಭದ್ರತಾ ಕಾನೂನು ಜಾರಿಗೊಳಿಸುವಿಕೆ ಕುರಿತು ಕೆಲಸ ಮಾಡುತ್ತದೆ.

"ನಮ್ಮ ಹಳ್ಳಿಯಲ್ಲಿರುವುದು ಒಂದೇ ಕಿರಾಣಿ ಅಂಗಡಿ, ಅದರ ಮಾಲಿಕ ಇಂಟರ್‌ನೆಟ್‌ಗಾಗಿ ಹಣ ಪಡೆಯುತ್ತಾರೆ, ಆದರೆ ನಾವು ಅದನ್ನು ಹೆಚ್ಚು ಅವಲಂಬಿಸುವುದಿಲ್ಲ ... ನನಗೆ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸುವುದು ಸುಲಭವೆನ್ನಿಸುತ್ತದೆ"

ವಿಡಿಯೋ: ರೇಷನ್‌ ಕಾರ್ಡ್‌ಗಾಗಿ ಕಂಗೆಟ್ಟು ಅಲೆಯುತ್ತಿರುವ ಮಧ್ಯ ಪ್ರದೇಶದ ದಶರಥ್‌ ಸಿಂಗ್‌ ಅವರ ದೀರ್ಘ ಪ್ರಯಾಣದ ಕತೆ

ಇದಲ್ಲದೆ, ಈ ಯೋಜನೆಗಳ ಪ್ರಯೋಜನ ಪಡೆಯುವ ಅರ್ಹತೆ ಇಲ್ಲದವರೂ ಈ ಯೋಜನೆಯ ಲಾಭ ಪಡೆಯಲು ಮುಂದಾದರು ಎಂದು ಜೈನ್ ಹೇಳುತ್ತಾರೆ. "ಇಲ್ಲಿ ಒಬ್ಬನೇ ವ್ಯಕ್ತಿ ಒಂದೇ ಸಮಯದಲ್ಲಿ ಎರಡು ಸಾಮಾಜಿಕ ಗುಂಪುಗಳಿಗೆ ಸೇರಲು ಸಾಧ್ಯವಿದೆ. ಉದಾಹರಣೆಗೆ ಪರಿಶಿಷ್ಟ ಜಾತಿ ಮತ್ತು ಭೂಹೀನ ಕೃಷಿ ಕಾರ್ಮಿಕ.ಇದರಿಂದಾಗಿ, ಸಮಗ್ರ ಪ್ರಾಧಿಕಾರವು ತನ್ನ ವಾರ್ಷಿಕ ನವೀಕರಣ ಚಟುವಟಿಕೆಯ ಭಾಗವಾಗಿ ಮರು-ನಕಲು ಮಾಡುವಲ್ಲಿ ಕಾರ್ಯನಿರ್ವಹಿಸುತ್ತಿದೆ”ಎಂದು ಜೈನ್ ಹೇಳುತ್ತಾರೆ, ಇದರಿಂದಾಗಿ ಕುಟುಂಬ ಘಟಕಗಳಿಗೆ ಪ್ರತ್ಯೇಕ ಐಡಿಗಳನ್ನು ಪಡೆಯಲು ಸೂಚಿಸಲಾಗುತ್ತಿದೆ.

ದಶರಥ್ ಅವರ ಅವಿಭಜಿತ ಕುಟುಂಬಕ್ಕೆ 2012ರಲ್ಲಿ ಎಲ್ಲರನ್ನು ಒಳಗೊಂಡ ಸಮಗ್ರ ಗುರುತಿನ ಚೀಟಿ ನೀಡಲಾಗಿತ್ತು, ಈ ಹಿನ್ನೆಲೆಯಲ್ಲಿ ಕಾರ್ಕೆಲಿ ತಾಲ್ಲೂಕು ಕಚೇರಿ ಸಾರ್ವಜನಿಕ ಸೇವಾ ಕೇಂದ್ರದಿಂದ ಅವರ ಕುಟುಂಬಕ್ಕೆ ಮಾತ್ರ ಪ್ರತ್ಯೇಕ ಸಮಗ್ರ ಗುರುತಿನ ಚೀಟಿ ನೀಡುವಂತೆ ಕೇಳಿಕೊಂಡಿತು. ಫೆಬ್ರವರಿ 2020ರಲ್ಲಿ ದಶರಥ್ ಸ್ವತಂತ್ರ ಸಮಗ್ರ ಗುರುತಿನ ಚೀಟಿ ಪಡೆದ ನಂತರ, ಉಮರಿಯಾದ ಜಿಲ್ಲಾ ಸಾರ್ವಜನಿಕ ಸೇವಾ ಕೇಂದ್ರದಲ್ಲಿ ಪಡಿತರ ಚೀಟಿಗಾಗಿ 1,500 ರೂ.ಗಳ ಲಂಚದ ಬೇಡಿಕೆ ಇಡಲಾಯಿತು (ಈ ವರದಿಗಾರರಿಗೆ ಆರೋಪದ ಸಂಗತಿಗಳನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ. ಉಮರಿಯಾದ ಜಿಲ್ಲಾ ಸಾರ್ವಜನಿಕ ಸೇವಾ ಕೇಂದ್ರದಿಂದ ದೂರವಾಣಿ ಕರೆಗೆ ಯಾವ ಸ್ಪಂದನೆಯೂ ದೊರೆಯಲಿಲ್ಲ ಮತ್ತು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿದ ಇಮೇಲ್‌ಗೆ ಯಾವುದೇ ಮಾರುತ್ತರ ಬಂದಿಲ್ಲ.)

"ಅಂದು ನಾನು ಹಣವನ್ನು ನೀಡಲಿಲ್ಲ ಅಥವಾ ನಂತರವೂ ಕೊಡಲು ಸಾಧ್ಯವಾಗಲಿಲ್ಲ" ಎಂದು ದಶರಥ್ ಮೇ ತಿಂಗಳಲ್ಲಿ ಈ ವರದಿಗಾರರಿಗೆ ತಿಳಿಸಿದ್ದರು, ಆಗ ಅವರು ಉದ್ಯೋಗ ಖಾತರಿ ಯೋಜನೆಯ ಕೆಲಸಗಳಿಲ್ಲದೆ ಮುಂದಿನ ಕೆಲವು ತಿಂಗಳು ಹೇಗೆ ಜೀವನ ನಿರ್ವಹಿಸುವುದೆನ್ನುವ ಚಿಂತೆಯಲ್ಲಿದ್ದರು.

ದಶರಥ್ ಮತ್ತು ಸರಿತಾ ದಂಪತಿಗೆ ನರ್ಮದಾ ಎಂಬ ಎರಡು ವರ್ಷದ ಮಗಳಿದ್ದಾಳೆ. ದಶರಥ್ ಅವರ ತಾಯಿ 60 ವರ್ಷದ ರಾಮ್‌ಬಾಯಿ ಅವರೊಂದಿಗೆ ವಾಸಿಸುತ್ತಿದ್ದಾರೆ. "ನಾನು ಒಂದಿಷ್ಟು ಹೊಲಿಗೆ ಮಾಡುತ್ತೇನೆ ಅದರಿಂದ ನನಗೆ ತಿಂಗಳಿಗೆ ಸಾವಿರ ರೂಪಾಯಿ ಗಳಿಕೆ ಸಿಗುತ್ತದೆ, ಆದರೆ ಅದು ಹಳ್ಳಿಯಲ್ಲಿ ಮದುವೆಗಳು ಇದ್ದಾಗ ಮಾತ್ರ. ನಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳು ನಮ್ಮ ಕುಟುಂಬದ ಆಹಾರಕ್ಕೆ ಸಾಕಾಗುತ್ತದೆ. ಅದರಿಂದ ಯಾವುದೇ ರೀತಿಯ ಆದಾಯ ಬರುವುದಿಲ್ಲ." ಎಂದು ಸರಿತಾ ಹೇಳುತ್ತಾರೆ. ಅವರು ಕೂಡ ಎಂಜಿಎನ್‌ಆರ್‌ಇಜಿಎ ಸೈಟ್‌ಗಳಲ್ಲಿ ಕೆಲಸ ಲಭ್ಯವಿದ್ದಾಗ, ತಿಂಗಳಲ್ಲಿ ಕೆಲವು ದಿನಗಳ ಕಾಲ, 100 ರೂ ದಿನಗೂಲಿಗೆ ದುಡಿಯುತ್ತಾರೆ.

Dashrath's 2.5 acres of land yields just enough produce to feed his family
PHOTO • Sampat Namdev

ದಶರಥ್ ಅವರ 2.5 ಎಕರೆ ಭೂಮಿ ತನ್ನ ಕುಟುಂಬವನ್ನು ಪೋಷಿಸಲು ಸಾಕಾಗುವಷ್ಟು ಮಾತ್ರದ ಇಳುವರಿಯನ್ನು ನೀಡುತ್ತದೆ

ಉಮರಿಯಾದಲ್ಲಿ ಕೃಷಿ ಇಳುವರಿ ಹೆಚ್ಚಿಲ್ಲ. 2013ರ ಕೇಂದ್ರ ಅಂತರ್ಜಲ ಮಂಡಳಿಯ ವರದಿಯ ಪ್ರಕಾರ, ಉಮರಿಯಾ ಜಿಲ್ಲೆಯು "ಅಗ್ನಿಶಿಲೆ, ಸಂಚಿತ ಶಿಲೆ ಮತ್ತು ಗ್ರಾನೈಟ್‌ ಮಾದರಿಯ ವಿವಿಧ ಬಂಡೆಗಳಿಂದ ಆವೃತವಾಗಿದೆ." ಇದು ಹಿಂದುಳಿದ ಪ್ರದೇಶಗಳ ಅನುದಾನ ನಿಧಿಗೆ ಅರ್ಹವೆಂದು ಪರಿಗಣಿಸಲಾದ ರಾಜ್ಯದ 24 ಜಿಲ್ಲೆಗಳಲ್ಲಿ ಒಂದಾಗಿದೆ. ಕಡಿಮೆ ಕೃಷಿ ಇಳುವರಿ, ಮೂಲಸೌಕರ್ಯದ ಕೊರತೆ, ಹೆಚ್ಚಿನ ಎಸ್‌ಸಿ-ಎಸ್‌ಟಿ ಜನಸಂಖ್ಯೆ ಮತ್ತು ಹೆಚ್ಚಿನ ಬಿಪಿಎಲ್ ಜನಸಂಖ್ಯೆಯು ಉಮರಿಯಾವನ್ನು 2007ರಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಕೇಂದ್ರದಿಂದ ಹೆಚ್ಚುವರಿ ಹಣವನ್ನು ಪಡೆಯುವ ಭಾರತದ 250ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇದೂ ಸೇರುವಂತೆ ಮಾಡಿದೆ.

ಆದಾಗ್ಯೂ, ಉಮೇರಿಯಾದ ಹಳ್ಳಿಗಳಲ್ಲಿ, ಅಂತಹ ಬದಲಾವಣೆಗಳೇನೂ ಕಂಡುಬಂದಿಲ್ಲ.

ಕಟಾರಿಯಾ ಗ್ರಾಮದ ಇನ್ನೊಬ್ಬ ನಿವಾಸಿ ಧ್ಯಾನ್ ಸಿಂಗ್ ಅವರ ಫುಡ್‌ ಕೂಪನ್‌ನಲ್ಲಿದ್ದ ಕ್ಲರಿಕಲ್‌ ದೋಷದಿಂದಾಗಿ ಅವರಿಗೆ ಕಡಿಮೆ ಪಡಿತರ ಸಿಗುವ ಹಾಗಾಗಿದೆ. ಸಮಗ್ರ ಐಡಿ ಬಿಡುಗಡೆಯಾದ ಒಂದು ವರ್ಷದ ನಂತರ ಮಧ್ಯ ಪ್ರದೇಶ ಸರ್ಕಾರವು ಪಡಿತರ ವಿತರಣೆಯಲ್ಲಿನ ಸೋರಿಕೆಯನ್ನು ತಡೆಗಟ್ಟಲೆಂದು 2013ರಲ್ಲಿ ಗುರುತಿನ ಚೀಟಿಯೊಂದಿಗೆ ಜೋಡಿಸಲಾದ ಮತ್ತೊಂದು ಫುಡ್‌ ಕೂಪನ್‌ನಂತಹ ವ್ಯವಸ್ಥೆಯನ್ನು ಪರಿಚಯಿಸಿತು. "ನನ್ನ ಬಳಿ ಪಡಿತರ ಚೀಟಿ ಯಾವತ್ತೂ ಇರಲಿಲ್ಲ, ಏಕೆಂದರೆ ಅದರ ಕುರಿತು ನನಗೆ ತಿಳಿದಿರಲಿಲ್ಲ" ಎಂದು ಧ್ಯಾನ್ ಸಿಂಗ್ ಹೇಳುತ್ತಾರೆ. 2011ರಲ್ಲಿ ಅವರು ‘ಕರ್ಮಕಾಜ್’ ಯೋಜನೆಯಡಿ (ಯೋಜನೆಯ ಜನಪ್ರಿಯ ಹೆಸರು) ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವುದು ಅವರಿಗೆ ನೆನಪಿದೆ. ಮೇ 10, 2012ರಂದು ಮಧ್ಯಪ್ರದೇಶದ ಗೊಂಡ್ ಬುಡಕಟ್ಟು ಜನಾಂಗಕ್ಕೆ ಸೇರಿದ ಧ್ಯಾನ್ ಸಿಂಗ್ ಸರ್ಕಾರಿ ನೇತೃತ್ವದ ಸನ್ನಿರ್ಮಾಣ್ ಕರ್ಮಕಾರ್ ಮಂಡಲ್ ಯೋಜನೆಯಡಿ ಒಂದು ಕಾರ್ಡ್ ಪಡೆದರು.

ಧ್ಯಾನ್ ಸಿಂಗ್ ಅವರ ಕುಟುಂಬದ ಮೂವರು ಸದಸ್ಯರ ಹೆಸರನ್ನು ಕರ್ಮಕಾರ್ ಕಾರ್ಡ್‌ನಲ್ಲಿ ಪಟ್ಟಿ ಮಾಡಲಾಗಿದೆ - ಅವರ ಪತ್ನಿ ಪಂಚಿ ಬಾಯಿ, 35, ಮತ್ತು ಇಬ್ಬರು ಹೆಣ್ಣುಮಕ್ಕಳಾದ ಕುಸುಮ್, 13, ಮತ್ತು ರಾಜ್‌ಕುಮಾರಿ, 3. ಕುಟುಂಬವು ಐದು ಎಕರೆ ಭೂಮಿಯನ್ನು ಹೊಂದಿದ್ದು ಧ್ಯಾನ್ ಸಿಂಗ್ ಬೇರೆಯವರ ಜಮೀನಿನಲ್ಲಿಯೂ ದುಡಿಯುತ್ತಾರೆ. ಇದರಲ್ಲಿ ಅವರಿಗೆ ದಿನಕ್ಕೆ 100ರಿಂದ 200 ರೂಪಾಯಿ ಕೂಲಿ ದೊರೆಯುತ್ತದೆ. ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ನಿರ್ಮಾಣ ಕಾರ್ಯಗಳಲ್ಲಿನ ದುಡಿಮೆಗೆ ದಿನಕ್ಕೆ 100 ರೂಪಾಯಿ ಕೂಲಿ ದೊರೆಯುತ್ತದೆ. ಈ ಕೆಲಸ ತಿಂಗಳ 10-12 ದಿನಗಳು ಮಾತ್ರ ದೊರೆಯುತ್ತದೆ

ದಶರಥ್ ಅವರಂತೆ, ಧ್ಯಾನ್ ಸಿಂಗ್ ಅವರ ಕುಟುಂಬವೂ ತಮ್ಮ ಜಮೀನಿನಲ್ಲಿ ಕೊಡು ಮತ್ತು ಕುಟ್ಕಿ ಕಿರುಧಾನ್ಯಗಳನ್ನು ಬೆಳೆಯುತ್ತಾರೆ. ಆದರೆ ಅದರ ಇಳುವರಿ ಕುಟುಂಬದ ಆಹಾರಕ್ಕೂ ಸಾಲುವುದಿಲ್ಲ. ʼಪಡಿತರ ಚೀಟಿ ಪಡೆಯಲು ನಾವು ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ, ಆದರೆ ಇದುವರೆಗೂ ಸಾಧ್ಯವಾಗಿಲ್ಲ. ಎರಡು ಮಕ್ಕಳು ಶಾಲೆಯಲ್ಲಿ ಊಟ ಮಾಡುತ್ತಾರಾದರೂ ಅದು ಸಾಲುವುದಿಲ್ಲʼ ಎಂದು ರೈತ ಮಹಿಳೆ ಮತ್ತು ಗೃಹಿಣಿಯಾಗಿರುವ ಪಂಚಿ ಬಾಯಿ ಹೇಳುತ್ತಾರೆ.

A clerical error in the Dhyan Singh's food coupon has ensured he gets less rations
PHOTO • Sampat Namdev

ಧ್ಯಾನ್ ಸಿಂಗ್ ಅವರ ಆಹಾರ ಕೂಪನ್‌ನಲ್ಲಿನ ಕ್ಲರಿಕಲ್ ದೋಷದಿಂದಾಗಿ(ಹೆಸರು ತಪ್ಪಿ ಹೋಗಿರುವುದು) ಅವರು ಕಡಿಮೆ ಪಡಿತರ ಪಡೆಯುವಂತಾಗಿದೆ

2003 ರಲ್ಲಿ ಪ್ರಾರಂಭವಾದ ಕರ್ಮಕಾರ್ ಯೋಜನೆ, ವೃದ್ಧಾಪ್ಯ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿ ವೇತನದಂತಹ ವಿವಿಧ ಸವಲತ್ತುಗಳನ್ನು ವಿತರಿಸಲು ಎಲ್ಲಾ ಅನೌಪಚಾರಿಕ ಕಾರ್ಮಿಕರನ್ನು ಒಂದೇ ಕಾರ್ಡ್‌ ಒಳಗೊಳ್ಳುವ ಆಶಯವನ್ನು ಹೊಂದಿತ್ತು. "ಕರ್ಮಕಾರ್ ಕಾರ್ಡ್ ಮಾಡಿಸಿಕೊಳ್ಳಿ, ನಂತರ ಕೂಪನ್ ಸಿಗುತ್ತದೆ" ಎಂದು ಸರ್ಪಂಚ್‌ ಹೇಳಿದ ಮಾತನ್ನು ಧ್ಯಾನ್ ಸಿಂಗ್ ನೆನಪಿಸಿಕೊಳ್ಳುತ್ತಾರೆ. ಅವರು ಕಾರ್ಡ್ ಮಾಡಿಸಿದರು, ಆದರೆ 2011ರ ನಂತರ ಐದು ವರ್ಷಗಳವರೆಗೆ ಪಡಿತರವನ್ನು ಪಡೆಯಲಾಗಲಿಲ್ಲ ಏಕೆಂದರೆ ಆಹಾರದ ಕೂಪನ್ ಅವರ ಹೆಸರಿನಲ್ಲಿ ನೀಡಲಾಗಿರಲಿಲ್ಲ - ಅವರಿಗೆ ಅಂತಿಮವಾಗಿ 2016ರಲ್ಲಿ ಕೂಪನ್ ದೊರೆಯಿತು.

22 ಜೂನ್ 2016 ರಂದು ಕೂಪನ್ ಸಿಕ್ಕಾಗ ಅದರಲ್ಲಿ ಪಂಚಿ ಬಾಯಿಯವರ ಹೆಸರು ಇದ್ದಿರಲಿಲ್ಲ. ಧ್ಯಾನ್‌ ಸಿಂಗ್‌ ಮತ್ತು ಅವರ ಇಬ್ಬರು ಮಕ್ಕಳ ಹೆಸರು ಮಾತ್ರವೇ ಇತ್ತು. ಅವರು ತನ್ನ ಹೆಂಡತಿಯ ಹೆಸರನ್ನು ಸೇರಿಸಲು ಪ್ರಯತ್ನಿಸಿದರಾದರೂ ಇದುವರೆಗೂ ಅವರ ಹೆಸರನ್ನು ಕೂಪನ್‌ನಲ್ಲಿ ಸೇರಿಸಲು ಸಾಧ್ಯವಾಗಿಲ್ಲ. ಪಡಿತರ ಚೀಟಿಯಿಂದ ಕುಟುಂಬಕ್ಕೆ 5 ಕೆಜಿ ಪಡಿತರ - ಅಕ್ಕಿ, ಗೋಧಿ ಮತ್ತು ಉಪ್ಪು ಸಿಗುತ್ತದೆ. "ಆದರೆ ಇದು ಸಾಲುವುದಿಲ್ಲ, ನಾವು ದಿನದಲ್ಲಿ ಒಂದು ಬಾರಿ ಮಾತ್ರ ಹೊಟ್ಟೆ ತುಂಬಾ ಊಟ ಮಾಡುತ್ತೇವೆ" ಎನ್ನುತ್ತಾರೆ ಧ್ಯಾನ್ ಸಿಂಗ್.

ಮಧ್ಯಪ್ರದೇಶ ಸರ್ಕಾರವು ಸಂಗ್ರಹಿಸಿದ ಸಮಗ್ರ ಮಾಹಿತಿಯ ಪ್ರಕಾರ, 2020ರ ಜುಲೈ 16ರವರೆಗೆ ಉಮರಿಯಾ ಜಿಲ್ಲೆಯಲ್ಲಿ ಪಡಿತರ ಚೀಟಿಗಳಿಗಾಗಿ ಪಡೆದ ಒಟ್ಟು 3,564 ಅರ್ಜಿಗಳಲ್ಲಿ ಕೇವಲ 69 ಅರ್ಜಿಗಳನ್ನು ಮಾತ್ರ ಜಿಲ್ಲಾ ಸರಬರಾಜು ಅಧಿಕಾರಿ ಮತ್ತು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಿರಿಯ ಪೂರೈಕೆ ಅಧಿಕಾರಿ ಅನುಮೋದಿಸಿದ್ದಾರೆ. ಉಮರಿಯಾದಲ್ಲಿ ಸುಮಾರು 3,495 ಅರ್ಜಿಗಳು ಈಗಲೂ ಅನುಮೋದನೆಗಾಗಿ ಕಾಯುತ್ತಿವೆ. (ಈ ವರದಿಗಾರ್ತಿ ಸಮಗ್ರ ಕಾರ್ಯಾಚರಣೆಯ ನಿರ್ದೇಶಕರ ಕಚೇರಿಗೆ ಮೇಲ್ ಕಳುಹಿಸಿರುತ್ತಾರೆ, ಆದರೆ ಉತ್ತರ ಇನ್ನೂ ಬಂದಿಲ್ಲ.)

ಮಾರ್ಚ್ 26, 2020ರಂದು, ಮಧ್ಯ ಪ್ರದೇಶದ ಮುಖ್ಯಮಂತ್ರಿ ಕೋವಿಡ್ -19 ಲಾಕ್ ಡೌನ್ ಸಮಯದಲ್ಲಿ, ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ಒಂದು ತಿಂಗಳ ಉಚಿತ ಪಡಿತರವನ್ನು ವಿತರಿಸಲಾಗುವುದು ಎಂದು ಘೋಷಿಸಿದರು. ಆದರೆ ಸ್ಥಳೀಯ ಕಾರ್ಯಕರ್ತರು ತಾತ್ಕಾಲಿಕ ಪರಿಹಾರಗಳ ಬದಲು ದೀರ್ಘಕಾಲೀನ ಕ್ರಮಗಳ ಅಗತ್ಯದ ಕುರಿತು ಒತ್ತಿ ಹೇಳುತ್ತಾರೆ.

ಈ ನಡುವೆ, ಇದು ಬಿತ್ತನೆ ಕಾಲವಾಗಿರುವುದರಿಂದ, ದಶರಥ್ ತಮ್ಮ ಹೊಲದ ಕೆಲಸದಲ್ಲಿ ನಿರತರಾಗಿದ್ದಾರೆ. "ಗ್ರಾಮದ ಅಧಿಕಾರಿಗಳ ಹಿಂದೆ ತಿರುಗಲು ನನಗೆ ಸಮಯವಿಲ್ಲ" ಎಂದು ಅವರು ಹೇಳುತ್ತಾರೆ. ಈ ವರ್ಷವಾದರೂ ಉತ್ತಮ ಬೆಳೆ ಬಂದರೆ ತಮ್ಮ ಕುಟುಂಬ ರೇಷನ್‌ ಕಾರ್ಡ್‌ ಇಲ್ಲದೆ ಒಂದು ವರ್ಷವನ್ನು ಕಳೆಯಬಹುದೆಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

ಕಟಾರಿಯಾ ಗ್ರಾಮದ ಸಮಾಜ ಸೇವಕ ಮತ್ತು ಮಧ್ಯಪ್ರದೇಶದಲ್ಲಿ ಅಪೌಷ್ಟಿಕತೆ ಕುರಿತು ಕೆಲಸ ಮಾಡುತ್ತಿರುವ ಎನ್‌ಜಿಒ ವಿಕಾಸ್ ಸಂವಾದ್‌ನ ಸದಸ್ಯರಾದ ಸಂಪತ್ ನಾಮ್‌ದೇವ್ ಅವರ ಸಹಾಯದೊಂದಿಗೆ ಈ ವರದಿಯನ್ನು ತಯಾರಿಸಲಾಗಿದೆ.

ಅನುವಾದ: ಶಂಕರ ಎನ್. ಕೆಂಚನೂರು

Akanksha Kumar

Akanksha Kumar is a freelance journalist based in Delhi. She is a former full-time digital and TV journalist, and focuses on rural affairs, environment and government schemes.

Other stories by Akanksha Kumar
Translator : Shankar N Kenchanuru

Shankar N Kenchanuru is a poet and freelance translator. He can be reached at [email protected]

Other stories by Shankar N Kenchanuru